ಪ್ರಧಾನ ಮಂತ್ರಿಯವರ ಕಛೇರಿ

ಇಂಡಿಯಾ ಐಡಿಯಾಸ್ ಶೃಂಗಸಭೆ 2020: ಪ್ರಧಾನಿಯವರ ಭಾಷಣ

Posted On: 22 JUL 2020 9:27PM by PIB Bengaluru

ನಮಸ್ಕಾರ!

ಉದ್ಯಮ ಮುಖಂಡರೇ,

ವಿಶೇಷ ಅತಿಥಿಗಳೇ,

'ಇಂಡಿಯಾ ಐಡಿಯಾಸ್ ಶೃಂಗಸಭೆಯನ್ನು' ಉದ್ದೇಶಿಸಿ ಮಾತನಾಡಲು ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಯುಎಸ್-ಇಂಡಿಯಾ ಬಿಸಿನೆಸ್ ಕೌನ್ಸಿಲ್ ಗೆ ನಾನು ಧನ್ಯವಾದ ಹೇಳುತ್ತೇನೆ. ವರ್ಷ ತನ್ನ ನಲವತ್ತೈದನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಯುಎಸ್ಐಬಿಸಿಗೆ ನನ್ನ ಅಭಿನಂದನೆಗಳು. ದಶಕಗಳಿಂದ, ಯುಎಸ್ಐಬಿಸಿ ಭಾರತ ಮತ್ತು ಅಮೇರಿಕಾದ ವ್ಯವಹಾರವನ್ನು ಹತ್ತಿರಕ್ಕೆ ತಂದಿದೆ. ವರ್ಷದ ಐಡಿಯಾಸ್ ಶೃಂಗಸಭೆಯ ಯುಎಸ್ಐಬಿಸಿ ವಿಷಯವಾದ ಉತ್ತಮ ಭವಿಷ್ಯದ ನಿರ್ಮಾಣಕೂಡ ತುಂಬಾ ಪ್ರಸ್ತುತವಾಗಿದೆ.

ಸ್ನೇಹಿತರೇ,

ಜಗತ್ತಿಗೆ ಉತ್ತಮ ಭವಿಷ್ಯದ ಅವಶ್ಯಕತೆಯಿದೆ ಎಂಬುದನ್ನು ನಾವೆಲ್ಲರೂ ಒಪ್ಪುತ್ತೇವೆ. ನಾವೆಲ್ಲರೂ ಒಟ್ಟಾಗಿ ಭವಿಷ್ಯವನ್ನು ರೂಪಿಸಬೇಕಾಗಿದೆ. ಭವಿಷ್ಯದ ಬಗೆಗಿನ ನಮ್ಮ ವಿಧಾನವು ಮುಖ್ಯವಾಗಿ ಹೆಚ್ಚು ಮಾನವ ಕೇಂದ್ರಿತವಾಗಿರಬೇಕು ಎಂದು ನಾನು ದೃಢವಾಗಿ ನಂಬುತ್ತೇನೆ. ನಮ್ಮ ಬೆಳವಣಿಗೆಯ ಕಾರ್ಯಸೂಚಿಯು ಬಡವರನ್ನು ಮತ್ತು ದುರ್ಬಲರನ್ನು ಪ್ರಮುಖವಾಗಿಸಿಕೊಳ್ಳಬೇಕು. ‘ಸುಗಮ ಜೀವನವು’‘ಸುಗಮ ವ್ಯವಹಾರದಷ್ಟೇ ಮುಖ್ಯವಾಗಿದೆ.

ಸ್ನೇಹಿತರೇ,

ಜಾಗತಿಕ ಆರ್ಥಿಕತೆಯು ದಕ್ಷತೆ ಮತ್ತು ಪರಿಣಾಮದ ಮೇಲೆ ಹೆಚ್ಚು ಕೇಂದ್ರೀಕರಿಸಿದೆ ಎಂದು ಇತ್ತೀಚಿನ ಅನುಭವವು ನಮಗೆ ಕಲಿಸಿದೆ. ದಕ್ಷತೆ ಒಳ್ಳೆಯದೇ, ಆದರೆ ದಾರಿಯಲ್ಲಿ, ಅಷ್ಟೇ ಮುಖ್ಯವಾದ ಬೇರಾವುದನ್ನೋ ನಾವು ಮರೆತಿದ್ದೇವೆ. ಅದು ಬಾಹ್ಯ ಆಘಾತಗಳ ವಿರುದ್ಧದ ಸ್ಥಿತಿಸ್ಥಾಪಕತ್ವ. ಸ್ಥಿತಿಸ್ಥಾಪಕತ್ವ ಎಷ್ಟು ಮುಖ್ಯ ಎಂಬುದನ್ನು ಜಾಗತಿಕ ಸಾಂಕ್ರಾಮಿಕವು ನಮಗೆ ನೆನಪಿಸಿದೆ.

ಸ್ನೇಹಿತರೇ,

ಬಲವಾದ ದೇಶೀಯ ಆರ್ಥಿಕ ಸಾಮರ್ಥ್ಯಗಳಿಂದ ಜಾಗತಿಕ ಆರ್ಥಿಕ ಸ್ಥಿತಿಸ್ಥಾಪಕತ್ವವನ್ನು ಸಾಧಿಸಬಹುದು. ಇದರರ್ಥ ಉತ್ಪಾದನೆಗಾಗಿ ಸುಧಾರಿತ ದೇಶೀಯ ಸಾಮರ್ಥ್ಯ, ಹಣಕಾಸು ವ್ಯವಸ್ಥೆಯನ್ನು ಪುನಃಸ್ಥಾಪನೆ ಮತ್ತು ಅಂತರರಾಷ್ಟ್ರೀಯ ವ್ಯಾಪಾರದ ವೈವಿಧ್ಯೀಕರಣ.

ಸ್ನೇಹಿತರೇ,

ಆತ್ಮನಿರ್ಭರ ಭಾರತ ಮೂಲಕ ಭಾರತವು ಸಮೃದ್ಧ ಮತ್ತು ಚೇತರಿಕೆಯ ಜಗತ್ತಿಗೆ ಕೊಡುಗೆ ನೀಡುತ್ತಿದೆ. ಅದಕ್ಕಾಗಿ, ನಿಮ್ಮ ಪಾಲುದಾರಿಕೆಗಾಗಿ ನಾವು ಕಾಯುತ್ತಿದ್ದೇವೆ!

ಸ್ನೇಹಿತರೇ,

ಇಂದು, ಭಾರತದ ಬಗ್ಗೆ ಜಗತ್ತಿಗೆ ಆಶಾವಾದವಿದೆ. ಭಾರತವು ಮುಕ್ತತೆ, ಅವಕಾಶಗಳು ಮತ್ತು ಆಯ್ಕೆಗಳ ಪರಿಪೂರ್ಣ ಸಂಯೋಜನೆಯನ್ನು ನೀಡುತ್ತಿರುವುದು ಇದಕ್ಕೆ ಕಾರಣ. ಇದನ್ನು ನಾನು ವಿಸ್ತಾರವಾಗಿ ಹೇಳುತ್ತೇನೆ. ಭಾರತವು ಜನರಲ್ಲಿ ಮತ್ತು ಆಡಳಿತದಲ್ಲಿ ಮುಕ್ತತೆಯನ್ನು ತಂದಿದೆ. ಮುಕ್ತ ಮನಸ್ಸುಗಳು ಮುಕ್ತ ಮಾರುಕಟ್ಟೆಗಳನ್ನು ನಿರ್ಮಿಸುತ್ತವೆ. ಮುಕ್ತ ಮಾರುಕಟ್ಟೆಗಳು ಹೆಚ್ಚಿನ ಸಮೃದ್ಧಿಗೆ ಕಾರಣವಾಗುತ್ತವೆ. ಇವು ಭಾರತ ಮತ್ತು ಅಮೆರಿಕಾ ಎರಡೂ ಒಪ್ಪುವ ತತ್ವಗಳಾಗಿವೆ.

ಸ್ನೇಹಿತರೇ,

ಕಳೆದ ಆರು ವರ್ಷಗಳಲ್ಲಿ, ನಮ್ಮ ಆರ್ಥಿಕತೆಯನ್ನು ಹೆಚ್ಚು ಮುಕ್ತ ಮತ್ತು ಸುಧಾರಣಾ ಆಧಾರಿತವಾಗಿಸಲು ನಾವು ಅನೇಕ ಪ್ರಯತ್ನಗಳನ್ನು ಮಾಡಿದ್ದೇವೆ. ಸುಧಾರಣೆಗಳು ಹೆಚ್ಚಿನ ಸ್ಪರ್ಧಾತ್ಮಕತೆ, ವರ್ಧಿತಪಾರದರ್ಶಕತೆ, ವಿಸ್ತರಿತಡಿಜಿಟಲೀಕರಣ’, ಹೆಚ್ಚಿನನಾವೀನ್ಯತೆಮತ್ತು ಹೆಚ್ಚುನೀತಿ ಸ್ಥಿರತೆಯನ್ನು ಖಾತ್ರಿಪಡಿಸಿವೆ.

ಸ್ನೇಹಿತರೇ,

ಭಾರತವು ಅವಕಾಶಗಳ ತಾಣವಾಗಿ ಹೊರಹೊಮ್ಮುತ್ತಿದೆ. ತಂತ್ರಜ್ಞಾನ ಕ್ಷೇತ್ರದ ಒಂದು ಉದಾಹರಣೆ ನೀಡುತ್ತೇನೆ. ಇತ್ತೀಚೆಗೆ ಭಾರತದಲ್ಲಿ ಒಂದು ಕುತೂಹಲಕಾರಿ ವರದಿ ಬಂತು. ನಗರಗಳ ಅಂತರ್ಜಾಲ ಬಳಕೆದಾರರಿಗಿಂತ ಮೊದಲ ಬಾರಿಗೆ ಗ್ರಾಮೀಣ ಅಂತರ್ಜಾಲ ಬಳಕೆದಾರರು ಹೆಚ್ಚಾಗಿದ್ದಾರೆ ಎಂದು ವರದಿ ಹೇಳಿದೆ. ಇದರ ಪ್ರಮಾಣವನ್ನು ಕಲ್ಪಿಸಿಕೊಳ್ಳಿ! ಭಾರತದಲ್ಲಿ ಈಗ ಸುಮಾರು ಅರ್ಧ ಶತಕೋಟಿ ಸಕ್ರಿಯ ಅಂತರ್ಜಾಲ ಬಳಕೆದಾರರಿದ್ದಾರೆ. ಅರ್ಧ ಶತಕೋಟಿ ಸಂಪರ್ಕಿತ ಜನರು. ಇದು ನಿಮಗೆ ದೊಡ್ಡದು ಎನ್ನಿಸುತ್ತಿಲ್ಲವೇ? ನಿಮ್ಮ ಉಸಿರು ಬಿಗಿಹಿಡಿದುಕೊಳ್ಳಿ. ಏಕೆಂದರೆ, ಸಂಪರ್ಕ ಪಡೆದಿರುವ ಅರ್ಧ ಶತಕೋಟಿಗೂ ಹೆಚ್ಚು ಜನರಿದ್ದಾರೆ. ತಂತ್ರಜ್ಞಾನದಲ್ಲಿನ ಅವಕಾಶಗಳು 5 ಜಿ, ಬಿಗ್ ಡಾಟಾ ಅನಾಲಿಟಿಕ್ಸ್, ಕ್ವಾಂಟಮ್ ಕಂಪ್ಯೂಟಿಂಗ್, ಬ್ಲಾಕ್-ಚೈನ್ ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ ನಂತಹ ವಸ್ತುಗಳ ಮುಂಚೂಣಿ ತಂತ್ರಜ್ಞಾನಗಳಲ್ಲಿನ ಅವಕಾಶಗಳನ್ನು ಸಹ ಒಳಗೊಂಡಿವೆ.

ಸ್ನೇಹಿತರೇ,

ಭಾರತದಲ್ಲಿ ಹೂಡಿಕೆಯ ಆಯ್ಕೆಗಳು ವಿಸ್ತಾರವಾಗಿವೆ. ನಮ್ಮ ರೈತರ ಕಠಿಣ ಪರಿಶ್ರಮದಲ್ಲಿ ಹೂಡಿಕೆ ಮಾಡಲು ಭಾರತ ನಿಮ್ಮನ್ನು ಆಹ್ವಾನಿಸುತ್ತದೆ. ಭಾರತ ಇತ್ತೀಚೆಗೆ ಕೃಷಿ ಕ್ಷೇತ್ರದಲ್ಲಿ ಐತಿಹಾಸಿಕ ಸುಧಾರಣೆಗಳನ್ನು ಮಾಡಿದೆ. ಕೃಷಿ ಸಾಧನಗಳು ಮತ್ತು ಯಂತ್ರೋಪಕರಣಗಳು, ಕೃಷಿ ಪೂರೈಕೆ ಸರಪಳಿ ನಿರ್ವಹಣೆ, ತಿನ್ನಲು ಸಿದ್ಧಪಡಿಸಿದ ವಸ್ತುಗಳು, ಮೀನುಗಾರಿಕೆ ಮತ್ತು ಸಾವಯವ ಉತ್ಪನ್ನಗಳಲ್ಲಿ ಹೂಡಿಕೆಯ ಅವಕಾಶಗಳಿವೆ. 2025 ವೇಳೆಗೆ ಭಾರತದ ಆಹಾರ ಸಂಸ್ಕರಣಾ ಕ್ಷೇತ್ರವು ಅರ್ಧ ಟ್ರಿಲಿಯನ್ ಡಾಲರ್ಗಿಂತ ಹೆಚ್ಚಿನದಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಹೆಚ್ಚಿನ ಆದಾಯದ ಮೂಲಗಳನ್ನು ವೃದ್ಧಿಸಲು, ಭಾರತೀಯ ಕೃಷಿ ಕ್ಷೇತ್ರದಲ್ಲಿನ ಹೂಡಿಕೆಯ ಅವಕಾಶಗಳನ್ನು ಬಳಸಿಕೊಳ್ಳಲು ಈಗ ಉತ್ತಮ ಸಂದರ್ಭವಾಗಿದೆ!

ಆರೋಗ್ಯ ರಕ್ಷಣೆಯಲ್ಲಿ ಹೂಡಿಕೆ ಮಾಡಲು ಭಾರತ ನಿಮ್ಮನ್ನು ಆಹ್ವಾನಿಸುತ್ತದೆ. ಭಾರತದಲ್ಲಿ ಆರೋಗ್ಯ ಕ್ಷೇತ್ರವು ಪ್ರತಿವರ್ಷ ಶೇಕಡಾ 22 ಕ್ಕಿಂತಲೂ ಹೆಚ್ಚು ವೇಗವಾಗಿ ಬೆಳೆಯುತ್ತಿದೆ. ನಮ್ಮ ಕಂಪನಿಗಳು ವೈದ್ಯಕೀಯ-ತಂತ್ರಜ್ಞಾನ, ಟೆಲಿ-ಮೆಡಿಸಿನ್ ಮತ್ತು ಡಯಾಗ್ನೋಸ್ಟಿಕ್ಸ್ ನಲ್ಲಿ ಪ್ರಗತಿ ಸಾಧಿಸುತ್ತಿವೆ. ಭಾರತ ಮತ್ತು ಅಮೆರಿಕಾ ಈಗಾಗಲೇ ಫಾರ್ಮಾ ಕ್ಷೇತ್ರದಲ್ಲಿ ದೃಢವಾದ ಪಾಲುದಾರಿಕೆಯನ್ನು ಹೊಂದಿವೆ. ಪ್ರಮಾಣ ಮತ್ತು ವೇಗವನ್ನು ಸಾಧಿಸಲು, ಭಾರತದ ಆರೋಗ್ಯ-ರಕ್ಷಣಾ ಕ್ಷೇತ್ರದಲ್ಲಿ ನಿಮ್ಮ ಹೂಡಿಕೆಯನ್ನು ವಿಸ್ತರಿಸಲು ಇದೀಗ ಉತ್ತಮ ಸಮಯವಾಗಿದೆ!

ಭಾರತವು ನಿಮ್ಮನ್ನು ಇಂಧನ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಆಹ್ವಾನಿಸುತ್ತದೆ. ಭಾರತವು ಅನಿಲ ಆಧಾರಿತ ಆರ್ಥಿಕತೆಯಾಗಿ ವಿಕಸನಗೊಳ್ಳುತ್ತಿರುವುದರಿಂದ, ಅಮೆರಿಕಾ ಕಂಪನಿಗಳಿಗೆ ದೊಡ್ಡ ಹೂಡಿಕೆಯ ಅವಕಾಶಗಳಿವೆ. ಶುದ್ಧ ಇಂಧನ ಕ್ಷೇತ್ರದಲ್ಲಿಯೂ ದೊಡ್ಡ ಅವಕಾಶಗಳಿವೆ. ನಿಮ್ಮ ಹೂಡಿಕೆಗೆ ಹೆಚ್ಚಿನ ಶಕ್ತಿ ತುಂಬಲು, ಭಾರತದ ವಿದ್ಯುತ್ ಕ್ಷೇತ್ರಕ್ಕೆ ಪ್ರವೇಶಿಸಲು ಇದು ಅತ್ಯುತ್ತಮ ಸಮಯ!

ಮೂಲಸೌಕರ್ಯದಲ್ಲಿ ಹೂಡಿಕೆ ಮಾಡಲು ಭಾರತ ನಿಮ್ಮನ್ನು ಆಹ್ವಾನಿಸುತ್ತದೆ. ನಮ್ಮ ರಾಷ್ಟ್ರವು ಇತಿಹಾಸದಲ್ಲಿಯೇ ಅತಿದೊಡ್ಡ ಮೂಲಸೌಕರ್ಯ ನಿರ್ಮಾಣಕ್ಕೆ ಸಾಕ್ಷಿಯಾಗಿದೆ. ಬನ್ನಿ, ಲಕ್ಷಾಂತರ ಜನರಿಗೆ ವಸತಿ ನಿರ್ಮಿಸಲು ಅಥವಾ ನಮ್ಮ ರಾಷ್ಟ್ರದಲ್ಲಿ ರಸ್ತೆಗಳು, ಹೆದ್ದಾರಿಗಳು ಮತ್ತು ಬಂದರುಗಳನ್ನು ನಿರ್ಮಿಸಲು ಪಾಲುದಾರರಾಗಿ.

ನಾಗರಿಕ ವಿಮಾನಯಾನವು ಹೆಚ್ಚಿನ ಸಂಭಾವ್ಯ ಬೆಳವಣಿಗೆಯ ಮತ್ತೊಂದು ಕ್ಷೇತ್ರವಾಗಿದೆ. ಮುಂದಿನ 8 ವರ್ಷಗಳಲ್ಲಿ ವಿಮಾನ ಪ್ರಯಾಣಿಕರ ಸಂಖ್ಯೆ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ. ಪ್ರಮುಖ ಖಾಸಗಿ ಭಾರತೀಯ ವಿಮಾನಯಾನ ಸಂಸ್ಥೆಗಳು ಮುಂಬರುವ ದಶಕದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಹೊಸ ವಿಮಾನಗಳನ್ನು ಸೇರಿಸಲು ಯೋಜಿಸಿವೆ. ಭಾರತದಲ್ಲಿ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸಲು ಆಯ್ಕೆ ಮಾಡುವ ಯಾವುದೇ ಹೂಡಿಕೆದಾರರಿಗೆ ಇದು ಒಂದು ದೊಡ್ಡ ಅವಕಾಶವಾಗಿದೆ, ಇದು ಪ್ರಾದೇಶಿಕ ಮಾರುಕಟ್ಟೆಗಳನ್ನು ಪೂರೈಸುವ ನೆಲೆಯಾಗಬಹುದು. ನಿರ್ವಹಣೆ ದುರಸ್ತಿ ಮತ್ತು ಕಾರ್ಯಾಚರಣೆ ಸೌಲಭ್ಯಗಳನ್ನು ಸ್ಥಾಪಿಸಲೂ ಸಹ ಇದೇ ರೀತಿಯ ಅವಕಾಶಗಳಿವೆ. ನಿಮ್ಮ ವಾಯುಯಾನ ಗುರಿಗಳಿಗೆ ವೇಗ ನೀಡಲು, ಭಾರತದ ವಾಯುಯಾನ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಇದು ಸೂಕ್ತ ಸಮಯ.

ರಕ್ಷಣೆ ಮತ್ತು ಬಾಹ್ಯಾಕಾಶದಲ್ಲಿ ಹೂಡಿಕೆ ಮಾಡಲು ಭಾರತ ನಿಮ್ಮನ್ನು ಆಹ್ವಾನಿಸುತ್ತದೆ. ರಕ್ಷಣಾ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ನಾವು ವಿದೇಶಿ ನೇರ ಹೂಡಿಕೆ ಮಿತಿಯನ್ನು ಶೇಕಡಾ 74 ಕ್ಕೆ ಹೆಚ್ಚಿಸುತ್ತಿದ್ದೇವೆ. ರಕ್ಷಣಾ ಉಪಕರಣಗಳು ಮತ್ತು ಸಾಧನಗಳ ಉತ್ಪಾದನೆಯನ್ನು ಉತ್ತೇಜಿಸಲು ಭಾರತ ಎರಡು ರಕ್ಷಣಾ ಕಾರಿಡಾರ್ಗಳನ್ನು ಸ್ಥಾಪಿಸಿದೆ. ಖಾಸಗಿ ಮತ್ತು ವಿದೇಶಿ ಹೂಡಿಕೆದಾರರಿಗೆ ನಾವು ವಿಶೇಷ ಪ್ರೋತ್ಸಾಹ ನೀಡುತ್ತೇವೆ. ಕೆಲವು ವಾರಗಳ ಹಿಂದೆ, ನಾವು ಬಾಹ್ಯಾಕಾಶ ಕ್ಷೇತ್ರದಲ್ಲಿ ಪ್ರಮುಖ ಸುಧಾರಣೆಗಳನ್ನು ತಂದಿದ್ದೇವೆ. ಬನ್ನಿ, ಮುಂಬರುವ ಕ್ಷೇತ್ರಗಳ ಒಂದು ಭಾಗವಾಗಿ.

ಹಣಕಾಸು ಮತ್ತು ವಿಮೆಯಲ್ಲಿ ಹೂಡಿಕೆ ಮಾಡಲು ಭಾರತ ನಿಮ್ಮನ್ನು ಆಹ್ವಾನಿಸುತ್ತದೆ. ಭಾರತವು ವಿಮೆಯಲ್ಲಿ ಹೂಡಿಕೆ ಮಾಡಲು ವಿದೇಶಿ ನೇರ ಹೂಡಿಕೆ ಮಿತಿಯನ್ನು ಶೇ.49 ಕ್ಕೆ ಹೆಚ್ಚಿಸಿದೆ. ವಿಮಾ ಮಧ್ಯವರ್ತಿಗಳಲ್ಲಿ ಹೂಡಿಕೆ ಮಾಡಲು ಈಗ 100 ಪ್ರತಿಶತ ಎಫ್ಡಿಐಗೆ ಅನುಮತಿ ಇದೆ. ಭಾರತದಲ್ಲಿ ವಿಮಾ ಮಾರುಕಟ್ಟೆ ಶೇಕಡಾ 12 ಕ್ಕಿಂತ ಹೆಚ್ಚು ದರದಲ್ಲಿ ಬೆಳೆಯುತ್ತಿದೆ ಮತ್ತು 2025 ವೇಳೆಗೆ 250 ಬಿಲಿಯನ್ ಡಾಲರ್ಗಳಿಗೆ ಬೆಳೆಯುವ ನಿರೀಕ್ಷೆಯಿದೆ. ನಮ್ಮ ಆರೋಗ್ಯ ಭರವಸೆ ಯೋಜನೆ ಆಯುಷ್ಮಾನ್ ಭಾರತದ ಯಶಸ್ಸು, ನಮ್ಮ ಬೆಳೆ ವಿಮಾ ಯೋಜನೆಯಾದ ಪಿಎಂ ಫಸಲ್ ಬೀಮಾ ಯೋಜನೆ ಮತ್ತು ಜನ ಸುರಕ್ಷಾ ಅಥವಾ ಸಾಮಾಜಿಕ ಭದ್ರತಾ ಯೋಜನೆಗಳು, ವಿಮಾ ಉತ್ಪನ್ನಗಳನ್ನು ತ್ವರಿತವಾಗಿ ಅಳವಡಿಸಿಕೊಳ್ಳಲು ಮತ್ತು ಸ್ವೀಕರಿಸಲು ಸರ್ಕಾರವು ನೆಲೆ ಕಲ್ಪಿಸಿದೆ. ಆರೋಗ್ಯ, ಕೃಷಿ, ವ್ಯವಹಾರ ಮತ್ತು ಜೀವ ವಿಮೆಯಲ್ಲಿ ವಿಮಾ ರಕ್ಷಣೆಯನ್ನು ಹೆಚ್ಚಿಸಲು ದೊಡ್ಡ ಅವಕಾಶಗಳಿವೆ. ದೀರ್ಘಾವಧಿಯ ಮತ್ತು ಭರವಸೆಯ ಆದಾಯವನ್ನು ಗಳಿಸಲು, ಭಾರತೀಯ ವಿಮಾ ಕ್ಷೇತ್ರವು ಇದೀಗ ಉತ್ತಮ ಹೂಡಿಕೆ ಆಯ್ಕೆಗಳಲ್ಲಿ ಒಂದಾಗಿದೆ!

ನಾನು ನಿಮಗೆ ಯಾವುದೇ ಸಲಹಾ ಶುಲ್ಕವಿಲ್ಲದೆ ಕೆಲವು ಆಯ್ಕೆಗಳನ್ನು ನೀಡಿದ್ದೇನೆ.

ಸ್ನೇಹಿತರೇ,

ಮಾರುಕಟ್ಟೆಗಳು ತೆರೆದಾಗ, ಅವಕಾಶ ಹೆಚ್ಚಾದಾಗ ಮತ್ತು ಆಯ್ಕೆಗಳು ಅಪಾರವಾಗಿ ಇದ್ದಾಗ, ಆಶಾವಾದವು ಹಿಂಬಾಲಿಸುತ್ತದೆ. ಪ್ರಮುಖ ವ್ಯಾಪಾರ ಶ್ರೇಯಾಂಕದಲ್ಲಿ ಭಾರತ ಏರಿದಾಗ ನೀವು ಆಶಾವಾದವನ್ನು ನೋಡಬಹುದು. ವಿಶೇಷವಾಗಿ ವಿಶ್ವ ಬ್ಯಾಂಕಿನ ಸುಗಮ ವ್ಯವಹಾರದ ಶ್ರೇಯಾಂಕಗಳು.

ಹೂಡಿಕೆಯು ಆತ್ಮವಿಶ್ವಾಸದ ಅತ್ಯುತ್ತಮ ನಿದರ್ಶನವಾಗಿದೆ. ಪ್ರತಿ ವರ್ಷ, ನಾವು ವಿದೇಶಿ ನೇರ ಹೂಡಿಕೆಯಲ್ಲಿ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪುತ್ತಿದ್ದೇವೆ. ಪ್ರತಿ ವರ್ಷ ಹಿಂದಿನ ವರ್ಷಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ. 2019-20ರಲ್ಲಿ ಭಾರತದಲ್ಲಿ ವಿದೇಶಿ ನೇರ ಹೂಡಿಕೆಯು 74 ಬಿಲಿಯನ್ ಡಾಲರ್ ಆಗಿತ್ತು. ಇದು ಹಿಂದಿನ ವರ್ಷಕ್ಕಿಂತ ಶೇಕಡಾ 20 ರಷ್ಟು ಹೆಚ್ಚಾಗಿದೆ. ಅಮೆರಿಕಾದವಾಗ್ದಾನ ಹೂಡಿಕೆಯು ಈಗಾಗಲೇ ವರ್ಷ 40 ಬಿಲಿಯನ್ ಡಾಲರ್ಗಳನ್ನು ದಾಟಿದೆ ಎಂದು ಯುಎಸ್ಐಬಿಸಿಯ ಸ್ನೇಹಿತರು ತಿಳಿಸಿದ್ದಾರೆ! ಸದ್ಯದ ಸಾಂಕ್ರಾಮಿಕ ಸಂದರ್ಭದಲ್ಲಿ ಸಹ ಏನಾಗಿದೆ ಎಂಬುದನ್ನು ನೋಡಿ. ಕೋವಿಡ್ನ ನಡುವೆಯೂ, ಭಾರತವು 2020 ಏಪ್ರಿಲ್ ಮತ್ತು ಜುಲೈ ನಡುವೆ 20 ಶತಕೋಟಿ ಡಾಲರ್ಗಿಂತ ಹೆಚ್ಚಿನ ವಿದೇಶಿ ಹೂಡಿಕೆಯನ್ನು ಆಕರ್ಷಿಸಿದೆ!

ಆದರೆ, ಭಾರತ ಇನ್ನೂ ಹಲವು ಅವಕಾಶಗಳನ್ನು ನೀಡುತ್ತದೆ. ಜಾಗತಿಕ ಆರ್ಥಿಕ ಚೇತರಿಕೆಗೆ ಶಕ್ತಿ ತುಂಬುವುದು ನಮಗೆ ಬೇಕಾಗಿದೆ.

ಸ್ನೇಹಿತರೇ,

ಭಾರತದ ಪ್ರಗತಿ ಎಂದರೆ: ನೀವು ನಂಬಬಹುದಾದ ರಾಷ್ಟ್ರದೊಂದಿಗಿನ ವ್ಯಾಪಾರ ಅವಕಾಶಗಳ ಪ್ರಗತಿ, ಹೆಚ್ಚುತ್ತಿರುವ ಮುಕ್ತತೆಯೊಂದಿಗೆ ಜಾಗತಿಕ ಏಕೀಕರಣದ ಪ್ರಗತಿ, ಬೃಹತ್ ಪ್ರಮಾಣದ ಮಾರುಕಟ್ಟೆಯ ಲಭ್ಯತೆಯೊಂದಿಗೆ ನಿಮ್ಮ ಸ್ಪರ್ಧಾತ್ಮಕತೆಯ ಪ್ರಗತಿ ಮತ್ತು ಕೌಶಲ್ಯಭರಿತಮಾನವ ಸಂಪನ್ಮೂಲಗಳ ಲಭ್ಯತೆಯೊಂದಿಗೆ ಹೂಡಿಕೆಯ ಮೇಲಿನ ನಿಮ್ಮ ಆದಾಯದ ಪ್ರಗತಿ.

ಸ್ನೇಹಿತರೇ,

ದೃಷ್ಟಿಕೋನಕ್ಕೆ, ಅಮೇರಿಕಾಕ್ಕಿಂತ ಕೆಲವು ಉತ್ತಮ ಪಾಲುದಾರರಿದ್ದಾರೆ. ಭಾರತ ಮತ್ತು ಅಮೆರಿಕಾ ಹಂಚಿಕೆಯ ಮೌಲ್ಯಗಳೊಂದಿಗೆ ಎರಡು ಉತ್ತಮ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿವೆ. ನಾವು ಸಹಜ ಪಾಲುದಾರರು. ಅಮೆರಿಕಾ-ಭಾರತ ಸ್ನೇಹವು ಹಿಂದೆಯೂ ಅನೇಕ ಎತ್ತರಗಳನ್ನು ಮುಟ್ಟಿದೆ. ಸಾಂಕ್ರಾಮಿಕ ರೋಗದ ನಂತರ ಜಗತ್ತು ವೇಗವಾಗಿ ಪುಟಿದೇಳಲು ಸಹಾಯ ಮಾಡುವಲ್ಲಿ ನಮ್ಮ ಪಾಲುದಾರಿಕೆ ಪ್ರಮುಖ ಪಾತ್ರ ವಹಿಸುವ ಸಮಯ ಬಂದಿದೆ. ಅಮೇರಿಕಾದ ಹೂಡಿಕೆದಾರರು ಸಾಮಾನ್ಯವಾಗಿ ಒಂದು ವಲಯ ಅಥವಾ ದೇಶವನ್ನು ಪ್ರವೇಶಿಸಲು ಸೂಕ್ತ ಸಮಯವನ್ನು ನೋಡುತ್ತಾರೆ. ಅವರಿಗೆ, ನಾನು ಹೇಳಲು ಬಯಸುವುದೆಂದರೆ: ಭಾರತದಲ್ಲಿ ಹೂಡಿಕೆ ಮಾಡಲು ಇದಕ್ಕಿಂತ ಉತ್ತಮ ಸಂದರ್ಭ ಯಾವಾಗಲೂ ಬಂದಿರಲಿಲ್ಲ!

ಭಾರತ-ಅಮೆರಿಕಾ ಆರ್ಥಿಕ ಸಹಭಾಗಿತ್ವವನ್ನು ಹೆಚ್ಚಿಸುವ ಬದ್ಧತೆಯ ಯುಎಸ್ಐಬಿಸಿ ನಾಯಕತ್ವಕ್ಕೆ ನಾನು ಮತ್ತೊಮ್ಮೆ ಧನ್ಯವಾದ ಹೇಳುತ್ತೇನೆ. ಯುಎಸ್ಐಬಿಸಿ ಹೊಸ ಎತ್ತರವನ್ನು ತಲುಪಲಿ!

ಭಾರತ-ಅಮೆರಿಕಾ ಸ್ನೇಹ ಇನ್ನಷ್ಟು ವೃದ್ಧಿಸಲಿ!

ನಮಸ್ತೆ!

ಧನ್ಯವಾದಗಳು!

***



(Release ID: 1640669) Visitor Counter : 267