ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ದೈಹಿಕ ಅಂತರ ಮತ್ತು ನಡವಳಿಕೆಯ ಶಿಷ್ಟಾಚಾರಗಳು ಕೋವಿಡ್-19ರೊಂದಿಗೆ ಹೋರಾಡಲು ಪ್ರಬಲವಾದ ‘ಸಾಮಾಜಿಕ ಲಸಿಕೆಗಳು’: ಡಾ. ಹರ್ಷವರ್ಧನ್

Posted On: 17 MAY 2020 5:58PM by PIB Bengaluru

ದೈಹಿಕ ಅಂತರ ಮತ್ತು ನಡವಳಿಕೆಯ ಶಿಷ್ಟಾಚಾರಗಳು ಕೋವಿಡ್-19ರೊಂದಿಗೆ ಹೋರಾಡಲು ಪ್ರಬಲವಾದ ಸಾಮಾಜಿಕ ಲಸಿಕೆಗಳು’: ಡಾ. ಹರ್ಷವರ್ಧನ್

"ನಮ್ಮ ಚೇತರಿಕೆ ಪ್ರಮಾಣವು 37.5% ಕ್ಕೆ ಸುಧಾರಿಸಿದೆ ಮತ್ತು 22 ಲಕ್ಷಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗಿದೆ"

 

ದೇಶವು ಲಾಕ್ಡೌನ್ 3.0 ಕೊನೆಯನ್ನು ತಲುಪುತ್ತಿದ್ದಂತೆ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ.ಹರ್ಷವರ್ಧನ್ ರವರು ಬಲವಾದ ನಾಯಕತ್ವ, ತೀವ್ರವಾದ ಮತ್ತು ಆರಂಭಿಕ ಕ್ರಮಗಳನ್ನು ಒಳಗೊಂಡ ನಮ್ಮ ನೀತಿಯ ಪರಿಶ್ರಮವು ಉತ್ತಮ ಫಲಿತಾಂಶಗಳನ್ನು ತೋರಿಸಿದೆ. ಕಳೆದ 14 ದಿನಗಳಲ್ಲಿ ದ್ವಿಗುಣಗೊಳ್ಳುವ ಸಮಯ 11.5 ಆಗಿದ್ದರೆ, ಕಳೆದ ಮೂರು ದಿನಗಳಲ್ಲಿ ಇದು 13.6 ಕ್ಕೆ ಸುಧಾರಿಸಿದೆ ”. ಸಾವಿನ ಪ್ರಮಾಣ 3.1% ಕ್ಕೆ ಇಳಿದಿದೆ ಮತ್ತು ಚೇತರಿಕೆ ಪ್ರಮಾಣವು 37.5% ಕ್ಕೆ ಏರಿದೆ ಎಂದು ಅವರು ಹೇಳಿದರು. ನಿನ್ನೆಯ ಹೊತ್ತಿಗೆ ಐಸಿಯುನಲ್ಲಿ 3.1% ಸಕ್ರಿಯ ಕೋವಿಡ್-19 ರೋಗಿಗಳು, ವೆಂಟಿಲೇಟರ್ಗಳಲ್ಲಿ 0.45% ಮತ್ತು ಆಮ್ಲಜನಕದ ಆಸರೆಯಲ್ಲಿ 2.7% ರೋಗಿಗಳಿದ್ದಾರೆ ಎಂದು ಅವರು ಹೇಳಿದರು.

17 ಮೇ 2020 ಹೊತ್ತಿಗೆ ದೇಶದಲ್ಲಿ ಒಟ್ಟು 90,927 ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 34,109 ಜನರನ್ನು ಗುಣಪಡಿಸಲಾಗಿದೆ ಮತ್ತು 2,872 ಸಾವುಗಳು ಸಂಭವಿಸಿವೆ. ಕಳೆದ 24 ಗಂಟೆಗಳಲ್ಲಿ, 4,987 ಹೊಸ ದೃಢಪಡಿಸಿದ ಪ್ರಕರಣಗಳು ದಾಖಲಾಗಿವೆ.

373 ಸರ್ಕಾರಿ ಪ್ರಯೋಗಾಲಯಗಳು ಮತ್ತು 152 ಖಾಸಗಿ ಪ್ರಯೋಗಾಲಯಗಳ ಮೂಲಕ ದೇಶದಲ್ಲಿ ಪರೀಕ್ಷಾ ಸಾಮರ್ಥ್ಯವು ದಿನಕ್ಕೆ 1,00,000 ಪರೀಕ್ಷೆಗಳಿಗೆ ಏರಿದೆ ಎಂದು ಡಾ.ಹರ್ಷವರ್ಧನ್ ಎತ್ತಿ ತೋರಿಸಿದರು. ಒಟ್ಟಾರೆಯಾಗಿ, ಕೋವಿಡ್-19ಕ್ಕಾಗಿ ಇದುವರೆಗೆ 22,79,324 ಪರೀಕ್ಷೆಗಳನ್ನು ಮಾಡಲಾಗಿದ್ದು, ನಿನ್ನೆ 90,094 ಮಾದರಿಗಳನ್ನು ಪರೀಕ್ಷಿಸಲಾಗಿದೆ. "ಇಂದು, ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕಳೆದ 24 ಗಂಟೆಗಳಲ್ಲಿ ಕೋವಿಡ್-19 ಯಾವುದೇ ಪ್ರಕರಣಗಳನ್ನು ವರದಿ ಮಾಡಿಲ್ಲ. ಅವುಗಳಾವುವೆಂದರೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅರುಣಾಚಲ ಪ್ರದೇಶ, ಆಂಧ್ರಪ್ರದೇಶ, ಚಂಡೀಗಢ, ದಾದ್ರಾ ಮತ್ತು ನಗರ ಹವೇಲಿ, ಗೋವಾ, ಛತ್ತೀಸ್ಗಢ, ಗುಜರಾತ್, ಜಾರ್ಖಂಡ್, ಮಣಿಪುರ, ಮೇಘಾಲಯ, ಮಿಜೋರಾಂ, ಪುದುಚೇರಿ, ತೆಲಂಗಾಣ. ಅಲ್ಲದೆ, ದಮನ್ ಮತ್ತು ಡಿಯು, ಸಿಕ್ಕಿಂ, ನಾಗಾಲ್ಯಾಂಡ್ ಮತ್ತು ಲಕ್ಷದ್ವೀಪಗಳು ಈವರೆಗೆ ಯಾವುದೇ ಪ್ರಕರಣಗಳನ್ನು ವರದಿ ಮಾಡಿಲ್ಲಎಂದು ಅವರು ಹೇಳಿದರು.

ದೇಶದಲ್ಲಿ ಕೋವಿಡ್-19 ನಿಯಂತ್ರಣ ಮತ್ತು ನಿರ್ವಹಣೆಗಾಗಿ ಅಭಿವೃದ್ಧಿಪಡಿಸಿದ ಆರೋಗ್ಯ ಮೂಲಸೌಕರ್ಯಗಳ ಕುರಿತು ಮಾತನಾಡಿದ ಡಾ. ಹರ್ಷವರ್ಧನ್ ರವರು, ಪ್ರಸ್ತುತ 1,80,473 ಹಾಸಿಗೆಗಳನ್ನು ಹೊಂದಿರುವ (ಪ್ರತ್ಯೇಕ ಹಾಸಿಗೆಗಳು- 1,61,169 ಮತ್ತು ಐಸಿಯು ಹಾಸಿಗೆಗಳು - 19,304) 916 ಮೀಸಲಾದ ಕೋವಿಡ್ ಆಸ್ಪತ್ರೆಗಳು ಮತ್ತು 1,28,304 ಹಾಸಿಗೆಗಳನ್ನು (ಪ್ರತ್ಯೇಕ ಹಾಸಿಗೆಗಳು- 1,17,775 ಮತ್ತು ಐಸಿಯು ಹಾಸಿಗೆಗಳು- 10,529) ಹೊಂದಿರುವ 2,044 ಮೀಸಲಾದ ಕೋವಿಡ್ ಆರೋಗ್ಯ ಕೇಂದ್ರಗಳು ಜೊತೆಗೆ 9,536 ಸಂಪರ್ಕತಡೆ ಕೇಂದ್ರಗಳು ಮತ್ತು 5,64,632 ಹಾಸಿಗೆಗಳನ್ನು ಹೊಂದಿರುವ 6,309 ಕೋವಿಡ್ ಆರೈಕೆ ಕೇಂದ್ರಗಳು ಈಗ ಕೋವಿಡ್-19 ಅನ್ನು ಎದುರಿಸಲು ಲಭ್ಯವಿದೆ. ಕೇಂದ್ರವು 90.22 ಲಕ್ಷ ಎನ್ 95 ಮುಖಗವಸುಗಳು ಮತ್ತು 53.98 ಲಕ್ಷ ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ) ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸಂಸ್ಥೆಗಳಿಗೆ ಒದಗಿಸಿದೆ ಎಂದು ಅವರು ಹೇಳಿದರು.

ಕನಿಷ್ಠ ಇಪ್ಪತ್ತು ಸೆಕೆಂಡುಗಳ ಕಾಲ ಸಾಬೂನಿನಿಂದ ಕೈ ತೊಳೆಯುವುದು ಅಥವಾ ಆಲ್ಕೋಹಾಲ್ ಆಧಾರಿತ ಸ್ಯಾನಿಟೈಜರ್ಗಳನ್ನು ಬಳಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಉಗುಳದೇ ಇರುವುದು; ತಮ್ಮ ಕೆಲಸದ ಸ್ಥಳವನ್ನು, ಯಾವಾಗಲೂ ಸ್ಪರ್ಶಿಸುವ ಟೇಬಲ್ ಟಾಪ್ಸ್ನಂತಹ ಮೇಲ್ಮೈಗಳನ್ನು ಸ್ಚಚ್ಛಗೊಳಿಸಿಟ್ಟುಕೊಳ್ಳುವುದು; ತನ್ನೊಂದಿಗೆ ಇತರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಸರಿಯಾದ ಉಸಿರಾಟದ ನೈರ್ಮಲ್ಯವನ್ನು ಖಚಿತಪಡಿಸಿಕೊಳ್ಳಲು ಸಾರ್ವಜನಿಕ ಸ್ಥಳಗಳಲ್ಲಿ ಯಾವಾಗಲೂ ಮುಖಗವಸುಗಳನ್ನು ಬಳಸುವುದು. ಮುಂತಾದ ಸರಳ ನೈರ್ಮಲ್ಯ ಕ್ರಮಗಳನ್ನು ಅನುಸರಿಸಿ ಭಾರತವು ಹೊಸ ಸಾಮಾನ್ಯ ಸ್ಥಿತಿಗೆ ಮರಳುವುದನ್ನು ಕಾಣಬಹುದು ಎಂದು ಡಾ. ಹರ್ಷ್ ವರ್ಧನ್ ಹೇಳಿದ್ದಾರೆ. ದೈಹಿಕ ಅಂತರ ಕಾಪಾಡುವುದು ನಮಗೆ ಲಭ್ಯವಿರುವ ಅತ್ಯಂತ ಪ್ರಬಲವಾದ ಸಾಮಾಜಿಕ ಲಸಿಕೆ ಮತ್ತು ಆದ್ದರಿಂದ ಇತರರೊಂದಿಗೆ ಸಂವಹನ ನಡೆಸುವಾಗ ಎರಡು ಗಜದ ದೂರಇರುವುದನ್ನು ಖಾತ್ರಿಪಡಿಸಿಕೊಳ್ಳುವುದು ಮತ್ತು ವಾಸ್ತವೋಪಮ ಕೂಟಗಳನ್ನು ಆರಿಸುವ ಮೂಲಕ ಸಾಮಾಜಿಕ ಕೂಟಗಳನ್ನು ಸೀಮಿತಗೊಳಿಸುವುದು ಸೂಕ್ತವಾಗಿದೆ ಎಂದು ಅವರು ಹೇಳಿದರು. ಸಂಪೂರ್ಣವಾಗಿ ಅಗತ್ಯವಿದ್ದಾಗ ಮಾತ್ರ ಪ್ರಯಾಣಿಸಲು ಮತ್ತು ಸೋಂಕಿಗೆ ಒಡ್ಡಿಕೊಳ್ಳುವುದನ್ನು ಮಿತಿಗೊಳಿಸಲು ಕಿಕ್ಕಿರಿದ ಸ್ಥಳಗಳಿಗೆ ಭೇಟಿ ನೀಡದಂತೆ ಸಲಹೆ ನೀಡಿದರು.

ಸರಿಯಾದ ಮುನ್ನೆಚ್ಚರಿಕೆಗಳೊಂದಿಗೆ, ಸುರಕ್ಷಿತ ನಿರ್ವಹಣೆಯಿಂದ ಆಹಾರವನ್ನು ತಯಾರಿಸುವುದು ಕೋವಿಡ್-19 ಹರಡುವುದನ್ನು ತಡೆಯಲು ಸಹಾಯ ಮಾಡುತ್ತದೆ. ಕೋವಿಡ್-19 ಸಮಯದಲ್ಲಿ ಸುರಕ್ಷಿತ ಆಹಾರವನ್ನು ಖಾತ್ರಿಪಡಿಸಿಕೊಳ್ಳಲು ಕಚ್ಚಾ ಹಣ್ಣುಗಳು ಮತ್ತು ತರಕಾರಿಗಳನ್ನು ಶುದ್ಧ ಕುಡಿಯುವ ನೀರಿನಲ್ಲಿ ತೊಳೆಯುವುದು; ಸಂಪೂರ್ಣವಾಗಿ ಮಾಂಸವನ್ನು ಬೇಯಿಸುವುದು; ಕಚ್ಚಾ ಮಾಂಸ ಮತ್ತು ಬೇಯಿಸಿದ ಆಹಾರಕ್ಕಾಗಿ ಬೇರೆ ಬೇರೆ ಕುಯ್ಯುವ ಫಲಕಗಳು ಮತ್ತು ಚಾಕುಗಳ ಬಳಕೆ; ಆಹಾರ ಪಾತ್ರೆಗಳು, ನೀರಿನ ಬಾಟಲಿಗಳು ಅಥವಾ ಕಪ್ಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸುವುದು; ಆ್ಯಂಟಿ ಬ್ಯಾಕ್ಟೀರಿಯಾ ಬ್ಲೀಚ್ ಮೇಲ್ಮೈಗಳನ್ನು ಒರೆಸಿ ಸ್ವಚ್ಛಗೊಳಿಸುವುದು ಮುಂತಾದ ಕೆಲವು ಸರಳ ಕ್ರಮಗಳನ್ನು ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರವು ಸೂಚಿಸಿದೆ.

ಸಾಂಕ್ರಾಮಿಕದ ಪ್ರಾರಂಭದ ದಿನಗಳಿಂದ ಮುಂಚೂಣಿಯ ಆರೋಗ್ಯ ಕಾರ್ಯಕರ್ತರು - ವೈದ್ಯರು, ದಾದಿಯರು, ಎಎನ್ಎಂಗಳು, ಅಂಗನವಾಡಿಯವರು ಮತ್ತು ರೋಗಶಾಸ್ತ್ರಜ್ಞರು, ಲ್ಯಾಬ್ ತಂತ್ರಜ್ಞರು, ವಿಜ್ಞಾನಿಗಳು ಮತ್ತು ಇತರ ಸಿಬ್ಬಂದಿಗಳಂತಹ ಕೊರೊನಾ ವಾರಿಯರ್ಸ್ ಪ್ರತಿದಿನ ಮಾಡುತ್ತಿರುವ ನಿಸ್ವಾರ್ಥ ಸೇವೆಗಳಿಗೆ ಕೇಂದ್ರ ಆರೋಗ್ಯ ಸಚಿವರು ತಮ್ಮ ಮನದಾಳದ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ದೇಶವಾಸಿಗಳನ್ನು ಉಳಿಸಲು ಅವರು ತಮ್ಮ ಕರ್ತವ್ಯದಲ್ಲಿ ನಿರತರಾಗಿ, ಹಗಲು ರಾತ್ರಿ ಅಪಾರ ಅಪಾಯಕಾರಿ ಪರಿಸ್ಥಿತಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಎತ್ತಿ ತೋರಿಸಿದರು. ಆದ್ದರಿಂದ ರಾಷ್ಟ್ರವು ರೋಗಕ್ಕೆ ಅಂಟಿರುವ ಕಳಂಕವನ್ನು ದೂರವಿಡುವ ಮೂಲಕ ರೋಗಲಕ್ಷಣಗಳನ್ನು ಸಮಯಕ್ಕೆ ಸರಿಯಾಗಿ ವರದಿ ಮಾಡಲು ನಾವು ಪ್ರೋತ್ಸಾಹಿಸಿದಂತಾಗುತ್ತದೆ ಮತ್ತು ಇದು ಪ್ರಕರಣಗಳ ಆರಂಭಿಕ ಪತ್ತೆ ಮತ್ತು ನಿರ್ವಹಣೆಗೆ ಸಹಾಯ ಮಾಡುತ್ತದೆ ಹಾಗೂ ದೇಶದಲ್ಲಿ ಚೇತರಿಕೆ ಪ್ರಮಾಣವು ಸುಧಾರಿಸುತ್ತದೆ. ಎಲ್ಲಾ ಕಣ್ಗಾವಲು ಅಧಿಕಾರಿಗಳ ಸಮರ್ಪಣೆ ಮತ್ತು ಪ್ರಾಮಾಣಿಕತೆಯನ್ನು ಅವರು ಶ್ಲಾಘಿಸಿದರು ಮತ್ತು ನಾಗರಿಕರೊಂದಿಗೆ ಹೋರಾಟವನ್ನು ಮುಂದುವರಿಸಲು ಅವರನ್ನು ಪ್ರೋತ್ಸಾಹಿಸಿದರು.

ಹೋರಾಟವನ್ನು ದೇಶದ ಎಲ್ಲರ ಸಂಪೂರ್ಣ ಸಹಕಾರದಿಂದ ಮಾತ್ರ ಗೆಲ್ಲಲು ಸಾಧ್ಯ ಎಂದು ಡಾ.ಹರ್ಷವರ್ಧನ್ ಹೇಳಿದ್ದಾರೆ. ಆದ್ದರಿಂದ ಸ್ವಯಂ ಮೌಲ್ಯಮಾಪನಕ್ಕೆ ಸಹಾಯ ಮಾಡುವ ಮತ್ತು ಕೋವಿಡ್-19 ದೃಢೀಕರಣಗೊಂಡ ಪ್ರಕರಣಗಳ ಕಣ್ಗಾವಲು ಒದಗಿಸುವ ಆರೋಗ್ಯ ಸೆತು ಆ್ಯಪ್ ಡೌನ್ಲೋಡ್ ಮಾಡುವ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು.

ಇದಲ್ಲದೆ, ತಪ್ಪು ಮಾಹಿತಿ, ವದಂತಿಗಳು ಮತ್ತು ಗಾಳಿಮಾತುಗಳು ಅಥವಾ ಕೋವಿಡ್-19 ಗೆ ಸಂಬಂಧಿಸಿದ ಆಧಾರರಹಿತ ಸುದ್ಧಿಗೆ ಬಲಿಯಾಗುವುದರ ವಿರುದ್ಧ ಅವರು ಎಚ್ಚರಿಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಐಸಿಎಂಆರ್, ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮತ್ತು ಪ್ರೆಸ್ ಇನ್ಫರ್ಮೇಶನ್ ಬ್ಯೂರೋ ವೆಬ್ಸೈಟ್ಗಳು ಮತ್ತು ಟ್ವಿಟರ್ ಹ್ಯಾಂಡಲ್ಗಳಲ್ಲಿ ಲಭ್ಯವಿರುವ ಅಧಿಕೃತ ಮಾಹಿತಿಯನ್ನು ಅನುಸರಿಸುವ ಬಗ್ಗೆ ಅವರು ಸಲಹೆ ನೀಡಿದರು.

ಕೋವಿಡ್-19ಗೆ ಸಂಬಂಧಿತ ತಾಂತ್ರಿಕ ಸಮಸ್ಯೆಗಳು, ಮಾರ್ಗಸೂಚಿಗಳು ಮತ್ತು ಸಲಹೆಗಳ ಎಲ್ಲಾ ಅಧಿಕೃತ ಮತ್ತು ಹೊಸ ಮಾಹಿತಿಗಾಗಿ ದಯವಿಟ್ಟು ಇಲಾಖೆಯ ಜಾಲತಾಣಕ್ಕೆ ನಿಯಮಿತವಾಗಿ ಭೇಟಿ ನೀಡಿ: https://www.mohfw.gov.in

ಕೋವಿಡ್-19 ಗೆ ಸಂಬಂಧಿಸಿದ ತಾಂತ್ರಿಕ ಪ್ರಶ್ನೆಗಳನ್ನು technquery.covid19[at]gov[dot]in , ಇತರ ಪ್ರಶ್ನೆಗಳನ್ನು ಕೇಳಲು ncov2019[at]gov[dot]in ಗೆ ಇಮೇಲ್ ಮಾಡಬಹುದು ಮತ್ರು @CovidIndiaSeva ಗೆ ಟ್ವೀಟ್ ಮಾಡಬಹುದು.

ಕೋವಿಡ್-19 ಬಗ್ಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಾಯವಾಣಿ ಸಂಖ್ಯೆ. : +91-11-23978046 ಅಥವಾ 1075 (ಟೋಲ್-ಫ್ರೀ). ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಕೋವಿಡ್-19ಗೆ ಸಂಬಂಧಿಸಿದ ಸಹಾಯವಾಣಿ ಸಂಖ್ಯೆಗಳ ಪಟ್ಟಿಯು https://www.mohfw.gov.in/pdf/coronvavirushelplinenumber.pdf ನಲ್ಲಿಯೂ ಲಭ್ಯವಿದೆ.

***


(Release ID: 1624793) Visitor Counter : 241