ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
ಮೂರನೇ ರಾಷ್ಟ್ರೀಯ ಪೋಷಣಾ ಮಾಸವನ್ನು ಸೆಪ್ಟೆಂಬರ್ 2020 ರಲ್ಲಿ ಆಚರಿಸಲಾಗುತ್ತಿದೆ
Posted On:
06 SEP 2020 6:34PM by PIB Bengaluru
ಮೂರನೇ ರಾಷ್ಟ್ರೀಯ ಪೋಷಣಾ ಮಾಸವನ್ನು 2020 ರ ಸೆಪ್ಟೆಂಬರ್ ತಿಂಗಳಲ್ಲಿ ಆಚರಿಸಲಾಗುತ್ತಿದೆ. ಸಮಗ್ರ ಪೋಷಣೆಗಾಗಿ ಪ್ರಧಾನ ಮಂತ್ರಿಯವರ ವ್ಯಾಪಕ ಯೋಜನೆಯಾದ ಪೋಷಣಾ ಅಭಿಯಾನವನ್ನು 2018 ರಲ್ಲಿ ಆರಂಭಿಸಲಾಯಿತು. ಈ ಅಭಿಯಾನದಡಿ ಪ್ರತಿವರ್ಷ ಪೋಷಣಾ ಮಾಸವನ್ನು ಆಚರಿಸಲಾಗುತ್ತದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಪೋಷಣಾ ಅಭಿಯಾನದ ನೋಡಲ್ ಸಚಿವಾಲಯವಾಗಿದ್ದು, ರಾಷ್ಟ್ರ, ರಾಜ್ಯಗಳು / ಯುಟಿಗಳು, ಜಿಲ್ಲೆಗಳು ಮತ್ತು ತಳಮಟ್ಟದಲ್ಲಿ ಪಾಲುದಾರ ಸಚಿವಾಲಯಗಳು ಮತ್ತು ಇಲಾಖೆಗಳೊಂದಿಗೆ ಸೇರಿ ಪೋಷಣಾ ಮಾಸವನ್ನು ಆಚರಿಸಲಾಗುತ್ತಿದೆ, ಚಿಕ್ಕ ಮಕ್ಕಳು ಮತ್ತು ಮಹಿಳೆಯರಲ್ಲಿ ಅಪೌಷ್ಟಿಕತೆಯನ್ನು ನಿವಾರಿಸಲು ಮತ್ತು ಎಲ್ಲರಿಗೂ ಆರೋಗ್ಯ ಮತ್ತು ಪೋಷಣೆಯನ್ನು ಖಾತರಿಪಡಿಸುವ ಜನಾಂದೋಲನದಲ್ಲಿ ಜನರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವುದು ಪೋಷಣಾ ಮಾಸದ ಉದ್ದೇಶವಾಗಿದೆ.
ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ತಮ್ಮ ಜನಪ್ರಿಯ ಕಾರ್ಯಕ್ರಮ “ಮನ್ ಕಿ ಬಾತ್” ನ 2020 ಆಗಸ್ಟ್ 30ರ ಸಂಚಿಕೆಯಲ್ಲಿ ಪೌಷ್ಠಿಕಾಂಶದ ಮಹತ್ವದ ಬಗ್ಗೆ ಒತ್ತಿಹೇಳಿದ್ದರು. ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ ತಮ್ಮ ಗರಿಷ್ಠ ಸಾಮರ್ಥ್ಯವನ್ನು ಸಾಧಿಸಲು ಪೌಷ್ಠಿಕಾಂಶವು ವಹಿಸಿರುವ ಪಾತ್ರದ ಬಗ್ಗೆ ಪ್ರಧಾನಿಯವರು ಗಮನ ಸೆಳೆದರು. ಕಳೆದ ಕೆಲವು ವರ್ಷಗಳಲ್ಲಿ ವಿಶೇಷವಾಗಿ ಪೌಷ್ಠಿಕಾಂಶ ವಾರ ಮತ್ತು ಪೌಷ್ಠಿಕಾಂಶದ ತಿಂಗಳಲ್ಲಿ (ಪೋಶನ್ ಮಾಹ್) ಸಾರ್ವಜನಿಕರ ಸಹಭಾಗಿತ್ವವು ಪೌಷ್ಠಿಕಾಂಶದ ಜಾಗೃತಿಯನ್ನು ಬೃಹತ್ ಆಂದೋಲನವನ್ನಾಗಿ ಪರಿವರ್ತಿಸುತ್ತಿದೆ ಎಂದು ಅವರು ಹೇಳಿದರು.
2020 ರ ಆಗಸ್ಟ್ 27 ರಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಜವಳಿ ಸಚಿವೆ ಶ್ರೀಮತಿ ಸ್ಮೃತಿ ಜುಬಿನ್ ಇರಾನಿ ಅವರು ಅಂತರ ಸಚಿವಾಲಯ ಸಭೆಯನ್ನು ನಡೆಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಶ್ರೀ ರಾಮ್ ಮೋಹನ್ ಮಿಶ್ರಾ ಅವರು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಂವಾದ ನಡೆಸಿದರು. ತೀವ್ರವಾಗಿ ಅಪೌಷ್ಟಿಕತೆಯಿಂದ ಬಳಲುತ್ತಿರುವ (ಎಸ್ಎಎಂ) ಮಕ್ಕಳ ಗುರುತಿಸುವುದು ಮತ್ತು ಅವರ ನಿರ್ವಹಣೆ ಮತ್ತು ಪೋಷಣಾ ವಾಟಿಕಾಸ್- ಪೌಷ್ಠಿಕ ತೋಟಗಳನ್ನು ಕೇಂದ್ರೀಕೃತ ಚಟುವಟಿಕೆಗಳಾಗಿ ಕೈಗೊಳ್ಳುವುದು, ಜೊತೆಗೆ ಆರಂಭಿಕ ಸ್ತನ್ಯಪಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು, ಜೀವನದ ಮೊದಲ 1000 ದಿನಗಳಲ್ಲಿ ಉತ್ತಮ ಪೌಷ್ಠಿಕಾಂಶದ ಅವಶ್ಯಕತೆ, ಯುವತಿಯರು ಮತ್ತು ಮಕ್ಕಳಲ್ಲಿ ರಕ್ತಹೀನತೆಯನ್ನು ಕಡಿಮೆ ಮಾಡುವುದು ಇತ್ಯಾದಿ ಕ್ರಮಗಳನ್ನು ಪೋಷಣಾ ಮಾಸದ ಸಮಯದಲ್ಲಿ ಕೈಗೊಳ್ಳಲಾಗುವುದು.
ಎಲ್ಲಾ ಪಾಲುದಾರ ಸಚಿವಾಲಯಗಳು ಪೋಷಣಾ ಮಾಸದ ಉದ್ದೇಶಕ್ಕೆ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿವೆ ಮತ್ತು ಪೌಷ್ಟಿಕಾಂಶವನ್ನು ಕೇಂದ್ರೀಕರಿಸಲು ಚಟುವಟಿಕೆಗಳನ್ನು ಯೋಜಿಸಿವೆ. ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಇಲಾಖೆಯು, ವಿದ್ಯಾರ್ಥಿಗಳಲ್ಲಿ ಪೌಷ್ಠಿಕಾಂಶ ಇ-ರಸಪ್ರಶ್ನೆ ಮತ್ತು ಮೆಮೆ ಸ್ಪರ್ಧೆಯನ್ನು ನಡೆಸುವಂತೆ ರಾಜ್ಯಗಳಿಗೆ ಸೂಚಿಸಿದೆ. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ತಿಂಗಳಲ್ಲಿ ವಿಶೇಷ ಸಮಿತಿ ಸಭೆಗಳನ್ನು ನಡೆಸಲು ಪಂಚಾಯತ್ ಸಚಿವಾಲಯ ಯೋಜಿಸುತ್ತಿದೆ. ಮಹಾತ್ಮ ಗಾಂಧಿ ಎನ್ಆರ್ಇಜಿಎ ಬೆಂಬಲದೊಂದಿಗೆ ಪೌಷ್ಠಿಕ ತೋಟಗಳನ್ನು ಉತ್ತೇಜಿಸಲು ಗ್ರಾಮೀಣಾಭಿವೃದ್ಧಿ ಸಚಿವಾಲಯ ರಾಜ್ಯಗಳಿಗೆ ಸೂಚಿಸಿದೆ. ಆಯುಷ್ ಸಚಿವಾಲಯವು ಯೋಗ ಮತ್ತು ಸಮಗ್ರ ಪೋಷಣೆಯನ್ನು ಅಳವಡಿಸಿಕೊಳ್ಳುವ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ರೂಪಿಸಲು ಮುಂದಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಎಲ್ಲಾ ಚಟುವಟಿಕೆಗಳಿಗೆ ಸಹಕಾರವನ್ನು ಒದಗಿಸಿದೆ.
ದೇಶದ ಕೋವಿಡ್-19 ಸಾಂಕ್ರಾಮಿಕದ ಪರಿಸ್ಥಿತಿಯನ್ನು ಪರಿಗಣಿಸಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಎಲ್ಲಾ ಪಾಲುದಾರರನ್ನು ಪೋಷಣಾ ಮಾಸ ಆಚರಿಸಲು ಡಿಜಿಟಲ್ ವೇದಿಕೆಗಳನ್ನು ಬಳಸಲು ಪ್ರೋತ್ಸಾಹಿಸುತ್ತಿದೆ. ಸಾಮಾಜಿಕ ಮಾಧ್ಯಮಗಳು, ಆನ್ಲೈನ್ ಚಟುವಟಿಕೆಗಳು, ಪಾಡ್ಕಾಸ್ಟ್ಗಳು ಮತ್ತು ಇ-ಸಂವಾದ ಇತ್ಯಾದಿಗಳನ್ನು ಪೌಷ್ಠಿಕಾಂಶದ ಮಹತ್ವದ ಬಗ್ಗೆ ಜ್ಞಾನ ಮತ್ತು ಮಾಹಿತಿಯನ್ನು ಪ್ರಸಾರ ಮಾಡಲು ಬಳಸಲಾಗುತ್ತದೆ. ಸಚಿವಾಲಯವು ವೆಬಿನಾರ್ ಸರಣಿಯನ್ನು ಸಹ ಆಯೋಜಿಸುತ್ತಿದೆ, ಇದರಲ್ಲಿ ವಿಷಯ ತಜ್ಞರು ಮತ್ತು ಆರೋಗ್ಯ ವೃತ್ತಿಪರರು ಮಹಿಳೆಯರು ಮತ್ತು ಮಕ್ಕಳಿಗೆ ಆರೋಗ್ಯ ಮತ್ತು ಪೋಷಣೆಯ ಪ್ರಮುಖ ಅಂಶಗಳ ಬಗ್ಗೆ ಬೆಳಕು ಚೆಲ್ಲುತ್ತಾರೆ.
***
(Release ID: 1651923)
Visitor Counter : 425
Read this release in:
Bengali
,
English
,
Urdu
,
Hindi
,
Marathi
,
Assamese
,
Manipuri
,
Punjabi
,
Gujarati
,
Odia
,
Tamil
,
Telugu