ಪ್ರಧಾನ ಮಂತ್ರಿಯವರ ಕಛೇರಿ

15 ನೇ ಭಾರತ-ಯುರೋಪಿಯನ್ ಒಕ್ಕೂಟ (ವರ್ಚುವಲ್) ಶೃಂಗಸಭೆ

Posted On: 15 JUL 2020 5:16PM by PIB Bengaluru

15 ನೇ ಭಾರತ-ಯುರೋಪಿಯನ್ ಒಕ್ಕೂಟ (ವರ್ಚುವಲ್) ಶೃಂಗಸಭೆ:

ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಆರಂಭಿಕ ನುಡಿಗಳು

 

ಗೌರವಾನ್ವಿತರೇ, ನಮಸ್ಕಾರ.

ಕೋವಿಡ್-19ರ ಕಾರಣದಿಂದಾಗಿ ಮಾರ್ಚ್‌ನಲ್ಲಿ ನಡೆಯಬೇಕಿದ್ದ ಭಾರತ-ಯುರೋಪಿಯನ್ ಒಕ್ಕೂಟ (ಇಯು) ಶೃಂಗಸಭೆಯನ್ನು ನಾವು ಮುಂದೂಡಬೇಕಾಯಿತು. ಒಳ್ಳೆಯ ವಿಷಯವೆಂದರೆ ನಾವು ಇಂದು ವರ್ಚುವಲ್ ಮಾಧ್ಯಮದ ಮೂಲಕ ಭೇಟಿಯಾಗುತ್ತಿದ್ದೇವೆ. ಮೊದಲನೆಯದಾಗಿ, ಯುರೋಪಿನಲ್ಲಿ ಕೊರೊನಾ ವೈರಸ್‌ನಿಂದ ಉಂಟಾಗಿರುವ ನಷ್ಟಕ್ಕೆ ನನ್ನ ಸಂತಾಪಗಳು. ನಿಮ್ಮ ಆರಂಭಿಕ ನುಡಿಗಳಿಗೆ ಧನ್ಯವಾದಗಳು. ನಿಮ್ಮಂತೆಯೇ, ನಾನು ಕೂಡ ಭಾರತ ಮತ್ತು ಇಯು ನಡುವಿನ ಸಂಬಂಧವನ್ನು ಗಾಢವಾಗಿಸಲು ಮತ್ತು ಬಲಪಡಿಸಲು ಬದ್ಧನಾಗಿದ್ದೇನೆ. ಇದಕ್ಕಾಗಿ ನಾವು ದೀರ್ಘಕಾಲೀನ ಕಾರ್ಯತಂತ್ರದ ದೃಷ್ಟಿಕೋನವನ್ನು ಅಳವಡಿಸಿಕೊಳ್ಳಬೇಕು.

ಇದಲ್ಲದೆ, ನಿಗದಿತ ಸಮಯದಲ್ಲಿ ಕಾರ್ಯಗತಗೊಳಿಸಬಹುದಾದ ಕ್ರಿಯೆ-ಆಧಾರಿತ ಕಾರ್ಯಸೂಚಿಯನ್ನು ರೂಪಿಸಬೇಕು. ಭಾರತ ಮತ್ತು ಇಯು ಸಹಜ ಸಹಯೋಗಿಗಳು. ನಮ್ಮ ಪಾಲುದಾರಿಕೆ ವಿಶ್ವದ ಶಾಂತಿ ಮತ್ತು ಸ್ಥಿರತೆಗೆ ಉಪಯುಕ್ತವಾಗಿದೆ. ಇಂದಿನ ಜಾಗತಿಕ ಪರಿಸ್ಥಿತಿಯಲ್ಲಿ ಈ ವಾಸ್ತವವು ಇನ್ನಷ್ಟು ಸ್ಪಷ್ಟವಾಗಿದೆ.

ಎರಡೂ ಕಡೆಯವರು ಪ್ರಜಾಪ್ರಭುತ್ವ, ಬಹುತ್ವ, ಒಳಗೊಳ್ಳುವಿಕೆ, ಅಂತರರಾಷ್ಟ್ರೀಯ ಸಂಸ್ಥೆಗಳಿಗೆ ಗೌರವ, ಬಹುಪಕ್ಷೀಯತೆ, ಸ್ವಾತಂತ್ರ್ಯ ಮತ್ತು ಪಾರದರ್ಶಕತೆಯಂತಹ ಸಾರ್ವತ್ರಿಕ ಮೌಲ್ಯಗಳನ್ನು ಹಂಚಿಕೊಳ್ಳುತ್ತವೆ. ಕೋವಿಡ್-19ರ ನಂತರ, ಆರ್ಥಿಕ ಕ್ಷೇತ್ರದಲ್ಲಿ ಜಾಗತಿಕವಾಗಿ ಹೊಸ ಸಮಸ್ಯೆಗಳು ಉದ್ಭವಿಸಿವೆ. ಇದಕ್ಕಾಗಿ ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವೆ ಹೆಚ್ಚಿನ ಸಹಕಾರ ಅಗತ್ಯವಾಗಿದೆ.

ಇಂದು, ನಮ್ಮ ನಾಗರಿಕರ ಆರೋಗ್ಯ ಮತ್ತು ಸಮೃದ್ಧಿ ಎರಡೂ ಸವಾಲುಗಳನ್ನು ಎದುರಿಸುತ್ತಿವೆ. ನಿಯಮ ಆಧಾರಿತ ಅಂತರರಾಷ್ಟ್ರೀಯ ಸಮುದಾಯದ ಮೇಲೆ ಅನೇಕ ರೀತಿಯ ಒತ್ತಡಗಳಿವೆ. ಇಂತಹ ಸಂದರ್ಭದಲ್ಲಿ, ಭಾರತ-ಇಯು ಸಹಭಾಗಿತ್ವವು ಆರ್ಥಿಕ ಪುನರ್ನಿರ್ಮಾಣದಲ್ಲಿ ಮತ್ತು ಮಾನವ ಕೇಂದ್ರಿತ ಹಾಗೂ ಮಾನವೀಯತೆ ಕೇಂದ್ರಿತ ಜಾಗತೀಕರಣವನ್ನು ನಿರ್ಮಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಪ್ರಸ್ತುತ ಸವಾಲುಗಳ ಹೊರತಾಗಿ, ಹವಾಮಾನ ಬದಲಾವಣೆಯಂತಹ ದೀರ್ಘಕಾಲೀನ ಸವಾಲುಗಳು ಭಾರತ ಮತ್ತು ಇಯು ಎರಡಕ್ಕೂ ಆದ್ಯತೆಯ ವಿಷಯಗಳಾಗಿವೆ.

ಭಾರತದಲ್ಲಿ ನವೀಕರಿಸಬಹುದಾದ ಇಂಧನ ಬಳಕೆಯನ್ನು ಹೆಚ್ಚಿಸಲು, ನಾವು ಯುರೋಪಿನಿಂದ ಹೂಡಿಕೆ ಮತ್ತು ತಂತ್ರಜ್ಞಾನವನ್ನು ಆಹ್ವಾನಿಸುತ್ತೇವೆ. ಈ ವರ್ಚುವಲ್ ಶೃಂಗಸಭೆಯ ಮೂಲಕ ನಮ್ಮ ಸಂಬಂಧಗಳು ವೇಗವನ್ನು ಪಡೆಯುತ್ತವೆ ಎಂದು ನಾನು ಭಾವಿಸುತ್ತೇನೆ.

ಗೌರವಾನ್ವಿತರೇ, ನಿಮ್ಮೊಂದಿಗೆ ಮಾತನಾಡಲು ಈ ಅವಕಾಶ ದೊರಕಿದ್ದಕ್ಕೆ ಮತ್ತೊಮ್ಮೆ ನನ್ನ ಸಂತೋಷವನ್ನು ವ್ಯಕ್ತಪಡಿಸುತ್ತಿದ್ದೇನೆ.

***



(Release ID: 1638899) Visitor Counter : 328