ಪ್ರಧಾನ ಮಂತ್ರಿಯವರ ಕಛೇರಿ

ಭಾರತ- ಡೆನ್ಮಾರ್ಕ್ ವರ್ಚುವಲ್ ದ್ವಿಪಕ್ಷೀಯ ಶೃಂಗಸಭೆಯಲ್ಲಿ ಪ್ರಧಾನಮಂತ್ರಿಯವರ ಪ್ರಾಸ್ತಾವಿಕ ಹೇಳಿಕೆ

Posted On: 28 SEP 2020 5:25PM by PIB Bengaluru

ನಮಸ್ಕಾರ, ಘನತೆವೆತ್ತರೇ!

ವರ್ಚುವಲ್ ಶೃಂಗದ ಮೂಲಕ ತಮ್ಮೊಂದಿಗೆ ಮಾತನಾಡಲು ನಾನು ಹರ್ಷಿಸುತ್ತೇನೆ. ಮೊದಲನೆಯದಾಗಿ ನಾನು ಕೋವಿಡ್ 19 ಹಿನ್ನೆಲೆಯಲ್ಲಿ ಡೆನ್ಮಾರ್ಕ್ ಅನುಭವಿಸಿರುವ ಹಾನಿಗೆ ನಾನು ಸಾಂತ್ವನ ವ್ಯಕ್ತಪಡಿಸುತ್ತೇನೆ. ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ನಿಮ್ಮ ಕೌಶಲ್ಯಪೂರ್ಣ ನಾಯಕತ್ವಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ.

ನಿಮ್ಮೆಲ್ಲಾ ಕಾರ್ಯಭಾರಗಳ ನಡುವೆ ನೀವು ಮಾತುಕತೆಗೆ ಸಮಯ ಮಾಡಿಕೊಂಡಿದ್ದೀರಿ, ಇದು ನಮ್ಮ ಪರಸ್ಪರ ಬಾಂಧವ್ಯದ ನಿಟ್ಟಿನಲ್ಲಿ ನಿಮಗೆ ಇರುವ ವಿಶೇಷ ಗಮನ ಮತ್ತು ಬದ್ಧತೆಯನ್ನು ತೋರಿಸುತ್ತದೆ.

ನೀವು ಇತ್ತೀಚೆಗಷ್ಟೇ ವಿವಾಹವಾಗಿದ್ದೀರಿ. ನಾನು ನನ್ನ ಅಭಿನಂದನೆಗಳನ್ನು ಮತ್ತು ಶುಭಾಶಯಗಳನ್ನು ಸಲ್ಲಿಸುತ್ತೇನೆ. ಕೋವಿಡ್ -19 ಪರಿಸ್ಥಿತಿ ಸುಧಾರಿಸಿದ ತರುವಾಯ ನಿಮ್ಮನ್ನು ಕುಟುಂಬ ಸಮೇತ ಭಾರತದಲ್ಲಿ ಸ್ವಾಗತಿಸುವ ಅವಕಾಶ ಶೀಘ್ರ ನಮಗೆ ಸಿಗಲಿ. ನಿಮ್ಮ ಪುತ್ರಿ ಇದಾ ಮತ್ತೊಮ್ಮೆ ಭಾರತಕ್ಕೆ ಭೇಟಿ ನೀಡಲು ಕಾತುರದಿಂದ ಇರುತ್ತಾರೆ.

ಕೆಲವು ತಿಂಗಳುಗಳ ಹಿಂದೆ ನಾವು ದೂರವಾಣಿಯ ಮೂಲಕ ತುಂಬಾ ಫಲಪ್ರದವಾದ ಮಾತುಕತೆ ನಡೆಸಿದ್ದೆವು. ನಾವು ಭಾರತ ಮತ್ತು ಡೆನ್ಮಾರ್ಕ್ ನಡುವೆ ಹಲವು ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಿದ್ದೆವು.

ನಾವು ಇಂದು ವರ್ಚುವಲ್ ಶೃಂಗಸಭೆಯ ಮೂಲಕ ಅವುಗಳಿಗೆ ಹೊಸ ದಿಕ್ಕು ಮತ್ತು ಗತಿ ನೀಡುತ್ತಿರುವುದು ಸಂತೋಷದ ವಿಚಾರವಾಗಿದೆ. ಡೆನ್ಮಾರ್ಕ್ ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ನಡೆಸುತ್ತಿದ್ದ ವೈಬ್ರೆಂಟ್ ಗುಜರಾತ್ ನಲ್ಲಿ 2009ರಿಂದ ಪಾಲ್ಗೊಳ್ಳುತ್ತಿವೆ, ಹೀಗಾಗಿ ನನಗೆ ಡೆನ್ಮಾರ್ಕ್ ನೊಂದಿಗೆ ವಿಶೇಷ ಬಾಂಧವ್ಯವಿದೆ. ಎರಡನೇ ಭಾರತ- ನಾರ್ಡಿಕ್ ಶೃಂಗಸಭೆಯ ತಮ್ಮ ಪ್ರಸ್ತಾಪಕ್ಕೆ ನಾನು ಆಭಾರಿಯಾಗಿದ್ದೇನೆ. ಪರಿಸ್ಥಿತಿ ಸುಧಾರಣೆಯಾದ ತರುವಾಯ ನಾನು ಡೆನ್ಮಾರ್ಕ್ ಗೆ ಆಗಮಿಸಿ ತಮ್ಮನ್ನು ಭೇಟಿ ಮಾಡುವುದು ನನ್ನ ಭಾಗ್ಯ ಎಂದು ಭಾವಿಸುತ್ತೇನೆ.

ಘನತೆವೆತ್ತರೇ,

ಕಳೆದ ಕೆಲವು ತಿಂಗಳುಗಳಲ್ಲಿ ನಡೆದ ಘಟನೆಗಳು ನಿಯಮಾಧಾರಿತವಾಗಿ, ಪಾರದರ್ಶಕವಾಗಿ, ಮಾನವೀಯತೆಯಿಂದ ಮತ್ತು ಪ್ರಜಾಪ್ರಭುತ್ವ ಮೌಲ್ಯ ವ್ಯವಸ್ಥೆಯನ್ನು ಹಂಚಿಕೊಂಡಿರುವ ನಮ್ಮಂಥ ಸಮಾನ ಮನಸ್ಕ ದೇಶಗಳು ಒಗ್ಗೂಡಿ ಶ್ರಮಿಸಬೇಕಾದ ಮಹತ್ವವನ್ನು ಸ್ಪಷ್ಟಪಡಿಸಿವೆ,

ಸಮಾನ ಮನಸ್ಕ ರಾಷ್ಟ್ರಗಳ ನಡುವೆ ಲಸಿಕೆ ಅಭಿವೃದ್ಧಿ ಸಹಕಾರವೂ ಸಾಂಕ್ರಾಮಿಕ ನಿಭಾಯಿಸಲು ನೆರವಾಗಲಿದೆ. ಮಹಾಮಾರಿಯ ವೇಳೆ, ಭಾರತದ ಔಷಧ ಉತ್ಪಾದನಾ ಸಾಮರ್ಥ್ಯ ಇಡೀ ದೇಶಕ್ಕೆ ಉಪಯುಕ್ತವಾಗಿತ್ತು. ನಾವು ಲಸಿಕೆ ಕ್ಷೇತ್ರದಲ್ಲೂ ಅದನ್ನೇ ಮಾಡಲಿದ್ದೇವೆ.

ಇದು ಪ್ರಮುಖ ಆರ್ಥಿಕ ಕ್ಷೇತ್ರದಲ್ಲಿ ಭಾರತದ ಸಾಮರ್ಥ್ಯ ಹೆಚ್ಚಿಸುವ ಮತ್ತು ವಿಶ್ವಕ್ಕೆ ಸೇವೆ ಸಲ್ಲಿಸುವ ನಮ್ಮ ಆತ್ಮನಿರ್ಭರ ಭಾರತ (ಸ್ವಾವಲಂಬಿ ಭಾರತ) ಅಭಿಯಾನದ ಪ್ರಯತ್ನವೂ ಆಗಿದೆ.

ಅಭಿಯಾನದ ಅಡಿಯಲ್ಲಿ ನಾವು ಸರ್ವಾಂಗೀಣ ಸುಧಾರಣೆಗೆ ಒತ್ತು ನೀಡಿದ್ದೇವೆ. ಭಾರತದಲ್ಲಿ ಕಂಪನಿ ನಡೆಸುವವರಿಗೆ ನಿಯಂತ್ರಣ ಮತ್ತು ತೆರಿಗೆ ಸುಧಾರಣೆಗಳಿಂದ ಪ್ರಯೋಜನವಾಗಲಿದೆ. ಇತರ ಕ್ಷೇತ್ರಗಳಲ್ಲಿ ಕೂಡ ಸುಧಾರಣೆ ಪ್ರಕ್ರಿಯೆಗಳು ಮುಂದುವರಿದಿವೆ. ಇತ್ತೀಚೆಗೆ ಕೃಷಿ ಮತ್ತು ಕಾರ್ಮಿಕ ವಲಯದಲ್ಲಿ ಗಣನೀಯ ಸುಧಾರಣೆ ಮಾಡಲಾಗಿದೆ.

ಘನತೆವೆತ್ತರೇ,

ಕೋವಿಡ್ -19 ಜಾಗತಿಕ ಪೂರೈಕೆ ಸರಪಣಿಯಲ್ಲಿ ಒಂದೇ ಮೂಲದ ಮೇಲೆ ತುಂಬಾ ಅವಲಂಬಿತವಾಗುವುದು ಎಷ್ಟು ಅಪಾಯಕಾರಿ ಎಂಬುದನ್ನು ತೋರಿಸಿದೆ.

ಪೂರೈಕೆ ಸರಪಣಿಯ ವೈವೀಧ್ಯೀಕರಣ ಮತ್ತು ಸ್ಥಿತಿ ಸ್ಥಾಪಕತೆಗಾಗಿ ನಾವು ಜಪಾನ್ ಮತ್ತು ಆಸ್ಟ್ರೇಲಿಯಾದೊಂದಿಗೆ ಒಗ್ಗೂಡಿ ಶ್ರಮಿಸುತ್ತಿದ್ದೇವೆ. ಇತರ ಸಮಾನ ಮನಸ್ಕ ದೇಶಗಳೂ ಕೂಡ ಪ್ರಯತ್ನದಲ್ಲಿ ಸೇರಬಹುದಾಗಿದೆ.

ನಿಟ್ಟಿನಲ್ಲಿ, ನಮ್ಮ ವರ್ಚುವಲ್ ಶೃಂಗಸಭೆ ಭಾರತ- ಡೆನ್ಮಾರ್ಕ್ ಬಾಂಧವ್ಯಕ್ಕೆ ಉಪಯುಕ್ತವೆಂಬುದನ್ನು ಸಾಬೀತು ಪಡಿಸುವುದಷ್ಟೇ ಅಲ್ಲದೆ ಜಾಗತಿಕ ಸವಾಲುಗಳ ನಿಟ್ಟಿನಲ್ಲಿ ಸಮಾನ ದೃಷ್ಟಿಕೋನ ನಿರ್ಮಾಣಕ್ಕೂ ನೆರವಾಗಲಿದೆ.

ಮತ್ತೊಮ್ಮೆ, ಘನತೆವೆತ್ತರೇ, ನಿಮ್ಮ ಸಮಯವನ್ನು ನೀಡಿದ್ದಕ್ಕಾಗಿ ಧನ್ಯವಾದಗಳು. ನಾನು ಈಗ ನಿಮ್ಮ ಪ್ರಾಸ್ತಾವಿಕ ಹೇಳಿಕೆಯನ್ನು ಸ್ವಾಗತಿಸಲಿಚ್ಛಿಸುತ್ತೇನೆ.

ಘೋಷಣೆ: ಇದು  ಭಾಷಾಂತರ ಮಾತ್ರ. ಮೂಲ ಹೇಳಿಕೆಯನ್ನು ಹಿಂದಿಯಲ್ಲಿ ನೀಡಲಾಗಿದೆ.

***



(Release ID: 1659961) Visitor Counter : 165