ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಡಾ. ಹರ್ಷವರ್ಧನ್ ಅವರಿಂದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಶತಮಾನೋತ್ಸವ ಆಚರಣೆ ಉದ್ದೇಶಿಸಿ ಭಾಷಣ

Posted On: 08 MAY 2020 5:44PM by PIB Bengaluru

ಡಾ. ಹರ್ಷವರ್ಧನ್ ಅವರಿಂದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಶತಮಾನೋತ್ಸವ ಆಚರಣೆ ಉದ್ದೇಶಿಸಿ ಭಾಷಣ:

ಬಿಕ್ಕಟ್ಟಿನ ಸಂದರ್ಭಗಳಲ್ಲಿ ಸಂಸ್ಥೆಯ ಸೇವೆಗಳ ಶ್ಲಾಘನೆ

ಹರಿಯಾಣದಲ್ಲಿ ಕೋವಿಡ್ -19 ಪೀಡಿತರಿಗೆ ಪರಿಹಾರ ಸಾಮಗ್ರಿಗಳನ್ನು ತಲುಪಿಸಲು ಹಸಿರು ನಿಶಾನೆ

ಸ್ವಯಂ ಪ್ರೇರಿತ ರಕ್ತದಾನವನ್ನು ಚಳವಳಿಯಾಗಿ ಪರಿವರ್ತಿಸಿದ್ದಕ್ಕೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸದಾ ಸ್ಮರಣೀಯ
 


ವಿಶ್ವ ರೆಡ್ ಕ್ರಾಸ್ ದಿನಾಚರಣೆ ಅಂಗವಾಗಿ ಇಂದು ನವದೆಹಲಿಯಲ್ಲಿ ನಡೆದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಐ ಆರ್ ಸಿ ಎಸ್ ಶತಮಾನೋತ್ಸವದಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಭಾಗವಹಿಸಿದ್ದರು. ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥಾಪಕರಾದ ಹೆನ್ರಿ ಡ್ಯುರಾಂಟ್ ಅವರ ಪ್ರತಿಮೆಗೆ ಡಾ. ಹರ್ಷವರ್ಧನ್ ಪುಷ್ಪನಮನ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಪಿಪಿಇಗಳು, ಮಾಸ್ಕ್ ಗಳು, ವೆಟ್ ವೈಪ್ ಗಳು, ಬಾಡಿ ಬ್ಯಾಗ್ ಗಳು ಇತ್ಯಾದಿಗಳನ್ನು ಒಳಗೊಂಡಿರುವಂತಹ ಪರಿಹಾರ ಸಾಮಗ್ರಿಗಳನ್ನು ಹರಿಯಾಣಕ್ಕೆ ತಲುಪಿಸುವ ವಾಹನಕ್ಕೆ ಹಸಿರು ನಿಶಾನೆ ತೋರಿದರು.

ವಿಡಿಯೋ ಕಾನ್ಫೆರೆನ್ಸ್ ಮೂಲಕ ದೇಶಾದ್ಯಂತದ ವಿವಿಧ ರಾಜ್ಯಗಳ ಶಾಖೆಗಳಲ್ಲಿ ಐ ಆರ್ ಸಿ ಎಸ್ ನಾಯಕರು ಮತ್ತು ಸಿಬ್ಬಂದಿ ಸೇರಿದಂತೆ ಸೀಮಿತ ಜನರು ಪಾಲ್ಗೊಂಡ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಇದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಗೆ ಒಂದು ಪ್ರಮುಖ ದಿನವಾಗಿದೆ. ಏಕೆಂದರೆ ನೂರು ವರ್ಷಗಳ ಅಸ್ತಿತ್ವವನ್ನು ಸಂಸ್ಥೆ ಪೂರ್ಣಗೊಳಿಸಿದೆ ಜೊತೆಗೆ ತನ್ನ ಪ್ರತಿಷ್ಠೆ ಮತ್ತು ಬದ್ಧತೆಯನ್ನು ಕಾಪಾಡಿಕೊಂಡು ವೈದ್ಯಕೀಯ ಮತ್ತು ಮಾನವ ಕುಲಕ್ಕೆ ಸಹಾಯ ಒದಗಿಸುವ ಧ್ಯೇಯವನ್ನು ಉಳಿಸಿಕೊಂಡಿದೆಎಂದು ಹೇಳಿದರು. ಭಾರತದಲ್ಲಿ ಪರಿಹಾರ ಒದಗಿಸಿದ್ದಕ್ಕೆ ಮತ್ತು ಉತ್ತಮ ಕೆಲಸಕ್ಕಾಗಿ ಐ ಆರ್ ಸಿ ಎಸ್ ಗೆ ಧನ್ಯವಾದ ಸಲ್ಲಿಸಿದರು. ಜೊತೆಗೆ ಐ ಆರ್ ಸಿ ಎಸ್ ಯಾರೊಬ್ಬರ ಆದೇಶಕ್ಕೂ ಕಾಯುವುದಿಲ್ಲ ಬದಲಿಗೆ ತನ್ನ ಮೂಲ ಧ್ಯೇಯದಂತೆ ಕಾರ್ಯನಿರ್ವಹಿಸುತ್ತದೆ ಹಾಗೂ ಯಾವುದೇ ವಿಪತ್ತು ಅಥವಾ ಮಾನವೀಯ ಸಂಕಷ್ಟದ ಸಮಯದಲ್ಲಿ ತಕ್ಷಣ ಪರಿಹಾರಕ್ಕೆ ಮುಂದಾಗುತ್ತದೆಎಂದೂ ಅವರು ಹೇಳಿದರು.  

ಈ ಬಿಕ್ಕಟ್ಟಿನ ಸಂದರ್ಭದಲ್ಲಿ ರಕ್ತದಾನಕ್ಕೆ ಮುಂದೆ ಬರಲು ಪ್ರೋತ್ಸಾಹಿಸುವಂತೆ ನಿಯಮಿತ ರಕ್ತದಾನಿಗಳ ಮನೆಬಾಗಿಲಿಗೆ ಸಂಚಾರಿ ರಕ್ತ ಸಂಗ್ರಹ ವ್ಯಾನ್ ಗಳನ್ನು ಕಳುಹಿಸಿದ್ದಕ್ಕಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯನ್ನು ಡಾ. ಹರ್ಷವರ್ಧನ್ ಪ್ರಶಂಸಿಸಿದರು. “ಸಂಚಾರಿ ರಕ್ತ ಸಂಗ್ರಹಣೆ ಸೌಲಭ್ಯ, ಸಂಚಾರಿ ವ್ಯಾನ್ ಮೂಲಕ ಪಿಕ್ ಅಪ್ ಮತ್ತು ಡ್ರಾಪ್  ಸೌಲಭ್ಯ ಒದಗಿಸುವ ಮೂಲಕ ಐ ಆರ್ ಸಿ ಎಸ್ ಮಾನವ ಕುಲಕ್ಕೆ ಶ್ರೇಷ್ಠ ಸೇವೆ ಮಾಡುತ್ತಿದೆ ಮತ್ತು ಅನಾರೋಗ್ಯದಿಂದ ಬಳಲುತ್ತಿರುವವರು ತೀವ್ರ ಅನಾರೋಗ್ಯದಿಂದಿರುವವರು, ಥೆಲಸ್ಮಿಯ ರೋಗಿಗಳಿಗೆ ಮತ್ತು ಇತರ  ರಕ್ತ ಸಂಬಂಧಿ ರೋಗದಿಂದ ಬಳಲುತ್ತಿರುವವರಿಗೆ ಈ ಬಿಕ್ಕಟ್ಟಿನ ಸಮಯದಲ್ಲಿ ರಕ್ತ ಒದಗಿಸುವ ಮೂಲಕ ಿತರ ಸ್ವಯಂ ಸೇವಾ ಸಂಸ್ಥೆಗಳಿಗೆ ಮಾದರಿಯಾಗಿದೆ”. ಎಂದು ಹೇಳಿದರು 

ದೇಶದಲ್ಲಿ ಯಾವುದೇ ಕ್ಷಿಷ್ಟ ಸಂದರ್ಭದಲ್ಲಿ ಪೂರೈಕೆಗಾಗಿ ಸಾಕಷ್ಟು ರಕ್ತ ಸಂಗ್ರಣೆಯನ್ನು ನಿರ್ವಹಿಸಲು ಸ್ವಯಂ ಪ್ರೇರಿತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ರಕ್ತದಾನ ಮಾಡುವಂತೆ ಉತ್ತೇಜಿಸಲು ಸ್ವಯಂ ಸೇವಾ ಸಂಸ್ಥೆಗಳನ್ನು, ಎನ್ ಜಿ ಒ ಗಳು ಮುಂದಾಗಬೇಕೆಂದು ಅವರು ಮನವಿ ಮಾಡಿದರು. ಜನರು ತಮ್ಮ ಜನ್ಮದಿನ ಅಥವಾ ವಿವಾಹ ವಾರ್ಷಿಕೋತ್ಸವದಂದು, ಆ ದಿನವನ್ನು ತಮಗಾಗಿ ಮಾತ್ರವಲ್ಲದೆ ರಕ್ತದ ಅವಶ್ಯಕತೆಯಿರುವವರಿಗೂ ಮತ್ತಷ್ಟು ವಿಶೇಷವಾಗಿಸಲು ವರ್ಷಕ್ಕೆ ಒಂದು ಬಾರಿಯಾದರೂ ರಕ್ತದಾನ ಮಾಡುವಂತೆ ಕೋರಿದರು.      

ರೋಗಿಗಳು, ವೈದ್ಯರು, ಆರೋಗ್ಯ ಕಾರ್ಯಕರ್ತರು ಮುಂತಾದವರು ಸೇರಿದಂತೆ ಎಲ್ಲ ಕೊರೊನಾ ಯೋಧರಿಗೆ ತೊಂದರೆಯಾಗದಂತೆ ಜನರಲ್ಲಿ ಜಾಗೃತಿ ಮೂಡಿಸಲು ಐ ಆರ್ ಸಿ ಎಸ್ ಮುಂದೆ ಬರುವಂತೆ  ಅವರು ಹೇಳಿದರು ಮತ್ತು ಸಿಬ್ಬಂದಿ ಉತ್ಸಾಹದಿಂದ ಕೆಲಸ ನಿರ್ವಹಿಸಲು ಸಕಾರಾತ್ಮಕ ವಾಯಾವರಣ ಸೃಷ್ಟಿಸಬೇಕೆಂದು ಹೇಳಿದರು.

ಕೋವಿಡ್ – 19 ರ ವಿರುದ್ಧದ ನಮ್ಮ ಹೋರಾಟದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪಾಲುದಾರಿಕೆ ಬಹಳ ಮಹತ್ವದ ಕೊಡುಗೆ ನೀಡಿದ್ದಕ್ಕೆ ನಾನು ನಿಜವಾಗಿಯೂ ಗೌರವಿಸುತ್ತೇನೆ, ಅವರು ಭಾರತದ ಹಲವಾರು ಆಸ್ಪತ್ರೆಗಳಿಗೆ ಸಾಧನಗಳು, ಸ್ಯಾನಿಟೈಸರ್ ಗಳು, ಆಹಾರ, ಪಿಪಿಇ ಕಿಟ್ ಗಳು ಮತ್ತು ಎನ್ – 95 ಮಾಸ್ಕ್ ಗಳು ಇತ್ಯಾದಿಗಳನ್ನು ಒದಗಿಸಿದ್ದಾರೆ ಎಂದು ಅವರು ಹೇಳಿದರು.

1920 ರಲ್ಲಿ ಸ್ವಯಂ ಪ್ರೇರಿತ ಮಾನವೀಯ ಸಂಘಟನೆಯಾಗಿ ಐ ಆರ್ ಸಿ ಎಸ್ ಸ್ಥಾಪಿಸಲಾಯಿತು. ಇಂದು ದೇಶಾದ್ಯಂತ 1100 ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದ್ದು ಇದು ವಿಪತ್ತು/ತುರ್ತು ಪರಿಸ್ಥಿತಿಯಲ್ಲಿ ಪರಿಹಾರ ನೀಡುತ್ತಿದೆ. ದುರ್ಬಲ ಜನರ ಹಾಗೂ ಸಮುದಾಯಗಳ ಆರೋಗ್ಯ ಮತ್ತು ಆರೈಕೆಯನ್ನು ಪ್ರೋತ್ಸಾಹಿಸುತ್ತಿದೆ. ಇದು ವಿಶ್ವದ ಅತಿದೊಡ್ಡ ಸ್ವತಂತ್ರ ಮಾನವೀಯ ಸಂಘಟನೆಯಾದ ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಚಳವಳಿಯ ಪ್ರಮುಖ ಸದಸ್ಯತ್ವ ಹೊಂದಿದೆಭಾರತೀಯ ರೆಡ್ ಕ್ರಾಸ್ ನ ಗುರಿ ಎಲ್ಲ ಸಮಯದಲ್ಲೂ ಎಲ್ಲ ರೀತಿಯ ಮಾನವೀಯ ಚಟುವಟಿಕೆಗಳನ್ನು ಪ್ರೇರೆಪಿಸುವುದು, ಪ್ರೋತ್ಸಾಹಿಸುವುದು ಮತ್ತು ಪ್ರಾರಂಭಿಸುವುದಾಗಿದೆ. ಇದರಿಂದ ಮಾನವನ ಸಮಸ್ಯೆಗಳನ್ನು ತಗ್ಗಿಸಬಹುದು ಹಾಗೂ ತಡೆಯಬಹುದು ಮತ್ತು ಶಾಂತಿಗಾಗಿ ಹೆಚ್ಚು ಅನುಕೂಲ ವತಾವರಣವನ್ನು ಸೃಷ್ಟಿಸಲೂ ಸಹ ಸಹಕಾರಿಯಾಗುತ್ತದೆ.

ರೆಡ್ ಕ್ರಾಸ್ ನಂತೆಯೇ ಎಲ್ಲ ರೀತಿಯ ಮಾನವೀಯ ಚಟುವಟಿಕೆಗಳನ್ನುಪ್ರೇರೆಪಿಸುವುದು, ಪ್ರೋತ್ಸಾಹಿಸುವುದು ಮತ್ತು ಪ್ರಾರಂಭಿಸುವುದು ನಮ್ಮ ಧ್ಯೇಯವಾಗಿರಬೇಕು, ಇದರಿಂದ ಮುಂಬರುವ ಯಾವುದೆ ಸಮಯದಲ್ಲಿ ಮಾನವನ ಕಷ್ಟಗಳನ್ನು ಕಡಿಮೆ ಮಾಡಬಹುದುಎಂದು  ಡಾ. ಹರ್ಷವರ್ಧನ್ ಹೇಳಿದರು

ಕೊವಿಡ್-19 ಬಿಕ್ಕಟ್ಟಿನಿಂದ ಹೊರಹೊಮ್ಮಿದ ಪ್ರಮುಖ ಅಂಶಗಳನ್ನು ಪ್ರಸ್ತಾಪಿಸುತ್ತಾ ಈ ಪರಿಸ್ಥಿತಿ ನಮಗೆ ಒಳ್ಳೆಯದನ್ನೂ ನೀಡಿದೆ. ಇದು ಹೊಸ ಯುಗದ ಮತ್ತು ವಿಶ್ವ ಕ್ರಮದ ಆರಂಭವಾಗಿದೆ. ನಾವು ಹಿಂದೆಂದಿಗಿಂತಲೂ ವೈಯಕ್ತಿಕ  ಸ್ವಚ್ಛತೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದೇವೆ. ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಭೆಗಳಿಗೆ ಹಾಜರಾಗುವುದು ಮತ್ತು ನಮ್ಮ ಕುಟುಂಬದ ಸಂಪೂರ್ಣ ಕಾಳಜಿವಹಿಸುವುದರ ಜೊತೆಗೆ, ವೆಚ್ಚವನ್ನು ಕಡಿಮೆ ಮಾಡಲು ಇತರ ಡಿಜಿಟಲ್ ತಂತ್ರಜ್ಞಾನವನ್ನು ಬಳಸುವುದು. ಇದು ಸ್ವಚ್ಛ ಪರಿಸರ, ಭೂಮಿ, ನೀರು ಮತ್ತು ಗಾಳಿಯ ಪ್ರಾಮುಖ್ಯತೆಯ ಅರಿವು ಮೂಡಿಸಿದೆ; ಹಿಂದೆಂದೂ ಆಗದ ಹಾಗೆ, ಇಡೀ ವಿಶ್ವವನ್ನೇ ಪ್ರಕೃತಿ ತನ್ನ ಅಧೀನಕ್ಕೆ ತೆಗೆದುಕೊಂಡಿದೆ”, ಎಂದು ಹೇಳಿದರು.

ಅಂತಿಮವಾಗಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಒಕ್ಕೂಟ (ಐ ಎಫ್ ಆರ್ ಸಿ), ರಾಷ್ಟ್ರೀಯ ಸಮೂಹ ಕಚೇರಿಗಳ ಕಾರ್ಯಕಾರಿ ಮುಖ್ಯಸ್ಥರಾದ ಶ್ರೀ. ಉದಯ ರೆಗ್ಮಿ, ಐ ಸಿ ಆರ್ ಸಿ ಪ್ರಾದೇಶಿಕ ನಿಯೋಗದ ಮುಖ್ಯಸ್ಥರಾದ ಶ್ರೀ. ಯಾಹಿಯಾ ಅಲಿಬಿ, ಪ್ರಧಾನ ಕಾರ್ಯದರ್ಶಿ, ಶ್ರೀ. ಆರ್. ಕೆ ಜೈನ್ ಮತ್ತು ಐ ಆರ್ ಸಿ ಎಸ್ ನ ಇತರ ಹಿರಿಯ ಅಧಿಕಾರಿಗಳೂ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಐ ಆರ್ ಸಿ ಎಸ್ ನ ಅಧ್ಯಕ್ಷರು ಮತ್ತು ವಿವಿಧ ರಾಜ್ಯದ ಶಾಖೆಗಳ ಕಾರ್ಯದರ್ಶಿಗಳು, ಐ ಆರ್ ಸಿ ಎಸ್ ನ ಸಿಬ್ಬಂದಿ ಮತ್ತು ದೇಶಾದ್ಯಂತದ ಸ್ವಯಂ ಸೇವಕರು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಿದ್ದರು.

***


(Release ID: 1622346) Visitor Counter : 714