ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ವಿಶ್ವದ ಅತಿ ದೊಡ್ಡ ಆನ್ ಲೈನ್ ಹ್ಯಾಕಥಾನ್ ಗ್ರ್ಯಾಂಡ್ ಫಿನಾಲೆ ಉದ್ದೇಶಿಸಿ ಭಾಷಣ ಮಾಡಲಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

Posted On: 27 JUL 2020 5:24PM by PIB Bengaluru

2020 ಆಗಸ್ಟ್ 1 ರಂದು ವಿಶ್ವದ ಅತಿ ದೊಡ್ಡ ಆನ್ ಲೈನ್ ಹ್ಯಾಕಥಾನ್ ಗ್ರ್ಯಾಂಡ್ ಫಿನಾಲೆ ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಲಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

2020 ಆಗಸ್ಟ್ 1 ರಿಂದ 3 ವರೆಗೆ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ – 2020 ನಾಲ್ಕನೇ ಆವೃತ್ತಿಯ ಗ್ರ್ಯಾಂಡ್ ಫಿನಾಲೆ - ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್

ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಎಸ್ಐಎಚ್ 2020 ಗ್ರ್ಯಾಂಡ್ ಫಿನಾಲೆ ಆನ್ ಲೈನ್ ಮೂಲಕ ಆಯೋಜನೆ; ಅತ್ಯಾಧುನಿಕವಾಗಿ ನಿರ್ಮಿಸಿರುವ ವಿಶೇಷ ವೇದಿಕೆಯಡಿ ದೇಶದ ನಾನಾ ಭಾಗಗಳ ಪ್ರತಿನಿಧಿಗಳ ಸಂಪರ್ಕ

36 ಗಂಟೆಗಳ ಆನ್ ಲೈನ್ ಗ್ರ್ಯಾಂಡ್ ಫಿನಾಲೆಯಲ್ಲಿ 10,000ಕ್ಕೂ ಅಧಿಕ ಪ್ರತಿನಿಧಿಗಳು ಭಾಗಿ; ಸರ್ಕಾರದ ಇಲಾಖೆಗಳು ಮತ್ತು ಉದ್ಯಮದಲ್ಲಿರುವ ಜ್ವಲಂತ ಸಮಸ್ಯೆಗಳಿಗೆ ಹೊಸ ಬಗೆಯ ಡಿಜಿಟಲ್ ಪರಿಹಾರಗಳ ಅಭಿವೃದ್ಧಿ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2020 ಆಗಸ್ಟ್ 1 ರಂದು ಸಂಜೆ 7 ಗಂಟೆಗೆ ವಿಶ್ವದ ಅತಿದೊಡ್ಡ ಆನ್ ಲೈನ್ ಹ್ಯಾಕಥಾನ್ ಗ್ರ್ಯಾಂಡ್ ಫಿನಾಲೆಯನ್ನುದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಲಿದ್ದಾರೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ದೆಹಲಿಯಲ್ಲಿಂದು ವಿಷಯವನ್ನು ಪ್ರಕಟಿಸಿ, 2020 ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್(ಸಾಫ್ಟ್ ವೇರ್) ಗ್ರ್ಯಾಂಡ್ ಫಿನಾಲೆ 2020 ಆಗಸ್ಟ್ 1 ರಿಂದ 3 ರವರೆಗೆ ನಡೆಯಲಿದೆ ಎಂದರು. ಹ್ಯಾಕಥಾನ್ ಅನ್ನು ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ(ಎಐಸಿಟಿಇ), ಪರ್ಸಿಸ್ಟೆಂಟ್ ಸಿಸ್ಟಮ್ಸ್ ಮತ್ತು 4ಸಿ ಸೇರಿ ಆಯೋಜಿಸಿವೆ.

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅಧ್ಯಕ್ಷತೆಯಲ್ಲಿಂದು ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಉನ್ನತ ಮಟ್ಟದ ಸಭೆ ನಡೆಯಿತು ಮತ್ತು ಹಿಂದೆ ನಡೆಸಿದ ಹ್ಯಾಕಥಾನ್ ಗಳ ಸಾಧನೆಗಳ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಉನ್ನತ ಶಿಕ್ಷಣ ಕಾರ್ಯದರ್ಶಿ ಶ್ರೀ ಅಮಿತ್ ಖರೆ, ಎಐಸಿಟಿಇ ಅಧ್ಯಕ್ಷ ಶ್ರೀ ಅನಿಲ್ ಸಹಸ್ರಬುಧೆ, ಎಂಎಚ್ಆರ್ ಡಿ ಹೆಚ್ಚುವರಿ ಕಾರ್ಯದರ್ಶಿ ಶ್ರೀ ರಾಕೇಶ್ ರಂಜನ್ ಮತ್ತು ಎಂಎಚ್ಆರ್ ಡಿಯ ಚೀಫ್ ಇನೋವೇಶನ್ ಆಫೀಸರ್ ಶ್ರೀ ಅಭಯ್ ಜಿರೆ ಭಾಗವಹಿಸಿದ್ದರು.

ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ನಮ್ಮ ದೇಶ ಎದುರಿಸುತ್ತಿರುವ ಸವಾಲುಗಳಿಗೆ ಆಧುನಿಕ ರೀತಿಯಲ್ಲಿ ಡಿಜಿಟಲ್ ತಂತ್ರಜ್ಞಾನದ ಮೂಲಕ ಪರಿಹಾರಗಳನ್ನು ಕಂಡುಕೊಳ್ಳುವುದು ಮತ್ತು ವಿನೂತನ ರೀತಿಯ ಆವಿಷ್ಕಾರಗಳನ್ನು ಕೈಗೊಳ್ಳುವ ವಿನೂತನ ಯೋಜನೆಯಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು. ಇದು ತಡೆರಹಿತ ಡಿಜಿಟಲ್ ಉತ್ಪನ್ನಗಳ ಅಭಿವೃದ್ಧಿ ಸ್ಪರ್ಧೆಯಾಗಿದೆ. ಇಲ್ಲಿ ತಾಂತ್ರಿಕ ವಿದ್ಯಾರ್ಥಿಗಳಿಗೆ ಸಮಸ್ಯೆಗಳನ್ನು ತಿಳಿಸಿ, ವಿನೂತನ ಪರಿಹಾರಗಳನ್ನು ಸಲಹೆ ಮಾಡುವಂತೆ ಕೇಳಲಾಗುತ್ತಿದೆ. ಸರ್ಕಾರದ ಇಲಾಖೆಗಳು ಮತ್ತು ಖಾಸಗಿ ವಲಯದ ಸಂಸ್ಥೆಗಳು ಎದುರಿಸುತ್ತಿರುವ ಸವಾಲುಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲು ವಿದ್ಯಾರ್ಥಿಗಳಿಗೆ ಒಂದು ವೇದಿಕೆಯಾಗಿದೆ. ಅವರುಗಳು ಚೌಕಟ್ಟಿನಿಂದಾಚೆ ಯೋಚಿಸಬಹುದು ಮತ್ತು ವಿಶ್ವ ದರ್ಜೆಯ ಪರಿಹಾರಗಳನ್ನು ನೀಡಬಹುದಾಗಿದೆ.

ಎಸ್ಐಎಚ್ 2020ಗೆ ಕಾಲೇಜು ಮಟ್ಟದ ಹ್ಯಾಕಥಾನ್ ಗಳ ಮೂಲಕ ಕಳೆದ ಜನವರಿಯಲ್ಲಿಯೇ ಮೊದಲ ಹಂತದಲ್ಲಿ ವಿದ್ಯಾರ್ಥಿಗಳ ಚಿಂತನೆಗಳನ್ನು ಪರಿಶೀಲಿಸಲಾಗಿತ್ತು. ಕಾಲೇಜು ಮಟ್ಟದಲ್ಲಿ ವಿಜಯಿಯಾದ ತಂಡಗಳಿಗೆ ಎಸ್ಐಎಚ್ ರಾಷ್ಟ್ರೀಯ ಸುತ್ತಿನಲ್ಲಿ ಭಾಗವಹಿಸಲು ಅರ್ಹತೆ ನೀಡಲಾಗಿತ್ತು. ಮತ್ತೆ ರಾಷ್ಟ್ರಮಟ್ಟದಲ್ಲಿ ನಾನಾ ಚಿಂತನೆಗಳನ್ನು ತಜ್ಞರು ಮತ್ತು ಮೌಲ್ಯಮಾಪಕರು ಪರಿಶೀಲನೆ ನಡೆಸಿ ಕೇವಲ ಅಂತಿಮ ಹಂತಕ್ಕೆ ಆಯ್ಕೆಯಾದ ತಂಡಗಳು ಮಾತ್ರ ಗ್ರ್ಯಾಂಡ್ ಫಿನಾಲೆಯಲ್ಲಿ ಸ್ಪರ್ಧಿಸಲಿವೆ.

ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಗ್ರ್ಯಾಂಡ್ ಫಿನಾಲೆ ಎಸ್ಐಎಚ್ 2020ಯನ್ನು ಆನ್ ಲೈನ್ ಮೂಲಕ ಆಯೋಜಿಸಲಾಗುತ್ತಿದ್ದು, ಅತ್ಯಾಧುನಿಕವಾಗಿ ನಿರ್ಮಿಸಿರುವ ವಿಶೇಷ ವೇದಿಕೆಯಲ್ಲಿ ದೇಶಾದ್ಯಂತ ಎಲ್ಲ ಪ್ರತಿನಿಧಿಗಳನ್ನು ಆನ್ ಲೈನ್ ಮೂಲಕ ಒಂದೆಡೆ ಸೇರಿಸಲಾಗುತ್ತಿದೆ ಎಂದು ಶ್ರೀ ರಮೇಶ್ ಪೋಖ್ರಿಯಾಲ್ ಹೇಳಿದರು. ವರ್ಷ ಕೇಂದ್ರ ಸರ್ಕಾರದ 37 ಇಲಾಖೆ, 17 ರಾಜ್ಯ ಸರ್ಕಾರಗಳು ಮತ್ತು 20 ಕೈಗಾರಿಕೆಗಳಿಗೆ ಸಂಬಂಧಿಸಿದ 243 ಸಮಸ್ಯೆಗಳಿಗೆ ಸುಮಾರು 10,000ಕ್ಕೂ ಅಧಿಕ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಪರಿಹಾರಗಳನ್ನು ನೀಡಲಿದ್ದಾರೆ. ಪ್ರತಿಯೊಂದು ಸಮಸ್ಯೆ ಉತ್ತರಕ್ಕೆ ನಗದು ಬಹುಮಾನ 1,00,000 ರೂ. ನೀಡಲಾಗುವುದು. ಇದರಲ್ಲಿ ವಿದ್ಯಾರ್ಥಿ ಇನೋವೇಷನ್ ಥೀಮ್ ಹೊರತುಪಡಿಸಿ, ಅದರಲ್ಲಿ ಮೊದಲ ಮೂರು ವಿಜೇತರು ಇರುತ್ತಾರೆ. ಪ್ರಥಮ, ದ್ವಿತೀಯ ಹಾಗೂ ತೃತೀಯ ವಿಜೇತರು ಕ್ರಮವಾಗಿ 1,00,000 ರೂ.,  75,000 ರೂ. ಮತ್ತು 50,000 ರೂ. ಪಡೆಯಲಿದ್ದಾರೆ.

ಎಸ್ಐಎಚ್ ಪ್ರಗತಿ ಕುರಿತಂತೆ ಮಾತನಾಡಿದ ಶ್ರೀ ನಿಶಾಂಕ್, ಈಗಾಗಲೇ ಮೂರು ಎಸ್ಐಎಚ್ ಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಎಸ್ಐಎಚ್-2017 ಮೊದಲ ಆವೃತ್ತಿಯಲ್ಲಿ ಸುಮಾರು 42 ಸಾವಿರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನಂತರ ಎಸ್ಐಎಚ್-2018ಗೆ ಸಂಖ್ಯೆ ಒಂದು ಲಕ್ಷಕ್ಕೆ ಏರಿಕೆಯಾಗಿತ್ತು. ಆನಂತರ ಎಸ್ಐಎಚ್-2019ನಲ್ಲಿ ಪ್ರಮಾಣ ಎರಡು ಲಕ್ಷ ತಲುಪಿತ್ತು. ಎಸ್ಐಎಚ್-2020, ಎಸ್ಐಎಚ್-2019ಗೆ ಹೋಲಿಸಿದರೆ ಇನ್ನೂ ಹೆಚ್ಚು ದೊಡ್ಡ ಮಟ್ಟದಲ್ಲಿದ್ದು, ಮೊದಲ ಸುತ್ತಿನಲ್ಲೇ ಸುಮಾರು 4.5 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು ಎಂದರು. ನಾವು ದೇಶದ ಶೈಕ್ಷಣಿಕ ಸಂಸ್ಥೆಗಳಲ್ಲಿ ಆವಿಷ್ಕಾರ ಮತ್ತು ಉದ್ಯಮಶೀಲ ಸಂಸ್ಕೃತಿಯನ್ನು ಪ್ರೋತ್ಸಾಹಿಸಲು ಹೆಚ್ಚಿನ ಗಮನಹರಿಸುತ್ತಿದ್ದೇವೆ. ನಮ್ಮ ಮಹತ್ವಾಕಾಂಕ್ಷಿ ಕಾರ್ಯಕ್ರಮ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಇದೀಗ ವಿಶ್ವದ ಅತಿ ದೊಡ್ಡ ಮುಕ್ತ ಆವಿಷ್ಕಾರ ಪದ್ಧತಿ ಎಂದು ಜನಪ್ರಿಯವಾಗಿದೆ. ಅಲ್ಲದೆ ಎಸ್ಐಎಚ್ ಸಾರ್ವಜನಿಕ ಖಾಸಗಿ ಪಾಲುದಾರಿಕೆಗೆ ಒಂದು ಅತ್ಯುತ್ತಮ ಉದಾಹರಣೆಯಾಗಿದೆ.  

ಈವರೆಗಿನ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಫಲಿತಾಂಶವನ್ನು ಗಮನಿಸಿದರೆ ಸುಮಾರು 331 ಪ್ರೋಟೋಟೈಪ್(ಮಾದರಿ)ಗಳನ್ನು ಅಭಿವೃದ್ಧಿಪಡಿಸಲಾಗಿದೆ, 71 ನವೋದ್ಯಮಗಳು ಆರಂಭಿಕ ಹಂತದಲ್ಲಿವೆ ಮತ್ತು 19 ನವೋದ್ಯಮಗಳು ಈಗಾಗಲೇ ನೋಂದಣಿಯಾಗಿವೆ. ಅಲ್ಲದೆ 39 ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲಾಗಿದ್ದು, ಅವುಗಳನ್ನು ಈಗಾಗಲೇ ನಾನಾ ಇಲಾಖೆಗಳಿಗೆ ನಿಯೋಜಿಸಲಾಗಿದೆ ಮತ್ತು 64 ಸಮಸ್ಯೆಗಳಿಗೆ ಸಂಭಾವ್ಯ ಪರಿಹಾರಗಳನ್ನು ಕಂಡುಕೊಳ್ಳಲಾಗಿದ್ದು, ಅವುಗಳನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ಆರ್ಥಿಕ ನೆರವು ನೀಡಲಾಗಿದೆ.

ನಾವು ಎಸ್ಐಎಚ್ ನಿಂದ ಸ್ವೀಕರಿಸುತ್ತಿರುವ ಚಿಂತನೆಗಳ ಬಗ್ಗೆ ನಿರಂತರವಾಗಿ ನಿಗಾ ಇರಿಸುತ್ತಿದ್ದೇವೆ ಎಂದು ಎಚ್ ಆರ್ ಡಿ ಸಚಿವರು ಹೇಳಿದರು. ಆತ್ಮನಿರ್ಭರ ಭಾರತ ಅಭಿವೃದ್ಧಿಗಾಗಿ ಚಿಂತನೆಗಳ ಹಂತದಿಂದ ಹಿಡಿದು, ಪ್ರೊಟೊಟೈಪ್ ಹಂತದವರೆಗೆ ತಂಡಗಳನ್ನು ಸೂಕ್ಷ್ಮವಾಗಿ ನಿಗಾವಹಿಸಬೇಕು ಎಂದು ಅವರು ಹೇಳಿದರು. ಒಮ್ಮೆ ವಿದ್ಯಾರ್ಥಿಯಿಂದ ಚಿಂತನೆ ಹೊರಬಂದರೆ ಅದನ್ನು ನವೋದ್ಯಮ ಅಥವಾ ಇಲಾಖೆಯ ಮೂಲಕ ಕಾರ್ಯಗತಗೊಳಿಸಬೇಕಾದ ಹೊಣೆ ಕಡ್ಡಾಯವಾಗಿ ಮಾರ್ಗದರ್ಶಕರದ್ದಾಗಿರುತ್ತದೆ. ಚಿಂತನೆಗಳು ಎಂದಿಗೂ ವ್ಯರ್ಥವಾಗಬಾರದು. ಇಲಾಖೆ/ಸಚಿವಾಲಯ ಅಂತಹ ಚಿಂತನೆಗಳ ಕಾರ್ಯರೂಪಕ್ಕೆ ವೇದಿಕೆಯನ್ನು ಒದಗಿಸಿಕೊಡಬೇಕು. ಪ್ರೊಟೊಟೈಪ್ ಮಾದರಿ ಅಭಿವೃದ್ಧಿಯಿಂದ ಅವು ನವೋದ್ಯಮಗಳಾಗಿ ಪರಿವರ್ತನೆಗೊಳ್ಳುವವರೆಗಿನ ಅಂತರವನ್ನು ತುಂಬಲು ಹೆಚ್ಚಿನ ಒತ್ತು ನೀಡಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು. ಸಚಿವಾಲಯಗಳ ಸಹಯೋಗದೊಂದಿಗೆ ಹ್ಯಾಕಥಾನ್ ನಲ್ಲಿನ ಯಶಸ್ವಿ ಚಿಂತನೆಗಳ ಮೇಲೆ ನಿಗಾವಹಿಸಿ, ಅವುಗಳು ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳ್ಳುವಂತೆ ಸಮನ್ವಯದ ಪೂರಕ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಅವರು ಸಲಹೆ ಮಾಡಿದರು.

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಆಯ್ದ ಚಿಂತನೆಗಳು ಕಾರ್ಯಗತಗೊಳಿಸುವ ಹಂತಕ್ಕೆ ತಲುಪಿಸಲು ಎಲ್ಲ ಕಾರ್ಯದರ್ಶಿಗಳೊಂದಿಗೆ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವರು ಎಂದು ಶ್ರೀ ನಿಶಾಂಕ್ ಹೇಳಿದರು. ಎಸ್ಐಎಚ್ ಚಿಂತನೆಗಳ ಅನುಷ್ಠಾನ ಖಾತ್ರಿಪಡಿಸಲು ಎಂಎಚ್ಆರ್ ಡಿ ಸಮನ್ವಯ ಸಚಿವಾಲಯವಾಗಿ ಕಾರ್ಯನಿರ್ವಹಿಸಲಿದೆ. ನವೋದ್ಯಮಗಳನ್ನು ಸ್ಥಾಪಿಸಲಾಗದ ಶೇ.90ರಷ್ಟು ಚಿಂತನೆಗಳನ್ನು ಕಾರ್ಯಗತಗೊಳಿಸಲು ಇಲಾಖೆಗಳಿಗೆ ನೀಡಲಾಗುವುದು. ಅದಕ್ಕೆ ಬೇಕಾದ ಅಗತ್ಯ ನಿಯಮಾವಳಿಗಳನ್ನು ರೂಪಿಸಲಾಗುವುದು. ಎಸ್ಐಎಚ್ ನಲ್ಲಿ ಅಭಿವೃದ್ಧಿಪಡಿಸಲಾದ ಚಿಂತನೆಗಳನ್ನು ಕಾರ್ಯದರ್ಶಿಗಳ ಸಮಿತಿಯ ಚರ್ಚೆಯ ಒಂದು ಭಾಗವನ್ನಾಗಿ ಮಾಡುವಂತೆ ಸಂಪುಟ ಕಾರ್ಯದರ್ಶಿಗಳಿಗೆ ಮನವಿ ಮಾಡಲಾಗುವುದು ಎಂದು ಕಾರ್ಯದರ್ಶಿಗಳು ತಿಳಿಸಿದರು.

ದೇಶದಲ್ಲಿ ಆವಿಷ್ಕಾರ ಸಂಸ್ಕೃತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಆವಿಷ್ಕಾರ ಶಾಲಾ ಮಟ್ಟದಲ್ಲೇ ಆರಂಭವಾಗಬೇಕು ಮತ್ತು ಉದ್ದೇಶಕ್ಕಾಗಿ ಅಟಲ್ ಚಿಂತನಾ ಪ್ರಯೋಗಾಲಯಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಸಚಿವರು ಹೇಳಿದರು. ಶಾಲಾ ವಿದ್ಯಾರ್ಥಿಗಳು ಮತ್ತು ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ಅದಕ್ಕೆ ಸಂಬಂಧಿಸಿದಂತೆ ಸೂಕ್ತ ಮಾಹಿತಿಯನ್ನು ಒದಗಿಸಬೇಕು ಎಂದರು.

ಹೆಚ್ಚಿನ ವಿವರಗಳಿಗೆ ಇಲ್ಲಿ ಭೇಟಿ ನೀಡಿ: https://www.sih.gov.in/

***



(Release ID: 1641804) Visitor Counter : 229