ಪ್ರಧಾನ ಮಂತ್ರಿಯವರ ಕಛೇರಿ

ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ಭಾಷಣ

Posted On: 30 JUN 2020 4:28PM by PIB Bengaluru

ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ಭಾಷಣ

 

ನನ್ನ ಪ್ರೀತಿಯ ದೇಶವಾಸಿಗಳೇ ನಮಸ್ಕಾರ!

ನಾವೀಗ ಮಹಾಮಾರಿ ಕೊರೊನಾ ವಿರುದ್ಧ ಹೋರಾಡುತ್ತಲೇ ಅನ್ ಲಾಕ್ -02ನ್ನು ಪ್ರವೇಶಿಸುತ್ತಿದ್ದೇವೆ. ಜೊತೆಗೆ ನಾವೀಗ ಎಂಥ ಋತುಮಾನಕ್ಕೆ ಕಾಲಿಡುತ್ತಿದ್ದೇವೆ ಎಂದರೆ, ಶೀತ, ನೆಗಡಿ, ಕೆಮ್ಮು ಮತ್ತು ಜ್ವರ ಎಲ್ಲದರ ಜೊತೆಗೆ ಇನ್ನು ಏನೇನು ಬರುತ್ತದೋ ಗೊತ್ತಿಲ್ಲ. ಅಂಥ ಪ್ರಕರಣಗಳು ಹೆಚ್ಚಾಗುತ್ತವೆ. ಹೀಗಾಗಿ, ನಾನು ನನ್ನ ಪ್ರೀತಿಯ ಎಲ್ಲ ದೇಶವಾಸಿಗಳಿಗೆ ವಿನಂತಿಸಿಕೊಳ್ಳುವುದೇನೆಂದರೆ ನಿಮ್ಮ ನಿಮ್ಮ ಬಗ್ಗೆ ಕಾಳಜಿ ವಹಿಸಿ.

ಸ್ನೇಹಿತರೆ, ಮಾತು ನಿಜ, ಅದೇನೆಂದರೆ ಕೊರೊನಾದಿಂದ ಸಂಭವಿಸುತ್ತಿರುವ ಸಾವಿನ ಪ್ರಮಾಣವನ್ನು ವಿಶ್ವದ ಅನೇಕ ದೇಶಗಳಿಗೆ ಹೋಲಿಸಿ ನೋಡಿದರೆ, ಭಾರತ ಸ್ಥಿತಿ ಸ್ಥಿರವಾಗಿಯೇ ಇದೆ. ಸಮಯೋಚಿತ ಲಾಕ್ಡೌನ್ ಮತ್ತು ಇತರ ನಿರ್ಧಾರಗಳು ಭಾರತದ ಲಕ್ಷಾಂತರ ಜನರ ಜೀವವನ್ನು ಉಳಿಸಿವೆ. ಆದರೆ ದೇಶದಲ್ಲಿ ಅನ್ ಲಾಕ್ -ಒಂದು ಆದ ಮೇಲೆ, ವೈಯಕ್ತಿಕ ಮತ್ತು ಸಾಮಾಜಿಕ ನಡವಳಿಕೆಯ ನಿರ್ಲಕ್ಷ್ಯವೂ ಹೆಚ್ಚುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಮೊದಲಿಗೆ ನಾವು ಮಾಸ್ಕ್ ನಿಂದ ಹಿಡಿದು, ಎರಡು ಗಜದ ದೂರದಿಂದ ಹಿಡಿದು, ದಿನದಲ್ಲಿ ಅನೇಕ ಬಾರಿ 20 ಸೆಕೆಂಡುಗಳ ಕಾಲ ಕೈತೊಳೆಯುವುದರಿಂದ ಹಿಡಿದು ಎಲ್ಲದರಲ್ಲೂ ಬಹಳ ಎಚ್ಚರದಿಂದಿದ್ದೆವು. ಆದರೆ, ಇಂದು ನಮಗೆ ಇನ್ನೂ ಹೆಚ್ಚಿನ ಜಾಗರೂಕತೆಯ ಅಗತ್ಯವಿರುವಾಗ, ನಿರ್ಲಕ್ಷ್ಯ ಹೆಚ್ಚುತ್ತಿರುವುದು ಚಿಂತೆಯ ವಿಷಯವಾಗಿದೆ.

ಸ್ನೇಹಿತರೆ, ಲಾಕ್ ಡೌನ್ ವೇಳೆ ಬಹಳ ಗಂಭೀರವಾಗಿ ನಿಯಮವನ್ನು ಪಾಲಿಸಲಾಯಿತು. ಈಗಲೂ ಸರ್ಕಾರಗಳು, ಸ್ಥಳೀಯ ಪ್ರಾಧಿಕಾರಗಳು, ದೇಶದ ನಾಗರಿಕರು ಮತ್ತೆ ಅದೇ ರೀತಿಯ ಜಾಗರೂಕತೆ ವಹಿಸುವ ಅಗತ್ಯವಿದೆ. ವಿಶೇಷವಾಗಿ ಕಂಟೈನ್ಮೆಂಟ್ ವಲಯಗಳಲ್ಲಿ ಹೆಚ್ಚಿನ ಗಮನ ಹರಿಸಬೇಕಾಗಿದೆ. ಯಾರು ಯಾರು ನಿಯಮಗಳನ್ನು ಪಾಲನೆ ಮಾಡುತ್ತಿಲ್ಲವೋ, ಅವರನ್ನು ತಡೆಯಬೇಕು, ನಿಗ್ರಹಿಸಬೇಕು ಮತ್ತು ಅವರಿಗೆ ಮನವರಿಕೆ ಮಾಡಿಸಬೇಕು. ಈಗ ನೀವು ವಾರ್ತೆಗಳಲ್ಲಿ ಕೇಳಿರಬಹುದು, ಒಂದು ದೇಶದ ಪ್ರಧಾನಮಂತ್ರಿಗೇ 13 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಅವರು ಮಾಸ್ಕ್ ಧರಿಸದೆ ಹೋಗಿದ್ದ ಕಾರಣ ದಂಡ ಹಾಕಲಾಗಿದೆ. ಭಾರತದಲ್ಲಿ ಕೂಡ ಸ್ಥಳೀಯ ಪ್ರಾಧಿಕಾರಗಳು ಇದೇ ರೀತಿಯ ಚುರುಕುತನದಿಂದ ಕಾರ್ಯ ನಿರ್ವಹಿಸಬೇಕಾಗಿದೆ. ಇದು ದೇಶದ 130 ಕೋಟಿ ಜನರ ಜೀವವನ್ನು ರಕ್ಷಿಸುವ ಅಭಿಯಾನವಾಗಿದೆ. ಭಾರತದಲ್ಲಿ ಗ್ರಾಮಗಳ ಪ್ರಧಾನರೇ ಇರಲಿ, ದೇಶದ ಪ್ರಧಾನಮಂತ್ರಿಯೇ ಆಗಿರಲಿ, ಯಾರೂ ಕಾನೂನಿಗಿಂತ ದೊಡ್ಡವರಲ್ಲ.

ಸ್ನೇಹಿತರೆ, ಲಾಕ್ ಡೌನ್ ಸಂದರ್ಭದಲ್ಲಿ ಯಾವುದೇ ಬಡವರ ಮನೆಯಲ್ಲಿ ಅಡುಗೆಯ ಒಲೆ ಉರಿಯದ ಸ್ಥಿತಿ ಬರಬಾರದು ಎಂಬುದು ದೇಶದ ಸರ್ವೋಚ್ಚ ಪ್ರಥಮ ಆದ್ಯತೆಯಾಗಿತ್ತು. ಕೇಂದ್ರ ಸರ್ಕಾರವೇ ಇರಲಿ, ರಾಜ್ಯ ಸರ್ಕಾರವೇ ಇರಲಿ, ನಾಗರಿಕ ಸಮಾಜದ ಜನರೇ ಇರಲಿ, ಎಲ್ಲರೂ ಇಷ್ಟು ದೊಡ್ಡ ದೇಶದಲ್ಲಿ ನಮ್ಮ ಬಡ ಸೋದರ- ಸೋದರಿಯರು ಹಸಿವಿನಿಂದ ನರಳಬಾರದು, ಹಸಿದು ಮಲಗಬಾರದು ಎಂದು ಸರ್ವ ಪ್ರಯತ್ನ ಮಾಡಿದರು. ದೇಶ ಅಥವಾ ವ್ಯಕ್ತಿ ಯಾರೇ ಆಗಲಿ ಸೂಕ್ತ ಕಾಲದಲ್ಲಿ ನಿರ್ಧಾರ ಮಾಡಿದರೆ, ಸಂವೇದನಾಶೀಲತೆಯಿಂದ ನಿರ್ಣಯ ಕೈಗೊಂಡರೆ ಯಾವುದೇ ಸಂಕಷ್ಟ ಮೆಟ್ಟಿನಿಲ್ಲುವ ಶಕ್ತಿ ಹೆಚ್ಚುತ್ತದೆ. ಹಾಗಾಗಿಯೇ ಲಾಕ್ ಡೌನ್ ಆಗುತ್ತಿದ್ದಂತೆ ಸರ್ಕಾರ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಜಾರಿಗೆ ತಂದಿತು. ಯೋಜನೆಯ ಅಡಿಯಲ್ಲಿ ಬಡವರಿಗಾಗಿ ಒಂದೂ ಮುಕ್ಕಾಲು ಲಕ್ಷ ಕೋಟಿ ಪ್ಯಾಕೇಜ್ ನೀಡಲಾಯಿತು.

ಸ್ನೇಹಿತರೆ,

ಕಳೆದ ಮೂರು ತಿಂಗಳುಗಳಲ್ಲಿ 20 ಕೋಟಿ ಬಡ ಕುಟುಂಬಗಳ ಜನ್ ಧನ್ ಖಾತೆಗೆ 31 ಸಾವಿರ ಕೋಟಿ ರೂಪಾಯಿ ಪರಿಹಾರವನ್ನು ನೇರವಾಗಿ ಹಾಕಲಾಗಿದೆ. ಇದರ ಜೊತೆಗೆ 9 ಕೋಟಿಗೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳಿಗೆ 18 ಸಾವಿರ ಕೋಟಿ ರೂಪಾಯಿ ಜಮಾ ಮಾಡಲಾಗಿದೆ.ಮಿಗಿಲಾಗಿ, ಗ್ರಾಮಗಳ ಶ್ರಮಿಕರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ ರೋಜ್ಗಾರ್ ಅಭಿಯಾನವನ್ನು ತ್ವರಿತಗೊಳಿಸಲಾಗಿದೆ. ಇದಕ್ಕೆ ಸರ್ಕಾರ 50 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ. ಆದರೆ, ಸ್ನೇಹಿತರೆ, ಮತ್ತೊಂದು ದೊಡ್ಡ ವಿಚಾರ ಇದೆ, ಇದು ಇಡೀ ಜಗತ್ತನ್ನೇ ಕಂಗೆಡಿಸಿದೆ, ಆಶ್ಚರ್ಯದಲ್ಲಿ ಮುಳುಗಿಸಿದೆ. ಅದೇನೆಂದರೆ, ಕೊರೊನಾದ ವಿರುದ್ಧ ಹೋರಾಡುತ್ತಲೇ ಭಾರತದಲ್ಲಿ 80 ಕೋಟಿಗೂ ಹೆಚ್ಚು ಜನರಿಗೆ 3 ತಿಂಗಳುಗಳ ಕಾಲ ಪಡಿತರ ಅಂದರೆ ಕುಟುಂಬದ ಪ್ರತಿ ಸದಸ್ಯರಿಗೆ ಮಾಸಿಕ ತಲಾ 5 ಕೆ.ಜಿ. ಗೋಧಿ ಅಥವಾ ಅಕ್ಕಿಯನ್ನು ಉಚಿತವಾಗಿ ನೀಡಲಾಗಿದೆ. ಇದರ ಜೊತೆಗೆ ಹೆಚ್ಚುವರಿಯಾಗಿ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು 1 ಕೆ.ಜಿ. ಬೇಳೆಯನ್ನೂ ಉಚಿತವಾಗಿ ನೀಡಲಾಗಿದೆ. ಒಂದೆಡೆ ನೋಡಿದರೆ, ಅಮೆರಿಕಾದಲ್ಲಿ ಒಟ್ಟು ಜನಸಂಖ್ಯೆಯ ಎರಡೂವರೆ ಪಟ್ಟು ಹೆಚ್ಚು ಜನರಿಗೆ, ಬ್ರಿಟನ್ ಜನ ಸಂಖ್ಯೆಯ 12ಪಟ್ಟು ಹೆಚ್ಚು ಜನರಿಗೆ, ಮತ್ತು ಐರೋಪ್ಯ ಒಕ್ಕೂಟದ ಜನಸಂಖ್ಯೆಯ ಎರಡು ಪಟ್ಟು ಹೆಚ್ಚು ಜನರಿಗೆ ನಮ್ಮ ಸರ್ಕಾರ ಉಚಿತವಾಗಿ ಆಹಾರಧಾನ್ಯವನ್ನು ನೀಡಲಾಗಿದೆ.

ಸ್ನೇಹಿತರೆ, ಇಂದು ನಾನು ಇದಕ್ಕೇ ಸಂಬಂಧಿಸಿದ ಮಹತ್ವದ ಘೋಷಣೆ ಮಾಡುತ್ತಿದ್ದೇನೆ.

ಸ್ನೇಹಿತರೆ, ನಮ್ಮಲ್ಲಿ ವರ್ಷ ಮಳೆಗಾಲದಲ್ಲಿ, ಮತ್ತು ಅದರ ಬಳಿಕ, ಮುಖ್ಯವಾಗಿ ಕೃಷಿ ವಲಯದಲ್ಲಿ, ಹೆಚ್ಚಿನ ಚಟುವಟಿಕೆ ನಡೆಯುತ್ತದೆ. ಇತರ ವಲಯಗಳಲ್ಲಿ ಅಂತ ಹೆಚ್ಚಿನ ಚಟುವಟಿಕೆ ಇರುವುದಿಲ್ಲ. ಜುಲೈನಿಂದ ನಿಧಾನವಾಗಿ ಹಬ್ಬಗಳ ಸಂಭ್ರಮ ಹೆಚ್ಚಾಗುತ್ತಾ ಹೋಗುತ್ತದೆ. ಈಗ ಜುಲೈ 5ರಂದು ಗುರು ಪೌರ್ಣಿಮೆ ಇದೆ, ನಂತರ ಮಳೆಗಾಲ ಆರಂಭವಾಗುತ್ತದೆ. ಬಳಿಕ 15 ಆಗಸ್ಟ್ ಬರುತ್ತದೆ, ರಕ್ಷಾ ಬಂಧನ ಬರುತ್ತದೆ, ಕೃಷ್ಣ ಜನ್ಮಾಷ್ಟಮಿ ಬರುತ್ತದೆ, ಗಣೇಶಚತುರ್ಥಿ ಬರುತ್ತದೆ, ಓಣಂ ನಡೆಯುತ್ತದೆ. ಹಾಗೆ ಮುಂದೆ ಸಾಗಿದರೆ, ಕಾಟಿ ಬಿಹೂ ಬರುತ್ತದೆ, ನವರಾತ್ರಿ ಬರುತ್ತದೆ, ದುರ್ಗಾಪೂಜೆ, ದಸರಾ, ದೀಪಾವಳಿ ಬರುತ್ತದೆ, ಛತ್ ಪೂಜಾ ಬರುತ್ತದೆ. ಹಬ್ಬಗಳ ಸಂದರ್ಭದಲ್ಲಿ ಅಗತ್ಯಗಳೂ ಹೆಚ್ಚಾಗುತ್ತವೆ, ಖರ್ಚೂ ಹೆಚ್ಚುತ್ತದೆ. ಎಲ್ಲ ವಿಚಾರಗಳನ್ನೂ ಗಮನದಲ್ಲಿಟ್ಟುಕೊಂಡು ಒಂದು ನಿರ್ಧಾರ ಕೈಗೊಳ್ಳಲಾಗಿದೆ ಅದೇನೆಂದರೆ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ದೀಪಾವಳಿ ಮತ್ತು ಛತ್ ಪೂಜೆಯವರೆಗೆ ಅಂದರೆ ನವೆಂಬರ್ ತಿಂಗಳ ಕೊನೆಯವರೆಗೆ ವಿಸ್ತರಿಸಲಾಗಿದೆ. ಅಂದರೆ, 80 ಕೋಟಿ ಜನರಿಗೆ ಉಚಿತವಾಗಿ ಆಹಾರ ಧಾನ್ಯ ನೀಡುವ ಯೋಜನೆ ಜುಲೈ, ಆಗಸ್ಟ್, ಸೆಪ್ಟೆಂಬರ್ ಮತ್ತು ನವೆಂಬರ್ ನಲ್ಲಿಯೂ ಚಾಲ್ತಿಯಲ್ಲಿರುತ್ತದೆ. ಸರ್ಕಾರದ ಕಡೆಯಿಂದ 5 ತಿಂಗಳುಗಳ ಕಾಲ 80 ಕೋಟಿಗೂ ಹೆಚ್ಚು ಬಡ ಸೋದರ ಸೋದರಿಯರಿಗೆ ಪ್ರತಿ ತಿಂಗಳು, ಕುಟುಂಬದ ಪ್ರತಿ ಸದಸ್ಯರಿಗೆ 5 ಕೆ.ಜಿ. ಉಚಿತ ಗೋಧಿ ಅಥವಾ ಅಕ್ಕಿಯನ್ನು ಉಚಿತವಾಗಿ ಪೂರೈಸಲಾಗುತ್ತದೆ. ಇದರ ಜೊತೆಗೆ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು 1 ಕೆಜಿ ಬೇಳೆಯನ್ನೂ ಉಚಿತವಾಗಿ ನೀಡಲಾಗುತ್ತದೆ.

ಸ್ನೇಹಿತರೆ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯ ವಿಸ್ತರಣೆಯಿಂದಾಗಿ 90 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ವೆಚ್ಚವಾಗಲಿದೆ. ಆದರೆ, ಇದರಲ್ಲಿ ಕಳೆದ ಮೂರು ತಿಂಗಳುಗಳ ವೆಚ್ಚವನ್ನೂ ಸೇರಿಸಿದರೆ, ಹತ್ತಿರ ಹತ್ತಿರ ಒಂದೂವರೆ ಲಕ್ಷ ಕೋಟಿ ರೂಪಾಯಿ ಆಗುತ್ತದೆ. ಈಗ ನಾವು ಇಡೀ ಭಾರತಕ್ಕಾಗಿ ಒಂದು ಕನಸು ಕಂಡಿದ್ದೇವೆ. ಹಲವು ರಾಜ್ಯಗಳು ಬಹಳ ಉತ್ತಮ ಕಾರ್ಯವನ್ನೂ ಮಾಡಿವೆ. ಉಳಿದ ರಾಜ್ಯಗಳಿಗೂ ನಾವು ಕಾರ್ಯವನ್ನು ಮುಂದುವರಿಸುವಂತೆ ನಾವು ಆಗ್ರಹಿಸುತ್ತೇವೆ. ಕಾರ್ಯ ಏನು? ಅದೇನೆಂದರೆ, ಒಂದು ರಾಷ್ಟ್ರ ಒಂದು ಪಡಿತರ ಚೀಟಿ. one nation one ration card. ಉದ್ಯೋಗ ಅರಸಿ, ತಮ್ಮ ಇನ್ನಿತರ ಅಗತ್ಯಗಳಿಗಾಗಿ ತಮ್ಮ ತವರು ಗ್ರಾಮ ತೊರೆದು ಬೇರೆ ಸ್ಥಳದಲ್ಲಿ, ಬೇರೆ ರಾಜ್ಯದಲ್ಲಿ ಕೆಲಸ ಮಾಡುವ ಬಡ ಜನರಿಗೆ ಇದರ ಅತಿ ದೊಡ್ಡ ಪ್ರಯೋಜನ, ದೊರಕುತ್ತದೆ,

ಸ್ನೇಹಿತರೆ, ಇಂದು ಬಡವರಿಗೆ, ಅಗತ್ಯ ಇರುವವರಿಗೆ, ಸರ್ಕಾರ ಉಚಿತವಾಗಿ ಆಹಾರಧಾನ್ಯ ನೀಡುತ್ತಿದೆ ಎಂದರೆ, ಇದರ ಶ್ರೇಯ ಎರಡು ವರ್ಗಗಳಿಗೆ ಸಲ್ಲುತ್ತದೆ ಅಂದರೆ, ಮೊದಲಿಗೆ ಅದು ದೇಶದ ಅನ್ನದಾತರಾದ ಶ್ರಮಿಕ ಕೃಷಿಕರಿಗೆ: ಎರಡನೆಯದು ನಮ್ಮ ಪ್ರಾಮಾಣಿಕ ತೆರಿಗೆದಾರರಿಗೆ ಸಲ್ಲುತ್ತದೆ. ನಿಮ್ಮ ಪರಿಶ್ರಮ, ನಿಮ್ಮ ಸಮರ್ಪಣೆಯ ಕಾರಣದಿಂದಾಗಿಯೇ ದೇಶ ಅವರಿಗೆ ಸಹಾಯ ಮಾಡುತ್ತಿದೆ. ನಮ್ಮ ದೇಶದ ಅನ್ನ ಭಂಡಾರ ಭರ್ತಿಯಾಗಿದೆ. ಇದರಿಂದಾಗಿ ಇಂದು ಬಡವರ, ಶ್ರಮಿಕರ ಮನೆಯ ಅಡುಗೆಯ ಒಲೆ ಉರಿಯುತ್ತಿದೆ. ನೀವು ಪ್ರಾಮಾಣಿಕವಾಗಿ ತೆರಿಗೆ ಪಾವತಿಸಿದ್ದೀರಿ. ನಿಮ್ಮ ಜವಾಬ್ದಾರಿ ನಿರ್ವಹಿಸಿದ್ದೀರಿ. ಹೀಗಾಗಿ ಇಂದು ದೇಶದ ಬಡವರು, ಇಷ್ಟು ದೊಡ್ಡ ಸಂಕಷ್ಟವನ್ನು ಎದುರಿಸಲು ಸಾಧ್ಯವಾಗಿದೆ. ನಾನು ಇಂದು ಎಲ್ಲ ಬಡ ಜನರಿಗೆ, ದೇಶದ ಎಲ್ಲ ರೈತರಿಗೆ, ಪ್ರತಿ ತೆರಿಗೆದಾರರಿಗೂ ಹೃದಯಾಂತರಾಳದಿಂದ ತುಂಬಾ ಧನ್ಯವಾದಗಳನ್ನು ಅರ್ಪಿಸುತ್ತೇನೆ, ನಮನ ಸಲ್ಲಿಸುತ್ತೇನೆ.

ಸ್ನೇಹಿತರೆ, ಮುಂಬರುವ ಸಮಯದಲ್ಲಿ, ನಾವು ನಮ್ಮ ಪ್ರಯತ್ನಗಳನ್ನು ಇನ್ನೂ ವೇಗಗೊಳಿಸುತ್ತೇವೆ. ನಾವು ಬಡವರಿಗೆ, ಪೀಡಿತರಿಗೆ, ಶೋಷಿತ, ವಂಚಿತ ಎಲ್ಲರನ್ನೂ ಸಬಲೀಕರಿಸಲು ನಿರಂತರವಾಗಿ ಶ್ರಮಿಸುತ್ತೇವೆ. ನಾವು ಇನ್ನೂ ಹೆಚ್ಚಿನ ಮುಂಜಾಗರೂಕತೆಯಿಂದ ನಮ್ಮ ಆರ್ಥಿಕ ಚಟುವಟಿಕೆಗಳನ್ನು ಮುಂದುವರಿಸುತ್ತೇವೆ. ನಾವು ಆತ್ಮ ನಿರ್ಭರ ಭಾರತಕ್ಕಾಗಿ ಹಗಲಿರುಳು ಶ್ರಮಿಸುತ್ತೇವೆ. ನಾವೆಲ್ಲರೂ ಲೋಕಲ್ ಗಾಗಿ ವೋಕಲ್ ಆಗೋಣ. ಅಂದರೆ ಸ್ಥಳೀಯತೆಗೆ ಧ್ವನಿಯಾಗೋಣ. ಸಂಕಲ್ಪದೊಂದಿಗೆ ನಾವು 130 ಕೋಟಿ ದೇಶವಾಸಿಗಳೊಂದಿಗೆ ಸೇರಿ ಕೆಲಸ ಮಾಡಬೇಕಾಗಿದೆ ಮತ್ತು ಮುಂದೆ ಸಾಗಬೇಕಾಗಿದೆ.

ಮತ್ತೊಮ್ಮೆ ನಾನು ನಿಮ್ಮೆಲ್ಲರಲ್ಲೂ ಪ್ರಾರ್ಥಿಸುವುದೇನೆಂದರೆ, ನಿಮಗಾಗಿಯೇ ಪ್ರಾರ್ಥಿಸುವುದೇನೆಂದರೆ, ನಿಮಗೆ ಆಗ್ರಹ ಮಾಡುವುದೇನೆಂದರೆ, ನೀವೆಲ್ಲರೂ ಆರೋಗ್ಯವಾಗಿರಿ, ಎರಡು ಗಜದ ಅಂತರ ಕಾಯ್ದುಕೊಳ್ಳಿ, ಕರವಸ್ತ್ರ, ಮುಖ ಕವಚ, ಮುಖ ಗವಸು ಇವುಗಳನ್ನು ಸದಾ ಬಳಸಿ, ಯಾವುದೇ ನಿರ್ಲಕ್ಷ್ಯ ತೋರಬೇಡಿ. ಇದು ನನ್ನ ಆಗ್ರಹ, ಆಶಯದೊಂದಿಗೆ ಪ್ರತಿಯೊಬ್ಬರಿಗೂ ಶುಭಾಶಯಗಳು.

ಧನ್ಯವಾದ.

***



(Release ID: 1635374) Visitor Counter : 239