ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಆದ್ಯತೆಯ ಮೇಲೆ ವೈದ್ಯಕೀಯ ಉಪಕರಣಗಳ ಖರೀದಿ

Posted On: 01 MAY 2020 5:19PM by PIB Bengaluru

ಆದ್ಯತೆಯ ಮೇಲೆ ವೈದ್ಯಕೀಯ ಉಪಕರಣಗಳ ಖರೀದಿ

ಮೇಕ್ ಇನ್ ಇಂಡಿಯಾಗೆ ಒತ್ತು

ಸ್ಥಳೀಯ ಉತ್ಪಾದಕರನ್ನು ಗುರುತಿಸಿ ಅವರಿಗೆ ಆಮದು ತಗ್ಗಿಸಲು ನೆರವು ಮತ್ತು ವೈದ್ಯಕೀಯ ಸಲಕರಣೆಗಳ ರಫ್ತು ನಿಟ್ಟಿನಲ್ಲಿ ಕ್ರಮ

ಬಹುತೇಕ ಶೂನ್ಯದಿಂದ ಪ್ರತಿ ದಿನ 1.87 ಲಕ್ಷ ಪಿಪಿಇಗಳ ದೇಶೀಯ ಉತ್ಪಾದನೆ ವೃದ್ಧಿ

ಬಹುತೇಕ ಶೂನ್ಯದಿಂದ ಪ್ರತಿ ದಿನ 2.30 ಲಕ್ಷ ಎನ್-95 ಮಾಸ್ಕ್ ದೇಶೀಯ ಉತ್ಪಾದನೆಗೆ ಕ್ರಮ

ಎಚ್ ಸಿಕ್ಯೂ ಸ್ಥಳೀಯ ಉತ್ಪಾದನಾ ಸಾಮರ್ಥ್ಯ ಶೇ . 150ರಷ್ಟು ಹೆಚ್ಚಳ

ಕೇಂದ್ರ/ರಾಜ್ಯ ಸರ್ಕಾರಿ ಸಂಸ್ಥೆಗಳಿಗೆ ಮತ್ತು ಫಾರ್ಮರ್ಸಿಗಳಿಗೆ 2.5 ಕೋಟಿ ಎಚ್ ಸಿಕ್ಯೂ ಮಾತ್ರೆಗಳು ಅಗತ್ಯ; ಸುಮಾರು 16 ಕೋಟಿ ಮಾತ್ರೆ ಬಿಡುಗಡೆ

 

1. ಗೃಹ ವ್ಯವಹಾರಗಳ ಸಚಿವಾಲಯ ತನ್ನ ಆದೇಶ ದಿನಾಂಕ 29.03.2020ರ ಅನ್ವಯ 3ನೇ ಉನ್ನತಾಧಿಕಾರ ಸಮಿತಿಯನ್ನು ಫಾರ್ಮಸಿಟಿಕಲ್ಸ್ ಕಾರ್ಯದರ್ಶಿ ಡಾ. ಪಿ.ಡಿ. ವಘೇಲಾ ಸಮನ್ವಯದಲ್ಲಿ ರಚಿಸಿತು. ಅದರಲ್ಲಿ ಡಿಪಿಐಐಟಿ ಕಾರ್ಯದರ್ಶಿ, ಜವಳಿ ಕಾರ್ಯದರ್ಶಿ, ಸಿಬಿಐಸಿ ಅಧ್ಯಕ್ಷರು, ಡಿಆರ್ ಡಿಒ ಕಾರ್ಯದರ್ಶಿ, ಪಿಎಂಒದ ಹಿರಿಯ ಅಧಿಕಾರಿಗಳು, ಸಂಪುಟ ಸಚಿವಾಲಯ, ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಗೃಹ ವ್ಯವಹಾರಗಳ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಆರೋಗ್ಯ ಸಂಶೋಧನಾ ಇಲಾಖೆಯ ಕಾರ್ಯದರ್ಶಿಗಳು ಸೇರಿದ್ದರು. ಈ ಸಮಿತಿಯ ಉದ್ದೇಶವೆಂದರೆ ಅತ್ಯವಶ್ಯಕ ವೈದ್ಯಕೀಯ ಸಲಕರಣೆಗಳಾದ ಪಿಪಿಇ, ಮಾಸ್ಕ್, ಗ್ಲೌಸ್ ಮತ್ತು ವೆಂಟಿಲೇಟರ್ ಗಳ ಲಭ್ಯತೆಯನ್ನು ಖಾತ್ರಿಪಡಿಸಲು ಉತ್ಪಾದನೆ, ಖರೀದಿ, ಆಮದು ಮತ್ತು ವಿತರಣೆಯ ಬಗ್ಗೆ ನಿಗಾವಹಿಸುವುದಾಗಿದೆ.

2. ಈ ಸಮಿತಿ ಆಗಾಗ್ಗೆ ಸಭೆ ನಡೆಸುತ್ತಿದ್ದು, ಇಂದಿನವರೆಗೆ 24 ಸಭೆಗಳನ್ನು ನಡೆಸಿದೆ. ಅಲ್ಲದೆ ಸಮಿತಿ ನಾನಾ ವೈದ್ಯಕೀಯ ಸಲಕರಣೆಗಳ ಉತ್ಪಾದನೆ ಪ್ರಸ್ತಾವಗಳನ್ನು ಪರಿಶೀಲಿಸಲು ತಾಂತ್ರಿಕ ಸಮಿತಿಯೊಂದನ್ನು ರಚಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಆರೋಗ್ಯ ಸಂಶೋಧನಾ ಇಲಾಖೆ ತಿಳಿಸಿರುವಂತೆ ಮತ್ತು ಅದರ ಬೇಡಿಕೆಗಳಿಗೆ ಅನುಗುಣವಾಗಿ 2020ರ ಜೂನ್ ವರೆಗೆ ಸಮಿತಿ ನಿರಂತರವಾಗಿ ಹಾಲಿ ಇರುವ ವೈದ್ಯಕೀಯ ಸಲಕರಣೆಗಳ ಉತ್ಪಾದಕರ ಸಾಮರ್ಥ್ಯವೃದ್ಧಿ ಮತ್ತು ಹೊಸ ಉತ್ಪಾದಕರನ್ನು ಗುರುತಿಸುವ ಕೆಲಸವನ್ನು ಮಾಡಲಿದೆ. ಅಲ್ಲದೆ ದೇಶೀಯ ಉತ್ಪಾದಕರು ಕಚ್ಚಾ ಸಾಮಗ್ರಿ, ಬಿಡಿ ಭಾಗಗಳು, ಪ್ರಯಾಣ ಮತ್ತು ಸಾಗಾಣೆ ಸೇರಿದಂತೆ ಅವರು ಎದುರಿಸುವ ಹಲವು ಅಡೆತಡೆಗಳನ್ನು ನಿವಾರಿಸಿ ಅವರಿಗೆ ಪೂರಕವಾಗಿ ಸೇವೆ ಸಲ್ಲಿಸುತ್ತಿದೆ. ಪ್ರಸ್ತುತ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವೈದ್ಯಕೀಯ ಪೂರೈಕೆಗೆ ಜಾಗತಿಕ ಮಟ್ಟದಲ್ಲಿ ಭಾರೀ ಬೇಡಿಕೆ ಸೃಷ್ಟಿಯಾಗಿದ್ದು, ದೇಶೀಯ ಸಾಮರ್ಥ್ಯದ ಕೊರತೆಯೂ ಸಹ ಇದೆ ಮತ್ತು ಬಹುತೇಕ ವೈದ್ಯಕೀಯ ಪೂರೈಕೆಗಳು ಆಮದು ಮಾಡಿಕೊಳ್ಳ ಬೇಕಾಗಿರುವುದರಿಂದ ಅದು ದೊಡ್ಡ ಸವಾಲಾಗಿದೆ. ಹಾಗಾಗಿ ಸರ್ಕಾರ ದೇಶೀಯ ಉತ್ಪಾದನೆಯನ್ನು ಉತ್ತೇಜಿಸುತ್ತಿದೆ. ಕೆಲವು ಗಂಭೀರ ಉಪಕರಣಗಳ ಖರೀದಿಗೆ ಗಡುವು ಕಾಯ್ದುಕೊಳ್ಳಲು ತೀರ ಅಗತ್ಯ ಪೂರೈಕೆಗೆ ಮಾತ್ರ ಆಮದನ್ನು ಸೀಮಿತಗೊಳಿಸಿದೆ. ಇಂತಹ ರಾಷ್ಟ್ರೀಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅಧಿಕಾರಿಗಳು, ವಿಜ್ಞಾನಿಗಳು ಮತ್ತು ಇಂಜಿನಿಯರ್ ಗಳ ತಂಡ ದಿನದ 24 ಗಂಟೆಯೂ ಒಗ್ಗೂಡಿ ಶ್ರಮಿಸುತ್ತಿದೆ.

I ವೆಂಟಿಲೇಟರ್ ಗಳು

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಜೂನ್ 2020ರ ವೇಳೆಗೆ 75,000 ವೆಂಟಿಲೇಟರ್ ಗಳ ಅಗತ್ಯತೆ ಇದೆ ಎಂದು ಅಂದಾಜಿಸಿದೆ. ಇದೇ ವೇಳೆ ಪ್ರಸ್ತುತ 19,398 ವೆಂಟಿಲೇಟರ್ ಗಳು ಲಭ್ಯವಿದೆ. ಸಮಿತಿಯ ಆದೇಶದಂತೆ 60,884 ವೆಂಟಿಲೇಟರ್ ಗಳಿಗಾಗಿ ಮೆಸರ್ಸ್ ಎಚ್ಎಲ್ಎಲ್ ಲೈಫ್ ಕೇರ್ ಲಿಮಿಟೆಡ್ ಗೆ ಖರೀದಿ ಬೇಡಿಕೆ ಸಲ್ಲಿಸಲಾಗಿದೆ. ಇದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧೀನದಲ್ಲಿರುವ ಸಾರ್ವಜನಿಕ ವಲಯದ ಸಂಸ್ಥೆಯಾಗಿದ್ದು, ಅದು ಸಮಗ್ರ ಖರೀದಿ ಏಜೆನ್ಸಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ಒಟ್ಟು ಸಲ್ಲಿಸಲಾದ ಬೇಡಿಕೆಯಲ್ಲಿ 59,884 ವೆಂಟಿಲೇಟರ್ ಗಳನ್ನು ದೇಶೀಯವಾಗಿ ಉತ್ಪಾದಿಸಲು ಬೇಡಿಕೆ ಸಲ್ಲಿಸಲಾಗಿದೆ ಮತ್ತು ಸುಮಾರು 1000 ವೆಂಟಿಲೇಟರ್ ಗಳನ್ನು ಆಮದು ಮಾಡಿಕೊಳ್ಳಲಾಗುವುದು. ಅಂದಾಜಿಸಲಾದ ಬೇಡಿಕೆ ಮತ್ತು ಖರೀದಿ ಆದೇಶಗಳಲ್ಲಿ ರಾಜ್ಯ ಸರ್ಕಾರಗಳ ಅಗತ್ಯತೆಗಳೂ ಒಳಗೊಂಡಿವೆ.

ಮೇಕ್ ಇನ್ ಇಂಡಿಯಾ ಉಪಕ್ರಮದ ಭಾಗವಾಗಿ ಸ್ಥಳೀಯ ವೆಂಟಿಲೇಟರ್ ಉತ್ಪಾದಕರನ್ನು ಗುರುತಿಸುವುದು ಮತ್ತು ಅವರಿಗೆ ಮಾರ್ಗದರ್ಶನ ನೀಡುವುದು ಮತ್ತು ಅವರಿಗೆ ಯಾವ ಮಾನದಂಡಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅಂತಿಮಗೊಳಿಸಿ ತರಬೇತಿ ಹಾಗೂ ಇನ್ನಿತರ ಮಾನದಂಡಗಳನ್ನು ತಿಳಿಸುವುದು, ಹೊಸದಾಗಿ ಪೂರೈಕೆ ಸರಣಿ ಸೃಷ್ಟಿಸುವುದು, ಅವರಿಗೆ ಸಾಗಾಣೆ ವಿಷಯಗಳಲ್ಲಿ ಸಹಾಯ ಮತ್ತು ಪೂರೈಕೆಗೆ ನೆರವಾಗುವುದು, ರಾಜ್ಯ ಸರ್ಕಾರದ ಅಗತ್ಯತೆಗಳಿಗೆ ಸ್ಪಂದಿಸುವುದು ಇತ್ಯಾದಿ ಸೇರಿವೆ. ಪ್ರಮುಖ ದೇಶೀಯ ಉತ್ಪಾದಕರಲ್ಲಿ ಮೆಸರ್ಸ್ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(ಸ್ಕನ್ ರೆ ಸಹಭಾಗಿತ್ವದಲ್ಲಿ) 30,000 ವೆಂಟಿಲೇಟರ್ ಗಳ ಖರೀದಿಗೆ ಬೇಡಿಕೆ ಸಲ್ಲಿಸಲಾಗಿದೆ. ಮೆಸರ್ಸ್ ಆಗ್ವ(ಮೆಸರ್ಸ್ ಮಾರುತಿ ಸುಜುಕಿ ಲಿಮಿಟೆಡ್ ಸಹಭಾಗಿತ್ವದಲ್ಲಿ) 10,000 ವೆಂಟಿಲೇಟರ್ ಗಳಿಗೆ ಬೇಡಿಕೆ ಸಲ್ಲಿಸಲಾಗಿದೆ ಮತ್ತು ಎಎಂಟಿಝೆಡ್(ಎಪಿ ಮೆಡ್ ಟೆಕ್ ಝೋನ್)ಗೆ 13,500 ವೆಂಟಿಲೇಟರ್ ಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ದೇಶೀಯ ಉತ್ಪಾದಕರು ತಾವು ಒಪ್ಪಿರುವ ಕಾಲಮಿತಿಯಲ್ಲಿ ಪೂರೈಕೆಯನ್ನು ಆರಂಭಿಸಿದ್ದಾರೆ ಮತ್ತು ಪ್ರಸ್ತುತ ರವಾನೆಗೂ ಮುನ್ನು ತಪಾಸಣೆ ಹಂತದಲ್ಲಿವೆ.

II ಆಕ್ಸಿಜನ್ ಮತ್ತು ಆಕ್ಸಿಜನ್ ಸಿಲಿಂಡರ್ ಗಳು

ಆಕ್ಸಿಜನ್ ಮತ್ತು ಆಕ್ಸಿಜನ್ ಸಿಲಿಂಡರ್ ಗಳ ವಿಚಾರದಲ್ಲಿ ದೇಶ ಸ್ವಾವಲಂಬಿಯಾಗಿದೆ. ಒಟ್ಟು ಆಕ್ಸಿಜನ್ ಉತ್ಪಾದನಾ ಸಾಮರ್ಥ್ಯ 6,400 ಎಂಟಿ ಇದ್ದು, ಆ ಪೈಕಿ ಸುಮಾರು 1000 ಎಂಟಿ ವೈದ್ಯಕೀಯ ಆಕ್ಸಿಜನ್ ಗಾಗಿ ಬಳಕೆ ಮಾಡಲಾಗುತ್ತಿದೆ. 5 ದೊಡ್ಡ ಮತ್ತು 600 ಸಣ್ಣ ಆಕ್ಸಿಜನ್ ಉತ್ಪಾದಕರು ದೇಶದಲ್ಲಿದ್ದಾರೆ. ಸುಮಾರು 409 ಆಸ್ಪತ್ರೆಗಳು ತಾವೇ ಸ್ವತಃ ಆಕ್ಸಿಜನ್ ಅನ್ನು ಉತ್ಪಾದಿಸುತ್ತಿವೆ ಮತ್ತು ದೇಶದಲ್ಲಿ ಸುಮಾರು 1050 ಕ್ರಯೋಜಿನಿಕ್ ಟ್ಯಾಂಕರ್ ಗಳಿವೆ.

ಸುಮಾರು 4.38 ಲಕ್ಷ ವೈದ್ಯಕೀಯ ಆಕ್ಸಿಜನ್ ಸಿಲಿಂಡರ್ ಗಳು ಪೂರೈಕೆಗೆ ಲಭ್ಯವಿದೆ. ಅಲ್ಲದೆ 1.03 ಲಕ್ಷ ಹೊಸ ವೈದ್ಯಕೀಯ ಆಕ್ಸಿಜನ್ ಸಿಲಿಂಡರ್ ಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಐದು ಲಕ್ಷ ಕೈಗಾರಿಕಾ ಆಕ್ಸಿಜನ್ ಸಿಲಿಂಡರ್ ಗಳನ್ನು ಅಗತ್ಯಬಿದ್ದರೆ ಪರಿವರ್ತಿಸಲು ಗುರುತಿಸಲಾಗಿದೆ. ಅಲ್ಲದೆ ಸುಮಾರು 60,000 ಸಿಲಿಂಡರ್ ಗಳ ಪರಿವರ್ತನೆಗೆ ಈಗಾಗಲೇ ಬೇಡಿಕೆ ಸಲ್ಲಿಸಲಾಗಿದೆ.

III ವೈಯಕ್ತಿಕ ರಕ್ಷಣಾ ಉಪಕರಣ(ಪಿಪಿಇ)

2020ರ ಜೂನ್ ವರೆಗೆ ಒಟ್ಟು ಪಿಪಿಇ ಕಿಟ್ ಗಳ ಅಗತ್ಯತೆ ಸುಮಾರು 2.01 ಕೋಟಿ ಎಂದು ಅಂದಾಜಿಸಲಾಗಿದೆ. ಇದೇ ವೇಳೆ ಈಗಾಗಲೇ 2.22 ಕೋಟಿ ಕಿಟ್ ಗಳಿಗೆ ಬೇಡಿಕೆ ಸಲ್ಲಿಸಲಾಗಿದೆ ಮತ್ತು ಅದರಲ್ಲಿ 1.42 ಕೋಟಿ ಬೇಡಿಕೆಯನ್ನು ದೇಶಿ ಉತ್ಪಾದಕರಿಗೆ ಸಲ್ಲಿಸಲಾಗಿದ್ದು ಮತ್ತು 80 ಲಕ್ಷ ಪಿಪಿಇ ಕಿಟ್ ಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಇದಕ್ಕೂ ಮುನ್ನ ದೇಶದಲ್ಲಿ ಪಿಪಿಇ ಕಿಟ್ ಗಳ ಉತ್ಪಾದನೆ ಇರಲಿಲ್ಲ ಮತ್ತು ಬಹುತೇಕ ಆಮದು ಮಾಡಿಕೊಳ್ಳಲಾಗುತ್ತಿತ್ತು. ಅತ್ಯಲ್ಪ ಅವಧಿಯಲ್ಲಿಯೇ 107 ಉತ್ಪಾದಕರನ್ನು ಗುರುತಿಸಿ, ಅವರುಗಳಿಗೆ ಸಹಾಯ ಮಾಡಲಾಗಿದ್ದು, ಅವರುಗಳ ಪ್ರತಿ ದಿನ ಉತ್ಪಾದನಾ ಸಾಮರ್ಥ್ಯ 1.87 ಲಕ್ಷ ಕ್ಕೆ(30.04.2020ರ ವೇಳೆಗೆ) ಏರಿಕೆಯಾಗಿದೆ. ಸದ್ಯ 17.37 ಲಕ್ಷ ಪಿಪಿಇ ಕಿಟ್ ಗಳನ್ನು ಸ್ವೀಕರಿಸಲಾಗಿದೆ. ಮುಂದಿನ ಎರಡು ತಿಂಗಳಲ್ಲಿ ಹೆಚ್ಚುವರಿ ದೇಶೀಯ ಪೂರೈಕೆ ಸೇರಿಸಿದರೆ 1.15 ಕೋಟಿಗೂ ಅಧಿಕ ಪಿಪಿಇ ಕಿಟ್ ಗಳು ಪೂರೈಕೆಯಾಗಲಿವೆ.

ಸರ್ಕಾರಿ ಸಂಸ್ಥೆಗಳು, ತಂತ್ರಜ್ಞಾನ ಅಭಿವೃದ್ಧಿ ಸಾಮಗ್ರಿ ಮತ್ತು ಪರೀಕ್ಷಾ ಸಲಕರಣೆಗಳ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿವೆ. ಪ್ರಸ್ತುತ ಇರುವ ಪ್ರಯೋಗಾಲಯಗಳಿಗೆ ಉದಾಹರಣೆಗೆ ಕೊಯಮತ್ತೂರಿನ ಎಸ್ಐಟಿಆರ್ ಎ(ದಕ್ಷಿಣ ಭಾರತ ಜವಳಿ ಸಂಶೋಧನಾ ಒಕ್ಕೂಟ); 9 ಪ್ರಯೋಗಾಲಯಗಳನ್ನು ದೇಶದ ನಾನಾ ಭಾಗಗಳಲ್ಲಿ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಗಳು(ಡಿಆರ್ ಡಿಒ) ಮತ್ತು ಸೇನಾ ಸಾಮಗ್ರಿಗಳ ಕಾರ್ಖಾನೆ ಮಂಡಳಿಗಳಲ್ಲಿ ಸ್ಥಾಪಿಸಲಾಗಿದೆ. ಅಲ್ಲದೆ ಡಿಆರ್ ಡಿಒ ದೇಶೀಯ ಉತ್ಪಾದಕರಿಗೆ ಪೂರೈಸಲು ಹೊಸ ಪಿಯು ಕೋಟೆಡ್ ನೈಲಾನ್/ಪಾಲಿಸ್ಟಾರ್ ಅನ್ನು ಅಭಿವೃದ್ಧಿಪಡಿಸಿದೆ.

IV ಎನ್-95 ಮಾಸ್ಕ್ ಗಳು

2020ರ ಜೂನ್ ವರೆಗೆ ಒಟ್ಟು 2.72 ಕೋಟಿ ಎನ್-95 ಮಾಸ್ಕ್ ಬೇಡಿಕೆ ಇದೆ ಎಂದು ಅಂದಾಜಿಸಲಾಗಿದೆ. ಆ ಪೈಕಿ ಈಗಾಗಲೇ 2.49 ಕೋಟಿ ಮಾಸ್ಕ್ ಗಳ ಖರೀದಿಗೆ ಬೇಡಿಕೆ ಸಲ್ಲಿಸಲಾಗಿದೆ. ಅದರಲ್ಲಿ 1.49 ಕೋಟಿ ಮಾಸ್ಕ್ ಗಳ ಉತ್ಪಾದನೆಗೆ ದೇಶೀಯ ಉತ್ಪಾದಕರಿಗೆ ಬೇಡಿಕೆ ಸಲ್ಲಿಸಲಾಗಿದೆ ಮತ್ತು ಒಂದು ಕೋಟಿ ಎನ್-95 ಮಾಸ್ಕ್ ಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಸದಸ್ಯ ದೇಶದಲ್ಲಿ ನಾಲ್ಕು ಪ್ರಮುಖ ಸ್ಥಳೀಯ ಮಾಸ್ಕ್ ಉತ್ಪಾದಕರಿದ್ದು, ಇನ್ನೂ ಹಲವು ಕಂಪನಿಗಳು ಸಜ್ಜಾಗುತ್ತಿದ್ದು, ಅವರನ್ನು ಗುರುತಿಸುವ ಮತ್ತು ಪ್ರೋತ್ಸಾಹಿಸುವ ಕೆಲಸ ನಡೆಯುತ್ತಿದೆ. ಪ್ರಸ್ತುತ ಪ್ರತಿ ದಿನ ದೇಶೀಯ ಉತ್ಪಾದನೆ ಸುಮಾರು 2.30 ಲಕ್ಷ (30.04.2020ರಲ್ಲಿರುವಂತೆ) ಉತ್ಪಾದನೆ ಇದೆ. ಸದ್ಯ ಸುಮಾರು 49.12 ಲಕ್ಷ ಎನ್-95 ಮಾಸ್ಕ್ ಗಳನ್ನು ಸ್ವೀಕರಿಸಲಾಗಿದೆ. ಹೆಚ್ಚುವರಿಯಾಗಿ ಮುಂದಿನ ಎರಡು ತಿಂಗಳಲ್ಲಿ 1.40 ಕೋಟಿಗೂ ಅಧಿಕ ಮಾಸ್ಕ್ ಗಳು ದೇಶೀಯವಾಗಿ ಪೂರೈಕೆಯಾಗಲಿವೆ. ಹಾಲಿ ಇರುವ ಪ್ರಯೋಗಾಲಯ ಉದಾಹರಣೆಗೆ ಎಸ್ಐಟಿಆರ್ ಎಗೆ ಹೆಚ್ಚುವರಿಯಾಗಿ ಭಾರತೀಯ ಗುಣಮಟ್ಟ ಮಂಡಳಿ(ಕ್ಯೂಸಿಐ) ಮೂಲಕ ಹೆಚ್ಚುವರಿ ಪ್ರಯೋಗಾಲಯಗಳನ್ನು ಸೃಷ್ಟಿಸಲಾಗುತ್ತಿದೆ.

V ಡಯಾಗ್ನಾಸ್ಟಿಕ್ ಕಿಟ್ (ಸೋಂಕು ಪತ್ತೆ ಪರೀಕ್ಷಾ ಕಿಟ್)

ಐಸಿಎಂಆರ್ ಪ್ರತಿ ದಿನ ಸುಮಾರು 70,000 ಪರೀಕ್ಷೆಗಳನ್ನು ನಡೆಸುವ ಹಂತ ತಲುಪಿದೆ ಮತ್ತು ಸದ್ಯ 9 ಲಕ್ಷಕ್ಕೂ ಅಧಿಕ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಪರೀಕ್ಷೆಯನ್ನು ಅಗತ್ಯ ಆಧಾರಿತ ಉಪಕರಣವನ್ನಾಗಿ ಬಳಸುವುದು ಇದರ ಕಾರ್ಯತಂತ್ರವಾಗಿದೆ. ಸೋಂಕು ಪತ್ತೆ ಪರೀಕ್ಷೆಯನ್ನು ಖಾತ್ರಿಪಡಿಸಲು ಕಿಟ್ ಗಳು, ಅಗತ್ಯ ಸಲಕರಣೆ ಮತ್ತಿತರವುಗಳನ್ನು ಅಗತ್ಯ ಪ್ರಮಾಣದಲ್ಲಿ ಲಭ್ಯವಾಗುವಂತೆ ದಾಸ್ತಾನು ಇಡಲಾಗಿದೆ. ಪರೀಕ್ಷಾ ಕಿಟ್ ಮತ್ತಿತರ ವಿಚಾರದಲ್ಲಿ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ನೆರವು ನೀಡುವ ಹೊಣೆಗಾರಿಕೆಯನ್ನು ವಹಿಸಿಕೊಂಡಿದೆ. ಜೊತೆಗೆ ರಾಜ್ಯಗಳಿಗೂ ಕೂಡ ಅವುಗಳ ಖರೀದಿಗೆ ಮುಕ್ತ ಅವಕಾಶ ನೀಡಲಾಗಿದೆ ಹಾಗೂ ಕೆಲವು ರಾಜ್ಯ ಸರ್ಕಾರಗಳು ತಮ್ಮ ಪೂರೈಕೆಗಳನ್ನು ತಾವೇ ಖರೀದಿಸಲು ಪ್ರಯತ್ನಿಸುತ್ತಿವೆ.

ಡಿಎಚ್ಆರ್, 35 ಲಕ್ಷ ದೈಹಿಕ ಆರ್ ಟಿ-ಪಿಸಿಆರ್ ಕಿಟ್ ಗಳ ಅಗತ್ಯತೆ ಇದೆ ಎಂದು ಅಂದಾಜು ಮಾಡಿದ್ದು, ಪ್ರೋಬ್, ಪ್ರೀಮಿಯರ್ ಮತ್ತು ಮಾಸ್ಟರ್ ಮಿಕ್ಸ್ ಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಇಂದಿನವರೆಗೆ 16.4 ಲಕ್ಷ ಪರೀಕ್ಷಾ ಕಿಟ್ ಗಳನ್ನು ಸ್ವೀಕರಿಸಲಾಗಿದೆ. ಒಟ್ಟು 35 ಲಕ್ಷ ಆರ್ ಟಿ-ಪಿಸಿಆರ್ ಕಿಟ್ ಗಳಿಗೆ ಬೇಡಿಕೆ ಇದ್ದು, ಆ ಪೈಕಿ 19 ಲಕ್ಷ ಕಿಟ್ ಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಅವುಗಳಲ್ಲಿ 2 ಲಕ್ಷ ಕಿಟ್ ಗಳನ್ನು ದೇಶೀಯ ಉತ್ಪಾದಕರು ಪೂರೈಸಲಿದ್ದಾರೆ. ಇಂದಿನವರೆಗೆ ಒಟ್ಟು 13.75 ಲಕ್ಷ ಕಂಬೈನ್ಡ್ ಆರ್ ಟಿ-ಪಿಸಿಆರ್ ಕಿಟ್ ಗಳನ್ನು ಸ್ವೀಕರಿಸಲಾಗಿದೆ. ಅಲ್ಲದೆ ಡಿಎಚ್ಆರ್ 2 ಲಕ್ಷ ರೋಚಿಸ್ ಕೊಬಾಸ್ ಪರೀಕ್ಷಾ ಕಿಟ್ ಗಳಿಗೆ ಬೇಡಿಕೆ ಸಲ್ಲಿಸಿದ್ದು, ಅವುಗಳಲ್ಲಿ 60,000 ಕಿಟ್ ಗಳನ್ನು ಈಗಾಗಲೇ ಸ್ವೀಕರಿಸಲಾಗಿದೆ.

VI ಔಷಧಗಳು ಮತ್ತು ಇತರೆ ವೈದ್ಯಕೀಯ ಸಾಮಗ್ರಿ

ಔಷಧಗಳು ಮತ್ತು ವೈದ್ಯಕೀಯ ಸಲಕರಣೆಗಳ ಉತ್ಪಾದನೆ ಮತ್ತು ಪೂರೈಕೆ ಮೇಲೆ ನಿರಂತರ ನಿಗಾವಹಿಸಲು ಎರಡು ಕಂಟ್ರೋಲ್ ರೂಂಗಳನ್ನು – ಒಂದು ಫಾರ್ಮಸಿಟಿಕಲ್ಸ್ ಇಲಾಖೆ(ಡಿಒಪಿ), ಇನ್ನೊಂದನ್ನು ರಾಷ್ಟ್ರೀಯ ಫಾರ್ಮಸಿಟಿಕಲ್ಸ್ ದರ ಪ್ರಾಧಿಕಾರ(ಎನ್ ಪಿಪಿಎ) ಸ್ಥಾಪಿಸಿವೆ. ಅಲ್ಲದೆ ಸರ್ಕಾರ ಕೂಡ ನಿರಂತರವಾಗಿ ಉತ್ಪಾದಕರು, ವಿತರಕರು ಮತ್ತು ಫಾರ್ಮಸಿಸ್ಟ್ ಗಳ ಜೊತೆ ಸಮಾಲೋಚನೆ ನಡೆಸುತ್ತಿದೆ. ರಾಜ್ಯ ಸರ್ಕಾರಗಳು ಕೂಡ ಉದ್ಯಮದ ಮೇಲೆ ನಿಗಾವಹಿಸಿ, ಅವುಗಳಿಗೆ ಸಹಕಾರ ನೀಡುತ್ತಿದೆ. ಹೈಡ್ರೋಕ್ಲೋರೋಕ್ವಿನ್(ಎಚ್ ಸಿಕ್ಯೂ) ಉತ್ಪಾದನೆ ತಿಂಗಳಿಗೆ 12.23 ಕೋಟಿಯಿಂದ 30 ಕೋಟಿ ಏರಿಕೆಯಾಗಿದೆ. ದೇಶ ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಫಾರ್ಮರ್ಸಿಗಳಿಗೆ ಅಗತ್ಯವಿದ್ದ 2.5 ಕೋಟಿ ಮಾತ್ರೆಗಳಿಗೆ ಬದಲಾಗಿ 16 ಕೋಟಿ ಎಚ್ ಸಿಕ್ಯೂ ಮಾತ್ರೆಗಳನ್ನು ಬಿಡುಗಡೆ ಮಾಡಿದೆ.

VII ಇತರೆ ಸಚಿವಾಲಯಗಳು/ಇಲಾಖೆಗಳ ಪಾತ್ರ

ಜವಳಿ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಡಿಪಿಐಐಟಿ, ವಿದೇಶಾಂಗ ವ್ಯವಹಾರಗಳು, ಡಿಆರ್ ಡಿಒ ಮತ್ತು ಐಸಿಎಂಆರ್, ಇಜಿ-3 ಸಮಿತಿಯ ಭಾಗವಾಗಿದ್ದು, ಅವು ಅವಿರತವಾಗಿ ಕಾರ್ಯನಿರ್ವಹಿಸಲು ಅಗತ್ಯ ಬೆಂಬಲವನ್ನು ನೀಡುತ್ತಿವೆ. ಅಲ್ಲದೆ ಎಂಇಎ ಹೆಚ್ಚುವರಿಯಾಗಿ ಭಾರತೀಯ ಉತ್ಪಾದಕರಿಗೆ ಅಗತ್ಯ ವೈದ್ಯಕೀಯ ಪೂರೈಕೆ ಮತ್ತು ಬಿಡಿ ಭಾಗಗಳ ಆಮದು ಗುರುತಿಸುವಿಕೆ ಹಾಗೂ ಖರೀದಿಗೂ ನೆರವಾಗುತ್ತಿದೆ. ನಾಗರಿಕ ವಿಮಾನಯಾನ ಸಚಿವಾಲಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಗೂ ಸ್ಥಳೀಯವಾಗಿ ಔಷಧಗಳು ಮತ್ತು ವೈದ್ಯಕೀಯ ಸಲಕರಣೆಗಳು ಹಾಗೂ ಇನ್ನಿತರ ಬಿಡಿ ಭಾಗಗಳನ್ನು ಸರಕು ಸಾಗಾಣೆ ಸೇವೆ ಮತ್ತು ಜೀವನಾಡಿ ಉಡಾನ್ ಯೋಜನೆಗಳ ಮೂಲಕ ಅತ್ಯಂತ ಕ್ರಿಯಾಶೀಲವಾಗಿ ನೆರವು ನೀಡುತ್ತಿವೆ. ಬಂದರು, ಸುಂಕ, ರೈಲ್ವೆ ಮತ್ತು ಅಂಚೆ ಇಲಾಖೆಗಳು ಕೂಡ ವೈದ್ಯಕೀಯ ಸಲಕರಣೆಗಳ ವಿತರಣೆ ಮತ್ತು ಅಗತ್ಯ ಅನುಮತಿಗಳನ್ನು ಖಾತ್ರಿಪಡಿಸಲು ಹೆಚ್ಚಿನ ಪ್ರಮಾಣದಲ್ಲಿ ಸಹಾಯ ಮಾಡುತ್ತಿವೆ. ಈ ಪ್ರಯತ್ನಗಳಿಗೆ ರಾಜ್ಯ ಸರ್ಕಾರಗಳು ಸಹ ಗಣನೀಯವಾಗಿ ನೆರವು ನೀಡುತ್ತಿವೆ.

***



(Release ID: 1620392) Visitor Counter : 234