ಗೃಹ ವ್ಯವಹಾರಗಳ ಸಚಿವಾಲಯ

ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅಧ್ಯಕ್ಷತೆಯಲ್ಲಿ ದಿಲ್ಲಿಯಲ್ಲಿ ಕೋವಿಡ್ -19 ಪರಿಸ್ಥಿತಿಯ ಪರಾಮರ್ಶಾ ಸಭೆ

Posted On: 14 JUN 2020 4:44PM by PIB Bengaluru

ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅಧ್ಯಕ್ಷತೆಯಲ್ಲಿ ದಿಲ್ಲಿಯಲ್ಲಿ ಕೋವಿಡ್ -19 ಪರಿಸ್ಥಿತಿಯ ಪರಾಮರ್ಶಾ ಸಭೆ

ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್, ದಿಲ್ಲಿ ಉಪರಾಜ್ಯಪಾಲ ಶ್ರೀ ಅನಿಲ್ ಬೈಜಲ್ , ಮುಖ್ಯಮಂತ್ರಿ ಶ್ರೀ ಅರವಿಂದ ಕೇಜ್ರಿವಾಲ್ ಮತ್ತು ...ಎಂ.ಎಸ್. ನಿರ್ದೇಶಕರು, ಹಿರಿಯ ಅಧಿಕಾರಿಗಳು ಭಾಗಿ

ದಿಲ್ಲಿಯಲ್ಲಿ ಕೋವಿಡ್ -19 ಹರಡುವಿಕೆ ನಿಯಂತ್ರಣಕ್ಕೆ ಮತ್ತು ರಾಷ್ಟ್ರ ರಾಜಧಾನಿಯನ್ನು ಸುರಕ್ಷಿತವಾಗಿರಿಸಲು ಕೇಂದ್ರ ಸರಕಾರ ಬದ್ಧ-ಕೇಂದ್ರ ಗೃಹ ಸಚಿವರು

ಮೋದಿ ಸರಕಾರದಿಂದ ದಿಲ್ಲಿ ಸರಕಾರಕ್ಕೆ ತಕ್ಷಣವೇ 500 ಪರಿವರ್ತಿತ ರೈಲು ಬೋಗಿಗಳ ಒದಗಣೆ, ಇದರಿಂದ ಕೋವಿಡ್ -19 ರೋಗಿಗಳಿಗೆ 8,000 ಹೆಚ್ಚುವರಿ ಹಾಸಿಗೆಗಳು ಲಭ್ಯ

ಕೋವಿಡ್ -19 ಪರೀಕ್ಷಾ ಸೌಲಭ್ಯ ಇನ್ನೆರಡು ದಿನಗಳಲ್ಲಿ ದುಪ್ಪಟ್ಟು ಮತ್ತು 6 ದಿನಗಳಲ್ಲಿ ಮೂರು ಪಟ್ಟು; ಗೃಹ ಸಚಿವ ಶ್ರೀ ಅಮಿತ್ ಶಾ

ಖಾಸಗಿ ಆಸ್ಪತ್ರೆಗಳ 60% ನಷ್ಟು ಹಾಸಿಗೆಗಳು ಕಡಿಮೆ ದರದಲ್ಲಿ ಲಭ್ಯವಾಗುವುದನ್ನು ಖಾತ್ರಿಪಡಿಸಲು ಮತ್ತು ಕೊರೊನಾ ಪರೀಕ್ಷೆ ಹಾಗು ಚಿಕಿತ್ಸೆಗೆ ದರ ನಿಗದಿಗೆ ಸಮಿತಿ: ಶ್ರೀ ಅಮಿತ್ ಶಾ

 

ದಿಲ್ಲಿಯಲ್ಲಿ ಕೋವಿಡ್ -19 ಹರಡುವಿಕೆ ನಿಯಂತ್ರಣ ಮಾಡಲು ಮತ್ತು ರಾಷ್ಟ್ರದ ರಾಜಧಾನಿಯನ್ನು ಸುರಕ್ಷಿತವಾಗಿರಿಸಲು ಮೋದಿ ಸರಕಾರ ಬದ್ದವಾಗಿದೆ ಎಂದು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಹೇಳಿದ್ದಾರೆ. ಮುಖ್ಯಮಂತ್ರಿ ಶ್ರೀ ಅರವಿಂದ ಕೇಜ್ರಿವಾಲ್ ಮತ್ತು ಹಿರಿಯ ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ಸೋಂಕಿನ ವಿರುದ್ದ ದಿಲ್ಲಿಯ ನಾಗರಿಕರಿಗೆ ಸುರಕ್ಷೆಯನು ಒದಗಿಸಲು ಹಲವಾರು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಯಿತು.

ದಿಲ್ಲಿ ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳಿಗೆ ಹಾಸಿಗೆಗಳ ಕೊರತೆಯ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ತಕ್ಷಣವೇ ದಿಲ್ಲಿ ಸರಕಾರಕ್ಕೆ 500 ಪರಿವರ್ತಿತ ರೈಲು ಬೋಗಿಗಳನ್ನು ಒದಗಿಸಲು ನಿರ್ಧರಿಸಿದೆ ಎಂದು ಶ್ರೀ ಶಾ ಹೇಳಿದರು. ಇದರೊಂದಿಗೆ ದಿಲ್ಲಿಯಲ್ಲಿ 8000 ಹೆಚ್ಚುವರಿ ಹಾಸಿಗೆಗಳು ಲಭ್ಯವಾಗುತ್ತವೆ, ಮತ್ತು ಇವುಗಳು ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆ ನೀಡಲು ಎಲ್ಲಾ ಸೌಲಭ್ಯ, ಸಲಕರಣೆಗಳನ್ನು ಹೊಂದಿರುತ್ತವೆ ಎಂದರು.

ಸಂಪರ್ಕ ನಕ್ಷೆ ಸುಧಾರಿಸಲು ಕಂಟೈನ್ ಮೆಂಟ್ ವಲಯಗಳಲ್ಲಿ ಮನೆ ಮನೆ ಸಮೀಕ್ಷೆ ಮಾಡಲಾಗುವುದು ಎಂದು ಹೇಳಿದ ಗೃಹ ಸಚಿವರು ಸಮೀಕ್ಷಾ ವರದಿ ಒಂದು ವಾರದಲ್ಲಿ ಲಭ್ಯವಾಗಲಿದೆ . ಸಮರ್ಪಕ ನಿಗಾ ವ್ಯವಸ್ಥೆಗಾಗಿ ಎಲ್ಲಾ ನಿವಾಸಿಗಳಿಗೂ ಅವರ ಮೊಬೈಲ್ ಫೋನುಗಳಲ್ಲಿ ಆರೋಗ್ಯ ಸೇತು ಆಪ್ ಡೌನ್ ಲೋಡ್ ಮಾಡಿಕೊಳ್ಳಲು ಸೂಚಿಸಲಾಗುವುದೆಂದರು.

ದಿಲ್ಲಿಯಲ್ಲಿ ಕೊರೊನಾವೈರಸ್ ಹರಡುವಿಕೆಯನ್ನು ತಡೆಯಲು ಮುಂದಿನ ಎರಡು ದಿನಗಳಲ್ಲಿ ಕೋವಿಡ್ -19 ಪರೀಕ್ಷಾ ಸಾಮರ್ಥ್ಯವನ್ನು ದುಪ್ಪಟ್ಟು ಮಾಡಲಾಗುವುದು, ಆರು ದಿನಗಳ ಬಳಿಕ ಮೂರು ಪಟ್ಟು ಮಾಡಲಾಗುವುದು ಎಂದೂ ಗೃಹ ಸಚಿವರು ಹೇಳಿದರು. ಇದರ ಜೊತೆಗೆ ಕಂಟೈನ್ ಮೆಂಟ್ ವಲಯಗಳಲ್ಲಿ ಪ್ರತೀ ಮತಗಟ್ಟೆಯಲ್ಲಿಯೂ ಪರೀಕ್ಷಾ ಸೌಲಭ್ಯ ಲಭಿಸುವಂತೆ ಮಾಡಲಾಗುವುದು ಎಂದರು.

ದಿಲ್ಲಿಯಲ್ಲಿಯ ಕ್ಲಿನಿಕ್ ಗಳು ಮತ್ತು ಸಣ್ಣ ಆಸ್ಪತ್ರೆಗಳಿಗೆ ಕೊರೊನಾವೈರಸ್ ಕುರಿತ ಮಾಹಿತಿ ಮತ್ತು ಮಾರ್ಗದರ್ಶಿಗಳ ಸಮರ್ಪಕ ಪ್ರಸಾರಕ್ಕಾಗಿ ಮೋದಿ ಸರಕಾರವು ...ಎಂ.ಎಸ್. ನಲ್ಲಿಯ ಹಿರಿಯ ವೈದ್ಯರ ಸಮಿತಿಯನ್ನು ರಚಿಸಲು ನಿರ್ಧರಿಸಿದೆ, ಇದರಿಂದ ಕೊರೊನಾ ವಿರುದ್ದದ ಯುದ್ದದಲ್ಲಿ ಉತ್ತಮ ಪದ್ದತಿಗಳನ್ನು ತಳಮಟ್ಟದವರೆಗೂ ತಲುಪಿಸಲು ಸಾಧ್ಯವಾಗುತ್ತದೆ ಎಂದು ಭಾವಿಸಲಾಗಿದೆ. ದೂರವಾಣಿ ಮೂಲಕ ಮಾರ್ಗದರ್ಶನ ನೀಡಲು ಸಹಾಯವಾಣಿಯನ್ನು ಸ್ಥಾಪಿಸಲಾಗುವುದು ಮತ್ತು ನಾಳೆ ಅದನ್ನು ಕಾರ್ಯಾರಂಭ ಮಾಡಲಾಗುವುದು.

ಖಾಸಗಿ ಆಸ್ಪತ್ರೆಗಳ 60 % ನಷ್ಟು ಕೊರೊನಾ ಹಾಸಿಗೆಗಳು ಕಡಿಮೆ ದರದಲ್ಲಿ ಲಭ್ಯ ಇರುವಂತೆ ಖಾತ್ರಿಪಡಿಸಲು ಮತ್ತು ಕೊರೊನಾ ಪರೀಕ್ಷೆ ಹಾಗು ಚಿಕಿತ್ಸೆಗೆ ದರಗಳನ್ನು ನಿಗದಿ ಮಾಡಲು ನೀತಿ ಆಯೋಗದ ಸದಸ್ಯ ಡಾ.ವಿ.ಕೆ. ಪೌಲ್ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ, ಸಮಿತಿಯು ತನ್ನ ವರದಿಯನ್ನು ನಾಳೆ ಸಲ್ಲಿಸಲಿದೆ ಎಂದೂ ಶ್ರೀ ಶಾ ಹೇಳಿದರು.

ಕೊರೊನಾ ಜಾಗತಿಕ ಸಾಂಕ್ರಾಮಿಕದ ವಿರುದ್ದ ದಿಟ್ಟತನದಿಂದ ಮತ್ತು ಶಕ್ತಿಯುತವಾಗಿ ಹೋರಾಡುವ ದೇಶದ ನಿರ್ಧಾರವನ್ನು ಒತ್ತಿ ಹೇಳಿದ ಗೃಹ ಸಚಿವರು ಇದೇ ವೇಳೆ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡವರ ನೋವನ್ನೂ ಹಂಚಿಕೊಳ್ಳುತ್ತದೆ ಎಂದೂ ಹೇಳಿದರು. ಮೃತಪಟ್ಟವರ ಅಂತಿಮ ಸಂಸ್ಕಾರವನ್ನು ನಡೆಸುವುದಕ್ಕೆ ಸಂಬಂಧಿಸಿ ಸರಕಾರವು ಹೊಸ ಮಾರ್ಗದರ್ಶಿಗಳನ್ನು ಹೊರಡಿಸಲು ನಿರ್ಧರಿಸಿದೆ , ಇದರಿಂದ ಕಾಯುವ ಅವಧಿ ಕಡಿಮೆಯಾಗಲಿದೆ ಎಂದರು.

ರಾಷ್ಟ್ರವೀಗ ಜಾಗತಿಕ ಸಾಂಕ್ರಾಮಿಕದ ವಿರುದ್ದ ಅತ್ಯಂತ ಎಚ್ಚರದಿಂದ ಮತ್ತು ಎಲ್ಲರ ಸಹಕಾರದೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಹೋರಾಡುತ್ತಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಬಿಕ್ಕಟ್ಟಿನ ಸಮಯದಲ್ಲಿ ಅರ್ಪಣಾಭಾವದಿಂದ ದುಡಿದ ಹಲವಾರು ಎನ್.ಜಿ..ಗಳ ಶ್ರಮವನ್ನೂ ದೇಶವು ಸ್ಮರಿಸಿಕೊಳ್ಳುತ್ತದೆ ಎಂದ ಅವರು ನಿಟ್ಟಿನಲ್ಲಿ ಸರಕಾರವು ಸ್ಕೌಟ್ಸ್ ಮತ್ತು ಗೈಡ್ಸ್, ಎನ್.ಸಿ.ಸಿ. ಮತ್ತು ಎನ್.ಎಸ್.ಎಸ್. ಹಾಗು ಇತರ ಸ್ವಯಂಸೇವಾ ಸಂಘಟನೆಗಳು ಆರೋಗ್ಯ ಸೇವೆಗಳ ಜೊತೆ ಸ್ವಯಂಸೇವಕರಾಗಿ ದುಡಿಯುವುದನ್ನು ನೊಂದಾಯಿಸಿಕೊಳ್ಳಲು ನಿರ್ಧರಿಸಿದೆ ಎಂದರು. ಕೊರೊನಾವೈರಸ್ ವಿರುದ್ದ ಸಮರ್ಥ ಹೋರಾಟ ಮುಂದುವರೆಸಲು ಮತ್ತೆ ಐದು ಮಂದಿ ಹಿರಿಯ ಅಧಿಕಾರಿಗಳನ್ನು ದಿಲ್ಲಿ ಸರಕಾರಕ್ಕೆ ನಿಯೋಜನೆ ಮಾಡಲು ಕೇಂದ್ರ ಸರಕಾರ ನಿರ್ಧರಿಸಿದೆ.

ಇಂದಿನ ಸಭೆಯಲ್ಲಿ ಹಲವಾರು ಇತರ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಭಾರತ ಸರಕಾರದ ಮತ್ತು ದಿಲ್ಲಿ ಸರಕಾರದ , ...ಎಂ.ಎಸ್. ಮತ್ತು ದಿಲ್ಲಿಯ ಎಲ್ಲಾ ಮೂರೂ ಮುನ್ಸಿಪಲ್ ಕಾರ್ಪೋರೇಶನ್ ಗಳ ಆರೋಗ್ಯ ಇಲಾಖೆಗಳ ವೈದ್ಯರು , ತಜ್ಞರನ್ನು ಒಳಗೊಂಡ ಜಂಟಿ ತಂಡ ದಿಲ್ಲಿಯ ಎಲ್ಲಾ ಕೊರೊನಾ ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿಯ ಆರೋಗ್ಯ ಮೂಲ ಸೌಕರ್ಯ ಮತ್ತು ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆ ನೀಡಲು ಇರುವ ಸಿದ್ದತಾ ಸ್ಥಿತಿಯ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಲಿದೆ.

ಇಂದು ಕೈಗೊಳ್ಳಲಾದ ವಿವಿಧ ನಿರ್ಧಾರಗಳು ತಳಮಟ್ಟದಲ್ಲಿ ಅನುಷ್ಟಾನಗೊಳ್ಳುವುದನ್ನು ಖಾತ್ರಿಪಡಿಸುವಂತೆ ಆರೋಗ್ಯ ಮತ್ತು ಇತರ ಕೇಂದ್ರ ಹಾಗು ರಾಜ್ಯ ಸರಕಾರಗಳ ಇಲಾಖೆಗಳಿಗೆ ಹಾಗು ತಜ್ಞರಿಗೆ ಶ್ರೀ ಶಾ ನಿರ್ದೇಶನ ನೀಡಿದರು.

ಆಮ್ಲಜನಕ ಸಿಲಿಂಡರುಗಳು, ವೆಂಟಿಲೇಟರುಗಳು ಮತ್ತು ನಾಡಿ ಆಕ್ಸಿಮೀಟರುಗಳು ಸಹಿತ ಎಲ್ಲಾ ಅವಶ್ಯ ಸಂಪನ್ಮೂಲಗಳನ್ನು ಒದಗಿಸುವುದಾಗಿ ಭಾರತ ಸರಕಾರವು, ದಿಲ್ಲಿ ಸರಕಾರಕ್ಕೆ ಭರವಸೆ ನೀಡಿತು.

ಸಭೆಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ. ಹರ್ಷವರ್ಧನ್, ದಿಲ್ಲಿಯ ಉಪರಾಜ್ಯಪಾಲ ಶ್ರೀ ಅನಿಲ್ ಬೈಜಲ್, ಮತ್ತು ಮುಖ್ಯಮಂತ್ರಿ ಶ್ರೀ ಅರವಿಂದ ಕೇಜ್ರಿವಾಲ್, , ...ಎಂ.ಎಸ್. ನಿರ್ದೇಶಕರು, ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

***



(Release ID: 1631856) Visitor Counter : 279