ಗೃಹ ವ್ಯವಹಾರಗಳ ಸಚಿವಾಲಯ

ವಿದೇಶದಲ್ಲಿ ಸಿಲುಕಿಕೊಂಡಿರುವ ಭಾರತೀಯ ಪ್ರಜೆಗಳನ್ನು ವಾಪಸ್ ಕರೆತರಲು ಭಾರತ ಸರ್ಕಾರದ ನೆರವು

Posted On: 04 MAY 2020 6:08PM by PIB Bengaluru

ವಿದೇಶದಲ್ಲಿ ಸಿಲುಕಿಕೊಂಡಿರುವ ಭಾರತೀಯ ಪ್ರಜೆಗಳನ್ನು ವಾಪಸ್ ಕರೆತರಲು ಭಾರತ ಸರ್ಕಾರದ ನೆರವು

ಮೇ 7 ರಿಂದ ಹಂತ ಹಂತವಾಗಿ ಪ್ರಕ್ರಿಯೆ ಆರಂಭ

 

ನಾನಾ ಕಾರಣಗಳಿಂದಾಗಿ ವಿದೇಶದಲ್ಲಿ ಸಿಲುಕಿಕೊಂಡಿರುವ ಭಾರತೀಯ ಪ್ರಜೆಗಳನ್ನು ಹಂತ ಹಂತವಾಗಿ ವಾಪಸ್ ಕರೆತರಲು ಭಾರತ ಸರ್ಕಾರ ಅಗತ್ಯ ನೆರವು ನೀಡಲಿದೆ. ಅವರ ಪ್ರಯಾಣಕ್ಕೆ ವಿಮಾನಗಳು ಮತ್ತು ನೌಕಾ ಹಡಗುಗಳನ್ನು ವ್ಯವಸ್ಥೆ ಮಾಡಲಾಗುವುದು . ಕುರಿತಂತೆ ನಿರ್ದಿಷ್ಟ ಕಾರ್ಯಾಚರಣೆ ಮಾನದಂಡ(ಎಸ್ಒಪಿ) ಸಿದ್ಧಪಡಿಸಲಾಗಿದೆ.

ಭಾರತೀಯ ರಾಯಭಾರ ಕಚೇರಿಗಳು ಮತ್ತು ಹೈಕಮಿಷನರ್ ಗಳ ಕಚೇರಿಗಳು ಸಂಕಷ್ಟದಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳ ಪಟ್ಟಿಯನ್ನು ಸಿದ್ಧಪಡಿಸುತ್ತಿದೆ. ಸೌಕರ್ಯ, ಪಾವತಿ ಆಧಾರದ ಮೇಲೆ ಲಭ್ಯವಾಗಲಿದೆ. ವೈಮಾನಿಕ ಪ್ರಯಾಣಕ್ಕೆ ನಿಗದಿಯಲ್ಲದ ವಾಣಿಜ್ಯ ವಿಮಾನಗಳ ವ್ಯವಸ್ಥೆ ಮಾಡಲಾಗುವುದು. ಪ್ರಯಾಣ ಮೇ 7 ರಿಂದ ಹಂತ ಹಂತವಾಗಿ ಆರಂಭವಾಗಲಿದೆ.

ಪ್ರಯಾಣಿಕರು ವಿಮಾನ ಏರುವ ಮುನ್ನ ಅವರ ವೈದ್ಯಕೀಯ ತಪಾಸಣೆಯನ್ನು ನಡೆಸಲಾಗುವುದು. ಯಾರಲ್ಲಿ ಸೋಂಕಿನ ಲಕ್ಷಣಗಳು ಇರುವುದಿಲ್ಲವೋ ಅಂತಹವರ ಪ್ರಯಾಣಕ್ಕೆ ಮಾತ್ರ ಅವಕಾಶ ನೀಡಲಾಗುವುದು. ಪ್ರಯಾಣದ ವೇಳೆ ಎಲ್ಲ ಪ್ರಯಾಣಿಕರು ನಿರ್ದಿಷ್ಟ ಅಂದರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ನಾಗರಿಕ ವಿಮಾನಯಾನ ಸಚಿವಾಲಯ ಹೊರಡಿಸಿರುವ ಆರೋಗ್ಯ ಶಿಷ್ಟಾಚಾರಗಳನ್ನು ಪಾಲನೆ ಮಾಡಬೇಕಾಗುತ್ತದೆ.

ಪ್ರಯಾಣಿಕರು ನಿಗದಿತ ಸ್ಥಳ ತಲುಪಿದ ಕೂಡಲೇ ಪ್ರತಿಯೊಬ್ಬರು ಆರೋಗ್ಯ ಸೇತು ಆಪ್ ನಲ್ಲಿ ನೋಂದಣಿ ಮಾಡಿಕೊಳ್ಳಬೇಕು ಮತ್ತು ಪ್ರತಿಯೊಬ್ಬರೂ ವೈದ್ಯಕೀಯ ತಪಾಸಣೆಗೆ ಒಳಗಾಗಬೇಕು. ವೈದ್ಯಕೀಯ ತಪಾಸಣೆಯ ನಂತರ 14 ದಿನಗಳ ಕಾಲ ಆಯಾ ರಾಜ್ಯಗಳಲ್ಲಿ ಕ್ವಾರಂಟೈನ್ ಗೆ ಆಸ್ಪತ್ರೆಯಲ್ಲಿ ಅಥವಾ ಪಾವತಿ ಆಧಾರದ ಮೇಲೆ ಸಾಂಸ್ಥಿಕ ಕ್ವಾರಂಟೈನ್ ಗೆ ಒಳಗಾಗಬೇಕು. 14 ದಿನಗಳ ನಂತರ ಅವರಿಗೆ ಕೋವಿಡ್ ಪರೀಕ್ಷೆ ನಡೆಸಲಾಗುವುದು ಮತ್ತು ಆರೋಗ್ಯ ಶಿಷ್ಟಾಚಾರಗಳ ಪ್ರಕಾರ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು.

ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ಸಚಿವಾಲಯಗಳು ಸದ್ಯದಲ್ಲೇ ತಮ್ಮ ವೆಬ್ ಸೈಟ್ ಗಳ ಮೂಲಕ ಕುರಿತು ವಿವರವಾದ ಮಾಹಿತಿಯನ್ನು ಹಂಚಿಕೊಳ್ಳಲಿವೆ.

ರಾಜ್ಯ ಸರ್ಕಾರಗಳಿಗೆ ಪರೀಕ್ಷೆ, ಕ್ವಾರಂಟೈನ್ ಮತ್ತು ಭಾರತಕ್ಕೆ ವಾಪಸ್ಸಾಗುವವರಿಗೆ ಉಳಿದುಕೊಳ್ಳಲು ಸ್ಥಳಾವಕಾಶ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ಆಯಾ ರಾಜ್ಯಗಳಿಗೆ ಸಲಹೆ ನೀಡಲಾಗಿದೆ.

***



(Release ID: 1620994) Visitor Counter : 275