ಪ್ರಧಾನ ಮಂತ್ರಿಯವರ ಕಛೇರಿ

ವಾರಣಾಸಿ ಮೂಲದ ಎನ್‌ಜಿಒ ಪ್ರತಿನಿಧಿಗಳೊಂದಿಗೆ ಪ್ರಧಾನಿ ಸಂವಾದ

Posted On: 09 JUL 2020 1:42PM by PIB Bengaluru


 

ಕೋವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲಿ ಪರಿಹಾರ ಕಾರ್ಯಗಳಲ್ಲಿ ತೊಡಗಿರುವ ವಾರಣಾಸಿಯ ವಿವಿಧ ಸರ್ಕಾರೇತರ ಸಂಘಸಂಸ್ಥೆಗಳೊಂದಿಗೆ (ಎನ್‌ಜಿಒ) ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು.

ಕೊರೊನಾ ಸಾಂಕ್ರಾಮಿಕ ರೋಗದ ಹೊರತಾಗಿಯೂ, ಪವಿತ್ರವಾದ ವಾರಣಾಸಿಯ ಜನತೆ ಭರವಸೆ ಮತ್ತು ಉತ್ಸಾಹದಿಂದಿರುವ ಬಗ್ಗೆ ಪ್ರಧಾನಿ ಮೆಚ್ಚುಗೆ ಸೂಚಿಸಿದರು.

ಅಗತ್ಯವಿರುವ ಜನರಿಗೆ ಸೇವಾ ಮನೋಭಾವ ಮತ್ತು ಧೈರ್ಯದಿಂದ ನಿರಂತರವಾಗಿ ನೆರವು ನೀಡುತ್ತಿರುವ ಮತ್ತು ಬೆಂಬಲ ನೀಡುತ್ತಿರುವ ಬಗ್ಗೆ ನಿರಂತರವಾಗಿ ಮಾಹಿತಿಯನ್ನು ಪಡೆಯುತ್ತಿರುವುದಾಗಿ ಶ್ರೀ ಮೋದಿ ಹೇಳಿದರು. ಸೋಂಕನ್ನು ತಡೆಗಟ್ಟಲು ತೆಗೆದುಕೊಳ್ಳುತ್ತಿರುವ ವಿವಿಧ ಕ್ರಮಗಳು, ವಿವಿಧ ಆಸ್ಪತ್ರೆಗಳ ಸ್ಥಿತಿ, ಸಂಪರ್ಕತಡೆ ವ್ಯವಸ್ಥೆ ಮತ್ತು ವಲಸೆ ಕಾರ್ಮಿಕರ ಕಲ್ಯಾಣ ಕುರಿತು ಮಾಹಿತಿ ಪಡೆಯುತ್ತಿದ್ದೇನೆ ಎಂದು ಅವರು ಹೇಳಿದರು.

ನಗರವನ್ನು ಅನ್ನಪೂರ್ಣ ಮಾತೆ ಮತ್ತು ವಿಶ್ವನಾಥ ದೇವರು ಆಶೀರ್ವದಿಸಿರುವುದರಿಂದ ಕಾಶಿಯಲ್ಲಿ ಯಾರೂ ಹಸಿವಿನಿಂದ ಮಲಗುವುದಿಲ್ಲ ಎಂಬ ನಂಬಿಕೆ ಇದೆ ಎಂದು ಪ್ರಧಾನಿ ಹೇಳಿದರು. ಈ ಬಾರಿ ದೇವರು ಬಡವರ ಸೇವೆಗೆ ನಮ್ಮನ್ನು ಮಾಧ್ಯಮವನ್ನಾಗಿ ಬಳಸಿಕೊಂಡಿರುವುದು ನಮ್ಮೆಲ್ಲರ ಭಾಗ್ಯ ಎಂದು ಪ್ರಧಾನಿ ಹೇಳಿದರು.

ಪವಿತ್ರ ನಗರದಲ್ಲಿ ವಿವಿಧ ಧಾರ್ಮಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದರೂ, ಕೊರೊನಾ ವಿರುದ್ಧದ ಹೋರಾಟದಲ್ಲಿ ತಾವು ಬೇರೆಯವರಿಗಿಂತ ಕಡಿಮೆ ಇಲ್ಲ ಎಂದು ವಾರಣಾಸಿಯ ಜನರು ಸಾಬೀತುಪಡಿಸಿದ್ದಾರೆ ಮತ್ತು ಬಡವರಿಗೆ ಮತ್ತು ನಿರ್ಗತಿಕರಿಗೆ ನಿರಂತರ ಆಹಾರ ಮತ್ತು ವೈದ್ಯಕೀಯ ಪೂರೈಕೆಯನ್ನು ಒದಗಿಸುತ್ತಿದ್ದಾರೆ ಎಂದು ಅವರು ಹೇಳಿದರು. ವಿವಿಧ ಸರ್ಕಾರಿ ಮತ್ತು ಸ್ಥಳೀಯ ಆಡಳಿತಗಳೊಂದಿಗೆ ಒಗ್ಗೂಡಿ ಕೆಲಸ ಮಾಡುತ್ತಿರುವ ಎನ್‌ಜಿಒಗಳ ಪ್ರಯತ್ನವನ್ನು ಪ್ರಧಾನಿ ಶ್ಲಾಘಿಸಿದರು.

ಕಡಿಮೆ ಸಮಯದಲ್ಲಿಯೇ ಆಹಾರ ಸಹಾಯವಾಣಿಗಳು ಮತ್ತು ಸಮುದಾಯ ಅಡಿಗೆಮನೆಗಳ ಜಾಲ ರಚಿಸುವುದು, ಸಹಾಯವಾಣಿಗಳನ್ನು ಅಭಿವೃದ್ಧಿಪಡಿಸುವುದು, ದತ್ತಾಂಶ ವಿಜ್ಞಾನದ ಸಹಾಯವನ್ನು ತೆಗೆದುಕೊಳ್ಳುವುದು, ವಾರಣಾಸಿ ಸ್ಮಾರ್ಟ್ ಸಿಟಿಯ ನಿಯಂತ್ರಣ ಕೇಂದ್ರವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವುದು, ಪ್ರತಿ ಹಂತದಲ್ಲೂ ಬಡವರಿಗೆ ಸಹಾಯ ಮಾಡಲು ಎಲ್ಲರಿಗೂ ಸಂಪೂರ್ಣ ಸಾಮರ್ಥ್ಯವಿದೆ ಎಂದು ಪ್ರಧಾನಿ ಹೇಳಿದರು. ಆಹಾರ ವಿತರಣೆಗಾಗಿ ಗಾಡಿಗಳ ಕೊರತೆಯಿರುವಾಗ ಜಿಲ್ಲಾಡಳಿತಕ್ಕೆ ಸಹಾಯ ಮಾಡಲು ಅಂಚೆ ಇಲಾಖೆ ಹೇಗೆ ಮುಂದಾಯಿತು ಎಂಬುದನ್ನು ಅವರು ವಿವರಿಸಿದರು. ಸೇವೆಯಲ್ಲಿ ತೊಡಗುವವರು ಅದರ ಫಲವನ್ನು ಬೇಡುವುದಿಲ್ಲ, ಹಗಲು ರಾತ್ರಿ ನಿಸ್ವಾರ್ಥದಿಂದ ಸೇವೆ ಮಾಡುತ್ತಾರೆ! ಎಂಬ ಸಂತ ಕಬೀರ ದಾಸರ ಮಾತನ್ನು ಮೋದಿ ಉಲ್ಲೇಖಿಸಿದರು.

ಹೆಚ್ಚಿನ ಜನಸಂಖ್ಯೆ ಮತ್ತು ಇತರ ಹಲವು ಸವಾಲುಗಳಿಂದಾಗಿ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಭಾರತದ ಸಾಮರ್ಥ್ಯವನ್ನು ಹಲವಾರು ತಜ್ಞರು ಪ್ರಶ್ನಿಸಿದ್ದಾರೆ. 23-24 ಕೋಟಿ ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದ ಜನರ ಸಹಕಾರ ಮತ್ತು ಕಠಿಣ ಪರಿಶ್ರಮದಿಂದಾಗಿ ಸೋಂಕನ್ನು ತಗ್ಗಿಸಲು ಸಾಧ್ಯವಾಗಿದೆ ಎಂದು ಅವರು ಹೇಳಿದರು. ಉತ್ತರ ಪ್ರದೇಶದಲ್ಲಿ ಸೋಂಕಿನ ವೇಗವನ್ನು ಈಗ ನಿಯಂತ್ರಿಸಲಾಗಿದೆ ಮಾತ್ರವಲ್ಲದೆ ಕೊರೊನಾ ಹೊಂದಿರುವವರು ಕೂಡ ತ್ವರಿತವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರು ತೃಪ್ತಿ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಅಗತ್ಯವಿರುವವರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುತ್ತಿದೆ ಮತ್ತು ಸುಮಾರು 80 ಕೋಟಿ ಜನರು ಉಚಿತ ಪಡಿತರ ಮಾತ್ರವಲ್ಲದೇ ಉಚಿತ ಸಿಲಿಂಡರ್‌ಗಳನ್ನು ಒದಗಿಸುವ ಯೋಜನೆಗಳಿಂದ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು.

ಅಮೆರಿಕದ ಎರಡು ಪಟ್ಟು ಜನಸಂಖ್ಯೆ ಹೊಂದಿರುವ ಭಾರತ ಜನರಿಂದ ಒಂದು ಪೈಸೆಯನ್ನೂ ತೆಗೆದುಕೊಳ್ಳದೆ ಸೇವೆ ಸಲ್ಲಿಸುತ್ತಿದೆ. ಈಗ ಈ ಯೋಜನೆಯನ್ನು ನವೆಂಬರ್ ಅಂತ್ಯದವರೆಗೆ ಅಂದರೆ ದೀಪಾವಳಿ ಮತ್ತು ಛಾತ್ ಪೂಜೆಯವರೆಗೆ ವಿಸ್ತರಿಸಲಾಗಿದೆ ಎಂದರು.

ವಾರಣಾಸಿಯ ವ್ಯಾಪಾರಿಗಳು ಮತ್ತು ಉದ್ಯಮಿಗಳು, ವಿವಿಧ ಕುಶಲಕರ್ಮಿಗಳು, ವಿಶೇಷವಾಗಿ ನೇಕಾರರು ಎದುರಿಸುತ್ತಿರುವ ತೊಂದರೆಗಳನ್ನು ನಿವಾರಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪ್ರಧಾನಿ ಹೇಳಿದರು. 8000 ಕೋಟಿ ಮೌಲ್ಯದ ವಿವಿಧ ಮೂಲಸೌಕರ್ಯ ಮತ್ತು ಇತರ ಯೋಜನೆಗಳನ್ನು ತ್ವರಿತಗತಿಯಲ್ಲಿ ಜಾರಿಗೊಳಿಸಲಾಗುತ್ತಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.



(Release ID: 1637546) Visitor Counter : 203