PIB Headquarters
ಕೋವಿಡ್-19: ಪಿಐಬಿ ದೈನಿಕ ವರದಿ
Posted On:
04 AUG 2020 8:19PM by PIB Bengaluru
(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು
ಪಿಐಬಿ ವಾಸ್ತವದ ಪರಿಶೀಲನೆ- FACT CHECK- ಯನ್ನು ಒಳಗೊಂಡಿದೆ)
ಭಾರತದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳಿಗಿಂತ ಗುಣಮುಖರಾದ ಪ್ರಕರಣ ದುಪ್ಪಟ್ಟು; ಒಟ್ಟು 12.3 ಲಕ್ಷ ಸೋಂಕಿತರು ಗುಣಮುಖ; ಗುಣಮುಖರಾದವರ ಪ್ರಮಾಣ ಶೇ.66.31ಕ್ಕೆ ಏರಿಕೆ; ಸೋಂಕಿತರ ಮರಣ ಪ್ರಮಾಣ ಶೇ.2.1ಕ್ಕೆ ಇಳಿಕೆ
ಭಾರತದಲ್ಲಿ ಇಂದು ಒಟ್ಟು ಗುಣಮುಖರಾದವರ ಸಂಖ್ಯೆ 12,30,509 ಏರಿಕೆಯಾಗಿದ್ದು, ಇದರಿಂದ ಸಕ್ರಿಯ ಪ್ರಕರಣಗಳಿಗಿಂತ ಗುಣಮುಖರಾದವರ ಪ್ರಕರಣಗಳ ದುಪ್ಪಟ್ಟಾಗಿದೆ. ಕಳೆದ 24 ಗಂಟೆಗಳಲ್ಲಿ 44,306 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇದರಿಂದಾಗಿ ಕೋವಿಡ್-19 ಸೋಂಕಿನಿಂದ ಗುಣಮುಖರಾದವರ ಪ್ರಮಾಣ ಶೇ.66.31ಕ್ಕೆ ಏರಿಕೆಯಾದಂತಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ. 31.59ರಷ್ಟಿದ್ದು(5,86,298) ಅವೆಲ್ಲ ವೈದ್ಯಕೀಯ ನಿಗಾದಲ್ಲಿವೆ. ಭಾರತದಲ್ಲಿ ಮೊದಲ ಲಾಕ್ ಡೌನ್ ನಿಂದೀಚೆಗೆ ಸೋಂಕಿತರ ಮರಣ ಪ್ರಮಾಣ ಜಾಗತಿಕ ಸರಾಸರಿಗೆ ಹೋಲಿಸಿದರೆ ಶೇ.2.10ಕ್ಕೆ ಇಳಿದಿದೆ. ಪ್ರಸಕ್ತ ದತ್ತಾಂಶದ ಸಾವಿನ ವಿಶ್ಲೇಷಣೆ ಮಾಡಿದರೆ ಶೇ.50ರಷ್ಟು ಸಾವುಗಳು 60 ವರ್ಷ ವಯಸ್ಸಿನ ಆಸುಪಾಸಿನವರಲ್ಲಿ ಕಂಡುಬರುತ್ತಿವೆ ಮತ್ತು ಶೇ.37ರಷ್ಟು ಸಾವುಗಳು 45 ರಿಂದ 60 ವರ್ಷದೊಳಗಿನವರದ್ದಾಗಿರುತ್ತದೆ. ಶೇ.11ರಷ್ಟು ಸಾವುಗಳು 26 ರಿಂದ 44 ವರ್ಷದೊಳಗಿನವರದ್ದಾಗಿದೆ. ಲಿಂಗವಾರು ಹಂಚಿಕೆ ಮಾಡಿದರೆ ಸಾವನ್ನಪ್ಪುತ್ತಿರುವವರ ಪೈಕಿ ಶೇ.68ರಷ್ಟು ಪುರುಷರು ಮತ್ತು ಶೇ.32ರಷ್ಟು ಮಹಿಳೆಯರು.
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 6.6 ಲಕ್ಷಕ್ಕೂ ಅಧಿಕ ಮಾದರಿಗಳ ಪರೀಕ್ಷೆ; 28 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರತಿ ದಿನ ಒಂದು ಮಿಲಿಯನ್ ಜನಸಂಖ್ಯೆಗೆ 140ಕ್ಕೂ ಅಧಿಕ ಪರೀಕ್ಷೆ; 28 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಾಸಿಟಿವ್ ದರ ಶೇ.10ಕ್ಕೂ ಕಡಿಮೆ
ಕಳೆದ 24 ಗಂಟೆಗಳಲ್ಲಿ ದಾಖಲೆಯ 6,61,892 ಮಾದರಿಗಳ ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದೆ. ಇದರಿಂದಾಗಿ ಒಟ್ಟು ಪರೀಕ್ಷೆಗಳ ಸಂಖ್ಯೆ 2,08,64,750 ಆಗಿದೆ. ಮತ್ತು ಪ್ರತಿ ಮಿಲಿಯನ್ ಪರೀಕ್ಷೆಗಳು(ಟಿಪಿಎಂ) 15,119 ಇದೆ. ಭಾರತದಲ್ಲಿ ಸರಾಸರಿ ಪ್ರತಿ ಮಿಲಿಯನ್ ಜನಸಂಖ್ಯೆಗೆ ಪ್ರತಿ ದಿನ 479 ಪರೀಕ್ಷೆಗಳು ನಡೆಯುತ್ತಿವೆ. ಭಾರತದ 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಡಬ್ಲ್ಯೂಎಚ್ಒ ನಿಗದಿಪಡಿಸಿರುವಂತೆ ಪ್ರತಿ ದಿನ ಪ್ರತಿ ಮಿಲಿಯನ್ ಜನಸಂಖ್ಯೆಗೆ 140ಕ್ಕೂ ಅಧಿಕ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಭಾರತದ ಸರಾಸರಿ ಪಾಸಿಟಿವಿಟಿ ದರ ಈವರೆಗೆ ಶೇ.8.89ಕ್ಕೆ ತಲುಪಿದೆ. 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಾಸಿಟಿವಿಟಿ ದರ ಶೇ.10ಕ್ಕೂ ಕಡಿಮೆ ಇದ್ದು, ಇದು ಪರೀಕ್ಷಾ ಕಾರ್ಯತಂತ್ರ ಸರಿಯಾದ ದಿಕ್ಕಿನಲ್ಲಿ ಸಾಗಿದೆ ಎಂಬುದನ್ನು ತೋರಿಸುತ್ತದೆ. ಕೇಂದ್ರ ಮತ್ತು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಂದಾಗಿ ಪಾಸಿಟಿವಿಟಿ ದರ ಮತ್ತಷ್ಟು ಸುಧಾರಣೆಯಾಗಿ ಶೇ.5 ತಲುಪಿದೆ. ಪ್ರತಿ ದಿನ 10 ಲಕ್ಷ ಪರೀಕ್ಷೆಗಳನ್ನು ನಡೆಸುವ ಗುರಿಯನ್ನು ಹೊಂದಲಾಗಿದ್ದು, ಆ ನಿಟ್ಟಿನಲ್ಲಿ ಪರೀಕ್ಷಾ ಸಾಮರ್ಥ್ಯವನ್ನು ನಿರಂತರವಾಗಿ ಹೆಚ್ಚಿಸಲಾಗುತ್ತಿದೆ. ದೇಶದಲ್ಲಿ ಪ್ರಸ್ತುತ ಪರೀಕ್ಷಾ ಪ್ರಯೋಗಾಲಯ ಜಾಲ ಒಟ್ಟು 1356 ಕ್ಕೆ ಏರಿಕೆಯಾಗಿದೆ ಅವುಗಳಲ್ಲಿ 917 ಸರ್ಕಾರಿ ವಲಯ ಮತ್ತು 439 ಖಾಸಗಿ ಪ್ರಯೋಗಾಲಯಗಳು ಇವೆ.
ಅಸ್ಸಾಂಗೆ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವ ತನ್ನದೇ ಆದ ದೂರದರ್ಶನ ಕೇಂದ್ರ
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಪ್ರಕಾಶ್ ಜಾವಡೇಕರ್, ದಿನದ 24 ಗಂಟೆಗಳು ಕಾರ್ಯ ನಿರ್ವಹಿಸುವ ಅಸ್ಸಾಂ ದೂರದರ್ಶನ ವಾಹಿನಿಯನ್ನು ಇಂದು ನವದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು “ಈ ಚಾನಲ್ ಅಸ್ಸಾಂನ ಜನತೆಗೆ ನೀಡುತ್ತಿರುವ ಉಡುಗೊರೆಯಾಗಿದೆ ಮತ್ತು ಈ ಚಾನಲ್ ಅಸ್ಸಾಂನ ಎಲ್ಲ ವರ್ಗದ ಜನರಿಗೆ ಅಗತ್ಯ ಪ್ರಸಾರ ಸೇವೆ ನೀಡಲಿದೆ ಮತ್ತು ಅದು ಜನಪ್ರಿಯವಾಗಲಿದೆ” ಎಂದರು. ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಮಿತ್ ಖರೆ, ಅಸ್ಸಾಂ ಈಶಾನ್ಯ ಭಾಗದ ಹೆಬ್ಬಾಗಿಲಾಗಿದೆ ಮತ್ತು ಈಶಾನ್ಯ ಭಾಗ ಆಸಿಯಾನ್ ರಾಷ್ಟ್ರಗಳ ಹೆಬ್ಬಾಗಿಲಾಗಿದ್ದು, ಅಸ್ಸಾಂ ರಾಜ್ಯ, ಭಾರತ ಮತ್ತು ಆಸಿಯಾನ್ ನಡುವೆ ಪ್ರಮುಖ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡಲಿದೆ ಎಂದರು. ಪ್ರಸಕ್ತ ಕೋವಿಡ್-19 ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ತಾತ್ಕಾಲಿಕ ಕ್ರಮವಾಗಿ ದಿನದ 24 ಗಂಟೆಯೂ ಈಶಾನ್ಯ ರಾಜ್ಯಗಳ ಮೂಲದಿಂದ ವಾಹಿನಿಯ ಅಪ್ ಲಿಂಕ್ ಮಾಡಲಾಗುವುದು. 2020ರ ಏಪ್ರಿಲ್ ತಿಂಗಳಿನಿಂದೀಚೆಗೆ ಡಿಡಿ ನಾಗಾಲ್ಯಾಂಡ್, ಡಿಡಿ ತ್ರಿಪುರಾ, ಡಿಡಿ ಮಣಿಪುರ, ಡಿಡಿ ಮೇಘಾಲಯ ಮತ್ತು ಡಿಡಿ ಮೀಝೋರಾಂ ವಾಹಿನಿಗಳನ್ನು ತಾತ್ಕಾಲಿಕವಾಗಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ವಾಹಿನಿಗಳನ್ನಾಗಿ ಪರಿವರ್ತಿಸಲಾಗಿದೆ. ಡಿಡಿ ನ್ಯೂಸ್/ಡಿಡಿ ಇಂಡಿಯಾ ವಾಹಿನಿಗಳನ್ನು ಸೀಮಿತ ಗಂಟೆಗಳ ಕಾಲ ಬಳಸಿಕೊಳ್ಳಲಾಗುವುದು. ಮೂಲ ಕೇಂದ್ರಗಳಲ್ಲಿ ಸೀಮಿತ ಸಂಪನ್ಮೂಲಗಳನ್ನು ಬಳಕೆ ಮಾಡಿಕೊಳ್ಳಲಾಗುವುದು.
ವಿವರಗಳಿಗೆ : https://pib.gov.in/PressReleseDetail.aspx?PRID=1643288
ಭಾರತೀಯ ಸೇನೆಯಲ್ಲಿ ಮಹಿಳಾ ಅಧಿಕಾರಿಗಳಿಗೆ ಕಾಯಂ ಆಯೋಗ ಮಂಜೂರು; ಅರ್ಜಿ ಸಲ್ಲಿಕೆಯ ವಿವರವಾದ ನಿರ್ದೇಶನಗಳನ್ನು ಬಿಡುಗಡೆ ಮಾಡಿದ ಸೇನೆಯ ಕೇಂದ್ರ ಕಚೇರಿ
ಭಾರತೀಯ ಸೇನೆಯ ಮಹಿಳಾ ಅಧಿಕಾರಿಗಳಿಗೆ ಕಾಯಂ ಆಯೋಗ(ಪಿಸಿ) ನೀಡುವ ಕುರಿತ ಸರ್ಕಾರದ ಅನುಮೋದನಾ ಪತ್ರ ಸ್ವೀಕೃತಿಯೊಂದಿಗೆ ಸೇನೆಯ ಕೇಂದ್ರ ಕಚೇರಿಯಲ್ಲಿ ಮಹಿಳಾ ಅಧಿಕಾರಿಗಳಿಗೆ ಪಿಸಿ ಮಂಜೂರು ಮಾಡಲು ತಪಾಸಣೆ ನಡೆಸುವ ಉದ್ದೇಶದಿಂದ ವಿಶೇಷ ಸಂಖ್ಯೆ 5 ಆಯ್ಕೆ ಮಂಡಳಿ ಆ ಪ್ರಕ್ರಿಯೆಯನ್ನು ನಡೆಸಲಿದೆ. ಅದರ ಕೊನೆಗೆ ವಿವರವಾದ ಆಡಳಿತಾತ್ಮಕ ಸೂಚನೆಗಳನ್ನು ಸಂಬಂಧಿಸಿದ ಎಲ್ಲಾ ಮಹಿಳೆ ಅಧಿಕಾರಿಗಳಿಗೆ ತಲುಪಿಸಲಾಗಿದ್ದು, ಮಂಡಳಿಯ ಪರಿಶೀಲನೆಗಾಗಿ ಅರ್ಜಿಗಳನ್ನು ಸಲ್ಲಿಸಲು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಕೋವಿಡ್ ಸ್ಥಿತಿಗತಿಯಿಂದಾಗಿ ಪ್ರಸಕ್ತ ನಿರ್ಬಂಧಗಳನ್ನು ವಿಧಿಸಲಾಗಿರುವ ಹಿನ್ನೆಲೆಯಲ್ಲಿ ಬಹು ವಿಧದ ನಿರ್ದೇಶನಗಳನ್ನು ಎಲ್ಲಾ ಸಂಬಂಧಿಸಿದ ಮಹಿಳಾ ಅಧಿಕಾರಿಗಳಿಗೆ ಆದ್ಯತೆಯ ಮೇಲೆ ತಲುಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಆಯ್ಕೆ ಮಂಡಳಿ, ಅರ್ಜಿ ನಮೂನೆಗಳ ಪ್ರಮಾಣೀಕರಣ ಸ್ವೀಕೃತಿ ಪಡೆದ ನಂತರ ತಕ್ಷಣವೇ ಸಭೆ ಸೇರಲಿದೆ.
ವಿವರಗಳಿಗೆ :https://pib.gov.in/PressReleseDetail.aspx?PRID=1643299
ಎಂಎಚ್ಆರ್ ಡಿ ಮಾರ್ಗದರ್ಶನದಲ್ಲಿ ಪ್ರೌಢ ವಿದ್ಯಾರ್ಥಿಗಳಿಗಾಗಿ ಅಭಿವೃದ್ಧಿಗೊಳಿಸಿರುವ ಎನ್ ಸಿಇಆರ್ ಟಿಯ ಎಂಟು ವಾರದ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್ ಅನ್ನು ಬಿಡುಗಡೆಗೊಳಿಸಿದ ಕೇಂದ್ರ ಎಚ್ಆರ್ ಡಿ ಸಚಿವರು
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಖ್ ಅವರು ನಿನ್ನೆ ವರ್ಚುಯಲ್ ರೂಪದಲ್ಲಿ ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳಿಗೆ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿದರು. ಕೋವಿಡ್-19 ಹಿನ್ನೆಲೆಯಲ್ಲಿ ಮನೆಯಲ್ಲೇ ಇರುವ ವಿದ್ಯಾರ್ಥಿಗಳನ್ನು ಅವರ ಪೋಷಕರು ಮತ್ತು ಶಿಕ್ಷಕರ ಸಹಾಯದಿಂದ ಅರ್ಥಪೂರ್ಣವಾಗಿ ಬಳಕೆ ಮಾಡಿಕೊಂಡು ಪರ್ಯಾಯ ಶೈಕ್ಷಣಿಕ ಚಟುವಟಿಕೆಗಳ ಮೂಲಕ ಉತ್ತೇಜಿಸಲು ಎನ್ ಸಿಇಆರ್ ಟಿ ಈ ವೇಳಾಪಟ್ಟಿ ಸಿದ್ಧಪಡಿಸಿದೆ. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಕೋವಿಡ್ -19 ಸಮಯದಲ್ಲಿ ಆನ್ ಲೈನ್ ಕಲಿಕಾ ಸಂಪನ್ಮೂಲಗಳನ್ನು ಬಳಸಿಕೊಂಡು ಸಕಾರಾತ್ಮಕ ಮಾರ್ಗಗಳ ಮೂಲಕ ವಿದ್ಯಾರ್ಥಿಗಳು, ಶಿಕ್ಷಕರು, ಶಾಲಾ ಪ್ರಾಂಶುಪಾಲರು ಮತ್ತು ಪೋಷಕರನ್ನು ಸಬಲೀಕರಣಗೊಳಿಸಲು ಈ ಕ್ಯಾಲೆಂಡರ್ ನೆರವಾಗಲಿದೆ ಮತ್ತು ಕಲಿಕಾ ಫಲಿತಾಂಶ ಸುಧಾರಣೆಯಾಗಲಿದೆ ಎಂದರು. ಅಲ್ಲದೆ, ಈ ಕ್ಯಾಲೆಂಡರ್ ಆಸಕ್ತಿಕರ ರೂಪದಲ್ಲಿ ಮತ್ತು ನಗೆಯೊಂದಿಗೆ ಶಿಕ್ಷಣವನ್ನು ನೀಡಲು ಲಭ್ಯವಿರುವ ನಾನಾ ತಾಂತ್ರಿಕ ಹಾಗೂ ಸಾಮಾಜಿಕ ಮಾಧ್ಯಮ ಉಪಕರಣಗಳನ್ನು ಬಳಸಿಕೊಳ್ಳಲು ಮಾರ್ಗಸೂಚಿಗಳನ್ನು ನೀಡಲಿದೆ ಮತ್ತು ಅವುಗಳನ್ನು ಕಲಿಕಾರ್ಥಿ, ಪೋಷಕರು ಮತ್ತು ಶಿಕ್ಷಕರು ಮನೆಯಲ್ಲಿ ಬಳಕೆ ಮಾಡಬಹುದು.
ವಿವರಗಳಿಗೆ : https://pib.gov.in/PressReleseDetail.aspx?PRID=1643209
ಪೂರ್ವ ರೈಲ್ವೆ (ಇಆರ್ ) ನಿಂದ ಲಾಕ್ ಡೌನ್ ಸಮಯದಲ್ಲಿ ಇ-ಹರಾಜು ಮೂಲಕ ರದ್ದಿ ಮಾರಾಟದಿಂದ ದಾಖಲೆಯ 29 ಕೋಟಿ ರೂ. ಗಳಿಕೆ ಸಾಧನೆ
ಮಾರಕ ಕೊರೊನಾ ಸಾಂಕ್ರಾಮಿಕ ವೈರಾಣುವಿನಿಂದ ಲಾಕ್ ಡೌನ್ ಘೋಷಣೆಯಾದ ಕಾರಣ ರೈಲ್ವೆ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಮಾಡದಿರುವುದರಿಂದ ರೈಲ್ವೆ ಆದಾಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಆದರೆ ಪೂರ್ವ ರೈಲ್ವೆ (ಇಆರ್ ) ಸಾಧ್ಯವಾದಷ್ಟೂ ಉತ್ತಮ ಸಾಧನೆ ಮಾಡಲು ಪ್ರಯತ್ನಿಸುತ್ತಿದೆ. ಇಆರ್ ನ ಸಾಮಗ್ರಿಗಳ ನಿರ್ವಹಣಾ ಇಲಾಖೆ, ಈ ಅವಧಿಯಲ್ಲಿ ರೈಲ್ವೆಯ ನಾನಾ ಚಟುವಟಿಕೆಗಳಿಂದ ಉತ್ಪತ್ತಿಯಾಗಿದ್ದ ತನ್ನ ರದ್ದಿಯನ್ನು ಹೊಸ
ವಿಧಾನಗಳ ಮೂಲಕ ಮಾರಾಟ ಮಾಡಿ ಆದಾಯ ಗಳಿಸಿದೆ. ಲಾಕ್ ಡೌನ್ ಅವಧಿಯಲ್ಲಿ ಇಆರ್ ರದ್ದಿ ವಸ್ತುಗಳನ್ನು 29 ಕೋಟಿ ರೂ.ಗೆ ಮಾರಾಟ ಮಾಡಿದೆ. ಇಲಾಖೆ 2020ರ ಏಪ್ರಿಲ್ ನಿಂದ ಜುಲೈ ತಿಂಗಳವರೆಗೆ ರೈಲು ಮಾರ್ಗಗಳು ಮತ್ತು ಕಾರ್ಯಾಗಾರಗಳಲ್ಲಿದ್ದ ರದ್ದಿಯನ್ನು ಗುರ್ತಿಸಿ ಒಟ್ಟು ಮಾಡಿದೆ.
ವಿವರಗಳಿಗೆ : https://pib.gov.in/PressReleasePage.aspx?PRID=1643219
ಪಿ ಐ ಬಿ ಪ್ರಾದೇಶಿಕ ಕಚೇರಿಗಳ ಮಾಹಿತಿ
- ಮಹಾರಾಷ್ಟ್ರ: ಮಹತ್ವದ ಲಾಕ್ ಡೌನ್ ನಿಯಮ ಸಡಿಲಿಕೆಯಲ್ಲಿ, ಗ್ರೇಟರ್ ಮುಂಬೈ ಮುನಿಸಿಪಲ್ ಕಾರ್ಪೋರೇಷನ್- ಎಂಸಿಜಿಎಂ ಸಮ-ಬೆಸ ನಿಯಮಕ್ಕೆ ಬದಲಾಗಿ ಬುಧವಾರದಿಂದ ಎಲ್ಲ ಅಂಗಡಿ ಮಳಿಗೆಗಳು ವಾರದ ಎಲ್ಲ ದಿನವೂ ತೆರೆಯಲು ಅವಕಾಶ ನೀಡಿದೆ. ಮಾಲ್ ಮತ್ತು ಮಾರುಕಟ್ಟೆಗಳಿಗೆ ಬಳಿಗ್ಗೆ 9ರಿಂದ ಸಂಜೆ 7ರವರೆಗೆ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಲಾಗಿದೆ. ಆದರೆ ಚಿತ್ರಮಂದಿರ, ಫುಡ್ ಕೋರ್ಟ್/ರೆಸ್ಟೋರೆಂಟ್ ಗಳಿಗೆ ನಿರ್ಬಂಧ ಮುಂದುವರಿಯಲಿದೆ. ಮುಂಬೈನಲ್ಲಿ ಕೋವಿಡ್ ಸೋಂಕು ಹರಡುವಿಕೆ ಪ್ರಮಾಣ ಕ್ರಮೇಣ ತಗ್ಗುತ್ತಿದ್ದು, ನಗರದಲ್ಲಿ ಹಲವು ದಿನ 1ಸಾವಿರಕ್ಕೂ ಕಡಿಮೆ ಪ್ರಕರಣಗಳು ದಾಖಲಾಗುತ್ತಿವೆ. ಆದರೂ ಮಹಾರಾಷ್ಟ್ರದಲ್ಲಿ 1.47 ಲಕ್ಷ ಸಕ್ರಿಯ ಪ್ರಕರಣಗಳಿವೆ.
- ಗುಜರಾತ್: ಅಹಮದಾಬಾದ್ ಮುನಿಸಿಪಲ್ ಕಾರ್ಪೋರೇಷನ್ (ಎಎಂಸಿ) ಮತ್ತೆ ನಾಲ್ಕು ಪ್ರದೇಶಗಳನ್ನು ಸೂಕ್ಷ್ಮ ನಿರ್ಬಂಧಿತ ವಲಯಗಳನ್ನಾಗಿ ಸೇರ್ಪಡೆ ಮಾಡಿದೆ. ಆ ಪ್ರದೇಶಗಳಲ್ಲಿ ಮನೆ ಮನೆ ಸಮೀಕ್ಷೆ ಮತ್ತು ಪರೀಕ್ಷಾ ಆಂದೋಲನ ಮಂಗಳವಾರ (ಇಂದಿನಿಂದ) ಆರಂಭಿಸಲಾಗುವುದು. ಎಎಂಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮ ಉಲ್ಲಂಘಿಸಿದ್ದಕ್ಕಾಗಿ ನಗರದ ಆಲ್ಫಾ ಮಾಲ್ ಅನ್ನು ಸೀಲ್ ಡೌನ್ ಮಾಡಿದೆ. ಗುಜರಾತ್ ನಲ್ಲಿ ಸೋಮವಾರ 1009 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 974 ಮಂದಿ ಗುಣಮುಖರಾಗಿದ್ದಾರೆ. ಹಾಗಾಗಿ ಅಲ್ಲಿ ಸದ್ಯ 14,614 ಸಕ್ರಿಯ ಪ್ರಕರಣಗಳಿವೆ.
- ರಾಜಸ್ಥಾನ: ರಾಜಸ್ಥಾನದಲ್ಲಿ ಹೊಸದಾಗಿ 1145 ಕೋವಿಡ್ ಸೋಂಕಿನ ಪ್ರಕರಣಗಳು ದೃಢಪಡುವುದರೊಂದಿಗೆ ರಾಜ್ಯದಲ್ಲಿ ಸೋಂಕು ಪ್ರಕರಣಗಳು ಒಟ್ಟು ಸಂಖ್ಯೆ 45,555ಕ್ಕೆ ಏರಿಕೆಯಾಗಿದೆ. ಆದರೆ ಸಕ್ರಿಯ ಪ್ರಕರಣಗಳ ಸಂಖ್ಯೆ 12, 785. ರಾಜ್ಯ ಸರ್ಕಾರ ಆಳ್ವಾರ್, ಬರ್ಮೇರ್ ಮತ್ತು ಬಿಕನೇರ್ ಜಿಲ್ಲೆಗಳಲ್ಲಿ ಸೋಂಕು ಹರಡುವುದನ್ನು ನಿಯಂತ್ರಿಸಲು ಮತ್ತೆ ಲಾಕ್ ಡೌನ್ ಜಾರಿಗೊಳಿಸಲು ಚಿಂತನೆ ನಡೆಸಿದೆ.
- ಮಧ್ಯಪ್ರದೇಶ: ಮಧ್ಯಪ್ರದೇಶದಲ್ಲಿ ಅಧಿಕಾರಿಗಳು ಸೇರಿದಂತೆ 588 ಮಂದಿ ಪೊಲೀಸರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು, ಈವರೆಗೆ ಸುಮಾರು 2,000 ಮಂದಿ ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ರಾಜ್ಯದಲ್ಲಿ ಸೋಮವಾರ 750 ಹೊಸ ಪ್ರಕರಣ ಪತ್ತೆಯಾಗಿವೆ.
- ಛತ್ತೀಸ್ ಗಢ: ಆರ್ ಟಿ-ಪಿಸಿಆರ್ ಆಧರಿಸಿ ಕೋವಿಡ್ ಪರೀಕ್ಷೆಗಳು ಇಂದಿನಿಂದ ಅಂಬಿಕಾಪುರ್ ವೈದ್ಯಕೀಯ ಕಾಲೇಜಿನಲ್ಲಿ ಆರಂಭವಾಗಿವೆ. ಐಸಿಎಂಆರ್ ಇತ್ತೀಚೆಗೆ ರಾಜ್ಯದ ಬಿಲಾಸ್ ಪುರ್, ಅಂಬಿಕಾಪುರ ಮತ್ತು ರಂಜನ್ ನಂದಗಾಂವ್ ಗಳಲ್ಲಿ ಹೊಸದಾಗಿ ನಿರ್ಮಿಸಿರುವ ವೈದ್ಯಕೀಯ ಕಾಲೇಜುಗಳಲ್ಲಿನ ಬಿಎಸ್ ಎಲ್ -2 ಪ್ರಯೋಗಾಲಯಗಳಲ್ಲಿ ಆರ್ ಟಿ-ಪಿಸಿಆರ್ ಪರೀಕ್ಷೆಗಳನ್ನು ನಡೆಸಲು ಅನುಮತಿ ನೀಡಿತ್ತು. ಛತ್ತೀಸ್ ಗಢದಲ್ಲಿ ಒಟ್ಟು ಸಕ್ರಯ ಕೋವಿಡ್ ಪ್ರಕರಣಗಳ ಸಂಖ್ಯೆ 2503.
- ಕೇರಳ: ರಾಜ್ಯದಲ್ಲಿ ಮೂರು ಮಂದಿ ಕೋವಿಡ್ ನಿಂದಾಗಿ ಸಾವನ್ನಪ್ಪುವುದರೊಂದಿಗೆ ಒಟ್ಟು ಸೋಂಕಿಗೆ ಬಲಿಯಾದ ಸಂಖ್ಯೆ 87ಕ್ಕೆ ಏರಿಕೆಯಾಗಿದೆ. ಕೋವಿಡ್ ನಿಯಂತ್ರಣ ಹೊಣೆಗಾರಿಕೆಯನ್ನು ಪೊಲೀಸರಿಗೆ ನೀಡುವ ಸರ್ಕಾರದ ನಿರ್ಧಾರದ ವಿರುದ್ಧ ಆರೋಗ್ಯ ವಲಯದ ನಾನಾ ಸಂಸ್ಥೆಗಳು ಒಂದುಗೂಡುತ್ತಿವೆ. ಐಎಂಎ, ಕೇರಳ ಸರ್ಕಾರಿ ವೈದ್ಯಾಧಿಕಾರಿಗಳ ಒಕ್ಕೂಟ, ಆರೋಗ್ಯ ನಿರೀಕ್ಷಕರ ಒಕ್ಕೂಟ ಮತ್ತಿತರ ಸಂಸ್ಥೆಗಳು ನಿರ್ಧಾರವನ್ನು ವಿರೋಧಿಸಿವೆ. ಈ ಮಧ್ಯೆ, ಕೋವಿಡ್ ನಿಯಂತ್ರಣ ಚಟುವಟಿಕೆಗಳ ರಾಜ್ಯ ಮಟ್ಟದ ನೋಡಲ್ ಐಪಿಎಸ್ ಅಧಿಕಾರಿ ವಿಜಯ್ ಸಖ್ರೆ, ಕಡ್ಡಾಯ ಕ್ವಾರಂಟೈನ್, ಮೂಲ ಪತ್ತೆ ಮತ್ತು ನಿರ್ಬಂಧಿತ ವಲಯಗಳನ್ನು ನಿರ್ದಿಷ್ಟವಾಗಿ ಗುರುತಿಸುವುದು ಸೇರಿದಂತೆ ಕಾರ್ಯತಂತ್ರಗಳ ಮೂಲಕ ಪೊಲೀಸರು ಸೋಂಕು ಹರಡುವುದನ್ನು ನಿಯಂತ್ರಿಸುತ್ತಾರೆ ಎಂದು ಹೇಳಿದ್ದಾರೆ. ಕೇರಳದಲ್ಲಿ ನಿನ್ನೆ 962 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಸದ್ಯ 11,484 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ರಾಜ್ಯಾದ್ಯಂತ 1.45 ಲಕ್ಷ ಜನರು ನಿಗಾದಲ್ಲಿದ್ದಾರೆ.
- ತಮಿಳುನಾಡು: ಐಐಟಿ-ಎಂ ಮತ್ತು ಆರೋಗ್ಯರಕ್ಷಣಾ ನವೋದ್ಯಮದಿಂದ ರೋಗಿಗಳ ನಿಗಾಕ್ಕೆ ಸಾಧನವನ್ನು ಅಭಿವೃದ್ಧಿಪಡಿಸಲಾಗಿದ್ದು, ಕಡಿಮೆ ವೆಚ್ಚದ ಈ ಸಾಧನವನ್ನು ನಗರದ ಆಸ್ಪತ್ರೆಗಳಲ್ಲಿ ಸುಮಾರು 2000 ರೋಗಿಗಳ ಮೇಲೆ ನಿಗಾವಹಿಸಲು ನಿಯೋಜಿಸಲಾಗಿದೆ. ಮಾನವ ಸಂಪನ್ಮೂಲ ಕೊರತೆ ಮತ್ತು ಸೋಂಕು ಹರಡುವ ಭೀತಿಯಿಂದ ಜನರು ಹೋಟೆಲ್ ಗಳಿಂದ ದೂರ ಉಳಿಯುತ್ತಿದ್ದಾರೆ ಮತ್ತು ನಗರದ ಶೇ.20ರಷ್ಟು ಹೊಟೇಲ್ ಗಳು ಮಾತ್ರ ಗ್ರಾಹಕರನ್ನು ಒಳಗೆ ಪ್ರವೇಶಿಸಿಕೊಳ್ಳುತ್ತಿವೆ. ಕೊಯಮತ್ತೂರಿನಲ್ಲಿ ಕೋವಿಡ್ ಪಾಸಿಟಿವ್ ದರ ಶೇ.8.39ಕ್ಕೆ ಏರಿಕೆಯಾಗಿದೆ, ಆರೋಗ್ಯಾಧಿಕಾರಿಗಳ ಪ್ರಕಾರ ಹಾಟ್ ಸ್ಪಾಟ್ ಗಳಲ್ಲಿ ಹೊಸ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಧಿಡೀರ್ ಸೋಂಕು ದರ ಹೆಚ್ಚಲು ಕಾರಣ ಎಂದು ಹೇಳಿದ್ದಾರೆ. ನಿನ್ನೆ ತಮಿಳುನಾಡಿನಲ್ಲಿ 5609 ಹೊಸ ಪ್ರಕರಣ ಪತ್ತೆಯಾಗಿದ್ದು, 5800 ಮಂದಿ ಗುಣಮುಖರಾಗಿದ್ದಾರೆ ಮತ್ತು 109 ಸಾವುಗಳು ಸಂಭವಿಸಿವೆ. ಇದರಿಂದಾಗಿ ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 2,63,222, ಸಕ್ರಿಯ ಪ್ರಕರಣಗಳು 56,698 ಮತ್ತು ಸಾವು 4241.
- ಕರ್ನಾಟಕ: ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಂತರ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೂ ಕೋವಿಡ್ ಸೋಂಕು ದೃಢಪಟ್ಟಿದೆ. ಕರ್ನಾಟಕ ಹೈಕೋರ್ಟ್, ಸದ್ಯಕ್ಕೆ ನ್ಯಾಯಾಲಯಗಳು ಮಾಮೂಲಿಯಾಗಿ ನಿರ್ವಹಿಸುವುದು ಕಷ್ಟಕರ ಎಂದು ಹೇಳಿದೆ. ಆರೋಗ್ಯ ಸೇತು ಆಪ್ ಅನ್ನು ಕಡ್ಡಾಯವಾಗಿ ಡೌನ್ ಲೋಡ್ ಮಾಡಿಕೊಳ್ಳದವರಿಗೆ ಸೇವೆಗಳನ್ನು ನಿರಾಕರಿಸಲಾಗುತ್ತಿದೆ ಎಂಬ ಬಗ್ಗೆ ಸ್ಪಷ್ಟಪಡಿಸುವಂತೆ ಹೈಕೋರ್ಟ್ ಸೋಮವಾರ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಕೇಳಿದೆ. ಸಕ್ರಿಯ ಕೋವಿಡ್ ಪ್ರಕರಣಗಳಲ್ಲಿ ಕರ್ನಾಟಕ ಮೂರನೇ ಸ್ಥಾನಕ್ಕೆ ಇಳಿಕೆಯಾಗಿದ್ದು, ರಾಜ್ಯದಲ್ಲಿ ಗುಣಮುಖರಾದವರ ಪ್ರಮಾಣವೂ ಶೇ.42.81ರಿಂದ ಶೇ.44.78ಕ್ಕೆ ಏರಿಕೆಯಾಗಿದೆ. ನಿನ್ನೆ ಒಟ್ಟು 4752 ಹೊಸ ಪ್ರಕರಣ ವರದಿಯಾಗಿದ್ದು, 4776 ಮಂದಿ ಗುಣಮುಖರಾಗಿದ್ದಾರೆ ಮತ್ತು 98 ಸಾವು ಸಂಭವಿಸಿವೆ. ಒಟ್ಟು ಪ್ರಕರಣಗಳು 1,39,571, ಸಕ್ರಿಯ ಪ್ರಕರಣಗಳು: 74,469, ಸಾವು: 2594.
- ಆಂಧ್ರಪ್ರದೇಶ: ಆಂಧ್ರಪ್ರದೇಶದಲ್ಲಿ ಕೊರೊನಾದಿಂದ ಸಂತ್ರಸ್ತವಾದ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಕುರಿತು ಸರ್ಕಾರ ಆದೇಶವನ್ನು ಹೊರಡಿಸಿದೆ.ಕೊರೊನಾ ಸೋಂಕಿನಿಂದ ಮೃತಪಟ್ಟವರ ಕುಟುಂಬಕ್ಕೆ ಅಂತ್ಯಕ್ರಿಯೆ ನಡೆಸಲು 15ಸಾವಿರ ರೂ.ಗಳನ್ನು ಮತ್ತು ಸೋಂಕಿನಿಂದ ಗುಣಮುಖರಾಗಿ ಪ್ಲಾಸ್ಮಾ ದಾನ ಮಾಡಲು ಮುಂದಾಗುವವರಿಗೆ ತಲಾ 5,000 ರೂ. ನೀಡಲು ಜಿಲ್ಲಾ ಕಲೆಕ್ಟರ್ ಗಳಿಗೆ ನಿರ್ದೇಶಿಸಲಾಗಿದೆ. ಅನಂತಪುರ್ ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಸುವಲ್ಲಿ ಯಶಸ್ವಿಯಾಗಿರುವ ಜಿಲ್ಲಾ ಕಲೆಕ್ಟರ್ ಕ್ರಮಗಳ ಬಗ್ಗೆ ಕೇಂದ್ರ ಸರ್ಕಾರ ಶ್ಲಾಘಿಸಿದೆ. ರಾಜ್ಯದಲ್ಲಿ ನಿನ್ನೆ 7822 ಹೊಸ ಪ್ರಕರಣಗಳ ಪತ್ತೆಯಾಗಿದ್ದು, 5786 ಮಂದಿ ಗುಣಮುಖರಾಗಿದ್ದು, 63 ಸಾವು ಸಂಭವಿಸಿವೆ.ಒಟ್ಟು ಪ್ರಕರಣಗಳು : 1,66,586: ಸಕ್ರಿಯ ಪ್ರಕರಣಗಳು: 76,377: ಸಾವು: 1537
- ತೆಲಂಗಾಣ: ಹೈದ್ರಾಬಾದ್ ನ ಸೆಂಟರ್ ಫಾರ್ ಸೆಲ್ಯೂಲಾರ್ ಅಂಡ್ ಮಾಲೆಕ್ಯೂಲರ್ ಬಯಾಲಜಿ (ಸಿಸಿಎಂಬಿ) 400 ಜಿನೋಮ್ ಸರಣಿಯ ಸಂಕೇತಗಳನ್ನು ಬಿಡಿಸಿದೆ ಮತ್ತು ಸಾರ್ಸ್-ಸಿಒವಿ-2 (ಕೊರೊನಾ ವೈರಸ್ ) ಜಾಗತಿಕ ದತ್ತಾಂಶಕ್ಕೆ ಸಲ್ಲಿಕೆ ಮಾಡಿದೆ. ಈವರೆಗೆ ಸುಮಾರು 2000 ಜಿನೋಮ್ ಗಳ ಸರಣಿಯನ್ನು ಜಿಐಸ್ ಎಐಡಿ ದತ್ತಾಂಶಕ್ಕೆ ಭಾರತ ಸಲ್ಲಿಸಿದ್ದು, ಅವುಗಳಲ್ಲಿ ಬಹುತೇಕ ಸಿಸಿಎಂಬಿಯದ್ದಾಗಿದೆ. ಕಳೆದ 24 ಗಂಟೆಗಳಲ್ಲಿ 1286 ಹೊಸ ಪ್ರಕರಣಗಳು, 1066 ಮಂದಿ ಗುಣಮುಖ ಮತ್ತು 12 ಸಾವು ಸಂಭವಿಸಿವೆ. ಆ 1286 ಪ್ರಕರಣಗಳಲ್ಲಿ 391 ಜಿಎಚ್ ಎಂಸಿಯಲ್ಲಿ ವರದಿಯಾಗಿವೆ. ಒಟ್ಟು ಪ್ರಕರಣಗಳು: 68,946: ಸಕ್ರಿಯ ಪ್ರಕರಣಗಳು: 18,708: ಸಾವು: 563: ಗುಣಮುಖರಾಗಿ ಬಿಡುಗಡೆಯಾದವರು: 49,765
- ಮಣಿಪುರ: ಮಣಿಪುರದ ಸಾಮಾಜ ಕಲ್ಯಾಣ ಸಚಿವ ಶ್ರಿ ಕಿಪ್ ಗೆನ್ ನೆಮ್ಚಾ , ಕಾಂಗ್ ಪೋಕ್ಪಿಯ ಲೈಕೋಪ್ ನಲ್ಲಿನ ಡಯಟ್ ಕೇಂದ್ರದಲ್ಲಿ ಜಿಲ್ಲಾ ಕೋವಿಡ್ ಆರೈಕೆ ಕೇಂದ್ರವನ್ನು ಉದ್ಘಾಟಿಸಿದರು. ಕೊರೊನಾ ಯೋಧರಿಗೆ ಸೋಂಕು ತಗುಲುವುದನ್ನು ತಪ್ಪಿಸಲು ಆಸ್ಪತ್ರೆಯ ಎಲ್ಲ ವೈದ್ಯರು, ನರ್ಸ್ ಹಾಗೂ ಇನ್ನಿತರ ಸಿಬ್ಬಂದಿಗೆ ಅಗತ್ಯ ಪಿಪಿಇ ಕಿಟ್, ಎನ್ 95 ಮಾಸ್ಕ್ , ಫೇಸ್ ಶೀಲ್ಡ್, ಗ್ಲೌಸ್ ಹಾಗೂ ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ನೀಡಲಾಗಿದೆ ಎಂದು ಮಣಿಪುರದ ಜೆ ಎನ್ ಐಎಂಎಸ್ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
- ಮಿಝೋರಾಂ: ಮಿಝೋರಾಂನಲ್ಲಿ ಬಹುನಿರೀಕ್ಷಿತ “ತೇನ್ ಜ್ವಾಲ್ ಗಾಲ್ಫ್ ರೆಸಾರ್ಟ್ ‘ ಅನ್ನು ಗೌರವಾನ್ವಿತ ಪ್ರವಾಸೋದ್ಯಮ ಸಚಿವ (ಸ್ವತಂತ್ರ ಹೊಣೆಗಾರಿಕೆ) ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್ ಇಂದು ಉದ್ಘಾಟಿಸಿದರು. ಈ ಯೋಜನೆಯನ್ನು ಸ್ವದೇಶ ದರ್ಶನ ಯೋಜನೆಯಲ್ಲಿ ಅನುಷ್ಠಾನಗೊಳಿಸಲಾಗಿದೆ.
- ನಾಗಾಲ್ಯಾಂಡ್: ನಾಗಾಲ್ಯಾಂಡ್ ನಲ್ಲಿ ಇಂದು 276 ಹೊಸ ಕೋವಿಡ್ -19 ಪ್ರಕರಣಗಳು ದೃಢಪಟ್ಟಿವೆ. ಅವುಗಳಲ್ಲಿ ದಿಮಾಪುರ್ ನಲ್ಲಿ 187 ಹಾಗೂ ಮೊನ್ ನಲ್ಲಿ 89 ಪ್ರಕರಣಗಳು ಸೇರಿವೆ.
- ಸಕ್ಕಿಂ: ಸಿಕ್ಕಿಂನಲ್ಲಿ ಇಂದು 95 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ. ಹಾಗಾಗಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 473ಕ್ಕೆ ಏರಿಕೆಯಾಗಿದೆ. ಈವರೆಗೆ 761 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡು ಒಬ್ಬರು ಸಾವನ್ನಪ್ಪಿದ್ದಾರೆ. ಸಿಕ್ಕಿಂನಲ್ಲಿ ಈವರೆಗೆ 28,089 ಪರೀಕ್ಷೆಗಳನ್ನು ನಡೆಸಲಾಗಿದೆ.
***
(Release ID: 1643499)
Visitor Counter : 528
Read this release in:
English
,
Urdu
,
Hindi
,
Marathi
,
Assamese
,
Manipuri
,
Bengali
,
Gujarati
,
Tamil
,
Telugu
,
Malayalam