ಪ್ರಧಾನ ಮಂತ್ರಿಯವರ ಕಛೇರಿ
ಹಿಮಾಚಲ ಪ್ರದೇಶದ ಸಿಸ್ಸುವಿನಲ್ಲಿ ‘ಅಭರ್ ಸಮಾರೋಹ’ ದಲ್ಲಿ ಪಾಲ್ಗೊಂಡ ಪ್ರಧಾನಿ
ಅಟಲ್ ಸುರಂಗವು ಈ ಪ್ರದೇಶದ ಜನಜೀವನದ ಪರಿವರ್ತನೆಗೆ ಕಾರಣವಾಗುತ್ತದೆ
ಅಭಿವೃದ್ಧಿಯ ಲಾಭಗಳು ಪ್ರತಿಯೊಬ್ಬ ನಾಗರಿಕರಿಗೂ ತಲುಪುವಂತೆ ನೋಡಿಕೊಳ್ಳುವ ಸರ್ಕಾರದ ಬದ್ಧತೆಯನ್ನು ಅಟಲ್ ಸುರಂಗ ಸಂಕೇತಿಸುತ್ತದೆ
ಈಗ ನೀತಿಗಳನ್ನು ಮತಗಳಿಕೆಗಾಗಿ ರೂಪಿಸಲಾಗುತ್ತಿಲ್ಲ, ಬದಲಿಗೆ ಯಾವುದೇ ಭಾರತೀಯನೂ ಹಿಂದೆ ಬೀಳದಂತೆ ಖಚಿತಪಡಿಸಿಕೊಳ್ಳುವ ಪ್ರಯತ್ನವಾಗಿದೆ
ಲಾಹೌಲ್-ಸ್ಪಿತಿಗೆ ದೇವ ದರ್ಶನ ಮತ್ತು ಬುದ್ಧ ದರ್ಶನದ ಸಂಗಮದ ಹೊಸ ಆಯಾಮ ನೀಡಲಾಗುವುದು: ಪ್ರಧಾನಿ
Posted On:
03 OCT 2020 1:35PM by PIB Bengaluru
ಹಿಮಾಚಲ ಪ್ರದೇಶದ ಸಿಸ್ಸು, ಲಾಹೌಲ್ ಮತ್ತು ಸ್ಪಿತಿಯಲ್ಲಿ ಇಂದು ನಡೆದ ‘ಅಭರ್ ಸಮಾರೋಹ’ ದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಭಾಗವಹಿಸಿದ್ದರು.
ಅಟಲ್ ಸುರಂಗದ ಪರಿವರ್ತಕ ಪರಿಣಾಮ
ತಾವು ಕಾರ್ಯಕರ್ತರಾಗಿ ಕೆಲಸ ಮಾಡುವಾಗ, ರೋಹ್ಟಾಂಗ್ ಮೂಲಕ ಸುದೀರ್ಘ ಮಾರ್ಗವನ್ನು ಹಾದುಹೋಗುತ್ತಿದ್ದುದನ್ನು ಪ್ರಧಾನ ಮಂತ್ರಿಯವರು ಸ್ಮರಿಸಿಕೊಂಡರು ಮತ್ತು ಚಳಿಗಾಲದಲ್ಲಿ ರೋಹ್ಟಾಂಗ್ ಪಾಸ್ ಮುಚ್ಚುವುದರಿಂದ ಜನರು ಎದುರಿಸುತ್ತಿದ್ದ ತೊಂದರೆಗಳನ್ನು ಅವರು ನೆನಪಿಸಿಕೊಂಡರು. ಆ ದಿನಗಳಲ್ಲಿ ಶ್ರೀ ಠಾಕೂರ್ ಸೇನ್ ನೇಗಿ ಅವರೊಂದಿಗಿನ ಸಂವಾದಗಳನ್ನು ಅವರು ನೆನಪಿಸಿಕೊಂಡರು. ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಈ ತೊಂದರೆಗಳ ಬಗ್ಗೆ ಚೆನ್ನಾಗಿ ತಿಳಿದಿತ್ತು, ಅದಕ್ಕಾಗಿಯೇ ಅವರು 2000 ದಲ್ಲಿ ಈ ಸುರಂಗ ಮಾರ್ಗವನ್ನು ಘೋಷಿಸಿದರು ಎಂದು ಅವರು ಹೇಳಿದರು.
9 ಕಿ.ಮೀ ಸುರಂಗ ಮಾರ್ಗದ ಮೂಲಕ ಸುಮಾರು 45-46 ಕಿ.ಮೀ ದೂರವನ್ನು ಕಡಿಮೆ ಮಾಡಲಾಗಿದೆ ಎಂದು ಪ್ರಧಾನಿ ಹೇಳಿದರು. ಸುರಂಗ ಮಾರ್ಗದಿಂದಾಗಿ ಈ ಪ್ರದೇಶದ ಜನಜೀವನವು ಬದಲಾಗಲಿದೆ ಎಂದು ಅವರು ಒತ್ತಿಹೇಳಿದರು. ರೈತರು, ತೋಟಗಾರಿಕೆ ಮತ್ತು ಪಶುಸಂಗೋಪನೆಗೆ ಸಂಬಂಧಿಸಿದವರು, ವಿದ್ಯಾರ್ಥಿಗಳು, ಉದ್ಯಮಿಗಳು ಸೇರಿದಂತೆ ಲಾಹೌಲ್-ಸ್ಪಿತಿ ಮತ್ತು ಪಾಂಗಿ ಜನರಿಗೆ ಈ ಸುರಂಗವು ಪ್ರಯೋಜನಕಾರಿಯಾಗುತ್ತದೆ ಎಂದು ಅವರು ಹೇಳಿದರು. ಇದು ಈ ಪ್ರದೇಶದ ಕೃಷಿ ಉತ್ಪನ್ನಗಳು ಮಾರುಕಟ್ಟೆಗಳನ್ನು ತ್ವರಿತವಾಗಿ ತಲುಪಲು ಅನುವು ಮಾಡಿಕೊಡುವ ಮೂಲಕ ಅವುಗಳು ಹಾಳಾಗದಂತೆ ತಡೆಯುತ್ತದೆ. ಈ ಪ್ರದೇಶದಲ್ಲಿ ಬೆಳೆಯುವ ಚಂದ್ರಮುಖಿ ಆಲೂಗಡ್ಡೆಗೆ ಹೊಸ ಮಾರುಕಟ್ಟೆ ಮತ್ತು ಹೊಸ ಖರೀದಿದಾರರನ್ನು ಒದಗಿಸಲು ಸಹಾಯ ಮಾಡುತ್ತದೆ. ಲಾಹೌಲ್-ಸ್ಪಿತಿಯಲ್ಲಿ ಬೆಳೆಯುವ ಗಿಡಮೂಲಿಕೆ ಔಷಧೀಯ ಸಸ್ಯಗಳು ಮತ್ತು ಮಸಾಲೆ ಪದಾರ್ಥಗಳಿಗೆ ಮಾರುಕಟ್ಟೆ ಒದಗಿಸುತ್ತದೆ ಮತ್ತು ಈ ಪ್ರದೇಶಕ್ಕೆ ವಿಶ್ವಮಟ್ಟದ ಗುರುತು ದೊರೆಯುತ್ತದೆ. ಇದಲ್ಲದೆ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅವರ ಕುಟುಂಬಗಳು ಸಮಯ ವ್ಯರ್ಥಮಾಡುವುದನ್ನು ಸುರಂಗವು ತಪ್ಪಿಸುತ್ತದೆ ಎಂದು ಪ್ರಧಾನಿ ಹೇಳಿದರು.
ಪ್ರವಾಸೋದ್ಯಮ ಮತ್ತು ಉದ್ಯೋಗಾವಕಾಶಗಳಿಗೆ ಉತ್ತೇಜನ
ಈ ಪ್ರದೇಶದಲ್ಲಿರುವ ಅದ್ಭುತವಾದ ಪ್ರವಾಸೋದ್ಯಮ ಸಾಮರ್ಥ್ಯದ ಬಗ್ಗೆ ಪ್ರಧಾನಿ ಮಾತನಾಡಿದರು. ದೇವ ದರ್ಶನ ಮತ್ತು ಬುದ್ಧ ದರ್ಶನಗಳ ಸಂಗಮವಾಗಿ ಲಾಹೌಲ್-ಸ್ಪಿತಿಗೆ ಈಗ ಹೊಸ ಆಯಾಮವನ್ನು ನೀಡಲಾಗುವುದು ಎಂದು ಅವರು ಹೇಳಿದರು. ಸ್ಪಿತಿ ಕಣಿವೆಯಲ್ಲಿರುವ ತಾಬೊ ಬೌದ್ದ ವಿಹಾರವನ್ನು ತಲುಪಲು ಪ್ರಪಂಚದಾದ್ಯಂತದ ಜನರಿಗೆ ಈಗ ಸುಲಭವಾಗುತ್ತದೆ. ಇಡೀ ಪ್ರದೇಶವು ಪೂರ್ವ ಏಷ್ಯಾ ಮತ್ತು ವಿಶ್ವದ ಇತರ ದೇಶಗಳ ಬೌದ್ಧರಿಗೆ ಒಂದು ದೊಡ್ಡ ಕೇಂದ್ರವಾಗಲಿದೆ. ಪ್ರವಾಸೋದ್ಯಮದ ಅಭಿವೃದ್ಧಿಯಿಂದ ಯುವಕರಿಗೆ ಹಲವಾರು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ ಎಂದು ಅವರು ತಿಳಿಸಿದರು.
ಕಟ್ಟಕಡೆಯ ವ್ಯಕ್ತಿಗೂ ಪ್ರಯೋಜನ
ಅಭಿವೃದ್ಧಿಯ ಪ್ರಯೋಜನಗಳನ್ನು ಪ್ರತಿಯೊಬ್ಬ ನಾಗರಿಕರಿಗೂ ತಲುಪಿಸುವ ಸರ್ಕಾರದ ಬದ್ಧತೆಯನ್ನು ಅಟಲ್ ಸುರಂಗವು ಸಂಕೇತಿಸುತ್ತದೆ ಎಂದು ಪ್ರಧಾನಿ ಒತ್ತಿಹೇಳಿದರು. ಕೆಲವರ ರಾಜಕೀಯ ಸ್ವಾರ್ಥದಿಂದಾಗಿ ಈ ಹಿಂದೆ ಲಾಹೌಲ್-ಸ್ಪಿತಿ ಮತ್ತು ಇತರ ಹಲವಾರು ಪ್ರದೇಶಗಳು ತಮ್ಮನ್ನು ತಾವೇ ರಕ್ಷಿಸಿಕೊಳ್ಳಬೇಕಾಗಿದ್ದ ಪರಿಸ್ಥಿತಿ ಇತ್ತು ಎಂದು ಅವರು ಹೇಳಿದರು. ಆದರೆ, ದೇಶವು ಈಗ ಹೊಸ ಸಿದ್ಧಾಂತದೊಂದಿಗೆ ಕಾರ್ಯನಿರ್ವಹಿಸುತ್ತಿದೆ ಮತ್ತು ಈಗ ನೀತಿಗಳನ್ನು ಮತಗಳ ಸಂಖ್ಯೆಯ ಆಧಾರದ ಮೇಲೆ ರೂಪಿಸಲಾಗುವುದಿಲ್ಲ, ಬದಲಿಗೆ ಯಾವುದೇ ಭಾರತೀಯನೂ ಹಿಂದುಳಿಯದಂತೆ ಖಚಿತಪಡಿಸಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ಈ ಬದಲಾವಣೆಗೆ ಲಾಹೌಲ್-ಸ್ಪಿತಿ ಒಂದು ದೊಡ್ಡ ಉದಾಹರಣೆಯಾಗಿದೆ. ಇದು ಪ್ರತಿ ಮನೆಗೂ ನಲ್ಲಿ ನೀರು ವ್ಯವಸ್ಥೆಯನ್ನು ಖಾತರಿಪಡಿಸಿದ ಜಿಲ್ಲೆಗಳಲ್ಲಿ ಒಂದಾಗಿದೆ ಎಂದು ಪ್ರಧಾನಿ ತಿಳಿಸಿದರು.
ದಲಿತರು, ಬುಡಕಟ್ಟು ಜನರು, ಸಂತ್ರಸ್ತರು ಮತ್ತು ವಂಚಿತರಿಗೆ ಅಗತ್ಯವಿರುವ ಎಲ್ಲ ಮೂಲಭೂತ ಸೌಲಭ್ಯಗಳು ಲಭ್ಯವಾಗುವಂತೆ ಮಾಡುವ ಸರ್ಕಾರದ ಬದ್ಧತೆಯನ್ನು ಪ್ರಧಾನಿ ಪುನರುಚ್ಚರಿಸಿದರು. ಗ್ರಾಮೀಣ ವಿದ್ಯುದ್ದೀಕರಣ, ಎಲ್ಪಿಜಿ ಅನಿಲ ಸಂಪರ್ಕ, ಶೌಚಾಲಯಗಳ ನಿರ್ಮಾಣ, ಆಯುಷ್ಮಾನ್ ಭಾರತದ ಯೋಜನೆಯ ಮೂಲಕ ಚಿಕಿತ್ಸಾ ಸೌಲಭ್ಯಗಳು ಮುಂತಾದ ಸರ್ಕಾರದ ಕೆಲಸಗಳನ್ನು ಅವರು ಪಟ್ಟಿ ಮಾಡಿದರು.
ಕೊರೊನಾ ವೈರಾಣು ಬಗ್ಗೆ ಜಾಗರೂಕರಾಗಿರುವಂತೆ ಪ್ರಧಾನಿ ಜನರಿಗೆ ಮನವಿ ಮಾಡಿದರು.
***
(Release ID: 1661703)
Visitor Counter : 238
Read this release in:
English
,
Urdu
,
Marathi
,
Hindi
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam