ಪ್ರಧಾನ ಮಂತ್ರಿಯವರ ಕಛೇರಿ
‘ಮನ್ ಕಿ ಬಾತ್ 2.0’ ನ 12 ನೇ ಸಂಚಿಕೆಯಲ್ಲಿ ಪ್ರಧಾನಿಯವರ ಮಾತು
Posted On:
31 MAY 2020 4:04PM by PIB Bengaluru
‘ಮನ್ ಕಿ ಬಾತ್ 2.0’ ನ 12 ನೇ ಸಂಚಿಕೆಯಲ್ಲಿ ಪ್ರಧಾನಿಯವರ ಮಾತು
ನಮ್ಮ ದೇಶದಲ್ಲಿ ಸಾಮೂಹಿಕ ಪ್ರಯತ್ನಗಳ ಮೂಲಕ ಕೊರೊನಾ ವಿರುದ್ಧ ಸಮರ ನಡೆಯುತ್ತಿದೆ: ಪ್ರಧಾನಿ
ಸೇವೆ ಮತ್ತು ತ್ಯಾಗದ ಕಲ್ಪನೆಯು ನಮಗೆ ಕೇವಲ ಆದರ್ಶವಲ್ಲ, ಅದೊಂದು ಜೀವನ ವಿಧಾನ ಎಂದು ಜನರು ಸಾಬೀತುಪಡಿಸಿದ್ದಾರೆ: ಪ್ರಧಾನಿ
ಸಮುದಾಯಕ್ಕೆ, ನಿರೋಧಕ ಶಕ್ತಿಗೆ ಮತ್ತು ಐಕ್ಯತೆಗೆ ಯೋಗ ಒಳ್ಳೆಯದು: ಪ್ರಧಾನಿ
ದೇಶವನ್ನು ಇನ್ನಷ್ಟು ಎತ್ತರಕ್ಕೆ ಒಯ್ಯುವ ಆತ್ಮ ನಿರ್ಭರ ಭಾರತ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಜನತೆಗೆ ಪ್ರಧಾನಿ ಕರೆ
‘ಮನ್ ಕಿ ಬಾತ್ 2.0’ ನ 12 ನೇ ಸಂಚಿಕೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು, ಸಾಮೂಹಿಕ ಪ್ರಯತ್ನಗಳ ಮೂಲಕ ದೇಶದಲ್ಲಿ ಕೊರೊನಾ ವಿರುದ್ಧದ ಯುದ್ಧವನ್ನು ತೀವ್ರವಾಗಿ ನಡೆಸಲಾಗುತ್ತಿದೆ ಎಂದು ಹೇಳಿದರು. ಆರ್ಥಿಕತೆಯ ಪ್ರಮುಖ ವಿಭಾಗವನ್ನು ತೆರೆಯಲಾಗಿದ್ದರೂ ಸಹ ಜನರು ಕೋವಿಡ್ ಸಾಂಕ್ರಾಮಿಕದ ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ಹೆಚ್ಚು ಮತ್ತು ಜಾಗರೂಕಕತೆಯಿಂದ ಇರಬೇಕು ಎಂದು ಅವರು ಹೇಳಿದರು.
ಶ್ರಮಿಕ್ ವಿಶೇಷ ರೈಲುಗಳು ಮತ್ತು ವಿಶೇಷ ರೈಲುಗಳು ಸೇರಿದಂತೆ ರೈಲು ಸೇವೆಗಳು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಪುನರಾರಂಭಗೊಂಡಿವೆ ಎಂದು ಪ್ರಧಾನಿ ಹೇಳಿದರು. ವಿಮಾನ ಸೇವೆಗಳು ಪುನರಾರಂಭಗೊಂಡಿವೆ ಮತ್ತು ಉದ್ಯಮವೂ ಸಹಜ ಸ್ಥಿತಿಗೆ ಮರಳುತ್ತಿದೆ ಎಂದು ಅವರು ಹೇಳಿದರು. ಆದರೂ ಯಾವುದೇ ಅಲಕ್ಷ್ಯ ತೋರಿಸಬಾರದು ಎಂದು ಅವರು ಎಚ್ಚರಿಸಿದರು ಮತ್ತು ಜನರು 'ದೋ ಗಜ್ ಕಿ ದೂರಿ' (ಎರಡು ಗಜಗಳಷ್ಟು ದೂರ) ಪಾಲಿಸಲು, ಮುಖಗವಸುಗಳನ್ನು ಧರಿಸಲು ಮತ್ತು ಸಾಧ್ಯವಾದಷ್ಟು ಮಟ್ಟಿಗೆ ಮನೆಯಲ್ಲಿಯೇ ಇರಲು ಜನರಿಗೆ ಸೂಚಿಸಿದರು. ಅನೇಕ ಸಂಕಷ್ಟಗಳ ನಡುವೆ ದೇಶದ ಪರಿಸ್ಥಿತಿಯನ್ನು ನಿಭಾಯಿಸಿರುವುದು ಈಗ ವ್ಯರ್ಥವಾಗಬಾರದು ಎಂದು ಅವರು ಒತ್ತಿ ಹೇಳಿದರು.
ಜನತೆಯು ತೋರಿಸಿದ ಸೇವಾ ಮನೋಭಾವವನ್ನು ಶ್ಲಾಘಿಸಿದ ಪ್ರಧಾನಿಯವರು, ಇದೊಂದು ದೊಡ್ಡ ಶಕ್ತಿ ಎಂದು ಕರೆದರು. ನಾವು ಸೇವೆಯೇ ಪರಮ ಧರ್ಮ ಎಂದು ನಂಬಿದ್ದೇವೆ; ಸೇವೆಯು ಸ್ವತಃ ಒಂದು ಸಂತೋಷವಾಗಿದೆ. ಸೇವೆ ಸ್ವತಃ ತೃಪ್ತಿದಾಯಕವಾದದ್ದು ಎಂದರು. ದೇಶಾದ್ಯಂತದ ವೈದ್ಯಕೀಯ ಸೇವೆಗಳ ಸಿಬ್ಬಂದಿಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ ಪ್ರಧಾನಿ, ವೈದ್ಯರು, ಶುಶ್ರೂಷಾ ಸಿಬ್ಬಂದಿ, ನೈರ್ಮಲ್ಯ ಕಾರ್ಮಿಕರು, ಪೊಲೀಸ್ ಸಿಬ್ಬಂದಿ ಮತ್ತು ದೇಶದ ಮಾಧ್ಯಮದವರ ಸೇವೆಯ ಉತ್ಸಾಹವನ್ನು ಶ್ಲಾಘಿಸಿದರು. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಮಹಿಳಾ ಸ್ವಸಹಾಯ ಗುಂಪುಗಳ ಗಮನಾರ್ಹ ಕಾರ್ಯವನ್ನು ಅವರು ಶ್ಲಾಘಿಸಿದರು.
ಈ ಬಿಕ್ಕಟ್ಟಿನ ಸಮಯದಲ್ಲಿ ಇತರರಿಗೆ ನೆರವಾಗಲು ಶ್ರಮಿಸಿದ ತಮಿಳುನಾಡಿನ ಕೆ.ಸಿ.ಮೋಹನ್, ಅಗರ್ತಲಾದ ಗೌತಮ್ ದಾಸ್, ಪಠಾಣ್ಕೋಟ್ನ ದಿವ್ಯಾಂಗ ರಾಜು ಅವರಂತಹ ಜನಸಾಮಾನ್ಯರ ಉದಾಹರಣೆಗಳನ್ನು ಅವರು ಉಲ್ಲೇಖಿಸಿದ್ದಾರೆ. ಮಹಿಳಾ ಸ್ವಸಹಾಯ ಗುಂಪುಗಳ ಪರಿಶ್ರಮದ ಹಲವಾರು ಕಥೆಗಳು ದೇಶದ ಮೂಲೆ ಮೂಲೆಗಳಿಂದ ಮುನ್ನೆಲೆಗೆ ಬರುತ್ತಿವೆ ಎಂದು ಅವರು ಹೇಳಿದರು.
ಈ ಸಾಂಕ್ರಾಮಿಕ ರೋಗವನ್ನು ಎದುರಿಸುವಲ್ಲಿ ವ್ಯಕ್ತಿಗತವಾಗಿ ಸಕ್ರಿಯ ಪಾತ್ರ ವಹಿಸಿದ್ದಕ್ಕಾಗಿ ಪ್ರಧಾನಿಯವರು ಅನೇಕರಿಗೆ ಪ್ರಶಂಸೆ ವ್ಯಕ್ತಪಡಿಸಿದರು. ಟ್ರ್ಯಾಕ್ಟರ್ಗೆ ಜೋಡಿಸಲಾಗುವ ನೈರ್ಮಲ್ಯ ಯಂತ್ರವನ್ನು ರೂಪಿಸಿದ ನಾಸಿಕ್ನ ರಾಜೇಂದ್ರ ಯಾದವ್ ಅವರ ಉದಾಹರಣೆಯನ್ನು ಅವರು ನೀಡಿದರು. 'ದೋ ಗಜ್ ಕಿ ದೂರಿ' ಯನ್ನು ಪಾಲಿಸಲು ಅನೇಕ ಅಂಗಡಿಯವರು ತಮ್ಮ ಅಂಗಡಿಗಳಲ್ಲಿ ದೊಡ್ಡ ಪೈಪ್ ಲೈನ್ಗಳನ್ನು ಸ್ಥಾಪಿಸಿದ್ದಾರೆ ಎಮದು ಅವರು ಹೇಳಿದರು.
ಸಾಂಕ್ರಾಮಿಕ ರೋಗದಿಂದಾಗಿ ಜನರಿಗಾಗಿರುವ ನೋವು ಮತ್ತು ಸಂಕಷ್ಟಗಳ ಬಗ್ಗೆ ತಮ್ಮ ದುಃಖವನ್ನು ಹಂಚಿಕೊಂಡ ಪ್ರಧಾನಿಯವರು, ಕೊರೊನಾ ವೈರಸ್ ಸಮಾಜದ ಎಲ್ಲಾ ವರ್ಗದವರನ್ನು ಬಾಧಿಸಿದೆ ಆದರೆ ಬಡಕಾರ್ಮಿಕರು ಮತ್ತು ಕೆಲಸಗಾರರ ಮೇಲೆ ಹೆಚ್ಚು ಪರಿಣಾಮ ಬೀರಿದೆ. ಕೇಂದ್ರ, ರಾಜ್ಯ ಸರ್ಕಾರಗಳು, ಪ್ರತಿಯೊಂದು ಇಲಾಖೆ ಮತ್ತು ಸಂಸ್ಥೆಗಳು ಪರಿಹಾರಕ್ಕಾಗಿ ಸಂಪೂರ್ಣವಾಗಿ ಕೈ ಜೋಡಿಸಿವೆ ಎಂದು ಪ್ರಧಾನಿ ಹೇಳಿದರು. ಅವರು ಎಂತಹ ಪರಿಸ್ಥಿಯಲ್ಲಿದ್ದಾರೆಂದು ಇಡೀ ದೇಶವು ಅರ್ಥಮಾಡಿಕೊಳ್ಳುತ್ತದೆ ಮತ್ತು ಅವರ ನೆರವಿಗೆ ಕೇಂದ್ರ, ರಾಜ್ಯಗಳು, ಸ್ಥಳೀಯ ಆಡಳಿತಗಳೆಲ್ಲವೂ ದಿನದ 24 ಗಂಟೆಯೂ ಶ್ರಮಿಸುತ್ತಿವೆ ಎಂದು ಅವರು ಹೇಳಿದರು. ರೈಲು ಮತ್ತು ಬಸ್ಗಳಲ್ಲಿ ಲಕ್ಷಾಂತರ ಕಾರ್ಮಿಕರನ್ನು ಸುರಕ್ಷಿತವಾಗಿ ಸಾಗಿಸುವುದು, ಅವರಿಗೆ ಆಹಾರವನ್ನು ಒದಗಿಸುವುದು ಮತ್ತು ಪ್ರತಿ ಜಿಲ್ಲೆಯಲ್ಲೂ ಅವರಿಗೆ ಕ್ವಾರಂಟೈನ್ ಕೇಂದ್ರಗಳನ್ನು ಏರ್ಪಡಿಸುವಲ್ಲಿ ಶ್ರಮಪಡುತ್ತಿರುವವರನ್ನು ಅವರು ಶ್ಲಾಘಿಸಿದರು.
ಸಮಯದ ಅಗತ್ಯವು ಹೊಸ ಪರಿಹಾರವನ್ನು ಹುಡುಕುತ್ತದೆ ಎಂದು ಪ್ರಧಾನಿ ಹೇಳಿದರು. ಈ ದಿಕ್ಕಿನಲ್ಲಿ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದರು. ಕೇಂದ್ರವು ಇತ್ತೀಚೆಗೆ ತೆಗೆದುಕೊಂಡ ನಿರ್ಧಾರಗಳು ಗ್ರಾಮೋದ್ಯೋಗ, ಸ್ವಯಂ ಉದ್ಯೋಗ ಮತ್ತು ಸಣ್ಣ ಪ್ರಮಾಣದ ಉದ್ಯಮದಲ್ಲಿ ವ್ಯಾಪಕ ಸಾಧ್ಯತೆಗಳನ್ನು ತೆರೆದಿವೆ ಎಂದು ಅವರು ಹೇಳಿದರು. ಆತ್ಮನಿರ್ಭರ ಭಾರತ್ ಅಭಿಯಾನವು ಈ ದಶಕದಲ್ಲಿ ದೇಶವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಸ್ತುತ ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ, ಎಲ್ಲೆಡೆ ಜನರು 'ಯೋಗ' ಮತ್ತು 'ಆಯುರ್ವೇದ'ದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮತ್ತು ಅದನ್ನು ಜೀವನ ವಿಧಾನವಾಗಿ ಅಳವಡಿಸಿಕೊಳ್ಳಲು ಬಯಸಿದ್ದಾರೆ ಎಂದರು. ಅವರು "ಸಮುದಾಯಕ್ಕೆ, ನಿರೋಧಕ ಶಕ್ತಿಗೆ ಮತ್ತು ಏಕತೆ" ಗಾಗಿ ಯೋಗವನ್ನು ಪ್ರತಿಪಾದಿಸಿದರು. ಪ್ರಸ್ತುತ ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ, ಯೋಗವು ಹೆಚ್ಚು ಮಹತ್ವದ್ದಾಗಿದೆ, ಏಕೆಂದರೆ ಈ ವೈರಸ್ ಉಸಿರಾಟದ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಯೋಗದಲ್ಲಿ, ಉಸಿರಾಟದ ವ್ಯವಸ್ಥೆಯನ್ನು ಬಲಪಡಿಸುವ ಅನೇಕ ರೀತಿಯ ಪ್ರಾಣಾಯಾಮಗಳಿವೆ ಮತ್ತು ಪ್ರಯೋಜನಕಾರಿ ಪರಿಣಾಮಗಳು ದೀರ್ಘಕಾಲದವರೆಗೆ ಇರುತ್ತವೆ ಎಂದರು.
ಇದಲ್ಲದೆ, ಆಯುಷ್ ಸಚಿವಾಲಯ ಆಯೋಜಿಸಿರುವ ಇಂಟರ್ನ್ಯಾಷನಲ್ ವಿಡಿಯೋ ಬ್ಲಾಗ್ ಸ್ಪರ್ಧೆ 'ಮೈ ಲೈಫ್, ಮೈ ಯೋಗ' ಗಾಗಿ ತಮ್ಮ ವೀಡಿಯೊಗಳನ್ನು ಹಂಚಿಕೊಳ್ಳಬೇಕೆಂದು ಪ್ರಧಾನಿಯವರು ಜನರಿಗೆ ಕೋರಿದರು. ಈ ಸ್ಪರ್ಧೆಯಲ್ಲಿ ಎಲ್ಲರೂ ಭಾಗವಹಿಸಿ, ಮುಂಬರುವ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಭಾಗವಾಗಬೇಕೆಂದು ಪ್ರಧಾನಿ ಮೋದಿ ವಿನಂತಿಸಿದರು.
ಸಾಂಕ್ರಾಮಿಕ ರೋಗವನ್ನು ಎದುರಿಸುವಲ್ಲಿ ಸರ್ಕಾರದ ಪ್ರಯತ್ನವನ್ನು ಪ್ರಧಾನಿಯವರು ಶ್ಲಾಘಿಸಿದರು ಮತ್ತು ‘ಆಯುಷ್ಮಾನ್ ಭಾರತ್’ ಯೋಜನೆಯ ಫಲಾನುಭವಿಗಳು ಒಂದು ಕೋಟಿಯನ್ನು ದಾಟಿರುವುದನ್ನು ಹೆಮ್ಮೆಯಿಂದ ಹಂಚಿಕೊಂಡರು. 'ಆಯುಷ್ಮಾನ್ ಭಾರತ್' ನ ಫಲಾನುಭವಿಗಳ ಜೊತೆಗೆ ಸಾಂಕ್ರಾಮಿಕ ಸಮಯದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಿದ ವೈದ್ಯರು, ದಾದಿಯರು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಅವರು ಅಭಿನಂದಿಸಿದರು.
ನಾವು ಕೊರೊನಾವೈರಸ್ ವಿರುದ್ಧ ಹೋರಾಡುತ್ತಿದ್ದೇವೆ ಮತ್ತು ಆಂಫಾನ್ ಚಂಡಮಾರುತದಂತಹ ಅನಾಹುತಗಳನ್ನೂ ಎದುರಿಸುತ್ತಿದ್ದೇವೆ ಎಂದು ಪ್ರಧಾನಿ ಹೇಳಿದರು. ಆಂಫಾನ್ ಎಂಬ ಸೂಪರ್ ಚಂಡಮಾರುತದ ಸಮಯದಲ್ಲಿ ಪಶ್ಚಿಮ ಬಂಗಾಳ ಮತ್ತು ಒಡಿಶಾ ಜನರು ತೋರಿದ ಧೈರ್ಯ ಮತ್ತು ಶೌರ್ಯವನ್ನು ಅವರು ಶ್ಲಾಘಿಸಿದರು. ಈ ರಾಜ್ಯಗಳಲ್ಲಿನ ರೈತರು ಅನುಭವಿಸಿದ ನಷ್ಟದ ಬಗ್ಗೆ ಅವರು ಸಹಾನುಭೂತಿ ವ್ಯಕ್ತಪಡಿಸಿದ ಪ್ರಧಾನಿವರು, ಆದರೆ ಅವರು ಎದುರಿಸಿದ ಅಗ್ನಿಪರೀಕ್ಷೆ ಮತ್ತು ತೋರಿಸಿದ ದಿಟ್ಟತನ ಶ್ಲಾಘನೀಯವಾದುದು ಎಂದರು.
ಚಂಡಮಾರುತದ ದುರಂತವಲ್ಲದೇ, ಮಿಡತೆ ದಾಳಿಯಿಂದ ದೇಶದ ಅನೇಕ ಭಾಗಗಳು ಸಮಸ್ಯೆ ಎದುರಿಸುತ್ತಿವೆ ಎಂದು ಶ್ರೀ ಮೋದಿ ಹೇಳಿದರು. ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರ ಹೇಗೆ ಪಟ್ಟುಬಿಡದೆ ಕೆಲಸ ಮಾಡುತ್ತಿದೆ ಎಂಬುದನ್ನು ಅವರು ಎತ್ತಿ ತೋರಿಸಿದರು, ಇದರಿಂದಾಗಿ ದೇಶದಾದ್ಯಂತದ ಜನಸಾಮಾನ್ಯರು ಅಗತ್ಯ ವಸ್ತುಗಳ ಕೊರತೆಯನ್ನು ಎದುರಿಸುತ್ತಿಲ್ಲ ಎಂದರು. ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಗಳವರೆಗೆ, ಕೃಷಿ ಇಲಾಖೆಯಿಂದ ಆಡಳಿತದವರೆಗೆ ಎಲ್ಲ ಪ್ರಯತ್ನಗಳು ನಡೆಯುತ್ತಿವೆ, ಪ್ರತಿಯೊಬ್ಬರೂ ಆಧುನಿಕ ತಂತ್ರಗಳನ್ನು ಬಳಸಿ ರೈತರಿಗೆ ಸಹಾಯ ಮಾಡಲು ಮತ್ತು ಈ ಬಿಕ್ಕಟ್ಟಿನಿಂದ ಬೆಳೆ ನಷ್ಟವನ್ನು ಕಡಿಮೆ ಮಾಡಲು ತೊಡಗಿಸಿಕೊಂಡಿದ್ದಾರೆ ಎಂದರು.
ನೀರನ್ನು ಉಳಿಸುವ ಜವಾಬ್ದಾರಿಯ ಬಗ್ಗೆ ಇಂದಿನ ಪೀಳಿಗೆ ಅರಿತುಕೊಳ್ಳಬೇಕಾದ ಅಗತ್ಯವನ್ನು ಪ್ರಧಾನಿ ಒತ್ತಿಹೇಳಿದ್ದಾರೆ. ಮಳೆ ನೀರನ್ನು ಉಳಿಸುವ ಅಗತ್ಯದ ಬಗ್ಗೆ ಹೇಳಿದ ಅವರು, ಎಲ್ಲರೂ ನೀರಿನ ಸಂರಕ್ಷಣೆಗಾಗಿ ಶ್ರಮಿಸಬೇಕು ಎಂದರು. ಪ್ರಕೃತಿಯೊಂದಿಗೆ ದೈನಂದಿನ ಸಂಬಂಧವನ್ನು ರೂಪಿಸುವ ಸಲುವಾಗಿ ಕೆಲವು ಸಸಿಗಳನ್ನು ನೆಟ್ಟು ನಿರ್ಣಯಗಳನ್ನು ಮಾಡುವ ಮೂಲಕ ಈ 'ಪರಿಸರ ದಿನ'ದಂದು ನಿಸರ್ಗದ ಸೇವೆ ಮಾಡುವಂತೆ ಅವರು ದೇಶವಾಸಿಗಳನ್ನು ವಿನಂತಿಸಿದರು. ಲಾಕ್ಡೌನ್ ಜೀವನವನ್ನು ನಿಧಾನಗೊಳಿಸಿದೆ ಆದರೆ ಪ್ರಕೃತಿಯನ್ನು ಸರಿಯಾಗಿ ನೋಡುವ ಅವಕಾಶವನ್ನು ಇದು ಕಲ್ಪಿಸಿದೆ ಮತ್ತು ಕಾಡು ಪ್ರಾಣಿಗಳು ಹೆಚ್ಚು ಹೊರಬರಲು ಪ್ರಾರಂಭಿಸಿವೆ ಎಂದು ಅವರು ಹೇಳಿದರು.
ಅಜಾಗರೂಕತೆ ಅಥವಾ ಜಡತೆ ಒಂದು ಆಯ್ಕೆಯಾಗಿರಬಾರದು ಎಂದ ಪ್ರಧಾನಿಯವರು ಕೊರೊನಾ ವಿರುದ್ಧದ ಹೋರಾಟ ಈಗಲೂ ಮೊದಲಿನಷ್ಟೇ ಗಂಭೀರವಾಗಿದೆ ಎಂದು ತಿಳಿಸಿದರು.
***
(Release ID: 1628271)
Visitor Counter : 268
Read this release in:
Telugu
,
Marathi
,
Bengali
,
Manipuri
,
English
,
Urdu
,
Hindi
,
Assamese
,
Punjabi
,
Gujarati
,
Odia
,
Tamil
,
Malayalam