ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಕೇಂದ್ರ ಎಚ್.ಆರ್.ಡಿ. ಸಚಿವರಿಂದ ಎಲ್ಲಾ ರಾಜ್ಯಗಳ ಶಿಕ್ಷಣ ಸಚಿವರು ಮತ್ತು ಶಿಕ್ಷಣ ಕಾರ್ಯದರ್ಶಿಗಳ ಜೊತೆ ಸಂವಾದ

Posted On: 28 APR 2020 6:22PM by PIB Bengaluru

ಕೇಂದ್ರ ಎಚ್.ಆರ್.ಡಿ. ಸಚಿವರಿಂದ ಹೊಸದಿಲ್ಲಿಯಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ರಾಜ್ಯಗಳ ಶಿಕ್ಷಣ ಸಚಿವರು ಮತ್ತು ಶಿಕ್ಷಣ ಕಾರ್ಯದರ್ಶಿಗಳ ಜೊತೆ ಸಂವಾದ
ಕೋವಿಡ್ -19 ಪರಿಸ್ಥಿತಿ ಹಿನ್ನೆಲೆಯಲ್ಲಿ ಎಂ.ಡಿ.ಎಂ.ಯೋಜನೆ ಅಡಿಯಲ್ಲಿ ಅಡುಗೆ ವೆಚ್ಚಕ್ಕಾಗಿ ವಾರ್ಷಿಕ ಮಂಜೂರಾತಿಯಲ್ಲಿ 10.99 % ಹೆಚ್ಚಳ ಮಾಡಿ 8100 ಕೋ.ರೂ. ಘೋಷಿಸಿದ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್

 

ಕೇಂದ್ರ ಎಚ್.ಆರ್.ಡಿ. ಸಚಿವರಾದ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ಅವರು ಎಚ್.ಆರ್.ಡಿ. ಸಹಾಯಕ ಸಚಿವರಾದ ಶ್ರೀ ಸಂಜಯ ಧೋತ್ರೆ ಅವರ ಜೊತೆಗೂಡಿ ಎಲ್ಲಾ ರಾಜ್ಯಗಳ ಶಿಕ್ಷಣ ಸಚಿವರು ಮತ್ತು ಶಿಕ್ಷಣ ಕಾರ್ಯದರ್ಶಿಗಳ ಜೊತೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. 22 ರಾಜ್ಯಗಳ ಶಿಕ್ಷಣ ಸಚಿವರು ಮತ್ತು 14 ರಾಜ್ಯಗಳು ಹಾಗು ಕೇಂದ್ರಾಡಳಿತ ಪ್ರದೇಶಗಳ ಕಾರ್ಯದರ್ಶಿಗಳು ಇದರಲ್ಲಿ ಪಾಲ್ಗೊಂಡಿದ್ದರು. ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಕಾರ್ಯದರ್ಶಿ ಶ್ರೀಮತಿ ಅನಿತಾ ಕಾರ್ವಾಲ್ ಮತ್ತು ಸಚಿವಾಲಯದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು ಕೋವಿಡ್ -19 ಈಗಿನ ಪರಿಸ್ಥಿತಿ ದುರದೃಷ್ಟಕರ, ಆದರೆ ಇದು ಜಾಣ್ಮೆಯಿಂದ ಕಾರ್ಯಾಚರಿಸಿ , ವಿದ್ಯಾರ್ಥಿಗಳ ಸುರಕ್ಷೆ ಮತ್ತು ಶೈಕ್ಷಣಿಕ ಕಲ್ಯಾಣವನ್ನು ಖಾತ್ರಿಪಡಿಸಿ ಪರಿಸ್ಥಿತಿಯನ್ನು ಹೊಸ ಪ್ರಯೋಗಗಳನ್ನು ಮಾಡುವ ಮೂಲಕ ಅವಕಾಶವಾಗಿ ಪರಿವರ್ತಿಸಲು ಸಕಾಲ ಎಂದರು. ತಿಂಗಳ ಮನ್ ಕಿ ಬಾತ್ಕಾರ್ಯಕ್ರಮದಲ್ಲಿ ನಮ್ಮ ಪ್ರಧಾನ ಮಂತ್ರಿಗಳು ನೊವೆಲ್ ಕೊರೊನಾವೈರಸ್ ವಿರುದ್ದ ಭಾರತದ ಸಮರವು ಜನತಾ ಚಾಲಿತ ಮತ್ತು ಇದರಲ್ಲಿ ಪ್ರತಿಯೊಬ್ಬ ನಾಗರಿಕರೂ ಅವರ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದು ಹೇಳಿದ್ದನ್ನು ಸಚಿವರು ಪ್ರಸ್ತಾಪಿಸಿದರು. ಅದು ವ್ಯಾಪಾರೋದ್ಯಮ ಇರಲಿ, ಕಚೇರಿಗಳಿರಲಿ, ಶಿಕ್ಷಣ ಸಂಸ್ಥೆಗಳಿರಲಿ, ಅಥವಾ ವೈದ್ಯಕೀಯ ವಲಯ ಇರಲಿ ಪ್ರತಿಯೊಬ್ಬರೂ ಕೊರೊನಾ ಬಳಿಕದ ವಿಶ್ವದಲ್ಲಿ ಬದಲಾವಣೆಗಳನ್ನು ಅಳವಡಿಸಿಕೊಳ್ಳುತ್ತಾರೆ ಎಂದರಲ್ಲದೆ ನಾವೆಲ್ಲರೂ ಒಟ್ಟಾಗಿ ರೋಗವನ್ನು ಮತ್ತು ಪರಿಸ್ಥಿತಿಯನ್ನು ನಿಭಾಯಿಸಲು ಸಮರ್ಥರಾಗುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ನಮ್ಮ ಇಡೀ ಪ್ರಯತ್ನಗಳು 33 ಕೋಟಿ ವಿದ್ಯಾರ್ಥಿಗಳು ಯಾವುದೇ ತೊಂದರೆಗಳನ್ನು ಅನುಭವಿಸದೆ ಅವರ ಶಿಕ್ಷಣವನ್ನು ಮುಂದುವರೆಸಬೇಕು ಎಂಬುದಾಗಿದೆ. ಇದಕ್ಕಾಗಿ ಆನ್ ಲೈನ್ ಶಿಕ್ಷಣ ವೇದಿಕೆಗಳಾದ ದೀಕ್ಷಾ, ಸ್ವಯಂ , ಸ್ವಯಂ ಪ್ರಭಾ, ವಿದ್ಯಾದಾನ್ 2.0, -ಪಾಠಶಾಲಾ , ದೂರದರ್ಶನದ ಶಿಕ್ಷಣ ಟಿ.ವಿ. ವಾಹಿನಿಗಳು, ದಿಶಾ ಟಿ.ವಿ. , ಟಾಟಾ ಸ್ಕೈ, ಜಿಯೋ, ಏರ್ಟೆಲ್ ಡಿ.ಟಿ.ಎಚ್. ಇತ್ಯಾದಿಗಳನ್ನು ಬಲಪಡಿಸಲು ವಿವಿಧ ಪ್ರಯತ್ನಗಳು ನಡೆಯುತ್ತಿವೆ. ಎಂದು ಶ್ರೀ ಪೋಖ್ರಿಯಾಲ್ ಹೇಳಿದರು. ಇದರ ಜೊತೆಗೆ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್ ಕೂಡಾ ಎನ್.ಸಿ..ಆರ್.ಟಿ. ಯಿಂದ ಬಿಡುಗಡೆಯಾಗಿದ್ದು, ರಾಜ್ಯಗಳು ಅಲ್ಲಿಯ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಇದನ್ನು ಅಳವಡಿಸಿಕೊಳ್ಳಬಹುದಾಗಿದೆ. ಇದರ ಜೊತೆಗೆ ನಾವು ಶಾಲೆಗಳನ್ನು ಆರಂಭಿಸುವ ಸಂದರ್ಭದಲ್ಲಿ ಸುರಕ್ಷಾ ಮಾರ್ಗದರ್ಶಿಗಳನ್ನು ಕೂಡಾ ತಯಾರಿಸಬೇಕಾಗಿದೆ ಎಂದರು.

ವಿದ್ಯಾರ್ಥಿಗಳ ಆರೋಗ್ಯ ಕುರಿತಂತೆ ಪ್ರಸ್ತಾಪಿಸಿದ ಕೇಂದ್ರ ಸಚಿವರು ಲಾಕ್ ಡೌನ್ ನಿಂದಾಗಿ ಮಕ್ಕಳಿಗೆ ಸಾಕಷ್ಟು ಪೋಷಕಾಂಶಯುಕ್ತ ಆಹಾರ ಲಭಿಸುವಂತೆ ಮಾಡಲು ಮಧ್ಯಾಹ್ನದ ಊಟ ಯೋಜನೆ ಅಡಿಯಲ್ಲಿ ಪಡಿತರವನ್ನು ಒದಗಿಸಲಾಗುತ್ತಿದೆ ಎಂದರು. ಶಾಲೆಗಳಿಗೆ ಬೇಸಿಗೆ ರಜೆ ಅವಧಿಯಲ್ಲಿ ಮಧ್ಯಾಹ್ನದೂಟ ಒದಗಿಸಲು ಅನುಮೋದನೆ ನೀಡಲಾಗುತ್ತಿರುವ ವಿಷಯವನ್ನು ಪ್ರಕಟಿಸಿದ ಸಚಿವರು ಇದಕ್ಕಾಗಿ 1,600 ಕೋ.ರೂ. ಹೆಚ್ಚುವರಿ ವೆಚ್ಚವನ್ನು ಭರಿಸಲಾಗುವುದು ಎಂದೂ ತಿಳಿಸಿದರು. ಇದರ ಜೊತೆಗೆ ಮಧ್ಯಾಹ್ನದ ಊಟ ಯೋಜನೆ ಅಡಿಯಲ್ಲಿ ಮೊದಲ ತ್ರೈಮಾಸಿಕಕ್ಕಾಗಿ ತಾತ್ಕಾಲಿಕ ಅನುದಾನ 2,500 ಕೋ.ರೂ. ಗಳನ್ನು ನೀಡಲಾಗುವುದೆಂದರು.

ಕೋವಿಡ್ -19 ಹಿನ್ನೆಲೆಯಲ್ಲಿ ಮಧ್ಯಾಹ್ನದ ಊಟ ಯೋಜನೆಯನ್ನು ಸಂಯೋಜಿಸಲು ಅಡುಗೆ ವೆಚ್ಚಕ್ಕಾಗಿ ವಾರ್ಷಿಕ ಕೇಂದ್ರೀಯ ಮಂಜೂರಾತಿ ( ಬೇಳೆ ಕಾಳುಗಳ ಖರೀದಿ, ತರಕಾರಿ, ಎಣ್ಣೆ, ಸಾಂಬಾರು ಪದಾರ್ಥಗಳು ಮತ್ತು ಇಂಧನ ) ಯನ್ನು ಮಧ್ಯಾಹ್ನದ ಊಟ ಯೋಜನೆ ಅಡಿಯಲ್ಲಿ 7,300 ಕೋ.ರೂ. ಗಳಿಂದ 8,100 ಕೋ.ರೂ. ಗಳಿಗೆ ಹೆಚ್ಚಿಸಲಾಗಿದೆ. ( 10.99% ಹೆಚ್ಚಳ)

ಸಮಗ್ರ ಶಿಕ್ಷಾ ಅಡಿಯಲ್ಲಿ ಮಾನದಂಡಗಳ ಸಡಿಲಿಕೆ ಅನ್ವಯ ಭಾರತ ಸರಕಾರವು ಹಿಂದಿನ ವರ್ಷದ ಉಳಿಕೆ ಮೊತ್ತವಾದ 6,200 ಕೋ.ರೂ. ಗಳನ್ನು ಖರ್ಚು ಮಾಡಲು ರಾಜ್ಯಗಳಿಗೆ ಅವಕಾಶ ಮಾಡಿಕೊಟ್ಟಿದೆ ಮತ್ತು ತಾತ್ಕಾಲಿಕ ಅನುದಾನವಾದ 4450 ಕೋ.ರೂ. ಗಳನ್ನು ಮೊದಲ ತ್ರೈಮಾಸಿಕಕ್ಕೆ ಒದಗಿಸಲಾಗುತ್ತಿದೆ ಎಂದೂ ಶ್ರೀ ಪೋಖ್ರಿಯಾಲ್ ತಿಳಿಸಿದರು. ಸಮಗ್ರ ಶಿಕ್ಷಾ ಅಡಿಯಲ್ಲಿ ಬಿಡುಗಡೆಯಾದ ಮೊತ್ತವನ್ನು ತಕ್ಷಣ ರಾಜ್ಯ ಅನುಷ್ಟಾನ ಸಮಿತಿಗೆ ವರ್ಗಾಯಿಸುವಂತೆ , ಮೂಲಕ ಮೊತ್ತವನ್ನು ಸಮರ್ಪಕವಾಗಿ ಬಳಕೆಯಾಗುವಂತೆ ಖಾತ್ರಿಪಡಿಸುವಂತೆ ಹೇಳಿದ ಸಚಿವರು ಇದರಿಂದ ಮುಂದಿನ ಕಂತಿನ ಬಿಡುಗಡೆಗೆ ಅನುಕೂಲವಾಗುತ್ತದೆ ಎಂದರು.

ಸಭೆಯಲ್ಲಿ ಸಚಿವರು ಅಂಗಡಿಗಳಲ್ಲಿ ಪಠ್ಯಪುಸ್ತಕಗಳ ಲಭ್ಯತೆಯ ಕುರಿತು ಎಚ್.ಆರ್.ಡಿ. ಸಚಿವಾಲಯದ ಕೋರಿಕೆ ಮೇರೆಗೆ ಗೃಹ ವ್ಯವಹಾರಗಳ ಸಚಿವಾಲಯವು ಲಾಕ್ ಡೌನ್ ನಿಯಮಗಳಲ್ಲಿ ಸಡಿಲಿಕೆ ಮಾಡಿ ವಿದ್ಯಾರ್ಥಿಗಳು ಅವರ ಅಧ್ಯಯನ ಮುಂದುವರೆಸಲು ಪುಸ್ತಕಗಳನ್ನು ಪಡೆಯಲು ಅನುಕೂಲವಾಗುವಂತೆ ಮಾಡಿದೆ ಎಂದು ತಿಳಿಸಿದರು.

ಕೇಂದ್ರೀಯ ವಿದ್ಯಾಲಯಗಳು, ಮತ್ತು ನವೋದಯ ವಿದ್ಯಾಲಯಗಳು ಮಂಜೂರಾಗಿರುವ, ಆದರೆ ಭೂಮಿಯ ಕೊರತೆಯಿಂದ ಇನ್ನೂ ಆರಂಭಗೊಳ್ಳದಿರುವ ಅಥವಾ ಕಡಿಮೆ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾಲಯಗಳಿದ್ದಲ್ಲಿ , ರಾಜ್ಯಗಳು ತಕ್ಷಣವೇ ಭೂಮಿಯನ್ನು ವರ್ಗಾಯಿಸಿ ಆಯಾ ರಾಜ್ಯಗಳ ವಿದ್ಯಾರ್ಥಿಗಳಿಗೆ ಅದರ ಪ್ರಯೋಜನ ಸಿಗುವಂತೆ ಮಾಡುವಂತಾಗ ಬೇಕು ಎಂದೂ ಶ್ರೀ ಪೋಖ್ರಿಯಾಲ್ ರಾಜ್ಯಗಳಿಗೆ ತಿಳಿಸಿದರು.

ಸಚಿವರು ಎಲ್ಲಾ ರಾಜ್ಯಗಳಿಗೂ ಬೋರ್ಡ್ ಪರೀಕ್ಷೆಗಳ ಉತ್ತರ ಪ್ತರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಯನ್ನು ಆರಂಭಿಸುವಂತೆ ಮನವಿ ಮಾಡಿದರು ಮತ್ತು ಅವರವರ ರಾಜ್ಯಗಳಲ್ಲಿ ಸಿ.ಬಿ.ಎಸ್.. ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಅನುಕೂಲ ಮಾಡಿಕೊಡುವಂತೆಯೂ ಕೋರಿದರು.

ರಾಜ್ಯಗಳ ಸಚಿವರು ಮತ್ತು ಅಧಿಕಾರಿಗಳು ಮಾಡಿದ ಎಲ್ಲಾ ಸಲಹೆಗಳನ್ನು ಮತ್ತು ಸಮಸ್ಯೆಗಳನ್ನು ಶ್ರೀ ಪೋಖ್ರಿಯಾಲ್ ಅವರು ಗಮನವಿಟ್ಟು ಆಲಿಸಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಕಲ್ಯಾಣವನ್ನು ಖಾತ್ರಿಗೊಳಿಸಲು ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯ ನೀಡಿದ ನೆರವಿಗೆ ಮತ್ತು ನಿಟ್ಟಿನಲ್ಲಿ ಮಾಡಲಾದ ಪ್ರಯತ್ನಗಳಿಗೆ ರಾಜ್ಯಗಳು ಮೆಚ್ಚುಗೆ ವ್ಯಕ್ತಪಡಿಸಿದವು. ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯಗಳು ಮಾಡಿರುವ ಶ್ಲಾಘನೀಯ ಕೆಲಸಗಳಿಗಾಗಿ ಕೇಂದ್ರ ಸಚಿವರು ಎಲ್ಲಾ ರಾಜ್ಯಗಳ ಸಚಿವರು ಮತ್ತು ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಮತ್ತು ಕಠಿಣ ಸಂದರ್ಭದಲ್ಲಿ ಸಚಿವಾಲಯವು ಎಲ್ಲಾ ಸಹಕಾರವನ್ನು ನೀಡುತ್ತದೆ ಹಾಗು ಎಲ್ಲರೂ ಜೊತೆಯಾಗಿ ಸಮಸ್ಯೆಯನ್ನು ಎದುರಿಸೋಣ ಎಂದು ಹೇಳಿದರು.

***(Release ID: 1620858) Visitor Counter : 276