PIB Headquarters
ಕೋವಿಡ್-19 ಪಿ ಐ ಬಿ ದೈನಿಕ ವರದಿ
Posted On:
07 JUL 2020 6:24PM by PIB Bengaluru
ಕೋವಿಡ್-19 ಪಿ ಐ ಬಿ ದೈನಿಕ ವರದಿ
(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು
ಪಿಐಬಿ ವಾಸ್ತವದ ಪರಿಶೀಲನೆ- FACT CHECK- ಯನ್ನು ಒಳಗೊಂಡಿದೆ)
ಕೋವಿಡ್ -19 ಕ್ಕೆ ಸಂಬಂಧಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಪ್ಡೇಟ್:
ಒಂದು ಮಿಲಿಯನ್ ಜನಸಂಖ್ಯೆಗೆ ಹೋಲಿಕೆ ಮಾಡಿದಾಗ ಭಾರತ ವಿಶ್ವದಲ್ಲಿಯೇ ಅತ್ಯಂತ ಕಡಿಮೆ ಪ್ರಮಾಣದ ಕೋವಿಡ್ -19 ಪ್ರಕರಣಗಳನ್ನು ಹೊಂದಿದೆ ; ಸುಮಾರು 4.4 ಲಕ್ಷಕ್ಕೂ ಅಧಿಕ ಗುಣಮುಖ ಪ್ರಕರಣಗಳು, ಸಕ್ರಿಯ ಪ್ರಕರಣಗಳಿಗೆ ಹೋಲಿಸಿದಾಗ ಗುಣಮುಖ ಪ್ರಕರಣಗಳ ಸಂಖ್ಯೆ 1.8 ಲಕ್ಷದಷ್ಟು ಅಧಿಕ; ರಾಷ್ಟ್ರೀಯ ಗುಣಮುಖ ದರ 61 % ದಾಟಿದೆ.
2020ರ ಜುಲೈ 6 ರ ಡಬ್ಲ್ಯು. ಎಚ್.ಒ. ಪರಿಸ್ಥಿತಿ ವರದಿ 168 , ಮಿಲಿಯನ್ ಜನಸಂಖ್ಯೆಗೆ ಹೋಲಿಸಿದಾಗ ಭಾರತವು ಅತ್ಯಂತ ಕನಿಷ್ಟ ಪ್ರಮಾಣದ ಕೋವಿಡ್ -19 ಪ್ರಕರಣಗಳನ್ನು ಹೊಂದಿದ ರಾಷ್ಟ್ರವಾಗಿದೆ. ಭಾರತದಲ್ಲಿ ಒಂದು ಮಿಲಿಯನ್ ಜನಸಂಖ್ಯೆಗೆ ಹೋಲಿಸಿದಾಗ 505.37 ಪ್ರಮಾಣದಲ್ಲಿಯಷ್ಟೇ ಕೋವಿಡ್ ಸೋಂಕು ತಗಲಿದೆ, ಅದರೆ ಜಾಗತಿಕ ಸರಾಸರಿ ಪ್ರಮಾಣ 1453.25 ರಷ್ಟಿದೆ.
ಪರಿಸ್ಥಿತಿ ವರದಿಯು ಒಂದು ಮಿಲಿಯನ್ ಜನಸಂಖ್ಯೆಗೆ ಹೋಲಿಸಿದಾಗ ಭಾರತದಲ್ಲಿ ಮರಣ ಪ್ರಮಾಣ ಕೂಡಾ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ ಎಂಬುದನ್ನು ತೋರಿಸಿದೆ. ಒಂದು ಮಿಲಿಯನ್ ಜನಸಂಖ್ಯೆಗೆ ಭಾರತದಲ್ಲಿ ಈ ಪ್ರಕರಣಗಳಲ್ಲಿ ಸಾವಿಗೀಡಾಗುವವರ ಸಂಖ್ಯೆ 14.27. ಜಾಗತಿಕವಾಗಿ ಈ ಪ್ರಮಾಣ ನಾಲ್ಕು ಪಟ್ಟಿಗೂ ಅಧಿಕ ಪ್ರಮಾಣದಲ್ಲಿ ಹೆಚ್ಚಿದೆ ಮತ್ತು ಅದು 68.29 ರಷ್ಟಾಗಿದೆ.
ಕೋವಿಡ್ ರೋಗಿಗಳ ಆರೈಕೆಗಾಗಿ 1201 ಕೋವಿಡ್ ಗಾಗಿಯೇ ಮೀಸಲಾದ ಆಸ್ಪತ್ರೆಗಳಿವೆ, 2611 ಕೋವಿಡ್ ಆರೋಗ್ಯ ರಕ್ಷಣಾ ಕೇಂದ್ರಗಳಿವೆ, ಮತ್ತು 9909 ಕೋವಿಡ್ ಶುಶ್ರೂಷಾ ಕೇಂದ್ರಗಳಿವೆ. ಕಳೆದ 24 ಗಂಟೆಗಳಲ್ಲಿ ಒಟ್ಟು 15,515 ಕೋವಿಡ್ -19 ರೋಗಿಗಳು ಗುಣಮುಖರಾಗಿದ್ದಾರೆ. ಇದರೊಂದಿಗೆ ಇಂದಿನವರೆಗೆ ಒಟ್ಟು ಗುಣಮುಖರಾದವರ ಸಂಖ್ಯೆ 4,39,947 ಕ್ಕೇರಿದೆ. ಇಂದಿನವರೆಗೆ ಸಕ್ರಿಯ ಕೋವಿಡ್ -19 ಪ್ರಕರಣಗಳಿಗೆ ಹೋಲಿಸಿದರೆ ಗುಣಮುಖ ಪ್ರಕರಣಗಳ ಸಂಖ್ಯೆ 1,80,390 ರಷ್ಟು ಹೆಚ್ಚಿದೆ. ಕೋವಿಡ್ -19 ಪ್ರಕರಣಗಳಲ್ಲಿ ಗುಣಮುಖ ದರ 61.13% ಗೆ ಏರಿಕೆಯಾಗಿದೆ. ಪ್ರಸ್ತುತ 2,59,557 ಸಕ್ರಿಯ ಪ್ರಕರಣಗಳಿವೆ ಮತ್ತು ಎಲ್ಲವೂ ವೈದ್ಯಕೀಯ ನಿಗಾದಲ್ಲಿವೆ. ಕಳೆದ 24 ಗಂಟೆಗಳಲ್ಲಿ 2,41,430 ಸ್ಯಾಂಪಲ್ ಗಳನ್ನು ಪರೀಕ್ಷೆ ಮಾಡಲಾಗಿದೆ. ಕೋವಿಡ್ -19 ಕ್ಕಾಗಿ ರಾಷ್ಟ್ರವ್ಯಾಪ್ತಿಯಲ್ಲಿ ಪರೀಕ್ಷೆ ಮಾಡಲಾದ ಸ್ಯಾಂಪಲ್ ಗಳ ಸಂಖ್ಯೆ ಈಗ 1,02,11,092 ಕ್ಕೇರಿದೆ. ಸರಕಾರದ ವಲಯದಲ್ಲಿ 793 ಪ್ರಯೋಗಾಲಯಗಳು, ಮತ್ತು ಖಾಸಗಿ ವಲಯದಲ್ಲಿ 322 ಪ್ರಯೋಗಾಲಯಗಳು ಸೇರಿದಂತೆ ದೇಶದಲ್ಲಿ ಒಟ್ಟು 1115 ಪ್ರಯೋಗಾಲಯಗಳಿವೆ.
ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳಿಗೆ ಪರೀಕ್ಷೆಗಳನ್ನು ನಡೆಸಲು ಗೃಹ ವ್ಯವಹಾರಗಳ ಸಚಿವಾಲಯ ಅನುಮತಿ
ಗೃಹ ವ್ಯವಹಾರಗಳ ಸಚಿವಾಲಯವು ಕೇಂದ್ರ ಉನ್ನತ ಶಿಕ್ಷಣ ಕಾರ್ಯದರ್ಶಿಗಳಿಗೆ ನಿನ್ನೆ ಪತ್ರವೊಂದನ್ನು ಬರೆದಿದ್ದು, ಅದರಲ್ಲಿ ವಿಶ್ವವಿದ್ಯಾಲಯಗಳಿಗೆ ಮತ್ತು ಸಂಸ್ಥೆಗಳಿಗೆ ಪರೀಕ್ಷೆಗಳನ್ನು ನಡೆಸುವುದಕ್ಕೆ ಅನುಮತಿ ನೀಡಿದೆ. ಅಂತಿಮ ಅವಧಿಯ ಪರೀಕ್ಷೆಗಳನ್ನು ಕಡ್ಡಾಯವಾಗಿ ಯು.ಜಿ.ಸಿ.ಯು ನಿಗದಿ ಪಡಿಸಿದ ಪರೀಕ್ಷಾ ಮಾರ್ಗದರ್ಶಿಗಳ ಅನ್ವಯ ಮತ್ತು ಶೈಕ್ಷಣಿಕ ವೇಳಾಪಟ್ಟಿಯನ್ವಯ ನಡೆಸಬೇಕು ಮತ್ತು ಅದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಅನುಮೋದಿಸಿದ ಗುಣಮಟ್ಟ ಕಾರ್ಯಾಚರಣಾ ಪ್ರಕ್ರಿಯೆಯನ್ನು (ಎಸ್.ಒ.ಪಿ.) ಅನುಸರಿಸಿರಬೇಕು.
ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯಗಳು ಪರೀಕ್ಷೆ ನಡೆಸುವುದಕ್ಕೆ ಹಾಗು ಶೈಕ್ಷಣಿಕ ವೇಳಾಪಟ್ಟಿಗೆ ಸಂಬಂಧಿಸಿ ಯು.ಜಿ.ಸಿ. ಯ ಪರಿಷ್ಕೃತ ಮಾರ್ಗದರ್ಶಿಗಳನ್ನು ಬಿಡುಗಡೆ ಮಾಡಿದ ಎಚ್.ಆರ್. ಡಿ. ಸಚಿವರು
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವರಾದ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು 2020 ರ ಜುಲೈ 6 ರಂದು ಹೊಸದಿಲ್ಲಿಯಲ್ಲಿ, ವಿಶ್ವವಿದ್ಯಾಲಯಗಳಿಗೆ ಪರೀಕ್ಷೆ ನಡೆಸುವುದಕ್ಕೆ ಸಂಬಂಧಿಸಿದ ಯು.ಜಿ.ಸಿ.ಯ ಪರಿಷ್ಕೃತ ಮಾರ್ಗದರ್ಶಿಗಳು ಮತ್ತು ಶೈಕ್ಷಣಿಕ ವೇಳಾಪಟ್ಟಿಯನ್ನು ವರ್ಚುವಲ್ ಮಾಧ್ಯಮದಲ್ಲಿ ಬಿಡುಗಡೆ ಮಾಡಿದರು. ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಈ ಕ್ರಮ ಅನುಸರಿಸಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಪೋಖ್ರಿಯಾಲ್ ಆರೋಗ್ಯ, ಸುರಕ್ಷೆ, ಮತ್ತು ವಿದ್ಯಾರ್ಥಿಗಳಿಗೆ ನ್ಯಾಯೋಚಿತ, ಸಮಾನ ಅವಕಾಶ ತತ್ವಗಳನ್ನು ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ . ಇದೇ ವೇಳೆ ಶೈಕ್ಷಣಿಕ ವಿಶ್ವಾಸಾರ್ಹತೆಯನ್ನು ಖಾತ್ರಿಪಡಿಸುವುದು, ಉತ್ತಮ ಭವಿಷ್ಯದ ಅವಕಾಶಗಳು ಮತ್ತು ಜಾಗತಿಕವಾಗಿ ವಿದ್ಯಾರ್ಥಿಗಳ ಭವಿಷ್ಯದ ಪ್ರಗತಿಯನ್ನು ಖಾತ್ರಿಪಡಿಸುವುದೂ ಬಹಳ ಮುಖ್ಯ ಎಂದವರು ಹೇಳಿದರು. ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಕಠಿಣ ಸಮಯದಲ್ಲಿ ಬೋಧನೆ , ಕಲಿಕೆ, ಪರೀಕ್ಷೆಗಳು, ಶೈಕ್ಷಣಿಕ ವೇಳಾಪಟ್ಟಿ ಇತ್ಯಾದಿ ವಿಷಯಗಳಲ್ಲಿ ಯು.ಜಿ.ಸಿ.ಯು ಕೈಗೊಳ್ಳುತ್ತಿರುವ ಉಪಕ್ರಮಗಳನ್ನು ಅವರು ಕೊಂಡಾಡಿದರು.
“ಜಾಗತಿಕ ಸಾಂಕ್ರಾಮಿಕವು ನಮ್ಮನ್ನು ತಡೆದು ನಿಲ್ಲಿಸಲು ಬಿಡುವುದಿಲ್ಲ” ; ಸ್ವೀಡಿಶ್ ಆರೋಗ್ಯ ಸಚಿವರ ಜೊತೆಗಿನ ದ್ವಿಪಕ್ಷೀಯ ಆರೋಗ್ಯ ಸಹಕಾರ ಮಾತುಕತೆಯಲ್ಲಿ ಡಾ. ಹರ್ಷವರ್ಧನ್
ಸ್ವೀಡನ್ನಿನ ಆರೋಗ್ಯ ಮತ್ತು ಸಾಮಾಜಿಕ ವ್ಯವಹಾರಗಳ ಸಚಿವರಾದ ಶ್ರೀಮತಿ ಹೆಲೆನ್ ಗ್ರೆನ್ ಅವರು ಇಂದು ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸಹಕಾರದ ಬಗ್ಗೆ ಚರ್ಚಿಸಲು ಡಿಜಿಟಲ್ ಮಾದ್ಯಮದ ಮೂಲಕ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ. ಹರ್ಷವರ್ಧನ್ ಅವರಿಗೆ ಕರೆ ಮಾಡಿ ಮಾತನಾಡಿದರು. ಇಬ್ಬರು ಆರೋಗ್ಯ ಸಚಿವರು ಉಭಯ ದೇಶಗಳಲ್ಲಿ ಕೋವಿಡ್ -19 ರ ಸ್ಥಿತಿ ಗತಿಗಳು ಮತ್ತು ನಿಯಂತ್ರಣ ಕ್ರಮಗಳ ಬಗ್ಗೆ ಚರ್ಚಿಸಿದರಲ್ಲದೆ , ಅದನ್ನು ನಿಭಾಯಿಸುವ ನಿಟ್ಟಿನಲ್ಲಿ ಭವಿಷ್ಯದ ಕ್ರಮಗಳ ಬಗ್ಗೆಯೂ ಸಮಾಲೋಚಿಸಿದರು. ಜಾಗತಿಕ ಸಾಂಕ್ರಾಮಿಕ ಕೋವಿಡ್ -19 ನಿಭಾಯಿಸುವಾಗ ಭಾರತವು ಕಲಿತ ಪಾಠಗಳ ಬಗ್ಗೆ ಪ್ರಸ್ತಾಪಿಸಿದ ಡಾ. ಹರ್ಷವರ್ಧನ್ “ ಭಾರತದಲ್ಲಿ ಚೇತರಿಕೆ ದರ 61 % ಗೂ ಅಧಿಕವಿದೆ ಮತ್ತು ಮರಣ ಪ್ರಮಾಣ 2.78 % ಗೂ ಕಡಿಮೆ ಇದೆ. ದೇಶದಲ್ಲಿ 1.35 ಬಿಲಿಯನ್ ಜನಸಂಖ್ಯೆ ಇದ್ದು, ದಿನ ನಿತ್ಯ 2.5 ಲಕ್ಷ ಜನರನ್ನು ಪರೀಕ್ಷೆ ಮಾಡಲಾಗುತ್ತಿದೆ. ನಾಲ್ಕು ತಿಂಗಳ ಹಿಂದೆ ಒಂದೇ ಪ್ರಯೋಗಾಲಯವಿದ್ದು, ಈಗ ದೇಶಾದ್ಯಂತ ಕೋವಿಡ್ -19 ಪತ್ತೆ ಹಚ್ಚಲು 1100 ಕ್ಕೂ ಅಧಿಕ ಪ್ರಯೋಗಾಲಯಗಳು ಇವೆ” ಎಂದರು. ಭಾರತವು ನೊವೆಲ್ ಕೊರೊನಾ ವೈರಸ್ ಸಾಂಕ್ರಾಮಿಕವನ್ನು ಒಂದು ಅವಕಾಶವಾಗಿ ಬಳಸಿಕೊಂಡಿತು ಎಂದೂ ಅವರು ಹೇಳಿದರು.
ಗಂಗಾ ಪುನಶ್ಚೇತನಕ್ಕೆ ಹೆಚ್ಚಿನ ಬೆಂಬಲ ನೀಡಲು ವಿಶ್ವ ಬ್ಯಾಂಕಿನಿಂದ 400 ಮಿಲಿಯನ್ ಡಾಲರ್
ಗಂಗಾ ನದಿಗೆ ಪುನಶ್ಚೇತನ ನೀಡುವ ಉದ್ದೇಶದ ನಮಾಮಿ ಗಂಗಾ ಕಾರ್ಯಕ್ರಮಕ್ಕೆ ಇನ್ನಷ್ಟು ಬೆಂಬಲ ಹೆಚ್ಚಿಸುವ ಅಂಗವಾಗಿ ವಿಶ್ವ ಬ್ಯಾಂಕ್ ಮತ್ತು ಭಾರತ ಸರಕಾರ ಇಂದು ಸಾಲ ಒಪ್ಪಂದಕ್ಕೆ ಅಂಕಿತ ಹಾಕಿದವು. ಎರಡನೆ ರಾಷ್ಟ್ರೀಯ ಗಂಗಾ ನದಿ ತಟ ಯೋಜನೆ (ಎಸ್.ಎನ್.ಬಿ.ಜಿ.ಆರ್.ಬಿ.) ಯು ಈ ನದಿಯ ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ಸುಮಾರು 500 ಮಿಲಿಯನ್ನಿಗೂ ಅಧಿಕ ಜನರ ಆಶ್ರಯತಾಣವಾಗಿರುವ ನದಿಯ ಜಲಾನಯನ ಪ್ರದೇಶದ ನಿರ್ವಹಣೆಯನ್ನು ಬಲಪಡಿಸಲು ನೆರವಾಗಲಿದೆ. ಈ ಡಾಲರ್ 400 ಮಿಲಿಯನ್ ನಲ್ಲಿ 381 ಮಿಲಿಯನ್ ಡಾಲರ್ ಸಾಲವಾಗಿದ್ದು, 19 ಮಿಲಿಯನ್ ಡಾಲರ್ ಪ್ರಸ್ತಾಪಿತ ಭದ್ರತೆಯಾಗಿರುತ್ತದೆ. ಎಸ್.ಎನ್.ಜಿ.ಆರ್.ಬಿ.ಪಿ. ಯು ತ್ಯಾಜ್ಯ ವಿಸರ್ಜನೆಯನ್ನು ನಿಯಂತ್ರಿಸಲು ಸಹಾಯ ಮಾಡುವುದಕ್ಕಾಗಿ ಆಯ್ದ ನಗರ ಪ್ರದೇಶಗಳಲ್ಲಿ ತ್ಯಾಜ್ಯ ಕೊಳವೆ ಜಾಲ ಮತ್ತು ಸಂಸ್ಕರಣಾ ಘಟಕಗಳ ನಿರ್ಮಾಣಕ್ಕೆ ಹಣಕಾಸು ಒದಗಿಸಲಿವೆ. ಈ ಮೂಲಸೌಕರ್ಯ ಹೂಡಿಕೆಗಳು ಮತ್ತು ಅವುಗಳು ನಿರ್ಮಾಣ ಮಾಡಲಿರುವ ಉದ್ಯೋಗಗಳು ಕೋವಿಡ್ -19 ಬಿಕ್ಕಟ್ಟಿನಲ್ಲಿ ಭಾರತದ ಆರ್ಥಿಕತೆಯ ಪುನಶ್ಚೇತನಕ್ಕೆ ನೆರವಾಗಲಿವೆ.
ರಾಷ್ಟ್ರೀಯ ವೈದ್ಯಕೀಯ ಮಹತ್ವದ ಔಷಧೀಯ ಸಸ್ಯಗಳ ಮಂಡಳಿ ಮತ್ತು ಐ.ಸಿ.ಎ.ಆರ್-ರಾಷ್ಟ್ರೀಯ ಸಸ್ಯ ಆನುವಂಶಿಕ ಸಂಪನ್ಮೂಲಗಳ ಬ್ಯೂರೋ ನಡುವೆ ತಿಳುವಳಿಕಾ ಒಡಂಬಡಿಕೆ
ಆಯುಷ್ ಸಚಿವಾಲಯದಡಿಯಲ್ಲಿ ಬರುವ ರಾಷ್ಟ್ರೀಯ ಔಷಧೀಯ ಸಸ್ಯಗಳ ಮಂಡಳಿ ( ಎನ್.ಎಂ.ಪಿ.ಬಿ.) ಮತ್ತು ಕೃಷಿ ಸಂಶೋಧನೆ ಹಾಗು ಶಿಕ್ಷಣ ಇಲಾಖೆಯಡಿ ಬರುವ ಐ.ಸಿ.ಎ.ಆರ್. –ಸಸ್ಯ ಆನುವಂಶಿಕ ಸಂಪನ್ಮೂಲಗಳ ರಾಷ್ಟ್ರೀಯ ಬ್ಯೂರೋ (ಎನ್.ಬಿ.ಪಿ.ಜಿ.ಆರ್.) ಗಳು ತಿಳುವಳಿಕಾ ಒಡಂಬಡಿಕೆಗೆ (ಎಂ.ಒ.ಯು.) ಅಂಕಿತ ಹಾಕಿವೆ. ವೈದ್ಯಕೀಯ ಮತ್ತು ಸುಗಂಧ ಸಸ್ಯಗಳ ಆನುವಂಶಿಕ ಸಂಪನ್ಮೂಲಗಳನ್ನು (ಎಂ.ಎ.ಪಿ.ಜಿ.ಆರ್. ಗಳನ್ನು ) ಐ.ಸಿ.ಎ.ಆರ್.-ಎನ್.ಬಿ.ಪಿ.ಜಿ.ಆರ್. ನ ನಿರ್ದಿಷ್ಟಪಡಿಸಿದ ಸ್ಥಳಾವಕಾಶದಲ್ಲಿ ಧೀರ್ಘಾವಧಿ ದಾಸ್ತಾನು ಮಾದರಿಯಲ್ಲಿ (ಲಭ್ಯತೆ ಇರುವಂತೆ ) ರಾಷ್ಟ್ರೀಯ ಜೀನ್ ಬ್ಯಾಂಕ್ ನಲ್ಲಿಡುವಿಕೆ ಮತ್ತು ಅಥವಾ ಮಧ್ಯಮ ಅವಧಿಯ ದಾಸ್ತಾನು ಮಾದರಿಯಲ್ಲಿ ಪ್ರಾದೇಶಿಕ ಕೇಂದ್ರಗಳಲ್ಲಿ ದಾಸ್ತಾನಿಡುವ ಬಗ್ಗೆ ಹಾಗು ಸಸ್ಯ ಜೆರ್ಮ್ ಪ್ಲಾಸಂ ಸಂರಕ್ಷಣಾ ತಂತ್ರಜ್ಞಾನಗಳ ಬಗ್ಗೆ ಎನ್.ಎಂ.ಪಿ.ಬಿ.ಯ ಕಾರ್ಯ ತಂಡಕ್ಕೆ ತರಬೇತಿ ನೀಡುವಿಕೆಗಳು ಈ ಎಂ.ಒ.ಯು.ನ ಉದ್ದೇಶಗಳಾಗಿವೆ.
ಉತ್ತರ ಪ್ರದೇಶದಲ್ಲಿ ಕೋವಿಡ್ -19 ವಿರುದ್ದ ಹೋರಾಡಲು ಉತ್ತರ ಪ್ರದೇಶ ಸರಕಾರದ ಜೊತೆ ಕೈಜೋಡಿಸಿದ ಬಿ.ಎಸ್.ಐ.ಪಿ.
ಕೋವಿಡ್ -19 ತಡೆ, ನಿಯಂತ್ರಣ ಮತ್ತು ನಿರ್ವಹಣೆಗಾಗಿ ಭಾರತ ಸರಕಾರವು ರಾಜ್ಯ ಸರಕಾರಗಳ ಜೊತೆಗೂಢಿ ಅವಿಶ್ರಾಂತವಾಗಿ ಶ್ರಮಿಸುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಡಿ (ಡಿ.ಎಸ್.ಟಿ.) ಬರುವ ಬೀರಬಲ್ ಸಾಹ್ನಿ ಪೇಲಿಯೋ ವಿಜ್ಞಾನ ಸಂಸ್ಥೆ ( ಬಿ.ಎಸ್.ಐ.ಪಿ.) ಯು ಕೋವಿಡ್ -19 ರ ವಿರುದ್ದ ಹೋರಾಟಕ್ಕೆ ಉತ್ತರಪ್ರದೇಶದಲ್ಲಿ ರಾಜ್ಯ ಸರಕಾರದ ಜೊತೆ ಕೈಜೋಡಿಸಿದೆ. ಬಿ.ಎಸ್.ಐ.ಪಿ. ಕೋವಿಡ್ -19 ಪರೀಕ್ಷೆಗಾಗಿ ಪ್ರಯೋಗಾಲಯವನ್ನು ಸ್ಥಾಪಿಸಲು ಆರಂಭಿಕ ಕ್ರಮಗಳನ್ನು ಕೈಗೊಂಡಿದೆ. ಸಂಸ್ಥೆಯಲ್ಲಿರುವ ಹಿಂದಿನ ಡಿ.ಎನ್.ಎ. ಬಿ.ಎಸ್.ಎಲ್.-2 ಎ ಪ್ರಯೋಗಾಲಯದ ಲಭ್ಯತೆಯೇ ತಕ್ಷಣಕ್ಕೆ ಪರೀಕ್ಷೆಗಳನ್ನು ನಡೆಸುವುದು ಸಾಧ್ಯವಾಗಿಸಿದೆ. ಈ ಪ್ರಯೋಗಾಲಯವು ದಿನದ 24 ಗಂಟೆಯೂ ಕಾರ್ಯಾಚರಿಸಲಿದ್ದು, ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳ ಸುಮಾರು 400 ಸ್ಯಾಂಪಲ್ ಗಳನ್ನು ದಿನವೊಂದಕ್ಕೆ ಪರೀಕ್ಷೆ ಮಾಡಬಲ್ಲದು. ಇಂದಿನವರೆಗೆ 12,000 ಕ್ಕೂ ಅಧಿಕ ಸ್ಯಾಂಪಲ್ ಗಳನ್ನು ಪರೀಕ್ಷೆ ಮಾಡಲಾಗಿದೆ.
ವಿಶ್ವ ಬ್ಯಾಂಕ್ ಮತ್ತು ಅರೋಗ್ಯ ವಲಯದ ಎಚ್.ಎಲ್.ಜಿ. ಜೊತೆ 15 ನೇ ಹಣಕಾಸು ಆಯೋಗ ಸಭೆ
ಭಾರತದ ಆರೋಗ್ಯ ವಲಯದ ಮೇಲ್ಮೈ ಲಕ್ಷಣಗಳ ಬಗ್ಗೆ ವಿಸ್ತೃತವಾದ ತಿಳುವಳಿಕೆಗಾಗಿ ಮತ್ತು ಕೇಂದ್ರ ಸರಕಾರದ ಆವಶ್ಯಕತೆಗಳು ಹಾಗು ಅದರ ಆರೋಗ್ಯ ವಲಯದ ಖರ್ಚುಗಳ ಮರುಆದ್ಯತೀಕರಣದ ಉದ್ದೇಶಗಳನ್ನು ತಿಳಿದುಕೊಳ್ಳಲು 15 ನೇ ಹಣಕಾಸು ಆಯೋಗವು ವಿಶ್ವ ಬ್ಯಾಂಕಿನ ಪ್ರತಿನಿಧಿಗಳು, ನೀತಿ ಆಯೋಗ, ಮತ್ತು ಆಯೋಗದ ಉನ್ನತ ಮಟ್ಟದ ತಂಡ (ಎಚ್.ಎಲ್.ಜಿ.) ದ ಜೊತೆ ಸಭೆ ನಡೆಸಿತು. ಇದೇ ಮೊದಲ ಬಾರಿಗೆ ಇಡೀ ಅಧ್ಯಾಯವು ಆರೋಗ್ಯ ಹಣಕಾಸು ವಿನಿಯೋಗಕ್ಕೆ ಸಂಬಂಧಿಸಿದಂತೆ ಇರಲಿದೆ ಎಂದು ಆಯೋಗದ ಅಧ್ಯಕ್ಷರು ಹೇಳಿದ್ದಾರೆ.
ಪಿ ಐ ಬಿ ಕ್ಷೇತ್ರೀಯ ಕಚೇರಿಗಳ ವರದಿ
- ಚಂಡೀಗಢ: ಕೇಂದ್ರಾಡಳಿತ ಪ್ರದೇಶ ಚಂಡೀಗಢದ ಆಡಳಿತಾಧಿಕಾರಿಗಳು ಇನ್ನಷ್ಟು ತೀವ್ರವಾಗಿ ಸಂಪರ್ಕ ಪತ್ತೆಯನ್ನು ಮಾಡುವ ಅಗತ್ಯವನ್ನು ಮತ್ತು ಹೊರಗಿನವರು ನಗರ ಪ್ರವೇಶಿಸುವಾಗ ಹಾಗು ಅವರು ತಂಗಿರುವ ಸ್ಥಳದಲ್ಲಿ ತಪಾಸಣೆ ನಡೆಸುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಮುಂಗಾರು ಸಂಬಂಧಿತ ಯಾವುದೇ ರೋಗಗಳು ಸ್ಪೋಟಗೊಳ್ಳದಂತೆ ಖಾತ್ರಿಪಡಿಸಬೇಕು ಎಂದು ಅವರು ಮುನ್ಸಿಪಲ್ ಅಧಿಕಾರಿಗಳಿಗೆ ಮತ್ತು ವೈದ್ಯರಿಗೆ ನಿರ್ದೇಶನ ನೀಡಿದ್ದಾರೆ. ಕ್ಯಾಂಟೀನುಗಳಲ್ಲಿ ಅಥವಾ ಕಚೇರಿ ಕೊಠಡಿಗಳಲ್ಲಿ ಸಿಬ್ಬಂದಿಗಳು ಒಟ್ಟಿಗೆ ಕುಳಿತು ಊಟ ಮಾಡುವ ಪದ್ದತಿಯನ್ನು ನಿಲ್ಲಿಸಬೇಕು ಎಂದವರು ಆದೇಶಿಸಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕಾಗಿ ಅವರು ಈ ಆದೇಶ ನೀಡಿದ್ದಾರೆ. ಚಹಾ ವಿರಾಮದಲ್ಲಿಯೂ ಸಹಾ ಸಿಬ್ಬಂದಿಗಳು ಮುಖಗವಸುಗಳನ್ನು ಧರಿಸಿಕೊಂಡು ಸಾಮಾಜಿಕ ಅಂತರ ಕಾಪಾಡಬೇಕು ಎಂದವರು ಹೇಳಿದ್ದಾರೆ.
- ಪಂಜಾಬ್: ಪಂಜಾಬಿನಲ್ಲಿ ರಾಜ್ಯಕ್ಕೆ ಬರುವ ಎಲ್ಲಾ ಪ್ರವಾಸಿಗರಿಗೂ ಇ-ನೊಂದಾವಣೆ ಪ್ರಕ್ರಿಯೆಯನ್ನು ಕಡ್ದಾಯ ಮಾಡಲಾಗಿದೆ. ಸರಕಾರ ಹೊರಡಿಸಿರುವ ಮಾರ್ಗದರ್ಶಿಗಳ ಪ್ರಕಾರ ಪ್ರವಾಸಿಗರು ತಮ್ಮ ಮನೆಯಿಂದಲೇ ಆನ್ ಲೈನ್ ಮೂಲಕ ಸ್ವಯಂ ನೊಂದಾಯಿಸಿಕೊಳ್ಳಬಹುದು ಮತ್ತು ಆ ಮೂಲಕ ಅವರು ತಮಗಾಗಿ ಯಾವುದೇ ಅಡೆ ತಡೆ ಇಲ್ಲದ ಪ್ರವಾಸವನ್ನು ಖಾತ್ರಿಪಡಿಸಿಕೊಳ್ಳಬಹುದು. ಗಡಿ ತಪಾಸಣಾ ಕೇಂದ್ರಗಳಲ್ಲಿ ಯಾವುದೇ ಗುಂಪು ಸೇರುವುದರ ಮೂಲಕ ಮತ್ತು ಉದ್ದದ ಸರತಿ ಸಾಲುಗಳಿಂದಾಗಿ ಪ್ರವಾಸಿಗರಿಗೆ ತೊಂದರೆಯಾಗುವುದನ್ನು ನಿವಾರಿಸುವುದು ಇ-ನೊಂದಾವಣೆಯ ಉದ್ದೇಶ.
- ಹರ್ಯಾಣ: ಕೋವಿಡ್ -19 ರಿಂದ ರಿಯಲ್ ಎಸ್ಟೇಟ್ ಉದ್ಯಮದಲ್ಲಾಗಿರುವ ಅಸ್ತವ್ಯಸ್ತ ಸ್ಥಿತಿಯನ್ನು ನಿವಾರಿಸಲು , ಪರಿಹಾರ ಕ್ರಮಗಳನ್ನು ವಿಸ್ತರಿಸಿರುವ ಹರ್ಯಾಣಾ ಸರಕಾರವು 2020 ರ ಮಾರ್ಚ್ 1 ರಿಂದ ಆರಂಭಗೊಂಡು 2020 ರ ಸೆಪ್ಟೆಂಬರ್ 30 ರವರೆಗೆ 7 ತಿಂಗಳ ಕಾಲ, ಚಾಲ್ತಿಯಲ್ಲಿರುವ ಎಲ್ಲಾ ಯೋಜನೆಗಳ ಸಿ.ಎಲ್.ಯು. ಗಳು, ಪರವಾನಗಿ ಇತ್ಯಾದಿ ಗಳ ಅವಧಿ ಬದ್ಧತೆ ಮತ್ತು ಬಡ್ಡಿ ಪಾವತಿಗಳನ್ನು ಮುಂದೂಡಲು ನಿರ್ಧರಿಸಿದೆ. ಮೊರಟೋರಿಯಂ ಅವಧಿಯು 2020 ರ ಮಾರ್ಚ್ 1 ರಿಂದ 2020 ರ ಸೆಪ್ಟೆಂಬರ್ 30 ರ ನಡುವಿನ ಅವಧಿಯನ್ನು ಶೂನ್ಯ ಎಂದು ಪರಿಗಣಿಸುತ್ತದೆ.
- ಹಿಮಾಚಲ ಪ್ರದೇಶ: ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಅವಧಿಯಲ್ಲಿಯೂ ರಾಜ್ಯದಲ್ಲಿ ಔಷಧಿ ಉದ್ಯಮ ಕಾರ್ಯಾಚರಣೆ ಮಾಡಿದೆ ಮತ್ತು ರಾಜ್ಯದ ಔಷಧಿ ಘಟಕಗಳಲ್ಲಿ ತಯಾರಾದ ಔಷಧಿಗಳು ಇತರ ರಾಷ್ಟ್ರಗಳಿಗೆ ರಫ್ತಾಗಿವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಹಲವಾರು ರಾಜ್ಯಗಳು ಕೋವಿಡ್ -19 ರಿಂದಾಗಿ ಕಂಗೆಟ್ಟಿರುವಾಗ ಹಿಮಾಚಲ ಪ್ರದೇಶ ಉತ್ತಮ ಸ್ತಿತಿಯಲ್ಲಿತ್ತು. ಈ ಬಿಕ್ಕಟ್ಟನ್ನು ಅವಕಾಶವಾಗಿ ಪರಿವರ್ತಿಸುವ ಪ್ರಯತ್ನಗಳು ನಡೆಯಬೇಕು ಎಂದವರು ಹೇಳಿದರು.
- ಕೇರಳ: ರಾಜ್ಯದಲ್ಲಿ ಮತ್ತೊಬ್ಬರು ಕೋವಿಡ್ -19 ಕ್ಕೆ ಬಲಿಯಾಗುವುದರೊಂದಿಗೆ , ಈ ರೋಗಕ್ಕೆ ತುತ್ತಾದವರ ಒಟ್ಟು ಸಂಖ್ಯೆ 28ಕ್ಕೇರಿದೆ. ಕೊಲ್ಲಿ ರಾಷ್ಟ್ರದಿಂದ ಮರಳಿ ಬಂದು ಕೊಲ್ಲಂ ಜಿಲ್ಲೆಯಲ್ಲಿ ಗೃಹ ಕ್ವಾರಂಟೈನಿನಲ್ಲಿದ್ದ 24 ವರ್ಷದ ವ್ಯಕ್ತಿ ನಿನ್ನೆ ಮೃತಪಟ್ಟಿದ್ದಾರೆ. ಅವರ ಪರೀಕ್ಷಾ ವರದಿ ಇಂದು ಪಾಸಿಟಿವ್ ಆಗಿದೆ. ಕೋಝಿಕ್ಕೋಡ್ ನಲ್ಲಿಯ ಅಪಾರ್ಟ್ ಮೆಂಟ್ ಸಂಕೀರ್ಣದಲ್ಲಿಯ ಮತ್ತೆ ಆರು ಮಂದಿ ನಿವಾಸಿಗಳ ವರದಿ ಪಾಸಿಟಿವ್ ಬರುವುದರೊಂದಿಗೆ ಇಲ್ಲಿ ಹೊಸ ಪ್ರಕರಣಗಳ ಸಂಖ್ಯೆ 11 ಕ್ಕೇರಿದೆ. ನಿವಾಸಿಗಳು ಕೋವಿಡ್ -19 ಶಿಷ್ಟಾಚಾರ ಪಾಲಿಸದಿರುವುದನ್ನು ಕಂಡುಕೊಂಡ ಜಿಲ್ಲಾಡಳಿತ ಇದರ ಬೆನ್ನಲ್ಲೇ ಹೊಸ ನಿರ್ದೇಶನಗಳನ್ನು ನೀಡಿದೆ. ರಾಜ್ಯದಿಂದ ಹೊರಗೆ ಮತ್ತೆ ಮೂರು ಮಂದಿ ಕೇರಳೀಯನ್ನರು ಕೊರೊನಾವೈರಸ್ಸಿಗೆ ಬಲಿಯಾಗಿದ್ದಾರೆ. ಓರ್ವರು ಕುವೈಟಿನಲ್ಲಿ ಮತ್ತು ಇನ್ನಿಬ್ಬರು ಮುಂಬಯಿಯಲ್ಲಿ ಮೃತಪಟ್ಟಿದ್ದಾರೆ. ಮುಂಬಯಿಯಲ್ಲಿ ಮೃತಪಟ್ಟ ಮಲಯಾಳಿಗಳ ಒಟ್ಟು ಸಂಖ್ಯೆ 40 ಕ್ಕೇರಿದೆ. ಕೇರಳದಲ್ಲಿ ನಿನ್ನೆ 193 ಹೊಸ ಪ್ರಕರಣಗಳು ದೃಢಪಟ್ಟಿವೆ. ಈಗ 2,252 ರೋಗಿಗಳು ಚಿಕಿತ್ಸೆಯಲ್ಲಿದ್ದಾರೆ ಮತ್ತು 1.83 ಲಕ್ಷ ಜನರು ಕ್ವಾರಂಟೈನಿನಲ್ಲಿದ್ದಾರೆ.
- ತಮಿಳುನಾಡು: ಕೋವಿಡ್ -19 ಶುಶ್ರೂಷೆಗೆ ಸಂಬಂಧಿಸಿ ಖಾಸಗಿ ವೈದ್ಯಕೀಯ ಕಾಲೇಜುಗಳನ್ನು ಪುದುಚೇರಿ ಸರಕಾರದ ನಿಯಂತ್ರಣಕ್ಕೆ ತರಲಾಗುವುದು. ಕೋವಿಡ್ -19 ಜಾಗತಿಕ ಸಾಂಕ್ರಾಮಿಕದಿಂದ ಮೃತಪಟ್ಟವರ ಸಮಗ್ರ ದತ್ತಾಂಶಗಳನ್ನು ಜುಲೈ 15 ರೊಳಗೆ ಕಳುಹಿಸಿಕೊಡುವಂತೆ ಬೃಹತ್ ಚೆನ್ನೈ ಮಹಾನಗರಪಾಲಿಕೆಗೆ (ಜಿ.ಸಿ.ಸಿ.) ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಿರ್ದೇಶನ ನೀಡಿದೆ. ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆ ನೀಡುವ ಆರೋಗ್ಯ ಕ್ಷೇತ್ರದ ಸಿಬ್ಬಂದಿಗಳ ರಕ್ಷಣೆಗಾಗಿ ಐ.ಐ.ಟಿ. ಮದ್ರಾಸ್ ನಲ್ಲಿಯ ಸಂಶೋಧಕರು ನೈಲಾನ್ ಆಧಾರಿತ ನ್ಯಾನೋ ಲೇಪನದ ಫಿಲ್ಟರನ್ನು ಅಭಿವೃದ್ದಿಪಡಿಸಿದ್ದಾರೆ. ಈ ಯೋಜನೆಗೆ ಡಿ.ಆರ್.ಡಿ.ಒ. ಹಣಕಾಸು ನೆರವು ನೀಡಿದೆ. ನಿನ್ನೆ 3827 ಹೊಸ ಪ್ರಕರಣಗಳು ವರದಿಯಾಗಿವೆ ಮತ್ತು 3793 ಮಂದಿ ಗುಣಮುಖರಾಗಿದ್ದಾರೆ ಹಾಗು 61 ಸಾವುಗಳು ವರದಿಯಾಗಿವೆ. ಚೆನ್ನೈಯ ಪ್ರಕರಣಗಳ ಸಂಖ್ಯೆ 1747. ಇದುವರೆಗೆ ಒಟ್ಟು ಪ್ರಕರಣಗಳ ಸಂಖ್ಯೆ 1,14,978 ಸಕ್ರಿಯ ಪ್ರಕರಣಗಳು : 46,833. ಮೃತಪಟ್ಟವರು: 1571. ಚೆನ್ನೈಯಲ್ಲಿ ಸಕ್ರಿಯ ಪ್ರಕರಣಗಳು: 24,082.
- ಕರ್ನಾಟಕ: ರಾಜ್ಯದ ಕೋವಿಡ್ -19 ಆರ್ಥಿಕ ಪರಿಹಾರ ಪ್ಯಾಕೇಜಿನ ಭಾಗವಾಗಿರುವ ಕೈಮಗ್ಗದಲ್ಲಿ ನೇಯುವವರಿಗಾಗಿರುವ “ನೇಕಾರ ಸಮ್ಮಾನ ಯೋಜನಾ” ಅಡಿಯಲ್ಲಿ ನೇರ ನಗದು ವರ್ಗಾವಣೆಗೆ ಮುಖ್ಯಮಂತ್ರಿ ಚಾಲನೆ ನೀಡಿದರು. ರಾಜ್ಯವು ಅಂತಿಮ ವರ್ಷದ ಎಂ.ಬಿ.ಬಿ.ಎಸ್. ಮತ್ತು ನರ್ಸಿಂಗ್ ವಿದ್ಯಾರ್ಥಿಗಳನ್ನು ಕೋವಿಡ್ ಆರೈಕೆ ಕೇಂದ್ರಗಳಿಗೆ ನಿಯೋಜಿಸಲಿದೆ. ಈ ಜಾಗತಿಕ ಸಾಂಕ್ರಾಮಿಕದ ವಿರುದ್ದ ಮುಂಚೂಣಿ ಹೋರಾಟದಲ್ಲಿದ್ದ ಆಶಾ ಕಾರ್ಯಕರ್ತೆಯರು ರಾಜ್ಯ ಸರಕಾರ ತಮ್ಮ ಬೇಡಿಕೆ ಈಡೇರಿಸಲು ವಿಫಲವಾಗಿರುವುದರಿಂದ ಕರ್ನಾಟಕದಾದ್ಯಂತ ಜುಲೈ 10 ರಿಂದ ಕೆಲಸಕ್ಕೆ ಬಹಿಷ್ಕಾರ ಹಾಕಲಿದ್ದಾರೆ. ನಿನ್ನೆ 1843 ಹೊಸ ಪ್ರಕರಣಗಳು , 680 ಬಿಡುಗಡೆಗಳು ಮತ್ತು 30 ಸಾವುಗಳು ವರದಿಯಾಗಿವೆ. ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ : 25,317. ಸಕ್ರಿಯ ಪ್ರಕರಣಗಳು: 14,385, ಸಾವುಗಳು : 401 , ಗುಣಮುಖರಾಗಿ ಬಿಡುಗಡೆಯಾದವರು: 10,527.
- ಆಂಧ್ರ ಪ್ರದೇಶ: ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳನ್ನು ( ಇ.ಎ.ಎಂ.ಸಿ.ಇ.ಟಿ.) ಕಟ್ಟು ನಿಟ್ಟಾಗಿ ನಡೆಸಲು ರಾಜ್ಯ ಸರಕಾರವು ಸಿದ್ದತೆಗಳನ್ನು ಮಾಡುತ್ತಿದೆ. ; ಜುಲೈ 19 ರಂದು ಅಣಕು ಪರೀಕ್ಷೆಗಳನ್ನು ಭಾರತೀಯ ಕಂಪ್ಯೂಟರ್ ಸೊಸೈಟಿ ಸಹಾಯದೊಂದಿಗೆ ಮಾಡಲಾಗುತ್ತದೆ. ನೆಲ್ಲೂರಿನಲ್ಲಿ ಇತ್ತೀಚೆಗೆ ಇಬ್ಬರು ಸಿಬ್ಬಂದಿಗಳು ಕೋವಿಡ್ -19 ಕ್ಕೆ ಬಲಿಯಾದ ಮತ್ತು ಹಲವರಿಗೆ ಸೋಂಕು ತಗಲಿದ ಪ್ರಕರಣಗಳು ವರದಿಯಾದ ಬಳಿಕ ಎ.ಪಿ.ಎಸ್.ಆರ್.ಟಿ.ಸಿ. ಸಿಬ್ಬಂದಿಗಳು ಕೋವಿಡ್ -19 ಪರಿಸ್ಥಿತಿಯ ಬಗ್ಗೆ ಭಯಗೊಂಡು ಕರ್ತವ್ಯಕ್ಕೆ ಬಹಿಷ್ಕಾರ ಹಾಕಿದ್ದಾರೆ. ಕಳೆದ 24 ಗಂಟೆಗಳಲ್ಲ್ಲಿ 1178 ಹೊಸ ಪ್ರಕರಣಗಳು ವರದಿಯಾಗಿವೆ, 762 ಮಂದಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಮತ್ತು 13 ಸಾವುಗಳು ಸಂಭವಿಸಿವೆ. 16,238 ಸ್ಯಾಂಪಲ್ ಗಳನ್ನು ಪರೀಕ್ಷಿಸಲಾಗಿದೆ. 1178 ಪ್ರಕರಣಗಳಲ್ಲಿ 22 ಪ್ರಕರಣಗಳು ಅಂತಾರಾಜ್ಯ ಪ್ರಕರಣಗಳು. ಮತ್ತು ಒಂದು ಪ್ರಕರಣ ವಿದೇಶ ಬಂದಿರುವಂತಹದ್ದು. ಒಟ್ಟು ಪ್ರಕರಣಗಳು: 21,197. ಸಕ್ರಿಯ ಪ್ರಕರಣಗಳು: 11,200, ಸಾವುಗಳು: 252, ಗುಣಮುಖರಾಗಿ ಬಿಡುಗಡೆಯಾದವರು: 9745.
- ತೆಲಂಗಾಣ: ಹೈದರಾಬಾದಿನಲ್ಲಿಯ ಖಾಸಗಿ ವೈದ್ಯಕೀಯ ಕಾಲೇಜುಗಳು ಕೋವಿಡ್ -19 ರೋಗಿಗಳ ಚಿಕಿತ್ಸೆ ಮತ್ತು ವೆಚ್ಚಕ್ಕೆ ಸಂಬಂಧಿಸಿ ಸ್ಪಷ್ಟತೆಗಾಗಿ ಕಾಯುತ್ತಿವೆ. ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವುದರಿಂದ ತೆಲಂಗಾಣ ಸರಕಾರವು ಬಹಳ ಕಾಲದಿಂದ ಬಾಕಿಯಾಗಿರುವ ಇ-ಕಚೇರಿ ವ್ಯವಸ್ಥೆಯನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದೆ. ನಿನ್ನೆಯವರೆಗೆ ಒಟ್ಟು ಪ್ರಕರಣಗಳ ಸಂಖ್ಯೆ : 25,733. ಸಕ್ರಿಯ ಪ್ರಕರಣಗಳು: 10,646, ಸಾವುಗಳು: 306, ಬಿಡುಗಡೆಗಳು: 14,781.
- ಅಸ್ಸಾಂ: ಅಸ್ಸಾಂನ 250 ಕ್ಕೂ ಅಧಿಕ ಮಂದಿ ಪೊಲೀಸರು ಕೊರೊನಾವೈರಸ್ ಬಾಧಿತರಾಗಿದ್ದಾರೆ ಮತ್ತು ಅವರಲ್ಲಿ 80 ಶೇಖಡಾದಷ್ಟು ಮಂದಿ ಗುವಾಹಟಿಯವರು ಎಂದು ಅಸ್ಸಾಂ ಡಿ.ಜಿ.ಪಿ. ಶ್ರೀ ಭಾಸ್ಕರ ಜ್ಯೋತಿ ಮಹಾಂತ ಟ್ವೀಟ್ ಮಾಡಿದ್ದಾರೆ.
- ಮಣಿಪುರ: ಸಾರ್ವಜನಿಕ ಸ್ಥಳಗಳಲ್ಲಿ ಮುಖಗವಸುಗಳನ್ನು ಧರಿಸದಿರುವ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವ ಹಾಗು ಲಾಕ್ ಡೌನ್ ನಿಬಂಧನೆಗಳನ್ನು ಉಲ್ಲಂಘಿಸಿರುವ 442 ಮಂದಿಯನ್ನು ಮಣಿಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ. 265 ವಾಹನಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಕಾನೂನು ಉಲ್ಲಂಘಿಸಿದವರಿಂದ 57,500 ರೂ. ದಂಡವನ್ನು ವಸೂಲಿ ಮಾಡಲಾಗಿದೆ.
- ಮಿಜೋರಾಂ: ಮಿಜೋರಾಂನಲ್ಲಿಂದು ಕೋವಿಡ್ -19 ರಿಂದ ಗುಣಮುಖರಾದ ಆರು ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈಗ ಸಕ್ರಿಯ ಪ್ರಕರಣಗಳ ಸಂಖ್ಯೆ 58 ಮತ್ತು ಇದುವರೆಗೆ ಗುಣಮುಖರಾದವರ ಸಂಖ್ಯೆ 139.
- ನಾಗಾಲ್ಯಾಂಡ್ : ಬೆಂಗಳೂರಿನಿಂದ 500 ಮಂದಿಯನ್ನು ಮರಳಿ ರಾಜ್ಯಕ್ಕೆ ಕರೆತರುವ ವಿಶೇಷ ರೈಲು ನಾಗಾಲ್ಯಾಂಡಿನ ದಿಮಾಪುರಕ್ಕೆ 2020 ರ ಜುಲೈ 9 ರಂದು ತಲುಪುವ ನಿರೀಕ್ಷೆ ಇದೆ. ನಾಗಾಲ್ಯಾಂಡಿನಲ್ಲಿ 11 ಹೊಸ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 636. ಇದರಲ್ಲಿ 393 ಸಕ್ರಿಯ ಪ್ರಕರಣಗಳು ಮತ್ತು 243 ಗುಣಮುಖ ಪ್ರಕರಣಗಳು.
- ಮಹಾರಾಷ್ಟ್ರ: ಐದನೇ ಹಂತ ಆರಂಭಗೊಳ್ಳುತ್ತಿರುವಂತೆಯೇ ರಾಜ್ಯ ಸರಕಾರವು ನಿಧಾನವಾಗಿ ನಿರ್ಬಂಧಗಳನ್ನು ಹಿಂತೆಗೆದುಕೊಳ್ಳುತ್ತಿದೆ.ಕಂಟೈನ್ ಮೆಂಟ್ ವಲಯದ ಹೊರಗಿರುವ ಹೊಟೇಲುಗಳು, ಲಾಡ್ಜ್ ಗಳು, ಅತಿಥಿ ಗೃಹಗಳು ನಾಳೆಯಿಂದ 33% ಸಾಮರ್ಥ್ಯದಲ್ಲಿ ಕಾರ್ಯಾಚರಿಸಲಿವೆ. ಮಹಾರಾಷ್ಟ್ರದಲ್ಲಿ 5,368 ಹೊಸ ಕೊರೊನಾವೈರಸ್ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 2,11,987 ಕ್ಕೇರಿದೆ. ಸೋಮವಾರದಂದು 3,522 ರೋಗಿಗಳು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಗುಣಮುಖರಾಗಿ ಬಿಡುಗಡೆಯಾದವರ ಒಟ್ಟು ಸಂಖ್ಯೆ 1,15,262 ಕ್ಕೇರಿದೆ.ರಾಜ್ಯದಲ್ಲಿ 87,681 ಸಕ್ರಿಯ ಪ್ರಕರಣಗಳಿವೆ.
- ಗುಜರಾತ್: ಗುಜರಾತಿನಲ್ಲಿ ಕೋವಿಡ್-19 ಪ್ರಕರಣಗಳ ಒಟ್ಟು ಸಂಖ್ಯೆ 36,858 ಕ್ಕೆ ತಲುಪಿದೆ. 735 ಹೊಸ ಪ್ರಕರಣಗಳು ವರದಿಯಾಗಿವೆ. ಸತತ ಮೂರನೇ ದಿನವೂ ರಾಜ್ಯದಲ್ಲಿ 700 ಕ್ಕೂ ಅಧಿಕ ಹೊಸ ಪ್ರಕರಣಗಳು ವರದಿಯಾಗಿವೆ. ಮತ್ತು 17 ಸಾವುಗಳು ಸಂಭವಿಸಿವೆ. ಇದರೊಂದಿಗೆ ರಾಜ್ಯದಲ್ಲಿ ಮೃತಪಟ್ತವರ ಸಂಖ್ಯೆ 1962 ಕ್ಕೇರಿದೆ. ಹೆಚ್ಚಿನ ಪ್ರಕರಣಗಳು ಸೂರತ್ತಿನಿಂದ ವರದಿಯಾಗಿವೆ, ಇಲ್ಲಿ 201 ಪ್ರಕರಣಗಳು ವರದಿಯಾಗಿದ್ದರೆ, ಅಹ್ಮದಾಬಾದಿನಲ್ಲಿ 168 ಹೊಸ ಪ್ರಕರಣಗಳು ವರದಿಯಾಗಿವೆ.
- ರಾಜಸ್ಥಾನ: ಇಂದು ಬೆಳಿಗ್ಗೆ 234 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ , ಪ್ರಕರಣಗಳ ಒಟ್ಟು ಸಂಖ್ಯೆ 20,922 ಕ್ಕೇರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 3,949. ಗುಣಮುಖರಾದವರ ಒಟ್ಟು ಸಂಖ್ಯೆ 16,320 ಕೇರಿದೆ.
- ಮಧ್ಯ ಪ್ರದೇಶ: ರಾಜ್ಯ ಸರಕಾರದ ಕೊರೊನಾ ಕೊಲ್ಲಿ ಆಂದೋಲನದಡಿಯಲ್ಲಿ ಇದುವರೆಗೆ 56 ಲಕ್ಷ ಮನೆಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಆ ಮೂಲಕ 2.9 ಕೋಟಿ ಜನರು ಸಮೀಕ್ಷೆಗೆ ಒಳಪಟ್ಟಿದ್ದಾರೆ. ಕಳೆದ 24 ಗಂಟೆಗಳಲ್ಲಿ 354 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸಂಖ್ಯೆ 15,284 ಕ್ಕೇರಿದೆ. ಗುಣಮುಖರಾದವರ ಒಟ್ಟು ಸಂಖ್ಯೆ 11,579 ಕ್ಕೇರಿದೆ. ಸೋಮವಾರದಂದು 168 ರೋಗಿಗಳು ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.
ವಾಸ್ತವ ಪರಿಶೀಲನೆ
***
(Release ID: 1638278)
Visitor Counter : 264
Read this release in:
English
,
Urdu
,
Hindi
,
Marathi
,
Assamese
,
Manipuri
,
Bengali
,
Punjabi
,
Gujarati
,
Tamil
,
Telugu
,
Malayalam