ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಿ ಶ್ರೀ ನರೇಂದ್ರ ಮೋದಿ ಮತ್ತು ಡೆನ್ಮಾರ್ಕ್ ಪ್ರಧಾನಿ ಅವರ ಶ್ರೀಮತಿ ಮೆಟ್ಟೆ ಫ್ರೆಡೆರಿಕ್ಸೆನ್ ನಡುವೆ ದೂರವಾಣಿ ಮಾತುಕತೆ

Posted On: 14 MAY 2020 8:03PM by PIB Bengaluru

ಪ್ರಧಾನಿ ಶ್ರೀ ನರೇಂದ್ರ ಮೋದಿ ಮತ್ತು ಡೆನ್ಮಾರ್ಕ್ ಪ್ರಧಾನಿ ಅವರ ಶ್ರೀಮತಿ ಮೆಟ್ಟೆ ಫ್ರೆಡೆರಿಕ್ಸೆನ್ ನಡುವೆ ದೂರವಾಣಿ ಮಾತುಕತೆ

 

ಡೆನ್ಮಾರ್ಕ್‌ನ ಪ್ರಧಾನ ಮಂತ್ರಿ ಶ್ರೀಮತಿ ಮೆಟ್ಟೆ ಫ್ರೆಡೆರಿಕ್ಸೆನ್ ಅವರೊಂದಿಗೆ ಪ್ರಧಾನಿಯವರು ಇಂದು ದೂರವಾಣಿ ಸಂಭಾಷಣೆ ನಡೆಸಿದರು.

ಕೋವಿಡ್-19 ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಉಭಯ ದೇಶಗಳಲ್ಲಿ ಕೈಗೊಂಡ ಕ್ರಮಗಳನ್ನು ಉಭಯ ನಾಯಕರು ಹೋಲಿಸಿ ನೋಡಿದರು. ಸೋಂಕುಗಳ ಹೆಚ್ಚಳಕ್ಕೆ ಕಾರಣವಾಗದೆ ಲಾಕ್‌ಡೌನ್ ನಿರ್ಬಂಧಗಳನ್ನು ತೆಗೆದುಹಾಕಿದ ಡೆನ್ಮಾರ್ಕ್‌ನ ಯಶಸ್ಸನ್ನು ಪ್ರಧಾನಿಯವರು ಶ್ಲಾಘಿಸಿದರು. ಪರಸ್ಪರರ ಅನುಭವದಿಂದ ಕಲಿಯಲು ಭಾರತೀಯ ಮತ್ತು ಡ್ಯಾನಿಶ್ ತಜ್ಞರು ಸಂಪರ್ಕದಲ್ಲಿರುವ ಬಗ್ಗೆ ಸಮ್ಮತಿಸಲಾಯಿತು.

ಭಾರತ-ಡೆನ್ಮಾರ್ಕ್ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಬಯಕೆಯನ್ನು ಉಭಯ ನಾಯಕರು ಪುನರುಚ್ಚರಿಸಿದರು ಮತ್ತು ಕೋವಿಡ್ ನಂತರದ ಜಗತ್ತಿನಲ್ಲಿ ಎರಡೂ ದೇಶಗಳು ಒಟ್ಟಾಗಿ ಕೆಲಸ ಮಾಡುವ  ಬಗ್ಗೆಯೂ ಚರ್ಚಿಸಿದರು.

12 ಮೇ 2020 ರಂದು ಉಭಯ ದೇಶಗಳ ವಿದೇಶಾಂಗ ಸಚಿವರ ನಡುವಿನ ಜಂಟಿ ಆಯೋಗದ ಸಭೆಯ ಯಶಸ್ವಿ ಆಯೋಜನೆಯನ್ನು ಅವರು ಸ್ವಾಗತಿಸಿದರು.

ಆರೋಗ್ಯ ಸಂಶೋಧನೆ, ಸ್ವಚ್ಛ ಮತ್ತು ಪರಿಸರ ಸ್ನೇಹಿ ಇಂಧನ, ಮತ್ತು ಹವಾಮಾನ ಬದಲಾವಣೆಯ ಸ್ಥಿತಿಸ್ಥಾಪಕತ್ವ ಮುಂತಾದ ಕ್ಷೇತ್ರಗಳು ಪರಸ್ಪರ ಲಾಭದಾಯಕ ಸಹಯೋಗಕ್ಕೆ ಅಪಾರ ಅವಕಾಶವನ್ನು ನೀಡುತ್ತವೆ ಎಂದು ಒಪ್ಪಿಕೊಂಡ ನಾಯಕರು, ಭಾರತ ಮತ್ತು ಡೆನ್ಮಾರ್ಕ್ ನಡುವೆ ದೃಢವಾದ ಪರಿಸರ ಕಾರ್ಯತಂತ್ರದ ಸಹಭಾಗಿತ್ವವನ್ನು ಸೃಷ್ಟಿಸುವ ಗುರಿಯತ್ತ ಕೆಲಸ ಮಾಡಲು ಉಭಯ ನಾಯಕರು ಸಮ್ಮತಿ ಸೂಚಿಸಿದರು.

***


(Release ID: 1623942) Visitor Counter : 217