ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಪ್ರಕರಣ ಅಧಿಕವಾಗಿರುವ 50 ಮಹಾನಗರ/ ಸ್ಥಳೀಯ ಸಂಸ್ಥೆಗಳಿಗೆ ಕೇಂದ್ರ ತಂಡಗಳ ನಿಯೋಜನೆ

Posted On: 09 JUN 2020 1:51PM by PIB Bengaluru

ಕೋವಿಡ್-19 ಪ್ರಕರಣ ಅಧಿಕವಾಗಿರುವ 50 ಮಹಾನಗರ/ ಸ್ಥಳೀಯ ಸಂಸ್ಥೆಗಳಿಗೆ ಕೇಂದ್ರ ತಂಡಗಳ ನಿಯೋಜನೆ

 

ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಕೋವಿಡ್-19 ಪ್ರಕರಣಗಳು ಅಧಿಕವಾಗಿರುವ 15 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ 50ಕ್ಕೂ ಅಧಿಕ ಜಿಲ್ಲೆಗಳು/ ಸ್ಥಳೀಯ ಸಂಸ್ಥೆಗಳಿಗೆ ಕೋವಿಡ್-19 ಪ್ರಕರಣಗಳ ನಿಯಂತ್ರಣಕ್ಕೆ ರಾಜ್ಯಗಳಿಗೆ ತಾಂತ್ರಿಕ ನೆರವು ಮತ್ತು ಸಹಾಯ ನೀಡಲು ಉನ್ನತ ಮಟ್ಟದ ಬಹುಶಿಸ್ತೀಯ ಕೇಂದ್ರ ತಂಡಗಳನ್ನು ನಿಯೋಜಿಸಿದೆ. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೆಂದರೆ: ಮಹಾರಾಷ್ಟ್ರ (7 ಜಿಲ್ಲೆಗಳು/ ಸ್ಥಳೀಯ ಸಂಸ್ಥೆಗಳು), ತೆಲಂಗಾಣ (4), ತಮಿಳುನಾಡು (7), ರಾಜಸ್ಥಾನ (5), ಅಸ್ಸಾಂ (6), ಹರಿಯಾಣ (4), ಗುಜರಾತ್ (3), ಕರ್ನಾಟಕ (4), ಉತ್ತರಾಖಂಡ (3), ಮಧ್ಯಪ್ರದೇಶ (5), ಪಶ್ಚಿಮಬಂಗಾಳ (3), ದೆಹಲಿ (3), ಬಿಹಾರ (4), ಉತ್ತರ ಪ್ರದೇಶ (4) ಮತ್ತು ಒಡಿಶಾ (5).

ಮೂವರ ಸದಸ್ಯರ ತಂಡದಲ್ಲಿ ಇಬ್ಬರು ಸಾರ್ವಜನಿಕ ಆರೋಗ್ಯ ಪರಿಣಿತರು/ ಸೋಂಕು ಶಾಸ್ತ್ರಜ್ಞರು/ ಕ್ಲಿನಿಕಲ್ ತಜ್ಞರು ಮತ್ತು ಹಿರಿಯ ಜಂಟಿ ಕಾರ್ಯದರ್ಶಿ ಮಟ್ಟದ ನೋಡಲ್ ಅಧಿಕಾರಿ ಇರುತ್ತಾರೆ. ಅವರು ಆಡಳಿತ ಸುಧಾರಣೆ ಜೊತೆಗೆ ಆಡಳಿತಾತ್ಮಕ ಬೆಂಬಲ ನೀಡುವರು. ತಂಡಗಳು ಕ್ಷೇತ್ರ ಮಟ್ಟದಲ್ಲಿ ಕಾರ್ಯ ನಿರ್ವಹಿಸಲಿವೆ. ಅವುಗಳು ಆರೋಗ್ಯ ರಕ್ಷಣಾ ಸೌಕರ್ಯಗಳಿಗೆ ಭೇಟಿ ನೀಡಿ, ನಿರ್ಬಂಧಿತ ಕ್ರಮಗಳನ್ನು ಅನುಷ್ಠಾನಗೊಳಿಸಲು ರಾಜ್ಯಗಳ ಆರೋಗ್ಯ ಇಲಾಖೆಗಳಿಗೆ ಬೆಂಬಲ ನೀಡಲಿವೆ ಮತ್ತು ಜಿಲ್ಲೆಗಳು/ನಗರಗಳೊಳಗೆ ಪ್ರಕರಣಗಳಿಗೆ ಪರಿಣಾಮಕಾರಿ ಚಿಕಿತ್ಸೆ ಮತ್ತು ಕ್ಲಿನಿಕಲ್ ನಿರ್ವಹಣೆಗೆ ನೆರವು ನೀಡಲಿವೆ.

ಉತ್ತಮ ಸಮನ್ವಯ ಖಾತ್ರಿಪಡಿಸಲು ಮತ್ತು ತಳಮಟ್ಟದಲ್ಲಿ ಕ್ಷಿಪ್ರ ರೀತಿಯಲ್ಲಿ ಸ್ಪಂದಿಸಲು, ಹಂತ ಹಂತವಾಗಿ ಹೆಚ್ಚಿನ ಕಾರ್ಯತಂತ್ರ ಅಳವಡಿಕೆಗೆ ಜಿಲ್ಲೆಗಳು/ ಮುನಿಸಿಪಾಲಿಟಿಗಳಲ್ಲಿ ನಿರಂತರ ನಿಗಾ ಇರಿಸುವ ಕೆಲಸವನ್ನು ಕೇಂದ್ರ ತಂಡಗಳು ಮಾಡಲಿದ್ದು, ಅವುಗಳು ಈಗಾಗಲೇ ರಾಜ್ಯಗಳೊಂದಿಗೆ ಸಮನ್ವಯ ನಡೆಸುತ್ತಿವೆ. ರೀತಿ ಪದೇ ಪದೇ ಸಂವಾದ ನಡೆಸುವುದರಿಂದ ತಳಮಟ್ಟದಲ್ಲಿ ಕಣ್ಗಾವಲು, ನಿರ್ಬಂಧಿತ ಕ್ರಮಗಳು, ಪರೀಕ್ಷೆ ಮತ್ತು ಚಿಕಿತ್ಸೆಗೆ ಸಂಬಂಧಿಸಿದ ಕಾರ್ಯಗಳಲ್ಲಿ ಹೆಚ್ಚಿನ ಸಾಮರ್ಥ್ಯ ವೃದ್ಧಿಯಾಗಲಿದೆ.

ಪರೀಕ್ಷೆಯಲ್ಲಿ ಎದುರಾಗುವ ತೊಂದರೆಗಳು, ಕಡಿಮೆ ಪರೀಕ್ಷೆಗಳು/ ಪ್ರತಿ ಮಿಲಿಯನ್ ಜನಸಂಖ್ಯೆ, ದೃಢಪಡುವ ಹೆಚ್ಚಿನ ಪ್ರಕರಣಗಳು, ಹೆಚ್ಚಿನ ಪರೀಕ್ಷಾ ದೃಢಪಡುತ್ತಿರುವ ದರ, ಮುಂದಿನ ಎರಡು ತಿಂಗಳ ಕಾಲ ಸಾಮರ್ಥ್ಯ ಕೊರತೆ ಎದುರಾಗುವ ಅಪಾಯ, ಸಂಭಾವ್ಯ ಹಾಸಿಗೆ ಕೊರತೆ, ಹೆಚ್ಚುತ್ತಿರುವ ಪ್ರಕರಣಗಳ ಸಾವಿನ ಪ್ರಮಾಣ, ದುಪ್ಪಟ್ಟಾಗುತ್ತಿರುವ ಪ್ರಮಾಣ, ಇದ್ದಕ್ಕಿದ್ದಂತೆ ಸಕ್ರಿಯ ಪ್ರಕರಣ ಹೆಚ್ಚಾಗುವುದು ಇತ್ಯಾದಿ ವಿಷಯಗಳಲ್ಲಿ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಎದುರಿಸುವ ಸವಾಲುಗಳನ್ನು ಹತ್ತಿಕ್ಕಲು ಕೇಂದ್ರ ತಂಡಗಳು ನೆರವಾಗಲಿವೆ.

ಕೇಂದ್ರ ತಂಡಗಳ ಜೊತೆ ನಿರಂತರವಾಗಿ ಸಮನ್ವಯ ನಡೆಸಲು ಬಹುತೇಕ ಜಿಲ್ಲೆಗಳು/ ಮುನಿಸಿಪಾಲಿಟಿಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ವೈದ್ಯಕೀಯ ಮತ್ತು ಆಡಳಿತಾಧಿಕಾರಿಗಳನ್ನೊಳಗೊಂಡ ನಿಗದಿತ ತಂಡಗಳನ್ನು ಈಗಾಗಲೇ ಅಧಿಕೃತವಾಗಿ ನಿಯೋಜಿಸಿವೆ.

***


(Release ID: 1630462) Visitor Counter : 236