ಪ್ರಧಾನ ಮಂತ್ರಿಯವರ ಕಛೇರಿ
ಗೂಗಲ್ ಸಿಇಒ ಸುಂದರ್ ಪಿಚೈ ಅವರೊಂದಿಗೆ ಪ್ರಧಾನಿ ಸಂವಾದ
Posted On:
13 JUL 2020 2:31PM by PIB Bengaluru
ಗೂಗಲ್ ಸಿಇಒ ಸುಂದರ್ ಪಿಚೈ ಅವರೊಂದಿಗೆ ಪ್ರಧಾನಿ ಸಂವಾದ
ಭಾರತದಲ್ಲಿ ಸಾಂಕ್ರಾಮಿಕ ರೋಗದ ವಿರುದ್ಧದ ಸಮರದಲ್ಲಿ ಪ್ರಧಾನಿ ನಾಯಕತ್ವಕ್ಕೆ ಗೂಗಲ್ ಸಿಇಒ ಮೆಚ್ಚುಗೆ
ಭಾರತದಲ್ಲಿ ಗೂಗಲ್ ಹೂಡಿಕೆ ಯೋಜನೆಗಳ ಬಗ್ಗೆ ಪ್ರಧಾನಿಯವರಿಗೆ ವಿವರಿಸಿದ ಸಿಇಒ
ತಂತ್ರಜ್ಞಾನವು ರೈತರಿಗೆ ಹೆಚ್ಚಿನ ಪ್ರಯೋಜನಕಾರಿಯಾಗಿದೆ; ಕೃಷಿಯಲ್ಲಿ ಕೃತಕ ಬುದ್ಧಿಮತ್ತೆಗೆ ಅಪಾರ ಸಾಮರ್ಥ್ಯವಿದೆ: ಪ್ರಧಾನಿ
ಆನ್ಲೈನ್ ಶಿಕ್ಷಣದ ವ್ಯಾಪ್ತಿಯ ವಿಸ್ತರಣೆಗೆ ತಂತ್ರಜ್ಞಾನದ ಬಳಕೆ ಮತ್ತು ಸ್ಥಳೀಯ ಭಾಷೆಯಲ್ಲಿ ತಂತ್ರಜ್ಞಾನದ ಲಭ್ಯತೆ ಕುರಿತು ಚರ್ಚೆ
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಗೂಗಲ್ ಸಿಇಒ ಶ್ರೀ ಸುಂದರ್ ಪಿಚೈ ಅವರೊಂದಿಗೆ ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡೆಸಿದರು.
ಕೋವಿಡ್-19 ಬಗ್ಗೆ ಜಾಗೃತಿ ಮೂಡಿಸಲು ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಒದಗಿಸಲು ಗೂಗಲ್ ಕೈಗೊಂಡ ಪ್ರಯತ್ನಗಳ ಬಗ್ಗೆ ಶ್ರೀ ಪಿಚೈ ಪ್ರಧಾನ ಮಂತ್ರಿಯವರಿಗೆ ವಿವರಿಸಿದರು. ಪ್ರಧಾನಮಂತ್ರಿಯವರು ಕೈಗೊಂಡ ಲಾಕ್ಡೌನ್ನ ದಿಟ್ಟ ಕ್ರಮವು ಸಾಂಕ್ರಾಮಿಕ ರೋಗದ ವಿರುದ್ಧ ಭಾರತದ ಸಮರಕ್ಕೆ ಬಲವಾದ ಅಡಿಪಾಯ ಹಾಕಿತು ಎಂದು ಅವರು ಹೇಳಿದರು. ತಪ್ಪು ಮಾಹಿತಿ ಮತ್ತು ಅಗತ್ಯ ಮುನ್ನೆಚ್ಚರಿಕೆಗಳ ಬಗ್ಗೆ ತಿಳುವಳಿಕೆಯನ್ನು ತಲುಪಿಸುವಲ್ಲಿ ಗೂಗಲ್ ವಹಿಸಿರುವ ಪಾತ್ರವನ್ನು ಪ್ರಧಾನಿ ಶ್ಲಾಘಿಸಿದರು. ಆರೋಗ್ಯ ಸೇವೆಗಳಲ್ಲಿ ತಂತ್ರಜ್ಞಾನವನ್ನು ಮತ್ತಷ್ಟು ಸದುಪಯೋಗಪಡಿಸಿಕೊಳ್ಳುವ ಬಗ್ಗೆಯೂ ಅವರು ಮಾತನಾಡಿದರು.
ಭಾರತೀಯರು ತಂತ್ರಜ್ಞಾನಕ್ಕೆ ಬಹುಬೇಗನೆ ಹೊಂದಿಕೊಳ್ಳುತ್ತಿದ್ದಾರೆ ಮತ್ತು ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು. ರೈತರು ತಂತ್ರಜ್ಞಾನದಿಂದ ಲಾಭ ಪಡೆಯುತ್ತಿದ್ದಾರೆ ಮತ್ತು ಕೃಷಿಯಲ್ಲಿ ಕೃತಕ ಬುದ್ಧಿಮತ್ತೆಯ ವ್ಯಾಪಕವಾದ ಪ್ರಯೋಜನಗಳಿವೆ ಎಂದರು. ವಿದ್ಯಾರ್ಥಿಗಳು ಮತ್ತು ರೈತರು ಬಳಸಬಹುದಾದ ವರ್ಚುವಲ್ ಲ್ಯಾಬ್ಗಳ ಬಗ್ಗೆ ಪ್ರಧಾನಿ ಪ್ರಸ್ತಾಪಿಸಿದರು. ದೇಶದಲ್ಲಿ ಗೂಗಲ್ನ ಹೊಸ ಉತ್ಪನ್ನಗಳು ಮತ್ತು ಯೋಜನೆಗಳ ಬಗ್ಗೆ ಸುಂದರ್ ಪಿಚೈ ಪ್ರಧಾನಿಯವರಿಗೆ ವಿವರಿಸಿದರು. ಬೆಂಗಳೂರಿನಲ್ಲಿ ಕೃತಕ ಬುದ್ಧಿಮತ್ತೆ ಸಂಶೋಧನಾ ಪ್ರಯೋಗಾಲಯದ ಆರಂಭ ಮತ್ತು ಗೂಗಲ್ನ ಪ್ರವಾಹ ಮುನ್ಸೂಚನೆಯ ಪ್ರಯತ್ನಗಳಿಂದಾಗುವ ಪ್ರಯೋಜನಗಳ ಬಗ್ಗೆ ಅವರು ಪ್ರಸ್ತಾಪಿಸಿದರು.
ಭಾರತದಲ್ಲಿ ದೊಡ್ಡ ಹೂಡಿಕೆ ನಿಧಿಯನ್ನು ಪ್ರಾರಂಭಿಸಲು ಮತ್ತು ಕಾರ್ಯತಂತ್ರದ ಸಹಭಾಗಿತ್ವವನ್ನು ಅಭಿವೃದ್ಧಿಪಡಿಸುವ ಗೂಗಲ್ನ ಯೋಜನೆಯ ಬಗ್ಗೆ ಪ್ರಧಾನ ಮಂತ್ರಿಯವರಿಗೆ ವಿವರಿಸಲಾಯಿತು. ವಿಶ್ವದ ಅತ್ಯಂತ ಮುಕ್ತ ಆರ್ಥಿಕತೆಗಳಲ್ಲಿ ಭಾರತವೂ ಇದೆ ಎಂದು ಪ್ರಧಾನಿ ಹೇಳಿದರು. ಕೃಷಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡ ಇತ್ತೀಚಿನ ಕ್ರಮಗಳು ಮತ್ತು ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಅಭಿಯಾನದ ಬಗ್ಗೆ ಮಾತನಾಡಿದ ಅವರು, ಮರು ಕೌಶಲ್ಯದ ಮಹತ್ವವನ್ನು ತಿಳಿಸಿದರು.
ದತ್ತಾಂಶ ಸುರಕ್ಷತೆ ಮತ್ತು ಗೌಪ್ಯತೆ ಕುರಿತ ಕಾಳಜಿಗಳ ಬಗ್ಗೆ ಪ್ರಧಾನಿ ಚರ್ಚಿಸಿದರು. ನಂಬಿಕೆಯ ಕೊರತೆಯನ್ನು ನೀಗಿಸಲು ಟೆಕ್ ಕಂಪನಿಗಳು ಪ್ರಯತ್ನಗಳನ್ನು ಮಾಡಬೇಕಾಗಿದೆ ಎಂದು ಅವರು ಹೇಳಿದರು. ಸೈಬರ್ ಅಪರಾಧಗಳು ಮತ್ತು ಸೈಬರ್ ದಾಳಿಯ ಬೆದರಿಕೆಗಳ ಬಗ್ಗೆಯೂ ಅವರು ಮಾತನಾಡಿದರು. ಆನ್ಲೈನ್ ಶಿಕ್ಷಣದ ವ್ಯಾಪ್ತಿಯನ್ನು ವಿಸ್ತರಿಸಲು ತಾಂತ್ರಿಕ ಪರಿಹಾರಗಳು, ಸ್ಥಳೀಯ ಭಾಷೆಯಲ್ಲಿ ತಂತ್ರಜ್ಞಾನದ ಲಭ್ಯತೆ, ಕ್ರೀಡಾಂಗಣದ ವೀಕ್ಷಣೆಯ ಅನುಭವವನ್ನು ನೀಡಲು ಎಆರ್/ ವಿಆರ್ ಬಳಕೆ ಮತ್ತು ಡಿಜಿಟಲ್ ಪಾವತಿಗಳ ಕ್ಷೇತ್ರದ ಪ್ರಗತಿ ಸೇರಿದಂತೆ ಇನ್ನಿತರ ಕ್ಷೇತ್ರಗಳ ಬಗ್ಗೆ ಚರ್ಚೆ ನಡೆಸಿದರು.
***
(Release ID: 1638514)
Visitor Counter : 277
Read this release in:
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam