ಪ್ರಧಾನ ಮಂತ್ರಿಯವರ ಕಛೇರಿ
ಕೃತಕ ಬುದ್ಧಿಮತ್ತೆಯ ಬೃಹತ್ ವರ್ಚುವಲ್ ಶೃಂಗಸಭೆ - RAISE 2020 ಉದ್ಘಾಟಿಸಿದ ಪ್ರಧಾನಿ ಶ್ರೀ ನರೇಂದ್ರ ಮೋದಿ
ಭಾರತವು ಕೃತಕ ಬುದ್ಧಿಮತ್ತೆಯ ಜಾಗತಿಕ ಕೇಂದ್ರವಾಗಲಿದೆ: ಪ್ರಧಾನಿ
ಕೃತಕ ಬುದ್ಧಿಮತ್ತೆಯ ರಾಷ್ಟ್ರೀಯ ಕಾರ್ಯಕ್ರಮವನ್ನು ಸಮಾಜದ ಸಮಸ್ಯೆಗಳನ್ನು ಬಗೆಹರಿಸಲು ಬಳಸಲಾಗುತ್ತದೆ: ಪ್ರಧಾನಿ
Posted On:
05 OCT 2020 8:51PM by PIB Bengaluru
ಕೃತಕ ಬುದ್ಧಿಮತ್ತೆಯ (ಎಐ) ಬೃಹತ್ ವರ್ಚುವಲ್ ಶೃಂಗಸಭೆ RAISE 2020ನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಇಂದು ಉದ್ಘಾಟಿಸಿದರು. RAISE 2020 ಆರೋಗ್ಯ, ಕೃಷಿ, ಶಿಕ್ಷಣ ಮತ್ತು ಸ್ಮಾರ್ಟ್ ಮೊಬಿಲಿಟಿ ಮುಂತಾದ ಕ್ಷೇತ್ರಗಳಲ್ಲಿ ಸಾಮಾಜಿಕ ಪರಿವರ್ತನೆ, ಸೇರ್ಪಡೆ ಮತ್ತು ಸಬಲೀಕರಣಕ್ಕಾಗಿ ಕೃತಕ ಬುದ್ಧಿಮತ್ತೆಯನ್ನು ಬಳಸಲು ವಿಚಾರ ವಿನಿಮಯ ಮಾಡಿಕೊಳ್ಳುವ ಮತ್ತು ಈ ಕುರಿತು ರೂಪುರೇಷೆ ಸಿದ್ಧಪಡಿಸುವ ಜಾಗತಿಕ ಸಭೆಯಾಗಿದೆ.
ಕೃತಕ ಬುದ್ಧಿಮತ್ತೆಯ ಬಗ್ಗೆ ಚರ್ಚೆಯನ್ನು ಪ್ರೋತ್ಸಾಹಿಸುತ್ತಿರುವುದಕ್ಕಾಗಿ ಪ್ರಧಾನಮಂತ್ರಿಯವರು ಸಂಘಟಕರನ್ನು ಶ್ಲಾಘಿಸಿದರು. ತಂತ್ರಜ್ಞಾನವು ನಮ್ಮ ಕೆಲಸದಲ್ಲಿ ಪರಿವರ್ತನೆ ತಂದಿದೆ ಮತ್ತು ಸಂಪರ್ಕವನ್ನು ಸುಧಾರಿಸಿದೆ ಎಂದು ಅವರು ಹೇಳಿದರು. ಸಾಮಾಜಿಕ ಹೊಣೆಗಾರಿಕೆ ಮತ್ತು ಕೃತಕ ಬುದ್ಧಿಮತ್ತೆಗಳ ವಿಲೀನವು ಕೃತಕ ಬುದ್ಧಿಮತ್ತೆಯನ್ನು ಮಾನವೀಯಗೊಳಿಸಲಿ ಎಂದು ಅವರು ಆಶಿಸಿದರು. ಮನುಷ್ಯರೊಂದಿಗೆ ಕೃತಕ ಬುದ್ಧಿಮತ್ತೆ ತಂಡದ ಕೆಲಸವು ನಮ್ಮ ಭೂ ಗ್ರಹಕ್ಕೆ ಅದ್ಭುತಗಳನ್ನು ಸೃಷ್ಟಿಸಬಹುದು ಎಂದು ಅವರು ಹೇಳಿದರು.
ಭಾರತವು ಜ್ಞಾನ ಮತ್ತು ಕಲಿಕೆಯಲ್ಲಿ ಜಗತ್ತನ್ನು ಮುನ್ನಡೆಸಿದೆ ಮತ್ತು ಡಿಜಿಟಲ್ ಕ್ಷೇತ್ರದಲ್ಲಿ ಉತ್ಕೃಷ್ಟತೆಯನ್ನು ಸಾಧಿಸಿ ಜಗತ್ತಿಗೆ ಮುದ ನೀಡುತ್ತದೆ ಎಂದರು.
ಪಾರದರ್ಶಕತೆ ಮತ್ತು ಸೇವೆಗಳ ವಿತರಣೆಯನ್ನು ಸುಧಾರಿಸಲು ತಂತ್ರಜ್ಞಾನವು ಹೇಗೆ ನೆರವಾಗುತ್ತದೆ ಎಂಬುದನ್ನು ಭಾರತ ತಿಳಿದುಕೊಂಡಿದೆ ಎಂದು ಶ್ರೀ ಮೋದಿ ಹೇಳಿದರು.
ವಿಶ್ವದ ಅತಿದೊಡ್ಡ ವಿಶಿಷ್ಟ ಗುರುತಿನ ವ್ಯವಸ್ಥೆ - ಆಧಾರ್ ಮತ್ತು ವಿಶ್ವದ ಅತ್ಯಂತ ಹೊಸತನದ ಡಿಜಿಟಲ್ ಪಾವತಿ ವ್ಯವಸ್ಥೆ– ಯುಪಿಐ, ಬಡವರಿಗೆ ಮತ್ತು ದುರ್ಬಲರಿಗೆ ನೇರ ನಗದು ವರ್ಗಾವಣೆಯಂತಹ ಹಣಕಾಸು ಸೇವೆಗಳು ಸೇರಿದಂತೆ ಡಿಜಿಟಲ್ ಸೇವೆಗಳನ್ನು ಒದಗಿಸಲು ಹೇಗೆ ಸಾಧ್ಯವಾಯಿತು ಎಂಬ ಬಗ್ಗೆ ಪ್ರಧಾನಿ ಒತ್ತಿ ಹೇಳಿದರು. ಸಾಂಕ್ರಾಮಿಕದ ಸಮಯದಲ್ಲಿ, ನೆರವು ಜನರನ್ನು ತ್ವರಿತವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ತಲುಪಲು ಇದರಿಂದ ಸಾಧ್ಯವಾಯಿತು ಎಂದು ಅವರು ತಿಳಿಸಿದರು.
ಭಾರತವು ಕೃತಕ ಬುದ್ಧಿಮತ್ತೆಯ ಜಾಗತಿಕ ಕೇಂದ್ರವಾಗಬೇಕೆಂದು ಪ್ರಧಾನಿ ಹಾರೈಸಿದರು ಮತ್ತು ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಭಾರತೀಯರು ಈ ಬಗ್ಗೆ ಕೆಲಸ ಮಾಡಲು ಪ್ರಾರಂಭಿಸುತ್ತಾರೆ ಎಂದು ಆಶಿಸಿದರು. ಈ ಗುರಿಯತ್ತ ಸಾಗಲು ತಂಡದ ಕೆಲಸ, ನಂಬಿಕೆ, ಸಹಯೋಗ, ಜವಾಬ್ದಾರಿ ಮತ್ತು ಒಳಗೊಳ್ಳುವಿಕೆಯಂತಹ ಪ್ರಮುಖ ತತ್ವಗಳ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಭಾರತವು ಇತ್ತೀಚೆಗೆ ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಅಳವಡಿಸಿಕೊಂಡಿದೆ. ಈ ನೀತಿಯು ತಂತ್ರಜ್ಞಾನ ಆಧಾರಿತ ಕಲಿಕೆ ಮತ್ತು ಕೌಶಲ್ಯವು ಶಿಕ್ಷಣದ ಪ್ರಮುಖ ಭಾಗವಾಗಿರುವ ಬಗ್ಗೆ ಗಮನ ಕೇಂದ್ರೀಕರಿಸಿದೆ. ವಿವಿಧ ಪ್ರಾದೇಶಿಕ ಭಾಷೆಗಳು ಮತ್ತು ಉಪಭಾಷೆಗಳಲ್ಲಿ ಇ-ಕೋರ್ಸ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು. ಈ ಸಂಪೂರ್ಣ ಪ್ರಯತ್ನವು ಕೃತಕ ಬುದ್ಧಿಮತ್ತೆ ಪ್ಲಾಟ್‌ಫಾರ್ಮ್‌ಗಳ ನೈಸರ್ಗಿಕ ಭಾಷಾ ಸಂಸ್ಕರಣೆ (ಎನ್‌ಎಲ್‌ಪಿ) ಸಾಮರ್ಥ್ಯಗಳ ಪ್ರಯೋಜನ ಪಡೆಯುತ್ತದೆ. 2020 ರ ಏಪ್ರಿಲ್‌ನಲ್ಲಿ ಪ್ರಾರಂಭಿಸಲಾದ ‘ಯುವಕರಿಗಾಗಿ ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ’ ಕಾರ್ಯಕ್ರಮದಡಿ 11,000 ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಮೂಲ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದಾರೆ. ಅವರು ಈಗ ತಮ್ಮ ಕೃತಕ ಬುದ್ಧಿಮತ್ತೆ ಯೋಜನೆಗಳಲ್ಲಿ ತೊಡಗಿದ್ದಾರೆ ಎಂದು ಅವರು ಹೇಳಿದರು.
ಡಿಜಿಟಲ್ ಮೂಲಸೌಕರ್ಯ, ಡಿಜಿಟಲ್ ವಿಷಯ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಲು ರಾಷ್ಟ್ರೀಯ ಶೈಕ್ಷಣಿಕ ತಂತ್ರಜ್ಞಾನ ವೇದಿಕೆಯು ಇ-ಶಿಕ್ಷಣ ಘಟಕವನ್ನು ರಚಿಸುತ್ತದೆ ಎಂದು ಪ್ರಧಾನಿ ಹೇಳಿದರು. ವರ್ಚುವಲ್ ಲ್ಯಾಬ್‌ಗಳ ಸ್ಥಾಪನೆ, ಅಟಲ್ ಇನ್ನೋವೇಶನ್ ಮಿಷನ್ ಮುಂತಾದ ಕಾರ್ಯಕ್ರಮಗಳ ಮೂಲಕ ನೂತನ ತಂತ್ರಜ್ಞಾನಗಳೊಂದಿಗೆ ವೇಗವನ್ನು ಕಾಯ್ದುಕೊಳ್ಳಲು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.
ಕೃತಕ ಬುದ್ಧಿಮತ್ತೆಯ ರಾಷ್ಟ್ರೀಯ ಕಾರ್ಯಕ್ರಮವನ್ನು ಸಮಾಜದ ಸಮಸ್ಯೆಗಳನ್ನು ಪರಿಹರಿಸಲು ಮೀಸಲಿಡಲಾಗುವುದು ಎಂದು ಪ್ರಧಾನಿ ತಿಳಿಸಿದರು.
ಕೃಷಿ, ಮುಂದಿನ ಪೀಳಿಗೆಯ ನಗರ ಮೂಲಸೌಕರ್ಯಗಳ ಸೃಷ್ಟಿ, ಸಂಚಾರ ದಟ್ಟಣೆ ಕಡಿಮೆ ಮಾಡುವಂತಹ ನಗರಗಳ ಸಮಸ್ಯೆಗಳಿಗೆ ಪರಿಹಾರ, ಒಳಚರಂಡಿ ವ್ಯವಸ್ಥೆಯನ್ನು ಸುಧಾರಿಸುವುದು ಮತ್ತು ವಿದ್ಯುತ್ ಗ್ರಿಡ್ಗಳನ್ನು ಹಾಕುವುದು, ವಿಪತ್ತು ನಿರ್ವಹಣಾ ವ್ಯವಸ್ಥೆಗಳನ್ನು ಬಲಪಡಿಸುವುದು ಮತ್ತು ಹವಾಮಾನ ಬದಲಾವಣೆ ಸಮಸ್ಯೆಯನ್ನು ಪರಿಹರಿಸುವುದು – ಹೀಗೆ ಪ್ರಧಾನಿಯವರು ಕೃತಕ ಬುದ್ಧಿಮತ್ತೆಯನ್ನು ಬಳಸುಬಹುದಾದ ಕ್ಷೇತ್ರಗಳ ಪಟ್ಟಿಯನ್ನು ಮಾಡಿದರು. ಭಾಷೆಯ ಅಡೆತಡೆಗಳನ್ನು ನಿವಾರಿಸಲು ಮತ್ತು ಭಾಷೆಗಳು ಮತ್ತು ಉಪಭಾಷೆಗಳ ವೈವಿಧ್ಯತೆಯನ್ನು ಕಾಪಾಡಲು ಕೃತಕ ಬುದ್ಧಿಮತ್ತೆಯನ್ನು ಬಳಸಬೇಕು. ಜ್ಞಾನ ಹಂಚಿಕೆಗಾಗಿ ಕೃತಕ ಬುದ್ಧಿಮತ್ತೆಯನ್ನು ಉಪಯೋಗಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಕೃತಕ ಬುದ್ಧಿಮತ್ತೆಯನ್ನು ಹೇಗೆ ಬಳಸಲಾಗಿದೆ ಎಂಬ ಬಗ್ಗೆ ವಿಶ್ವಾಸವನ್ನು ಮೂಡಿಸುವಲ್ಲಿ ಪಾರದರ್ಶಕತೆ ಪ್ರಮುಖವಾಗಿದೆ ಮತ್ತು ಅದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಪ್ರಧಾನಿ ಹೇಳಿದರು.
ಸರ್ಕಾರೇತರ ವ್ಯಕ್ತಿಗಳ ಕೃತಕ ಬುದ್ಧಿಮತ್ತೆ ಸಶಸ್ತ್ರೀಕರಣದಿಂದ ಜಗತ್ತನ್ನು ರಕ್ಷಿಸಬೇಕೆಂದು ಅವರು ಆಗ್ರಹಿಸಿದರು. ಮಾನವ ಸೃಜನಶೀಲತೆ ಮತ್ತು ಮಾನವೀಯ ಭಾವನೆಗಳು ನಮ್ಮ ದೊಡ್ಡ ಶಕ್ತಿಯಾಗಿವೆ. ಮತ್ತು ಯಂತ್ರಗಳಿಗಿಂತಲೂ ಹೆಚ್ಚು ಅನನ್ಯವಾದ ಪ್ರಯೋಜನ ಕೊಟ್ಟಿವೆ ಎಂದು ಅವರು ಹೇಳಿದರು. ಯಂತ್ರಗಳ ವಿರುದ್ಧ ಈ ಬೌದ್ಧಿಕತೆಯನ್ನು ಉಳಿಸಿಕೊಳ್ಳುವುದು ಮತ್ತು ಮಾನವ ಬುದ್ಧಿಮತ್ತೆಯು ಯಾವಾಗಲೂ ಕೃತಕ ಬುದ್ಧಿಮತ್ತೆಗಿಂತ ಕೆಲವು ಹೆಜ್ಜೆ ಮುಂದಿರುವುದನ್ನು ಎಲ್ಲರೂ ಖಚಿತಪಡಿಸಿಕೊಳ್ಳಬೇಕು ಎಂದು ಕರೆಕೊಟ್ಟರು. ಮಾನವ ಸಾಮರ್ಥ್ಯವನ್ನು ಹೆಚ್ಚಿಸಲು ಕೃತಕ ಬುದ್ಧಿಮತ್ತೆಯು ಬಳಸಿಕೊಳ್ಳುವ ಬಗ್ಗೆ ನಾವು ಯೋಚಿಸಬೇಕು ಎಂದು ಅವರು ಹೇಳಿದರು.
ಕೃತಕ ಬುದ್ಧಿಮತ್ತೆಯು ಪ್ರತಿಯೊಬ್ಬ ವ್ಯಕ್ತಿಯ ವಿಶಿಷ್ಟ ಸಾಮರ್ಥ್ಯವನ್ನು ಅನಾವರಣಗೊಳಿಸುತ್ತದೆ ಮತ್ತು ಸಮಾಜಕ್ಕೆ ಹೆಚ್ಚು ಪರಿಣಾಮಕಾರಿಯಾಗಿ ಕೊಡುಗೆ ನೀಡಲು ಅವರನ್ನು ಶಕ್ತಗೊಳಿಸುತ್ತದೆ ಎಂದು ಪ್ರಧಾನಿ ಹೇಳಿದರು. RAISE 2020 ರಲ್ಲಿ ಭಾಗವಹಿಸಿದವರು ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಬೇಕು ಮತ್ತು ಕೃತಕ ಬುದ್ಧಿಮತ್ತೆಯನ್ನು ಅಳವಡಿಸಿಕೊಳ್ಳಲು ಸಾಮಾನ್ಯ ರೂಪುರೇಷೆ ಸಿದ್ಧಪಡಿಸಬೇಕು ಎಂದು ಅವರು ಒತ್ತಾಯಿಸಿದರು. ಚರ್ಚೆಯಿಂದ ಹೊರಹೊಮ್ಮುವ ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆಯ ಕಾರ್ಯವಿಧಾನವು ಜಗತ್ತಿನಾದ್ಯಂತ ಜನರ ಜೀವನ ಮತ್ತು ಜೀವನೋಪಾಯವನ್ನು ಪರಿವರ್ತಿಸಲು ಸಹಾಯ ಮಾಡಲಿ ಎಂದು ಅವರು ಆಶಿಸಿದರು.
****
(Release ID: 1661910)
Visitor Counter : 342
Read this release in:
English
,
Urdu
,
Marathi
,
Hindi
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam