ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ

ಕೋವಿಡ್-19 ವಿರುದ್ಧದ ಹೋರಾಟಕ್ಕೆ ಸಮಾಜದ ಎಲ್ಲ ವರ್ಗದವರಿಂದಲೂ ಅಲ್ಪಸಂಖ್ಯಾತ ಸಮುದಾಯದಿಂದಲೂ ಸಮಾನ ಕೊಡುಗೆ: ಮುಖ್ತಾರ್ ಅಬ್ಬಾಸ್ ನಖ್ವಿ

Posted On: 09 MAY 2020 2:07PM by PIB Bengaluru

ಕೋವಿಡ್-19 ವಿರುದ್ಧದ ಹೋರಾಟಕ್ಕೆ ಸಮಾಜದ ಎಲ್ಲ ವರ್ಗದವರಿಂದಲೂ ಅಲ್ಪಸಂಖ್ಯಾತ ಸಮುದಾಯದಿಂದಲೂ ಸಮಾನ ಕೊಡುಗೆ: ಮುಖ್ತಾರ್ ಅಬ್ಬಾಸ್ ನಖ್ವಿ

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದ ಮೂಲಕ ತರಬೇತಿ ಪಡೆದಿರುವ ಸುಮಾರು 1500 ಆರೋಗ್ಯ ರಕ್ಷಣಾ ಸಹಾಯಕರು ಕೊರೊನಾ ರೋಗಿಗಳ ಚಿಕಿತ್ಸೆ ಮತ್ತು ಆರೈಕೆಗೆ ನೆರವು

ದೇಶಾದ್ಯಂತ 16 ಹಜ್ ಕೇಂದ್ರಗಳು ರಾಜ್ಯ ಸರ್ಕಾರಗಳಿಗೆ ಕ್ವಾರಂಟೈನ್ ಗೆ ಮತ್ತು ಕೊರೊನಾ ಸೋಂಕಿತ ರೋಗಿಗಳ ಐಸೋಲೇಶನ್ ಕೇಂದ್ರಕ್ಕೆ ಒದಗಿಸಲಾಗಿದೆ - ಮುಖ್ತಾರ್ ಅಬ್ಬಾಸ್ ನಖ್ವಿ

ಎಎಂಯು ವೈದ್ಯಕೀಯ ಕಾಲೇಜಿನಲ್ಲಿ ಕೊರೊನಾ ರೋಗಿಗಳ ಚಿಕಿತ್ಸೆಗೆ 100 ಹಾಸಿಗೆಗಳ ವ್ಯವಸ್ಥೆ; ಈವರೆಗೂ 9000ಕ್ಕೂ ಅಧಿಕ ಕೊರೊನಾ ಪರೀಕ್ಷೆ

 

ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಶ್ರೀ ಮುಖ್ತಾರ್ ಅಬ್ಬಾಸ್ ನಖ್ವಿ, ಇಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದ ಮೂಲಕ ತರಬೇತಿ ಪಡೆದ 1500ಕ್ಕೂ ಅಧಿಕ ಆರೋಗ್ಯ ರಕ್ಷಣಾ ಸಹಾಯಕರು ಕೊರೊನಾ ರೋಗಿಗಳ ಚಿಕಿತ್ಸೆ ಮತ್ತು ಆರೈಕೆಗೆ ನೆರವು ನೀಡುತ್ತಿದ್ದಾರೆ ಎಂದರು.

ಆರೋಗ್ಯ ರಕ್ಷಣಾ ಸಹಾಯಕರಲ್ಲಿ ಶೇ.50ರಷ್ಟು ಯುವತಿಯರಿದ್ದು, ಅವರು ದೇಶಾದ್ಯಂತ ನಾನಾ ಆಸ್ಪತ್ರೆಗಳು ಮತ್ತು ಆರೋಗ್ಯ ರಕ್ಷಣಾ ಕೇಂದ್ರಗಳಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆಗೆ ಸಹಾಯ ಮಾಡುತ್ತಿದ್ದಾರೆ ಎಂದು ಶ್ರೀ ನಖ್ವಿ ಹೇಳಿದರು. ವರ್ಷ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದಿಂದ 2,000ಕ್ಕೂ ಅಧಿಕ ಆರೋಗ್ಯ ರಕ್ಷಣಾ ಸಹಾಯಕರಿಗೆ ತರಬೇತಿ ನೀಡಲಾಗುವುದು. ಸಚಿವಾಲಯ, ದೇಶದ ನಾನಾ ಆರೋಗ್ಯ ಸಂಸ್ಥೆಗಳು ಮತ್ತು ಪ್ರತಿಷ್ಠಿತ ಆಸ್ಪತ್ರೆಗಳ ಮೂಲಕ ಆರೋಗ್ಯ ರಕ್ಷಣಾ ಸಹಾಯಕರಿಗೆ ಒಂದು ವರ್ಷದ ತರಬೇತಿಯನ್ನು ನೀಡುತ್ತಿದೆ.

ಶ್ರೀ ನಖ್ವಿ ಅವರು, ದೇಶಾದ್ಯಂತ ನಾನಾ ವಕ್ಫ್ ಮಂಡಳಿಗಳು, ಕೊರೊನಾ ಸಾಂಕ್ರಾಮಿಕ ಎದುರಿಸಲು ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸುಮಾರು 51 ಕೋಟಿ ರೂ. ನೆರವು ನೀಡಿವೆ. ಅಲ್ಲದೆ, ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಂಸ್ಥೆಗಳೂ ಸಹ ನೆರವು ನೀಡಿವೆ. ಅಲ್ಲದೆ ವಕ್ಫ್ ಮಂಡಳಿಗಳು ಅಗತ್ಯವಿರುವವರಿಗೆ ಅತ್ಯವಶ್ಯಕ ಸಾಮಗ್ರಿಗಳಲ್ಲದೆ, ಉಚಿತ ಆಹಾರವನ್ನೂ ಸಹ ವಿತರಿಸುತ್ತಿವೆ.

ದೇಶಾದ್ಯಂತ 16 ಹಜ್ ಕೇಂದ್ರಗಳನ್ನು ರಾಜ್ಯ ಸರ್ಕಾರಗಳಿಗೆ ಕೊರೊನಾ ಸೋಂಕಿತ ಜನರ ಕ್ವಾರಂಟೈನ್ ಮತ್ತು ಐಸೋಲೇಶನ್ ಕೇಂದ್ರಗಳಿಗಾಗಿ ನೀಡಲಾಗಿದೆ ಎಂದು ಶ್ರೀ ನಖ್ವಿ ಹೇಳಿದರು. ನಾನಾ ರಾಜ್ಯ ಸರ್ಕಾರಗಳು ಹಜ್ ಕೇಂದ್ರಗಳನ್ನು ತಮ್ಮ ಅಗತ್ಯತೆಗಳಿಗೆ ತಕ್ಕಂತೆ ಬಳಸಿಕೊಳ್ಳುತ್ತಿದ್ದಾರೆ ಎಂದರು.

ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯ (ಎಎಂಯು), ಪಿಎಂ-ಕೇರ್ಸ್ ನಿಧಿಗೆ 1.40 ಕೋಟಿ ರೂ. ದೇಣಿಗೆ ನೀಡಿದೆ. ಎಎಂಯು ವೈದ್ಯಕೀಯ ಕಾಲೇಜು ಕೊರೊನಾ ರೋಗಿಗಳ ಚಿಕಿತ್ಸೆಗೆ 100 ಹಾಸಿಗೆಗಳನ್ನು ಸಜ್ಜುಗೊಳಿಸಿದೆ. ಅಲ್ಲದೆ ಎಎಂಯು ಕೊರೊನಾ ಪರೀಕ್ಷೆಗಳನ್ನು ಮಾಡುತ್ತಿದ್ದು, ಈವರೆಗೆ 9000ಕ್ಕೂ ಅಧಿಕ ಪರೀಕ್ಷೆಗಳನ್ನು ಮಾಡಿದೆ ಎಂದು ಶ್ರೀ ನಖ್ವಿ ಹೇಳಿದರು.

ಕೊರೊನಾ ಸೋಂಕಿತ ಜನರಿಗಾಗಿ ಅಜ್ಮೀರ್ ಶರೀಫ್ ದರ್ಗಾದ ಕಾಯದ್ ವಿಶ್ರಮಸ್ಥಳಿ ಮತ್ತು ಖ್ವಾಜಾ ಮಾದರಿ ಶಾಲೆಗಳನ್ನು ಕ್ವಾರಂಟೈನ್ ಮತ್ತು ಐಸೋಲೇಶನ್ ಕೇಂದ್ರಗಳಿಗಾಗಿ ವ್ಯವಸ್ಥೆ ಮಾಡಲಾಗಿದೆ ಎಂದು ಶ್ರೀ ನಖ್ವಿ ಹೇಳಿದರು. ಲಾಕ್ ಡೌನ್ ವೇಳೆ ದೇಶಾದ್ಯಂತ ಎಲ್ಲ ಧರ್ಮದವರೂ ಸೇರಿದಂತೆ 4500ಕ್ಕೂ ಅಧಿಕ ಮಂದಿಗೆ ಆಹಾರ, ವಸತಿ ಮತ್ತು ಆರೋಗ್ಯ ಸೇವೆಗಳನ್ನು ನೀಡಲಾಗಿದೆ. ಸೌಕರ್ಯಗಳನ್ನು ದರ್ಗಾ ಸಮಿತಿಗಳು, ದರ್ಗಾ ಖಾದಿಮ್ಸ್ ಮತ್ತು ಸಜ್ಜದಾ-ನಾಸಿನ್ ವ್ಯವಸ್ಥೆಗೊಳಿಸಿದ್ದವು, ದರ್ಗಾ ಸಮಿತಿ ಮತ್ತು ಅದರ ಸಂಬಂಧಿ ಸಂಸ್ಥೆಗಳು ಸುಮಾರು ಒಂದು ಕೋಟಿ ರೂ.ನಷ್ಟು ಹಣವನ್ನು ಜನರನ್ನು ಅವರ ತವರು ರಾಜ್ಯಗಳಿಗೆ ಕಳುಹಿಸಲು ವ್ಯವಸ್ಥೆ ಕಲ್ಪಿಸಲು ವ್ಯಯ ಮಾಡಿವೆ.

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ ಸೀಖೋ-ಔರ್ ಕಾಮೋಅಡಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಮುಖಗವಸುಗಳನ್ನು ಸಿದ್ಧಪಡಿಸಲಾಗುತ್ತಿದೆ ಮತ್ತು ಅವುಗಳನ್ನು ಅಗತ್ಯವಿರುವವರಿಗೆ ವಿತರಿಸಲಾಗುತ್ತಿದೆ. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ, ಕೊರೊನಾಗೆ ಸಂಬಂಧಿಸಿದಂತೆ ಕೈಗೊಳ್ಳಬೇಕಾಗಿರುವ ಸುರಕ್ಷತಾ ಕ್ರಮಗಳು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತಿತರ ಮಾರ್ಗಸೂಚಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಜಾನ್ ಭಿ, ಜಹಾನ್ ಭಿಅಭಿಯಾನವನ್ನು ಆರಂಭಿಸಲಿದೆ ಎಂದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮನವಿಯಂತೆ ಕೊರೊನಾ ಸಾಂಕ್ರಾಮಿಕ ಸವಾಲನ್ನು ಮಣಿಸಲು ಇಡೀ ದೇಶದ ಜನ ಒಗ್ಗೂಡಿ, ಬಲಿಷ್ಠವಾಗಿ ಹೋರಾಡುತ್ತಿದ್ದಾರೆ ಎಂದು ಶ್ರೀ ನಖ್ವಿ ಹೇಳಿದರು. ಅಲ್ಪಸಂಖ್ಯಾತ ಸಮುದಾಯದವರೂ ಸಹ ಹೋರಾಟದಲ್ಲಿ ಸಮಾಜದ ಇತರ ವರ್ಗದವರಂತೆ ಸಮಾನ ಕೊಡುಗೆ ನೀಡುತ್ತಿದ್ದಾರೆ ಎಂದರು.

***



(Release ID: 1622489) Visitor Counter : 188