ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ನಿಗ್ರಹ ಕ್ರಮಗಳನ್ನು ಪರಿಶೀಲಿಸಿದ ಸಚಿವರ ಸಮೂಹ (GoM)

Posted On: 09 JUN 2020 4:22PM by PIB Bengaluru

ಕೋವಿಡ್-19 ನಿಗ್ರಹ ಕ್ರಮಗಳನ್ನು ಪರಿಶೀಲಿಸಿದ ಸಚಿವರ ಸಮೂಹ (GoM)

ಭಾರತವು ವಿಶ್ವದ ಇತರರಿಗಿಂತ ಉತ್ತಮ ಸ್ಥಾನದಲ್ಲಿದೆ, ಆದರೆ ಇದು ಸಮಾಧಾನದ ಸಮಯವಲ್ಲ: ಡಾ. ಹರ್ಷವರ್ಧನ್

"ದೈಹಿಕ ದೂರ, ಕೈಗಳ ನೈರ್ಮಲ್ಯ ಮತ್ತು ಮುಖಗವಸು/ ಮುಖ ಕವಚಗಳ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೋವಿಡ್-19 ವಿರುದ್ಧದ ಸಾಮಾಜಿಕ ಲಸಿಕೆಯನ್ನು ನಾವು ಮರೆಯಬಾರದು"

 

ಕೋವಿಡ್ -19 ಕುರಿತು ಉನ್ನತ ಮಟ್ಟದ ಸಚಿವರ ಸಮೂಹದ (GoM) 16 ನೇ ಸಭೆಯು ವಿಡಿಯೋ-ಕಾನ್ಫರೆನ್ಸ್ ಮೂಲಕ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ಅಧ್ಯಕ್ಷತೆಯಲ್ಲಿ ಇಂದು ನಡೆಯಿತು. ಅವರೊಂದಿಗೆ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್.ಜೈಶಂಕರ್ ಸೇರಿದ್ದಾರೆ. ನಾಗರಿಕ ವಿಮಾನಯಾನ ಸಚಿವ ಶ್ರೀ ಹರ್ದೀಪ್ ಎಸ್.ಪುರಿ, ಗೃಹ ವ್ಯವಹಾರಗಳ ರಾಜ್ಯ ಸಚಿವ ಶ್ರೀ ನಿತ್ಯಾನಂದ ರೈ, ಹಡಗು ಮತ್ತು ರಾಸಾಯನಿಕ ಮತ್ತು ರಸಗೊಬ್ಬರಗಳ ರಾಜ್ಯ ಸಚಿವ ಮನ್ಸುಖ್ ಲಾಲ್ ಮಾಂಡವಿಯಾ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವ ಶ್ರೀ ಅಶ್ವಿನಿ ಕುಮಾರ್ ಚೌಬೆ, ರಕ್ಷಣಾ ಪಡೆಗಳ ಮುಖ್ಯಸ್ಥ ಶ್ರೀ ಬಿಪಿನ್ ರಾವತ್ ಸಭೆಯಲ್ಲಿ ಭಾಗವಹಿಸಿದ್ದರು. ಸಚಿವರ ಸಮೂಹದ ಸದಸ್ಯರು ಮತ್ತು ಅಧಿಕಾರಿಗಳು ಸಭೆಯಲ್ಲಿ ದೈಹಿಕ ಅಂತರದ ಮಾನದಂಡಗಳನ್ನು ಅನುಸರಿಸಿದರು.

ದೇಶದಲ್ಲಿ ಕೋವಿಡ್-19 ಇತ್ತೀಚಿನ ಪರಿಸ್ಥಿತಿ, ಪ್ರತಿಕ್ರಿಯೆ ಮತ್ತು ನಿರ್ವಹಣೆ ಕುರಿತು ಸಚಿವರ ಸಮೂಹಕ್ಕೆ ವಿವರಿಸಲಾಯಿತು. ಲಾಕ್ಡೌನ್ ಅನ್ನು ಸಡಿಲಗೊಳಿಸಿದ ಹಂತದಲ್ಲಿ ಇತರ ದೇಶಗಳಿಗೆ ಹೋಲಿಸಿದರೆ ಭಾರತದ ಉತ್ತಮ ಸ್ಥಾನವನ್ನು ತೋರಿಸುವ ಹಾಗೂ ಲಾಕ್ಡೌನ್ನಿಂದ ಉಂಟಾದ ಪ್ರಯೋಜನಗಳು ಮತ್ತು ರೋಗದ ನಿರ್ವಹಣೆಯಲ್ಲಿ ಇದು ಹೇಗೆ ಪ್ರಭಾವ ಬೀರಿತು ಎಂಬ ಬಗೆಗಿನ  ಸಂಕ್ಷಿಪ್ತ ಸ್ನ್ಯಾಪ್ಶಾಟ್ ಅನ್ನು GOM ಗೆ ಪ್ರಸ್ತುತಪಡಿಸಲಾಯಿತು. 11 ಸಶಕ್ತ ಗುಂಪುಗಳಿಗೆ ನಿಯೋಜಿಸಲಾದ ಕಾರ್ಯಗಳ ಪ್ರಗತಿಯ ಬಗ್ಗೆ GOM ಗೆ ವಿವರಿಸಲಾಯಿತು. ಸಾರ್ವಜನಿಕ ಮತ್ತು ಅರೆ-ಸಾರ್ವಜನಿಕ ಸ್ಥಳಗಳಿಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಹೊರಡಿಸಿದ ಎಸ್ಒಪಿಗಳು ಕೋವಿಡ್-19 ನಿಗ್ರಹ ಕ್ರಮಗಳೊಂದಿಗೆ ರಾಜಿ ಮಾಡಿಕೊಳ್ಳದೆ ಆರ್ಥಿಕ ಚಟುವಟಿಕೆಯನ್ನು ಪುನರಾರಂಭಿಸಲು ಹೇಗೆ ಸಹಕರಿಸುತ್ತವೆ ಎಂಬ ಬಗ್ಗೆ ಸರ್ಕಾರಕ್ಕೆ ವಿವರಿಸಲಾಯಿತು.

ನಿರ್ಬಂಧಗಳ ಸಡಿಲಿಕೆ ಮತ್ತು ನಿರ್ಬಂಧಗಳನ್ನು ತೆಗೆದುಹಾಕಿರುವ ಅನ್ಲಾಕ್ 1.0 ಹಂತಕ್ಕೆ ನಾವು ಪ್ರವೇಶಿಸುತ್ತಿರುವಾಗ, ಎಲ್ಲರೂ ದೈಹಿಕ ಅಂತರದ ನಿಯಮಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು ನಮ್ಮ ಕೋವಿಡ್ ಕುರಿತ ನಡವಳಿಕೆಯಲ್ಲಿ ನಾವು ಹೆಚ್ಚು ಶಿಸ್ತುಬದ್ಧವಾಗಿರಬೇಕು. ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಅಂತರ, ಮುಖಗವಸುಗಳು ಮತ್ತು ಮುಖದ ಕವಚಗಳನ್ನು ಬಳಸಿ, ಕೈಗಳ ನೈರ್ಮಲ್ಯಗಳನ್ನು ಕಾಪಾಡಿಕೊಳ್ಳಿ ಮತ್ತು ಉಸಿರಾಟದ ಶಿಷ್ಟಾಚಾರಗಳನ್ನು ಅನುಸರಿಸಿ ಎಂದು GoM ಅಧ್ಯಕ್ಷ ಡಾ.ಹರ್ಷವರ್ಧನ್ ಹೇಳಿದರು. ಸಮಾಧಾನಕ್ಕೆ ಅವಕಾಶವಿಲ್ಲ ಎಂದು ಅವರು ಬಲವಾಗಿ ಪುನರುಚ್ಚರಿಸಿದರು. ಎಲ್ಲಾ ಸರ್ಕಾರಿ ಕಚೇರಿಗಳು ಈಗ ತೆರೆಯುತ್ತಿರುವಾಗ, ಅವರು ಇಲಾಖೆಗಳ ಮುಖ್ಯಸ್ಥರಿಗೆ ಮನವಿ ಮಾಡಿ ದೈಹಿಕ ದೂರ, ಕೈಗಳ ನೈರ್ಮಲ್ಯ ಮತ್ತು ಮುಖಗವಸು / ಮುಖದ ಕವಚಗಳ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೋವಿಡ್-19 ವಿರುದ್ಧದಸಾಮಾಜಿಕ ಲಸಿಕೆಯನ್ನು ನಾವು ಮರೆಯಬಾರದುಎಂದರು. ಸ್ವಯಂ ಅಪಾಯದ ಮೌಲ್ಯಮಾಪನಕ್ಕೆ ಮತ್ತು ಕೋವಿಡ್-19 ವಿರುದ್ಧದ ರಕ್ಷಣೆಗೆ ನೆರವಾಗುವ ಆರೋಗ್ಯ ಸೇತು ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವಂತೆ  ಅವರು ಪ್ರತಿಯೊಬ್ಬರಿಗೂ ನೆನಪಿಸಿದರು. ಇದುವರೆಗೆ ದೇಶದ 12.55 ಕೋಟಿಗೂ ಹೆಚ್ಚು ಜನರು ಆ್ಯಪ್ ಡೌನ್ಲೋಡ್ ಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದರು.

ದೇಶದಲ್ಲಿ ಹೆಚ್ಚುತ್ತಿರುವ ವೈದ್ಯಕೀಯ ಮೂಲಸೌಕರ್ಯಗಳ ಬಗ್ಗೆ GoM ಗೆ ತಿಳಿಸಲಾಯಿತು. 2020 ಜೂನ್ 9 ಹೊತ್ತಿಗೆ, ಕೋವಿಡ್ ಸಂಬಂಧಿತ ಆರೋಗ್ಯ ಮೂಲಸೌಕರ್ಯವನ್ನು 958 ಕೋವಿಡ್ ಮೀಸಲು ಆಸ್ಪತ್ರೆಗಳನ್ನು 1,67,883 ಪ್ರತ್ಯೇಕ ಹಾಸಿಗೆಗಳು, 21,614 ಐಸಿಯು ಹಾಸಿಗೆಗಳು ಮತ್ತು 73,469 ಆಮ್ಲಜನಕ ಬೆಂಬಲಿತ ಹಾಸಿಗೆಗಳ ಲಭ್ಯತೆಯೊಂದಿಗೆ ಬಲಪಡಿಸಲಾಗಿದೆ ಎಂದು ತಿಳಿಸಲಾಯಿತು. 1,33,037 ಪ್ರತ್ಯೇಕ ಹಾಸಿಗೆಗಳು, 10,748 ಐಸಿಯು ಹಾಸಿಗೆಗಳು ಮತ್ತು 46,635 ಆಮ್ಲಜನಕ ಬೆಂಬಲಿತ ಹಾಸಿಗೆಗಳ 2,313 ಕೋವಿಡ್ ಮೀಸಲು ಆರೋಗ್ಯ ಕೇಂದ್ರಗಳನ್ನೂ ಸಹ ಕಾರ್ಯಗತಗೊಳಿಸಲಾಗಿದೆ. ಇದಲ್ಲದೆ, ದೇಶದಲ್ಲಿ ಕೋವಿಡ್-19ನ್ನು ಎದುರಿಸಲು 7,10,642 ಹಾಸಿಗೆಗಳನ್ನುಹೊಂದಿರುವ 7,525 ಕೋವಿಡ್ ಆರೈಕೆ ಕೇಂದ್ರಗಳು ಲಭ್ಯವಿವೆ.  ಕೋವಿಡ್ ಹಾಸಿಗೆಗಳಿಗೆ ಲಭ್ಯವಿರುವ ವೆಂಟಿಲೇಟರ್ಗಳ ಸಂಖ್ಯೆ 21,494.

ಕೇಂದ್ರವು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು/ ಕೇಂದ್ರೀಯ ಸಂಸ್ಥೆಗಳಿಗೆ 128.48 ಲಕ್ಷ ಎನ್ 95 ಮುಖಗವಸುಗಳು ಮತ್ತು 104.74 ಲಕ್ಷ ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ) ಒದಗಿಸಿದೆ. ಕೇಂದ್ರವು 60,848 ವೆಂಟಿಲೇಟರ್ಗಳ ಖರೀದಿಗಾಗಿ ಆದೇಶವನ್ನು ನೀಡಿದೆ. ಐಸಿಎಂಆರ್ ಪರೀಕ್ಷಾ ಸಾಮರ್ಥ್ಯವು 553 ಸರ್ಕಾರಿ ಮತ್ತು 231 ಖಾಸಗಿ ಪ್ರಯೋಗಾಲಯಗಳ ಮೂಲಕ ಹೆಚ್ಚಾಗಿದೆ (ಒಟ್ಟು 784 ಪ್ರಯೋಗಾಲಯಗಳು). ಇದುವರೆಗೆ ದೇಶದಲ್ಲಿ 49 ಲಕ್ಷಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗಿದೆ. ಅಲ್ಲದೆ, ಕಳೆದ 24 ಗಂಟೆಗಳಲ್ಲಿ 1,41,682 ಮಾದರಿಗಳನ್ನು ಪರೀಕ್ಷಿಸಲಾಗಿದೆ.

ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ದೇಶಕ್ಕೆ ನಿರ್ಣಾಯಕ ಸಾಮಗ್ರಿಗಳನ್ನು ಪೂರೈಸಲು ಲಾಕ್ಡೌನ್ ಸಡಿಲಿಕೆಗಾಗಿ ಇಜಿ ಅಳವಡಿಸಿಕೊಂಡ ನಿರ್ಣಾಯಕ ಕಾರ್ಯತಂತ್ರಗಳನ್ನು ಸಬಲೀಕೃತ ಗುಂಪು -5 ಅಧ್ಯಕ್ಷ ಶ್ರೀ ಪರಮೇಶ್ವರನ್ ಅಯ್ಯರ್ ಮಂಡಿಸಿದರು.

ಪರೀಕ್ಷಾ ಪ್ರಯೋಗಾಲಯಗಳ ಸ್ಥಿತಿಗತಿ, ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯದ ಹೆಚ್ಚಳದ ಬಗ್ಗೆ ವಿವರಿಸಿದ ಐಸಿಎಂಆರ್ ಡಾ. ರಾಮನ್ ಗಂಗಖೇಡ್ಕರ್  ಅವರು, ಎಚ್ಸಿಕ್ಯು, ರೆಮ್ಡೆಸಿವಿರ್ ಮತ್ತು ಸೆರೊ-ಕಣ್ಗಾವಲು ಅಧ್ಯಯನಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆಯೂ ಸರ್ಕಾರಕ್ಕೆ ತಿಳಿಸಿದರು.

ಇದುವರೆಗೆ ಒಟ್ಟು 1,29,214 ಜನರನ್ನು ಗುಣಪಡಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 4,785 ರೋಗಿಗಳನ್ನು ಗುಣಪಡಿಸಲಾಗಿದೆ. ಇದು ಒಟ್ಟು ಚೇತರಿಕೆಯ ದರವನ್ನು ಶೇ.48.47 ಕ್ಕೆ  ಹೆಚ್ಚಿಸಿದೆ.  ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ಈಗ 1,29,917 ಆಗಿದೆ.

ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀಮತಿ ಪ್ರೀತಿ ಸೂದನ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ವಿಶೇಷಾಧಿಕಾರಿ ಶ್ರೀ ರಾಜೇಶ್ ಭೂಷಣ್, ಹೆಚ್ಚುವರಿ ಕಾರ್ಯದರ್ಶಿ (ಆರೋಗ್ಯ) ಶ್ರೀಮತಿ ಆರತಿ ಅಹುಜಾ ಮತ್ತು ಐಸಿಎಂಆರ್ ಡಾ.ರಾಮನ್ ಗಂಗಖೇಡ್ಕರ್ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು.

***



(Release ID: 1630590) Visitor Counter : 185