ಗೃಹ ವ್ಯವಹಾರಗಳ ಸಚಿವಾಲಯ

ದೇಶಾದ್ಯಂತ ಹಲವೆಡೆ ಎಂಎಚ್ಎ ಮಾರ್ಗಸೂಚಿಗಳ ಉಲ್ಲಂಘನೆ ಪ್ರಕರಣಗಳ ವರದಿ

Posted On: 21 MAY 2020 7:44PM by PIB Bengaluru

ದೇಶಾದ್ಯಂತ ಹಲವೆಡೆ ಎಂಎಚ್ಎ ಮಾರ್ಗಸೂಚಿಗಳ ಉಲ್ಲಂಘನೆ ಪ್ರಕರಣಗಳ ವರದಿ

ಕೋವಿಡ್-19 ನಿಯಂತ್ರಣಕ್ಕೆ ಎಲ್ಲ ಕ್ರಮಗಳನ್ನು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು: ಸ್ಥಳೀಯ ಅಧಿಕಾರಿಗಳು ಮಾರ್ಗಸೂಚಿ ಜಾರಿಗೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳಬೇಕು: ಎಂಎಚ್ಎ

 

ಕೋವಿಡ್-19 ಹರಡುವುದನ್ನು ನಿಯಂತ್ರಿಸಲು ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಅತ್ಯಗತ್ಯವಾಗಿದೆ. ಆದರೆ ದೇಶಾದ್ಯಂತ ಹಲವು ಸ್ಥಳಗಳಲ್ಲಿ ಎಂಎಚ್ಎ ಮಾರ್ಗಸೂಚಿಗಳ ಉಲ್ಲಂಘನೆಯಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಅವುಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ(ಎಂಎಚ್ಎ) ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರವನ್ನು ಬರೆದಿದ್ದು, ಸಚಿವಾಲಯದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದೆ ಹಾಗೂ ಅದನ್ನು ಖಾತ್ರಿಪಡಿಸಲು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಎಲ್ಲಾ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ನಿರ್ದೇಶಿಸಿದೆ.

ಸದ್ಯ ಎಂಎಚ್ಎ ಮಾರ್ಗಸೂಚಿಗಳಿಗೆ ಅನುಗುಣವಾಗಿ ನಾನಾ ವಲಯಗಳನ್ನು ರೂಪಿಸುವ ಅಧಿಕಾರವನ್ನು ಮತ್ತು ಚಟುವಟಿಕೆಗಳನ್ನು ನಿಷೇಧಿಸುವ ನಿರ್ಧಾರಗಳನ್ನು ಕೈಗೊಳ್ಳಲು ಹಾಗೂ ನಿರ್ಬಂಧಗಳನ್ನು ಮುಂದುವರಿಸುವ ಅಧಿಕಾರವನ್ನು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗಿದೆ. ಸಂವಹನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ(ಎಂಒಎಚ್ಎಫ್ ಡಬ್ಲ್ಯೂ) ಮಾರ್ಗಸೂಚಿಗಳನ್ನು ಸೂಕ್ತವಾಗಿ ಪಾಲಿಸಿ ನಿರ್ಬಂಧಿತ ವಲಯಗಳನ್ನು ರೂಪಿಸಬೇಕು ಎಂದು ಆದೇಶಿಸಲಾಗಿದೆ ಹಾಗೂ ವಲಯಗಳಲ್ಲಿ ಕೋವಿಡ್-19 ಹರಡುವುದನ್ನು ತಪ್ಪಿಸಲು ಪರಿಣಾಮಕಾರಿಯಾಗಿ ನಿರ್ಬಂಧಿತ ಕ್ರಮಗಳನ್ನು ಪಾಲಿಸಬೇಕು. ನಿಯಮಾವಳಿ ಉಲ್ಲಂಘನೆಯಾದರೆ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸೋಂಕು ಹರಡುವ ಅಪಾಯವನ್ನು ತಗ್ಗಿಸಲು ಮತ್ತು ವ್ಯಕ್ತಿಗತ ಅಂತರವನ್ನು ಖಾತ್ರಿಪಡಿಸಲು ರಾತ್ರಿ ಕರ್ಫ್ಯೂವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಸಂವಹನದಲ್ಲಿ ತಿಳಿಸಲಾಗಿದೆ. ಅದರಂತೆ ಸ್ಥಳೀಯ ಅಧಿಕಾರಿಗಳು ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಅಲ್ಲದೆ ಕೋವಿಡ್-19 ನಿರ್ವಹಣೆ ಕುರಿತಂತೆ ರಾಷ್ಟ್ರೀಯ ನಿರ್ದೇಶನಗಳನ್ನು ಜಾರಿಗೊಳಿಸುವುದು ಜಿಲ್ಲಾ ಹಾಗೂ ಸ್ಥಳೀಯ ಅಧಿಕಾರಿಗಳ ಕರ್ತವ್ಯ ಎಂದು ಆದೇಶದಲ್ಲಿ ಪುನರುಚ್ಚರಿಸಲಾಗಿದೆ. ಅಲ್ಲದೆ ಜನರು ಮಾಸ್ಕ್ ಧರಿಸುವುದನ್ನು, ದುಡಿಯುವ ಜಾಗಗಳು, ಸಾರಿಗೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವುದನ್ನು ಖಾತ್ರಿಪಡಿಸಬೇಕು. ಶುಚಿತ್ವ ಕಾಪಾಡುವುದು ಹಾಗೂ ನೈರ್ಮಲೀಕರಣ ಕಾಯ್ದುಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆದೇಶಿಸಲಾಗಿದೆ.

ಅಧಿಕೃತ ಸಂವಹ ಪತ್ರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

 

***


(Release ID: 1625886) Visitor Counter : 234