ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ

ಬಾಕಿ ಪಾವತಿ ಬಿಡುಗಡೆಗೆ ಭಾರತೀಯ ಕಂಪನಿಗಳಿಗೆ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವಾಲಯ ಮನವಿ


ಎಂಎಸ್ ಎಂಇ ಬಾಕಿ ಬಿಡುಗಡೆಗೆ ಸುಮಾರು 2800 ಕಾರ್ಪೋರೇಟ್ ಕಂಪನಿಗಳಿಗೆ ಪತ್ರ

ಸೆಪ್ಟಂಬರ್ 2020ರಲ್ಲಿ ಎಂಎಸ್ ಎಂಇಗಳಿಗೆ ಸಿಪಿಎಸ್ ಇಗಳಿಂದ 3700 ಕೋಟಿ ರೂ. ಪಾವತಿ

ಒಂದು ತಿಂಗಳಲ್ಲಿ ಅತ್ಯಧಿಕ, ಕಳೆದ ಐದು ತಿಂಗಳಲ್ಲಿ 13,400 ಕೋಟಿ ರೂ. ಪಾವತಿ

Posted On: 19 OCT 2020 9:56AM by PIB Bengaluru

ಕೇಂದ್ರ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವಾಲಯ (ಎಂಎಸ್ಎಂಇ) ತನ್ನ ನಿರಂತರ ಪ್ರಯತ್ನಗಳ ಫಲಿತಾಂಶದಿಂದ ಉತ್ತೇಜಿತವಾಗಿ, ಇದೀಗ ಎಂಎಸ್ಎಂಇಗಳಿಗೆ ಬರಬೇಕಾಗಿರುವ ಸರಕು ಮತ್ತು ಸೇವೆಗಳ ಬಾಕಿಯನ್ನು  ಪಾವತಿಸುವಂತೆ ಎಲ್ಲ ಭಾರತೀಯ ಕಂಪನಿಗಳಿಗೆ ಮನವಿ ಮೂಲಕ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.

ಎಂಎಸ್ಎಂಇ ಸಚಿವಾಲಯ, ಬಾಕಿ ಮೊತ್ತವನ್ನು ಇದೇ ತಿಂಗಳು ಪಾವತಿಸುವಂತೆ ಸುಮಾರು 2800 ಕಾರ್ಪೊರೇಟ್ ಸಂಸ್ಥೆಗಳ ಆಡಳಿತ ಮಂಡಳಿಗಳಿಗೆ ಪತ್ರದ ಮೂಲಕ ಸೂಚನೆ ನೀಡಿದೆ.

ಕಳೆದ ತಿಂಗಳು ಎಂಎಸ್ಎಂಇ ಸಚಿವಾಲಯ, ಸುಮಾರು 500 ಭಾರತೀಯ ಕಾರ್ಪೊರೇಟ್ ಸಂಸ್ಥೆಗಳಿಗೆ ಪತ್ರಗಳ ಮೂಲಕ, ಎಂಎಸ್ಎಂಇಗಳಿಗೆ ಪಾವತಿಸಬೇಕಾಗಿರುವ ಬಾಕಿಯನ್ನು ಪಾವತಿಸುವಂತೆ ಮನವಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ತಮ್ಮ ಈ ಕಾರ್ಯಕ್ಕೆ ಭಾರತದ ಕಾರ್ಪೊರೇಟ್ ಸಂಸ್ಥೆಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು ಎಂದು ಸಚಿವಾಲಯ ಹೇಳಿದೆ. ಕಳೆದ ಐದು ತಿಂಗಳಿಂದ ಬಾಕಿ ಪಾವತಿ ಕೊಡಿಸಲು ಸಚಿವಾಲಯ ಕಾರ್ಯೋನ್ಮುಖವಾಗಿದ್ದು, ಸೆಪ್ಟೆಂಬರ್ 2020ನೇ ತಿಂಗಳಲ್ಲಿ ಎಂಎಸ್ಎಂಇಗಳಿಗೆ ಅತ್ಯಧಿಕ ಮೊತ್ತ ಪಾವತಿಯಾಗಿದೆ. ಅಲ್ಲದೆ ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ಖರೀದಿ ಮತ್ತು ವಹಿವಾಟು ಪ್ರಕ್ರಿಯೆ ಕೂಡ ನಿಗದಿತ ಕಾಲಮಿತಿಯಲ್ಲಿ ಅತ್ಯುತ್ತಮವಾಗಿ ನಡೆದಿದೆ. ಎಂಎಸ್ಎಂಇ ಸಚಿವಾಲಯ ಕಳೆದ ಐದು ತಿಂಗಳಿಂದೀಚೆಗೆ ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು(ಸಿಪಿಎಸ್ಇ)ಗಳಿಂದ ಸುಮಾರು 13,400 ಕೋಟಿ ರೂ. ಪಾವತಿಯಾಗಿದೆ ಎಂದು ಹೇಳಿದೆ. ಆ ಪೈಕಿ ಸುಮಾರು 3700 ಕೋಟಿ ರೂ. ಸೆಪ್ಟೆಂಬರ್ ತಿಂಗಳಲ್ಲೇ ಪಾವತಿಯಾಗಿದೆ. ಸಚಿವಾಲಯ ಅದಕ್ಕಾಗಿ ದೇಶದ ಕಾರ್ಪೊರೇಟ್ ವಲಯವನ್ನು ಅಭಿನಂದಿಸಿದೆ.  

ಎಂಎಸ್ಎಂಇ ಸಚಿವಾಲಯ, ದೇಶದ ಎಂಎಸ್ಎಂಇಗಳಿಗೆ ಬರಬೇಕಾಗಿರುವ ಬಾಕಿ ಬಿಡುಗಡೆಗೆ ಡಿಜಿಟಲ್ ಮಧ್ಯಪ್ರವೇಶ ಮತ್ತು ವೈಯಕ್ತಿಕ ನಿಗಾ (ಫಾಲೋಅಪ್) ಸೇರಿದಂತೆ ನಿರಂತರ ಪ್ರಯತ್ನಗಳನ್ನು ನಡೆಸುತ್ತಿದೆ.  

ತನ್ನ ಇತ್ತೀಚಿನ ಸಂವಹನದಲ್ಲಿ ದೇಶದ ಅತಿದೊಡ್ಡ ಕಾರ್ಪೊರೇಟ್ ಸಮುದಾಯವನ್ನು ತಲುಪಿದ್ದು, ಬಾಕಿ ಪಾವತಿಗಳ ಪ್ರಾಮುಖ್ಯತೆಯನ್ನು ತಿಳಿಸಿಕೊಡುತ್ತಿದೆ. ಮುಂಬರುವ ಹಬ್ಬಗಳ ಋತುಮಾನದಲ್ಲಿ ಸಣ್ಣ ಉದ್ದಿಮೆಗಳಿಗೆ ವಾಣಿಜ್ಯ ಅವಕಾಶಗಳನ್ನು ಸೃಷ್ಟಿಸಿಕೊಡಲು ಈ ಬಾಕಿ ಪಾವತಿ ಪ್ರಕ್ರಿಯೆ ನೆರವಾಗಲಿದೆ ಎಂದು ಅದು ಹೇಳಿದೆ. ಎಂಎಸ್ಎಂಇಗಳಿಗೆ ನಗದು ಹರಿದುಬಂದರೆ ಅವುಗಳ ಸ್ಥಿತಿ ಸುಧಾರಿಸಲಿದೆ. ಅವು ಹಬ್ಬದ ಋತುಮಾನದಲ್ಲಿ ಅವಕಾಶಗಳನ್ನು ಬಳಸಿಕೊಂಡು ಸರಕು ಮತ್ತು ಸೇವೆಗಳನ್ನು ಪೂರೈಕೆ ಮಾಡಿ, ಹಣ ಗಳಿಸಲಿವೆ ಎಂದು ಸಚಿವಾಲಯ ಹೇಳಿದೆ. ಕೆಲವು ಎಂಎಸ್ಎಂಇಗಳು ತಮ್ಮ ಉಳಿವಿಗಾಗಿ ವರ್ಷವಿಡೀ ಇಂತಹ ಅವಧಿಗಾಗಿ ಕಾಯುತ್ತಿರುತ್ತವೆ. ಆದ್ದರಿಂದ ಈ ಸಮಯದಲ್ಲಿ ಅಂತಹ ಬಾಕಿ ಸ್ವೀಕೃತಿಗಳು ಎಂಎಸ್ಎಂಇಗಳಿಗೆ ಆರ್ಥಿಕವಾಗಿ ನೆರವಾಗುವುದಲ್ಲದೆ, ಹಬ್ಬದ ಸಮಯದಲ್ಲಿ ಅವರ ಅವಲಂಬಿತರಿಗೂ ಸಹಾಯಕವಾಗುತ್ತದೆ ಮತ್ತು ಅವರು ಇಡೀ ವರ್ಷ ಸುಸ್ಥಿರವಾಗಿರಲು ನೆರವಾಗುತ್ತದೆ. ಆದ್ದರಿಂದ ಸಚಿವಾಲಯ ಕಾರ್ಪೊರೇಟ್ ಕಂಪನಿಗಳಿಗೆ ಆದಷ್ಟು ಬೇಗ ಸಾಧ್ಯವಾದರೆ ಇದೇ ತಿಂಗಳಲ್ಲಿ ಬಾಕಿ ಮೊತ್ತವನ್ನು ಪಾವತಿಸುವಂತೆ ಮನವಿ ಮಾಡಿದೆ.

ಕೇಂದ್ರ ಎಂಎಸ್ಎಂಇ ಸಚಿವಾಲಯ, ಎಂಎಸ್ಎಂಇಗಳಿಗೆ ನೀಡಬೇಕಾಗಿರುವ ಬಾಕಿ ಪಾವತಿ ಕುರಿತಂತೆ ಪ್ರಮುಖ ಆಡಳಿತಾತ್ಮಕ, ಕಾನೂನು ಮತ್ತು ಹಣಕಾಸು ತಂತ್ರಜ್ಞಾನ ಆಧಾರಿತ ಅಂಶಗಳ ಮೂಲಕ ಭಾರತದ ಕಾರ್ಪೊರೇಟ್ ವಲಯದ ಗಮನವನ್ನು ಸೆಳೆಯುತ್ತಿದೆ.

ತನ್ನ ಪತ್ರದಲ್ಲಿ ಹೀಗೆ ಹೇಳಿದೆ:

*ನಿಗದಿತ ಅವಧಿಯಲ್ಲಿ ಪಾವತಿಗಳನ್ನು ಮಾಡುವುದು ಅತ್ಯಂತ ಸೂಕ್ತವಾದುದು. ಆದರೆ ಎಂಎಸ್ಎಂಇಗಳಿಗೆ ನಗದು ಹರಿವಿನ ಸಮಸ್ಯೆಗಳನ್ನು ಬಗೆಹರಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌, ಟ್ರೆಡ್ಸ್ ಹೆಸರಿನಲ್ಲಿ ಬಿಲ್ ವಿನಾಯಿತಿ ಕಾರ್ಯತಂತ್ರವನ್ನು ಆರಂಭಿಸಿದೆ. 500 ಕೋಟಿ ರೂ.ಗಳಿಗಿಂತಲೂ ಅಧಿಕ ವಹಿವಾಟು ಹೊಂದಿರುವ ಎಲ್ಲ ಸಿಪಿಎಸ್ಇಗಳು ಈ ವೇದಿಕೆಯಲ್ಲಿ ಸೇರ್ಪಡೆಯಾಗುವುದು ಕಡ್ಡಾಯವಾಗಿದೆ. ಆದರೆ ಹಲವು ಕಂಪನಿಗಳು ಇನ್ನೂ ಇದಕ್ಕೆ ಸೇರ್ಪಡೆಯಾಗಿಲ್ಲ ಅಥವಾ ಆ ಕುರಿತು ವಹಿವಾಟು ನಡೆಸಿಲ್ಲ. ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಬಳಗ ಅಥವಾ ಸಮೂಹ ಕಂಪನಿಗಳು ಟ್ರೆಡ್ಸ್ ವೇದಿಕೆಯನ್ನು ಸೇರಿವೆಯೇ, ಇಲ್ಲವೇ ಮತ್ತು ವಹಿವಾಟು ನಡೆಸಿವೆಯೇ ಎಂಬುದನ್ನು ಪರಿಶೀಲಿಸುವಂತೆ ಮನವಿ ಮಾಡಲಾಗಿದೆ.

*ಎಂಎಸ್ಎಂಇ ಅಭಿವೃದ್ಧಿ ಕಾಯ್ದೆ 2006ರ ಅನ್ವಯ 45 ದಿನಗಳೊಳಗೆ ಪಾವತಿ ಕಡ್ಡಾಯವಾಗಿದೆ ಎಂಬ ಕಾನೂನಾತ್ಮಕ ಅಂಶವನ್ನು ಸಚಿವಾಲಯ ಕಾರ್ಪೊರೇಟ್ ಸಂಸ್ಥೆಗಳ ಗಮನಕ್ಕೆ ತಂದಿದೆ. ಅದಕ್ಕೆ ಸಂಬಂಧಿಸಿದ ನಿಯಮದಂತೆ ಕಾರ್ಪೊರೇಟ್ ಸಂಸ್ಥೆಗಳು, ತಾವು ಎಂಎಸ್ಎಂಇಗಳಿಗೆ ಬಾಕಿ ಉಳಿಸಿಕೊಂಡಿರುವ ಮೊತ್ತದ ಕುರಿತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯಕ್ಕೆ ಅರ್ಧವಾರ್ಷಿಕ ರಿಟರ್ನ್ಸ್ ಸಲ್ಲಿಸಬೇಕಾಗಿದೆ. ಹಲವು ಪ್ರಕರಣಗಳಲ್ಲಿ ಇದನ್ನು ಪಾಲನೆ ಮಾಡಿಲ್ಲ. ಸಚಿವಾಲಯ ಈ ಕುರಿತಂತೆ ಕಾರ್ಪೊರೇಟ್ ಸಂಸ್ಥೆಗಳು ಗಮನಹರಿಸಬೇಕು ಮತ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದೆ

*ಎಂಎಸ್ಎಂಇಗಳಿಗೆ ಸಕಾಲದಲ್ಲಿ ಪಾವತಿ ಸ್ವೀಕೃತಿಯಾಗಬೇಕು ಎಂಬ ಬಗ್ಗೆ ಸರ್ಕಾರ ಗಂಭೀರವಾಗಿದೆ ಎಂದು ಪುನರುಚ್ಛರಿಸಿರುವ ಸಚಿವಾಲಯ, ಈ ಕುರಿತಂತೆ ಆತ್ಮನಿರ್ಭರ ಭಾರತ ಪ್ಯಾಕೇಜ್ ಅಡಿಯಲ್ಲಿ ಮಾಡಿರುವ ಘೋಷಣೆಗಳ ಬಗ್ಗೆ ಗಮನಹರಿಸಬೇಕು ಎಂದು ಹೇಳಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಎಂಎಸ್ಎಂಇಗಳಿಗೆ ಪಾವತಿಸುವ ಸಣ್ಣ ಔದಾರ್ಯದಿಂದ ಅವುಗಳು ದೀರ್ಘಾವಧಿಯವರೆಗೆ ಮುನ್ನಡೆಯಲು ಹಾಗೂ ಲಕ್ಷಾಂತರ ಮನೆಗಳು ಪ್ರಕಾಶಿಸುವುದನ್ನು ಹಾಗೂ ಕೋಟ್ಯಾಂತರ ಮುಖಗಳಲ್ಲಿ ಮಂದಹಾಸ ಮೂಡುವುದನ್ನು ಕಾಣಬಹುದಾಗಿದೆ ಎಂದು ಸಚಿವಾಲಯ ಹೇಳಿದೆ.

***



(Release ID: 1665824) Visitor Counter : 244