ಪ್ರಧಾನ ಮಂತ್ರಿಯವರ ಕಛೇರಿ

ಧರ್ಮಚಕ್ರ ದಿನದ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಪಠ್ಯ

Posted On: 04 JUL 2020 10:43AM by PIB Bengaluru

ಧರ್ಮಚಕ್ರ ದಿನದ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಪಠ್ಯ

 

ಗೌರವಾನ್ವಿತ ರಾಷ್ಟ್ರಪತಿ ಶ್ರೀ ರಾಮನಾಥ ಕೋವಿಂದ್ ಜಿ, ಇತರ ಆದರಣೀಯ ಅತಿಥಿಗಳೇ ನಾನು ಆಷಾಢ ಪೂರ್ಣಿಮೆಯ ಶುಭಾಶಯ ಕೋರುವ ಮೂಲಕ ಮಾತು ಆರಂಭಿಸುತ್ತೇನೆ. ಇದನ್ನು ಗುರು ಪೂರ್ಣಿಮೆ ಎಂದೂ ಸಹ ಕರೆಯುತ್ತಾರೆ. ನಮಗೆ ಜ್ಞಾನವನ್ನು ನೀಡಿದ ಗುರುಗಳನ್ನು ಸ್ಮರಿಸುವ ದಿನವೂ ಸಹ ಆಗಿದೆ. ಸ್ಫೂರ್ತಿಯೊಂದಿಗೆ ನಾವು ಬುದ್ಧನಿಗೆ ಗೌರವ ನಮನವನ್ನು ಸಲ್ಲಿಸುತ್ತಿದ್ದೇವೆ.

ಮಂಗೋಲಿಯಾ ಸರ್ಕಾರಕ್ಕೆ ಮಂಗೋಲಿಯನ್ ಕಂಜೂರ್ (ಬುದ್ಧನ ವಚನಗಳ ) ಪ್ರತಿಗಳನ್ನು ನೀಡುತ್ತಿರುವುದಕ್ಕೆ ನನಗೆ ಸಂತಸವಾಗುತ್ತಿದೆ. ಮಂಗೋಲಿಯನ್ ಕಂಜೂರ್ ಗೆ ಮಂಗೋಲಿಯಾದಲ್ಲಿ ಭಾರೀ ಗೌರವವಿದೆ. ಬಹುತೇಕ ಬೌದ್ಧ ಕೇಂದ್ರಗಳಲ್ಲಿ ಅವುಗಳ ಪ್ರತಿಗಳಿವೆ. ಗೆಳೆಯರೇ, ಬುದ್ಧನ ಎಂಟು ಪಥದ ಮಾರ್ಗಗಳು ಹಲವು ಸಮಾಜ ಮತ್ತು ರಾಷ್ಟ್ರಗಳ ಕಲ್ಯಾಣಕ್ಕೆ ದಾರಿ ತೋರಿವೆ. ಅದರಲ್ಲಿ ಸಹಾನುಭೂತಿ ಮತ್ತು ದಯೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಲಾಗುತ್ತಿದೆ. ಬುದ್ಧನ ಬೋಧನೆಗಳಲ್ಲಿ ಚಿಂತನೆ ಮತ್ತು ಕ್ರಿಯೆ ಎರಡೂ ಸರಳ ರೀತಿಯಲ್ಲಿರುತ್ತವೆ. ಬಡವರಿಗೆ ಗೌರವಿಸುವುದು, ಮಹಿಳೆಯರನ್ನು ಗೌರವಿಸುವುದು, ಶಾಂತಿ ಮತ್ತು ಅಹಿಂಸೆಯನ್ನು ಗೌರವಿಸುವ ಗುಣಗಳಿವೆ. ಆದ್ದರಿಂದ ಬೌದ್ಧ ಧರ್ಮದ ಬೋಧನೆಗಳು ಸುಸ್ಥಿರ ಭೂಮಿಗೆ ಅತ್ಯವಶ್ಯಕವಾಗಿವೆ.

ಗೆಳೆಯರೇ, ಬುದ್ಧ ಸಾರಾನಾಥದಲ್ಲಿ ತನ್ನ ಮೊದಲ ಉಪದೇಶದಲ್ಲಿ ತಮ್ಮ ಬೋಧನೆಗಳಲ್ಲಿ ಭರವಸೆ ಮತ್ತು ಉದ್ದೇಶ ಎರಡು ವಿಷಯಗಳ ಕುರಿತು ಬುದ್ಧ ಮಾತನಾಡಿದ್ದರು. ಅವೆರಡರ ನಡುವೆ ಭಾರೀ ಸಂಬಂಧವಿರುವುದನ್ನು ಕಂಡಿದ್ದರು. ಭರವಸೆಯಿಂದಾಗಿ ಸ್ಫೂರ್ತಿಯ ಉದ್ದೇಶ ಬರುತ್ತದೆ ಎಂದಿದ್ದರು. ಬುದ್ಧನಿಗೆ ಮಾನವರ ಸಂಕಷ್ಟಗಳನ್ನು ದೂರಮಾಡುವ ಉದ್ದೇಶವಿತ್ತು. ಜನರಲ್ಲಿ ಸಂದರ್ಭಕ್ಕೆ ಅನುಗುಣವಾಗಿ ಭರವಸೆಯನ್ನು ಹೆಚ್ಚಿಸಲು ಏನು ಸಾಧ್ಯವೋ ಅದೆಲ್ಲವನ್ನು ನಾವು ಮಾಡಬೇಕಿದೆ.

ಗೆಳೆಯರೇ, 21ನೇ ಶತಮಾನದಲ್ಲಿ ನನಗೆ ಭಾರೀ ಭರವಸೆ ಇದೆ. ಭರವಸೆ ನಮ್ಮ ಯುವ ಸ್ನೇಹಿತರು-ನಮ್ಮ ಯುವಕರಿಂದ ಬಂದಿದೆ. ಹೇಗೆ ಭರವಸೆ, ಆವಿಷ್ಕಾರ ಮತ್ತು ದಯೆ ಸಮಸ್ಯೆಗಳನ್ನು ತೊಡೆದು ಹಾಕುತ್ತದೆ ಎಂಬುದಕ್ಕೆ ದೊಡ್ಡ ಉದಾಹರಣೆ ಎಂದರೆ ಅದು ನಮ್ಮ ನವೋದ್ಯಮ ವಲಯ. ಯುವ ಕ್ರಿಯಾಶೀಲ ಮನಸ್ಸುಗಳು ಜಾಗತಿಕ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯುತ್ತಿವೆ. ಭಾರತದಲ್ಲಿ ಅತಿ ದೊಡ್ಡ ನವೋದ್ಯಮ ವ್ಯವಸ್ಥೆ ಇದೆ.

ನಾನು ನಮ್ಮ ಯುವ ಮಿತ್ರರಲ್ಲಿ ಆಗ್ರಹಿಸುವುದೆಂದರೆ ಬುದ್ಧನ ಆದರ್ಶಗಳನ್ನು ನಿರಂತರವಾಗಿ ಪಾಲಿಸಿರಿ ಎಂದು. ಅವು ನಿಮ್ಮನ್ನು ಉತ್ತೇಜಿಸುವುದಲ್ಲದೆ, ಭವಿಷ್ಯದ ದಾರಿಯನ್ನೂ ತೋರುತ್ತವೆ. ಇದೇ ವೇಳೆ ಅವು ನಿಮ್ಮಲ್ಲಿ ಸಂಯಮವನ್ನು ಕಲಿಸುತ್ತವೆ ಅಥವಾ ನಿಮ್ಮನ್ನು ಉದ್ದೀಪನಗೊಳಿಸುತ್ತವೆ. ಬುದ್ಧನ ಬೋಧನೆಗಳಲ್ಲಿ अप्प: दीपो भव: ಅಂದರೆ ನಿಮಗೆ ನೀವೇ ದಾರಿದೀಪ. ಇದು ಅತ್ಯುತ್ತಮ ನಿರ್ವಹಣಾ ಪಾಠವಾಗಿದೆ.

ಗೆಳೆಯರೇ, ಇಂದು ವಿಶ್ವ ಅಸಮಾನ್ಯ ಸವಾಲುಗಳನ್ನು ಎದುರಿಸುತ್ತಿದೆ. ಸವಾಲುಗಳಿಗೆ ಬುದ್ಧನ ಆದರ್ಶಗಳಿಂದ ಸಮಗ್ರ ಪರಿಹಾರಗಳನ್ನು ಕಂಡುಕೊಳ್ಳಬಹುದಾಗಿದೆ. ಅವರ ಬೋಧನೆಗಳು ಹಿಂದೆಯೂ ಪ್ರಸ್ತುತವಾಗಿದ್ದವು, ಈಗಲೂ ಸಹ ಹೆಚ್ಚು ಪ್ರಸ್ತುತವಾಗಿವೆ ಮತ್ತು ಭವಿಷ್ಯದಲ್ಲೂ ಸಹ ಅವು ಅತ್ಯಂತ ಪ್ರಸ್ತುತವಾಗಿಯೇ ಇರಲಿವೆ.

ಗೆಳೆಯರೇ, ಬೌದ್ಧರ ಪಾರಂಪರಿಕ ತಾಣಗಳ ಜೊತೆ ಹೆಚ್ಚು ಹೆಚ್ಚು ಜನರನ್ನು ಸಂಪರ್ಕಿಸುವುದು ಇಂದು ಅತ್ಯಗತ್ಯವಾಗಿದೆ. ಭಾರತದಲ್ಲಿ ಅಂತಹ ಹಲವು ತಾಣಗಳಿವೆ. ನಿಮಗೆ ತಿಳಿದಿರಬಹುದು ನನ್ನ ಲೋಕಸಭಾ ಕ್ಷೇತ್ರ ವಾರಾಣಸಿಯನ್ನು ಜನರು ಹೇಗೆ ತಿಳಿದುಕೊಂಡಿದ್ದಾರೆಂಬುದು. ಅದನ್ನು ಸಾರಾನಾಥದ ತವರು ಎಂದು ಕರೆಯಲಾಗುತ್ತದೆ. ಬೌದ್ಧ ಕೇಂದ್ರಗಳ ಜೊತೆ ಸಂಪರ್ಕ ಹೆಚ್ಚಿಸಲು ನಾವು ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. ಕೆಲವು ದಿನಗಳ ಹಿಂದೆಯಷ್ಟೇ ಭಾರತದ ಸಚಿವ ಸಂಪುಟ ಖುಷಿನಗರ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಘೋಷಿಸಿತು. ಇದರಿಂದ ಇನ್ನೂ ಹೆಚ್ಚಿನ ಜನರೂ, ಯಾತ್ರಾರ್ಥಿಗಳು ಹಾಗೂ ಪ್ರವಾಸಿಗರು ಅಲ್ಲಿಗೆ ಭೇಟಿ ನೀಡುತ್ತಾರೆ. ಇದರಿಂದ ಹಲವರಿಗೆ ಹೆಚ್ಚಿನ ಆರ್ಥಿಕ ಅವಕಾಶಗಳು ಸೃಷ್ಟಿಸುತ್ತವೆ.

ಭಾರತ ನಿಮಗಾಗಿ ಕಾಯುತ್ತಿದೆ !

ಗೆಳೆಯರೇ, ಮತ್ತೊಮ್ಮೆ ನಿಮಗೆಲ್ಲರಿಗೂ ನನ್ನ ಶುಭಾಶಯಗಳು. ಬುದ್ಧನ ಚಿಂತನೆಗಳು ಇನ್ನಷ್ಟು ಪ್ರಖರವಾಗಲಿ, ಎಲ್ಲರನ್ನೂ ಒಂದುಗೂಡಿಸಲಿ ಮತ್ತು ಸಹೋದರತ್ವ ಹೆಚ್ಚಿಸಲಿ. ಅವರ ಆಶೀರ್ವಾದದಿಂದ ನಮಗೆ ಇನ್ನಷ್ಟು ಒಳ್ಳೆಯ ಕೆಲಸಗಳನ್ನು ಮಾಡುವ ಸ್ಫೂರ್ತಿ ದೊರಕಲಿ.

ಧನ್ಯವಾದಗಳು, ತುಂಬಾ ತುಂಬಾ ಧನ್ಯವಾದಗಳು.

***



(Release ID: 1636727) Visitor Counter : 238