ಪ್ರಧಾನ ಮಂತ್ರಿಯವರ ಕಛೇರಿ
ಎರಡನೆ ವರ್ಷದ ಆರಂಭ ಮೊದಲ ಸಚಿವ ಸಂಪುಟ ಸಭೆಯ ಅಧ್ಯಕ್ಷತೆ ವಹಿಸಿದ ಪ್ರಧಾನ ಮಂತ್ರಿ ಎಂ.ಎಸ್.ಎಂ. ಇ.ವಲಯ, ಬೀದಿ ವ್ಯಾಪಾರಿಗಳು ಮತ್ತು ರೈತರಿಗಾಗಿ ಚಾರಿತ್ರಿಕ ನಿರ್ಧಾರಗಳು 14 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಎಂ.ಎಸ್.ಎಂ.ಇ. ವ್ಯಾಖ್ಯೆಯ ಪರಿಷ್ಕರಣೆ ಮಧ್ಯಮ ಘಟಕಗಳ ವ್ಯಾಖ್ಯೆ 50 ಕೋ.ರೂ. ಹೂಡಿಕೆ ಮತ್ತು 250 ಕೋ.ರೂ. ವಹಿವಾಟಿಗೆ ವಿಸ್ತರಣೆ. ಬೀದಿ ವ್ಯಾಪಾರಿಗಳಿಗೆ ಕೈಗೆಟಕುವ ದರದಲ್ಲಿ ವಿಶೇಷ ಕಿರು ಸಾಲ ಸೌಲಭ್ಯ ಯೋಜನೆ “ ಪ್ರಧಾನ ಮಂತ್ರಿ ಸ್ವ ನಿಧಿ” ಆರಂಭ 2020-21 ರ ಖಾರಿಫ್ ಋತುವಿಗಾಗಿ ಉತ್ಪಾದನಾ ವೆಚ್ಚದ ಕನಿಷ್ಟ 1.5 ಪಟ್ಟು ಮಟ್ಟದಲ್ಲಿ ಕನಿಷ್ಟ ಬೆಂಬಲ ಬೆಲೆ ನಿಗದಿ ಭರವಸೆಯನ್ನು ಉಳಿಸಿಕೊಂಡ ಸರಕಾರ ಅಲ್ಪಾವಧಿ ಕೃಷಿ ಸಾಲ ಮತ್ತು ಪೂರಕ ಕಾರ್ಯಚಟುವಟಿಕೆಗಾಗಿರುವ ಸಾಲಗಳ ಮರುಪಾವತಿ ದಿನಾಂಕಗಳ ವಿಸ್ತರಣೆ; ರೈತರಿಗೆ ಬಡ್ಡಿ ರಿಯಾಯತಿ ಸೌಲಭ್ಯದ ಜೊತೆ ಸಕಾಲದಲ್ಲಿ ಮರುಪಾವತಿ ಪ್ರೋತ್ಸಾಹಧನವೂ ಲಭ್ಯ ಬಡವರ ಬಗ್ಗೆ ಕಾಳಜಿಯತ್ತ ಸರಕಾರದ ಆದ್ಯ ಗಮನ
Posted On:
01 JUN 2020 5:31PM by PIB Bengaluru
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟ ಸಭೆ 2020 ರ ಜೂನ್ 1 ರ ಸೋಮವಾರದಂದು ನಡೆಯಿತು. ಕೇಂದ್ರ ಸರಕಾರವು ಅಧಿಕಾರದಲ್ಲಿ ಎರಡನೆ ವರ್ಷಕ್ಕೆ ಪದಾರ್ಪಣೆ ಮಾಡಿದ ನಂತರದ ಮೊದಲ ಸಂಪುಟ ಸಭೆ ಇದಾಗಿದೆ.
ಸಭೆಯಲ್ಲಿ ಭಾರತದ ಪರಿಶ್ರಮಿ ರೈತರ ಬದುಕಿನಲ್ಲಿ , ಎಂ.ಎಸ್.ಎಂ.ಇ. ವಲಯದಲ್ಲಿ ಮತ್ತು ಬೀದಿ ವ್ಯಾಪಾರಿಗಳ ಜೀವನದಲ್ಲಿ ಪರಿವರ್ತನಾಶೀಲ ಪರಿಣಾಮ ಬೀರುವ ಚಾರಿತ್ರಿಕ ನಿರ್ಧಾರಗಳನ್ನು ಈ ಸಭೆಯಲ್ಲಿ ಕೈಗೊಳ್ಳಲಾಯಿತು.
ಎಂ.ಎಸ್.ಎಂ.ಇ. ಗಳಿಗೆ ನೆರವಿನ ಹಸ್ತ:
ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಜನಪ್ರಿಯವಾಗಿ ಎಂ.ಎಸ್.ಎಂ.ಇ.ಗಳೆಂದು ಕರೆಯಲಾಗುತ್ತಿದ್ದು, ಅವು ಭಾರತೀಯ ಆರ್ಥಿಕತೆಯೆ ಬೆನ್ನೆಲುಬಾಗಿವೆ. ದೇಶಾದ್ಯಂತ ವಿವಿಧ ಪ್ರದೇಶಗಳಲ್ಲಿ ಮೌನವಾಗಿ ಕಾರ್ಯಾಚರಿಸುತ್ತಿರುವ 6 ಕೋಟಿಗೂ ಅಧಿಕ ಎಂ.ಎಸ್.ಎಂ.ಇ. ಗಳು ಬಲಿಷ್ಟ ಮತ್ತು ಸ್ವಾವಲಂಬಿ ಭಾರತ ನಿರ್ಮಾಣ ಮಾಡುವ ನಿಟ್ಟಿನಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ.
ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಬಳಿಕ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಹಳ ತ್ವರಿತವಾಗಿ ಎಂ.ಎಸ್.ಎಂ.ಇ. ಗಳ ರಾಷ್ಟ್ರ ನಿರ್ಮಾಣದ ಸಾಮರ್ಥ್ಯವನ್ನು ಮನಗಂಡ ಕಾರಣಕ್ಕೆ ಆತ್ಮನಿರ್ಭರ ಭಾರತ್ ಅಭಿಯಾನ ಅಡಿಯಲಿ ಮಾಡಲಾದ ಘೋಷಣೆಗಳಲ್ಲಿ ಅವುಗಳು ಬಹಳ ಪ್ರಮುಖ ಭಾಗವಾದವು.
ಈ ಪ್ಯಾಕೇಜಿನಡಿಯಲ್ಲಿ, ಎಂ.ಎಸ್.ಎಂ.ಇ. ವಲಯಕ್ಕೆ ಸಾಕಷ್ಟು ಹಣಕಾಸು ಮಂಜೂರಾತಿ ಒದಗಿಸಿರುವುದು ಮಾತ್ರವಲ್ಲದೆ ಆರ್ಥಿಕತೆ ಪುನಶ್ಚೇತನ ಕ್ರಮಗಳ ಅನುಷ್ಟಾನದಲ್ಲಿಯೂ ಆದ್ಯತೆಯನ್ನು ನೀಡಲಾಗಿದೆ. ಅನುಷ್ಟಾನಕ್ಕೆ ಸಂಬಂಧಿಸಿ ಹಲವು ಪ್ರಮುಖ ಘೋಷಣೆಗಳನ್ನು ಈಗಾಗಲೇ ಮಾಡಲಾಗಿದೆ.
ಇಂದು ಭಾರತ ಸರಕಾರವು ಆತ್ಮನಿರ್ಭರ ಭಾರತ್ ಪ್ಯಾಕೇಜ್ ಅಡಿಯಲ್ಲಿಯೂ ಇತರ ಘೋಷಣೆಗಳ ಸಮರ್ಪಕ ಅನುಷ್ಟಾನಕ್ಕೆ ಹಾದಿಯನ್ನು ಹಾಕಿಕೊಟ್ಟಿದೆ. ಅವುಗಳಲ್ಲಿ ಈ ಕೆಳಗಿನವು ಸೇರಿವೆ:
- ಎಂ.ಎಸ್.ಎಂ.ಇ. ವ್ಯಾಖ್ಯೆಯನ್ನು ಮೇಲ್ಮುಖವಾಗಿ ಪರಿಷ್ಕರಿಸಲಾಗಿದೆ. ಇದು ವ್ಯಾಪಾರೋದ್ಯಮಕ್ಕೆ ಅನುಕೂಲಕರ ತಾಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಇನ್ನೊಂದು ಪ್ರಮುಖ ಕ್ರಮ. ಇದು ಎಂ.ಎಸ್.ಎಂ.ಇ. ವಲಯಕ್ಕೆ ಹೂಡಿಕೆ ಹರಿದು ಬರಲು ಮತ್ತು ಇನ್ನಷ್ಟು ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಗೆ ಸಹಾಯ ಮಾಡಲಿದೆ.
- ಒತ್ತಡದಲ್ಲಿರುವ ಎಂ.ಎಸ್.ಎಂ.ಇ. ಗಳಿಗೆ ಈಕ್ವಿಟಿ ಬೆಂಬಲ ನೀಡಲು 20,000 ಕೋ.ರೂ.ಗಳ ಪೂರಕ ಸಾಲ ಒದಗಿಸುವ ಪ್ರಸ್ತಾಪಕ್ಕೆ ಸಂಪುಟವು ಇಂದು ಔಪಚಾರಿಕವಾಗಿ ತನ್ನ ಅನುಮೋದನೆ ನೀಡಿತು. ಇದರಿಂದ 2 ಲಕ್ಷದಷ್ಟು ಒತ್ತಡದಲ್ಲಿರುವ ಎಂ.ಎಸ್.ಎಂ.ಇ. ಗಳಿಗೆ ಪ್ರಯೋಜನ ದೊರೆಯಲಿದೆ.
- ನಿಧಿಗಳ ನಿಧಿಯ ಮೂಲಕ ಎಂ.ಎಸ್.ಎಂ.ಇ. ಗಳಿಗಾಗಿ 50,000 ಕೋ.ರೂ. ಈಕ್ವಿಟಿ ಸೇರ್ಪಡೆ ಪ್ರಸ್ತಾಪಕ್ಕೂ ಸಂಪುಟವಿಂದು ಅನುಮೋದನೆ ನೀಡಿತು. ಇದು ಎಂ.ಎಸ್.ಎಂ.ಇ. ಗಳಿಗೆ ಸಾಲ-ಈಕ್ವಿಟಿ ಅನುಪಾತವನ್ನು ನಿರ್ವಹಿಸಲು ಚೌಕಟ್ಟನ್ನು ರೂಪಿಸಲು ಸಹಾಯ ಮಾಡುತ್ತದೆ. ಹಾಗು ಸಾಮರ್ಥ್ಯ ಒಗ್ಗೂಡಿಸುವಿಕೆಗೂ ನೆರವಾಗುತ್ತದೆ. ಇದು ಸ್ಟಾಕ್ ಎಕ್ಸ್ಚೇಂಜ್ ಗಳ ಪಟ್ಟಿಯಲ್ಲಿ ಸೇರ್ಪಡೆಯಾಗುವುದಕ್ಕೂ ಅವಕಾಶವನ್ನು ಒದಗಿಸುತ್ತದೆ.
ಎಂ.ಎಸ್.ಎಂ.ಇ. ವ್ಯಾಖ್ಯೆಗೆ ಇನ್ನಷ್ಟು ಮೇಲ್ಮುಖ ಪರಿಷ್ಕರಣೆ:
ಭಾರತ ಸರಕಾರವು ಇಂದು ಎಂ.ಎಸ್.ಎಂ.ಇ. ವ್ಯಾಖ್ಯೆಯನ್ನು ಇನ್ನಷ್ಟು ಮೇಲ್ಮುಖವಾಗಿ ಪರಿಷ್ಕರಿಸಲು ನಿರ್ಧರಿಸಿತು. ಪ್ಯಾಕೇಜ್ ಘೋಷಣೆಯಲ್ಲಿ ಕಿರು ಉತ್ಪಾದನಾ ಮತ್ತು ಸೇವಾ ಘಟಕಗಳ ವ್ಯಾಖ್ಯೆಯನ್ನು 1 ಕೋ.ರೂ. ಹೂಡಿಕೆಗೆ ಹೆಚ್ಚಳ ಮಾಡಿದ್ದಲ್ಲದೆ, ವಹಿವಾಟನ್ನು 5 ಕೋ.ರೂ.ಗಳಿಗೆ ವಿಸ್ತರಿಸಲಾಗಿದೆ. ಸಣ್ನ ಘಟಕಗಳ ಮಿತಿಯನ್ನು 10 ಕೋ.ರೂ. ಹೂಡಿಕೆ ಮತ್ತು 50 ಕೋ.ರೂ. ವಹಿವಾಟಿನವರೆಗೆ ವಿಸ್ತರಿಸಲಾಗಿದೆ. ಅದೇ ರೀತಿ ಮಧ್ಯಮ ಘಟಕದ ಮಿತಿಯನ್ನು 20 ಕೋ.ರೂ. ಹೂಡಿಕೆ ಮತ್ತು 100 ಕೋ.ರೂ. ವಹಿವಾಟಿಗೆ ವಿಸ್ತರಿಸಲಾಗಿದೆ. ಈ ಪರಿಷ್ಕರಣೆಯನ್ನು ಎಂ.ಎಸ್.ಎಂ.ಇ. ಅಭಿವೃದ್ದಿ ಕಾಯ್ದೆ 2006 ರಲ್ಲಿ ಜಾರಿಗೆ ಬಂದ 14 ವರ್ಷಗಳ ಬಳಿಕ ಮಾಡಲಾಗಿದೆ ಎಂಬುದು ಗಮನಾರ್ಹ. 2020 ರ ಮೇ 13ರಂದು ಪ್ಯಾಕೇಜ್ ಘೋಷಣೆ ಬಳಿಕ ಘೋಷಿಸಲಾದ ಪರಿಷ್ಕರಣೆ ಮಾರುಕಟ್ಟೆ ಪರಿಸ್ಥಿತಿ ಮತ್ತು ದರ ಪರಿಸ್ಥಿತಿಗಳಿಗೆ ಅನುಗುಣವಾಗಿಲ್ಲ ಎಂದ ಹಲವಾರು ಮನವಿಗಳು ಸಲ್ಲಿಕೆಯಾಗಿದ್ದವು. ಮತ್ತು ಮೇಲ್ಮುಖ ಪರಿಷ್ಕರಣೆಗೆ ಅವು ಒತ್ತಾಯ ಮಾಡಿದ್ದವು. ಈ ಮನವಿಗಳನ್ನು ಗಮನದಲ್ಲಿರಿಸಿಕೊಂಡ ಪ್ರಧಾನ ಮಂತ್ರಿ ಅವರು ಮಧ್ಯಮ ಉತ್ಪಾದನಾ ಮತ್ತು ಸೇವಾ ಘಟಕಗಳ ಮಿತಿಯನ್ನು ಇನ್ನಷ್ಟು ಹೆಚ್ಚಿಸಲು ನಿರ್ಧರಿಸಿದರು. ಈಗ ಅದು 50 ಕೋ.ರೂ. ಹೂಡಿಕೆ ಮತ್ತು 250 ಕೋ.ರೂ ವಹಿವಾಟು ಆಗಿದೆ. ಎಂ. ಎಸ್.ಎಂ.ಇ. ಘಟಕಗಳು ಕಿರು, ಸಣ್ಣ ಅಥವಾ ಮಧ್ಯಮ –ಹೀಗೆ ಯಾವುದೇ ವರ್ಗದಲ್ಲಿರಲಿ ರಫ್ತಿನ ವಹಿವಾಟನ್ನು ಅದರ ವಹಿವಾಟಿನ ಮಿತಿಯಲ್ಲಿ ಗಣಿಸಲಾಗುವುದಿಲ್ಲ ಎಂದು ತೀರ್ಮಾನಿಸಲಾಗಿದೆ.
ಕಠಿಣ ದುಡಿಮೆ ಮಾಡುವ ನಮ್ಮ ಬೀದಿ ವ್ಯಾಪಾರಿಗಳಿಗೆ ಬೆಂಬಲ:
ವಸತಿ ಮತ್ತು ನಗರಾಭಿವೃದ್ದಿ ವ್ಯವಹಾರಗಳ ಸಚಿವಾಲಯ ವಿಶೇಷ ಕಿರು ಸಾಲ ಸೌಲಭ್ಯ ಯೋಜನೆ –ಪ್ರಧಾನ ಮಂತ್ರಿ ಸ್ವ ನಿಧಿ (ಪಿ.ಎಂ. ಸ್ವ ನಿಧಿ) ಯೋಜನೆಯನ್ನು ಆರಂಭಿಸಿದೆ. ಈ ಪಿ.ಎಂ. ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ ನಿಧಿಯು ಬೀದಿ ವ್ಯಾಪಾರಿಗಳಿಗೆ ಕೈಗೆಟಕುವ ದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸಲಿದೆ. ಇದು ಅವರಿಗೆ ಜೀವನೋಪಾಯ ಗಳಿಸಲು ಮತ್ತು ಕೆಲಸ ಪುನರಾರಂಭಿಸುವಂತೆ ಮಾಡಲು ಬಹಳ ಸಹಾಯ ಮಾಡಲಿದೆ.
ಬೀದಿ ವ್ಯಾಪಾರಿಗಳು, ತಳ್ಳು ಗಾಡಿಯವರು, ತಲೆ ಹೊರೆಯವರು ಇತ್ಯಾದಿಯಾಗಿ ವಿವಿಧ ಪ್ರದೇಶಗಳಲ್ಲಿರುವ/ ಪರಿಸ್ಥಿತಿಗಳಲ್ಲಿರುವ 50 ಲಕ್ಷಕ್ಕೂ ಅಧಿಕ ಮಂದಿಗೆ ಈ ಯೋಜನೆಯಿಂದ ಪ್ರಯೋಜನವಾಗುವ ಸಾಧ್ಯತೆ ಇದೆ.
ಅವರು ಪೂರೈಸುವ ಸರಕುಗಳಲ್ಲಿ ತರಕಾರಿಗಳು, ಹಣ್ಣುಗಳು, ತಿನ್ನಲು ಸಿದ್ದವಾದ ಬೀದಿ ಬದಿ ಆಹಾರಗಳು, ಚಹಾ, ಪಕೋಡಾಗಳು, ಬ್ರೆಡ್, ಮೊಟ್ಟೆಗಳು, ಜವಳಿ, ಪಾದರಕ್ಷೆಗಳು, ಕರ ಕುಶಲ ವಸ್ತುಗಳು, ಪುಸ್ತಕಗಳು/ ಸ್ಟೇಷನರಿಗಳು ಇತ್ಯಾದಿಗಳಿವೆ. ಸೇವೆಗಳಲ್ಲಿ ಬಾರ್ಬರ್ ಅಂಗಡಿಗಳು, ಪಾನ್ ಶಾಪ್ ಗಳು, ಚಮ್ಮಾರಿಕೆ, ಲಾಂಡ್ರಿ ಸೇವೆ ಇತ್ಯಾದಿಗಳಿವೆ.
ಕೋವಿಡ್ -19 ಬಿಕ್ಕಟ್ಟಿನಲ್ಲಿ ಅವರು ಎದುರಿಸಿದ ಸಮಸ್ಯೆಗಳ ಬಗ್ಗೆ ಭಾರತ ಸರಕಾರವು ಸೂಕ್ಷ್ಮತ್ವವನ್ನು ಹೊಂದಿದೆ. ಇಂತಹ ಸ್ಥಿತಿಯಲ್ಲಿ ಅವರಿಗೆ ಕೈಗೆಟಕುವ ದರದಲ್ಲಿ ಮುಂಗಡ ಲಭ್ಯವಾಗುವುದನ್ನು ಖಾತ್ರಿಪಡಿಸಿ, ಅವರ ವ್ಯಾಪಾರಕ್ಕೆ ಉತ್ತೇಜನ ದೊರಕುವಂತೆ ಖಾತ್ರಿಪಡಿಸುವುದು ಬಹಳ ಜರೂರಾಗಿ ಆಗಬೇಕಾದ ಕೆಲಸವಾಗಿದೆ.
ಈ ಯೋಜನೆ ಅನುಷ್ಟಾನದಲ್ಲಿ ನಗರ ಸ್ಥಳೀಯಾಡಳಿತ ಸಂಸ್ಥೆಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ.
ಈ ಕಾರ್ಯಕ್ರಮ ಹಲವಾರು ಕಾರಣಗಳಿಗಾಗಿ ವಿಶೇಷವಾದುದಾಗಿದೆ.
1- ಒಂದು ಚಾರಿತ್ರಿಕ ಪ್ರಥಮ:
ಭಾರತದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ನಗರ/ ಗ್ರಾಮೀಣ ಪ್ರದೇಶಗಳ ಬೀದಿ ವ್ಯಾಪಾರಿಗಳು ನಗರ ಜೀವನೋಪಾಯ ಕಾರ್ಯಕ್ರಮದ ಫಲಾನುಭವಿಗಳಾಗಿದ್ದಾರೆ.
ಬೀದಿ ವ್ಯಾಪಾರಿಗಳು 10,000 ರೂಪಾಯಿಗಳವರೆಗೆ ಕಾರ್ಯಾಚರಣಾ ಬಂಡವಾಳ ಸಾಲ ಪಡೆಯಬಹುದು, ಇದನ್ನು ಒಂದು ವರ್ಷದವರೆಗೆ ತಿಂಗಳ ಕಂತಿನಲ್ಲಿ ಮರುಪಾವತಿ ಮಾಡಬಹುದು. ಸಕಾಲದಲ್ಲಿ , ಮುಂಚಿತವಾಗಿ ಸಾಲ ಮರುಪಾವತಿ ಮಾಡಿದ ಫಲಾನುಭವಿಗಳಿಗೆ 7% ದರದಲ್ಲಿ ಬಡ್ಡಿ ರಿಯಾಯತಿಯನ್ನು ಆರು ತಿಂಗಳ ಆಧಾರದಲ್ಲಿ ನೇರ ನಗದು ವರ್ಗಾವಣೆ ಮೂಲಕ ಅವರ ಖಾತೆಗಳಿಗೆ ಜಮಾ ಮಾಡಲಾಗುವುದು. ಸಾಲವನ್ನು ಅವಧಿಗೆ ಮುಂಚಿತವಾಗಿ ಪಾವತಿ ಮಾಡಿದರೆ ದಂಡ ಪಾವತಿಯೂ ಇಲ್ಲ.
ಈ ಯೋಜನೆಯು ಸಾಲ ಮಿತಿಯನ್ನು ಸಕಾಲದಲ್ಲಿ/ ಅವಧಿಗೆ ಮುಂಚಿತವಾಗಿ ಪಾವತಿ ಮಾಡಿದಲ್ಲಿ ಹೆಚ್ಚಿಸುವ ಅವಕಾಶವನ್ನೂ ಒಳಗೊಂಡಿದೆ. ಬೀದಿ ವ್ಯಾಪಾರಿಗಳಿಗೆ ಆರ್ಥಿಕತೆಯ ಏಣಿಯ ಮೇಲೇರುವ ಮಹತ್ವಾಕಾಂಕ್ಷೆಗೆ ಇದು ಸಹಾಯ ಮಾಡಲಿದೆ.
ಎಂ.ಎಫ್. ಐ. ಗಳು/ಎನ್.ಬಿ.ಎಫ್.ಸಿ. ಗಳು/ಎಸ್.ಎಚ್.ಜಿ. ಬ್ಯಾಂಕುಗಳಿಗೆ ನಗರ ಬಡವರಿಗಾಗಿರುವ ಈ ಯೋಜನೆಯಲ್ಲಿ ಅವಕಾಶ ನೀಡಲಾಗಿದೆ. ಅವುಗಳ ತಳ ಮಟ್ತದ ಹಾಜರಾತಿ ಮತ್ತು ಬೀದಿ ವ್ಯಾಪಾರಿಗಳು ಸಹಿತ ನಗರ ಬಡವರ ಜೊತೆ ಅವುಗಳ ಸಾಮೀಪ್ಯವನ್ನು ಪರಿಗಣಿಸಿ ಈ ಅವಕಾಶ ಒದಗಿಸಲಾಗಿದೆ.
2- ಸಶಕ್ತೀಕರಣಕ್ಕೆ ತಂತ್ರಜ್ಞಾನದ ಬಳಕೆ:
ಸಮರ್ಪಕವಾಗಿ ಒದಗಣೆ ಮತ್ತು ಪಾರದರ್ಶಕತೆಗಾಗಿ ತಂತ್ರಜ್ಞಾನ ಬಳಸುವ ಸರಕಾರದ ಮುಂಗಾಣ್ಕೆಗೆ ಅನುಗುಣವಾಗಿ ಕೊನೆಯ ಹಂತದವರೆಗೂ ಯೋಜನೆಯನ್ನು ನಿರ್ವಹಿಸಲು ವೆಬ್ ಪೋರ್ಟಲ್/ ಮೊಬೈಲ್ ಜೊತೆಗೆ ಡಿಜಿಟಲ್ ವೇದಿಕೆಯನ್ನು ಅಭಿವೃದ್ದಿಪಡಿಸಲಾಗುತ್ತಿದೆ. ಈ ಐ.ಟಿ. ವೇದಿಕೆ ಬೀದಿ ವ್ಯಾಪಾರಿಗಳನ್ನು ಔಪಚಾರಿಕ ಹಣಕಾಸು ವ್ಯವಸ್ಥೆಯೊಳಗೆ ಏಕತ್ರಗೊಳಿಸಲಿದೆ. ಈ ವೇದಿಕೆಯು ವೆಬ್ ಪೋರ್ಟಲ್ / ಮೊಬೈಲ್ ಆಪ್ ಗಳನ್ನು ಸಿಡ್ಬಿಯ ಉದ್ಯಮಿಮಿತ್ರ ಪೋರ್ಟಲ್ ನಲ್ಲಿ ಮುಂಗಡ ನಿರ್ವಹಣೆ ಮತ್ತು ಎಂ.ಒ.ಎಚ್.ಯು.ಎ. ಯ ಪೈಸಾ ಪೋರ್ಟಲ್ ಜೊತೆ ಸಮಗ್ರೀಕರಣ/ ಸಂಪರ್ಕಿತಗೊಳಿಸಲಿದೆ. ಇದು ಸ್ವಯಂಚಾಲಿತವಾಗಿ ಬಡ್ಡಿ ಸಬ್ಸಿಡಿಯನ್ನು ನಿಭಾಯಿಸುತ್ತದೆ.
3- ಡಿಜಿಟಲ್ ವರ್ಗಾವಣೆಗೆ ಪ್ರೋತ್ಸಾಹ:
ಬೀದಿ ವ್ಯಾಪಾರಿಗಳು ನಡೆಸುವ ಡಿಜಿಟಲ್ ವರ್ಗಾವಣೆಗೆ ತಿಂಗಳ ಕ್ಯಾಶ್ ಬ್ಯಾಕ್ ಮೂಲಕ ಈ ಯೋಜನೆಯು ಪ್ರೋತ್ಸಾಹ ನೀಡುತ್ತದೆ.
4- ಸಾಮರ್ಥ್ಯವರ್ಧನೆಗೆ ಆದ್ಯತೆ:
ಎಂ.ಒ.ಎಚ್.ಯು.ಎ. ಯು ರಾಜ್ಯ ಸರಕಾರಗಳ , ಡಿ.ಎ.ವೈ-ಎನ್.ಯು.ಎಲ್.ಎಂ., ಯು.ಎಲ್.ಬಿ. ಗಳು, ಸಿಡ್ಬಿ, ಸಿ.ಜಿ.ಟಿ.ಎಂ.ಎಸ್.ಇ. , ಎನ್.ಪಿ.ಸಿ.ಐ. ಮತ್ತು ಡಿಜಿಟಲ್ ಪಾವತಿ ಅಗ್ರಿಗೇಟರುಗಳ ಸಹಯೋಗದಲ್ಲಿ ಎಲ್ಲಾ ಭಾಗೀದಾರರಿಗೆ ಸಾಮರ್ಥ್ಯವರ್ಧನೆ ಮತ್ತು ಹಣಕಾಸು ಸಾಕ್ಷರತಾ ಕಾರ್ಯಕ್ರಮವನ್ನು ದೇಶಾದ್ಯಂತ ಜೂನ್ ತಿಂಗಳಲ್ಲಿ ಕೈಗೊಳ್ಳುತ್ತದೆ ಮತ್ತು ಜುಲೈ ತಿಂಗಳಲ್ಲಿ ಸಾಲ ನೀಡಿಕೆ ಆರಂಭಗೊಳ್ಳುತ್ತದೆ.
ಜೈ ಕಿಸಾನ್ ಸ್ಪೂರ್ತಿಗೆ ಕಿಚ್ಚು
2020-21 ರ ಖಾರೀಫ್ ಋತುವಿಗಾಗಿ ಸರಕಾರವು ಉತ್ಪಾದನಾ ವೆಚ್ಚದ 1.5 ಪಟ್ಟು ಎಂ.ಎಸ್. ಪಿ. ನಿಗದಿ ಮಾಡುವ ತನ್ನ ಭರವಸೆಯನ್ನು ಉಳಿಸಿಕೊಂಡಿದೆ. ಇಂದು 2020-21 ಖಾರೀಫ್ ಋತುವಿನ 14 ಬೆಳೆಗಳ ಎಂ.ಎಸ್.ಪಿ.ಯನ್ನು ಘೋಷಿಸಲಾಗಿದೆ. ಸಿ.ಎ.ಸಿ.ಪಿ. ಶಿಫಾರಸುಗಳನ್ವಯ ಇದನ್ನು ಮಾಡಲಾಗಿದೆ. ಈ 14 ಬೆಳೆಗಳ ವೆಚ್ಚದ ಮೇಲಿನ ಆದಾಯ 50 % ನಿಂದ 83 %
ಕೃಷಿಗೆ ನೀಡಲಾದ 3 ಲಕ್ಷ ರೂಪಾಯಿಗಳವರೆಗಿನ ಅಲ್ಪಾವಧಿ ಸಾಲ ಮತ್ತು ಆ ಸಂಬಂಧಿ ಬ್ಯಾಂಕುಗಳ ಚಟುವಟಿಕೆಗಳಿಗೆ ಮರುಪಾವತಿ ದಿನಾಂಕವನ್ನು 31.08.2020 ರವರೆಗೆ ವಿಸ್ತರಿಸಲು ಭಾರತ ಸರಕಾರ ನಿರ್ಧರಿಸಿದೆ. ರೈತರು ಬಡ್ಡಿ ರಿಯಾಯತಿ ಮತ್ತು ಸಕಾಲದಲ್ಲಿ ಮರುಪಾವತಿ ಪ್ರೋತ್ಸಾಹಧನವನ್ನು ಪಡೆಯುವರು.
ಕೃಷಿಗೆ ಸಂಬಂಧಿಸಿದ 2020 ರ ಮಾರ್ಚ್ 1 ರಿಂದ 2020 ರ ಆಗಸ್ಟ್ 31 ರ ವರೆಗಿನ ಅಲ್ಪಾವಧಿ ಸಾಲ ಬಾಕಿಗೆ ಬ್ಯಾಂಕುಗಳಿಗೆ 2 % ಬಡ್ಡಿ ರಿಯಾಯತಿ (ಐ.ಎಸ್.) ಪ್ರಯೋಜನ ಮತ್ತು ರೈತರಿಗೆ ಸಕಾಲದಲ್ಲಿ ಮರುಪಾವತಿಗಾಗಿ 3% ಪ್ರೋತ್ಸಾಹಧನ (ಪಿ.ಆರ್.ಐ.) ಮುಂದುವರಿಯಲಿದೆ.
ಬ್ಯಾಂಕುಗಳ ಮೂಲಕ ಇಂತಹ ಸಾಲಗಳನ್ನು ರೈತರಿಗೆ ವಾರ್ಷಿಕ 7% ಬಡ್ಡಿದರದಲ್ಲಿ ಒದಗಿಸುವ , ಮತ್ತು 2% ವಾರ್ಷಿಕ ಬಡ್ಡಿ ರಿಯಾಯತಿ ಸಹಾಯವನ್ನು ಬ್ಯಾಂಕುಗಳಿಗೆ ಒದಗಿಸುವ ಹಾಗು ಸಕಾಲದಲ್ಲಿ ಮರುಪಾವತಿಗಾಗಿ ರೈತರಿಗೆ ಮತ್ತೆ 3% ಹೆಚ್ಚುವರಿ ಪ್ರಯೋಜನಗಳನ್ನು ಒದಗಿಸುವ ಭಾರತ ಸರಕಾರದ ನಿರ್ಧಾರ ರೈತರಿಗೆ ವಾರ್ಷಿಕ 3 ಲಕ್ಷ ರೂಪಾಯಿಗಳವರೆಗೆ ಸಾಲವನ್ನು 4% ಬಡ್ಡಿಯಲ್ಲಿ ಒದಗಿಸುತ್ತದೆ.
ಬಡ್ಡಿ ರಿಯಾಯತಿ ಯೋಜನೆ (ಐ.ಎಸ್.ಎಸ್.)ಯನ್ನು ರೈತರಿಗೆ ಕಿಸಾನ್ ಕಾರ್ಡ್ ಮೂಲಕ ಸಾಲ ಸಹಿತ ರಿಯಾಯತಿ ದರದಲ್ಲಿ ಅಲ್ಪಾವಧಿ ಬೆಳೆ ಸಾಲವನ್ನು ಒದಗಿಸಲು ಆರಂಭಿಸಲಾಯಿತು. ಕಳೆದ ಕೆಲವು ವಾರಗಳಲ್ಲಿ ರೈತರಿಗೆ ತಮ್ಮ ಅಲ್ಪಾವಧಿ ಬೆಳೆ ಸಾಲದ ಪಾವತಿಯನ್ನು ಮಾಡಲು ಬ್ಯಾಂಕುಗಳಿಗೆ ಹೋಗಲು ಸಾಧ್ಯವಾಗಿಲ್ಲ. ಆದುದರಿಂದ ಸಂಪುಟ ನಿರ್ಧಾರ ಕೋಟ್ಯಾಂತರ ರೈತರಿಗೆ ಸಹಾಯ ಮಾಡಲಿದೆ.
ಬಡವರ ಬಗ್ಗೆ ಕಾಳಜಿಗೆ ಸರಕಾರದ ಪ್ರಥಮಾಧ್ಯತೆ
ಬಡವರು ಮತ್ತು ಅಪಾಯಕ್ಕೀಡಾಗುವ ಸಂಭವ ಇರುವವರು ಪ್ರಧಾನ ಮಂತ್ರಿ ನೇತೃತ್ವದ ಸರಕಾರದ ಪ್ರಥಮ ಆದ್ಯತೆಯಾಗಿದ್ದರು. ಕೊರೊನಾ ವೈರಸ್ ಜಾಗತಿಕ ಸಾಂಕ್ರಾಮಿಕದ ಅವಧಿಯಲ್ಲಿ ಲಾಕ್ ಡೌನ್ ಘೋಷಣೆಯಾದಂದಿನಿಂದ ಬಡವರಲ್ಲಿ ಬಡವರ ಆವಶ್ಯಕತೆಗಳ ಬಗೆಗೆ ಸರಕಾರ ಸೂಕ್ಷ್ಮತ್ವ ಹೊಂದಿತ್ತು. 2020ರ ಮಾರ್ಚ್ 26 ರಂದು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನಾ ಪ್ಯಾಕೇಜ್ ಘೋಷಣೆಯಲ್ಲಿ ಇದನ್ನು ಕಾಣಬಹುದು. ಲಾಕ್ ಡೌನ್ ಆರಂಭದ ಎರಡೇ ದಿನಗಳಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು.
ಸುಮಾರು 80 ಕೋಟಿ ಜನರಿಗೆ ಆಹಾರ ಸುರಕ್ಷೆ ವ್ಯಾಪ್ತಿಯನ್ನು ಖಾತ್ರಿಪಡಿಸಿ , 20 ಕೋಟಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆವರೆಗೆ , ಹಿರಿಯ ನಾಗರಿಕರ ಕೈಯಲ್ಲಿ ಹಣ ನೀಡುವುದರಿಂದ ಹಿಡಿದು, ಬಡ ವಿಧವೆಯರು ಮತ್ತು ಬಡ ದಿವ್ಯಾಂಗರಿಗೆ ನೆರವು , ಪಿ.ಎಂ.-ಕಿಸಾನ್ ಕಂತುಗಳ ಹಣವನ್ನು ಕೋಟ್ಯಾಂತರ ರೈತರ ಖಾತೆಗಳಿಗೆ ಅವಧಿಗೆ ಮುಂಚಿತವಾಗಿಯೇ ಜಮಾ ಮಾಡುವ ಕ್ರಮಗಳನ್ನು ಘೋಷಿಸಲಾಯಿತು. ಸರಕಾರ ತಕ್ಷಣವೇ ಮಧ್ಯಪ್ರವೇಶ ಮಾಡದಿದ್ದರೆ ಈ ಅಪಾಯಕ್ಕೀಡಾಗುವ ಸಂಭಾವ್ಯತೆ ಇರುವ ವರ್ಗದ ಜನರು ಲಾಕ್ ಡೌನ್ ನಲ್ಲಿ ತೀವ್ರವಾಗಿ ಬಾಧಿತರಾಗುತ್ತಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಇವು ಬರೇ ಘೋಷಣೆಗಳಾಗಿರಲಿಲ್ಲ. ಕೆಲವೇ ದಿನಗಳಲ್ಲಿ ಕೋಟ್ಯಾಂತರ ಜನರ ಖಾತೆಗಳಿಗೆ ನಗದಾಗಿ ಅಥವಾ ಜನತೆಗೆ ನೇರವಾಗಿ ವಸ್ತುಗಳ ರೂಪದಲ್ಲಿ ನೆರವು ತಲುಪಿದೆ.
ಆತ್ಮನಿರ್ಭರ ಭಾರತ್ ಉಪಕ್ರಮದ ಅಂಗವಾಗಿ ಒಂದು ರಾಷ್ಟ್ರ ಒಂದು ರೇಶನ್ ಕಾರ್ಡ್ , ರೇಶನ್ ಕಾರ್ಡ್ ಇಲ್ಲದವರಿಗೂ ಉಚಿತ ಆಹಾರ ಧಾನ್ಯಗಳು, ಹೊಸ ಕೈಗೆಟಕುವ ದರದಲ್ಲಿ ಮನೆ ಬಾಡಿಗೆ ಯೋಜನೆ ಮತ್ತು ಇತರ ಹಲವು ಯೋಜನೆಗಳನ್ನು ವಲಸೆ ಕಾರ್ಮಿಕರ ಕಲ್ಯಾಣಕ್ಕಾಗಿ ಘೋಷಿಸಲಾಗಿದೆ.
ರೈತರ ಕಲ್ಯಾಣ, ರೈತರನ್ನು ಕಟ್ಟಿ ಹಾಕಿದ ಸರಪಳಿಗಳಿಂದ ಅವರನ್ನು ಮುಕ್ತ ಮಾಡುವ ಕ್ರಮ ಮತ್ತು ಅವರ ಆದಾಯ ಸಾಧ್ಯತೆಗಳಿಗೆ ಉತ್ತೇಜನ ನೀಡುವಂತಹ ಸುಧಾರಣೆಗಳನ್ನು ಘೋಷಿಸಲಾಗಿದೆ. ಇದರ ಜೊತೆ ಕೃಷಿ ಮೂಲಸೌಕರ್ಯದಲ್ಲಿ ಹೆಚ್ಚಿನ ಹೂಡಿಕೆಯನ್ನು ಪ್ರಸ್ತಾಪಿಸಲಾಗಿದೆ. ಇದರ ಜೊತೆಗೆ ಕೈಗೊಳ್ಳಬಹುದಾದ ಪೂರಕ ಚಟುವಟಿಕೆಯಾದ ಮೀನುಗಾರಿಕೆಗೂ ಹಣಕಾಸು ಪ್ಯಾಕೇಜ್ ದೊರೆತಿದೆ.
ಪ್ರತಿ ಹಂತದಲ್ಲೂ, ಅತ್ಯಂತ ದುರ್ಬಲರ ಅಗತ್ಯತೆಗಳನ್ನು ಪೂರೈಸುವಲ್ಲಿ ಭಾರತ ಸರ್ಕಾರ ಸಹಾನುಭೂತಿ ಮತ್ತು ಉತ್ಸಾಹ ತೋರಿಸಿದೆ.
(Release ID: 1628890)
Visitor Counter : 364
Read this release in:
English
,
Urdu
,
Marathi
,
Hindi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam