ಪ್ರಧಾನ ಮಂತ್ರಿಯವರ ಕಛೇರಿ
ಶ್ರೀ ಬಿಲ್ ಗೇಟ್ಸ್ ಅವರೊಂದಿಗೆ ಪ್ರಧಾನಿ ಮಾತುಕತೆ
Posted On:
14 MAY 2020 10:22PM by PIB Bengaluru
ಶ್ರೀ ಬಿಲ್ ಗೇಟ್ಸ್ ಅವರೊಂದಿಗೆ ಪ್ರಧಾನಿ ಮಾತುಕತೆ
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್ ಸಹ-ಅಧ್ಯಕ್ಷರಾದ ಶ್ರೀ ಬಿಲ್ ಗೇಟ್ಸ್ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದರು. ಕೋವಿಡ್-19ಕ್ಕೆ ಜಾಗತಿಕ ಪ್ರತಿಕ್ರಿಯೆ ಮತ್ತು ಸಾಂಕ್ರಾಮಿಕ ರೋಗವನ್ನು ಎದುರಿಸಲು ವೈಜ್ಞಾನಿಕ ನಾವೀನ್ಯತೆ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಕುರಿತು ಜಾಗತಿಕ ಸಮನ್ವಯದ ಮಹತ್ವವನ್ನು ಚರ್ಚಿಸಿದರು.
ಆರೋಗ್ಯ ಬಿಕ್ಕಟ್ಟಿನ ವಿರುದ್ಧದ ಹೋರಾಟದಲ್ಲಿ ಭಾರತವು ಅಳವಡಿಸಿಕೊಂಡಿರುವ ಸೂಕ್ತ ಸಂದೇಶದ ಮೂಲಕ ಸಾರ್ವಜನಿಕರ ತೊಡಗಿಸಿಕೊಳ್ಳುವಿಕೆಯನ್ನು ಖಾತರಿಪಡಿಸುವ ಪ್ರಜ್ಞಾಪೂರ್ವಕ ವಿಧಾನದ ಬಗ್ಗೆ ಪ್ರಧಾನಿ ಒತ್ತಿಹೇಳಿದರು. ಈ ಜನ-ಕೇಂದ್ರಿತವಾದ ಬಾಟಮ್-ಅಪ್ ವಿಧಾನವು ದೈಹಿಕ ಅಂತರದ ಸ್ವೀಕಾರಾರ್ಹತೆ, ಮುಂಚೂಣಿಯಲ್ಲಿ ಕೆಲಸ ಮಾಡುವವರಿಗೆ ಗೌರವ ನೀಡುವುದು, ಮುಖಗವಸುಗಳನ್ನು ಧರಿಸುವುದು, ಸೂಕ್ತ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಮತ್ತು ಲಾಕ್ಡೌನ್ ನಿಯಮಗಳನ್ನು ಗೌರವಿಸಲು ಹೇಗೆ ಸಹಾಯ ಮಾಡಿದೆ ಎಂದು ಅವರು ವಿವರಿಸಿದರು.
ಸರ್ಕಾರವು ಕೈಗೊಂಡ ಹಿಂದಿನ ಕೆಲವು ಅಭಿವೃದ್ಧಿ ಉಪಕ್ರಮಗಳು - ಆರ್ಥಿಕ ಸೇರ್ಪಡೆಯ ವಿಸ್ತರಣೆ, ಆರೋಗ್ಯ ಸೇವೆಗಳ ವಿತರಣೆಯನ್ನು ಕಟ್ಟಕಡೆಯವರೆಗೂ ಬಲಪಡಿಸುವುದು, ಸ್ವಚ್ಛ ಭಾರತ್ ಮಿಷನ್ ಮೂಲಕ ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಜನಪ್ರಿಯಗೊಳಿಸುವುದು, ಜನರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಭಾರತದ ಆಯುರ್ವೇದವನ್ನು ಬಳಸಿಕೊಳ್ಳುವುದು ಇತ್ಯಾದಿಗಳು, ಪ್ರಸ್ತುತ ಸಾಂಕ್ರಾಮಿಕ ರೋಗಕ್ಕೆ ಭಾರತದ ಪ್ರತಿಕ್ರಿಯೆಯ ಪರಿಣಾಮಕಾರಿತ್ವವನ್ನು ಹೆಚ್ಚಿಸಲು ಸಹಾಯ ಮಾಡಿರುವ ಬಗ್ಗೆ ಪ್ರಧಾನಿಯವರು ವಿವರಿಸಿದರು.
ಕೋವಿಡ್-19ಕ್ಕೆ ಜಾಗತಿಕ ಪ್ರತಿಕ್ರಿಯೆಯನ್ನು ಸಮನ್ವಯಗೊಳಿಸುವುದು ಸೇರಿದಂತೆ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಇತರ ಭಾಗಗಳಲ್ಲಿಯೂ ಗೇಟ್ಸ್ ಫೌಂಡೇಶನ್ ಮಾಡುತ್ತಿರುವ ಆರೋಗ್ಯ ಸಂಬಂಧಿತ ಕಾರ್ಯಗಳನ್ನು ಪ್ರಧಾನಿಯವರು ಶ್ಲಾಘಿಸಿದರು. ಜಗತ್ತಿನ ಪ್ರಯೋಜನಕ್ಕಾಗಿ ಭಾರತದ ಸಾಮರ್ಥ್ಯ ಮತ್ತು ಶಕ್ತಿಯನ್ನು ಹೇಗೆ ಉತ್ತಮವಾಗಿ ಬಳಸಿಕೊಳ್ಳಬಹುದು ಎಂಬ ಬಗ್ಗೆ ಅವರು ಶ್ರೀ ಗೇಟ್ಸ್ ಅವರಿಂದ ಸಲಹೆಗಳನ್ನು ಕೋರಿದರು.
ಗ್ರಾಮೀಣ ಪ್ರದೇಶಗಳಲ್ಲಿ ಕಟ್ಟ ಕಡೆಯವರಿಗೂ ಆರೋಗ್ಯ ಸೇವೆ ವಿತರಣೆಯ ಭಾರತದ ವಿಶಿಷ್ಟ ಮಾದರಿಯ ಲಾಭ ಪಡೆಯುವುದು, ಭಾರತ ಸರ್ಕಾರ ಅಭಿವೃದ್ಧಿಪಡಿಸಿರುವ ಪರಿಣಾಮಕಾರಿ ಸಂಪರ್ಕ-ಪತ್ತೆ ಮೊಬೈಲ್ ಅಪ್ಲಿಕೇಶನ್‌ನ ಪ್ರಸಾರ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಭಾರತದ ಬೃಹತ್ ಪ್ರಮಾಣದ ಔಷಧೀಯ ಸಾಮರ್ಥ್ಯವನ್ನು ವೃದ್ಧಿಸುವ ಮೂಲಕ ಲಸಿಕೆಗಳು ಮತ್ತು ಚಿಕಿತ್ಸಕಗಳ ಉತ್ಪಾದನೆಯನ್ನು ಹೆಚ್ಚಿಸುವುದು ಮುಂತಾದ ವಿಚಾರಗಳ ಬಗ್ಗೆ ಈ ಸಂದರ್ಭದಲ್ಲಿ ಇಬ್ಬರೂ ಗಣ್ಯರು ಚರ್ಚಿಸಿದರು. ಜಾಗತಿಕ ಪ್ರಯತ್ನಗಳಿಗೆ ಕೊಡುಗೆ ನೀಡುವ ವಿಶೇಷವಾಗಿ ಅಭಿವೃದ್ಧಿ ಹೊಂದುತ್ತಿರುವ ತನ್ನ ಸಹವರ್ತಿ ದೇಶಗಳ ಅನುಕೂಲಕ್ಕಾಗಿ ಭಾರತದ ಇಚ್ಛಾಶಕ್ತಿ ಮತ್ತು ಸಾಮರ್ಥ್ಯವನ್ನು ಗಮನಿಸಿ, , ಸಾಂಕ್ರಾಮಿಕ ರೋಗಗಳಿಗೆ ಪ್ರತಿಕ್ರಿಯೆಗಳನ್ನು ಸಂಘಟಿಸಲು ನಡೆಯುತ್ತಿರುವ ಜಾಗತಿಕ ಚರ್ಚೆಗಳಲ್ಲಿ ಭಾರತವನ್ನು ಸೇರ್ಪಡೆ ಮಾಡುವುದು ಮುಖ್ಯವಾಗಿದೆ ಎಂದು ಅವರು ಒಪ್ಪಿಕೊಂಡರು.
ಕೋವಿಡ್ ನಂತರದ ಜಗತ್ತಿನಲ್ಲಿ ಉದ್ಭವಿಸುವ ಜೀವನಶೈಲಿ, ಆರ್ಥಿಕ ಸಂಘಟನೆ, ಸಾಮಾಜಿಕ ನಡವಳಿಕೆ, ಶಿಕ್ಷಣ ಮತ್ತು ಆರೋಗ್ಯವನ್ನು ಪ್ರೋತ್ಸಾಹಿಸುವ ವಿಧಾನಗಳು ಮತ್ತು ಅದಕ್ಕೆ ಸಂಬಂಧಿಸಿದ ತಾಂತ್ರಿಕತೆಗಳಲ್ಲಿ ಅಗತ್ಯವಾದ ಬದಲಾವಣೆಗಳ ಸವಾಲುಗಳನ್ನು ಪರಿಹರಿಸುವಲ್ಲಿ ಗೇಟ್ಸ್ ಫೌಂಡೇಶನ್ ಮುಂದಾಗಬಹುದು ಎಂದು ಪ್ರಧಾನಿಯವರು ಸಲಹೆ ನೀಡಿದರು. ತನ್ನದೇ ಆದ ಅನುಭವಗಳ ಆಧಾರದ ಮೇಲೆ ಇಂತಹ ವಿಶ್ಲೇಷಣಾತ್ಮಕ ಕ್ರಮಕ್ಕೆ ಕೊಡುಗೆ ನೀಡುವುದಕ್ಕೆ ಭಾರತವು ಸಂತೋಷಪಡುತ್ತದೆ ಎಂದು ಅವರು ಹೇಳಿದರು.
***
(Release ID: 1624024)
Visitor Counter : 288
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam