PIB Headquarters
ಕೋವಿಡ್-19: ಪಿ ಐ ಬಿ ದೈನಿಕ ವರದಿ
Posted On:
28 MAY 2020 6:39PM by PIB Bengaluru
ಕೋವಿಡ್-19: ಪಿ ಐ ಬಿ ದೈನಿಕ ವರದಿ


(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)


ಕೋವಿಡ್-19 ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಪ್ ಡೇಟ್
ಸಕ್ರಿಯ ವೈದ್ಯಕೀಯ ಮೇಲುಸ್ತುವಾರಿಯಲ್ಲಿರುವ ಪ್ರಕರಣಗಳ ಸಂಖ್ಯೆ 86,110. ಇದುವರೆಗೆ ಒಟ್ಟು 67,691 ಜನರು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 3,266 ರೋಗಿಗಳು ಗುಣಮುಖರಾಗಿದ್ದಾರೆ. ಇದರಿಂದ ನಮ್ಮ ಒಟ್ಟು ಗುಣಮುಖ ದರ 42.75 % ಗೇರಿದೆ.
ವಿವರಗಳಿಗೆ : https://pib.gov.in/PressReleseDetail.aspx?PRID=1627188
ಕೋವಿಡ್ ನಿಂದ ಅತ್ಯಂತ ಹೆಚ್ಚು ಬಾಧಿತವಾಗಿರುವ 13 ನಗರಗಳ ಕೋವಿಡ್ -19 ಪರಿಸ್ಥಿತಿಯ ಬಗ್ಗೆ ಸಂಪುಟ ಕಾರ್ಯದರ್ಶಿ ಪರಾಮರ್ಶೆ
ಕೋವಿಡ್ -19 ಭಾಧಿತ 13 ನಗರಗಳ ಪರಿಸ್ಥಿತಿಯ ಪರಾಮರ್ಶೆಗಾಗಿ ಸಂಪುಟ ಕಾರ್ಯದರ್ಶಿ ಅವರು ಮುನ್ಸಿಪಲ್ ಆಯುಕ್ತರು, ಜಿಲ್ಲಾ ಮ್ಯಾಜಿಸ್ಟ್ರೇಟರು ಗಳ ಸಭೆ ನಡೆಸಿದರು. ಸಂಬಂಧಿತ ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಈ 13 ನಗರಗಳು ಕೊರೊನಾವೈರಸ್ ನಿಂದ ತೀವ್ರವಾಗಿ ಬಾಧಿಸಲ್ಪಟ್ಟ ನಗರಗಳೆಂದು ಪರಿಗಣಿತವಾಗಿರುವುದರಿಂದ ಮತ್ತು ದೇಶದ ಒಟ್ಟು ಪಾಸಿಟಿವ್ ಪ್ರಕರಣಗಳ ಪೈಕಿ 70 % ನಷ್ಟು ಪ್ರಕರಣಗಳು ಈ ಪ್ರದೇಶಗಳಿಂದ ವರದಿಯಾದವುಗಳಾಗಿವೆಯಾದುದರಿಂದ ಈ ಸಭೆ ಬಹಳ ಮಹತ್ವ ಪಡೆದುಕೊಂಡಿದೆ. ಆ ನಗರಗಳೆಂದರೆ ಮುಂಬಯಿ, ಚೆನ್ನೈ, ದಿಲ್ಲಿ/ ಹೊಸ ದಿಲ್ಲಿ, ಅಹ್ಮದಾಬಾದ್, ಥಾಣೆ, ಪುಣೆ, ಹೈದರಾಬಾದ್, ಕೋಲ್ಕೊತ್ತಾ/ ಹೌರಾ, ಇಂದೋರ್ (ಮಧ್ಯಪ್ರದೇಶ) , ಜೈಪುರ, ಜೋಧಪುರ, ಚೆಂಗಲ್ಪಟ್ಟು, ಮತ್ತು ತಿರುವಲ್ಲೂರು (ತಮಿಳುನಾಡು). ಸಭೆಯಲ್ಲಿ ಮುನ್ಸಿಪಲ್ ಕಾರ್ಪೊರೇಶನ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕೋವಿಡ್ -19 ನಿಭಾವಣೆಗಾಗಿ ಕೈಗೊಂಡ ಕ್ರಮಗಳ ಬಗ್ಗೆ ಪರಾಮರ್ಶಿಸಲಾಯಿತು.
ವಿವರಗಳಿಗೆ: https://pib.gov.in/PressReleseDetail.aspx?PRID=1627421
ಹಣಕಾಸು ಸ್ಥಿರತೆ ಮತ್ತು ಅಭಿವೃದ್ದಿ ಮಂಡಳಿಯ 22 ನೇ ಸಭೆಯ ಅಧ್ಯಕ್ಷತೆ ವಹಿಸಿದ ಶ್ರೀಮತಿ ನಿರ್ಮಲಾ ಸೀತಾರಾಮನ್
ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದಿಲ್ಲಿ ನಡೆದ ಹಣಕಾಸು ಸ್ಥಿರತೆ ಮತ್ತು ಅಭಿವೃದ್ದಿ ಮಂಡಳಿಯ 22 ನೇ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಹಾಲಿ ಜಾಗತಿಕ ಮತ್ತು ದೇಶೀಯ ಬೃಹತ್ ಆರ್ಥಿಕ ಪರಿಸ್ಥಿತಿ , ಹಣಕಾಸು ಸ್ಥಿರತೆ ಮತ್ತು ಅಪಾಯಕ್ಕೀಡು ಮಾಡುವ ವಿಷಯಗಳನ್ನು, ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳು ಎದುರಿಸಬಹುದಾದ ಪ್ರಮುಖ ವಿಷಯಗಳನ್ನು ಪರಾಮರ್ಶಿಸಲಾಯಿತು. ಜೊತೆಗೆ ನಿಯಂತ್ರಣ ಮತ್ತು ನೀತಿ ಪ್ರತಿಕ್ರಿಯೆಗಳು, ಎನ್.ಬಿ.ಎಫ್.ಸಿ.ಗಳು/ ಎಚ್.ಎಫ್.ಸಿ.ಗಳು/ ಎಂ.ಎಫ್.ಐ.ಗಳ ನಗದು/ ಸಾಲ ತೀರಿಸುವ ಶಕ್ತಿ ಮತ್ತು ಆ ಸಂಬಂಧಿತ ವಿಷಯಗಳು ಸಭೆಯಲ್ಲಿ ಚರ್ಚಿತವಾದವು. ಇದಲ್ಲದೆ ಮಾರುಕಟ್ತೆ ಅಸ್ಥಿರತೆ, ದೇಶೀಯ ಸಂಪನ್ಮೂಲ ಕ್ರೋಢೀಕರಣ, ಮತ್ತು ಬಂಡವಾಳ ಹರಿವಿನ ವಿಷಯಗಳೂ ಮಂಡಳಿಯಲ್ಲಿ ಚರ್ಚಿಸಲ್ಪಟ್ತವು. ಕೋವಿಡ್ ಜಾಗತಿಕ ಸಾಂಕ್ರಾಮಿಕ ಬಿಕ್ಕಟ್ಟು ಜಾಗತಿಕ ಹಣಕಾಸು ವ್ಯವಸ್ಥೆಗೆ ಗಂಭೀರ ಅಪಾಯ ತಂದಿಟ್ಟಿರುವುದನ್ನು ಮಂಡಳಿ ಗಮನಕ್ಕೆ ತೆಗೆದುಕೊಂಡಿತಲ್ಲದೆ ಅಂತಿಮ ಪರಿಣಾಮ ಏನು ಮತ್ತು ಅದರ ಮರು ಚೇತರಿಕೆ ಯಾವಾಗ ಎಂಬುದೂ ಈ ಹಂತದಲ್ಲಿ ಖಚಿತವಾಗಿ ಹೇಳಲಾಗದು ಮತ್ತು ಅದು ಅನಿರ್ದಿಷ್ಟತೆಯಿಂದ ಕೂಡಿದೆ ಎಂಬ ಅಂಶಗಳನ್ನೂ ಅದು ಪರಿಗಣಿಸಿತು.
ವಿವರಗಳಿಗೆ: https://pib.gov.in/PressReleseDetail.aspx?PRID=1627456
ವೀಡಿಯೋ ಕಾನ್ಫರೆನ್ಸ್ ಮೂಲಕ ನ್ಯೂ ಡೆವಲಪ್ಮೆಂಟ್ ಬ್ಯಾಂಕ್ ಗವರ್ನರುಗಳ ವಿಶೇಷ ಮಂಡಳಿಯ ಸಭೆಯಲ್ಲಿ ಭಾಗವಹಿಸಿದ ಶ್ರೀಮತಿ ನಿರ್ಮಲಾ ಸೀತಾರಾಮನ್
ತಮ್ಮ ಪ್ರಾರಂಭಿಕ ಮಾತುಗಳಲ್ಲಿ ಹಣಕಾಸು ಸಚಿವರು ಮೂಲಸೌಕರ್ಯ ಅಭಿವೃದ್ದಿಯಲ್ಲಿ ಹೂಡಿಕೆ ಮಾಡುವ ನಿಟ್ಟಿನಲ್ಲಿ ಎನ್.ಡಿ.ಬಿ. ಯ ಕೊಡುಗೆಯನ್ನು ಶ್ಲಾಘಿಸಿದರಲ್ಲದೆ ಇದರಿಂದ ಭಾರತವೂ ಸೇರಿದಂತೆ ಸದಸ್ಯ ರಾಷ್ಟ್ರಗಳಲ್ಲಿ ಅಭಿವೃದ್ಧಿ ಕಾರ್ಯಪಟ್ಟಿಯಲ್ಲಿ ಧನಾತ್ಮಕ ಪರಿಣಾಮಗಳಾಗಿವೆ ಎಂದರು. ಅತ್ಯಂತ ಕಡಿಮೆ ಅವಧಿಯಲ್ಲಿ , ಎನ್.ಡಿ.ಬಿ.ಯು ಸದಸ್ಯ ರಾಷ್ಟ್ರಗಳ 16.6 ಬಿಲಿಯನ್ ಡಾಲರ್ ಮೊತ್ತದ 55 ಯೋಜನೆಗಳಿಗೆ ಅನುಮೋದನೆ ನೀಡಿದೆ, ಇದು ಗಮನಾರ್ಹವಾದ ಸಾಧನೆ ಎಂದು ಬಣ್ಣಿಸಿದ ಶ್ರೀಮತಿ ನಿರ್ಮಲಾ ಸೀತಾರಾಮನ್, ಬ್ಯಾಂಕು ತನಗಾಗಿ ಗಣ್ಯ ಸ್ಥಾನವನ್ನು ಯಶಸ್ವಿಯಾಗಿ ರೂಪಿಸಿಕೊಂಡಿರುವುದಲ್ಲದೆ ಎಂ.ಡಿ.ಬಿ.ಗಳ ಜೊತೆ ಹೆಮ್ಮೆಯಿಂದ ಹೆಗಲಿಗೆ ಹೆಗಲು ಕೊಟ್ಟು ನಿಂತಿದೆ ಎಂದರು. 2014 ರಲ್ಲಿ ಬ್ರಿಕ್ಸ್ ನಾಯಕರು ಕಂಡಂತಹ ಮುಂಗಾಣ್ಕೆಯನ್ನು ಬಹಳ ತ್ವರಿತವಾಗಿ ಕಾರ್ಯರೂಪಕ್ಕೆ ತಂದಿರುವುದಕ್ಕೆ ಎನ್.ಡಿ.ಬಿ.ಯ ನಿರ್ಗಮನ ಅಧ್ಯಕ್ಷ ಶ್ರೀ ಕೆ.ವಿ. ಕಾಮತ್ ಅವರ ದೃಢ ನಾಯಕತ್ವವನ್ನು ಹಣಕಾಸು ಸಚಿವರು ಶ್ಲಾಘಿಸಿದರು. ಕೋವಿಡ್ -19 ಕ್ಕೆ ತ್ವರಿತ ಪ್ರತಿಕ್ರಿಯೆಯಾಗಿ ಕೋವಿಡ್ -19 ತುರ್ತು ಕಾರ್ಯಕ್ರಮ ಮುಂಗಡ ಉತ್ಪನ್ನವನ್ನು ರೂಪಿಸಿದ್ದು, ಅವರ ಪ್ರಮುಖ ಕೊಡುಗೆಗಳಲ್ಲೊಂದು, ಮತ್ತು ಇದಕ್ಕಾಗಿ ಅವರು ನೆನಪಿನಲ್ಲುಳಿಯುತ್ತಾರೆ ಎಂದೂ ಅವರು ಹೇಳಿದರು.
ಭಾರತೀಯ ರೈಲ್ವೇಯು 2020 ರ ಮೇ 27 ರವರೆಗೆ ದೇಶಾದ್ಯಂತ 3543 “ ಶ್ರಮಿಕ ವಿಶೇಷ “ ರೈಲುಗಳ (1000 ಗಂಟೆಗಳು) ಕಾರ್ಯಾಚರಣೆಯನ್ನು ನಡೆಸಿದೆ ಮತ್ತು 26 ದಿನಗಳಲ್ಲಿ “ಶ್ರಮಿಕ ವಿಶೇಷ” ರೈಲುಗಳ ಮೂಲಕ 48 ಲಕ್ಷ ಪ್ರಯಾಣಿಕರನ್ನು ಅವರ ತವರು ರಾಜ್ಯಗಳಿಗೆ ಕರೆದೊಯ್ದಿದೆ
ದೇಶಾದ್ಯಂತ ವಿವಿಧ ರಾಜ್ಯಗಳಿಂದ 2020 ರ ಮೇ 27 ರವರೆಗೆ ಒಟ್ಟು 3543 “ಶ್ರಮಿಕ ವಿಶೇಷ” ರೈಲುಗಳನ್ನು ಕಾರ್ಯಾಚರಣೆಗೆ ಇಳಿಸಲಾಗಿದೆ. 26-05-2020 ರಂದು 255 ಶ್ರಮಿಕ ವಿಶೇಷಗಳನ್ನು ಆರಂಭಿಸಲಾಯಿತು. ಇದುವರೆಗೆ 26 ದಿನಗಳಲ್ಲಿ ಶ್ರಮಿಕ ವಿಶೇಷ ರೈಲುಗಳ ಮೂಲಕ 48 ಲಕ್ಷ ವಲಸೆ ಕಾರ್ಮಿಕರನ್ನು ಕರೆದೊಯ್ಯಲಾಗಿದೆ. ಈ 3543 ರೈಲುಗಳು ವಿವಿಧ ರಾಜ್ಯಗಳಿಂದ ಪ್ರಯಾಣ ಆರಂಭಿಸಿವೆ. ಗರಿಷ್ಟ ಸಂಖ್ಯೆಯಲ್ಲಿ ರೈಲುಗಳು ಪ್ರಯಾಣ ಆರಂಭಿಸಿದ ಐದು ರಾಜ್ಯಗಳು/ ಕೇಂದ್ರಾಡಳಿತಪ್ರದೇಶಗಳೆಂದರೆ ಗುಜರಾತ್ ( 946), ಮಹಾರಾಷ್ಟ್ರ (677 ) ಪಂಜಾಬ್ (377 ) ಉತ್ತರಪ್ರದೇಶ (243 ) ಮತ್ತು ಬಿಹಾರ (215 ) . ಈ “ಶ್ರಮಿಕ ವಿಶೇಷ” ರೈಲುಗಳು ದೇಶದ ವಿವಿಧ ರಾಜ್ಯಗಳಲ್ಲಿ ತಮ್ಮ ಪ್ರಯಾಣವನ್ನು ಕೊನೆಗೊಳಿಸಿವೆ. ಹೀಗೆ ಗರಿಷ್ಟ ಸಂಖ್ಯೆಯಲ್ಲಿ ರೈಲುಗಳು ತಮ್ಮ ಪ್ರಯಾಣವನ್ನು ಕೊನೆಗೊಳಿಸಿದ 5 ರಾಜ್ಯಗಳೆಂದರೆ ಉತ್ತರಪ್ರದೇಶ (1392 ), ಬಿಹಾರ (1123 ), ಜಾರ್ಖಂಡ ( 156 ) , ಮಧ್ಯಪ್ರದೇಶ ( 119) , ಒಡಿಶಾ (123 )
ವಿವರಗಳಿಗೆ : https://pib.gov.in/PressReleseDetail.aspx?PRID=1627231
ಪ್ರಧಾನ ಮಂತ್ರಿ ಮತ್ತು ಶ್ರೀಲಂಕಾ ಪ್ರಧಾನ ಮಂತ್ರಿ ಗೌರವಾನ್ವಿತ ಮಹೀಂದ್ರ ರಾಜಪಕ್ಷ ನಡುವೆ ದೂರವಾಣಿ ಸಂಭಾಷಣೆ
ಪ್ರಧಾನ ಮಂತ್ರಿ ಅವರಿಂದು ಶ್ರೀ ಲಂಕಾದ ಪ್ರಧಾನ ಮಂತ್ರಿ ಗೌರವಾನ್ವಿತ ಮಹೀಂದ್ರ ರಾಜಪಕ್ಷ ಅವರ ಜೊತೆ ಮಾತನಾಡಿ ಅವರು ಶ್ರೀಲಂಕಾ ಸಂಸತ್ತು ಪ್ರವೇಶಿಸಿ 50 ವರ್ಷ ಪೂರ್ಣಗೊಳಿಸಿರುವುದಕ್ಕಾಗಿ ಅವರನ್ನು ಅಭಿನಂದಿಸಿದರು. ಇಬ್ಬರು ನಾಯಕರೂ ಚಾಲ್ತಿಯಲ್ಲಿರುವ ಕೋವಿಡ್ -19 ಜಾಗತಿಕ ಸಾಂಕ್ರಾಮಿಕದಿಂದ ಆರೋಗ್ಯ ಮತ್ತು ಆರ್ಥಿಕ ಕ್ಷೇತ್ರದ ಮೇಲಾಗಿರುವ ಪರಿಣಾಮದ ಬಗ್ಗೆ ಚರ್ಚಿಸಿದರು ಹಾಗು ಅವುಗಳ ನಿಯಂತ್ರಣಕ್ಕಾಗಿ ಎರಡೂ ದೇಶಗಳು ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಮಾತುಕತೆ ನಡೆಸಿದರು. ಪ್ರಧಾನ ಮಂತ್ರಿ ಅವರು ಗೌರವಾನ್ವಿತ ರಾಜಪಕ್ಷ ಅವರಿಗೆ ಈ ಸವಾಲಿನ ಸಂದರ್ಭದಲ್ಲಿ ಶ್ರೀಲಂಕಾಕ್ಕೆ ಸಾಧ್ಯ ಇರುವ ಎಲ್ಲಾ ಬೆಂಬಲವನ್ನು ಭಾರತ ನೀಡಲು ಸಿದ್ದವಿದೆ ಎಂದು ಭರವಸೆ ನೀಡಿದರು.
ವಿವರಗಳಿಗೆ: https://pib.gov.in/PressReleseDetail.aspx?PRID=1627262
ಪಿ.ಎಂ.-ಜಿ.ಕೆ.ವೈ. ಅಡಿಯಲ್ಲಿ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ 13.4 ಕೋಟಿ ಫಲಾನುಭವಿಗಳಿಗೆ 1.78 ಲಕ್ಷ ಎಂ.ಟಿ. ಬೇಳೆ ಕಾಳುಗಳನ್ನು ವಿತರಿಸಲಾಗಿದೆ
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನಾ (ಪಿ.ಎಂ.-ಜಿ.ಕೆ.ವೈ.) ಅಡಿಯಲ್ಲಿ ಸುಮಾರು 4.57 ಲಕ್ಷ ಎಂ.ಟಿ. ಬೇಳೆ-ಕಾಳುಗಳನ್ನು ರಾಜ್ಯಗಳಿಗೆ/ ಕೇಂದ್ರಾಡಳಿತ ಪ್ರದೇಶಗಳಿಗೆ ರವಾನಿಸಲಾಗಿದೆ. ಇದರಲ್ಲಿ 1.78 ಲಕ್ಷ ಎಂ.ಟಿ. ಬೇಳೆ ಕಾಳುಗಳನ್ನು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ 1340.61 ಲಕ್ಷ ಫಲಾನುಭವಿಗಳಿಗೆ ವಿತರಿಸಲಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿ.ಎಂ.-ಕಿಸಾನ್) ಯೋಜನೆ ಅಡಿಯಲ್ಲಿ 24-3-2020 ರಿಂದ ಆರಂಭಗೊಂಡ ಲಾಕ್ ಡೌನ್ ಅವಧಿಯಲ್ಲಿ ಇದುವರೆಗೆ 9.67 ಕೋಟಿ ರೈತರು ಪ್ರಯೋಜನ ಪಡೆದಿದ್ದಾರೆ ಮತ್ತು ಇದುವರೆಗೆ 19,350.84 ಕೋ.ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.
ವಿವರಗಳಿಗೆ: https://pib.gov.in/PressReleseDetail.aspx?PRID=1627218
ಹೆಚ್ಚು ಸ್ಪರ್ಧಾತ್ಮಕಗೊಳ್ಳುವಂತೆ ಮತ್ತು ಗುಣಮಟ್ಟದ ಉತ್ಪನ್ನಗಳನ್ನು ವಿಶ್ವಕ್ಕೆ ಒದಗಿಸುವಂತೆ ರಫ್ತುದಾರರಿಗೆ ಶ್ರೀ ಪೀಯುಶ್ ಗೋಯಲ್ ಕರೆ
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆಗಳು ಹಾಗು ರೈಲ್ವೇ ಸಚಿವರಾದ ಶ್ರೀ ಪೀಯುಶ್ ಗೋಯಲ್ ಅವರಿಂದು ವೀಡಿಯೋ ಕಾನ್ಫರೆನ್ಸ್ ಮೂಲಕ ಭಾರತೀಯ ಕೈಗಾರಿಕೆಗಳ ಮಹಾಒಕ್ಕೂಟ (ಸಿ.ಐ.ಐ.) ಆಯೋಜಿಸಿದ್ದ ರಫ್ತುಗಳಿಗೆ ಸಂಬಂಧಿಸಿದ ಡಿಜಿಟಲ್ ಸಮ್ಮೇಳನದಲ್ಲಿ ಪಾಲ್ಗೊಂಡರು. ರಫ್ತನ್ನು ಈಗಿರುವ ಕ್ಷೇತ್ರಗಳಲ್ಲಿ ಇನ್ನಷ್ಟು ಬಲಯುತಗೊಳಿಸುವುದರ ಜೊತೆಗೆ ವೈವಿಧ್ಯಮಯಗೊಳಿಸಬೇಕು, ಇದು ನಮ್ಮ ಆರ್ಥಿಕತೆ ಬೆಳೆಯಲು ಅವಶ್ಯ ಎಂಬ ಅಂಶವನ್ನವರು ಒತ್ತು ನೀಡಿ ಹೇಳಿದರು. ನಾವು ಶಕ್ತಿಯ ಬಲದಲ್ಲಿ ಮಾತನಾಡಬೇಕು , ಸ್ಪರ್ಧಾತ್ಮಕಗೊಳ್ಳಬೇಕು, ಮತ್ತು ಜಗತ್ತಿಗೆ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸಬೇಕು ಎಂದೂ ನುಡಿದ ಅವರು ನಿರ್ದಿಷ್ಟವಾಗಿ ಜಾಗತಿಕ ಪೂರೈಕೆ ಸರಪಳಿ ಮರುವ್ಯವಸ್ಥೆಗೊಳ್ಳುತ್ತಿರುವಾಗ ಭಾರತವನ್ನು ವಿಶ್ವ ಮಾರುಕಟ್ಟೆಯಲ್ಲಿ ಅವಲಂಬಿಸಬಹುದಾದ ಸಹಭಾಗಿಯಾಗಿ ಮತ್ತು ವಿಶ್ವಾಸಾರ್ಹ ಸ್ನೇಹಿತನಾಗಿ ಕಾಣುವಂತಾಗಬೇಕು ಎಂದೂ ಹೇಳಿದರು.
ವಿವರಗಳಿಗೆ: https://pib.gov.in/PressReleseDetail.aspx?PRID=1627432
ಕೈಗಾರಿಕೆ ಮತ್ತು ವರ್ತಕ ಸಂಘಟನೆಗಳ ಜೊತೆ ಸಭೆ ನಡೆಸಿದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯುಶ್ ಗೋಯಲ್; ಆತ್ಮನಿರ್ಭರ ಭಾರತ ಎಂದರೆ ದೃಢ ವಿಶ್ವಾಸ, ಸ್ವಾವಲಂಬಿ ಮತ್ತು ರಾಷ್ಟ್ರದ ಬಗ್ಗೆ ಕಾಳಜಿ ವಹಿಸುವ ಚಿಂತನೆ ಎಂದು ಹೇಳಿಕೆ
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪೀಯುಶ್ ಗೋಯಲ್ ಅವರಿಂದು ವೀಡಿಯೋ ಕಾನ್ಫರೆನ್ಸ್ ಮೂಲಕ ಕೈಗಾರಿಕೆಗಳು ಮತ್ತು ವರ್ತಕ ಸಂಘಟನೆಗಳ ಜೊತೆ ಸಭೆ ನಡೆಸಿದರು. ಆತ್ಮನಿರ್ಭರ ಭಾರತ್ ಎಂದರೆ ಒಳಮುಖವಾಗಿ , ಸ್ವಾರ್ಥಪರವಾಗಿರುವುದಲ್ಲ, ಅದು ವಿದೇಶಿ ವಿರೋಧಿಯೂ ಅಲ್ಲ, ಮುಚ್ಚಿದ ದ್ವಾರಗಳ ಚಿಂತನೆಯೂ ಅಲ್ಲ ಎಂದು ಹೇಳಿದ ಸಚಿವರು ಈ ಚಿಂತನೆಯು ದೃಢ ವಿಶ್ವಾಸಯುಕ್ತ, ಸ್ವಾವಲಂಬೀ , ರಾಷ್ಟ್ರದ ಬಗ್ಗೆ ಕಾಳಜಿ ವಹಿಸುವ , ಸಮಾಜದ ಎಲ್ಲಾ ವರ್ಗದವರ ಬಗ್ಗೆ ಕಾಳಜಿ ತೋರುವ, ದೇಶದ ಎಲ್ಲಾ ಭಾಗಗಳ ಅಭಿವೃದ್ದಿಯನ್ನು ಪೋಷಿಸುವ ಚಿಂತನೆ ಎಂದರು. ಆತ್ಮನಿರ್ಭರ ಭಾರತ್ 130 ಕೋಟಿ ಭಾರತೀಯರಲ್ಲಿ ತಾವೆಲ್ಲರೂ ಒಂದೇ ಎಂಬ ಸ್ಪೂರ್ತಿಯನ್ನು ಬೆಳೆಸಲಿದೆ ಎಂದರು.
ವಿವರಗಳಿಗೆ: https://pib.gov.in/PressReleseDetail.aspx?PRID=1627215
ಎಫ್.ಸಿ.ಐ.ಯ ಆಹಾರ ಧಾನ್ಯ ವಿತರಣೆ ಮತ್ತು ಖರೀದಿಯನ್ನು ಪರಾಮರ್ಶಿಸಿದ ಶ್ರೀ ಪಾಸ್ವಾನ್
ಲಾಕ್ ಡೌನ್ ಅವಧಿಯಲ್ಲಿ ಎಫ್.ಸಿ.ಐ. ಯ ಪಾತ್ರವನ್ನು ಕೊಂಡಾಡಿರುವ ಶ್ರೀ ರಾಂ ವಿಲಾಸ್ ಪಾಸ್ವಾನ್ ಅವರು ಆಹಾರ ಧಾನ್ಯಗಳ ಸಾಗಾಟ ಒಂದು ಸಾರ್ವಕಾಲಿಕ ಗರಿಷ್ಟ ಪ್ರಮಾಣದ್ದೆಂದು ಹೇಳಿದ್ದಾರೆ. ಜಾಗತಿಕ ಸಾಂಕ್ರಾಮಿಕದ ಬಿಕ್ಕಟ್ಟಿನಲ್ಲಿ ಎಫ್.ಸಿ.ಐ.ಯ ಕಾರ್ಮಿಕ ಪಡೆ ಆಹಾರ ವಾರಿಯರ್ಸ್ ಗಳಾಗಿ ಮೂಡಿ ಬಂದಿದೆ ಮತ್ತು ಈ ಕಾರ್ಮಿಕರು ಸವಾಲನ್ನು ಅವಕಾಶವನ್ನಾಗಿ ಪರಿವರ್ತಿಸಿದ್ದಾರೆ ಎಂದವರು ಹೇಳಿದರು. ಎಫ್.ಸಿ.ಐ.ಯು ದಾಖಲೆ ಪ್ರಮಾಣದ ಆಹಾರ ಧಾನ್ಯಗಳ ಸರಕು ಹೇರುವಿಕೆ (ಲೋಡಿಂಗ್ ) , ಸರಕು ಇಳಿಸುವಿಕೆ (ಅನ್ ಲೋಡಿಂಗ್) ಮತ್ತು ಸಾಗಾಟವನ್ನು ಲಾಕ್ ಡೌನ್ ಅವಧಿಯಲ್ಲಿ ನಿರ್ವಹಿಸಿದೆ. ಇನ್ನೊಂದೆಡೆ ಯಾವುದೇ ಅಡೆ ತಡೆಗಳಿಲ್ಲದೆ ಸರಕಾರಿ ಏಜೆನ್ಸಿಗಳಿಂದ ಖರೀದಿ ಕೂಡಾ ಮುನ್ನಡೆದಿದೆ ಮತ್ತು ಈ ಬಾರಿ ಗೋಧಿ ಖರೀದಿ ಕಳೆದ ವರ್ಷದ ಪ್ರಮಾಣವನ್ನು ದಾಟಿದೆ ಎಂದವರು ಹೇಳಿದರು. ಸಚಿವರು ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಹಾರ ಧಾನ್ಯಗಳ ವಿತರಣೆಯ ಪರಿಸ್ಥಿತಿಯ ಬಗ್ಗೆ ಅವಲೋಕನ ನಡೆಸಿದರು.
ವಿವರಗಳಿಗೆ : https://pib.gov.in/PressReleseDetail.aspx?PRID=1627463
ಕೋವಿಡ್ -19 ರ ಈಗಿನ ಪರಿಸ್ಥಿತಿಗಳಲ್ಲಿ ಎಕ್ ಭಾರತ್ ಶ್ರೇಷ್ಟ ಭಾರತ್ ಕಾರ್ಯಕ್ರಮವನ್ನು ನವೀನ ರೀತಿಗಳನ್ನು ಬಳಸಿ ಮುನ್ನಡೆಸಲಾಗುವುದು
ಸರಕಾರದ ಏಕ್ ಭಾರತ್ ಶ್ರೇಷ್ಟ ಭಾರತ್ ಕಾರ್ಯಕ್ರಮವನ್ನು ಹಾಲಿ ಇರುವ ಕೋವಿಡ್ -19 ಪರಿಸ್ಥಿತಿಗಳಲ್ಲಿ ನವೀನ ವಿಧಾನಗಳನ್ನು ಬಳಸಿ ಮುನ್ನಡೆಸಲು ನಿರ್ಧರಿಸಲಾಗಿದೆ. ಸರಕಾರದ ಏಕ್ ಭಾರತ್ ಶ್ರೇಷ್ಟ ಭಾರತ್ ಕಾರ್ಯಕ್ರಮದ ಸಹಭಾಗಿ ಸಚಿವಾಲಯಗಳ ಕಾರ್ಯದರ್ಶಿಗಳ ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.
ವಿವರಗಳಿಗೆ : https://pib.gov.in/PressReleseDetail.aspx?PRID=1627461
ಕಾರ್ಮಿಕ ಡಿ.ಜಿ. ಅವರ ಟ್ವಿಟರ್ ಹ್ಯಾಂಡಲ್ @LabourDG ಗೆ ಶ್ರೀ ಸಂತೋಷ್ ಗಂಗ್ವಾರ್ ಚಾಲನೆ: ಕಾರ್ಮಿಕ ಕಲ್ಯಾಣಕ್ಕೆ ಸಂಬಂಧಿಸಿದ ಇತ್ತೀಚಿನ ಅಂಕಿ ಅಂಶಗಳನ್ನು ಈ ಹ್ಯಾಂಡಲ್ ಒದಗಿಸಲಿದೆ
ಕಾರ್ಮಿಕ ಕಲ್ಯಾಣಕ್ಕೆ ಸಂಬಂಧಿಸಿದ ಇತ್ತೀಚಿನ ಅಂಕಿ ಅಂಶಗಳನ್ನು ಒದಗಿಸುವ ಯತ್ನವಾಗಿ ಕಾರ್ಮಿಕ ಮತ್ತು ಉದ್ಯೋಗ ಖಾತೆಯ ಪ್ರಭಾರ ಸಹಾಯಕ ಸಚಿವರಾದ ಶ್ರೀ ಸಂತೋಷ್ ಕುಮಾರ್ ಗಂಗ್ವಾರ್ ಅವರು ನಿನ್ನೆ ಕಾರ್ಮಿಕ ಬ್ಯೂರೋಗಾಗಿ ಟ್ವಿಟರ್ ಹ್ಯಾಂಡಲ್ @LabourDG ಗೆ ಚಾಲನೆ ನೀಡಿದರು. ಈ ಹ್ಯಾಂಡಲ್ ಭಾರತೀಯ ಕಾರ್ಮಿಕ ಮಾರುಕಟ್ಟೆ ಸೂಚ್ಯಂಕಗಳಿಗೆ ಸಂಬಂಧಿಸಿ ನಿಯಮಿತವಾದ ಮತ್ತು ಸಕಾಲಿಕ ಮಾಹಿತಿಯನ್ನು ಒಳಗೊಂಡ ಮೂಲ ಆಕರವಾಗಿರುತ್ತದೆ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.
ವಿವರಗಳಿಗೆ : https://pib.gov.in/PressReleseDetail.aspx?PRID=1627410
ಕೋವಿಡ್ -19 ವಿರುದ್ದ ಹೋರಾಟಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನಗಳ ಪರಿಹಾರ
ಇಂದಿಲ್ಲಿ ಮಾಧ್ಯಮ ಗೋಷ್ಟಿಯಲ್ಲಿ ಮಾತನಾಡಿದ ನೀತಿ ಆಯೋಗದ ಸದಸ್ಯ ಡಾ. ವಿನೋದ್ ಪೌಲ್, ಮತ್ತು ಭಾರತ ಸರಕಾರಕ್ಕೆ ಪ್ರಧಾನ ವೈಜ್ಞಾನಿಕ ಸಲಹೆಗಾರರಾಗಿರುವ ಪ್ರೊ. ಕೆ. ವಿಜಯ ರಾಘವನ್ ಅವರು ಕೋವಿಡ್ -19 ಸಂಬಂಧಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಲಸಿಕೆಗಳು, ಔಷಧಿಗಳ ಶೋಧ, ರೋಗ ಪತ್ತೆ ಮತ್ತು ಪರೀಕ್ಷೆ ವಲಯದಲ್ಲಿ ನಡೆಯುತ್ತಿರುವ ಕಾರ್ಯಚಟುವಟಿಕೆಗಳ ಸಾರಾಂಶವನ್ನು ಒದಗಿಸಿದರು.
ವಿವರಗಳಿಗೆ: https://pib.gov.in/PressReleseDetail.aspx?PRID=1627464
ಕೋವಿಡ್ -19 ವಿರುದ್ದ ಹೋರಾಟಕ್ಕೆ ಕಾರ್ನಲ್ ಸ್ಮಾರ್ಟ್ ಸಿಟಿಯಿಂದ ಪ್ರಮುಖ ಉಪಕ್ರಮ
ವಿವರಗಳಿಗೆ: https://pib.gov.in/PressReleseDetail.aspx?PRID=1627442
ಪಿ ಐ ಬಿ ಕ್ಷೇತ್ರೀಯ ಕಚೇರಿಗಳ ವರದಿ
- ಚಂಡೀಗಢ: ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿಗಳು ಕಂಟೈನ್ಮ್ಂಟ್ ಕಾರ್ಯಾಚರಣೆಗಳನ್ನು ಸೆಕ್ಟರ್ 38 ರಲ್ಲಿ 27/05/2020 ರಿಂದ ಸೆಕ್ಟರ್ 52 ರಲ್ಲಿ 28/05/2020 ರಿಂದ ಕೊನೆಗೊಳಿಸಲು ಅನುಮೋದನೆ ನೀಡಿದ್ದಾರೆ. ನಿವಾಸಿಗಳ ಆರೋಗ್ಯದ ಮೇಲೆ ಕಠಿಣವಾದ ನಿಗಾ, ತಪಾಸಣೆ ಮತ್ತು ಕಣ್ಗಾವಲು ಮುಂದುವರೆಸಲು ತೀರ್ಮಾನಿಸಲಾಗಿದೆ. ಜೊತೆಗೆ ನಿಯಮಿತವಾಗಿ ಸ್ಯಾನಿಟೈಜೇಷನ್ ಕ್ರಮಗಳನ್ನು ಹಾಗು ಐ.ಇ.ಸಿ.ಆಂದೋಲನ ಕ್ರಮಗಳನ್ನು ಈ ಪ್ರದೇಶಗಳಲ್ಲಿ ಮುನ್ಸಿಪಲ್ ಅಧಿಕಾರಿಗಳು ಕೈಗೊಳ್ಳುವುದನ್ನು ಮುಂದುವರೆಸುವರು. ಹೊಸ ಸಂಶಯಿತ ಪ್ರಕರಣಗಳಿದ್ದಲ್ಲಿ , ಯಾದೃಚ್ಚಿಕವಾಗಿ ಮಾದರಿಗಳನ್ನು ಸಂಗ್ರಹಿಸಿ ಆಡಳಿತಕ್ಕೆ ವರದಿ ಮಾಡಲಾಗುವುದು. ಈ ಪ್ರದೇಶಗಳಲ್ಲಿ ಸಾಮಾಜಿಕವಾಗಿ ಸೇರುವ ಕಾರ್ಯಕ್ರಮಗಳಿಗೆ ಸಂಬಂಧಿಸಿ ಭಾರತ ಸರಕಾರದ ಮಾರ್ಗದರ್ಶಿಗಳ ಅನ್ವಯ ನಿರ್ಬಂಧ ಮುಂದುವರಿಯುತ್ತದೆ ಮತ್ತು ಅವಶ್ಯಕ ಸಾಮಾಜಿಕ ಅಂತರ ಕಾಪಾಡುವಿಕೆ, ಮುಖಗವಸು ಧಾರಣೆ ಮತ್ತು ಸ್ವಚ್ಚತೆಯನ್ನು ಕಡ್ದಾಯವಾಗಿ ಅನುಷ್ಟಾನಿಸಲಾಗುತ್ತದೆ.
- ಪಂಜಾಬ್: ಆರ್ಥಿಕ ಸಂಕಷ್ಟಗಳು ಹೆಚ್ಚುತ್ತಿರುವಂತೆಯೇ ಪಂಜಾಬ್ ಸರಕಾರವು ಭಾರತ ಸರಕಾರದಿಂದ 51,102 ಕೋ.ರೂ. ಗಳ ಆರ್ಥಿಕ ಉತ್ತೇಜನ ಕೋರಲು ನಿರ್ಧರಿಸಿದೆ. ಕೋವಿಡ್ ಜಾಗತಿಕ ಸಾಂಕ್ರಾಮಿಕದ ಪರಿಣಾಮವಾಗಿ ಉದ್ಭವಿಸಿರುವ ಆರ್ಥಿಕ ಬಿಕ್ಕಟ್ಟಿನಿಂದ ರಾಜ್ಯವನ್ನು ಪಾರು ಮಾಡಲು ಮತ್ತು ಧೀರ್ಘ ಕಾಲದ ಲಾಕ್ ಡೌನ್ ನಿಂದುಂಟಾಗಿರುವ ಕಷ್ಟದ ಪರಿಸ್ಥಿತಿಯಲ್ಲಿ ರಾಜ್ಯಕ್ಕೆ ಸಹಾಯ ಮಾಡಲು ಈ ಬೇಡಿಕೆ ಮಂಡಿಸಲು ತೀರ್ಮಾನಿಸಲಾಗಿದೆ. ರಾಜ್ಯದಲ್ಲಿ ಲಾಕ್ ಡೌನಿಗೆ ಸಂಬಂಧಿಸಿದ ಮುಂದಿನ ಕ್ರಮದ ಬಗ್ಗೆ ಮೇ 30 ರಂದು ರಾಜ್ಯ ಸರಕಾರ ಕ್ರಮ ಕೈಗೊಳ್ಳಲಿದೆ. ಮೇ 30 ರಂದು ಮುಖ್ಯಮಂತ್ರಿಗಳು ರಾಜ್ಯದಲ್ಲಿಯ ಒಟ್ಟಾರೆ ಕೋವಿಡ್ ಪರಿಸ್ಥಿತಿಯ ಬಗ್ಗೆ ವಿವಿಧ ಇಲಾಖೆಗಳ ಜೊತೆ ಪರಾಮರ್ಶಾ ಸಭೆಯ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲನೆ ಮಾಡಲಿದ್ದು, ಅ ಬಳಿಕವೇ ಲಾಕ್ ಡೌನ್ ತೆರವು ಅಥವಾ ವಿಸ್ತರಣೆಯ ಬಗೆಗೆ ಸರಕಾರದ ನಿಲುವು ಪ್ರಕಟಿಸಲಿದ್ದಾರೆ.
- ಹರಿಯಾಣ: ರಾಜ್ಯಕ್ಕೆ ಬರುವ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಮೊದಲ 7 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ ನಲ್ಲಿಡುವುದನ್ನು ಖಾತ್ರಿಪಡಿಸುವಂತೆ ಹರ್ಯಾಣಾ ಸರಕಾರ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಆ ಬಳಿಕವಷ್ಟೇ ಆ ಪ್ರಯಾಣಿಕರು ಮತ್ತೆ 7 ದಿನಗಳ ಕಾಲ ಮನೆಯಲ್ಲೇ ಕ್ವಾರಂಟೈನ್ ಆಗಿರಲು ಅರ್ಹತೆ ಪಡೆಯುತ್ತಾರೆ. ಸಾಕಷ್ಟು ಮನೆ ಕ್ವಾರಂಟೈನ್ ಸೌಲಭ್ಯಗಳು ಇಲ್ಲದಿದ್ದರೆ ಸಂಬಂಧಿತ ಜಿಲ್ಲಾಧಿಕಾರಿಗಳು ಆಯಾ ಜಿಲ್ಲೆಗಳ ಮುಖ್ಯ ವೈದ್ಯಕೀಯ ಅಧಿಕಾರಿಗಳ ಜೊತೆ ಸಮಾಲೋಚಿಸಿ ಅಂತಹ ಪ್ರಯಾಣಿಕರನ್ನು ಮತ್ತೆ 7 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳಲ್ಲಿ ಇಡಬಹುದು. ಇದಲ್ಲದೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ (ಎಂ.ಒ. ಎಚ್.ಎಫ್. ಆಂಡ್ ಡಬ್ಲ್ಯು.) ಸಚಿವಾಲಯ ನೀಡಿರುವ ಮಾರ್ಗದರ್ಶಿಗಳನ್ನು ಚಾಚೂ ತಪ್ಪದೆ ಪಾಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
- ಹಿಮಾಚಲ ಪ್ರದೇಶ: ರಾಜ್ಯದ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಟರು ಮತ್ತು ಮುಖ್ಯ ವೈದ್ಯಾಧಿಕಾರಿಗಳನ್ನು ಉದ್ದೇಶಿಸಿ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿರುವ ಮುಖ್ಯಮಂತ್ರಿ ಅವರು ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳಲ್ಲಿ ಜನರ ವಾಸ್ತವ್ಯಕ್ಕೆ ಅನುಕೂಲಕರವಾಗಿ ಇನ್ನಷ್ಟು ಉತ್ತಮ ಸೌಲಭ್ಯ ಖಾತ್ರಿಪಡಿಸುವ ಅಗತ್ಯವನ್ನು ಒತ್ತಿ ಹೇಳಿದರು. ಕೆಂಪು ವಲಯದಿಂದ ಆಗಮಿಸುವ ಎಲ್ಲಾ ಜನರನ್ನೂ ಸಾಂಸ್ಥಿಕ ಕ್ವಾರಂಟೈನ್ ನಲ್ಲಿಡಬೇಕು ಮತ್ತು ಅವರ ಕೋವಿಡ್ -19 ರ ಪರೀಕ್ಷೆಗಳು ನೆಗೆಟಿವ್ ಬಂದ ಬಳಿಕವಷ್ಟೇ ಮನೆ ಕ್ವಾರಂಟೈನ್ ಗೆ ವರ್ಗಾಯಿಸಬೇಕು ಎಂದವರು ಹೇಳಿದರು. ಇತರ ದೇಶಗಳಿಂದ ಬರುವ ಹಿಮಾಚಲ ಪ್ರದೇಶದ ಜನತೆಗೂ ಇದೇ ಪ್ರಕ್ರಿಯೆಯನ್ನು ಅನುಸರಿಸಬೇಕು . ಕೋವಿಡ್ -19 ಪಾಸಿಟಿವ್ ರೋಗಿಗಳ ಎಲ್ಲಾ ಸಂಪರ್ಕಗಳನ್ನು ಪತ್ತೆ ಹಚ್ಚಲು ಮತ್ತು ತಪಾಸಣೆ ಮಾಡಲು ಹಾಗು ಸಕಾಲಿಕ ಚಿಕಿತ್ಸೆ ಕೊಡಿಸಲು ಆದ್ಯ ಗಮನ ಕೊಡಬೇಕು ಮತ್ತು ವೈರಸ್ ಹರಡುವಿಕೆ ನಿರ್ಬಂಧಿಸಲು ಮಹತ್ವ ನೀಡಬೇಕು ಎಂದವರು ಹೇಳಿದರು. ಈ ಎಲ್ಲಾ ವ್ಯಕ್ತಿಗಳಿಗೂ ’ಕೊರೊನಾ ಮುಕ್ತ ಆಪ್’ ಡೌನ್ ಲೋಡ್ ಮಾಡಲು ಹೇಳಬೇಕು, ಇದರಿಂದ ಕ್ವಾರಂಟೈನ್ ಆಗಿರುವ ವ್ಯಕ್ತಿಗಳ ಚಲನ ವಲನದ ಮೇಲೆ ಸಮರ್ಪಕವಾದ ನಿಗಾ ಇಡಲು ಸಾಧ್ಯವಾಗುತ್ತದೆ ಎಂದೂ ಅವರು ಹೇಳಿದರು.
- ಕೇರಳ: ವಲಸೆ ಕಾರ್ಮಿಕರ ಸ್ಥಿತಿಗತಿಯ ಬಗ್ಗೆ ಅಪೆಕ್ಸ್ ನ್ಯಾಯಾಲಯ ತಾನಾಗಿಯೇ ಪ್ರಕರಣ ದಾಖಲಿಸಿಕೊಂಡಿರುವುದಕ್ಕೆ ಉತ್ತರ ನೀಡಿರುವ ಕೇರಳ ಸರಕಾರವು 55 ರೈಲುಗಳಲ್ಲಿ ತಾನು 70,137 ವಲಸೆ ಕಾರ್ಮಿಕರನ್ನು ಅವರ ತವರು ರಾಜ್ಯಗಳಿಗೆ ಕಳುಹಿಸಿಕೊಟ್ಟಿರುವುದಾಗಿ ಸುಪ್ರೀಂ ಕೋರ್ಟಿಗೆ ತಿಳಿಸಿದೆ. 4,34,280 ವಲಸೆ ಕಾರ್ಮಿಕರಿಗೆ 21,556 ಶಿಬಿರಗಳಲ್ಲಿ ತಾತ್ಕಾಲಿಕ ವಸತಿಯನ್ನು ಆಹಾರ, ನೀರು, ಮತ್ತು ಇತರ ಸವಲತ್ತುಗಳೊಂದಿಗೆ ಒದಗಿಸಲಾಗಿದೆ ಎಂದೂ ಅದು ಹೇಳಿದೆ. ರಾಜ್ಯದಲ್ಲಿ ಮದ್ಯದಂಗಡಿಗಳು ಇಂದು ಬೆಳಿಗ್ಗೆಯಿಂದ ಕಾರ್ಯಾಚರಿಸಲು ಆರಂಭಿಸಿವೆ. ಬೆವ್ –ಕ್ಯೂ ಆಪ್ ಬಗ್ಗೆ ವ್ಯಾಪಕ ದೂರುಗಳು ಬಂದಿವೆ. ಇದು ಮದ್ಯ ಮಾರಾಟಕ್ಕಾಗಿರುವ ವರ್ಚುವಲ್ ಸರತಿ ಸಾಲು ನಿರ್ವಹಣಾ ಆಪ್ ಆಗಿದೆ. ಗೃಹ ಕ್ವಾರಂಟೈನ್ ಉಲ್ಲಂಘಿಸುವವರನ್ನು ಪತ್ತೆ ಹಚ್ಚಲು ಪೊಲೀಸರು ದಿಢೀರ್ ತಪಾಸಣೆಗಳನ್ನು ನಡೆಸುತ್ತಿದ್ದಾರೆ. ಮೊದಲ ಕೋವಿಡ್ ಪ್ರಕರಣ ವರದಿಯಾದ ಬಳಿಕ 119 ನೇ ದಿನದಂದು ಕೇರಳದಲ್ಲಿ ದೃಢೀಕೃತ ಕೋವಿಡ್ -19 ಪ್ರಕರಣಗಳ ಸಂಖ್ಯೆ ನಿನ್ನೆ 1000 ಗಡಿ ದಾಟಿ 1004 ಕ್ಕೇರಿತು. ಸುಮಾರು 45 % (445 ) ಕಳೆದ 14 ದಿನಗಳಲ್ಲಿ ಈ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಇದುವರೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ 6 ಲಕ್ಷ ಮಂದಿಯಲ್ಲಿ ಮೇ 27 ರವರೆಗೆ ವಿದೇಶಗಳಿಂದ ಮತ್ತು ಬೇರೆ ರಾಜ್ಯಗಳಿಂದ 1.05 ಲಕ್ಷ ಕೇರಳೀಯರು ರಾಜ್ಯಕ್ಕೆ ಮರಳಿ ಬಂದಿದ್ದಾರೆ.
- ತಮಿಳುನಾಡು: ಸಿಬ್ಬಂದಿಗಳು ಕೋವಿಡ್ -19 ಪರೀಕ್ಷೆಯಲ್ಲಿ ಪಾಸಿಟಿವ್ ಆಗಿರುವುದರಿಂದ ದಕ್ಷಿಣ ರೈಲ್ವೇಯು ಚೆನ್ನೈಯಲ್ಲಿಯ ತನ್ನ ಕೇಂದ್ರ ಕಚೇರಿಯನ್ನು ಮುಚ್ಚಿದೆ. ಇಡೀಯ ಸಮುಚ್ಚಯಕ್ಕೆ ಕ್ರಿಮಿನಾಶಕ ಸಿಂಪರಣೆಯ ಬಳಿಕ ಕಚೇರಿಗಳು ಸೋಮವಾರದಂದು ತೆರೆಯಲಿವೆ. ಮಧುರೈಗೆ ವಿಮಾನದಲ್ಲಿ ಬಂದಿಳಿದ ಬೆಂಗಳೂರಿನ ಓರ್ವ ಪ್ರಯಾಣಿಕರು ಮತ್ತು ಹೊಸದಿಲ್ಲಿಯ ಇಬ್ಬರು ಪ್ರಯಾಣಿಕರು ಸಹಿತ ಮೂರು ಮಂದಿಯಲ್ಲಿ ಕೋವಿಡ್ -19 ದೃಢೀಕರಿಸಲ್ಪಟ್ಟಿದೆ. ಮಿಡತೆಗಳಿಗೆ ಸಂಬಂಧಿಸಿ ರಾಜ್ಯವು ರೈತರಿಗೆ ಸಲಹಾ ಸೂಚಿಯನ್ನು ಬಿಡುಗಡೆ ಮಾಡಿದೆ. ತಮಿಳುನಾಡಿಗೆ ಅಪಾಯ ಇಲ್ಲವೆಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಅದರ ನಡುವೆಯೂ ಸಲಹಾ ಸೂಚಿ ಹೊರಡಿಸಲಾಗಿದೆ. ನಿನ್ನೆ ಕಂಡು ಬಂದ 817 ಹೊಸ ಪ್ರಕರಣಗಳಿಂದಾಗಿ ರಾಜ್ಯದಲ್ಲಿ ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 18,545 ಆಗಿದೆ. ಆಕ್ಟಿವ್ ಪ್ರಕರಣಗಳು : 8500. ಸಾವುಗಳು: 133, ಗುಣಮುಖರಾಗಿ ಬಿಡುಗಡೆಯಾದವರು 9909, ಚೆನ್ನೈ ಒಂದರಲಿಯೇ ಆಕ್ಟಿವ್ ಪ್ರಕರಣಗಳು 6307
- ಕರ್ನಾಟಕ: ಇಂದು ಮಧ್ಯಾಹ್ನ 12 ಗಂಟೆಯವರೆಗೆ 75 ಹೊಸ ಕೋವಿಡ್ ಪ್ರಕರಣಗಳು, 28 ಮಂದಿ ಗುಣಮುಖರಾಗಿ ಬಿಡುಗಡೆ ಮತ್ತು ಓರ್ವರ ಸಾವು. ಇಂದು ವರದಿಯಾದ ಹೊಸ ಪ್ರಕರಣಗಳು : ಉಡುಪಿ -27, ಹಾಸನ -13, ಬೆಂಗಳೂರು ನಗರ -7, ಯಾದಗಿರಿ -7, ಚಿತ್ರದುರ್ಗ_ 6, ದಕ್ಷಿಣ ಕನ್ನಡ -6 ಮತ್ತು ಕಲಬುರ್ಗಿ ಹಾಗು ಚಿಕ್ಕಮಗಳೂರುಗಳಲ್ಲಿ ತಲಾ 3 ಮತ್ತು ವಿಜಯಪುರದಲ್ಲಿ 2, ರಾಯಚೂರಿನಲ್ಲಿ 1,. ರಾಜ್ಯದಲ್ಲಿ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 2493 ಕ್ಕೇರಿದೆ. ಆಕ್ಟಿವ್ ಪ್ರಕರಣಗಳು – 1635. ಗುಣಮುಖರಾಗಿ ಬಿಡುಗಡೆಯಾದವರು : 809, ಮತ್ತು ಸಾವುಗಳು -47.
- ಆಂಧ್ರಪ್ರದೇಶ: ರಾಜ್ಯದಲ್ಲಿಯ ಶಾಲೆ ಮತ್ತು ಕಾಲೇಜುಗಳನ್ನು ಮೇಲುಸ್ತುವಾರಿ ಮಾಡಲು ಶಿಕ್ಷಣ ವೆಬ್ ಪೋರ್ಟಲ್ www.apsermc.ap. ಗೆ ಮುಖ್ಯಮಂತ್ರಿ ಚಾಲನೆ ನೀಡಿದರು. ಕೈಗಾರಿಕಾ ಅಭಿವೃದ್ದಿಗೆ ಧನಾತ್ಮಕ ಪರಿಸರವನ್ನು ನಿರ್ಮಾಣ ಮಾದಲಾಗುವುದು ಎಂದವರು ಈ ಸಂದರ್ಭದಲ್ಲಿ ತಿಳಿಸಿದರು. ಕಳೆದ 24 ಗಂಟೆಗಳಲ್ಲಿ 9858 ಮಾದರಿಗಳನ್ನು ಪರೀಕ್ಷಿಸಿದ ಬಳಿಕ 54 ಹೊಸ ಪ್ರಕರಣಗಳು ವರದಿಯಾಗಿವೆ. ಓರ್ವರು ಮೃತಪಟ್ಟಿದ್ದಾರೆ. 45 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು ಪ್ರಕರಣಗಳು : 2841. ಆಕ್ಟಿವ್ ಪ್ರಕರಣಗಳು -824. ಗುಣಮುಖರಾದವರು 1958. ಮೃತಪಟ್ಟವರು : 59 ಇತರ ರಾಜ್ಯಗಳಿಂದ ಬಂದವರಲ್ಲಿ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 293 ಕ್ಕೇರಿದೆ , ಇವುಗಳಲ್ಲಿ ಆಕ್ಟಿವ್ ಪ್ರಕರಣಗಳು 126. ವಿದೇಶಗಳಿಂದ ಬಂದವರಲ್ಲಿ ಒಟ್ಟು ದೃಢೀಕೃತ ಪ್ರಕರಣಗಳು 111
- ತೆಲಂಗಾಣ: ಲಾಕ್ ಡೌನ್ ವಿಸ್ತರಣೆಯ ಹೊರತಾಗಿಯೂ ಮತ್ತು ಕಾರ್ಮಿಕರು ಹಾಗು ಹಣಕಾಸಿನ ಕೊರತೆಯಿದ್ದಾಗ್ಯೂ ತೆಲಂಗಾಣ ಸರಕಾರ ರೈತರಿಂದ 12,000 ಕೋ.ರೂ.ಗಳ ಮೌಲ್ಯದ ಕೃಷ್ಯುತ್ಪನ್ನಗಳನ್ನು ಖರೀದಿಸಿದೆ. ಇದರಲ್ಲಿ ಭತ್ತ, ಜೋಳ, ಕಡಲೆ, ಸೂರ್ಯಕಾಂತಿಗಳು ಸೇರಿವೆ. ತೆಲಂಗಾಣ ಹೈಕೋರ್ಟು ಔಷಧಗಳು ಮತ್ತು ಸೌಂದರ್ಯವರ್ಧಕ ಕಾಯ್ದೆ ಹಾಗು ಫಾರ್ಮಸಿ ಕಾಯ್ದೆಯಡಿ ಔಷಧಿ ನಿಯಂತ್ರಣ ಆಡಳಿತಗಳ ಇಲಾಖೆಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆಯೇ ಎಂಬುದರ ವಿವರ ತಿಳಿಸುವಂತೆ ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ಸೂಚಿಸಿದೆ. ತೆಲಂಗಾಣದಲ್ಲಿ ಒಟ್ಟು ದೃಢೀಕೃತ ಪ್ರಕರಣಗಳ ಸಂಖ್ಯೆ ಮೇ 28 ರವರೆಗೆ 2098. ಇಂದಿನವರೆಗೆ 173 ವಲಸಿಗರು, 124 ಮಂದಿ ವಿದೇಶದಿಂದ /ಸೌದಿ ಅರೇಬಿಯಾದಿಂದ ಮರಳಿದವರು ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದಾರೆ.
- ಅರುಣಾಚಲ ಪ್ರದೇಶ: ಕೋವಿಡ್ -19 ಜಾಗತಿಕ ಸಾಂಕ್ರಾಮಿಕದಿಂದ ಉದ್ಭವಿಸಿರುವ ಆರ್ಥಿಕ ಪರಿಸ್ಥಿತಿಯನ್ನು ಪುನಾರವಲೋಕನ ಮಾಡಲು ಸರಕಾರವು ಆರ್ಥಿಕ ಪುನಶ್ಚೇತನ ಸಮಿತಿಯನ್ನು ರಚಿಸಿದೆ.
- ಅಸ್ಸಾಂ: ಅಸ್ಸಾಂನಲ್ಲಿ 33 ಹೊಸ ಕೋವಿಡ್ ದೃಢೀಕೃತ ಪ್ರಕರಣಗಳು ವರದಿಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 831 ಕ್ಕೇರಿದೆ. ಸಕ್ರಿಯ ಪ್ರಕರಣಗಳು 737 ಮತ್ತು ಗುಣಮುಖರಾದವರು 87, ಸಾವುಗಳ ಸಂಖ್ಯೆ 4 ಎಂದು ರಾಜ್ಯ ಆರೋಗ್ಯ ಸಚಿವರು ತಿಳಿಸಿದ್ದಾರೆ.
- ಮಣಿಪುರ: ಆರೋಗ್ಯ ಇಲಾಖೆ, ಆರೋಗ್ಯ ಮಿಷನ್ ಮತ್ತು ಇಂಫಾಲಾ ಪಶ್ಚಿಮದ ಮೈತ್ರಾಂನ ಯುನಾಕ್ಕೋ ಶಾಲೆಯ ಅಧಿಕಾರಿಗಳ ಜೊತೆ ಶಾಲೆಯಲ್ಲಿ ರಾಜ್ಯದ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು 100 ಹಾಸಿಗೆಗಳ ತಾತ್ಕಾಲಿಕ ಕೋವಿಡ್ ಆರೈಕೆ ಕೇಂದ್ರವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಅವರಿಂದು ಸಭೆ ನಡೆಸಿದರು.
- ಮಿಜೋರಾಂ: ವಿವಿಧೆಡೆಗಳಲ್ಲಿ ಸಿಲುಕಿ ಹಾಕಿಕೊಂಡಿದ್ದ ಮಿಜೋರಾನ ಜನರನ್ನು ಹೊತ್ತ ರೈಲುಗಳು ಗುಜರಾತ್ ಮತ್ತು ಮಧ್ಯಪ್ರದೇಶಗಳಿಂದ ಇಂದು ಗುವಾಹಟಿ ರೈಲು ನಿಲ್ದಾಣಕ್ಕೆ ಆಗಮಿಸಿದವು.
- ನಾಗಾಲ್ಯಾಂಡ್: ರಾಜ್ಯದಲ್ಲಿ ಹೆಚ್ಚು ಜೈವಿಕ ಸುರಕ್ಷೆ ಮಟ್ಟದ ಪ್ರಯೋಗಾಲಯಗಳ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಿರುವ ರಾಜ್ಯಪಾಲ ಆರ್.ಎನ್. ರವಿ ಅವರು ಸಂಪರ್ಕ ಪತ್ತೆಯನ್ನು ಭಾರೀ ತ್ವರಿತವಾಗಿ ಕೈಗೊಳ್ಳಬೇಕು ಎಂದಿದ್ದಾರೆ. ದಿಮಾಪುರದಲ್ಲಿ ಲಾಕ್ ಡೌನ್ ಮಾರ್ಗದರ್ಶಿಗಳನ್ನು ಉಲ್ಲಂಘಿಸಿದುದಕ್ಕಾಗಿ 109 ವಾಹನಗಳ ವಿರುದ್ದ ಕ್ರಮ ಕೈಗೊಳ್ಳಲಾಗಿದೆ , 15,400 ರೂ. ಗಳನ್ನು ದಂಡವಾಗಿ ವಸೂಲಿ ಮಾಡಲಾಗಿದೆ.
- ಸಿಕ್ಕಿಂ: ವಿವಿಧೆಡೆ ಸಿಲುಕಿ ಹಾಕಿಕೊಂಡಿದ್ದ ನೊಂದಾಯಿತ 8766 ನಾಗರಿಕರ ಪೈಕಿ 4415 ಸಿಕ್ಕಿಮಿಗಳು ರಾಜ್ಯಕ್ಕೆ ಬಂದಿದ್ದಾರೆ. ಮತ್ತು ದೇಶದ ವಿವಿಧ ಭಾಗಗಳಿಂದ 7 ವಿಶೇಷ ರೈಲುಗಳಲ್ಲಿ 2063 ಮಂದಿಯನ್ನು ತವರು ರಾಜ್ಯಕ್ಕೆ ಕರೆತರಲಾಗಿದೆ. . ಕೃಷಿ ಸಚಿವರು ರೈತರ ಉತ್ಪಾದನಾ ಸಂಘಟನೆಗಳಿಗೆ, ಸಹಕಾರಿಗಳಿಗೆ ಹಣಕಾಸು ಒದಗಿಸುವಂತೆ ಗ್ಯಾಂಗ್ಟಾಕಿನ ಆರ್.ಬಿ.ಐ. ಜನರಲ್ ಮ್ಯಾನೇಜರ್ ಅವರಿಗೆ ಮನವಿ ಮಾಡಿದ್ದಾರೆ. ಮತ್ತು ರೈತರಿಗಾಗಿ ಸಾಲ ಮೇಳಗಳನ್ನು ಆಯೋಜಿಸುವಂತೆಯೂ , ಕಿಸಾನ್ ಕ್ರೆಡಿಟ್ ಕಾರ್ಡ್ ನೀಡುವಂತೆಯೂ ಮತ್ತು ಬಾಕಿ ಇರುವ ವಿಷಯಗಳನ್ನು ಪರಿಹರಿಸುವಂತೆಯೂ ಅವರು ಕೋರಿದ್ದಾರೆ.
ಪಿ ಐ ಬಿ ವಾಸ್ತವ ಪರಿಶೀಲನೆ





***
(Release ID: 1627546)
Visitor Counter : 384
Read this release in:
English
,
Urdu
,
Hindi
,
Marathi
,
Assamese
,
Manipuri
,
Bengali
,
Punjabi
,
Gujarati
,
Tamil
,
Telugu
,
Malayalam