ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಭಾರತದಲ್ಲಿ ಕೋವಿಡ್-19 ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆ
3ನೇ ದಿನವೂ 8 ಲಕ್ಷಕ್ಕಿಂತ ಕಡಿಮೆ ಸಕ್ರಿಯ ಸೋಂಕಿತರು
ಸತತ ನಾಲ್ಕನೇ ದಿನ ಶೇಕಡ 8 ಕ್ಕಿಂತ ಕಡಿಮೆ ಪಾಸಿಟಿವ್ ಪ್ರಕರಣಗಳು
Posted On:
19 OCT 2020 11:22AM by PIB Bengaluru
ಕೋವಿಡ್-19 ನಿಯಂತ್ರಣ ವಿರುದ್ಧದ ಹೋರಾಟದಲ್ಲಿ ಭಾರತ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ರಾಷ್ಟ್ರೀಯ ಮಟ್ಟದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಒಟ್ಟಾರೆ ಶೇಕಡ 8ಕ್ಕೆ ಇಳಿಕೆ ಆಗುತ್ತಾ ಬಂದಿದೆ. ಸತತ ನಾಲ್ಕು ದಿನಗಳಿಂದ ದೇಶವ್ಯಾಪಿ ಕೊರೊನಾ ಪ್ರಕರಣಗಳ ಇಳಿಕೆ ಪ್ರವೃತ್ತಿ ಮುಂದುವರಿದಿದ್ದು, ಅದೀಗ 7.94%ಗೆ ತಗ್ಗಿದೆ.
ಕೇಂದ್ರ ಸರ್ಕಾರ ಹಾಗೂ ನಾನಾ ಸಂಘ ಸಂಸ್ಥೆಗಳು ಮತ್ತು ಪರೀಕ್ಷಾ ಪ್ರಯೋಗಾಲಯಗಳು ದೇಶದೆಲ್ಲೆಡೆ ಉನ್ನತ ಮಟ್ಟದ ಪರೀಕ್ಷಾ ಸೌಲಭ್ಯಗಳನ್ನು ಹೆಚ್ಚಿಸಿದ್ದರಿಂದ ಕೋವಿಡ್-19 ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ದೇಶಾದ್ಯಂತ ಇಂದಿನ ತನಕ ನಡೆಸಿರುವ ಗಂಟಲು ದ್ರವ ಪರೀಕ್ಷೆಗಳ ಪ್ರಮಾಣ 9.5 ಕೋಟಿ ಮಟ್ಟ ದಾಟಿದೆ.

ಸಾಕ್ಷ್ಯಗಳೇ ಹೇಳುತ್ತಿರುವಂತೆ, ದೇಶದೆಲ್ಲೆಡೆ ಗಂಟಲು ದ್ರವ ಪರೀಕ್ಷೆಗಳನ್ನು ಸುಸ್ಥಿರ ಆಧಾರದಲ್ಲಿ ಹೆಚ್ಚಿಸುತ್ತಿರುವುದರಿಂದ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ತಗ್ಗುತ್ತಾ ಬಂದಿದೆ. ಒಟ್ಟಾರೆ ಪಾಸಿಟಿವ್ ಪ್ರಕರಣಗಳ ಪ್ರಮಾಣ ತಗ್ಗುತ್ತಿರುವ ಬೆಳವಣಿಗೆಯು ದೇಶದಲ್ಲಿ ಕೋವಿಡ್-19 ಸೋಂಕು ಹರಡುವ ಪ್ರಮಾಣವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತಿದೆ.
ಗಂಟಲು ದ್ರವ ಪರೀಕ್ಷೆಗಳನ್ನು ಎಲ್ಲೆಡೆ ಹೆಚ್ಚಿಸುತ್ತಿರುವುದರಿಂದ ಆರಂಭದಲ್ಲೆ ಸೋಂಕು ಹರಡಿರುವುದನ್ನು ಗುರುತಿಸಲು ಸಾಧ್ಯವಾಗುತ್ತಿದೆ. ಜತೆಗೆ, ಮನೆ, ಆಸ್ಪತ್ರೆ ಅಥವಾ ಆರೈಕೆ ಕೇಂದ್ರಗಳಲ್ಲಿ ಸೋಂಕಿತರಿಗೆ ಪರಿಣಾಮಕಾರಿ ಚಿಕಿತ್ಸೆ ನೀಡಲು ಸಾಧ್ಯವಾಗಲಿದೆ. ಗಂಭೀರ ಪ್ರಕರಣಗಳ ಮೇಲೆ ಸೂಕ್ಷ್ಮ ನಿಗಾ ವಹಿಸಲು, ತ್ವರಿತವಾಗಿ ಚಿಕಿತ್ಸೆ ನೀಡಲು ನೆರವಾಗುತ್ತಿದೆ. ಈ ಮೇಲಿನ ಎಲ್ಲಾ ಕ್ರಮಗಳ ಪರಿಣಾಮವಾಗಿ, ಮರಣ ಪ್ರಮಾಣ ಗಣನೀಯವಾಗಿ ಇಳಿಕೆಯಾಗುತ್ತಿದೆ.

ಅಕ್ಟೋಬರ್ ಮೂರನೇ ವಾರದಲ್ಲಿ ದೈನಂದಿನ ಸರಾಸರಿ ಪಾಸಿಟಿವ್ ಪ್ರಕರಣಗಳ ದರ ಶೇಕಡ 6.13 ಇದೆ. ಕೇಂದ್ರ ಸರ್ಕಾರ ರೂಪಿಸಿರುವ ಕಾರ್ಯತಂತ್ರ “ಟೆಸ್ಟ್, ಟ್ರ್ಯಾಕ್, ಟ್ರೇಸ್, ಟ್ರೀಟ್ ಅಂಡ್ ಟೆಕ್ನಾಲಜಿ”ಯ ಯಶಸ್ವಿ ಅಳವಡಿಕೆ ಮತ್ತು ಪ್ರಯೋಗದ ಫಲ ಹಾಗೂ ಇದನ್ನು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳು ಪರಿಣಾಮಕಾರಿಯಾಗಿ ಜಾರಿಗೆ ತಂದಿದ್ದರಿಂದ ಪಾಸಿಟಿವ್ ಪ್ರಕರಣಗಳ ಪ್ರಮಾಣ ಇಳಿಕೆಯ ಹಾದಿ ಹಿಡಿದಿದೆ.

ಭಾರತದಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಸ್ಥಿರವಾಗಿ ಇಳಿಕೆಯಾಗುತ್ತಿರುವ ಪ್ರವೃತ್ತಿ ಮುಂದುವರಿಯುತ್ತಿರುವುದು ವರದಿಯಾಗುತ್ತಿದೆ. ಒಂದೂವರೆ ತಿಂಗಳ ನಂತರ ಇದೇ ಮೊದಲಿಗೆ ಸತತ ಮೂರು ದಿನಗಳಿಂದ ಸಕ್ರಿಯ ಕೊರೊನಾ ಪ್ರಕರಣಗಳ ಪ್ರಮಾಣ 8 ಲಕ್ಷಕ್ಕಿಂತ ಕಡಿಮೆ ಪ್ರಮಾಣಕ್ಕೆ ತಗ್ಗಿದೆ. ಆಶಾದಾಯಕ ಇಳಿಕೆ ಪ್ರವೃತ್ತಿ ಮುಂದುವರಿದಿದೆ. ಭಾರತದಲ್ಲಿ ಕೋವಿಡ್-19 ಸಕ್ರಿಯ ಪ್ರಕರಣಗಳ ಸಂಖ್ಯೆ ಇಂದಿಗೆ 7,72,005ರಷ್ಟಿದೆ.
ಪ್ರಸ್ತುತ, ದೇಶದಲ್ಲಿ ಪತ್ತೆಯಾಗಿರುವ ಒಟ್ಟು ಕೊರೊನಾ ಸೋಂಕು ಪ್ರಕರಣಗಳ ಶೇಕಡ 10.23ರಷ್ಟು ಸಂಖ್ಯೆಯ ಸಕ್ರಿಯ ಸೋಂಕಿತ ಪ್ರಕರಣಗಳು ಇವೆ.
ದೇಶಾದ್ಯಂತ ಇದುವರೆಗೆ 66 ಲಕ್ಷಕ್ಕಿಂತ ಹೆಚ್ಚಿನ ಜನರು (66,63,608) ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದರಿಂದ ಸಕ್ರಿಯ ಪ್ರಕರಣಗಳ ಪ್ರಮಾಣ ತಗ್ಗಲು ಸಾಧ್ಯವಾಗಿದೆ.
ಕಳೆದ 24 ತಾಸುಗಳಲ್ಲಿ 66,399 ಸೋಂಕಿತರು ಗುಣಮುಖರಾಗಿ ವಿವಿಧ ಆಸ್ಪತ್ರೆಗಳು ಮತ್ತು ಕೋವಿಡ್-19 ಆರೈಕೆ ಕೇಂದ್ರಗಳಿಂದ ಬಿಡುಗಡೆ ಆಗಿದ್ದಾರೆ. ಒಂದೇ ದಿನದಲ್ಲಿ 55,722 ಹೊಸ ಪ್ರಕರಣಗಳು ಪತ್ತೆಯಾಗಿವೆ. ರಾಷ್ಟ್ರೀಯ ಚೇತರಿಕೆ ದರ 88.26%ಗೆ ಸುಧಾರಣೆ ಕಂಡಿದೆ.
ಹೊಸದಾಗಿ ದೃಢಪಡುತ್ತಿರುವ ಕೊರೊನಾ ಪ್ರಕರಣಗಳ ಪೈಕಿ ಶೇಕಡ 79ರಷ್ಟು ಸೋಂಕಿತರು ಮಹಾರಾಷ್ಟ್ರ, ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ದೆಹಲಿ, ಒಡಿಶಾ ಮತ್ತು ಛತ್ತೀಸ್ ಗಢ ಸೇರಿದಂತೆ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪತ್ತೆಯಾಗುತ್ತಿರುವುದು ಗಮನಾರ್ಹ ಸಂಗತಿ.
ಮಹಾರಾಷ್ಟ್ರ ರಾಜ್ಯವೊಂದರಲ್ಲೇ ಒಂದೇ ದಿನ 11 ಸಾವಿರಕ್ಕಿಂತ ಹೆಚ್ಚಿನ ಸೋಂಕಿತರು ಗುಣಮುಖರಾದರೆ, ಕೇರಳ ಮತ್ತು ಕರ್ನಾಟಕದಲ್ಲಿ ತಲಾ 8 ಸಾವಿರಕ್ಕಿಂತ ಹೆಚ್ಚಿನ ಜನರು ಚೇತರಿಸಿಕೊಂಡಿದ್ದಾರೆ.

ಕಳೆದ 24 ತಾಸುಗಳಲ್ಲಿ 55,722 ಹೊಸ ಪ್ರಕರಣಗಳು ಪತ್ತೆಯಾಗಿವೆ.
ಹೊಸ ಪ್ರಕರಣಗಳ ಪೈಕಿ 81% ಪ್ರಕರಣಗಳು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ದೃಢಪಟ್ಟಿವೆ. ಮಹಾರಾಷ್ಟ್ರದಲ್ಲಿ ಅತ್ಯಂತ ಅಧಿಕ ಸಂಖ್ಯೆಯ ಪ್ರಕರಣಗಳು ಪತ್ತೆಯಾಗಿದ್ದು, ಒಂದೇ ದಿನದಲ್ಲಿ 9 ಸಾವಿರಕ್ಕಿಂತ ಹೆಚ್ಚು, ಕೇರಳ ಮತ್ತು ಕರ್ನಾಟಕದಲ್ಲಿ ತಲಾ 7 ಸಾವಿರಕ್ಕಿಂತ ಹೆಚ್ಚಿನ ಪ್ರಕರಣಗಳು ಪತ್ತೆಯಾಗಿವೆ.

ಕಳೆದ 24 ತಾಸುಗಳಲ್ಲಿ 579 ಸಾವುಗಳು ವರದಿಯಾಗಿವೆ. 90 ದಿನಗಳ ನಂತರ ಸಾವಿನ ಪ್ರಮಾಣ 600ರ ಮಟ್ಟಕ್ಕಿಂತ ಕೆಳಕ್ಕೆ ಇಳಿದಿದೆ.
ಅವುಗಳಲ್ಲಿ ಸುಮಾರು 83% ಸಾವುಗಳು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಂಭವಿಸಿವೆ.
ಶೇಕಡ 25ಕ್ಕಿಂತ ಹೆಚ್ಚಿನ ಹೊಸ ಸಾವುಗಳು ಮಹಾರಾಷ್ಟ್ರ ರಾಜ್ಯವೊಂದರಲ್ಲೇ ಸಂಭವಿಸಿವೆ (150 ಸಾವುಗಳು).

***
(Release ID: 1665801)
Visitor Counter : 227
Read this release in:
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam