ಪ್ರಧಾನ ಮಂತ್ರಿಯವರ ಕಛೇರಿ

ರಾಷ್ಟ್ರವನ್ನುದ್ದೇಶಿಸಿ ಪ್ರಧಾನಮಂತ್ರಿಯವರ ವಿಶೇಷ ಭಾಷಣ


ದೇಶ ನಡೆಸುತ್ತಿರುವ ಕೊರೊನಾ ವಿರುದ್ಧದ ಹೋರಾಟದಲ್ಲಿ ಎಚ್ಚರ ತಪ್ಪದಂತೆ ನಾಗರಿಕರಿಗೆ ಪ್ರಧಾನಮಂತ್ರಿ ಮನವಿ

ಲಾಕ್ ಡೌನ್ ಹೋಗಿರಬಹುದು ಆದರೆ ವೈರಾಣು ಹೋಗಿಲ್ಲ ಎಂದು ಹೇಳಿಕೆ

ಈ ಸಮಯ ಸಮಾಧಾನದಿಂದ ಇರುವ ಕಾಲವಲ್ಲ ಜಾಗರೂಕತೆಯಿಂದ ಇರಬೇಕಾದ ಕಾಲ ಎಂದು ಎಚ್ಚರಿಕೆ

ದೇಶಕ್ಕೆ ವೈದ್ಯರು, ಶುಶ್ರೂಷಕಿಯರು ಮತ್ತು ಇತರ ಕೊರೊನಾ ಯೋಧರು ನೀಡುತ್ತಿರುವ ನಿಸ್ವಾರ್ಥ ಸೇವೆಯ ಶ್ಲಾಘನೆ

ಲಸಿಕೆಯ ಕಾರ್ಯ ಪ್ರಗತಿಯಲ್ಲಿದೆ ಮತ್ತು ಸರ್ಕಾರ ದೇಶದ ಪ್ರತಿಯೊಬ್ಬ ನಾಗರಿಕರಿಗೂ ಲಸಿಕೆ ತಲುಪಿಸಲು ಕಾರ್ಯತಂತ್ರ ರೂಪಿಸುತ್ತಿದೆ

ದೇಶದಲ್ಲಿ ಚೇತರಿಕೆಯ ದರ ಸುಧಾರಿಸುತ್ತಿದೆ ಮತ್ತು ಮರಣ ದರ ಅತಿ ಕಡಿಮೆಯಾಗಿದೆ

Posted On: 20 OCT 2020 7:52PM by PIB Bengaluru

ದೂರದರ್ಶನದ ಮೂಲಕ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರಮೋದಿ ಕೋವಿಡ್ ಮಹಾಮಾರಿಯ ವಿರುದ್ಧ ದೇಶ ನಡೆಸುತ್ತಿರುವ ನಿರಂತರ ಹೋರಾಟದಲ್ಲಿ ಅಜಾಗರೂಕತೆ ತೋರದಂತೆ ಮತ್ತು ಎಚ್ಚರದಿಂದ ಇರುವಂತೆ ನಾಗರಿಕರಿಗೆ ಮನವಿ ಮಾಡಿದ್ದಾರೆ

ಲಾಕ್ ಡೌನ್ ತೆರವಾಗಿರಬಹುದು, ಇದರ ಅರ್ಥ ಕೊರೊನಾ ವೈರಾಣು ನಿರ್ಮೂಲನ ಆಗಿದೆ ಎಂದಲ್ಲ ಎಂದು ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.

ದೇಶದಾದ್ಯಂತ ಪರಿಸ್ಥಿತಿ ಸುಧಾರಣೆಯಾಗುತ್ತಿರುವುದನ್ನು ಪ್ರಶಂಸಿಸಿರುವ ಅವರು, ಆರ್ಥಿಕ ಚಟುವಟಿಕೆಗಳು ಕ್ರಮೇಣ ಸಹಜ ಸ್ಥಿತಿಗೆ ಬರುತ್ತಿವೆ ಮತ್ತು ಜನರು ತಮ್ಮ ಜವಾಬ್ದಾರಿ ನಿಭಾಯಿಸಲು ಮನೆಗಳಿಂದ ಹೊರಗೆ ಬರುತ್ತಿದ್ದಾರೆ ಎಂದರು.

ಹಬ್ಬಗಳ ಪರ್ವದ ಸಂದರ್ಭದಲ್ಲಿ ಮಾರುಕಟ್ಟೆಗಳು ಕೂಡ ಸಹಜ ಸ್ಥಿತಿಯತ್ತ ಬರುತ್ತವೆ ಎಂದು ಶ್ರೀ ಮೋದಿ ಹೇಳಿದರು.

ಕಳೆದ 7-8 ತಿಂಗಳುಗಳಲ್ಲಿ ಪ್ರತಿಯೊಬ್ಬ ಭಾರತೀಯರ ಪ್ರಯತ್ನದ ಫಲವಾಗಿ ಭಾರತ ಉತ್ತಮ ಸ್ಥಿತಿಯಲ್ಲಿದೆ. ಯಾರೊಬ್ಬರೂ ಇದನ್ನು ಹಾಳು ಮಾಡಬಾರದು ಎಂದರು.

ಭಾರತದಲ್ಲಿ ಚೇತರಿಕೆಯ ದರ ಸುಧಾರಣೆಯಾಗುತ್ತಿದೆ ಮತ್ತು ಮರಣ ಪ್ರಮಾಣ ತೀರಾ ಕಡಿಮೆ ಇದೆ ಎಂದು ಪ್ರಧಾನಮಂತ್ರಿ ಹೇಳಿದರು. ಪ್ರತಿ 10 ಲಕ್ಷ ಜನಸಂಖ್ಯೆಗೆ ದೇಶದಲ್ಲಿ 5500 ಜನರಿಗೆ ಕೊರೊನಾ ಸೋಂಕಿದೆ, ಆದರೆ ಅಮೆರಿಕಾ, ಬ್ರೆಜಿಲ್ ನಂಥ ದೇಶಗಳಲ್ಲಿ ಸಂಖ್ಯೆ 25 ಸಾವಿರ ಎಂದು ಪ್ರಧಾನಮಂತ್ರಿ ಹೇಳಿದರು.

ಪ್ರತಿ 10 ಲಕ್ಷ ಜನರಲ್ಲಿ ಸಾವಿನದರ ಭಾರತದಲ್ಲಿ 83 ಆಗಿದ್ದರೆ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಾದ ಅಮೆರಿಕಾ, ಬ್ರೆಜಿಲ್, ಸ್ಪೇನ್, ಬ್ರಿಟನ್ ಮತ್ತು ಇತರ ರಾಷ್ಟ್ರಗಳಲ್ಲಿ ಇದು 600 ಎಂದು ತಿಳಿಸಿದರು.

ಹಲವು ಅಭಿವೃದ್ಧಿಹೊಂದಿದ ದೇಶಗಳಿಗೆ ಹೋಲಿಸಿದರೆ ಭಾರತ ತನ್ನ ಹಲವು ನಾಗರಿಕರ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಪ್ರಧಾನಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು.

ದೇಶದಲ್ಲಿನ ಕೋವಿಡ್ ಮೂಲಸೌಕರ್ಯ ಸುಧಾರಣೆಯ ಪ್ರಸ್ತಾಪ ಮಾಡಿದ ಪ್ರಧಾನಮಂತ್ರಿಗಳು, 90 ಲಕ್ಷ ಹಾಸಿಗೆಗಳು ಕೊರೊನಾ ರೋಗಿಗಳಿಗೆ ಲಭ್ಯವಿದೆ ಮತ್ತು 1200 ಕ್ವಾರಂಟೈನ್ ಕೇಂದ್ರಗಳು ದೇಶದಲ್ಲಿವೆ ಎಂದರು.

2000 ಕೊರೊನಾ ಪರೀಕ್ಷಾ ಪ್ರಯೋಗಾಲಯಗಳು ದೇಶದಲ್ಲಿ ಕಾರ್ಯಾಚರಣೆ ಮಾಡುತ್ತಿವೆ, ಶೀಘ್ರವೇ ಕೊರೊನಾ ಪರೀಕ್ಷೆಯ ಸಂಖ್ಯೆ 10 ಕೋಟಿ ದಾಟಲಿದೆ ಎಂದರು.

ಸಂಪನ್ಮೂಲ ಶ್ರೀಮಂತವಾದ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ತನ್ನ ಹೆಚ್ಚು ಹೆಚ್ಚು ನಾಗರಿಕರ ಜೀವ ಉಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು. ಹೆಚ್ಚುತ್ತಿರುವ ಕೊರೊನಾ ಪರೀಕ್ಷೆ ಕೋವಿಡ್ ಮಹಾಮಾರಿ ವಿರುದ್ಧದ ದೇಶದ ಹೋರಾಟದಲ್ಲಿ ದೊಡ್ಡ ಶಕ್ತಿಯಾಗಿದೆ ಎಂದರು.

ಸೇವಾ ಪರಮೋ ಧರ್ಮಃ ಎನ್ನುವ ಮಂತ್ರದಂತೆ ನಿಸ್ವಾರ್ಥವಾಗಿ ಬೃಹತ್ ಜನರ ಸೇವೆ ಮಾಡುತ್ತಿರುವ ವೈದ್ಯರು, ಶುಶ್ರೂಷಕಿಯರು ಮತ್ತು ಆರೋಗ್ಯ ಕಾರ್ಯಕರ್ತರ ಪ್ರಯತ್ನಗಳನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು,

ಎಲ್ಲ ಪ್ರಯತ್ನಗಳ ನಡುವೆ ಕೊರೊನಾ ವೈರಸ್ ಹೋಗಿಬಿಟ್ಟಿದೆ ಅಥವಾ ಕೊರೊನಾದಿಂದ ಈಗ ಅಪಾಯ ಇಲ್ಲ ಎಂದು ಅಜಾಗರೂಕರಾಗಿರದಂತೆ ಪ್ರಧಾನಮಂತ್ರಿ ಎಚ್ಚರಿಕೆ ನೀಡಿದರು.

ಹಿಂದೆ ತೆಗೆದುಕೊಳ್ಳುತ್ತಿದ್ದಂತೆ ಮುನ್ನಚ್ಚರಿಕೆ ತೆಗೆದುಕೊಳ್ಳದ ಜನರಿಗೆ ಎಚ್ಚರಿಕೆ ನೀಡಿದ ಅವರು, ನೀವು ಅಜಾಗರೂಕರಾಗಿದ್ದರೆ, ಮಾಸ್ಕ್ ಇಲ್ಲದೆ ಮನೆಯಿಂದ ಹೊರಗೆ ಬಂದರೆ ನೀವು ನಿಮ್ಮನ್ನು ನೀವು ಅಪಾಯಕ್ಕೆ ಸಿಲುಕಿಸಿಕೊಳ್ಳುವುದಷ್ಟೇ ಅಲ್ಲದೆ, ನಿಮ್ಮ ಕುಟುಂಬ, ನಿಮ್ಮ ಮಕ್ಕಳು ಮತ್ತು ಮನೆಯಲ್ಲಿರುವ ಹಿರಿಯರನ್ನೂ ಅಪಾಯಕ್ಕೆ ಸಿಲುಕಿಸುತ್ತೀರಿ ಎಂದರು.

ಅಮೆರಿಕಾ ಮತ್ತು ಐರೋಪ್ಯ ರಾಷ್ಟ್ರಗಳಲ್ಲಿ ಕೊರೊನಾ ಪ್ರಕರಣ ಇಳಿಮುಖವಾಗಿತ್ತು, ಈಗ ಚಿಂತಾಜನಕವಾಗಿ ವೃದ್ಧಿಸುತ್ತಿರುವ ಪರಿಸ್ಥಿತಿಯನ್ನು ಉಲ್ಲೇಖಿಸಿದರು.

ಮಹಾಮಾರಿಗೆ ಲಸಿಕೆ ಬರುವ ತನಕ ಅಜಾಗರೂಕರಾಗಿರದಂತೆ ಜನರಿಗೆ ಆಗ್ರಹಿಸಿದ ಅವರು, ಕೋವಿಡ್ 19 ವಿರುದ್ಧದ ಹೋರಾಟವನ್ನು ದುರ್ಬಲಗೊಳಿಸಬೇಡಿ ಎಂದರು.

ಮಾನವಕುಲವನ್ನು ಉಳಿಸಲು ಹಲವು ದೇಶಗಳಲ್ಲಿ ಯುದ್ಧೋಪಾದಿಯಲ್ಲಿ ಪ್ರಯತ್ನಗಳು ನಡೆಯುತ್ತಿವೆ, ನಮ್ಮ ದೇಶದಲ್ಲಿ ಕೂಡ ವಿಜ್ಞಾನಿಗಳು ಲಸಿಕೆ ಉತ್ಪಾದಿಸಲು ಶ್ರಮಿಸುತ್ತಿದ್ದಾರೆ ಎಂದರು.

ದೇಶದಲ್ಲಿ ಹಲವು ಲಸಿಕೆಗಳ ಅಭಿವೃದ್ಧಿ ನಡೆಯುತ್ತಿದ್ದು, ಕೆಲವು ಮುಂದುವರಿದ ಹಂತದಲ್ಲಿವೆ ಎಂದರು.

ಲಸಿಕೆ ದೊರತ ತಕ್ಷಣವೇ, ಪ್ರತಿಯೊಬ್ಬ ನಾಗರಿಕರಿಗೂ ಲಸಿಕೆ ಲಭ್ಯವಾಗುವಂತೆ ಮಾಡಲು ಸರ್ಕಾರ ನೀಲನಕ್ಷೆಯನ್ನು ಸಿದ್ಧಪಡಿಸುತ್ತಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು.

ಲಸಿಕೆ ಬರುವ ತನಕ ಲಘುವಾಗಿ ಪರಿಗಣಿಸದಂತೆ ಜನರಿಗೆ ಅವರು ಮನವಿ ಮಾಡಿದರು.

ನಾವು ಕಷ್ಟದ ಸಮಯದಲ್ಲಿ ಸಾಗಿ ಬರುತ್ತಿದ್ದೇವೆ, ಈಗ ಅಲ್ಪ ಅಜಾಗರೂಕತೆ ಕೂಡ ದೊಡ್ಡ ಸಂಕಷ್ಟಕ್ಕೆ ಈಡು ಮಾಡುತ್ತದೆ ಮತ್ತು ನಮ್ಮ ಹರ್ಷವನ್ನು ನಾಶ ಮಾಡುತ್ತದೆ ಎಂದರು.

ನಾಗರಿಕರು ತಮ್ಮ ಜವಾಬ್ದಾರಿಯನ್ನು ಎಚ್ಚರಿಕೆಯಿಂದ ನಿಭಾಯಿಸುವಂತೆ ಅವರು ಆಗ್ರಹಿಸಿದರು.

ಎರಡು ಗಜ ಅಂತರ (6 ಅಡಿ ಅಂತರ), ಮಾಸ್ಕ್ ಧಾರಣೆ, ಪದೇ ಪದೇ ಸಾಬೂನಿನಿಂದ ಕೈತೊಳೆಯುವಂತೆ ಅವರು ಜನರಿಗೆ ಮನವಿ ಮಾಡಿದರು.

***



(Release ID: 1666311) Visitor Counter : 265