ಪ್ರಧಾನ ಮಂತ್ರಿಯವರ ಕಛೇರಿ

ಬಿಹಾರದಲ್ಲಿ 14,000 ಕೋ.ರೂ.ಗಳ ಮೊತ್ತದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಪ್ರಧಾನ ಮಂತ್ರಿ ಅವರಿಂದ ಶಿಲಾನ್ಯಾಸ


ರಾಜ್ಯದ ಎಲ್ಲಾ ಗ್ರಾಮಗಳಿಗೆ ಆಪ್ಟಿಕಲ್ ಫೈಬರ್ ಅಂತರ್ಜಾಲ ಸೇವಾ ಯೋಜನೆಗೆ ಚಾಲನೆ

ಕೃಷಿ ಕ್ಷೇತ್ರದ ಸುಧಾರಣೆಗಳು ರೈತರಿಗೆ ಉತ್ಪಾದನೆಗಳನ್ನು ದೇಶದ ಯಾವುದೇ ಭಾಗದಲ್ಲಿ ಲಾಭಯುಕ್ತ ಬೆಲೆಗೆ ಮಾರಾಟ ಮಾಡಲು ಶಕ್ತರನ್ನಾಗಿಸಲಿವೆ

ಕನಿಷ್ಠ ಬೆಂಬಲ ಬೆಲೆ ಈ ಹಿಂದಿನಂತೆ ಮುಂದುವರೆಯುತ್ತದೆ; ಸ್ಥಾಪಿತ ಹಿತಾಸಕ್ತಿಗಳು ಲಾಭದಾಯಕ ಸುಧಾರಣೆಗಳ ಬಗ್ಗೆ ರೈತರನ್ನು ದಾರಿ ತಪ್ಪಿಸುತ್ತಿವೆ

Posted On: 21 SEP 2020 3:45PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಬಿಹಾರದಲ್ಲಿ 14,000 ಕೋ.ರೂ.ಮೊತ್ತದ ಒಂಭತ್ತು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಿಲಾನ್ಯಾಸ ಮಾಡಿದರು ಮತ್ತು ರಾಜ್ಯದಲ್ಲಿ ಆಪ್ಟಿಕಲ್ ಫೈಬರ್ ಮೂಲಕ ಅಂತರ್ಜಾಲ ಸೇವೆ ಒದಗಿಸುವ ಯೋಜನೆಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ಅವರು ಈ ಹೆದ್ದಾರಿ ಯೋಜನೆಗಳು ಬಿಹಾರದಲ್ಲಿ ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸಲಿವೆ ಎಂದರು. ಹೆದ್ದಾರಿ ಯೋಜನೆಗಳು 3 ದೊಡ್ಡ ಸೇತುವೆಗಳ ನಿರ್ಮಾಣ , ಹೆದ್ದಾರಿಗಳನ್ನು ಚತುಷ್ಪಥವಾಗಿ ಮತ್ತು ಷಟ್ಪಥವಾಗಿ ಮೇಲ್ದರ್ಜೆಗೇರಿಸುವಿಕೆ ಕಾಮಗಾರಿಗಳನ್ನು ಒಳಗೊಂಡಿವೆಬಿಹಾರದ ಎಲ್ಲಾ ನದಿಗಳೂ 21 ನೇ ಶತಮಾನದ ವಿಶಿಷ್ಟತೆಗಳುಳ್ಳ ಸೇತುವೆಗಳನ್ನು ಹೊಂದಲಿವೆ ಮತ್ತು ಎಲ್ಲಾ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು ಅಗಲಗೊಳ್ಳಲಿವೆ ಹಾಗು ಅವುಗಳನ್ನು ಬಲಪಡಿಸಲಾಗುವುದು ಎಂದೂ  ಅವರು ಹೇಳಿದರು.

ಪ್ರಧಾನ ಮಂತ್ರಿ ಅವರು ಈ ದಿನವನ್ನು ಬಿಹಾರಕ್ಕೆ ಚಾರಿತ್ರಿಕ ದಿನ ಮಾತ್ರವಲ್ಲ ಇಡೀ ದೇಶಕ್ಕೇ ಚಾರಿತ್ರಿಕ ದಿನವಾಗಿದೆ, ಯಾಕೆಂದರೆ ಸರಕಾರವು ತನ್ನ ಗ್ರಾಮಗಳನ್ನು ಆತ್ಮನಿರ್ಭರ ಭಾರತದಡಿಯಲ್ಲಿ ಮುಖ್ಯವಾಹಿನಿಗೆ ತರುವ ಪ್ರಮುಖ ಕ್ರಮವನ್ನು ಅನುಷ್ಟಾನಿಸುತ್ತಿದ್ದು, ಅದು ಇಂದು ಬಿಹಾರದಿಂದ ಆರಂಭಗೊಳ್ಳುತ್ತಿದೆ ಎಂದೂ ಹೇಳಿದರು. ಈ ಯೋಜನೆ ಅಡಿಯಲ್ಲಿ 1000 ದಿನಗಳಲ್ಲಿ ಆಪ್ಟಿಕಲ್ ಫೈಬರ್ ಮೂಲಕ 6 ಲಕ್ಷ ಗ್ರಾಮಗಳಿಗೆ ಅಂತರ್ಜಾಲ ಸೌಲಭ್ಯವನ್ನು ಒದಗಿಸಲಾಗುತ್ತದೆ ಎಂದ ಅವರು ಇದರಲ್ಲಿ ಬಿಹಾರದ 45,945  ಗ್ರಾಮಗಳು ಸೇರಿವೆ ಎಂದೂ ಹೇಳಿದರು. ಕೆಲವು ವರ್ಷಗಳ ಹಿಂದೆ ಅಂತರ್ಜಾಲ ಬಳಕೆದಾರರಲ್ಲಿ ನಗರ ಪ್ರದೇಶದವರಿಗಿಂತ ಗ್ರಾಮೀಣ ಪ್ರದೇಶದವರ ಸಂಖ್ಯೆಯೇ ಅಧಿಕವಾಗಿರುವುದನ್ನು  ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿರಲಿಲ್ಲ ಎಂದರು.

ಡಿಜಿಟಲ್ ವರ್ಗಾವಣೆಯಲ್ಲಿ ಭಾರತವು ವಿಶ್ವದಲ್ಲಿ ಪ್ರಮುಖ ಸ್ಥಾನದಲ್ಲಿದೆ ಎಂದು ಹೇಳಿದ ಪ್ರಧಾನ ಮಂತ್ರಿ ಅವರು 2020 ರ ಆಗಸ್ಟ್ ತಿಂಗಳೊಂದರಲ್ಲಿಯೇ 3 ಲಕ್ಷ ಕೋ.ರೂ. ಮೌಲ್ಯದ ವರ್ಗಾವಣೆಗಳನ್ನು ಯು.ಪಿ.. ಮೂಲಕ ಮಾಡಲಾಗಿದೆ. ಅಂತರ್ಜಾಲ ಬಳಕೆ ಹೆಚ್ಚಳದಿಂದಾಗಿ , ಈಗ ದೇಶದ ಗ್ರಾಮಗಳಿಗೂ ಉತ್ತಮ ಗುಣಮಟ್ಟದ , ಹೆಚ್ಚು ವೇಗದ ಅಂತರ್ಜಾಲ ಅವಶ್ಯವಾಗಿದೆ ಎಂದವರು ನುಡಿದರು.

ಸರಕಾರದ ಪ್ರಯತ್ನಗಳ ಫಲವಾಗಿ ಆಪ್ಟಿಕಲ್ ಫೈಬರ್ ಈಗಾಗಲೇ 1.5 ಲಕ್ಷ ಗ್ರಾಮ ಪಂಚಾಯತ್ ಗಳನ್ನು ಮತ್ತು 3 ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳನ್ನು ತಲುಪಿದೆ ಎಂದವರು ಹೇಳಿದರು.

ವೇಗದ ಸಂಪರ್ಕದಿಂದಾಗುವ ಕ್ರೋಢೀಕೃತ ಪ್ರಯೋಜನಗಳನ್ನು ವಿವರಿಸಿದ ಪ್ರಧಾನ ಮಂತ್ರಿ ಅವರು ಅದು ವಿದ್ಯಾರ್ಥಿಗಳಿಗೆ ಅತ್ಯುತ್ತಮವಾದ ಓದುವ ಸಾಮಗ್ರಿಗಳನ್ನು ಒದಗಿಸುತ್ತದೆ, ಟೆಲಿ ವೈದ್ಯಕೀಯ ಸೌಲಭ್ಯವನ್ನು ನೀಡುತ್ತದೆಬೀಜಗಳು, ರಾಷ್ಟ್ರವ್ಯಾಪೀ ಮಾರುಕಟ್ಟೆಯ ನೂತನ ತಂತ್ರಜ್ಞಾನಗಳ ಬಗ್ಗೆ ರೈತರಿಗೆ ಮಾಹಿತಿ ನೀಡುತ್ತದೆ ಹಾಗು ಹವಾಮಾನದ ಬಗ್ಗೆ ತಕ್ಷಣದ ದತ್ತಾಂಶಗಳನ್ನು ಒದಗಿಸುತ್ತದೆ. ರೈತರು ತಮ್ಮ ಉತ್ಪಾದನೆಗಳನ್ನು ದೇಶಾದ್ಯಂತ ಮತ್ತು ವಿಶ್ವದ ವಿವಿಧೆಡೆಗಳಿಗೆ ಸಾಗಾಟ ಮಾಡುವುದನ್ನು  ಸುಲಭ ಸಾಧ್ಯವಾಗಿಸುತ್ತದೆ ಎಂದರು

ದೇಶದ ಗ್ರಾಮಾಂತರ ಭಾಗಗಳಲ್ಲಿ ನಗರ ಮಟ್ಟದ ಸೌಲಭ್ಯಗಳನ್ನು ಒದಗಿಸುವುದು ಸರಕಾರದ ಉದ್ದೇಶವಾಗಿದೆ ಎಂದೂ ಪ್ರಧಾನ ಮಂತ್ರಿ ಹೇಳಿದರು.

ಈ ಹಿಂದೆ ಮೂಲಸೌಕರ್ಯ ಯೋಜನೆ ಹಿಂದುಳಿದಿತ್ತು ಎಂದ ಶ್ರೀ ಮೋದಿ ಅವರು ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನ ಮಂತ್ರಿಯಾದಾಗ ಅದಕ್ಕೆ ಸೂಕ್ತ ಆದ್ಯತೆ ದೊರಕಿತು, ಅವರು ರಾಜಕೀಯಕ್ಕಿಂತ ಮೂಲಸೌಕರ್ಯಕ್ಕೆ ಹೆಚ್ಚು ಆದ್ಯತೆ ನೀಡಿದರು ಎಂದೂ ಹೇಳಿದರು.

ಈಗ ಬಹು ಮಾದರಿಯ ಸಾರಿಗೆ ಜಾಲವನ್ನು ಅಭಿವೃದ್ದಿ ಮಾಡುವ ಧೋರಣೆಯನ್ನು ಅನುಸರಿಸಲಾಗುತ್ತಿದೆ ಎಂದು ಹೇಳಿದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇದರಲ್ಲಿ ಪ್ರತೀ ಸಾರಿಗೆ ಮಾದರಿಯೂ ಪರಸ್ಪರ ಸಂಪರ್ಕಿತಗೊಂಡಿರುತ್ತದೆ ಎಂದರು. ಮೂಲಸೌಕರ್ಯ ಸಂಬಂಧಿ ಯೋಜನೆಗಳ ಕಾರ್ಯ ನಡೆಯುತ್ತಿರುವ ಪ್ರಮಾಣ , ಕಾಮಗಾರಿಯ ವೇಗ ಅಭೂತಪೂರ್ವವಾದುದಾಗಿದೆ. ಇಂದು 2014 ಕ್ಕೆ ಮುಂಚೆ ಇದ್ದ ವೇಗಕ್ಕೆ ಹೋಲಿಸಿದರೆ ದುಪ್ಪಟ್ಟು ವೇಗದಲ್ಲಿ ಹೆದ್ದಾರಿಗಳನ್ನು ನಿರ್ಮಿಸಲಾಗುತ್ತಿದೆ. 2014 ಕ್ಕಿಂತ ಮುಂಚಿನ ಪ್ರಮಾಣಕ್ಕೆ ಹೋಲಿಸಿದರೆ ಹೆದ್ದಾರಿ ನಿರ್ಮಾಣದ ವೆಚ್ಚದಲ್ಲಿ 5 ಪಟ್ಟು ಹೆಚ್ಚಳವಾಗಿದೆ ಎಂದರು

ಬರಲಿರುವ 4-5 ವರ್ಷಗಳಲ್ಲಿ ಮೂಲಸೌಕರ್ಯಕ್ಕಾಗಿ 110 ಲಕ್ಷ ಕೋ.ರೂ.ಗಳಿಗೂ ಅಧಿಕ ಮೊತ್ತವನ್ನು ವ್ಯಯ ಮಾಡುವುದಾಗಿ ಸರಕಾರ ಘೋಷಿಸಿದೆ ಎಂದು ಹೇಳಿದ ಅವರು ಇದರಲ್ಲಿ 19 ಲಕ್ಷ ಕೋ.ರೂ.ಗಳಿಗೂ ಅಧಿಕ ಮೊತ್ತದ ಯೋಜನೆಗಳನ್ನು ಹೆದ್ದಾರಿಗಳ ಅಭಿವೃದ್ದಿಗಾಗಿಯೇ ಒದಗಿಸಲಾಗಿದೆ ಎಂದರು.

ಈ ಪ್ರಯತ್ನಗಳಿಂದಾಗಿ ಬಿಹಾರಕ್ಕೆ ಲಾಭವಾಗುತ್ತಿದೆ ಎಂದು ಹೇಳಿದ ಪ್ರಧಾನ ಮಂತ್ರಿ ಅವರು ಮೂಲಸೌಕರ್ಯ ಸಂಬಂಧಿ ರಸ್ತೆ ಮತ್ತು ಸಂಪರ್ಕ ವಿಸ್ತರಣೆ ಹೆಚ್ಚು ಪ್ರಯೋಜನಗಳನ್ನು ನೀಡುತ್ತದೆ ಎಂದರು. 2015 ರಲ್ಲಿ ಘೋಷಣೆಯಾದ ಪ್ರಧಾನ ಮಂತ್ರಿ ಪ್ಯಾಕೇಜ್ ನಲ್ಲಿ 3000 ಕಿಲೋ ಮೀಟರಿಗೂ ಅಧಿಕ  ರಾಷ್ಟ್ರೀಯ ಹೆದ್ದಾರಿಯನ್ನು ಪ್ರಸ್ತಾಪಿಸಲಾಗಿದೆ. ಇದಲ್ಲದೆ ಭಾರತಮಾಲಾ ಯೋಜನೆ ಅಡಿಯಲ್ಲಿ ಆರೂವರೆ ಕಿಲೋ ಮೀಟರ್ ಉದ್ದದ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಾಣ ಮಾಡಲಾಗುತ್ತಿದೆ. ಇಂದು ಬಿಹಾರದಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲದ ಕೆಲಸ ತ್ವರಿತ ಗತಿಯಿಂದ ಸಾಗುತ್ತಿದೆ. ಪೂರ್ವ ಮತ್ತು ಪಶ್ಚಿಮ ಬಿಹಾರವನ್ನು ಚತುಷ್ಪಥದ ಮೂಲಕ ಸಂಪರ್ಕಿಸುವ ಐದು ಯೋಜನೆಗಳು  ಹಾಗು ಉತ್ತರ ಭಾರತವನ್ನು ದಕ್ಷಿಣ ಭಾರತದ ಜೊತೆ ಜೋಡಿಸುವ ಆರು ಯೋಜನೆಗಳು ಪ್ರಗತಿಯಲ್ಲಿವೆ ಎಂದವರು ವಿವರಿಸಿದರು

ಬಿಹಾರದಲ್ಲಿ ಬೃಹತ್ ನದಿಗಳಿಂದಾಗಿ ಸಂಪರ್ಕವೇ ಬಹಳ ದೊಡ್ಡ ಅಡ್ದಿಯಾಗಿದೆ ಎಂದು ಹೇಳಿದ ಪ್ರಧಾನ ಮಂತ್ರಿ ಅವರು ಈ ಕಾರಣದಿಂದಾಗಿ ಪ್ರಧಾನ ಮಂತ್ರಿ ಪ್ಯಾಕೇಜ್ ಘೋಷಣೆಯಾದಾಗ ಸೇತುವೆಗಳ  ನಿರ್ಮಾಣಕ್ಕೆ ವಿಶೇಷ ಆದ್ಯತೆ ನೀಡಲಾಯಿತು. ಪ್ರಧಾನ ಮಂತ್ರಿ ಪ್ಯಾಕೇಜಿನಡಿಯಲ್ಲಿ ಗಂಗಾ ನದಿಯ ಮೇಲೆ 17 ಸೇತುವೆಗಳನ್ನು ನಿರ್ಮಾಣ ಮಾಡಲಾಯಿತು ಮತ್ತು ಅವುಗಳಲ್ಲಿ ಹೆಚ್ಚಿನವುಗಳು ಪೂರ್ಣಗೊಂಡಿವೆ. ಅದೇ ರೀತಿ ಗಂಡಕ್ ಮತು ಕೋಸಿ ನದಿಗಳ ಮೇಲೂ ಸೇತುವೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಪಟನಾ ವರ್ತುಲ ರಸ್ತೆ ಮತ್ತು ಮಹಾತ್ಮಾ ಗಾಂಧಿ ಸೇತುಗೆ ಸಮಾನಾಂತರವಾದ ಸೇತುವೆ  ಹಾಗು ಪಟನಾದ ವಿಕ್ರಮ ಶಿಲಾ ಸೇತು ಮತ್ತು ಭಾಗಲ್ಪುರಗಳಲ್ಲಿ ಸಂಪರ್ಕ ಇನ್ನಷ್ಟು ಬಲಗೊಳ್ಳಲಿದೆ ಎಂದೂ ಪ್ರಧಾನ ಮಂತ್ರಿ ಹೇಳಿದರು.

ನಿನ್ನೆ ಸಂಸತ್ತಿನಲ್ಲಿ ಅಂಗೀಕಾರಗೊಂಡ ಕೃಷಿ ವಿಧೇಯಕಗಳನ್ನು ಪ್ರಸ್ತಾಪಿಸಿದ ಪ್ರಧಾನ ಮಂತ್ರಿ ಅವರು ಈ ಸುಧಾರಣೆಗಳು ವಿವಿಧ ಸಂಕೋಲೆಗಳಿಂದ ರೈತರನ್ನು ಮುಕ್ತ ಮಾಡಲು ಅವಶ್ಯ ಎಂದು ಪ್ರತಿಪಾದಿಸಿದರು. ಚಾರಿತ್ರಿಕ ಕಾನೂನುಗಳು ರೈತರಿಗೆ ಹೊಸ ಹಕ್ಕುಗಳನ್ನು ನೀಡಲಿವೆ ಮತ್ತು ಅವರು ತಮ್ಮ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ, ಯಾರಿಗೆ ಬೇಕಾದರೂ ತಾವೇ  ನಿಗದಿ ಮಾಡಿದ ಬೆಲೆಗೆ ಮತ್ತು ಶರತ್ತುಗಳಿಗೆ ಅನ್ವಯವಾಗಿ ಮಾರಾಟ ಮಾಡಬಹುದಾಗಿದೆ ಎಂದವರು ಹೇಳಿದರು.

ಈ ಮೊದಲಿನ ವ್ಯವಸ್ಥೆ ಸ್ಥಾಪಿತ ಹಿತಾಸಕ್ತಿಗಳನ್ನು ಪೋಷಿಸುತ್ತಿತ್ತು , ಅದು ಅಸಹಾಯಕ ಕೃಷಿಕರಿಂದ ಲಾಭ ಮಾಡಿಕೊಂಡಿತು  ಎಂದೂ ಪ್ರಧಾನ ಮಂತ್ರಿ ಹೇಳಿದರು.

ಹೊಸ ಸುಧಾರಣೆಗಳಡಿಯಲ್ಲಿ ಕೃಷಿ ಮಾರುಕಟ್ಟೆಗಳಲ್ಲದೆ (ಕೃಷಿ ಮಂಡಿ) ವಿವಿಧ ಪರ್ಯಾಯ ವ್ಯವಸ್ಥೆಗಳು ರೈತರಿಗೆ ಲಭ್ಯವಾಗುತ್ತವೆ ಎಂದು ಹೇಳಿದ ಪ್ರಧಾನ ಮಂತ್ರಿ ಶ್ರೀ ಮೋದಿ ಅವರು ರೈತ ಈಗ ತನ್ನ ಉತ್ಪನ್ನವನ್ನು  ಹೆಚ್ಚು ಲಾಭ ದೊರೆಯುವಲ್ಲಿ ಮಾರಾಟ ಮಾಡಬಹುದು ಎಂದರು.

ರಾಜ್ಯದಲ್ಲಿಯ ಬಟಾಟೆ ರೈತರನ್ನು ಉದಾಹರಿಸಿದ ಪ್ರಧಾನ ಮಂತ್ರಿ ಅವರು ಮಧ್ಯ ಪ್ರದೇಶದ ಮತ್ತು ರಾಜಸ್ಥಾನದ ತೈಲ ಬೀಜ ಬೆಳೆಗಾರರನ್ನು ಉಲ್ಲೇಖಿಸಿ ಸುಧಾರಿತ ವ್ಯವಸ್ಥೆಯಲ್ಲಿ ರೈತರು 15 ರಿಂದ 30 ಶೇಖಡಾಕ್ಕೂ ಅಧಿಕ ಲಾಭ ಪಡೆಯುತ್ತಾರೆ ಎಂದರು. ಈ ರಾಜ್ಯಗಳಲ್ಲಿ  ತೈಲ ಗಿರಣಿಗಳು ತೈಲ ಬೀಜಗಳನ್ನು ನೇರವಾಗಿ ರೈತರಿಂದ ಖರೀದಿ ಮಾಡುತ್ತವೆ. ಬೇಳೆ ಕಾಳುಗಳ ಅಧಿಕ ದಾಸ್ತಾನು ಹೊಂದಿರುವ ಮಧ್ಯ ಪ್ರದೇಶ , ಉತ್ತರ ಪ್ರದೇಶ, ಛತ್ತೀಸ್ ಗಢ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳ ರೈತರು ಕಳೆದ ವರ್ಷಕ್ಕೆ ಹೋಲಿಸಿದಾಗ 15 ರಿಂದ 25 ಶೇಖಡಾ ಅಧಿಕ ದರವನ್ನು ಪಡೆದಿದ್ದಾರೆ. ಬೇಳೆ ಕಾಳುಗಳ ಗಿರಣಿಗಳು ರೈತರಿಂದ ನೇರ ಖರೀದಿ ಮಾಡಿದುದರಿಂದ ಇದು ಸಾಧ್ಯವಾಗಿದೆ ಎಂದರು.

ಕೃಷಿ ಮಂಡಿಗಳನ್ನು ಮುಚ್ಚಲಾಗುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ ಪ್ರಧಾನ ಮಂತ್ರಿಗಳು ಈ ಮೊದಲಿನಂತೆ ಅವುಗಳೂ ಕಾರ್ಯ ನಿರ್ವಹಿಸುತ್ತವೆ ಎಂದು ಹೇಳಿದರಲ್ಲದೆ  ಕಳೆದ ವರ್ಷಗಳಿಂದ ಮಂಡಿಗಳ ಆಧುನೀಕರಣ ಮತ್ತು ಕಂಪ್ಯೂಟರೀಕರಣದ ನಿಟ್ಟಿನಲ್ಲಿ ಎನ್.ಡಿ.. ಸರಕಾರ ಕಾರ್ಯೋನ್ಮುಖವಾಗಿದೆ ಎಂದರು.

ಎಂ.ಎಸ್.ಪಿ. ವ್ಯವಸ್ಥೆಯು ಈ ಹಿಂದಿದ್ದಂತೆ ಮುಂದುವರೆಯುತ್ತದೆ ಎಂದು ದೇಶದ ಪ್ರತಿಯೊಬ್ಬ ರೈತರಿಗೂ ಭರವಸೆ ನೀಡಿದ ಶ್ರೀ ನರೇಂದ್ರ ಮೋದಿ ರೈತರನ್ನು ಶೋಷಿಸಿದ ಅವೇ ಸ್ಥಾಪಿತ ಹಿತಾಸಕ್ತಿಗಳು ಎಂ.ಎಸ್.ಪಿ. ಗೆ ಸಂಬಂಧಿಸಿದಂತೆ ಸ್ವಾಮಿನಾಥನ್ ಸಮಿತಿ ಶಿಫಾರಸುಗಳನ್ನು ವರ್ಷಗಳ ಕಾಲ ನೆನೆಗುದಿಗೆ ಹಾಕಿದವು ಎಂದರು. ಪ್ರತೀ ಹಂಗಾಮಿನಲ್ಲಿಯೂ ಸರಕಾರ ಎಂ.ಎಸ್.ಪಿ.ಯನ್ನು ಘೋಷಿಸುತ್ತದೆ ಎಂದರು.

ರೈತರ ಸ್ಥಿತಿ ಗತಿಯನ್ನು ಪ್ರಸ್ತಾಪಿಸಿದ ಪ್ರಧಾನ ಮಂತ್ರಿ ಅವರು 85 ಶೇಖಡಾ ರೈತರು ಒಂದೋ ಸಣ್ಣ ಹಿಡುವಳಿದಾರರು ಅಥವಾ ಮಧ್ಯಮ ಹಿಡುವಳಿದಾರರು. ಮತ್ತು ಇದರಿಂದಾಗಿ ಅವರ ಒಳಸುರಿ ವೆಚ್ಚ ಅಧಿಕವಾಗಿದೆ ಮತ್ತು ಕಡಿಮೆ ಉತ್ಪಾದನೆಯಿಂದಾಗಿ ಲಾಭ ಸಂಪಾದಿಸುವುದು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದರು. ರೈತರು ಸಂಘಟನೆ ಸ್ಥಾಪಿಸಿಕೊಂಡರೆ , ಆಗ ಅವರು ಉತ್ತಮ ಒಳಸುರಿ ವೆಚ್ಚದ ಜೊತೆ ಉತ್ತಮ ಪ್ರತಿಫಲವನ್ನು ಖಾತ್ರಿಪಡಿಸಿಕೊಳ್ಳಬಹುದು, ಅವರು ಖರೀದಿದಾರರ ಜೊತೆ ಉತ್ತಮ ಗುತ್ತಿಗೆ ಕರಾರು ಮಾಡಿಕೊಳ್ಳಬಹುದು. ಈ ಸುಧಾರಣೆಗಳು ಕೃಷಿ ಕ್ಷೇತ್ರದಲ್ಲಿ ಹೂಡಿಕೆಯನ್ನು ಹೆಚ್ಚಿಸುತ್ತವೆ, ರೈತರಿಗೆ ಆಧುನಿಕ ತಂತ್ರಜ್ಞಾನ ಲಭಿಸುತ್ತದೆ, ರೈತರ ಉತ್ಪನ್ನಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ತಲುಪುವುದು ಸುಲಭವಾಗುತ್ತದೆ ಎಂದು ಪ್ರಧಾನ ಮಂತ್ರಿ ಹೇಳಿದರು.

ಬಿಹಾರದಲ್ಲಿಯ ಐದು ರೈತರ ಉತ್ಪನ್ನಗಳ ಸಂಘಟನೆಗಳು ಇತ್ತೀಚೆಗೆ ಪ್ರಖ್ಯಾತ ಅಕ್ಕಿ ವ್ಯಾಪಾರ ಕಂಪೆನಿಯ ಜೊತೆ ಒಪ್ಪಂದ ಮಾಡಿಕೊಂಡಿರುವ ಬಗೆಯನ್ನು ಉಲ್ಲೇಖಿಸಿದ ಪ್ರಧಾನ ಮಂತ್ರಿ ಅವರು ಈ ಒಪ್ಪಂದದಡಿಯಲ್ಲಿ 4 ಸಾವಿರ ಟನ್ ಭತ್ತವನ್ನು ಎಫ್.ಪಿ.. ಗಳಿಂದ ಖರೀದಿಸಲಾಗುತ್ತದೆ . ಅದೇ ರೀತಿ ಡೈರಿಗಳು ಮತ್ತು ಹಾಲು ಉತ್ಪಾದಕರು ಸುಧಾರಣೆಗಳಿಂದ ಲಾಭ ಪಡೆಯುತ್ತಾರೆ ಎಂದೂ ಹೇಳಿದರು.

ಅವಶ್ಯಕ ಸಾಮಗ್ರಿಗಳ ಕಾಯ್ದೆಯಲ್ಲಿಯೂ ಸುಧಾರಣೆಗಳನ್ನು ಜಾರಿಗೆ ತರಲಾಗುತ್ತಿದೆ  ಎಂದ ಪ್ರಧಾನ ಮಂತ್ರಿ ಅವರು ಈ ಕಾಯ್ದೆಯ ಕೆಲವು ಪ್ರಸ್ತಾವನೆಗಳು ರೈತರ ಸ್ವಾತಂತ್ರ್ಯವನ್ನು ತಡೆಯುತ್ತಿದ್ದವು ಎಂದರು.

ಬೇಳೆ ಕಾಳುಗಳು, ತೈಲ ಬೀಜಗಳು , ಬಟಾಟೆ, ನೀರುಳ್ಳಿ ಇತ್ಯಾದಿಗಳನ್ನು ಕಾಯ್ದೆಯ ನಿರ್ಬಂಧಗಳಿಂದ ಮುಕ್ತ ಮಾಡಲಾಗಿದೆ. ಈಗ ದೇಶದ ರೈತರು ತಮ್ಮ ಉತ್ಪಾದನೆಯ ಬಹು ಅಂಶವನ್ನು ಸುಲಭವಾಗಿ ಶೀತಲೀಕೃತ ದಾಸ್ತಾನುಗಾರಗಳಲ್ಲಿ ದಾಸ್ತಾನು ಮಾಡಿಡಬಹುದು. ನಮ್ಮ ದೇಶದಲ್ಲಿ ದಾಸ್ತಾನಿಗೆ ಸಂಬಂಧಿಸಿದ ಕಾನೂನು ಸಮಸ್ಯೆಗಳನ್ನು ನಿವಾರಿಸಲಾಗುವುದು. ಶೀತಲೀಕೃತ ದಾಸ್ತಾನು ಜಾಲವನ್ನು ಇನ್ನಷ್ಟು ಅಭಿವೃದ್ದಿ ಮಾಡಿ ವಿಸ್ತರಿಸಲಾಗುವುದು ಎಂದೂ ಶ್ರೀ ಮೋದಿ ಹೇಳಿದರು

ಕೃಷಿ ಕ್ಷೇತ್ರದ ಚಾರಿತ್ರಿಕ ಸುಧಾರಣೆಗಳ ಬಗ್ಗೆ ಕೆಲವು ಸ್ಥಾಪಿತ ಹಿತಾಸಕ್ತಿಗಳು ರೈತರನ್ನು ತಪ್ಪು ಹಾದಿಗೆ ಎಳೆಯಲು ಪ್ರಯತ್ನಿಸುತ್ತಿವೆ ಎಂದ ಪ್ರಧಾನ ಮಂತ್ರಿ ಅವರು ಕಳೆದ 5 ವರ್ಷಗಳಲ್ಲಿ ಸರಕಾರವು ಖರೀದಿ ಮಾಡಿದ ಬೇಳೆ ಕಾಳುಗಳು ಮತ್ತು ತೈಲ ಬೀಜಗಳ ಪ್ರಮಾಣ 2014 ಕ್ಕಿಂತ ಮುಂಚಿನ ಈ ಅವಧಿಗೆ ಹೊಲಿಸಿದರೆ 24 ಪಟ್ಟು ಅಧಿಕವಾಗಿದೆ. ಈ ವರ್ಷದ  ಕೊರೊನಾ ಅವಧಿಯಲ್ಲಿ ರಾಬಿ ಋತುವಿನಲ್ಲಿ ದಾಖಲೆ ಪ್ರಮಾಣದಲ್ಲಿ ರೈತರಿಂದ ಗೋಧಿಯನ್ನು ಖರೀದಿ ಮಾಡಲಾಗಿದೆ ಎಂದರು.

ಈ ವರ್ಷದ ರಾಬಿ ಹಂಗಾಮಿನಲ್ಲಿ ಗೋಧಿ, ಧಾನ್ಯಗಳು, ಬೇಳೆ ಕಾಳುಗಳು ಮತ್ತು ತೈಲ ಬೀಜಗಳ  ಖರೀದಿಗಾಗಿ 1 ಲಕ್ಷ 13 ಸಾವಿರ ಕೋ.ರೂ. ಗಳನ್ನು ಎಂ.ಎಸ್.ಪಿ.ಯಾಗಿ ರೈತರಿಗೆ ನೀಡಲಾಗಿದೆ. ಈ ಮೊತ್ತವು ಹಿಂದಿನ ವರ್ಷಕ್ಕೆ ಹೋಲಿಸಿದಾಗ 30 ಶೇಖಡಾದಷ್ಟು ಅಧಿಕವಾಗಿದೆ.

ಅಂದರೆ , ಕೊರೋನಾ ಅವಧಿಯಲ್ಲೂ ಸರಕಾರದಿಂದ ದಾಖಲೆ ಪ್ರಮಾಣದ ಖರೀದಿ ನಡೆದಿದೆ ಮಾತ್ರವಲ್ಲ ರೈತರಿಗೂ ದಾಖಲೆ ಪ್ರಮಾಣದ ಪಾವತಿ ಮಾಡಲಾಗಿದೆ. ದೇಶದ ರೈತರಿಗಾಗಿ ಆಧುನಿಕ ಚಿಂತನಾ ಕ್ರಮದೊಂದಿಗೆ ಹೊಸ ವ್ಯವಸ್ಥೆಗಳನ್ನು ನಿರ್ಮಾಣ ಮಾಡುವುದು 21 ನೇ ಶತಮಾನದ ಭಾರತದ ಜವಾಬ್ದಾರಿಯಾಗಿದೆ.

***



(Release ID: 1657504) Visitor Counter : 179