ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ವಿಡಿಯೋ ಕಾನ್ಫರೆನ್ಸ್ ಮೂಲಕ 73ನೇ ವಿಶ್ವ ಆರೋಗ್ಯ ಸಭೆಯಲ್ಲಿ ಭಾಗವಹಿಸಿದ ಡಾ. ಹರ್ಷವರ್ಧನ್
Posted On:
18 MAY 2020 8:27PM by PIB Bengaluru
ವಿಡಿಯೋ ಕಾನ್ಫರೆನ್ಸ್ ಮೂಲಕ 73ನೇ ವಿಶ್ವ ಆರೋಗ್ಯ ಸಭೆಯಲ್ಲಿ ಭಾಗವಹಿಸಿದ ಡಾ. ಹರ್ಷವರ್ಧನ್
ಕೋವಿಡ್-19 ನಿರ್ವಹಣೆ ನಿಟ್ಟಿನಲ್ಲಿ ಭಾರತ ಕೈಗೊಂಡಿರುವ ಸಕಾಲಿಕ, ವರ್ಗೀಕೃತ ಮತ್ತು ಕ್ರಿಯಾಶೀಲ ಕ್ರಮಗಳ ಪ್ರಸ್ತಾವ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ 73ನೇ ವಿಶ್ವ ಆರೋಗ್ಯ ಅಸೆಂಬ್ಲಿಯಲ್ಲಿ(ಡಬ್ಲ್ಯೂಎಚ್ಎ) ಭಾಗವಹಿಸಿದ್ದರು. ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್ಒ)ಯ ಮಹಾನಿರ್ದೇಶಕರ ಭಾಷಣಕ್ಕೆ ಪ್ರತಿಯಾಗಿ ಡಾ. ಹರ್ಷವರ್ಧನ್ ಅವರು ಮಾಡಿದ ಭಾಷಣ ಹೀಗಿದೆ.
“ವಿಶ್ವ ಆರೋಗ್ಯ ಅಸೆಂಬ್ಲಿಯ ಗೌರವಾನ್ವಿತ ಅಧ್ಯಕ್ಷರಾದ ಶ್ರೀಮತಿ ಕೆವಾ ಬೈನ್, ಡಬ್ಲ್ಯೂಎಚ್ಒದ ಮಹಾ ಪ್ರಧಾನ ಕಾರ್ಯದರ್ಶಿ ಡಾ. ತೆದ್ರೋಸ್ ಮತ್ತು ಇತರೆ ಗೌರವಾನ್ವಿತರೇ,
ಮೊದಲಿಗೆ ಕೋವಿಡ್-19ನಿಂದಾಗಿ ಜಗತ್ತಿನಾದ್ಯಂತ ಪ್ರಾಣ ಕಳೆದುಕೊಂಡವರಿಗೆ ನಾನು ನನ್ನ ಸಂತಾಪಗಳನ್ನು ಸೂಚಿಸಲು ಬಯಸುತ್ತೇನೆ. ಈ ಸಮರದಲ್ಲಿ ಮುಂಚೂಣಿಯಲ್ಲಿರುವ ಎಲ್ಲರ ಪ್ರಯತ್ನಗಳಿಗೆ ನಾನು ಕೃತಜ್ಞತೆಗಳನ್ನು ಸಲ್ಲಿಸಲು ಈ ಅವಕಾಶವನ್ನು ಬಳಸಿಕೊಳ್ಳುತ್ತೇನೆ.
ನಾವು ಭಾರತದಲ್ಲಿ ಗರಿಷ್ಠ ಮಟ್ಟದ ರಾಜಕೀಯ ಬದ್ಧತೆಯೊಂದಿಗೆ ಕೋವಿಡ್-19 ಸವಾಲನ್ನು ಎದುರಿಸುತ್ತಿದ್ದೇವೆ. ನಮ್ಮ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ವೈಯಕ್ತಿಕವಾಗಿ ಪರಿಸ್ಥಿತಿಯ ಮೇಲೆ ನಿಗಾವಹಿಸುತ್ತಿದ್ದಾರೆ ಮತ್ತು ಪ್ರತಿಯೊಂದು ಹಂತದಲ್ಲೂ ಮುನ್ನೆಚ್ಚರಿಕೆ, ಕ್ರಿಯಾಶೀಲ ಹಾಗೂ ಪ್ರತಿಸ್ಪಂದನೆ ಖಾತ್ರಿಪಡಿಸಿದ್ದಾರೆ. ಮಾರಕ ಸೋಂಕು ಹರಡುವುದನ್ನು ನಿಯಂತ್ರಿಸಲು ಸಾಧ್ಯವಾದ ಎಲ್ಲ ಕ್ರಮಗಳನ್ನು ಕೈಗೊಂಡಿದ್ದಾರೆ.
ವಿದೇಶಿಯರ ಪ್ರವೇಶ ಹಂತದಲ್ಲಿ ಕಣ್ಗಾವಲು, ವಿದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರ ಸ್ಥಳಾಂತರ, ಸಾಮೂಹಿಕ ಸಮುದಾಯ ನಿಗಾ ವ್ಯವಸ್ಥೆ, ರೋಗ ನಿಗಾ ಸಂಪರ್ಕಜಾಲ, ಆರೋಗ್ಯ ಮೂಲಸೌಕರ್ಯ ಬಲವರ್ಧನೆ, ಎರಡು ಮಿಲಿಯನ್ ಮುಂಚೂಣಿ ಮಾನವ ಸಂಪನ್ಮೂಲ ಸಾಮರ್ಥ್ಯವೃದ್ಧಿ, ಅಪಾಯ ಸಂವಹನ ಮತ್ತು ಸಮುದಾಯದ ಒಳಗೊಳ್ಳುವಿಕೆ ಸೇರಿದಂತೆ ಭಾರತ,ಸಕಾಲದಲ್ಲಿ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ನಾವು ಅತ್ಯುತ್ತಮ ಕೆಲಸ ಮಾಡಿದ್ದೇವೆ ಮತ್ತು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದೇವೆ. ನಾವು ಕಲಿಕೆಯ ಹಂತದಲ್ಲಿದ್ದೇವೆ ಮತ್ತು ಮುಂಬರುವ ತಿಂಗಳುಗಳಲ್ಲಿ ಇನ್ನೂ ಉತ್ತಮ ಕಾರ್ಯ ನಿರ್ವಹಿಸುವ ವಿಶ್ವಾಸ ನಮಗಿದೆ.
ಗೌರವಾನ್ವಿತರೇ, ಇಂದಿನ ಒತ್ತಡದ ಸನ್ನಿವೇಶಗಳಿಂದಾಗಿ ಇಂದು ನಾವೆಲ್ಲ ಇಲ್ಲಿ ವಸ್ತುಶಃ (ವರ್ಚ್ಯುಯಲ್) ಭೇಟಿ ಮಾಡುತ್ತಿದ್ದೇವೆ. 73ನೇ ಡಬ್ಲ್ಯೂಎಚ್ಎ ಇದು ವಸ್ತುಶಃ ಆರೋಗ್ಯ ಅಸೆಂಬ್ಲಿಯ ಮೊದಲ ಸಭೆಯಾಗಿದೆ. ಇದು ಅನಿರೀಕ್ಷಿತವಾದುದು. ಆದರೆ ಇದು ಅತ್ಯಂತ ಪ್ರಮುಖವಾದುದು. ಏಕೆಂದರೆ ನಾವು ಇಲ್ಲಿ ಕುಳಿತು ಚರ್ಚೆ ಮಾಡುತ್ತಿರುವುದು ಸಾವಿರಾರು ಜನರನ್ನು ನಿರಂತರವಾಗಿ ಬಲಿತೆಗೆದುಕೊಳ್ಳುತ್ತಿರುವ ಸಾಂಕ್ರಾಮಿಕದ ಬಗ್ಗೆ ಮತ್ತು ಭಾರೀ ಜಾಗತಿಕ ಆರ್ಥಿಕ ಹಿಂಜರಿತವನ್ನು ಉಂಟುಮಾಡಿರುವುದರ ಕುರಿತು. ಇದು ಮನುಕುಲ ಒಟ್ಟಾಗಿ ಸೇರಬೇಕಾಗಿರುವ ಸಂದರ್ಭವಾಗಿದೆ. ಇಂದು ನಾನು ಎಲ್ಲ ಸರ್ಕಾರಗಳು, ಉದ್ಯಮ ಮತ್ತು ಲೋಕೋಪಕಾರಿಗಳಿಗೆ ಕರೆ ನೀಡುವುದೆಂದರೆ ದೀರ್ಘಕಾಲದ ಆದ್ಯತೆಗಳನ್ನು ಪಟ್ಟಿಮಾಡಿ, ಸಂಪನ್ಮೂಲಗಳನ್ನು ಕ್ರೂಢೀಕರಿಸುವ ಮೂಲಕ ಪ್ರತಿಯೊಬ್ಬರಿಗೂ ಅನುಕೂಲವಾಗುವುದನ್ನು ಖಾತ್ರಿಪಡಿಸಬೇಕಿದೆ.
ನಮ್ಮ ಕಡೆಯಿಂದ ಭಾರತ ದ್ವಿಪಕ್ಷೀಯ ಸಂಬಂಧಗಳ ಬಲವರ್ಧನೆ ಮತ್ತು ಪ್ರಾದೇಶಿಕ ಸಹಭಾಗಿತ್ವ ವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ನಮ್ಮ ಪ್ರಧಾನಮಂತ್ರಿ ಅವರ ಸಮರ್ಥ ನಾಯಕತ್ವದಲ್ಲಿ ಭಾರತ ಐಕ್ಯತೆಯ ಭಾವನೆಯೊಂದಿಗೆ 123 ರಾಷ್ಟ್ರಗಳಿಗೆ ಅಗತ್ಯ ಔಷಧಗಳ ಪೂರೈಕೆಯನ್ನು ಮಾಡಿದೆ.
ಈ ಸಾಂಕ್ರಾಮಿಕದಿಂದ ಹೊರಬರಲು ಇಡೀ ಜಗತ್ತಿಗೆ ಚಿಕಿತ್ಸಕ, ಡಯಾಗ್ನಾಸ್ಟಿಕ್ ಮತ್ತು ಲಸಿಕೆ ಕಂಡುಹಿಡಿಯುವುದೊಂದೆ ಮಾರ್ಗ. ಅದಕ್ಕೆ ಜಾಗತಿಕ ಸಹಭಾಗಿತ್ವ ಅತಿಮುಖ್ಯ. ಸರ್ಕಾರ, ಉದ್ಯಮ ಮತ್ತು ಲೋಕೋಪಕಾರಿಗಳಿಗೆ ಸಂಪನ್ಮೂಲಗಳನ್ನು ಕ್ರೂಢೀಕರಿಸಬೇಕು ಮತ್ತು ಸಂಶೋಧನೆ, ಉತ್ಪಾದನೆ ಹಾಗೂ ವಿತರಣೆಗೆ ಒತ್ತು ನೀಡಬೇಕು. ಆದರೆ ಎಲ್ಲೇ ಅಭಿವೃದ್ಧಿಗೊಳಿಸಿದರೂ ಅದರ ಫಲ ಎಲ್ಲರಿಗೂ ಲಭ್ಯವಾಗಬೇಕು ಎನ್ನುವ ಷರತ್ತು ವಿಧಿಸಬೇಕು.
ಎರಡು ದಿನಗಳ ಸಮಾಲೋಚನೆಗಳ ಪೈಕಿ ಇಂದು ಕಳೆದ ಜನವರಿಯಿಂದೀಚೆಗೆ ನಾವು ಪ್ರತಿಯೊಬ್ಬರೂ ಹೇಗೆ ಸೋಂಕನ್ನು ಎದುರಿಸಲು ಕಲಿತುಕೊಂಡೆವು ಎಂಬುದನ್ನು ಹಂಚಿಕೊಳ್ಳಬೇಕಿದೆ ಹಾಗೂ ನಮ್ಮ ಸದಸ್ಯ ರಾಷ್ಟ್ರಗಳ ನಡುವಿನ ಆರ್ಥಿಕ ಹಾಗೂ ತಾಂತ್ರಿಕ ಅಂತರಗಳನ್ನು ತುಂಬಲು ಬೆಂಬಲ ನೀಡಬೇಕು ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಆಕ್ರಮಣಕಾರಿಯಾಗಿ ಮತ್ತು ಸಹಭಾಗಿತ್ವದ ರೂಪದಲ್ಲಿ ಮುಂದುವರಿಸಲು ಒಪ್ಪಿಕೊಳ್ಳಬೇಕು.
ಮನುಕುಲವನ್ನು ಉಳಿಸುವ ಸಲುವಾಗಿ ಹೋರಾಡುತ್ತಿರುವ ಪ್ರತಿಯೊಬ್ಬರನ್ನೂ ಅಭಿನಂದಿಸುತ್ತೇನೆ. 21ನೇ ಶತಮಾನದ ವಾಸ್ತವಗಳಿಗೆ ಅನುಗುಣವಾಗಿ ಎಲ್ಲ ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರಯತ್ನಗಳನ್ನು ನಾವು ಸ್ವಾಗತಿಸುತ್ತೇವೆ. ಭಾರತ ಸದಾ ಅರ್ಥಪೂರ್ಣ ಮತ್ತು ವಿಸ್ತೃತ ಬದಲಾವಣೆಯ ಪ್ರಯತ್ನಗಳ ಪರವಾಗಿ ನಿಲ್ಲುತ್ತದೆ.
ಇಂದು ನಾನು, ಮಾರಕ ಸೋಂಕಿನ ವಿರುದ್ಧದ ಸಮರದಲ್ಲಿ ಇಡೀ ವಿಶ್ವದಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿರುವ ಎಲ್ಲರಿಗೂ ಚಪ್ಪಾಳೆ ತಟ್ಟಿ ಅಭಿನಂದಿಸುವ ಮೂಲಕ ನನ್ನ ಮಾತುಗಳನ್ನು ಮುಕ್ತಾಯಗೊಳಿಸುತ್ತಿದ್ದೇನೆ.
ನಾನು ವೈದ್ಯರು, ದಾದಿಯರು, ಅರೆವೈದ್ಯಕೀಯ ಸಿಬ್ಬಂದಿ, ವಿಜ್ಞಾನಿಗಳು, ಪತ್ರಕರ್ತರು, ಡೆಲಿವರಿ ಬಾಯ್ ಗಳು, ಭದ್ರತಾ ಸಿಬ್ಬಂದಿ, ಶುಚಿತ್ವ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿಗಳನ್ನು ಗೌರವಿಸಲು ಇಲ್ಲಿ ನಿಂತಿದ್ದೇನೆ. ಅವರು ತಮ್ಮ ಪಾತ್ರಗಳನ್ನು ಮರೆತು ಇಂದು ಅಸಮಾನ್ಯ ಮಾನವರಾಗಿ ದುಡಿಯುತ್ತಿದ್ದಾರೆ. ಅವರೇ ನಮ್ಮ ನಿಜವಾದ ನಾಯಕರು.
ಗಣ್ಯರ ಈ ಘನ ಉಪಸ್ಥಿತಿಯಲ್ಲಿ ಮಾತನಾಡಲು ಅವಕಾಶ ಕೊಟ್ಟಿದ್ದಕ್ಕಾಗಿ ತುಂಬಾ ಧನ್ಯವಾದಗಳು’’.
***
(Release ID: 1625003)
Visitor Counter : 299