ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
ರಿಟೈಲರ್ ಮತ್ತು ಕಟ್ಟಡ ಹಾಗು ನಿರ್ಮಾಣ ವೃತ್ತಿಪರರಿಗೆ ಎಂ.ಎಸ್.ಎಂ.ಇ. ಗಳಾಗಿ ನೋಂದಣಿಯ ಮನವಿಯನ್ನು ಪರಿಶೀಲಿಸಲಾಗುವುದು: ಶ್ರೀ ಗಡ್ಕರಿ
Posted On:
09 MAY 2020 6:47PM by PIB Bengaluru
ರಿಟೈಲರ್ ಮತ್ತು ಕಟ್ಟಡ ಹಾಗು ನಿರ್ಮಾಣ ವೃತ್ತಿಪರರಿಗೆ ಎಂ.ಎಸ್.ಎಂ.ಇ. ಗಳಾಗಿ ನೋಂದಣಿಯ ಮನವಿಯನ್ನು ಪರಿಶೀಲಿಸಲಾಗುವುದು: ಶ್ರೀ ಗಡ್ಕರಿ
ರಿಟೈಲರ್ ಗಳ ಸಂಘಟನೆಗಳಿಗೆ ಮತ್ತು ಇಂಜಿನಿಯರ್ ಗಳಾಗಿ, ವಾಸ್ತುಶಿಲ್ಪಿಗಳಾಗಿ ಹಾಗು ನಗರ ಯೋಜಕರಾಗಿ ಕೆಲಸ ಮಾಡುತ್ತಿರುವವರಿಗೆ ರಫ್ತಿಗೆ ಬದಲಿ ಉತ್ಪನ್ನಗಳನ್ನು ತಯಾರಿಸಲು ಮತ್ತು ಜನದಟ್ಟಣೆಯಿಂದ ಕೂಡಿರುವ ನಗರಗಳ ದಟ್ಟಣೆ ನಿವಾರಿಸುವ ನಿಟ್ಟಿನಲ್ಲಿ ಕಾರ್ಯತತ್ಪರರಾಗಲು ಕರೆ
ಕೇಂದ್ರ ಎಂ.ಎಸ್.ಎಂ.ಇ. ಮತ್ತು ರಸ್ತೆ ಸಾರಿಗೆ ಹಾಗು ಹೆದ್ದಾರಿಗಳ ಸಚಿವ ಶ್ರೀ ನಿತಿನ್ ಗಡ್ಕರಿ ಅವರಿಂದು ಭಾರತೀಯ ರಿಟೈಲರ್ಸ್ ಅಸೋಸಿಯೇಶನ್ ಮತ್ತು ವೃತ್ತಿಪರ ಇಂಜಿನಿಯರುಗಳು, ವಾಸ್ತುಶಿಲ್ಪಿಗಳು ಮತ್ತು ನಗರ ಯೋಜನಾ ಅಸೋಸಿಯೇಶನ್ (ಭಾರತ) ಗಳಿಗೆ ಎಂ.ಎಸ್.ಎಂ.ಇ. ಗಳಾಗಿ ನೊಂದಾಯಿಸಿಕೊಳ್ಳುವ ಕುರಿತ ಕೋರಿಕೆಯನ್ನು ತ್ವರಿತವಾಗಿ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು. ಈ ಸಂಸ್ಥೆಗಳು ಉದ್ಯೋಗ ಸೃಷ್ಟಿ ಮಾಡುವ ಸಂಸ್ಥೆಗಳಾಗಿರುವ ಹಿನ್ನೆಲೆಯಲ್ಲಿ ಮತ್ತು ವಿಮೆ, ವೈದ್ಯಕೀಯ, ನಿವೃತ್ತಿ ವೇತನ ಇತ್ಯಾದಿ ವಿವಿಧ ಲಾಭಗಳನ್ನು ಕಾರ್ಮಿಕರಿಗೆ ನೀಡಲು ಸಾಧ್ಯವೇ ಎಂಬೆಲ್ಲ ಅಂಶಗಳಿಂದ ಪರಿಶೀಲಿಸಬೇಕಾದ ಆವಶ್ಯಕತೆ ಇದೆ ಎಂದರು.
ರಿಟೈಲರುಗಳಿಗೆ ಮನೆಗಳಿಗೆ ಪೂರೈಕೆ ಆರಂಭ ಮಾಡುವ ಸಾಧ್ಯತೆಯ ಬಗ್ಗೆ ಅನ್ವೇಷಣೆ ಮಾಡುವಂತೆ ಸಲಹೆ ಮಾಡಿದ ಅವರು ಎಲ್ಲಾ ರಿಟೈಲ್ ಮಳಿಗೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ , ಗ್ರಾಹಕರಿಗೆ /ಸಿಬ್ಬಂದಿಗಳಿಗೆ ಸ್ಯಾನಿಟೈಸರ್ ಗಳ ಲಭ್ಯತೆ ಇರುವಂತೆ ಮತ್ತು ಮುಖಗವಸುಗಳ ಬಳಕೆ ಮಾಡುವಂತೆ ಅವರು ಸಲಹೆ ಮಾಡಿದರು.
ಭಾರತೀಯ ರಿಟೈಲರ್ಸ್ ಅಸೋಸಿಯೇಶನ್ ಪ್ರತಿನಿಧಿಗಳು ಮತ್ತು ಕಾರ್ಯನಿರತ ಇಂಜಿನಿಯರುಗಳು, ವಾಸ್ತುಶಿಲ್ಪಿಗಳು ಮತ್ತು ನಗರ ಯೋಜನಾ ಸಂಸ್ಥೆ (ಭಾರತ) ಗಳ ಪ್ರತಿನಿಧಿಗಳ ಸಭೆಯನ್ನು ಇಂದು ವೀಡಿಯೋ ಕಾನ್ಪರೆನ್ಸ್ ಮೂಲಕ ನಡೆಸಿ ಸಚಿವರು ಮಾತನಾಡಿದರು. ಅವರಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಕೋವಿಡ್ -19 ರ ಪರಿಣಾಮವನ್ನು ಅರಿಯಲು ಈ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಂವಾದದಲ್ಲಿ ಪ್ರತಿನಿಧಿಗಳು ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ನಡುವೆ ಎದುರಿಸುತ್ತಿರುವ ವಿವಿಧ ಸವಾಲುಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಹಾಗು ಕೆಲವು ಸಲಹೆಗಳನ್ನು ನೀಡಿ ಈ ವಲಯ ಮುನ್ನಡೆದುಕೊಂಡು ಹೋಗಲು ಸರಕಾರದಿಂದ ಬೆಂಬಲವನ್ನು ಕೋರಿದರು.
ಜನದಟ್ಟಣೆಯಿಂದ ಕೂಡಿರುವ ನಗರಗಳನ್ನು ದಟ್ಟಣೆರಹಿತವನ್ನಾಗಿಸಲು ಅನ್ವೇಷಣೆಗಳನ್ನು ಕೈಗೊಳ್ಳುವಂತೆ ಇಂಜಿನಿಯರುಗಳು, ವಾಸ್ತುಶಿಲ್ಪಿಗಳು, ಮತ್ತು ನಗರ ಯೋಜನೆಗಳನ್ನು ರೂಪಿಸುವವರಿಗೆ ಅವರು ಕರೆ ನೀಡಿದರಲ್ಲದೆ ಗ್ರಾಮೀಣ, ಬುಡಕಟ್ಟು, ಮತ್ತು ಹಿಂದುಳಿದ ವಲಯಗಳ ಅಭಿವೃದ್ದಿಯಲ್ಲಿ , ಅದರಲ್ಲೂ ವಿಶೇಷವಾಗಿ ಹೊಸದಿಲ್ಲಿ-ಮುಂಬಯಿ ಎಕ್ಸ್ ಪ್ರೆಸ್ ವೇ ಇಂತಹ ಪ್ರದೇಶಗಳಲ್ಲಿ ಹಾದು ಹೋಗುವುದರಿಂದ ಆ ಪ್ರದೇಶಗಳ ಅಭಿವೃದ್ದಿಯಲ್ಲಿ ಭಾಗವಹಿಸುವಂತೆ ಅವರು ಕರೆ ನೀಡಿದರು. ಈ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ವಿವಿಧ ಗುಚ್ಚಗಳು ಮತ್ತು ಸಾರಿಗೆ ಪಾರ್ಕ್ ಗಳು ತಲೆ ಎತ್ತಲಿವೆ, ಇದು ಬೃಹತ್ ಅವಕಾಶಗಳನ್ನು ಒದಗಿಸಲಿದೆ ಎಂದೂ ಹೇಳಿದರು.
ಪ್ರಮುಖವಾಗಿ ಪ್ರಸ್ತಾಪಿಸಲಾದ ವಿಷಯಗಳು ಮತ್ತು ಮಾಡಲಾದ ಸಲಹೆಗಳಲ್ಲಿ ಈ ಕೆಳಗಿನವು ಸೇರಿವೆ: ರಿಟೈಲರ್ ಗಳು/ ರೆಸ್ಟೋರೆಂಟ್ ಗಳು/ ವಾಸ್ತು ಶಿಲ್ಪ ಸಂಸ್ಥೆಗಳನ್ನು ಎಂ.ಎಸ್.ಎಂ.ಇ. ಸಂಸ್ಥೆಗಳನ್ನಾಗಿ ನೊಂದಾಯಿಸಿಕೊಳ್ಳುವುದು, ಕೋವಿಡ್ -19 ಸಂಬಂಧಿ ಸುರಕ್ಷಾ ಕ್ರಮಗಳ ಶರತ್ತುಗಳೊಂದಿಗೆ ಮಾಲ್ ಗಳ ಆರಂಭ , ಅವಶ್ಯಕವಲ್ಲದ ಸಾಮಗ್ರಿಗಳಿಗಾಗಿ ಇ-ವಾಣಿಜ್ಯ ಕಂಪೆನಿಗಳ ಕಾರ್ಯಾಚರಣೆಗೆ ಅವಕಾಶ, ರಿಟೈಲರ್ಸ್ ಗಳಿಗೆ ಬಾಡಿಗೆಯಲ್ಲಿ ರಿಯಾಯತಿ, ಬಾಕಿ ಪಾವತಿಗೆ 9 ತಿಂಗಳ ಅವಕಾಶ , ಬ್ಯಾಂಕ್ ಬಡ್ಡಿ ದರ 10% ನಿಂದ 4-5 % ಗೆ ಇಳಿಕೆ. , ಖಾಸಗಿ ಬ್ಯಾಂಕುಗಳಿಗೂ ಆರ್.ಬಿ.ಐ. ಮಾರ್ಗದರ್ಶಿಗಳ ಅನ್ವಯಿಸುವಿಕೆ, ಪಡೆದುಕೊಂಡ ಸರಕಿಗಷ್ಟೇ ಜಿ.ಎಸ್.ಟಿ. ಅನ್ವಯಿಸುವಿಕೆ, ರೇರಾ ಕಾಯ್ದೆಯಡಿ ಈಗಾಗಲೇ ನೊಂದಾಯಿಸಲ್ಪಟ್ಟ ಬಿಲ್ಡರ್ ಗಳನ್ನು ಎಂ.ಎಸ್.ಎಂ.ಇ. ಗಳಾಗಿ ನೋಂದಣಿ, ಇತ್ಯಾದಿಗಳು.
ಕೋವಿಡ್ -19 ಹರಡುವಿಕೆ ತಡೆಯಲು ಅವಶ್ಯ ಪ್ರತಿಬಂಧಕ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವನ್ನು ಕೈಗಾರಿಕೆಗಳು ಖಾತ್ರಿಪಡಿಸಬೇಕು ಎಂದು ಕೈಗಾರಿಕಾ ವಲಯಕ್ಕೆ ಕರೆ ನೀಡಿದ ಶ್ರೀ ಗಡ್ಕರಿ ಅವರು ಪಿ.ಪಿ.ಇ. ಗಳ ಬಳಕೆ (ಮುಖಗವಸುಗಳು, ಸ್ಯಾನಿಟೈಸರ್ ಗಳು ಇತ್ಯಾದಿ..) ಯನ್ನು ಪ್ರಮುಖವಾಗಿ ಹೇಳಿದ್ದಲ್ಲದೆ ವ್ಯಾಪಾರದ ಕಾರ್ಯಾಚರಣೆಗಳಲ್ಲಿ ಸಾಮಾಜಿಕ ಅಂತರವನ್ನು ಕಾಪಾಡುವಂತೆಯೂ ಸಲಹೆ ಮಾಡಿದರು.
ಜನತೆಯ ಜೀವ ಮತ್ತು ಜೀವನೋಪಾಯಗಳನ್ನು ಖಾತ್ರಿಪಡಿಸಿಕೊಳ್ಳುತ್ತಲೇ ಈ ಬಿಕ್ಕಟ್ಟಿನಿಂದ ಹೊರ ಬರಲು ಸಮಗ್ರ ರೀತಿರಿವಾಜುಗಳನ್ನು ಅಳವಡಿಸಿಕೊಳ್ಳುವಂತೆ ಅವರು ಎಲ್ಲಾ ಭಾಗೀದಾರರಿಗೆ ಕರೆ ನೀಡಿದರು. ಈ ಸಮಯದಲ್ಲಿ ಈ ಬಿಕ್ಕಟ್ಟನ್ನು ದಾಟಲು ಉದ್ಯಮವು ಧನಾತ್ಮಕ ನಿಲುವನ್ನು ಅಳವಡಿಸಿಕೊಳ್ಳಬೇಕು ಎಂದೂ ಒತ್ತಿ ಹೇಳಿದರು.
ರಫ್ತು ಹೆಚ್ಚಳ ಈ ಸಮಯದ ಅಗತ್ಯವಾಗಿದ್ದು ಈ ಬಗ್ಗೆ ವಿಶೇಷ ಒತ್ತು ನೀಡಬೇಕೆಂದ ಸಚಿವರು, ಇಂಧನ ವೆಚ್ಚ, ಸಾರಿಗೆ ವೆಚ್ಚ ಮತ್ತು ಉತ್ಪಾದನಾ ವೆಚ್ಚ ಕಡಿಮೆ ಮಾಡುವ ಪದ್ದತಿಗಳನ್ನು ಅನುಷ್ಟಾನಿಸುವ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕಗೊಳ್ಳಬೇಕು ಎಂದೂ ಹೇಳಿದರು. ಜೊತೆಗೆ ಅವರು ವಿದೇಶಿ ಆಮದನ್ನು ಸ್ಥಳಾಂತರಿಸಲು ಆಮದಿಗೆ ಪರ್ಯಾಯವನ್ನು ದೇಶೀ ಉತ್ಪಾದನೆಯ ಮೂಲಕ ಸೃಷ್ಟಿಸಬೇಕು ಎಂಬ ಅಗತ್ಯವನ್ನೂ ಪ್ರಸ್ತಾಪಿಸಿದರು.
ಹಸಿರು ಎಕ್ಸ್ ಪ್ರೆಸ್ ಹೆದ್ದಾರಿಯ ಕಾಮಗಾರಿ ಈಗಾಗಲೇ ಆರಂಭಗೊಂಡಿದೆ. ಮತ್ತು ಕೈಗಾರಿಕಾ ಗುಚ್ಚಗಳಲ್ಲಿ , ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಸಾರಿಗೆ/ಸಾಗಾಣಿಕಾ ಪಾರ್ಕ್ ಗಳಲ್ಲಿ ಭವಿಷ್ಯದ ಹೂಡಿಕೆ ಮಾಡಲು ಇದೊಂದು ಅವಕಾಶ ಎಂದೂ ಅವರು ಹೇಳಿದರು. ಮೆಟ್ರೋ ನಗರಗಳಲ್ಲದೆ ಹೊರಭಾಗದಲ್ಲಿಯೂ ಕೈಗಾರಿಕಾ ಗುಚ್ಚಗಳ ಕ್ಷಿತಿಜವನ್ನು ವಿಸ್ತರಿಸುವ ಅಗತ್ಯವನ್ನು ಅವರು ಮಂಡಿಸಿದರಲ್ಲದೆ ಇದರಲ್ಲಿ ಸಹಭಾಗಿಗಳಾಗುವಂತೆ ಕೈಗಾರಿಕೆಗಳನ್ನು ಕೋರಿದರು.
ಚೀನಾದಿಂದ ಜಪಾನೀ ಹೂಡಿಕೆಯನ್ನು ಹಿಂಪಡೆದುಕೊಂಡು ಬೇರೆಲ್ಲಾದರೂ ಕೈಗಾರಿಕೆಗಳನ್ನು ನೆಲೆಗೊಳಿಸಲು ತನ್ನ ಕೈಗಾರಿಕೋದ್ಯಮಗಳಿಗೆ ಜಪಾನ್ ಸರಕಾರವು ವಿಶೇಷ ಪ್ಯಾಕೇಜ್ ಘೋಷಿಸಿರುವುದನ್ನು ಸ್ಮರಿಸಿದ ಸಚಿವರು ಇಂತಹ ಅವಕಾಶವನ್ನು ಕೈವಶಮಾಡಿಕೊಳ್ಳಲು ಭಾರತಕ್ಕೆ ಇದು ಸಕಾಲ ಎಂದೂ ಹೇಳಿದರು.
ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಶ್ರೀ ಗಡ್ಕರಿ ಸರಕಾರದಿಂದ ಸಾಧ್ಯ ಇರುವ ಎಲ್ಲಾ ನೆರವನ್ನೂ ಒದಗಿಸುವುದಾಗಿ ಭರವಸೆ ನೀಡಿದರು. ತಾವು ಸಂಬಂಧಿತ ಇಲಾಖೆಗಳ ಜೊತೆಗೂ ವಿಷಯ ಪ್ರಸ್ತಾಪಿಸುವುದಾಗಿ ಹೇಳಿದರು. ಕೈಗಾರಿಕೋದ್ಯಮವು ಧನಾತ್ಮಕ ಧೋರಣೆಯನ್ನು ಅನುಸರಿಸಿ ಕೋವಿಡ್ -19 ಬಿಕ್ಕಟ್ಟು ಅಂತ್ಯಗೊಂಡ ಬಳಿಕ ಉದ್ಭವಿಸುವ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದವರು ಹೇಳಿದರು.
***
(Release ID: 1622626)
Visitor Counter : 190
Read this release in:
Punjabi
,
English
,
Urdu
,
Marathi
,
Hindi
,
Bengali
,
Assamese
,
Manipuri
,
Odia
,
Tamil
,
Telugu