ಪರಿಸರ ಮತ್ತು ಅರಣ್ಯ ಸಚಿವಾಲಯ

ವಾಯುಮಾಲಿನ್ಯ ನಿಯಂತ್ರಣಕ್ಕೆ ವಾಹನಗಳಿಗೆ ಬಿಎಸ್VI ಕಡ್ಡಾಯಗೊಳಿಸಿರುವುದು ಕ್ರಾಂತಿಕಾರಿ ಹೆಜ್ಜೆ : ಕೇಂದ್ರ ಸಚಿವ ಶ್ರೀ ಪ್ರಕಾಶ್ ಜಾವಡೇಕರ್

Posted On: 18 OCT 2020 7:10PM by PIB Bengaluru

ವಾಯುಮಾಲಿನ್ಯ ನಿಯಂತ್ರಣಕ್ಕೆ ವಾಹನಗಳಿಗೆ (ಭಾರತ್ ಸ್ಟೇಜ್ ) ಬಿಎಸ್VI ಕಡ್ಡಾಯ ಮಾನದಂಡವನ್ನು ದೇಶಾದ್ಯಂತ ಏಪ್ರಿಲ್ 2020ರಿಂದೀಚೆಗೆ ಪರಿಚಯಿಸಲಾಗಿದ್ದು, ಇದು ವಾಹನ ಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಕ್ರಾಂತಿಕಾರಿ ಹೆಜ್ಜೆಯಾಗಿದೆ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವ ಶ್ರೀ ಪ್ರಕಾಶ್ ಜಾವಡೇಕರ್  ಹೇಳಿದರು. 

ಸಚಿವರು ತಮ್ಮ ಫೇಸ್ ಬುಕ್ ಮೂಲಕ ಸಂವಾದ ನಡೆಸಿ, ವಾಯುಮಾಲಿನ್ಯ ವಿಷಯದ ಕುರಿತು ಹಾಗೂ ಅದನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಮಾತನಾಡಿದರು. ಸಾರ್ವಜನಿಕರು ಕೇಂದ್ರ ಸಚಿವರಿಗೆ ಪ್ರಶ್ನೆಗಳನ್ನು ಮತ್ತು ಸಲಹೆಗಳನ್ನು ಹ್ಯಾಶ್ ಟ್ಯಾಗ್ Hashtag #AskPrakashJavadekarಗೆ ಕಳುಹಿಸಿ ಸಂವಾದ ನಡೆಸಿದರು. 

ಬಿಎಸ್VI ವಾಹನಗಳ ಮಾಲಿನ್ಯ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಿದೆ ಎಂದರು. ಬಿಎಸ್VI ಇಂಧನ ಡೀಸಲ್ ಕಾರುಗಳಲ್ಲಿ ಶೇ.70ರಷ್ಟು ಎನ್ಒಎಕ್ಸ್ ಹೊರ ಹಾಕುವುದನ್ನು ತಗ್ಗಿಸುತ್ತದೆ. ಪೆಟ್ರೋಲ್ ಕಾರ್ ಗಳಲ್ಲಿ ಶೇ.25ರಷ್ಟು ತಗ್ಗಿಸುತ್ತದೆ ಮತ್ತು ವಾಹನಗಳಲ್ಲಿ ಪಿಎಂ ಪ್ರಮಾಣ(ಪರ್ಟಿಕ್ಯುಲೇಟ್ ಮ್ಯಾಟರ್)ವನ್ನು ಶೇ.80ರಷ್ಟು ತಗ್ಗಿಸುತ್ತದೆ ಎಂದರು.

ದೇಶಾದ್ಯಂತ ವಾಯುಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಸಮಗ್ರ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಕಟಿಸಿದ್ದಾರೆ. ಅದರಂತೆ ದೇಶಾದ್ಯಂತ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪರಿಸರ ಸಚಿವಾಲಯ, ರಾಷ್ಟ್ರೀಯ ಶುದ್ಧ ವಾಯು ಕಾರ್ಯಕ್ರಮ(ಎನ್ ಸಿ ಎಪಿ) ಮೂಲಕ ದೇಶದ 122 ನಗರಗಳಲ್ಲಿ ಕಾರ್ಯಕ್ರಮವನ್ನು ಜಾರಿಗೊಳಿಸುತ್ತಿದೆ ಎಂದು ಶ್ರೀ ಜಾವಡೇಕರ್ ಹೇಳಿದರು. ಎನ್ ಸಿ ಎಪಿ ಕಾರ್ಯಕ್ರಮದಡಿ ದೇಶಾದ್ಯಂತ 2024ರ ವೇಳೆಗೆ ಪಿಎಂ10 ಮತ್ತು ಪಿಎಂ2.5 ಗಳನ್ನು ಶೇ.20 ರಿಂದ 30ಕ್ಕೆ ತಗ್ಗಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು. 

ಇಡೀ ವಿಶ್ವ ವಾಯುಮಾಲಿನ್ಯ ಸಮಸ್ಯೆ ಎದುರಿಸುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದರು. ವಾಯುಮಾಲಿನ್ಯಕ್ಕೆ ಕಾರಣವಾಗುತ್ತಿರುವ ಅಂಶಗಳ ಕುರಿತಂತೆ ಮಾತನಾಡಿದ ಶ್ರೀ ಜಾವಡೇಕರ್ ಅವರು, ವಾಯುಮಾಲಿನ್ಯಕ್ಕೆ ಅತ್ಯಂತ ಪ್ರಮುಖ ಕಾರಣ ಎಂದರೆ ವಾಹನಗಳು ಉಗುಳುವ ಹೊಗೆ, ಕೈಗಾರಿಕೆಗಳು ಹೊರಬಿಡುತ್ತಿರುವ ಮಾಲಿನ್ಯ, ಕಟ್ಟಡ ನಿರ್ಮಾಣ ಮತ್ತು ಕಟ್ಟಡ ತೆರವು ಸ್ಥಳಗಳಲ್ಲಿ ಉಂಟಾಗುವ ಧೂಳು, ಜೈವಿಕ ಅನಿಲ ಸುಡುವುದು, ಕಳಪೆ ತ್ಯಾಜ್ಯ ನಿರ್ವಹಣೆ ಮತ್ತು ಕೃಷಿ ತ್ಯಾಜ್ಯ ಸುಡುವುದಾಗಿದೆ ಎಂದರು. ಈ ಎಲ್ಲ ಕಾರಣಗಳಿಂದಾಗಿ ಮತ್ತು ಭೌಗೋಳಿಕ ಹಾಗೂ ಹವಾಮಾನದ ಕಾರಣಗಳಿಂದಾಗಿ ಚಳಿಗಾಲದಲ್ಲಿ ಉತ್ತರ ಭಾರತದಲ್ಲಿ ಮಾಲಿನ್ಯ ಪ್ರಮಾಣ ಅತ್ಯಧಿಕವಾಗಲಿದೆ ಎಂದು ಹೇಳಿದರು. 

ವಾಯುಮಾಲಿನ್ಯವನ್ನು ಪರಿಣಾಮಕಾರಿಯಾಗಿ ಎದುರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳು ಹಾಗೂ ಜಾರಿಗೊಳಿಸಿರುವ ಯೋಜನೆಗಳ ಕುರಿತಂತೆ ಸಚಿವರು ಫೇಸ್ ಬುಕ್ ವೀಕ್ಷಕರಿಗೆ ವಿವರಣೆ ನೀಡಿದರು. ಈ ವರ್ಷದ ಜನವರಿ 1 ರಿಂದ ಸೆಪ್ಟೆಂಬರ್ 30ರ ನಡುವಿನ ಅವಧಿಯಲ್ಲಿ, 2020ರಲ್ಲಿ “ಉತ್ತಮ” ಗಾಳಿಯ ದಿನಗಳ ಸಂಖ್ಯೆ 218ಕ್ಕೆ ಏರಿಕೆಯಾಗಿದೆ. 2016ರಲ್ಲಿ ಈ ಪ್ರಮಾಣ 106 ದಿನಗಳಿತ್ತು, ಅಂತೆಯೇ 2020ರಲ್ಲಿ ಕಳಪೆ ಗುಣಮಟ್ಟದ ವಾಯು ದಿನಗಳ ಸಂಖ್ಯೆ 56ಕ್ಕೆ ಇಳಿಕೆಯಾಗಿದೆ. 2016ರಲ್ಲಿ ಈ ಪ್ರಮಾಣ 156 ದಿನಗಳಾಗಿತ್ತು ಎಂದರು.

ಪೂರ್ವ ಮತ್ತು ಪಶ್ಚಿಮ ಪೆರಿಫರಲ್ ಎಕ್ಸ್ ಪ್ರೆಸ್ ವೆ ಕಾರ್ಯಾಚರಣೆಯಿಂದಾಗಿ ದೆಹಲಿಯಲ್ಲಿ ವಾಹನ ದಟ್ಟಣೆ ಪ್ರಮಾಣ ತಗ್ಗಿದೆ. ಸಾರ್ವಜನಿಕರು ಖಾಸಗಿ ವಾಹನಗಳ ಬಳಕೆಯನ್ನು ತಗ್ಗಿಸಬೇಕು ಮತ್ತು ಮೆಟ್ರೋ ಹಾಗೂ ಇನ್ನಿತರ ಸಾರ್ವಜನಿಕ ಸಾರಿಗೆ ಬಳಕೆಗೆ ಹೆಚ್ಚಿನ ಒತ್ತು ಕೊಡಬೇಕು ಎಂದು ಅವರು ಕರೆ ನೀಡಿದರು. ಅಲ್ಲದೆ ಶುದ್ಧ ಸಾರಿಗೆ ಪದ್ಧತಿಗಳ ಅಳವಡಿಕೆಗೆ ವರ್ಗಾವಣೆಗೊಳ್ಳುವಂತೆ ಅವರು ಕರೆ ನೀಡಿದರು. ಮೆಟ್ರೋ ವಿಸ್ತರಣೆಯಿಂದಾಗಿ ದಟ್ಟಣೆ ಹಾಗೂ ಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಸಾಕಷ್ಟು ಸಹಕಾರಿಯಾಗಿದೆ ಎಂದು ಶ್ರೀ ಜಾವಡೇಕರ್ ಹೇಳಿದರು. ಮೆಟ್ರೋ ವಿಸ್ತರಣೆ ಮತ್ತು ಹೆಚ್ಚು ನಿಲ್ದಾಣಗಳು ಹಾಗೂ ಬೋಗಿಗಳ ಸೇರ್ಪಡೆಯಿಂದಾಗಿ ಸುಮಾರು 5 ಲಕ್ಷ ವಾಹನಗಳ ಮಾಲಿನ್ಯವನ್ನು ತಪ್ಪಿಸಲಾಗುತ್ತಿದೆ ಎಂದರು. 

ಕೈಗಾರಿಕಾ ಮಾಲಿನ್ಯ ತಡೆಗೆ ಕೈಗೊಂಡಿರುವ ಕ್ರಮಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಸಚಿವರು, ಅದರಲ್ಲಿ ಬದಾರ್ ಪುರ್ ಮತ್ತು ಸೋನಿಪತ್ ಅಣುವಿದ್ಯುತ್ ಸ್ಥಾವರಗಳನ್ನು ಮುಚ್ಚಿಸಿರುವುದು, ಬ್ರಿಕ್ ಕಿಲನ್ಸ್ ನಲ್ಲಿ ಝಿಗ್ ಝಾಗ್ ತಂತ್ರಜ್ಞಾನಗಳಿಗೆ ಪರಿವರ್ತಿಸಿರುವುದು, 2800 ಕೈಗಾರಿಕೆಗಳು ಪಿಎನ್ ಜಿ ಇಂಧನಕ್ಕೆ ಪರಿವರ್ತನೆಗೊಂಡಿರುವುದು ಮತ್ತು ಪೆಟ್ ಕೋಕ್ ಹಾಗೂ ಫರ್ನೆಸ್ ತೈಲವನ್ನು ನಿಷೇಧಿಸಿರುವ ಕ್ರಮಗಳು ಸೇರಿವೆ ಎಂದು ಹೇಳಿದರು. 

ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸಮೀರ್ ಆಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳುವಂತೆ ಪ್ರತಿಯೊಬ್ಬ ಪ್ರಜೆಗಳಿಗೂ ಮನವಿ ಮಾಡಿದ ಅವರು, ಅದರಲ್ಲಿ ದೇಶಾದ್ಯಂತ ನಾನಾ ನಗರಗಳಲ್ಲಿನ ಮಾಲಿನ್ಯ ಪ್ರದೇಶಗಳ ಕುರಿತು ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ ಎಂದರು. ಹೆಚ್ಚಿನ ಮಾಲಿನ್ಯವಿರುವ ಪ್ರದೇಶಗಳನ್ನು ಅದು ಕೆಂಪು ಬಣ್ಣದಲ್ಲಿ ಗುರುತಿಸಲಿದೆ ಎಂದು ಅವರು ಹೇಳಿದರು. 

***



(Release ID: 1665712) Visitor Counter : 1796