ಪ್ರಧಾನ ಮಂತ್ರಿಯವರ ಕಛೇರಿ

ಭಾರತ-ಚೀನಾ ಗಡಿ ಪ್ರದೇಶಗಳ ಪರಿಸ್ಥಿತಿ ಚರ್ಚೆಗೆ ಪ್ರಧಾನಿಯವರಿಂದ ಸರ್ವಪಕ್ಷ ಸಭೆ

Posted On: 19 JUN 2020 9:03PM by PIB Bengaluru

ಭಾರತ-ಚೀನಾ ಗಡಿ ಪ್ರದೇಶಗಳ ಪರಿಸ್ಥಿತಿ ರ್ಚೆಗೆ ಪ್ರಧಾನಿಯವರಿಂದ ಸರ್ವಪಕ್ಷ ಸಭೆ

ನಮ್ಮ ಕೆಚ್ಚೆದೆಯ 20 ಸೈನಿಕರು ಲಡಾಖ್ನಲ್ಲಿ ಸರ್ವೋಚ್ಚ ತ್ಯಾಗ ಮಾಡಿದರು ಆದರೆ ನಮ್ಮ ತಾಯ್ನಾಡಿನ ಕಡೆಗೆ ನೋಡುವ ಧೈರ್ಯ ಮಾಡಿದವರಿಗೆ ಪಾಠವನ್ನೂ ಕಲಿಸಿದರು: ಪ್ರಧಾನಿ

ನಮ್ಮ ಭೂಪ್ರದೇಶದೊಳಗೆ ಯಾರೊಬ್ಬರೂ ಬಂದಿಲ್ಲ, ನಮ್ಮ ಯಾವುದೇ ನೆಲೆಯನ್ನು ವಶಪಡಿಸಿಕೊಂಡಿಲ್ಲ: ಪ್ರಧಾನಿ

 ಭಾರತವು ಶಾಂತಿ ಮತ್ತು ಸ್ನೇಹವನ್ನು ಬಯಸುತ್ತದೆ, ಆದರೆ ಸಾರ್ವಭೌಮತ್ವವವನ್ನು ಕಾಪಾಡುವುದು ಮೊದಲ ಪ್ರಾಶಸ್ತ್ಯವಾಗಿದೆ: ಪ್ರಧಾನಿ

ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲು ಸಶಸ್ತ್ರ ಪಡೆಗಳಿಗೆ ಮುಕ್ತ ಅವಕಾಶ ನೀಡಲಾಗಿದೆ: ಪ್ರಧಾನಿ

ನಮ್ಮ ಗಡಿಗಳನ್ನು ಹೆಚ್ಚು ಸುರಕ್ಷಿತವಾಗಿಸಲು ಗಡಿ ಪ್ರದೇಶದ ಮೂಲಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಿದೆ: ಪ್ರಧಾನಿ

ರಾಷ್ಟ್ರೀಯ ಭದ್ರತೆ ಮತ್ತು ಮೂಲಸೌಕರ್ಯಗಳ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲಾ ಕ್ರಮಗಳು ತ್ವರಿತಗತಿಯಲ್ಲಿ ಮುಂದುವರಿಯಲಿವೆ : ಪ್ರಧಾನಿ

ಸರ್ಕಾರದೊಂದಿಗೆ ಜೊತೆಯಾಗಿ ನಿಲ್ಲಲು ಮತ್ತು ಪ್ರಧಾನ ಮಂತ್ರಿಯವರ ನಾಯಕತ್ವದಲ್ಲಿ ನಂಬಿಕೆಯಿರಿಸುವ ಬದ್ಧತೆಯನ್ನು ವ್ಯಕ್ತಪಡಿಸಿದ ರಾಜಕೀಯ ಪಕ್ಷಗಳ ನಾಯಕರು

 

ಭಾರತ-ಚೀನಾ ಗಡಿ ಪ್ರದೇಶಗಳಲ್ಲಿನ ಪರಿಸ್ಥಿತಿ ಕುರಿತು ಚರ್ಚಿಸಲು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸರ್ವಪಕ್ಷ ಸಭೆ ನಡೆಸಿದರು. ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಅಧ್ಯಕ್ಷರು ಭಾಗವಹಿಸಿದ್ದರು.

ಸಶಸ್ತ್ರ ಪಡೆಗಳ ಪರಾಕ್ರಮ

ನಮ್ಮ ಗಡಿಗಳನ್ನು ರಕ್ಷಿಸುವ ಸೈನಿಕರೊಂದಿಗೆ ಇಂದು ನಾವೆಲ್ಲರೂ ಒಗ್ಗೂಡಿ ನಿಂತಿದ್ದೇವೆ ಮತ್ತು ಅವರ ಧೈರ್ಯ ಮತ್ತು ಸಾಹಸದ ಬಗ್ಗೆ ಸಂಪೂರ್ಣ ನಂಬಿಕೆಯನ್ನು ಹೊಂದಿದ್ದೇವೆ ಎಂದು ಪ್ರಧಾನಿ ಒತ್ತಿಹೇಳಿದರು. ಸರ್ವಪಕ್ಷ ಸಭೆಯ ಮೂಲಕ, ಹುತಾತ್ಮರ ಕುಟುಂಬಗಳೊಂದಿಗೆ ಇಡೀ ದೇಶವು ನಿಲ್ಲುತ್ತದೆ ಎಂದು ಭರವಸೆ ನೀಡುತ್ತೇನೆ ಎಂದು ಅವರು ಹೇಳಿದರು.

ನಮ್ಮ ಭೂಪ್ರದೇಶದೊಳಗೆ ಯಾರೂ ಬಂದಿಲ್ಲ ಅಥವಾ ನಮ್ಮ ಯಾವುದೇ ನೆಲೆಯನ್ನು ವಶಪಡಿಸಿಕೊಂಡಿಲ್ಲ ಎಂದು ಪ್ರಾರಂಭದಲ್ಲಿಯೇ ಪ್ರಧಾನಿ ಸ್ಪಷ್ಟಪಡಿಸಿದರು. ನಮ್ಮ ಧೈರ್ಯಶಾಲಿ ಸೈನಿಕರಲ್ಲಿ ಇಪ್ಪತ್ತು ಮಂದಿ ಲಡಾಖ್ನಲ್ಲಿ ರಾಷ್ಟ್ರಕ್ಕಾಗಿ ಸರ್ವೋಚ್ಚ ತ್ಯಾಗ ಮಾಡಿದರು ಆದರೆ ನಮ್ಮ ತಾಯಿನಾಡಿನ ಕಡೆಗೆ ನೋಡುವ ಧೈರ್ಯ ಮಾಡಿದವರಿಗೆ ಪಾಠವನ್ನೂ ಕಲಿಸಿದರು ಎಂದು ಅವರು ಹೇಳಿದರು. ರಾಷ್ಟ್ರವು ಅವರ ಶೌರ್ಯ ಮತ್ತು ತ್ಯಾಗವನ್ನು ಶಾಶ್ವತವಾಗಿ ಸ್ಮರಿಸಿಕೊಳ್ಳುತ್ತದೆ ಎಂದರು.

ಎಲ್ಎಸಿಯಲ್ಲಿ ಚೀನಾದ ಕ್ರಮಗಳ ಬಗ್ಗೆ ಇಡೀ ದೇಶ ನೋವುಂಡಿದೆ ಮತ್ತು ಕೋಪಗೊಂಡಿದೆ ಎಂದು ಪ್ರಧಾನಿ ಹೇಳಿದರು. ನಮ್ಮ ಸಶಸ್ತ್ರ ಪಡೆಗಳು ದೇಶವನ್ನು ರಕ್ಷಿಸಲು ಯಾವುದೇ ಅವಕಾಶವನ್ನೂ ಕಳೆದುಕೊಳ್ಳುವುದಿಲ್ಲ ಎಂದು ಅವರು ನಾಯಕರಿಗೆ ಭರವಸೆ ನೀಡಿದರು. ಅದು ನಿಯೋಜನೆಯಾಗಿರಲಿ, ಕ್ರಮವಾಗಿರಲಿ ಅಥವಾ ಪ್ರತಿ ಕ್ರಮವಾಗಿರಲಿ, ಭೂಮಿ, ಸಮುದ್ರ ಅಥವಾ ಗಾಳಿಯ ಮೂಲಕ ನಮ್ಮ ಪಡೆಗಳು ದೇಶವನ್ನು ರಕ್ಷಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ದೇಶವು ಇಂದು ಅಂತಹ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಒತ್ತಿಹೇಳಿದರು, ನಮ್ಮ ಭೂಮಿಯ ಒಂದು ಅಂಗುಲದ ಕಡೆಗೂ ನೋಡುವ ಧೈರ್ಯ ಯಾರಿಗೂ ಇಲ್ಲ. ಇಂದು, ಭಾರತೀಯ ಪಡೆಗಳು ಕ್ಷೇತ್ರಗಳಾದ್ಯಂತ ಒಟ್ಟಾಗಿ ಚಲಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಅವರು ಹೇಳಿದರು. ಒಂದೆಡೆ, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಸೈನ್ಯಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ, ಹಾಗೆಯೇ ಭಾರತವು ಚೀನಾಕ್ಕೆ ತನ್ನ ಅಭಿಪ್ರಾಯವನ್ನು ರಾಜತಾಂತ್ರಿಕ ಮಾರ್ಗಗಳ ಮೂಲಕ ಸ್ಪಷ್ಟವಾಗಿ ತಿಳಿಸಿದೆ ಎಂದು ಪ್ರಧಾನಿ ತಿಳಿಸಿದರು.

ಗಡಿ ಮೂಲಸೌಕರ್ಯವನ್ನು ಹೆಚ್ಚಿಸುವುದು

ಭಾರತವು ಶಾಂತಿ ಮತ್ತು ಸ್ನೇಹವನ್ನು ಬಯಸುತ್ತದೆ. ಆದರೆ ತನ್ನ ಸಾರ್ವಭೌಮತ್ವವನ್ನು ಕಾಪಾಡುವುದು ಮೊದಲ ಪ್ರಾಶಸ್ತ್ಯವಾಗಿದೆ ಎಂದು ಪ್ರಧಾನಿ ಒತ್ತಿಹೇಳಿದರು. ನಮ್ಮ ಗಡಿಗಳನ್ನು ಹೆಚ್ಚು ಸುರಕ್ಷಿತವಾಗಿಸಲು ಗಡಿ ಪ್ರದೇಶದ ಮೂಲಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಿದೆ ಎಂದು ಅವರು ಹೇಳಿದರು. ಯುದ್ಧ ವಿಮಾನಗಳು, ಆಧುನಿಕ ಹೆಲಿಕಾಪ್ಟರ್ಗಳು, ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳು ಮತ್ತು ನಮ್ಮ ಪಡೆಗಳ ಇತರ ಅಗತ್ಯಗಳಿಗೆ ಸಹ ಅವಕಾಶ ಕಲ್ಪಿಸಲಾಗಿದೆ. ಇತ್ತೀಚೆಗೆ ಅಭಿವೃದ್ಧಿಪಡಿಸಿದ ಮೂಲಸೌಕರ್ಯಗಳ ಮೂಲಕ, ಎಲ್ಎಸಿಯಲ್ಲಿ ಗಸ್ತು ತಿರುಗುವ ಸಾಮರ್ಥ್ಯವೂ ಹೆಚ್ಚಾಗಿದೆ, ಇದರ ಮೂಲಕ ಎಲ್ಎಸಿಯ ಬೆಳವಣಿಗೆಗಳ ಬಗ್ಗೆ ನಮಗೆ ಉತ್ತಮ ಮಾಹಿತಿ ದೊರೆಯುತ್ತಿದೆ. ಪರಿಣಾಮವಾಗಿ ಉತ್ತಮ ಮೇಲ್ವಿಚಾರಣೆ ಮತ್ತು ಉನ್ನತ ಪ್ರತಿಕ್ರಿಯೆ ಸಾಧ್ಯವಾಗುತ್ತಿದೆ ಎಂದು ಅವರು ಹೇಳಿದರು. ಮೊದಲು ಯಾವುದೇ ಅಡೆತಡೆಯಿಲ್ಲದೆ ನಡೆಯುತ್ತಿದ್ದ ಚಲನವಲನಗಳನ್ನು ಈಗ ನಮ್ಮ ಸೈನಿಕರು ತಡೆದಿದ್ದಾರೆ, ಇದು ಕೆಲವೊಮ್ಮೆ ಉದ್ವೇಗ ಹೆಚ್ಚಾಗಲು ಕಾರಣವಾಗುತ್ತದೆ. ಉತ್ತಮ ಮೂಲಸೌಕರ್ಯಗಳ ಮೂಲಕ ಕಷ್ಟಕರವಾದ ಭೂಪ್ರದೇಶದಲ್ಲಿ ಸೈನಿಕರಿಗೆ ಸಾಮಗ್ರಿಗಳು ಮತ್ತು ಅಗತ್ಯ ವಸ್ತುಗಳ ಪೂರೈಕೆ ಸುಲಭವಾಗಿದೆ ಎಂದು ಅವರು ಹೇಳಿದರು.

ದೇಶ ಮತ್ತು ಅದರ ನಾಗರಿಕರ ಕಲ್ಯಾಣಕ್ಕಾಗಿ ಸರ್ಕಾರದ ಬದ್ಧತೆಯನ್ನು ಪ್ರಧಾನಿ ಒತ್ತಿಹೇಳಿದರು ಅದು ವ್ಯಾಪಾರವಾಗಲೀ, ಸಂಪರ್ಕವಾಗಲೀ ಅಥವಾ ಭಯೋತ್ಪಾದನೆ ನಿಗ್ರಹವಾಗಲೀ ಸರ್ಕಾರವು ಯಾವಾಗಲೂ ಬಾಹ್ಯ ಒತ್ತಡಕ್ಕೆ ಬಗ್ಗುವುದಿಲ್ಲ ಎಂದು ಹೇಳಿದರು. ರಾಷ್ಟ್ರೀಯ ಭದ್ರತೆ ಮತ್ತು ಅಗತ್ಯ ಮೂಲಸೌಕರ್ಯಗಳ ನಿರ್ಮಾಣಕ್ಕೆ ಅಗತ್ಯವಾದ ಎಲ್ಲಾ ಕ್ರಮಗಳನ್ನು ತ್ವರಿತಗತಿಯಲ್ಲಿ ಮುಂದುವರಿಸಲಾಗುವುದು ಎಂದು ಅವರು ಭರವಸೆ ನೀಡಿದರು. ನಮ್ಮ ಗಡಿಗಳನ್ನು ರಕ್ಷಿಸುವ ಸಶಸ್ತ್ರ ಪಡೆಗಳ ಸಾಮರ್ಥ್ಯದ ಬಗ್ಗೆ ಅವರು ನಾಯಕರಿಗೆ ಭರವಸೆ ನೀಡಿದರು. ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲು ಅವರಿಗೆ ಮುಕ್ತ ಸ್ವಾತಂತ್ರ್ಯ ನೀಡಲಾಗಿದೆ ಎಂದು ತಿಳಿಸಿದರು.

ಹುತಾತ್ಮರ ತ್ಯಾಗವನ್ನು ರಾಷ್ಟ್ರ ಎಂದಿಗೂ ಮರೆಯುವುದಿಲ್ಲ ಎಂದು ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಹೇಳಿದರು. ಗಡಿ ನಿರ್ವಹಣೆ ಕುರಿತು ಭಾರತ ಮತ್ತು ಚೀನಾ ನಡುವಿನ ಒಪ್ಪಂದಗಳ ಬಗ್ಗೆ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಪಕ್ಷಿನೋಟ ನೀಡಿದರು, 1999 ರಲ್ಲಿ ಸಂಪುಟವು ಗುರುತಿಸಿದ ಮತ್ತು ಅನುಮೋದಿಸಿದ ಗಡಿ ಪ್ರದೇಶಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲು 2014 ರಲ್ಲಿ ಪ್ರಧಾನಿಯವರು ನೀಡಿದ ನಿರ್ದೇಶನಗಳ ಬಗ್ಗೆ ಮಾಹಿತಿ ನೀಡಿದರು. ಮತ್ತು ಇತ್ತೀಚಿನ ಬೆಳವಣಿಗೆಗಳ ವಿವರಗಳನ್ನು ಸಹ ಹಂಚಿಕೊಂಡರು.

ರಾಜಕೀಯ ಪಕ್ಷಗಳ ನಾಯಕರು ಮಾತು

ಲಡಾಖ್ನಲ್ಲಿ ಸಶಸ್ತ್ರ ಪಡೆಗಳು ಪ್ರದರ್ಶಿಸಿದ ಧೈರ್ಯವನ್ನು ರಾಜಕೀಯ ಪಕ್ಷಗಳ ಮುಖಂಡರು ಶ್ಲಾಘಿಸಿದರು. ಸಂದರ್ಭದಲ್ಲಿ ಅವರು ಪ್ರಧಾನ ಮಂತ್ರಿಯವರ ನಾಯಕತ್ವದಲ್ಲಿ ನಂಬಿಕೆ ಮತ್ತು ಸರ್ಕಾರದೊಂದಿಗೆ ಒಟ್ಟಾಗಿ ನಿಲ್ಲುವ ಬದ್ಧತೆಯನ್ನು ವ್ಯಕ್ತಪಡಿಸಿದರು. ಪರಿಸ್ಥಿತಿಯನ್ನು ಎದುರಿಸುವ ಬಗ್ಗೆ ಅವರು ತಮ್ಮ ಆಲೋಚನೆಗಳು ಮತ್ತು ಅಭಿಪ್ರಾಯಗಳನ್ನು ಹಂಚಿಕೊಂಡರು.

ತಮ್ಮ ಪಕ್ಷವು ಸರ್ಕಾರದೊಂದಿಗೆ ಬಲವಾಗಿ ನಿಂತಿದೆ ಎಂದು ಶ್ರೀಮತಿ ಮಮತಾ ಬ್ಯಾನರ್ಜಿ ಹೇಳಿದರು. ನಾಯಕರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಇರಬಾರದು ಮತ್ತು ಇತರ ರಾಷ್ಟ್ರಗಳು ದುರುಪಯೋಗ ಮಾಡಿಕೊಳ್ಳಬಹುದಾದ ಯಾವುದೇ ಭಿನ್ನಾಭಿಪ್ರಾಯಗಳಿಗೆ ಪಕ್ಷಗಳು ಅವಕಾಶ ನೀಡಬಾರದು ಎಂದು ಶ್ರೀ ನಿತೀಶ್ ಕುಮಾರ್ ಹೇಳಿದರು. ಪ್ರಧಾನಿ ನಾಯಕತ್ವದಲ್ಲಿ ದೇಶ ಸುರಕ್ಷಿತವಾಗಿದೆ ಎಂದು ಶ್ರೀ ಚಿರಾಗ್ ಪಾಸ್ವಾನ್ ಹೇಳಿದರು. ಪ್ರಧಾನಿಯವರನ್ನು ಶ್ಲಾಘಿಸಿದ ಶ್ರೀ ಉದ್ಧವ್ ಠಾಕ್ರೆ, ಇಡೀ ದೇಶವು ಒಟ್ಟಾಗಿ ಪ್ರಧಾನ ಮಂತ್ರಿಯವರೊಂದಿಗೆ ಇದೆ ಎಂದು ಹೇಳಿದರು.

ನಾಯಕರು ಹಲವು ವಿವರಗಳ ಬಗ್ಗೆ ಇನ್ನೂ ಕತ್ತಲೆಯಲ್ಲಿದ್ದಾರೆ. ಗುಪ್ತಚರ ವರದಿಗಳು ಮತ್ತು ಇತರ ಸಂಬಂಧಿತ ವಿಷಯಗಳ ಬಗ್ಗೆ ಸರ್ಕಾರವನ್ನು ಪ್ರಶ್ನಿಸಿದ್ದಾರೆ ಎಂದು ಶ್ರೀಮತಿ ಸೋನಿಯಾ ಗಾಂಧಿ ಹೇಳಿದರು, ಸೈನಿಕರು ಶಸ್ತ್ರಾಸ್ತ್ರಗಳನ್ನು ಒಯ್ಯುತ್ತಾರೋ ಇಲ್ಲವೋ ಎಂಬ ವಿಷಯಗಳು ಅಂತರರಾಷ್ಟ್ರೀಯ ಒಪ್ಪಂದಗಳಿಂದ ನಿರ್ಧರಿಸಲ್ಪಡುತ್ತವೆ ಮತ್ತು ಅಂತಹ ವಿಷಯಗಳಲ್ಲಿ ಇರುವ ಸೂಕ್ಷ್ಮತೆಗಳನ್ನು ಪಕ್ಷಗಳು ಗೌರವಿಸುವ ಅಗತ್ಯವಿದೆ ಎಂದು ಶ್ರೀ ಶರದ್ ಪವಾರ್ ಒತ್ತಿ ಹೇಳಿದರು. ಪ್ರಧಾನಿಯವರು ಈಶಾನ್ಯದಲ್ಲಿ ಮೂಲಸೌಕರ್ಯಗಳ ಬಗ್ಗೆ ಕೆಲಸ ಮಾಡುತ್ತಿದ್ದಾರೆ ಮತ್ತು ಅದು ಮುಂದುವರಿಯಬೇಕು ಎಂದು ಶ್ರೀ ಕಾನ್ರಾಡ್ ಸಂಗ್ಮಾ ಹೇಳಿದರು. ಶ್ರೀಮತಿ ಮಾಯಾವತಿ ಮಾತನಾಡಿ, ಇದು ರಾಜಕೀಯದ ಸಮಯವಲ್ಲ. ಪ್ರಧಾನಿಯವರು ತೆಗೆದುಕೊಳ್ಳುವ ಯಾವುದೇ ನಿರ್ಧಾರಗಳ ಜೊತೆಗೆ ದೃಢವಾಗಿ ನಿಲ್ಲುತ್ತೇವೆ ಎಂದು ಹೇಳಿದರು. ಕುರಿತು ಪ್ರಧಾನಿಯವರು ಇತ್ತೀಚೆಗೆ ನೀಡಿದ ಹೇಳಿಕೆಯನ್ನು ಶ್ರೀ ಎಂ.ಕೆ.ಸ್ಟಾಲಿನ್ ಸ್ವಾಗತಿಸಿದರು.

ಸಭೆಯಲ್ಲಿ ಭಾಗವಹಿಸಿದ್ದಕ್ಕಾಗಿ ಮತ್ತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಕ್ಕಾಗಿ ಪ್ರಧಾನಿಯವರು ಪಕ್ಷಗಳ ನಾಯಕರಿಗೆ ಧನ್ಯವಾದ ತಿಳಿಸಿದರು.

***



(Release ID: 1632981) Visitor Counter : 202