ಪ್ರಧಾನ ಮಂತ್ರಿಯವರ ಕಛೇರಿ
ಸೋಲಂಗ್ ನಲ್ಲಿ ಅಭಿನಂದನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
ಹಮೀರ್ ಪುರದಲ್ಲಿ 66 ಮೆಗಾವ್ಯಾಟ್ ಸಾಮರ್ಥ್ಯದ ಧೌಲಾಸಿದ್ ಜಲ ವಿದ್ಯುತ್ ಘಟಕದ ಪ್ರಕಟಣೆ
Posted On:
03 OCT 2020 5:41PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಿಮಾಚಲಪ್ರದೇಶದ ಸೋಲಂಗ್ ನಲ್ಲಿ ಅಭಿನಂದನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದಕ್ಕೂ ಮುನ್ನ ಅವರು, ರೋಹ್ಟಂಗ್ ನಲ್ಲಿ ವಿಶ್ವದ ಅತಿ ಉದ್ದನೆಯ ಅಟಲ್ ಸುರಂಗ ಮಾರ್ಗವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು ಹಿಮಾಚಲಪ್ರದೇಶದ ಸಿಸ್ಸುವಿನಲ್ಲಿ ಅಭಾರ್ ಸಮರೋಹ್ ನಲ್ಲಿ ಪಾಲ್ಗೊಂಡಿದ್ದರು.
ಸುರಂಗ ಮಾರ್ಗದ ಪರಿಣಾಮದ ಪರಿವರ್ತನೆಗಳು
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ, ಅವರು ಅಟಲ್ ಜಿ ಅವರು ಮನಾಲಿ ಮೇಲೆ ಅತಿ ಹೆಚ್ಚಿನ ಪ್ರೀತಿ ಹೊಂದಿದ್ದರು ಮತ್ತು ಅವರು ಈ ಪ್ರದೇಶದಲ್ಲಿ ಮೂಲಸೌಕರ್ಯ, ಸಂಪರ್ಕ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ಸುಧಾರಣೆಗಳನ್ನು ತರಲು ಬಯಸಿದ್ದರು ಮತ್ತು ಅದೇ ಕಾರಣಕ್ಕೆ ಸುರಂಗ ನಿರ್ಮಾಣ ಮಾಡುವ ನಿರ್ಧಾರವನ್ನು ಕೈಗೊಂಡರು ಎಂದರು.
ಅಟಲ್ ಸುರಂಗ ಮಾರ್ಗ ಹಿಮಾಚಲ ಪ್ರದೇಶ, ಲೇಹ್, ಲಡಾಖ್ ಮತ್ತು ಜಮ್ಮು ಹಾಗೂ ಕಾಶ್ಮೀರದ ಜನರ ಜೀವನದಲ್ಲಿ ಮಹತ್ವದ ಬದಲಾವಣೆಗಳನ್ನು ತರಲಿದೆ ಎಂದು ಶ್ರೀ ಮೋದಿ ಹೇಳಿದರು. ಸುರಂಗ ಮಾರ್ಗ ಸಾಮಾನ್ಯ ಜನರ ಹೊರೆಯನ್ನು ಗಣನೀಯವಾಗಿ ತಗ್ಗಿಸಿದೆ ಎಂದ ಅವರು, ಲೋಹಲ್ ಮತ್ತು ಸ್ಪೀತಿ ನಡುವೆ ವರ್ಷವಿಡೀ ಸುಲಭ ಸಂಪರ್ಕವನ್ನು ಒದಗಿಸಲಿದೆ. ಈ ಸುರಂಗ ಮಾರ್ಗ ಪ್ರಾದೇಶಿಕ ಆರ್ಥಿಕತೆ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲಿದೆ ಎಂದು ಹೇಳಿದರು.
ಕುಲು-ಮನಾಲಿಯ ಸಿದ್ಧು ತುಪ್ಪದ ಉಪಹಾರವನ್ನು ಪ್ರವಾಸಿಗರು ಸೇವನೆ ಮಾಡುವ ದಿನಗಳು ದೂರವಿಲ್ಲ ಮತ್ತು ಪ್ರವಾಸಿಗರು ಲಾಹೊಲ್ ಗೆ ತೆರಳಬಹುದು ಮತ್ತು “ದೋ ಮಾರ್ ‘ ಮತ್ತು “ಚಿಲ್ಡೆ’ಯಲ್ಲಿ ಭೋಜನವನ್ನು ಸವಿಯಬಹುದು ಎಂದು ಅವರು ಹೇಳಿದರು.
ಹಮೀರ್ ಪುರದಲ್ಲಿ ಧೌಲಾಸಿದ್ ಜಲ ವಿದ್ಯುತ್ ಯೋಜನೆ
ಪ್ರಧಾನಮಂತ್ರಿ ಅವರು ಹಮೀರ್ ಪುರದಲ್ಲಿ 66 ಮೆಗಾವ್ಯಾಟ್ ಸಾಮರ್ಥ್ಯದ ಧೌಲಾಸಿದ್ ಜಲವಿದ್ಯುತ್ ಯೋಜನೆ ನಿರ್ಮಾಣ ಮಾಡುವುದಾಗಿ ಪ್ರಕಟಿಸಿದರು. ಇದರಿಂದಾಗಿ ಕೇವಲ ವಿದ್ಯುತ್ ಲಭ್ಯವಾಗುವುದು ಮಾತ್ರವಲ್ಲದೆ, ಈ ಭಾಗದ ಯುವಕರಿಗೆ ಹಲವು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ ಎಂದರು.
ದೇಶಾದ್ಯಂತ ಆಧುನಿಕ ಮೂಲಸೌಕರ್ಯವೃದ್ಧಿ ನಿರ್ಮಾಣದಲ್ಲಿ ವಿಶೇಷವಾಗಿ ಗ್ರಾಮೀಣ ರಸ್ತೆಗಳು, ಹೆದ್ದಾರಿ, ವಿದ್ಯುತ್ ಯೋಜನೆಗಳು, ರೈಲು ಸಂಪರ್ಕ ಮತ್ತು ವಾಯುಸಂಪರ್ಕ ಯೋಜನೆಗಳ ನಿರ್ಮಾಣದಲ್ಲಿ ಸರ್ಕಾರದ ಪ್ರಯತ್ನಗಳಲ್ಲಿ ಹಿಮಾಚಲಪ್ರದೇಶ ಕೂಡ ಅತ್ಯಂತ ಪ್ರಮುಖ ಪಾಲುದಾರವಾಗಿದೆ ಎಂದು ಅವರು ಹೇಳಿದರು.
ಹಿಮಾಚಲಪ್ರದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿ
ಕಿರತ್ಪುರ್-ಕುಲು-ಮನಾಲಿ ರಸ್ತೆ ಕಾರಿಡಾರ್, ಝಿರಾಕ್ಪುರ್-ಪರ್ವಾನೊ-ಸೊಲನ್-ಕೈಥಲಿಘಾಟ್ ರಸ್ತೆ ಕಾರಿಡಾರ್, ನಾನ್ಗಲ್ ಧಾಮ್-ತಲ್ವಾರ ರೈಲು ಮಾರ್ಗ, ಭಾನುಪಲಿ-ಬಿಲಾಸ್ಪುರ್ ರೈಲು ಮಾರ್ಗದ ಕಾಮಗಾರಿಗಳು ಅತ್ಯಂತ ವೇಗವಾಗಿ ನಡೆಯುತ್ತಿವೆ ಮತ್ತು ಈ ಯೋಜನೆಗಳನ್ನು ಆದಷ್ಟು ಬೇಗ ಪೂರ್ಣಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ ಮತ್ತು ಅವು ಹಿಮಾಚಲಪ್ರದೇಶದ ಜನರಿಗೆ ಸೇವೆಯನ್ನು ಒದಗಿಸಲಿದೆ ಎಂದು ಪ್ರಧಾನಮಂತ್ರಿ ಹೇಳಿದರು.
ಮೂಲಸೌಕರ್ಯಗಳಾದ ರಸ್ತೆ, ರೈಲು ಮತ್ತು ವಿದ್ಯುತ್ ಗಳ ಜೊತೆಗೆ ಮೊಬೈಲ್ ಮತ್ತು ಅಂತರ್ಜಾಲ ಸಂಪರ್ಕ ಕೂಡ ಜನರು ಆರಾಮಾಗಿ ಜೀವನ ನಡೆಸಲು ಅತ್ಯಂತ ಅತ್ಯಗತ್ಯವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.
ದೇಶದ ಆರು ಲಕ್ಷ ಗ್ರಾಮಗಳಿಗೆ ಆಪ್ಟಿಕಲ್ ಫೈಬರ್ ಸಂಪರ್ಕ ಒದಗಿಸುವ ಸರ್ಕಾರದ ಕಾರ್ಯಕ್ರಮವನ್ನು ಪ್ರಧಾನಮಂತ್ರಿ ಉಲ್ಲೇಖಿಸಿದರು. ಆಗಸ್ಟ್ 15ರಿಂದ ಆರಂಭವಾಗಿರುವ ಈ ಅಭಿಯಾನ ಒಂದು ಸಾವಿರ ದಿನಗಳಲ್ಲಿ ಪೂರ್ಣಗೊಳ್ಳಲಿದೆ.
ಈ ಯೋಜನೆಯಡಿ ಗ್ರಾಮಗಳಲ್ಲಿ ವೈ-ಫೈ ಹಾಟ್ ಸ್ಪಾಟ್ ಗಳನ್ನು ಸ್ಥಾಪಿಸಲಾಗುವುದು ಮತ್ತು ಮನೆಗಳಿಗೆ ಅಂತರ್ಜಾಲ ಸಂಪರ್ಕವನ್ನು ಒದಗಿಸಲಾಗುವುದು ಎಂದು ಪ್ರಧಾನಿ ಹೇಳಿದರು. ಇದರಿಂದ ಹಿಮಾಚಲಪ್ರದೇಶದ ಮಕ್ಕಳಿಗೆ ಶಿಕ್ಷಣ, ವೈದ್ಯಕೀಯ ಮತ್ತು ಪ್ರವಾಸೋದ್ಯಮ ಸೇರಿದಂತೆ ಎಲ್ಲ ರೀತಿಯಲ್ಲೂ ಅನುಕೂಲವಾಗಲಿದೆ ಎಂದು ಅವರು ಹೇಳಿದರು.
ಜನರ ಜೀವನ ಸುಗಮಗೊಳಿಸುವ ನಿಟ್ಟಿನಲ್ಲಿ ಸರ್ಕಾರ ನಿರಂತರ ಪ್ರಯತ್ನಗಳನ್ನು ನಡೆಸುತ್ತಿದೆ ಎಂದ ಅವರು, ಜನರು ತಮ್ಮ ಹಕ್ಕುಗಳಿಂದಾಗಿ ಪೂರ್ಣ ಲಾಭವನ್ನು ಪಡೆದುಕೊಳ್ಳುವಂತೆ ನೋಡಿಕೊಳ್ಳಲಾಗುವುದು ಎಂದರು. ವೇತನ, ಪಿಂಚಣಿ, ಬ್ಯಾಂಕಿಂಗ್ ಸೇವೆಗಳು, ವಿದ್ಯುತ್ ಮತ್ತು ದೂರವಾಣಿ ಬಿಲ್ ಪಾವತಿ ಸೇರಿ ಬಹುತೇಕ ಎಲ್ಲ ಸರ್ಕಾರಿ ಸೇವೆಗಳು ಡಿಜಿಟಲೀಕರಣಗೊಂಡಿವೆ. ಇಂತಹ ಹಲವು ಸುಧಾರಣೆಗಳು ಸಮಯ ಹಾಗೂ ಹಣವನ್ನು ಉಳಿತಾಯ ಮಾಡುವ ಜೊತೆಗೆ ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದನ್ನು ಕೊನೆಗಾಣಿಸುತ್ತದೆ ಎಂದರು.
ಕೊರೊನಾ ಸಮಯದಲ್ಲೂ ಹಿಮಾಚಲಪ್ರದೇಶದ ಸಹ ಸುಮಾರು 5 ಲಕ್ಷಕ್ಕೂ ಅಧಿಕ ಪಿಂಚಣಿದಾರರು ಹಾಗೂ ಆರು ಲಕ್ಷ ಫಲಾನುಭವಿಗಳು ತಮ್ಮ ಜನ-ಧನ್ ಬ್ಯಾಂಕ್ ಖಾತೆಯಲ್ಲಿ ನೂರಾರು ಕೋಟಿ ರೂಪಾಯಿಗಳನ್ನು ಠೇವಣಿ ಇಟ್ಟಿದ್ದಾರೆ ಎಂದು ಅವರು ಹೇಳಿದರು.
ಕೃಷಿ ವಲಯದಲ್ಲಿ ಸುಧಾರಣೆಗಳು
ಇತ್ತೀಚಿನ ಕೃಷಿ ಸುಧಾರಣೆಗಳ ವಿರೋಧಿಸುತ್ತಿರುವವರನ್ನು ಟೀಕಿಸಿದ ಪ್ರಧಾನಮಂತ್ರಿ ಅವರು, ಈ ಸುಧಾರಣೆಗಳಿಂದ ಸದಾ ತಮ್ಮ ರಾಜಕೀಯ ಹಿತಾಸಕ್ತಿಗಾಗಿ ದುಡಿಯುತ್ತಿರುವವರಿಗೆ ತೊಂದರೆಯಾಗಿದೆ. ಅವರು ಸೃಷ್ಟಿಸಿದ ಮಧ್ಯವರ್ತಿಗಳು ಅಥವಾ ಬ್ರೋಕರ್ ಗಳ ವ್ಯವಸ್ಥೆಗೆ ತೊಂದರೆಯಾಗುತ್ತಿದೆ ಎಂಬುದು ಅವರನ್ನು ಅಸಮಾಧಾನಗೊಳಿಸಿದೆ ಎಂದರು.
ಕುಲು, ಶಿಮ್ಲಾ ಅಥವಾ ಕಿನ್ನೌರ್ ನ ಸೇಬುಗಳನ್ನು ರೈತರಿಗೆ ಪ್ರತಿ ಕೆಜಿಗೆ 40 ರಿಂದ 50 ರೂ. ಕೊಟ್ಟು ತರಲಾಗುವುದು ಮತ್ತು ಅದೇ ಸೇಬುಗಳನ್ನು ಗ್ರಾಹಕರಿಗೆ 100 ರಿಂದ 150 ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಪ್ರಧಾನಮಂತ್ರಿ ಬಣ್ಣಿಸಿದರು. ಇದರಿಂದ ರೈತರಿಗೂ ಮತ್ತು ಖರೀದಿಸುವ ಗ್ರಾಹಕರು ಇಬ್ಬರಿಗೂ ಲಾಭವಾಗುತ್ತಿರಲಿಲ್ಲ. ಇದಲ್ಲದೆ, ಸೇಬಿನ ಬೆಳೆ ತುಂಬಾ ಹೆಚ್ಚಿದ್ದಾಗ ಅವುಗಳ ಬೆಲೆ ಗಣನೀಯವಾಗಿ ಇಳಿಕೆಯಾಗುತ್ತದೆ. ರೈತರಿಗೆ ತೀವ್ರ ತೊಂದರೆಯಾಗುತ್ತದೆ ಎಂದರು. ಕೃಷಿ ವಲಯಕ್ಕೆ ಸಂಬಂಧಿಸಿದಂತೆ ಅಭಿವೃದ್ಧಿಗಾಗಿ ಹಲವು ಕಾನೂನುಗಳನ್ನು ಜಾರಿಗೊಳಿಸಿದ್ದು, ಅವುಗಳಿಂದ ಐತಿಹಾಸಿಕ ಸುಧಾರಣೆಗಳನ್ನು ಕೈಗೊಳ್ಳಲಾಗುತ್ತಿದೆ. ಇದೀಗ ಸಣ್ಣ ರೈತರೂ ಸಹ ಅತ್ಯಂತ ಮುಕ್ತವಾಗಿ ತಮ್ಮ ಸಂಘಟನೆಗಳನ್ನು ಕಟ್ಟಿಕೊಳ್ಳಬಹುದು ಮತ್ತು ದೇಶದಲ್ಲಿ ಯಾವುದೇ ಮೂಲೆಯಲ್ಲಿ ಬೇಕಾದರೂ ಅವರು ತಮ್ಮ ಸೇಬುಗಳನ್ನು ಮಾರಾಟ ಮಾಡಬಹುದು ಎಂದರು.
ಪಿಎಂ ಕಿಸಾನ್ ಸಮ್ಮಾನ್ ನಿಧಿ
ರೈತರ ಆದಾಯವೃದ್ಧಿಗೆ ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಕಿಸಾನ್ ಸಮ್ಮಾನ್ ನಿಧಿಯಡಿ ಈವರೆಗೆ ದೇಶಾದ್ಯಂತ ಸುಮಾರು 10.25 ಕೋಟಿ ರೈತ ಕುಟುಂಬಗಳಿಗೆ ಸುಮಾರು ಒಂದು ಲಕ್ಷ ಕೋಟಿ ರೂ.ಗಳ ನೆರವನ್ನು ಠೇವಣಿ ರೂಪದಲ್ಲಿ ನೀಡಲಾಗಿದೆ. ಇದರಲ್ಲಿ ಹಿಮಾಚಲಪ್ರದೇಶದ 9 ಲಕ್ಷ ಕುಟುಂಬಗಳು ಸಹ ಸೇರಿದ್ದು, ಅವುಗಳಿಗೆ ಒಂದು ಸಾವಿರ ಕೋಟಿ ರೂ. ಪಾವತಿಯಾಗಿದೆ.
ದೇಶದಲ್ಲಿ ಇತ್ತೀಚಿನವರೆಗೆ ಹಲವು ವಲಯಗಳಲ್ಲಿ ಮಹಿಳೆಯರಿಗೆ ದುಡಿಯಲು ಅವಕಾಶಗಳನ್ನು ನೀಡುತ್ತಿರಲಿಲ್ಲ. ಆದರೆ ಇತ್ತೀಚೆಗೆ ಜಾರಿಗೊಳಿಸಿದ ಕಾರ್ಮಿಕ ಸುಧಾರಣೆಗಳಿಂದ ಅದಕ್ಕೆಲ್ಲ ಕಡಿವಾಣ ಬಿದ್ದಿದ್ದು, ಆ ಪದ್ಧತಿಗಳನ್ನು ದೂರ ಮಾಡಲಾಗಿದೆ. ಇದೀಗ ಮಹಿಳೆಯರಿಗೆ ಪುರುಷರಂತೆ ಸರಿಸಮನಾಗಿ ದುಡಿಯುವ ಮತ್ತು ಸಮಾನವೇತನ ಪಡೆಯುವ ಹಕ್ಕು ನೀಡಲಾಗಿದೆ ಎಂದರು.
ದೇಶದ ಪ್ರತಿಯೊಬ್ಬ ಪ್ರಜೆಯ ವಿಶ್ವಾಸವನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಮತ್ತು ಸ್ವಾವಲಂಬಿ ಭಾರತ ನಿರ್ಮಾಣಕ್ಕಾಗಿ ಸುಧಾರಣಾ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಪ್ರಧಾನಮಂತ್ರಿ ಹೇಳಿದರು.
ಹಿಮಾಚಲಪ್ರದೇಶದ ಮತ್ತು ದೇಶದ ಪ್ರತಿಯೊಬ್ಬ ಯುವಕರ ಆಶೋತ್ತರಗಳು ಮತ್ತು ಕನಸುಗಳನ್ನು ನನಸು ಮಾಡುವುದೇ ಅಗ್ರ ಆದ್ಯತೆಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.
***
(Release ID: 1661445)
Visitor Counter : 262
Read this release in:
English
,
Urdu
,
Marathi
,
Hindi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam