ರೈಲ್ವೇ ಸಚಿವಾಲಯ

ದಿನಕ್ಕೆ 4 ರೈಲಿನಿಂದ, ದಿನಕ್ಕೆ 145 ರೈಲುಗಳು, ಭಾರತೀಯ ರೈಲ್ವೇಯಿಂದ ’ಮರಳಿ ಮನೆಗೆ’ ಆಂದೋಲನಕ್ಕೆ ಶ್ರಮಿಕ ವಿಶೇಷಗಳಿಂದ ಭಾರೀ ವೇಗ

Posted On: 15 MAY 2020 3:40PM by PIB Bengaluru

ದಿನಕ್ಕೆ 4 ರೈಲಿನಿಂದ, ದಿನಕ್ಕೆ 145 ರೈಲುಗಳು, ಭಾರತೀಯ ರೈಲ್ವೇಯಿಂದ ’ಮರಳಿ ಮನೆಗೆ’ ಆಂದೋಲನಕ್ಕೆ ಶ್ರಮಿಕ ವಿಶೇಷಗಳಿಂದ ಭಾರೀ ವೇಗ

ವಿವಿಧೆಡೆಗಳಲ್ಲಿ ಸಿಲುಕಿ ಹಾಕಿಕೊಂಡಿದ್ದವರನ್ನು ಅವರ ಮನೆಗೆ ಮರಳಿ ಕರೆದೊಯ್ಯುವ ಪ್ರಯತ್ನದಲ್ಲಿ ಒಂದೇ ದಿನದಲ್ಲಿ 2 ಲಕ್ಷಕ್ಕೂ ಅಧಿಕ ವಲಸೆಗಾರರನ್ನು ಕೊಂಡೊಯ್ಯುವ ಮೂಲಕ ಮತ್ತೊಂದು ಮೈಲಿಗಲ್ಲು ದಾಟಿದ ಸಾಧನೆ

ಮೇ 1 ರಂದು ಸುಮಾರು 5000 ಪ್ರಯಾಣಿಕರು , ಮೇ 14 ರಂದು 2.10 ಲಕ್ಷಕ್ಕೂ ಅಧಿಕ ಪ್ರಯಾಣಿಕರು , 2 ವಾರಗಳ ಒಳಗೆ ಮೈಲಿಗಲ್ಲು ದಾಟಿದ ಸಾಧನೆ

ಇದುವರೆಗೆ ಈ “ ಶ್ರಮಿಕ ವಿಶೇಷ” ರೈಲುಗಳ ಮೂಲಕ 12 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಅವರ ತವರು ರಾಜ್ಯ ಸೇರಿದ್ದಾರೆ

ವಲಸೆಗಾರರನ್ನು ಮನೆಗೆ ಕರೆದೊಯ್ಯಲು ಇದುವರೆಗೆ 1000 ಕ್ಕೂ ಅಧಿಕ ಶ್ರಮಿಕ ವಿಶೇಷ ರೈಲುಗಳು ಕಾರ್ಯಾಚರಿಸಿವೆ

ಆಂದೋಲನ ಮಾದರಿಯಲ್ಲಿ ದಿನಕ್ಕೆ 300 “ಶ್ರಮಿಕ ವಿಶೇಷ” ರೈಲುಗಳನ್ನು ಓಡಿಸಲು ರೈಲ್ವೇ ಸಿದ್ದ. ದಿನವೊಂದಕ್ಕೆ ವಿವಿಧೆಡೆ ಸಿಲುಕಿ ಹಾಕಿಕೊಂಡಿರುವ 4 ಲಕ್ಷಕ್ಕೂ ಅಧಿಕ ವ್ಯಕ್ತಿಗಳನ್ನು ಕರೆದೊಯ್ಯಲು ಈ “ಶ್ರಮಿಕ ವಿಶೇಷ” ರೈಲುಗಳು ಸಜ್ಜು

 

ಗೃಹ ವ್ಯವಹಾರಗಳ ಸಚಿವಾಲಯದ ಆದೇಶವನ್ನು ಅನುಸರಿಸಿ ರೈಲ್ವೇಯು 2020 ರ ಮೇ 1 ರಿಂದ “ಶ್ರಮಿಕ ವಿಶೇಷ” ರೈಲುಗಳ ಓಡಾಟವನ್ನು ಆರಂಭಿಸಿದೆ. ಲಾಕ್ ಡೌನ್ ನಿಂದಾಗಿ ವಿವಿಧ ಕಡೆಗಳಲ್ಲಿ ಸಿಲುಕಿ ಹಾಕಿಕೊಂಡಿರುವ ವಲಸೆ ಕಾರ್ಮಿಕರು, ಯಾತ್ರಾರ್ಥಿಗಳು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರರನ್ನು ಕರೆ ತರಲು “ಕಾರ್ಮಿಕ ದಿನ” ದಂದು ಈ ರೈಲುಗಳನ್ನು ಆರಂಭ ಮಾಡಲಾಗಿದೆ.

2020 ರ ಮೇ 1 ರಂದು ಬರೇ 4 ರೈಲುಗಳ ಓಡಾಟದೊಂದಿಗೆ ಆರಂಭಗೊಂಡ ಕಾರ್ಯಾಚರಣೆಯು 15 ದಿನಗಳಿಗೂ ಕಡಿಮೆ ಅವಧಿಯಲ್ಲಿ 1000 ಕ್ಕೂ ಅಧಿಕ ಇಂತಹ ಶ್ರಮ ಶಕ್ತಿ ರೈಲುಗಳ ಕಾರ್ಯಾಚರಣೆಯನ್ನು ನಡೆಸಲು ಭಾರತೀಯ ರೈಲ್ವೇಯು ಶಕ್ತವಾಗುವಂತೆ ಮಾಡಿದೆ. 2020 ರ ಮೇ 14 ರಂದು ಗಮನಾರ್ಹ ಸಾಧನೆಯಾಗಿ ಒಟ್ಟು 145 “ಶ್ರಮಿಕ ವಿಶೇಷ “ ರೈಲುಗಳನ್ನು ವಿವಿಧ ರಾಜ್ಯಗಳಿಂದ ಕಾರ್ಯಾಚರಿಸಲಾಗಿದ್ದು, 2.10 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಅವರ ತವರು ರಾಜ್ಯಗಳಿಗೆ ಪ್ರಯಾಣಿಸಿದ್ದಾರೆ.

ಒಂದೇ ದಿನದಲ್ಲಿ ಶ್ರಮಿಕ ರೈಲಿನಲ್ಲಿ 2 ಲಕ್ಷ ಪ್ರಯಾಣಿಕರ ಸಂಖ್ಯೆ ದಾಟಿರುವುದು ಇದೇ ಮೊದಲ ಬಾರಿ.

ಶ್ರಮಿಕ ರೈಲುಗಳು 2020ರ ಮೇ 1 ರಂದು ಕಾರ್ಯಾಚರಿಸುವಾಗ ಪ್ರಯಾಣಿಸಿದ ಪ್ರಯಾಣಿಕರ ಸಂಖ್ಯೆ ಬರೇ 5000 ದಷ್ಟಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಇದುವರೆಗೆ 12 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಈ “ಶ್ರಮಿಕ ವಿಶೇಷ” ರೈಲುಗಳ ಮೂಲಕ ಅವರ ತವರು ರಾಜ್ಯಗಳಿಗೆ ತಲುಪಿದ್ದಾರೆ.

ಈ ರೈಲುಗಳು ವಿವಿಧ ರಾಜ್ಯಗಳಾದ ಆಂಧ್ರ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್ ಗಢ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ, ಕರ್ನಾಟಕ , ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಒಡಿಶಾ , ರಾಜಸ್ಥಾನ, ತಮಿಳುನಾಡು, ತೆಲಂಗಾಣ, ತ್ರಿಪುರಾ, ಉತ್ತರ ಪ್ರದೇಶ, ಉತ್ತರಾಖಂಡ , ಪಶ್ಚಿಮ ಬಂಗಾಳಗಳವರೆಗೆ ತೆರಳಿ ಪ್ರಯಾಣವನ್ನು ಕೊನೆಗೊಳಿಸಿವೆ.

ವಿವಿಧೆಡೆಗಳಲ್ಲಿ ಸಿಲುಕಿ ಹಾಕಿಕೊಂಡಿರುವ ಎಲ್ಲಾ ವಲಸೆಗಾರರನ್ನು ಅವರ ತವರು ರಾಜ್ಯಗಳಿಗೆ ಕರೆದೊಯ್ಯಬೇಕು ಎಂಬ ತನ್ನ ಉದ್ದೇಶದೊಂದಿಗೆ ಕಾರ್ಯನಿರತಾಗಿರುವ ರೈಲ್ವೇಯು ದಿನವೊಂದಕ್ಕೆ 300 ರಷ್ಟು “ಶ್ರಮಿಕ ವಿಶೇಷ” ರೈಲುಗಳನ್ನು ಕಾರ್ಯಾಚರಿಸಿ , 4 ಲಕ್ಷಕ್ಕೂ ಅಧಿಕ ಪ್ರಯಾಣಿಕರನ್ನು ದಿನವೊಂದಕ್ಕೆ ಕರೆದೊಯ್ಯುತ್ತಿರುವುದರ ಹಿಂದೆ ರಾಜ್ಯ ಸರಕಾರಗಳ ಜೊತೆ ರೈಲ್ವೇಯ ಸಮನ್ವಯದ ಕಾರ್ಯಾಚರಣೆಯ ಪಾಲೂ ಇದೆ ಎಂಬುದು ಇಲ್ಲಿ ಉಲ್ಲೇಖನೀಯ.

“ಶ್ರಮಿಕ ವಿಶೇಷ” ರೈಲುಗಳನ್ನು ಪ್ರಯಾಣಿಕರನ್ನು ಕಳುಹಿಸುತ್ತಿರುವ ರಾಜ್ಯಗಳು ಮತ್ತು ಅವರನ್ನು ಸ್ವೀಕರಿಸುವ ರಾಜ್ಯಗಳು ಪರಸ್ಪರ ಒಪ್ಪಿಗೆ ಕೊಟ್ಟರಷ್ಟೇ ಓಡಿಸಲು ರೈಲ್ವೇಯು ಸಿದ್ದತೆಗಳನ್ನು ಮಾಡಿಕೊಳ್ಳುತ್ತದೆ. ಪ್ರಯಾಣಿಕರು ರೈಲು ಹತ್ತುವುದಕ್ಕೆ ಮೊದಲು ಪ್ರಯಾಣಿಕರ ಸೂಕ್ತ ತಪಾಸಣೆಯನ್ನು ಖಾತ್ರಿಪಡಿಸಲಾಗುತ್ತದೆ. ಪ್ರಯಾಣದ ವೇಳೆ ಪ್ರಯಾಣಿಕರಿಗೆ ಉಚಿತ ಊಟ ಮತ್ತು ನೀರನ್ನು ಒದಗಿಸಲಾಗುತ್ತದೆ.

***



(Release ID: 1624246) Visitor Counter : 184