ಪ್ರಧಾನ ಮಂತ್ರಿಯವರ ಕಛೇರಿ

ಆಗಸ್ಟ್ 10ರ ಸೋಮವಾರ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ (ಎ ಮತ್ತು ಎನ್.ಐ)ಗಳ ನಡುವೆ ಜಲಾಂತರ್ಗಾಮಿ ಕೇಬಲ್ ಸಂಪರ್ಕ ಉದ್ಘಾಟಿಸಲಿರುವ ಪ್ರಧಾನಮಂತ್ರಿ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಹೆಚ್ಚು ವೇಗದ ಬ್ರಾಡ್ ಬ್ಯಾಂಡ್ ಸಂಪರ್ಕ

ಚೆನ್ನೈ – ಪೋರ್ಟ್ ಬ್ಲೇರ್ ಮತ್ತು ಪೋರ್ಟ್ ಬ್ಲೇರ್ ಮತ್ತು 7 ದ್ವೀಪಗಳ ನಡುವೆ ಸಮುದ್ರದ ಒಳಗೆ ಸುಮಾರು 2300 ಕಿ.ಮೀ ಉದ್ದದ ಕೇಬಲ್

ಇ- ಆಡಳಿತ, ಪ್ರವಾಸೋದ್ಯಮ ಮತ್ತು ಮಾಹಿತಿ ತಂತ್ರಜ್ಞಾನಕ್ಕೆ ದೊಡ್ಡ ಉತ್ತೇಜನ

Posted On: 07 AUG 2020 2:41PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2020 ರ ಆಗಸ್ಟ್ 10 ರಂದು ಚೆನ್ನೈ ಮತ್ತು ಪೋರ್ಟ್ ಬ್ಲೇರ್ ಅನ್ನು ಸಂಪರ್ಕಿಸುವ ಜಲಾಂತರ್ಗಾಮಿ ಆಪ್ಟಿಕಲ್ ಫೈಬರ್ ಕೇಬಲ್ (ಒಎಫ್‌ಸಿ) ಅನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ಜಲಾಂತರ್ಗಾಮಿ ಕೇಬಲ್ ಪೋರ್ಟ್ ಬ್ಲೇರ್ ನಿಂದ ಸ್ವರಾಜ್ ದ್ವೀಪ (ಹ್ಯಾವ್ಲಾಕ್), ಲಿಟ್ಲ್ ಅಂಡಮಾನ್, ಕಾರ್ ನಿಕೋಬಾರ್, ಕಮೋರ್ತಾ, ಗ್ರೇಟ್ ನಿಕೋಬಾರ್, ಲಾಂಗ್ ಐಲ್ಯಾಂಡ್, ಮತ್ತು ರಂಗಟ್ ಅನ್ನೂ ಸಂಪರ್ಕಿಸಲಿದೆ. ಈ ಸಂಪರ್ಕವು ಭಾರತದ ಇತರ ಭಾಗಗಳಿಗೆ ಸಮನವಾಗಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ವೇಗವಾಗಿ ಮತ್ತು ಹೆಚ್ಚು ವಿಶ್ವಾಸಾರ್ಹ ಮೊಬೈಲ್ ಮತ್ತು ಸ್ಥಿರ ದೂರವಾಣಿಯ ಸೇವೆಗಳನ್ನು ತಲುಪಿಸಲು ಅನುವು ಮಾಡಿಕೊಡುತ್ತದೆ. ಈ ಯೋಜನೆಗೆ ಅಡಿಪಾಯವನ್ನು ಮಾನ್ಯ ಪ್ರಧಾನಮಂತ್ರಿಯವರು 2018ರ ಡಿಸೆಂಬರ್ 30ರಂದು ಪೋರ್ಟ್ ಬ್ಲೇರ್‌ ನಲ್ಲಿ ನೆರವೇರಿಸಿದ್ದರು.

ಇದು ಉದ್ಘಾಟನೆಗೊಂಡ ತರುವಾಯ ಜಲಾಂತರ್ಗಾಮಿ ಓ.ಎಫ್.ಸಿ. ಸಂಪರ್ಕವು ಪ್ರತಿ ಸೆಕೆಂಡ್ ಗೆ 2x200 ಗಿಗಾ ಬೈಟ್ಸ್ (ಜಿಬಿಪಿಎಸ್) ವೇಗದ ಬ್ರಾಂಡ್ ವಿಡ್ತ್ ಅನ್ನು ಚೆನ್ನೈ ಮತ್ತು ಪೋರ್ಟ್ ಬ್ಲೇರ್ ಮತ್ತು ಪೋರ್ಟ್ ಬ್ಲೇರ್ ಮತ್ತು ಇತರ ದ್ವೀಪಗಳ  ನಡುವೆ ಒದಗಿಸಲಿದೆ. ಈ ದ್ವೀಪಗಳಲ್ಲಿ ವಿಶ್ವಾಸಾರ್ಹ, ದೃಢವಾದ ಮತ್ತು ಹೆಚ್ಚಿನ ವೇಗದ ದೂರಸಂಪರ್ಕ ಮತ್ತು  ಬ್ರಾಡ್‌ ಬ್ಯಾಂಡ್ ಸೌಲಭ್ಯಗಳನ್ನು ಒದಗಿಸಿದ್ದು, ಗ್ರಾಹಕರ ದೃಷ್ಟಿಕೋನದಿಂದ ಮತ್ತು ಕಾರ್ಯತಂತ್ರದ ಮತ್ತು ಆಡಳಿತದ ಕಾರಣಗಳಿಗಾಗಿ ಒಂದು ಹೆಗ್ಗುರುತಾಗಿದೆ. ಇದರಿಂದ ಉಪಗ್ರಹದ ಮೂಲಕ ಒದಗಿಸಲಾದ ಸೀಮಿತ ದತ್ತಾಂಶ ಕೇಂದ್ರದ ಬ್ಯಾಂಡ್‌ ವಿಡ್ತ್‌ ನಿಂದಾಗಿ ನಿರ್ಬಂಧಿಸಲ್ಪಟ್ಟ 4 ಜಿ ಮೊಬೈಲ್ ಸೇವೆಗಳು ಸಹ ಪ್ರಮುಖ ಸುಧಾರಣೆ ಕಾಣುತ್ತವೆ.

ವರ್ಧಿತ ದೂರಸಂಪರ್ಕ ಮತ್ತು ಬ್ರಾಡ್‌ ಬ್ಯಾಂಡ್ ಸಂಪರ್ಕವು ದ್ವೀಪಗಳಲ್ಲಿ ಪ್ರವಾಸೋದ್ಯಮ ಮತ್ತು ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸುತ್ತದೆ, ಆರ್ಥಿಕತೆಗೆ ಪ್ರಚೋದನೆಯನ್ನು ನೀಡುತ್ತದೆ ಮತ್ತು ಜೀವನ ಮಟ್ಟವನ್ನು ಸುಧಾರಿಸುತ್ತದೆ. ಉತ್ತಮ ಸಂಪರ್ಕವು ಟೆಲಿ ಮೆಡಿಸಿನ್ ಮತ್ತು ಟೆಲಿ-ಶಿಕ್ಷಣದಂತಹ ಇ-ಆಡಳಿತ ಸೇವೆಗಳನ್ನು ತಲುಪಿಸಲು ಸಹಕಾರಿಯಾಗುತ್ತದೆ.  ಸಣ್ಣ ಉದ್ಯಮಗಳು ಇ ವಾಣಿಜ್ಯದಲ್ಲಿನ ಅವಕಾಶಗಳಿಂದ ಲಾಭ ಪಡೆಯುತ್ತವೆ, ಆದರೆ ಶಿಕ್ಷಣ ಸಂಸ್ಥೆಗಳು ಬ್ಯಾಂಡ್‌ ವಿಡ್ತ್‌ ನ ವರ್ಧಿತ ಲಭ್ಯತೆಯನ್ನು ಇ-ಕಲಿಕೆ ಮತ್ತು ಜ್ಞಾನ ಹಂಚಿಕೆಗಾಗಿ ಬಳಸಿಕೊಳ್ಳುತ್ತವೆ.  ವ್ಯಾಪಾರ ಪ್ರಕ್ರಿಯೆ ಹೊರಗುತ್ತಿಗೆ ಸೇವೆಗಳು ಮತ್ತು ಇತರ ಮಧ್ಯಮ ಮತ್ತು ದೊಡ್ಡ ಉದ್ಯಮಗಳು ಉತ್ತಮ ಸಂಪರ್ಕದ ಪ್ರಯೋಜನಗಳನ್ನು ಪಡೆಯುತ್ತವೆ.

ದೂರ ಸಂಪರ್ಕ ಸಚಿವಾಲಯದ ದೂರಸಂಪರ್ಕ ಇಲಾಖೆಯ ಅಡಿಯಲ್ಲಿರುವ ಸಾರ್ವತ್ರಿಕ ಸೇವೆಗಳ ಹೊಣೆಗಾರಿಕೆ ನಿಧಿ (ಯುಎಸ್.ಒಎಫ್) ಮೂಲಕ ಈ ಯೋಜನೆಗೆ ಭಾರತ ಸರ್ಕಾರ ಆರ್ಥಿಕ ನೆರವು ನೀಡುತ್ತದೆ. ಭಾರತ್ ಸಂಚಾರ್ ನಿಗಮ ನಿಯಮಿತ (ಬಿಎಸ್.ಎನ್.ಎಲ್) ಈ ಯೋಜನೆಯನ್ನು ನಿರ್ವಹಿಸಿದರೆ, ಟೆಲಿಕಮ್ಯೂನಿಕೇಷನ್ಸ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ (ಟಿಸಿಐಎಲ್) ತಾಂತ್ರಿಕ ಸಲಹೆಗಾರನಾಗಿದೆ. ಸುಮಾರು 1224 ಕೋಟಿ ರೂ.ಗಳ ವೆಚ್ಚದಲ್ಲಿ ಸುಮಾರು 2300 ಕಿ.ಮೀ ಜಲಾಂತರ್ಗಾಮಿ ಒಎಫ್‌.ಸಿ ಕೇಬಲ್ ಹಾಕಲಾಗಿದ್ದು, ಈ ಯೋಜನೆ ನಿಗದಿತ ಕಾಲಮಿತಯಲ್ಲಿ ಪೂರ್ಣಗೊಂಡಿದೆ.

***


(Release ID: 1644730) Visitor Counter : 290