ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಿ ಅವರಿಂದ 7 ಗರಿಷ್ಟ ಗಮನ ಕೇಂದ್ರಿತ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್ ಪರಿಸ್ಥಿತಿ ಮತ್ತು ಕೋವಿಡ್ ಪ್ರತಿಕ್ರಿಯಾ ಸಿದ್ದತಾ ಸ್ಥಿತಿಯ ಪ್ರಗತಿ ಪರಿಶೀಲನೆ

Posted On: 22 SEP 2020 11:54AM by PIB Bengaluru

ಕೋವಿಡ್ ಒಂದು ದೊಡ್ಡ ಹೊರೆಯಾಗಿರುವ ಏಳು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರ ಜೊತೆ ಪ್ರಧಾನ ಮಂತ್ರಿ ಅವರು ನಾಳೆ, 2020 ರ ಸೆಪ್ಟೆಂಬರ್ 23 ರಂದು ಉನ್ನತ ಮಟ್ಟದ ವರ್ಚುವಲ್ ಸಭೆ ನಡೆಸಿ ಕೋವಿಡ್ ಪರಿಸ್ಥಿತಿ ಮತ್ತು ಕೋವಿಡ್ ಪ್ರತಿಕ್ರಿಯಾ ಹಾಗು ನಿರ್ವಹಣಾ ಸಿದ್ದತೆಗಳನ್ನು ಪರಾಮರ್ಶಿಸುವರು.

ಈ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳೆಂದರೆ ಮಹಾರಾಷ್ಟ್ರ, ಆಂಧ್ರ ಪ್ರದೇಶ, ಕರ್ನಾಟಕ, ಉತ್ತರ ಪ್ರದೇಶ, ತಮಿಳು ನಾಡು, ದಿಲ್ಲಿ ಮತ್ತು ಪಂಜಾಬ್.

ದೇಶದ 63% ನಷ್ಟು ಸಕ್ರಿಯ ಪ್ರಕರಣಗಳು ಈ ಏಳು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೇಂದ್ರೀಕೃತಗೊಂಡಿವೆ. ಒಟು ದೃಢೀಕೃತ ಪ್ರಕರಣಗಳಲ್ಲಿ 65.5 % ಪಾಲು ಈ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳದ್ದಾಗಿದೆ ಹಾಗು ಒಟ್ಟು ಸಾವಿನ ಪ್ರಕರಣಗಳಲ್ಲಿ 77% ಪಾಲು ಇವುಗಳದ್ದಾಗಿದೆ. ಇತರ ಐದು ರಾಜ್ಯಗಳ ಜೊತೆ ಪಂಜಾಬ್ ಮತ್ತು ದಿಲ್ಲಿಗಳಲ್ಲಿ  ಇತ್ತೀಚೆಗೆ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ವರದಿಯಾಗುತ್ತಿದೆ. ಮಹಾರಾಷ್ಟ್ರ, ಪಂಜಾಬ್ ಮತ್ತು ದಿಲ್ಲಿಗಳಲ್ಲಿ  ಸಾವಿನ ದರ/ಪ್ರಮಾಣ ಹೆಚ್ಚುತ್ತಿದೆ. ಇಲ್ಲಿ ಪ್ರಕರಣಗಳಲ್ಲಿ ಮೃತಪಡುವವರ ಪ್ರಮಾಣ (ಸಿ.ಎಫ್.ಆರ್.)   2.0 % ಗೂ ಅಧಿಕವಿದೆ. ಪಂಜಾಬ್ ಮತ್ತು ಉತ್ತರ ಪ್ರದೇಶ ಹೊರತುಪಡಿಸಿದರೆ ಅವುಗಳ ಪಾಸಿಟಿವ್ ಪ್ರಮಾಣವು ರಾಷ್ಟ್ರೀಯ ಸರಾಸರಿಯಾದ 8.52 % ಗಿಂತ ಹೆಚ್ಚಾಗಿದೆ.

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ನಿಕಟ ಮತ್ತು ಸಮರ್ಪಕ ಸಮನ್ವಯದೊಂದಿಗೆ ಕೇಂದ್ರವು ದೇಶದಲ್ಲಿ ಕೋವಿಡ್ ವಿರುದ್ದದ ಹೋರಾಟದ ನೇತೃತ್ವವನ್ನು ವಹಿಸಿಕೊಂಡು ಮುನ್ನಡೆಸುತ್ತಿದೆ. ಆರೋಗ್ಯ ರಕ್ಷಣಾ ವ್ಯವಸ್ಥೆ ಮತ್ತು ವೈದ್ಯಕೀಯ ಮೂಲಸೌಕರ್ಯವನ್ನು ಬಲಪಡಿಸಲು ಅವುಗಳಿಗೆ ಕೇಂದ್ರ ಸರಕಾರವು ಬೆಂಬಲವನ್ನು ನೀಡುತ್ತಿದೆ. ಐ.ಸಿ.ಯು. ಗಳನ್ನು ನಿಭಾಯಿಸುವ ವೈದ್ಯರ ಕ್ಲಿನಿಕಲ್ ನಿರ್ವಹಣಾ ಸಾಮರ್ಥ್ಯವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ದೆಹಲಿಯ ಏಮ್ಸ್ ಸಹಯೋಗದಲ್ಲಿ ಕೈಗೊಂಡ ಇ-ಐ.ಸಿ.ಯು. ಟೆಲಿ ಸಲಹಾ ವ್ಯವಸ್ಥೆಯ ಮೂಲಕ ಸಾಕಷ್ಟು ಪ್ರಮಾಣದಲ್ಲಿ ಉನ್ನತೀಕರಿಸಲಾಗಿದೆ.ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಜೊತೆಗಿನ ಉನ್ನತ ಮಟ್ಟದ ಪರಾಮರ್ಶಾ ಸಭೆಯು ಆಸ್ಪತ್ರೆಗಳಲ್ಲಿ ಮತ್ತು ಕೋವಿಡ್ ಆರೋಗ್ಯ ಕೇಂದ್ರ ಸೌಲಭ್ಯಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ವೈದ್ಯಕೀಯ ಆಮ್ಲಜನಕ ಲಭ್ಯತೆಯನ್ನು ಖಾತ್ರಿಪಡಿಸಿದೆ. ಕೇಂದ್ರವು ನಿಯಮಿತವಾಗಿ ತಂಡಗಳನ್ನು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು ಬೆಂಬಲಿಸುವುದಕ್ಕಾಗಿ ಕಳುಹಿಸುತ್ತಿದೆ. ಕಂಟೈನ್ ಮೆಂಟ್, ನಿಗಾ, ಪರೀಕ್ಷೆ ಮತ್ತು ಪಾಸಿಟಿವ್ ಪ್ರಕರಣಗಳ ದಕ್ಷ ಕ್ಲಿನಿಕಲ್ ನಿರ್ವಹಣೆಯನ್ನು ಕೈಗೊಳ್ಳುವುದಕ್ಕಾಗಿ ಈ ತಂಡಗಳನ್ನು ನಿಯೋಜಿಸಲಾಗುತ್ತಿದೆ. ಕೇಂದ್ರೀಯ ತಂಡಗಳು ಸ್ಥಳೀಯ ಅಧಿಕಾರಿಗಳಿಗೆ ಸಕಾಲದಲ್ಲಿ ರೋಗ ಪತ್ತೆ ಮಾಡುವ ಸವಾಲುಗಳಿಗೆ ಸಂಬಂಧಿಸಿ ಮಾರ್ಗದರ್ಶನ ನೀಡುವುದಲ್ಲದೆ ಅವಶ್ಯ ಅನುಸರಣಾ ಕ್ರಮಗಳ ಬಗ್ಗೆಯೂ ಮಾರ್ಗದರ್ಶನ ಮಾಡುತ್ತವೆ.     

***(Release ID: 1657730) Visitor Counter : 272