PIB Headquarters
ಕೋವಿಡ್-19: ಪಿ ಐ ಬಿ ದೈನಿಕ ವರದಿ
Posted On:
24 MAY 2020 6:28PM by PIB Bengaluru
ಕೋವಿಡ್-19: ಪಿ ಐ ಬಿ ದೈನಿಕ ವರದಿ


(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

ಕೋವಿಡ್ -19 ಕುರಿತು ಆರೋಗ್ಯ ಮತ್ತು ಆರೋಗ್ಯದ ಸಚಿವಾಲಯದ ಅಪ್ ಡೇಟ್
ದೇಶದಲ್ಲಿ ಇದುವರೆಗೆ ಒಟ್ಟು 54,440 ಕೋವಿಡ್-19 ರೋಗಿಗಳನ್ನು ಗುಣಪಡಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 2657 ರೋಗಿಗಳು ಗುಣಮುಖರಾಗಿದ್ದಾರೆ. ಒಟ್ಟು ಚೇತರಿಕೆ ದರ ಶೇ.41.28. ನಿನ್ನೆಯಿಂದ, ಭಾರತದಲ್ಲಿ ಕೋವಿಡ್-19 ದೃಢಪಟ್ಟ ಪ್ರಕರಣಗಳ ಸಂಖ್ಯೆಯಲ್ಲಿ 6767 ಹೆಚ್ಚಳವಾಗಿದೆ. ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ ಈಗ 1,31,868 ಆಗಿದೆ. ಸಕ್ರಿಯ ವೈದ್ಯಕೀಯ ಮೇಲ್ವಿಚಾರಣೆಯಲ್ಲಿರುವ ಪ್ರಕರಣಗಳ ಸಂಖ್ಯೆ 73,560.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಇಂದು ಕೋವಿಡ್-19 ಮೀಸಲು ಆರೋಗ್ಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿರುವ ದೆಹಲಿಯ ಚೌಧರಿ ಬ್ರಹ್ಮ ಪ್ರಕಾಶ್ ಆಯುರ್ವೇದ ಚರಕ್ ಸಂಸ್ಥಾನ್ ಗೆ ಭೇಟಿ ನೀಡಿ ಪ್ರಕರಣಗಳ ನಿರ್ವಹಣೆಯ ಮೇಲ್ವಿಚಾರಣೆ ನಡೆಸಿದರು. ಅವರು ವಿವಿಧ ಸೌಲಭ್ಯಗಳು ಮತ್ತು ವಾರ್ಡ್ಗಳಿಗೆ ಭೇಟಿ ನೀಡಿದರು. ಆಯುಷ್ ಸಚಿವಾಲಯದ ನಿರ್ದೇಶನದಂತೆ ಸಮಗ್ರ ವಿಧಾನದ ಮೂಲಕ ಕೋವಿಡ್-19 ರೋಗಿಗಳಿಗೆ ಮೊದಲ ಬಾರಿಗೆ ಚಿಕಿತ್ಸೆ ನೀಡಲಾಗುತ್ತಿರುವುದನ್ನು ಸ್ವತಃ ವೀಕ್ಷಿಸಿದರು. ಪ್ರತ್ಯೇಕ ಕೋವಿಡ್ ಆರೋಗ್ಯ ಕೇಂದ್ರಗಳು ಆಸ್ಪತ್ರೆಗಳಾಗಿವೆ, ಇವು ಪ್ರಾಯೋಗಿಕವಾಗಿ ಮಧ್ಯಮ ಎಂದು ಹೇಳಲಾದ ಎಲ್ಲಾ ಪ್ರಕರಣಗಳಿಗೆ ಆರೈಕೆ ನೀಡುತ್ತವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಅಂತರರಾಷ್ಟ್ರೀಯ ಪ್ರಯಾಣಿಕರ ಆಗಮನಕ್ಕೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.
ವಿವರಗಳಿಗಾಗಿ: https://pib.gov.in/PressReleseDetail.aspx?PRID=1626574
24.05.2020 ರ ಬೆಳಿಗ್ಗೆ 10 ಗಂಟೆಯವರೆಗೆ ಭಾರತೀಯ ರೈಲ್ವೆಯು 37 ಲಕ್ಷ ಪ್ರಯಾಣಿಕರನ್ನು ಹೊತ್ತ 2813 ಶ್ರಮಿಕ್ ವಿಶೇಷ ರೈಲುಗಳನ್ನು ಓಡಿಸಿದೆ
24.05.2020 ರ ಬೆಳಿಗ್ಗೆ 10 ಗಂಟೆಯವರೆಗೆ 37 ಲಕ್ಷ ಪ್ರಯಾಣಿಕರನ್ನು ಹೊತ್ತ 2813 ಕ್ಕೂ ಹೆಚ್ಚು ಶ್ರಮಿಕ್ ವಿಶೇಷ ರೈಲುಗಳನ್ನು ಭಾರತೀಯ ರೈಲ್ವೆಯು ಓಡಿಸಿದೆ. ಗುಜರಾತ್, ಮಹಾರಾಷ್ಟ್ರ ಮತ್ತು ಪಂಜಾಬ್ನಿಂದ ಸುಮಾರು 60 ಪ್ರತಿಶತದಷ್ಟು ರೈಲುಗಳು ಸಂಚಾರ ಆರಂಭಿಸಿವೆ ಮತ್ತು ಅವು ಮುಖ್ಯವಾಗಿ ಉತ್ತರ ಪ್ರದೇಶ ಮತ್ತು ಬಿಹಾರಕ್ಕೆ (ಉತ್ತರ ಪ್ರದೇಶ ಕ್ಕೆ 1301 ಮತ್ತು ಬಿಹಾರಕ್ಕೆ 973) ತಲುಪುತ್ತವೆ. ಈ ರೈಲುಗಳು ಉತ್ತರ ಪ್ರದೇಶದ ಲಖನೌ - ಗೋರಖ್ಪುರ್ ಸೆಕ್ಟರ್ ಮತ್ತು ಬಿಹಾರದ ಪಾಟ್ನಾದ ಸುತ್ತಮುತ್ತಲ ಪ್ರದೇಶಗಳಿಗೆ ತಲುಪುತ್ತವೆ. ನಿನ್ನೆಯಿಂದ 565 ರೈಲುಗಳು ಸಂಚಾರದಲ್ಲಿವೆ, 266 ಬಿಹಾರಕ್ಕೆ ಮತ್ತು 172 ಉತ್ತರ ಪ್ರದೇಶಕ್ಕೆ ಹೋಗುತ್ತಿವೆ. ಈ ಸ್ಥಳಗಳಿಗೆ ರೈಲುಗಳ ಒಮ್ಮುಖವಾಗಿರುವುದರಿಂದ ರೈಲ್ವೆ ಜಾಲದಲ್ಲಿ ದಟ್ಟಣೆ ಉಂಟಾಗಿದೆ. ಇದಲ್ಲದೆ, ನಿಲ್ದಾಣಗಳಲ್ಲಿನ ವಿವಿಧ ಆರೋಗ್ಯ ಮತ್ತು ಸಾಮಾಜಿಕ ಅಂತರ ಶಿಷ್ಟಾಚಾರಗಳ ಕಾರಣದಿಂದಾಗಿ ಪ್ರಯಾಣಿಕರು ಇಳಿಯುವಾಗ ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ಟರ್ಮಿನಲ್ಗಳಲ್ಲಿನ ದಟ್ಟಣೆ ಉಂಟಾಗುತ್ತದೆ ಮತ್ತು ಇದು ನೆಟ್ವರ್ಕ್ ದಟ್ಟಣೆಯ ಮೇಲೆ ಮತ್ತಷ್ಟು ಪರಿಣಾಮ ಬೀರುತ್ತದೆ.
ವಿವರಗಳಿಗಾಗಿ: https://pib.gov.in/PressReleseDetail.aspx?PRID=1626576
ಕೇಂದ್ರ ಮೋಟಾರು ವಾಹನ ನಿಯಮಗಳು 1989 ರ ನಿಯಮ 32 ಮತ್ತು 81 ರ ಅನ್ವಯ ಶುಲ್ಕ ಪಾವತಿ ಮಾನ್ಯತೆಯ ವಿಸ್ತರಣೆ ಮತ್ತು ಶುಲ್ಕ ಪಾವತಿ ಅವಧಿಯನ್ನು ವಿಸ್ತರಿಸಿ ಅಧಿಸೂಚನೆ
ದೇಶದಲ್ಲಿ ಲಾಕ್ ಡೌನ್ ಮತ್ತು ಸರ್ಕಾರಿ ಸಾರಿಗೆ ಕಚೇರಿಗಳನ್ನು ಮುಚ್ಚಿರುವುದರಿಂದ ಕೇಂದ್ರ ಮೋಟಾರು ವಾಹನ ನಿಯಮ 1989 ರ ನಿಯಮ 32 ಮತ್ತು 81 ರ ಪ್ರಕಾರ ಪಾವತಿಸಬೇಕಾದ ವಿವಿಧ ಶುಲ್ಕಗಳು / ತಡವಾದ ಶುಲ್ಕಗಳಿಗೆ ಸಂಬಂಧಿಸಿದಂತೆ ನಾಗರಿಕರು ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂಬುದು ಸರ್ಕಾರದ ಗಮನಕ್ಕೆ ಬಂದಿದೆ. ಸೇವೆ ಅಥವಾ ನವೀಕರಣಕ್ಕಾಗಿ ಈಗಾಗಲೇ ಶುಲ್ಕವನ್ನು ಪಾವತಿಸಿದ್ದು, ಆದರೆ ಲಾಕ್ಡೌನ್ ಕಾರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಿರುವುದಿಲ್ಲ. ಇದಲ್ಲದೆ, ಆರ್ಟಿಒ ಕಚೇರಿಗಳನ್ನು ಮುಚ್ಚಿರುವುದರಿಂದ ನಾಗರಿಕರು ಶುಲ್ಕವನ್ನು ಪಾವತಿ ಮಾಡಲು ಸಮಸ್ಯೆಗಳಾಗಿವೆ. ಇದನ್ನು ಗಮನಿಸಿ ನಾಗರಿಕರಿಗೆ ಅನುಕೂಲವಾಗುವಂತೆ ರಸ್ತೆ ಸಾರಿಗೆ ಸಚಿವಾಲಯವು ಆದೇಶವೊಂದನ್ನು ಹೊರಡಿಸಿದ್ದು, ಕೋವಿಡ್-19 ರ ಅವಧಿಯಲ್ಲಿ ನವೀಕರಣ ಸೇರಿದಂತೆ ಇನ್ನಿತರ ಸೇವೆಗಳಿಗಾಗಿ 2020 ರ ಫೆಬ್ರವರಿ 1 ರಂದು ಅಥವಾ ನಂತರ ಶುಲ್ಕವನ್ನು ಪಾವತಿಸಿದ್ದು, ಕೋವಿಡ್-19 ರ ಕಾರಣದಿಂದಾಗಿ ಅಂತಹ ಪಾವತಿ ಪ್ರಕ್ರಿಯೆ ಪೂರ್ಣಗೊಳ್ಳದೇ ಇದ್ದಲ್ಲಿ, ಪಾವತಿಸಿದ ಶುಲ್ಕಗಳು ಮಾನ್ಯವಾಗಿ ಮುಂದುವರಿಯುತ್ತವೆ ಎಂದು ಹೇಳಿದೆ.
ವಿವರಗಳಿಗಾಗಿ: https://pib.gov.in/PressReleseDetail.aspx?PRID=1626568
ಮಿಷನ್ ಸಾಗರ್ - ಮಾರಿಷಸ್ ನ ಪೋರ್ಟ್ ಲೂಯಿಸ್ ತಲುಪಿದ ಐಎನ್ಎಸ್ ಕೇಸರಿ
ಮಿಷನ್ ಸಾಗರ್ ಭಾಗವಾಗಿ, ಭಾರತೀಯ ನೌಕಾ ಪಡೆಯ ಹಡಗು ಕೇಸರಿ, 23 ಮೇ 2020 ರಂದು ಮಾರಿಷಸ್ ನ ಪೋರ್ಟ್ ಲೂಯಿಸ್ ತಲುಪಿತು. ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಎದುರಿಸಲು ಮಿತ್ರ ರಾಷ್ಟ್ರಗಳಿಗೆ ಭಾರತ ಸರ್ಕಾರ ನೆರವು ನೀಡುತ್ತಿದೆ. ಇದರ ಅಂಗವಾಗಿ ಭಾರತೀಯ ನೌಕಾಪಡೆ ಹಡಗು ಕೇಸರಿ, ಮಾರಿಷಸ್ನ ಜನರಿಗಾಗಿ ಕೋವಿಡ್ ಸಂಬಂಧಿತ ಅಗತ್ಯ ಔಷಧಿಗಳು ಮತ್ತು ಆಯುರ್ವೇದ ಔಷಧಿಗಳ ವಿಶೇಷ ಸರಕು ಹೊತ್ತು ಅಲ್ಲಿಗೆ ತಲುಪಿದೆ.
ವಿವರಗಳಿಗಾಗಿ: https://pib.gov.in/PressReleseDetail.aspx?PRID=1626465
ಜಾನ್ ಮತ್ತು ಜಹಾನ್ ಗಾಗಿ ವನ್ ಧನ್: ಶಹಾಪುರದ ಕಟ್ಕರಿ ಬುಡಕಟ್ಟಿನ ಕಥೆ
ವಿವರಗಳಿಗಾಗಿ: https://pib.gov.in/PressReleseDetail.aspx?PRID=1626550
ಪಿ ಐ ಬಿ ಕ್ಷೇತ್ರೀಯ ಕಚೇರಿಗಳ ವರದಿ
- ಪಂಜಾಬ್: ದೇಶದಲ್ಲಿ ಪಂಜಾಬ್ ಅತಿ ಹೆಚ್ಚು ಶೇ.90ರಷ್ಟು ಚೇತರಿಕೆ ದರವನ್ನು ದಾಖಲಿಸಿದ್ದರೂ ಸಮಾಧಾನವಾಗಿರುವುದನ್ನು ತಳ್ಳಿಹಾಕಿರುವ ಪಂಜಾಬ್ ಮುಖ್ಯಮಂತ್ರಿ, ದೇಶೀಯ ವಿಮಾನಗಳು, ರೈಲುಗಳು ಮತ್ತು ಬಸ್ಸುಗಳಲ್ಲಿ ರಾಜ್ಯಕ್ಕೆ ಬರುವ ಎಲ್ಲ ವ್ಯಕ್ತಿಗಳನ್ನು ಕಡ್ಡಾಯವಾಗಿ 14 ದಿನಗಳ ಕಾಲ ಹೋಂ ಕ್ಯಾರೆಂಟೈನ್ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಎಲ್ಲಾ ರಾಜ್ಯ ಮತ್ತು ಜಿಲ್ಲಾ ಗಡಿ ಪ್ರವೇಶ ಕೇಂದ್ರಗಳಲ್ಲಿ, ರೈಲ್ವೆ ನಿಲ್ದಾಣಗಳು ಮತ್ತು ವಿಮಾನ ನಿಲ್ದಾಣಗಳಲ್ಲಿ ರಾಜ್ಯಕ್ಕೆ ಪ್ರವೇಶಿಸುವವರ ಸ್ಕ್ರೀನಿಂಗ್ ಅನ್ನು ಮಾಡಲಾಗುತ್ತದೆ, ಮತ್ತು ರೋಗಲಕ್ಷಣ ಕಂಡುಬಂದವರನ್ನು ಸಾಂಸ್ಥಿಕ ಕ್ವಾರಂಟೈನ್ ಗೆ ಕಳುಹಿಸಲಾಗುವುದು, ಉಳಿದವರಿಗೆ ಕಡ್ಡಾಯವಾಗಿ 2 ವಾರಗಳ ಹೋಂ ಕ್ವಾರಂಟೈನ್ ಮಾಡಬೇಕಾಗುತ್ತದೆ.
- ಹರಿಯಾಣ: ಕೋವಿಡ್-19 ಅವಧಿಯಲ್ಲಿ ಖಾಸಗಿ ಶಾಲೆಗಳು ವಿಧಿಸುವ ಶುಲ್ಕಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಶಾಲಾ ಶಿಕ್ಷಣ ಇಲಾಖೆ ಹೊರಡಿಸಿದೆ. ಖಾಸಗಿ ಶಾಲೆಗಳಿಗೆ ಮಾಸಿಕ ಆಧಾರದ ಮೇಲೆ ಬೋಧನಾ ಶುಲ್ಕವನ್ನು ಮಾತ್ರ ವಿಧಿಸಲು ನಿರ್ದೇಶಿಸಲಾಗುತ್ತದೆ ಮತ್ತು ಕೋವಿಡ್-19 ಪರಿಸ್ಥಿತಿಯಿಂದಾಗಿ ಕಟ್ಟಡ ನಿಧಿಗಳು, ನಿರ್ವಹಣಾ ನಿಧಿಗಳು, ಪ್ರವೇಶ ಶುಲ್ಕಗಳು, ಕಂಪ್ಯೂಟರ್ ಶುಲ್ಕಗಳು ಮುಂತಾದ ಇತರ ರೀತಿಯ ಎಲ್ಲ ಹಣ ಪಾವತಿಯನ್ನು ಮುಂದೂಡಲಾಗುತ್ತದೆ. ಲಾಕ್ ಡೌನ್ ಅವಧಿಯಲ್ಲಿ ಎಲ್ಲ ಖಾಸಗಿ ಶಾಲೆಗಳಿಗೆ ಬೋಧನಾ ಶುಲ್ಕ, ಪ್ರಯಾಣ ಶುಲ್ಕ ಹೆಚ್ಚಿಸದಂತೆ, ಶಾಲಾ ಸಮವಸ್ತ್ರ ಮತ್ತು ಪಠ್ಯಪುಸ್ತಕಗಳನ್ನು ಬದಲಾಯಿಸದಂತೆ ನಿರ್ದೇಶಿಸಲಾಗಿದೆ.
- ಹಿಮಾಚಲ ಪ್ರದೇಶ: ದೇಶದಲ್ಲಿ ಮತ್ತು ರಾಜ್ಯದಲ್ಲಿ ಮಾರಕ ಕರೋನಾ ವೈರಸ್ ಹರಡಿದ ಕಾರಣ ಲಾಕ್ ಡೌನ್ ವಿಧಿಸಲಾಗಿರುವ ಹಿನ್ನೆಲೆಯಲ್ಲಿ, ಹಿಮಾಚಲ ಪ್ರದೇಶದ ಖಾಸಗಿ ಶಾಲೆಗಳಿಗೆ ಬೋಧನಾ ಶುಲ್ಕವನ್ನು ಮಾತ್ರ ವಿಧಿಸಲು ಅವಕಾಶವಿರುತ್ತದೆ.
- ಕೇರಳ: ಮತ್ತೊಬ್ಬ ರೋಗಿಯು ಇಂದು ಕೋವಿಡ್ ಗೆ ಬಲಿಯಾದ್ದಾರೆ: ಇತ್ತೀಚೆಗೆ ದುಬೈನಿಂದ ಮರಳಿದ 53 ವರ್ಷದ ಮಹಿಳಾ ಕ್ಯಾನ್ಸರ್ ರೋಗಿಯು ಇಂದು ಮಧ್ಯಾಹ್ನ ಕೋಳಿಕೋಡ್ ಎಂಸಿಯಲ್ಲಿ ನಿಧನರಾಗಿದ್ದಾರೆ. ಚೆನ್ನೈನಿಂದ ಹಿಂದಿರುಗಿದ ಮತ್ತು ಸೋಂಕು ದೃಢಪಟ್ಟಿರುವ 17 ವರ್ಷದ ಬಾಲಕ ಇಂದು ಕಣ್ಣೂರಿನ ಪರಿಯಾರಂ ಎಂಸಿಯಲ್ಲಿ ನಿಧನರಾದರು; ಆದಾಗ್ಯೂ ಆಸ್ಪತ್ರೆಯ ಅಧಿಕಾರಿಗಳು ಸೆರೆಬ್ರಲ್ ಸೋಂಕು ಸಾವಿಗೆ ಕಾರಣ ಎಂದಿದ್ದಾರೆ. ಅಬುಧಾಬಿಯಲ್ಲಿ ಇಬ್ಬರು ಕೇರಳಿಗರು ಕೋವಿಡ್-19 ಗೆ ಬಲಿಯಾಗಿದ್ದಾರೆ, ಕೊಲ್ಲಿ ಪ್ರದೇಶದಲ್ಲಿರುವ ಕೇರಳಿಗರ ಒಟ್ಟು ಸಾವಿನ ಸಂಖ್ಯೆ 105 ಕ್ಕೆ ಏರಿದೆ. ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಪ್ರತಿದಿನ ಹೆಚ್ಚಿನ ಕೋವಿಡ್ ಪ್ರಕರಣಗಳು ವರದಿಯಾಗುತ್ತಿರುವುದರಿಂದ, ಕಣ್ಗಾವಲಿನಲ್ಲಿರುವವರು ಕ್ವಾರಂಟೈನ್ ನಿಯಮ ಉಲ್ಲಂಘಿಸಬಾರದು ಎಂದು ಎಚ್ಚರಿಸಿದ್ದಾರೆ. ಇತರ ರಾಜ್ಯಗಳಿಂದ ವಲಸಿಗರು ಮತ್ತು ಕೇರಳಿಗರು ಬರುತ್ತಿರುವುದರಿಂದ ಎದುರಾಗಿರುವ ಸಮಸ್ಯೆ ಪರಿಹರಿಸಲು ರಾಜ್ಯವು ವಿಸ್ತೃತ ಯೋಜನೆಗಳನ್ನು ರೂಪಿಸಿದೆ ಎಂದು ಅವರು ಹೇಳಿದ್ದಾರೆ. ರಾಜ್ಯದಲ್ಲಿ ನಿನ್ನೆ 62 ಕೋವಿಡ್ -19 ಪ್ರಕರಣಗಳು ವರದಿ ಆಗಿವೆ. ಒಟ್ಟು ಕೋವಿಡ್ ಸಾವುಗಳು ಇಲ್ಲಿಯವರೆಗೆ ಐದು ತಲುಪಿದೆ.
- ತಮಿಳುನಾಡು: ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಇನ್ನೂ ಮೂರು ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸಕ್ರಿಯ ಪ್ರಕರಣಗಳು 25 ಕ್ಕೆ ಏರಿವೆ. ತಮಿಳುನಾಡು ಮುಖ್ಯಮಂತ್ರಿ ರಾಜ್ಯದಲ್ಲಿ ಸಮುದಾಯ ಹರಡುವಿಕೆ ಆಗಿಲ್ಲ ಎಂದು ಹೇಳಿದ್ದಾರೆ; ಚೆನ್ನೈನಲ್ಲಿ ಜನನಿಬಿಡ ಕಂಟೈನ್ಮೆಂಟ್ ವಲಯಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ಹಣಕಾಸು ಇಲಾಖೆ ಸಿದ್ಧಪಡಿಸಿದ ಅಂದಾಜು ಉಲ್ಲೇಖಿಸಿ ರಾಜ್ಯವು ಲಾಕ್ ಡೌನ್ ನಿಂದಾಗಿ 35,000 ಕೋಟಿ ರೂ. ಆದಾಯ ನಷ್ಟ ಅನುಭವಿಸಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ನಿನ್ನೆ ತನಕ ಒಟ್ಟು ಪ್ರಕರಣಗಳು: 15,512, ಸಕ್ರಿಯ ಪ್ರಕರಣಗಳು: 7915, ಸಾವು: 103, ಬಿಡುಗಡೆ: 7491. ಚೆನ್ನೈನಲ್ಲಿ ಸಕ್ರಿಯ ಪ್ರಕರಣಗಳು 5865.
- ಕರ್ನಾಟಕ: 97 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ ಮತ್ತು ಇಂದು ಮಧ್ಯಾಹ್ನ 12 ರವರೆಗೆ 25 ಜನರು ಬಿಡುಗಡೆಯಾಗಿದ್ದಾರೆ; ಚಿಕ್ಕಬಳ್ಳಾಪುರ 26, ಉಡುಪಿ 18, ಹಾಸನ 14, ಮಂಡ್ಯ 15, ದಾವಣಗೆರೆ 4, ಕಲ್ಬುರ್ಗಿ ಮತ್ತು ಯಾದಗಿರಿಯಲ್ಲಿ ತಲಾ ಆರು, ಉತ್ತರ ಕನ್ನಡ 3, ತುಮಕೂರು 2, ವಿಜಯಪುರ, ಕೊಡಗು ಮತ್ತು ಧಾರವಾಡದಲ್ಲಿ ತಲಾ ಒಂದು. ರಾಜ್ಯದಲ್ಲಿ ಒಟ್ಟು ಸೋಂಕಿನ ಪ್ರಕರಣಗಳು 2056ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳು: 1378, ಗುಣವಾದವರು: 634, ಸಾವು: 42. ಸಂಪೂರ್ಣ ಲಾಕ್ ಡೌನ್ ಇಂದು ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಜಾರಿಯಾಗಿದೆ; ಅಗತ್ಯ ಸೇವೆಗಳಿಗೆ ಮಾತ್ರ ಅನುಮತಿಸಲಾಗಿತ್ತು.
- ಆಂಧ್ರಪ್ರದೇಶ: ‘ಮನಪಲಾನಾ – ಮೀ ಸೂಚನಾ’ ಕಾರ್ಯಕ್ರಮದಡಿ ಸೋಮವಾರದಿಂದ ಶುಕ್ರವಾರದವರೆಗೆ ಆಡಳಿತದಲ್ಲಿರುವ ಜನರಿಂದ ಪ್ರತಿಕ್ರಿಯೆ ಪಡೆದುಕೊಳ್ಳಲು ರಾಜ್ಯ ಯೋಜಿಸಿದೆ. ಪ್ರಕಾಶಂ ಜಿಲ್ಲೆಯಲ್ಲಿ ತೀವ್ರತರವಾದ ತಾಪಮಾನ ಹೆಚ್ಚಳದಿಂದ ಬಿರು ಬಿಸಿಲಿಗೆ ಇಬ್ಬರು ಬಲಿಯಾಗಿದ್ದಾರೆ. ರಾಜ್ಯಾದ್ಯಂತ ಬಿಸಿವಾತಾವರಣ ಇದೆ. ಏತನ್ಮಧ್ಯೆ, ಬೇಸಿಗೆಯ ತಾಪಮಾನವು ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಿದ ಕಾರಣ ಎಸಿ ಬಸ್ಸುಗಳು ಮತ್ತು ರಾತ್ರಿಯ ಸೇವೆಗಳನ್ನು ನಿರ್ವಹಿಸಲು ಆರ್.ಟಿಸಿ ನಿರ್ಧರಿಸಿದೆ. 11,357 ಮಾದರಿಗಳನ್ನು ಪರೀಕ್ಷಿಸಿದ ನಂತರ ಕಳೆದ 24 ಗಂಟೆಗಳಲ್ಲಿ 66 ಹೊಸ ಪ್ರಕರಣಗಳು ವರದಿಯಾಗಿದ್ದು, 29 ಜನರನ್ನು ಬಿಡುಗಡೆ ಮಾಡಲಾಗಿದೆ. ಒಟ್ಟು ಪ್ರಕರಣಗಳು: 2627. ಸಕ್ರಿಯಪ್ರಕರಣಗಳು: 764, ಬಿಡುಗಡೆಯಾದವರು: 1807, ಸಾವು: 56. ಇತರ ರಾಜ್ಯಗಳಿಂದ ಹಿಂದಿರುಗಿದವರಲ್ಲಿ 153 ಸೋಂಕಿನ ಪ್ರಕರಣಗಳಿದ್ದು 119 ಸಕ್ರಿಯವಾಗಿವೆ.
- ತೆಲಂಗಾಣ: ಮೇ 1 ರಿಂದ ಇಲ್ಲಿಯವರೆಗೆ, ರಾಜ್ಯದಿಂದ ದಕ್ಷಿಣ ಮಧ್ಯ ರೈಲ್ವೆ 196 ಶ್ರಮಿಕ ವಿಶೇಷ ರೈಲುಗಳನ್ನು ಓಡಿಸಿದ್ದು 2.40 ಲಕ್ಷ ವಲಸೆ ಕಾರ್ಮಿಕರನ್ನು ಅವರ ಗಮ್ಯ ಸ್ಥಳಗಳಿಗೆ ಸಾಗಿಸಿದೆ. ತಮ್ಮ ತವರು ಪಟ್ಟಣಕ್ಕೆ ಮರಳಲು ಬಯಸಿದ ವಲಸೆ ಕಾರ್ಮಿಕರ ನೆರವಿಗೆ ಬಂದ ತೆಲಂಗಾಣ ಸರ್ಕಾರವು 46 ರೈಲುಗಳನ್ನು ಓಡಿಸಲು ಮತ್ತು 50,000 ಕಾರ್ಮಿಕರಿಗೆ ತಮ್ಮ ಮನೆ ತಲುಪಲು ಸಹಾಯ ಮಾಡುವ ಪ್ರಮುಖ ಕಾರ್ಯಾಚರಣೆಯನ್ನು ಶನಿವಾರ ಆಯೋಜಿಸಿತ್ತು. ಮೇ 24 ರ ತನಕ ರಾಜ್ಯದಲ್ಲಿ ಒಟ್ಟು ಸೋಂಕಿನ ಪ್ರಕರಣಗಳು 1813 ಆಗಿತ್ತು. ನಿನ್ನೆ ತನಕ ವಲಸೆ ಬಂದವರಲ್ಲಿ 133 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ವಿದೇಶದಿಂದ ಮರಳಿದ ನಾಲ್ವರಲ್ಲಿ ಸಹ ಕೋವಿಡ್ -19 ಸೋಂಕು ದೃಢಪಟ್ಟಿದೆ.
- ಮಹಾರಾಷ್ಟ್ರ: ರಾಜ್ಯದಲ್ಲಿ 2,608 ಹೊಸ ಸೋಂಕಿತ ರೋಗಿಗಳು ವರದಿಯಾಗಿದ್ದು, ಇದು ಕೋವಿಡ್-19 ಸೋಂಕಿತ ರೋಗಿಗಳ ಸಂಖ್ಯೆಯನ್ನು 47,190 ಕ್ಕೆ ಹೆಚ್ಚಿಸಿದೆ, ಅದರಲ್ಲಿ 32,201 ಸಕ್ರಿಯ ರೋಗಿಗಳಿದ್ದಾರೆ. ಹಾಟ್ ಸ್ಪಾಟ್ ಮುಂಬೈನಲ್ಲಿ 1,566 ಹೊಸ ಪ್ರಕರಣಗಳನ್ನು ವರದಿ ಆಗಿದ್ದು, ನಗರದಿಂದ ವರದಿಯಾದ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆಯನ್ನು 28,634 ಕ್ಕೆ ಹೆಚ್ಚಿಸಿದೆ.
- ಗುಜರಾತ್: ಗುಜರಾತ್ ನಲ್ಲಿ, ವಿಶೇಷವಾಗಿ ಅಹಮದಾಬಾದ್ ನಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಲೇ ಇವೆ. 19 ಜಿಲ್ಲೆಗಳಿಂದ ಒಟ್ಟು 396 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 13,689 ಕ್ಕೆ ತಲುಪಿದೆ. ಅಹಮದಾಬಾದ್ನಲ್ಲಿ 277 ಹೊಸ ಪ್ರಕರಣಗಳು ವರದಿಯಾಗಿವೆ. ಲಾಕ್ ಡೌನ್ 4.0 ರ ಸಮಯದಲ್ಲಿ ರಾಜ್ಯದಲ್ಲಿ ಸುಮಾರು 25 ಲಕ್ಷ ಜನರಿಗೆ ಉದ್ಯೋಗ ನೀಡುವ 3 ಲಕ್ಷಕ್ಕೂ ಹೆಚ್ಚು ವ್ಯಾಪಾರ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ನಿರ್ಬಂಧಗಳನ್ನು ಮತ್ತಷ್ಟು ಸಡಿಲಗೊಳಿಸಲಾಗಿದೆ.
- ರಾಜಸ್ಥಾನ: ಕೋವಿಡ್ 19 ಸೋಂಕಿತ ರೋಗಿಗಳ ಸಂಖ್ಯೆ ರಾಜ್ಯದಲ್ಲಿ 2,829 ಕ್ಕೆ ಏರಿದೆ. ಒಟ್ಟು ಸಕ್ರಿಯ ರೋಗಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ವಿವಿಧ ರಾಜ್ಯಗಳಿಂದ ಹಿಂದಿರುಗಿದ ವಲಸಿಗರಾಗಿದ್ದಾರೆ. ರಾಜ್ಯದಲ್ಲಿ ವರದಿಯಾದ ಒಟ್ಟು ಪ್ರಕರಣಗಳ ಸಂಖ್ಯೆ 6,794. ಏತನ್ಮಧ್ಯೆ, 21 ವಿಮಾನಗಳು ಜೈಪುರದಿಂದ 13 ವಿವಿಧ ನಗರಗಳಿಗೆ ನಾಳೆಯಿಂದ ಪುನರಾರಂಭಗೊಳ್ಳಲಿವೆ.
- ಮಧ್ಯಪ್ರದೇಶ: 201 ಹೊಸ ಪ್ರಕರಣಗಳು ವರದಿಯಾಗಿದ್ದು, ಇದು ಕೋವಿಡ್-19 ಸೋಂಕಿನ ಪ್ರಕರಣಗಳ ಸಂಖ್ಯೆಯನ್ನು 6,371 ಕ್ಕೆ ಏರಿಕೆ ಮಾಡಿದೆ. ಇಂದೋರ್ ನಲ್ಲಿ ಅತಿ ಹೆಚ್ಚು ಪ್ರಕರಣಗಳು 2,933 ವರದಿಯಾಗಿವೆ. ಎಡಪಂಥೀಯ ಉಗ್ರಗಾಮಿತ್ವದಿಂದ ಪೀಡಿತವಾದ ಬಾಲಘಾಟ್ ಜಿಲ್ಲೆಯು ಮನ್ರೇಗಾ ಅಡಿಯಲ್ಲಿ ಗ್ರಾಮೀಣ ಉದ್ಯೋಗ ಕಾರ್ಡ್ ಹೊಂದಿರುವವರಿಗೆ ಉದ್ಯೋಗ ನೀಡುವ ವಿಷಯದಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದೆ. 1.23 ಲಕ್ಷ ಜನರಿಗೆ ಉದ್ಯೋಗ ಒದಗಿಸಲಾಗಿದೆ.
- ಛತ್ತೀಸಗಢ: ದಾಖಲೆಯ 44 ಹೊಸ ಪ್ರಕರಣಗಳು ಛತ್ತೀಸಗಢದಲ್ಲಿ ವರದಿಯಾಗಿವೆ, ಇದು ಕೋವಿಡ್ 19 ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು 152 ಕ್ಕೆ ಹೆಚ್ಚಳ ಮಾಡಿದೆ. ರಾಜ್ಯದ ಒಟ್ಟು ಕೊರೊನಾ ವೈರಸ್ ಸೋಂಕಿನ ಪ್ರಕರಣಗಳ ಸಂಖ್ಯೆ 214 ಕ್ಕೆ ಏರಿದೆ.
- ಗೋವಾ: ಒಂದು ಹೊಸ ಕೋವಿಡ್-19 ಸೋಂಕಿನ ಪ್ರಕರಣ ವರದಿಯಾಗಿದೆ, ಇದು ಸೋಂಕಿತ ರೋಗಿಗಳ ಸಂಖ್ಯೆಯನ್ನು 55 ಕ್ಕೆ ಹೆಚ್ಚಿಸಿದ್ದು, ಅದರಲ್ಲಿ 39 ಸಕ್ರಿಯ ಪ್ರಕರಣಗಳಿವೆ. ಗೋವಾದಲ್ಲಿ ಬಹುತೇಕ ಎಲ್ಲಾ ಹೊಸ ಪ್ರಕರಣಗಳು ಹೊರಗಿನಿಂದ ಬರುವ ಜನರದ್ದೇ ಆಗಿದೆ.
- ಅರುಣಾಚಲ ಪ್ರದೇಶ: ಕನಿಷ್ಠ ಸಿಬ್ಬಂದಿ ಮಾತ್ರ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಸಾಮಾನ್ಯ ಆಡಳಿತ ಕಾರ್ಯದರ್ಶಿ ಹೇಳಿದ್ದಾರೆ. ಅಗತ್ಯವಿದ್ದರೆ, ಮಹಿಳಾ ಉದ್ಯೋಗಿಗಳು ಮಕ್ಕಳ ಆರೈಕೆ ರಜೆ ಪಡೆಯಬಹುದು ಎಂದೂ ತಿಳಿಸಿದ್ದಾರೆ.
- ಮಣಿಪುರ: ರಾಜ್ಯದಲ್ಲಿ ಇನ್ನೂ ಮೂವರಲ್ಲಿ ಸೋಂಕು ದೃಢಪಟ್ಟಿದೆ. ಎಲ್ಲರೂ ಇತ್ತೀಚಿಗೆ ರಾಜ್ಯಕ್ಕೆ ಮರಳಿದವರು. ರಾಜ್ಯದಲ್ಲಿ ಈಗ 28 ಸಕ್ರಿಯ ಪ್ರಕರಣಗಳಿವೆ. ನಾಗರಿಕ ವಿಮಾನಯಾನ ಸಂಚಾರ ಆರಂಭಕ್ಕೆ ಮುನ್ನ ಮುನ್ನ ಇಂಫಾಲ್ ವಿಮಾನ ನಿಲ್ದಾಣವು ಎಸ್.ಒಪಿ ಪೂರ್ವಾಭ್ಯಾಸವನ್ನು ನಡೆಸಿತು.
- ಮಿಜೋರಾಂ: ಐಜಾಲ್ ನ ಲೆಂಗ್ ಪುಯಿ ವಿಮಾನ ನಿಲ್ದಾಣದಲ್ಲಿ ನಿನ್ನೆ ಥರ್ಮಲ್ ಮತ್ತು ಆಪ್ಟಿಕಲ್ ಬೈ-ಸ್ಪೆಕ್ಟ್ರಮ್ ಕ್ಯಾಮೆರಾವನ್ನು ಸ್ಥಾಪಿಸಲಾಗಿದೆ. ಲೆಂಗ್ ಪುಯಿ ವಿಮಾನ ನಿಲ್ದಾಣ ಈಗ ಪ್ರಯಾಣಿಕರ ಥರ್ಮಲ್ ತಪಾಸಣೆಗೆ ಸುಧಾರಿತ ವ್ಯವಸ್ಥೆ ಒಳಗೊಂಡ ಭಾರತದ 4 ವಿಮಾನ ನಿಲ್ದಾಣಗಳಲ್ಲಿ ಒಂದಾಗಿದ್ದು, ಈ ವ್ಯವಸ್ಥೆ ಹೊಂದಿರುವ ಈಶಾನ್ಯ ರಾಜ್ಯಗಳ ಮೊದಲ ನಿಲ್ದಾಣವಾಗಿದೆ.
- ನಾಗಾಲ್ಯಾಂಡ್: ಕೃಷಿ ಇಲಾಖೆಯ ಅಧಿಕಾರಿಗಳು ಮೊಕೋಕ್ ಚುಂಗ್ ನ ರೈತರೊಂದಿಗೆ ಸಂವಾದ ನಡೆಸಿದ್ದು, ಕೋವಿಡ್-19 ಕುರಿತಂತೆ ಅವರಿಗೆ ಜಾಗೃತಿ ಮೂಡಿಸಿದರು ಮತ್ತು ಕೋವಿಡ್-19 ತಡೆಗೆ ಸಂಬಂಧಿಸಿದ ಮುನ್ನೆಚ್ಚರಿಕೆ ಮತ್ತು ಸೂಚನೆಗಳನ್ನು ತಿಳಿಯಪಡಿಸಿದರು.
***
(Release ID: 1626670)
Visitor Counter : 391
Read this release in:
English
,
Urdu
,
Hindi
,
Marathi
,
Assamese
,
Manipuri
,
Bengali
,
Punjabi
,
Gujarati
,
Tamil
,
Malayalam