ಗೃಹ ವ್ಯವಹಾರಗಳ ಸಚಿವಾಲಯ

ಮೇ 4, 2020 ರಿಂದ ಅನ್ವಯವಾಗುವಂತೆ ಮತ್ತೆ ಎರಡು ವಾರಗಳ ಕಾಲ ಲಾಕ್ ಡೌನ್ ವಿಸ್ತರಣೆ

Posted On: 01 MAY 2020 6:33PM by PIB Bengaluru

ಮೇ 4, 2020 ರಿಂದ ಅನ್ವಯವಾಗುವಂತೆ ಮತ್ತೆ ಎರಡು ವಾರಗಳ ಕಾಲ ಲಾಕ್ ಡೌನ್ ವಿಸ್ತರಣೆ

 

ದೇಶದಲ್ಲಿ ಕೋವಿಡ್ -19 ಪರಿಸ್ಥಿತಿ ನಿಯಂತ್ರಿಸಲು ಲಾಕ್ ಡೌನ್ ನಿಯಮಾವಳಿ ಜಾರಿಗೊಳಿಸಿದ ನಂತರ ಆಗಿರುವ ಪ್ರಯೋಜನಗಳ ಹಿನ್ನೆಲೆಯಲ್ಲಿ ಮತ್ತು ಸಮಗ್ರ ಪರಿಶೀಲನೆಯ ನಂತರ ಭಾರತ ಸರ್ಕಾರದ(ಜಿಒಐ), ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ(ಎಂಎಚ್ಎ), ವಿಪತ್ತು ನಿರ್ವಹಣಾ ಕಾಯ್ದೆ 2005 ಅಡಿಯಲ್ಲಿ ಮೇ 4, 2020 ನಂತರ ಮುಂದಿನ ಎರಡು ವಾರಗಳ ಅವಧಿಗೆ ಲಾಕ್ ಡೌನ್ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಅವಧಿಯಲ್ಲಿ ದೇಶದಲ್ಲಿನ ಕೆಂಪು ವಲಯ(ಹಾಟ್ ಸ್ಪಾಟ್), ಹಸಿರು ಮತ್ತು ಕಿತ್ತಳೆ ವಲಯದ ಸ್ಥಿತಿಗತಿ ಆಧರಿಸಿ ನಾನಾ ಚಟುವಟಿಕೆಗಳನ್ನು ನಿಯಂತ್ರಿಸಲು ಎಂಎಚ್ಎ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಮಾರ್ಗಸೂಚಿಗಳನ್ವಯ ಹಸಿರು ಮತ್ತು ಕಿತ್ತಳೆ ವಲಯಗಳು ಒಳಪಡುವ ಜಿಲ್ಲೆಗಳಲ್ಲಿ ಭಾರೀ ವಿನಾಯಿತಿಗಳನ್ನು ಘೋಷಿಸಲಾಗಿದೆ.

ಕೆಂಪು, ಹಸಿರು ಮತ್ತು ಕಿತ್ತಳೆ ವಲಯಗಳ ಜಿಲ್ಲೆಗಳನ್ನು ಗುರುತಿಸುವ ಮಾನದಂಡಗಳನ್ನು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ(ಎಂಒಎಚ್ಎಫ್ ಡಬ್ಯ್ಲೂ) 2020 ಏಪ್ರಿಲ್ 30ರಂದು ತನ್ನ ಪತ್ರದಲ್ಲಿ ವಿವರವಾಗಿ ತಿಳಿಸಿದೆ. ಹಸಿರು ವಲಯವೆಂದರೆ ಜಿಲ್ಲೆಯಲ್ಲಿ ಈವರೆಗೆ ಶೂನ್ಯ ಸೋಂಕಿತ ಪ್ರಕರಣವಿರಬೇಕು ಅಥವಾ ಕಳೆದ 21 ದಿನಗಳಲ್ಲಿ ಯಾವುದೇ ಪ್ರಕರಣಗಳು ದೃಢಪಟ್ಟಿರಬಾರದು. ಒಟ್ಟು ಕ್ರಿಯಾಶೀಲ ಪ್ರಕರಣಗಳನ್ನು ಪರಿಗಣಿಸಿ ಜಿಲ್ಲೆಗಳನ್ನು ಕೆಂಪು ವಲಯಗಳನ್ನಾಗಿ ವರ್ಗೀಕರಿಸಲಾಗುವುದು. ಅಂತಹ ಜಿಲ್ಲೆಗಳಲ್ಲಿ ಖಚಿತ ಪ್ರಕರಣಗಳು ದುಪ್ಪಟ್ಟಾಗಿರಬೇಕು, ಪರೀಕ್ಷೆ ಮತ್ತು ನಿಗಾ ಬಗ್ಗೆ ಜಿಲ್ಲೆಗಳಿಂದ ಪ್ರತಿಕ್ರಿಯೆಯನ್ನು ಪಡೆಯಲಾಗಿರುತ್ತದೆ. ಯಾವ ಜಿಲ್ಲೆಗಳನ್ನು ಕೆಂಪು ಅಥವಾ ಹಸಿರು ಎಂದು ವ್ಯಾಖ್ಯಾನಿಸಿರುವುದಿಲ್ಲವೋ ಅಂತಹ ಜಿಲ್ಲೆಗಳನ್ನು ಕಿತ್ತಳೆ ವಲಯಗಳನ್ನಾಗಿ ವರ್ಗೀಕರಿಸಲಾಗುವುದು. ಕೆಂಪು, ಹಸಿರು ಮತ್ತು ಕಿತ್ತಳೆ ವಲಯಗಳನ್ನಾಗಿ ಜಿಲ್ಲೆಗಳನ್ನು ವರ್ಗೀಕರಿಸಿರುವುದನ್ನು ಕೇಂದ್ರ ಆರೋಗ್ಯ ಸಚಿವಾಲಯರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಪ್ರತಿ ವಾರ ಅಥವಾ ಅಗತ್ಯಬಿದ್ದ ಸಂದರ್ಭಗಳಲ್ಲಿ ವಿನಿಮಯ ಮಾಡಿಕೊಳ್ಳಲಿದೆ. ಕೇಂದ್ರ ಆರೋಗ್ಯ ಸಚಿವಾಲಯ ಗುರುತಿಸಿರುವ ಕೆಂಪು ಅಥವಾ ಕಿತ್ತಳೆ ವಲಯಗಳಲ್ಲಿ ಸೇರಿಸಲ್ಪಡದ ಜಿಲ್ಲೆಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹೆಚ್ಚುವರಿಯಾಗಿ ಕೆಂಪು ಅಥವಾ ಕಿತ್ತಳೆ ವಲಯಗಳನ್ನಾಗಿ ಸೇರಿಸಹುದು.

ದೇಶದ ಹಲವು ಜಿಲ್ಲೆಗಳು ತಮ್ಮ ಗಡಿಗಳನ್ನು ಒಂದು ಅಥವಾ ಅದಕ್ಕಿಂತ ಹೆಚ್ಚು ಮಹಾನಗರ ಪಾಲಿಕೆಗಳನ್ನು(ಎಂಸಿಎಸ್) ಹೊಂದಿರುತ್ತವೆ. ಮಹಾನಗರ ಪಾಲಿಕೆಗಳಲ್ಲಿ ಹೆಚ್ಚಿನ ಜನದಟ್ಟಣೆ ಇರುವ ಹಿನ್ನೆಲೆಯಲ್ಲಿ ಮತ್ತು ಹೆಚ್ಚಾಗಿ ಜನರು ಸಂಪರ್ಕವೇರ್ಪಡುವ ಸಾಧ್ಯತೆಗಳಿರುವುದರಿಂದ ಅಂತಹ ಪಾಲಿಕೆಗಳ ಗಡಿಯಲ್ಲಿ ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಕೋವಿಡ್-19 ಸೋಂಕು ಹೆಚ್ಚಾಗಿರುತ್ತದೆ. ಹೊಸ ಮಾರ್ಗಸೂಚಿ ಅನ್ವಯ ಅಂತಹ ಜಿಲ್ಲೆಗಳನ್ನು ಎರಡು ವಲಯಗಳನ್ನಾಗಿ ವರ್ಗೀಕರಿಸಲಾಗುವುದು ಅಂದರೆ ಒಂದು ವಲಯ ಮಹಾನಗರ ಪಾಲಿಕೆ (ಎಂಸಿ) ಗಡಿ ಪ್ರದೇಶದ ಒಳಗೆ ಮತ್ತು ಇನ್ನೊಂದು ವಲಯ ಎಂಸಿಯ ಗಡಿಯ ಹೊರ ಭಾಗದ ಪ್ರದೇಶವನ್ನು ಒಳಗೊಂಡಿರುತ್ತದೆ. ನಗರ ಪಾಲಿಕೆಯ ಗಡಿಯಾಚೆಗಿನ ಪ್ರದೇಶದಲ್ಲಿ ಕಳೆದ 21 ದಿನಗಳಲ್ಲಿ ಯಾವುದೇ ಪ್ರಕರಣ ವರದಿಯಾಗದಿದ್ದರೆ ಅಂತಹ ಪ್ರದೇಶವನ್ನು ಕೆಂಪು ಅಥವಾ ಕಿತ್ತಳೆ ಜಿಲ್ಲೆಯ ಒಟ್ಟಾರೆ ವರ್ಗೀಕರಣದ ಒಂದು ಕೆಳಗಿನ ಹಂತದಲ್ಲಿ ವರ್ಗೀಕರಣ ಮಾಡಬಹುದು. ಆದ್ದರಿಂದ ಒಂದು ವೇಳೆ ಇಡೀ ಜಿಲ್ಲೆ ಒಟ್ಟಾಗಿ ಕೆಂಪು ವಲಯದಲ್ಲಿದ್ದರೆ, ಪ್ರದೇಶವನ್ನು ಕಿತ್ತಳೆ ಎಂದು ವರ್ಗೀಕರಿಸಬಹುದು ಅಥವಾ ಒಂದು ವೇಳೆ ಒಟ್ಟಾರೆ ಕಿತ್ತಳೆ ವಲಯದಲ್ಲಿದ್ದರೆ, ಹಸಿರು ವಲಯವೆಂದು ವರ್ಗೀಕರಿಸಬಹುದು. ವರ್ಗೀಕರಣದಿಂದಾಗಿ ಕೋವಿಡ್-19ನಿಂದಾಗಿ ಸ್ವಲ್ಪಮಟ್ಟಿಗೆ ತೊಂದರೆಗೊಳಗಾಗಿರುವ ಜಿಲ್ಲೆಗಳಲ್ಲಿ ಹೆಚ್ಚಿನ ಆರ್ಥಿಕ ಅಥವಾ ಇತರ ಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ವರ್ಗೀಕರಿಸಲಾಗುವುದು ಮತ್ತು ಪ್ರದೇಶ ಕೋವಿಡ್-19 ಪ್ರಕರಣಗಳಿಂದ ಮುಕ್ತವಾಗಿರಲು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವುದನ್ನು ಖಾತ್ರಿಪಡಿಸಬೇಕಿದೆ. ಇದು ಯಾವ ಜಿಲ್ಲೆಗಳಲ್ಲಿ ಮಹಾನಗರಪಾಲಿಕೆಗಳು ಇರುತ್ತವೆಯೋ ಅಂತಹ ಪ್ರದೇಶಕ್ಕೆ ಮಾತ್ರ ಅನ್ವಯವಾಗುತ್ತದೆ.

ಕೋವಿಡ್-19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶದ ಅತ್ಯಂತ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿರುವ ಮತ್ತು ಕೆಂಪು ಮತ್ತು ಕಿತ್ತಳೆ ವಲಯಕ್ಕೆ ಒಳಪಡುವ ಪ್ರದೇಶವನ್ನು ನಿರ್ಬಂಧಿತ (ಕಂಟೈನ್ ಮೆಂಟ್) ವಲಯ ಎಂದು ನಿಯೋಜಿಸಲಾಗುವುದು. ಪ್ರದೇಶದಲ್ಲಿ ಸೋಂಕು ಹರಡುವ ಅಪಾಯ ಹೆಚ್ಚಿರುತ್ತಿದೆ. ನಿರ್ಬಂಧಿತ ಪ್ರದೇಶಗಳನ್ನು ಜಿಲ್ಲಾಡಳಿತಗಳು ಒಟ್ಟು ಕ್ರಿಯಾಶೀಲವಾಗಿರುವ ಪ್ರಕರಣಗಳನ್ನು ಪರಿಗಣಿಸಿ, ಭೌಗೋಳಿಕ ವ್ಯಾಪ್ತಿಯನ್ನು ಆಧರಿಸಿ ಮತ್ತು ಜಾರಿ ದೃಷ್ಟಿಯಿಂದ ಸೂಚಿಸಲಾಗಿರುವ ನಿಗದಿತ ಮಾನದಂಡಗಳ ಅಗತ್ಯತೆ ಅನುಸಾರ ಗುರುತಿಸಬಹುದಾಗಿದೆ. ಸ್ಥಳೀಯ ಪ್ರಾಧಿಕಾರ ನಿರ್ಬಂಧಿತ ವಲಯಗಳಲ್ಲಿನ ನಿವಾಸಿಗಳಲ್ಲಿ ಶೇಕಡ 100ರಷ್ಟು ಆರೋಗ್ಯ ಸೇತು ಆಪ್ ಡೌನ್ ಲೋಡ್ ಮಾಡಿರುವುದನ್ನು ಖಾತ್ರಿಪಡಿಸಬೇಕು. ನಿರ್ಬಂಧಿತ ವಲಯಗಳಲ್ಲಿ ಕಣ್ಗಾವಲು ಅಥವಾ ನಿಗಾ ಮಾನದಂಡವನ್ನು ಚುರುಕುಗೊಳಿಸಲಾಗುವುದು ಮತ್ತು ಸಂಪರ್ಕ ಪತ್ತೆ, ಮನೆ ಮನೆ ಸಮೀಕ್ಷೆ, ಗೃಹ/ಸಾಂಸ್ಥಿಕವಾಗಿ ವ್ಯಕ್ತಿಗಳ ಕ್ವಾರಂಟೈನ್ ಆಧರಿಸಿ ಅಪಾಯ ಮೌಲ್ಯಮಾಪನ ಮತ್ತು ಕ್ಲಿನಿಕಲ್ ನಿರ್ವಹಣೆಯನ್ನು ಕೈಗೊಳ್ಳಬೇಕಿದೆ. ಪೆರಿಮೀಟರ್ ನಿಯಂತ್ರಣವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ಮೂಲಕ ವಲಯಗಳಿಂದ ವೈದ್ಯಕೀಯ ತುರ್ತು ಮತ್ತು ಅಗತ್ಯ ಸರಕು ಮತ್ತು ಸೇವೆ ಪೂರೈಕೆ ನಿರ್ವಹಣೆ ಹೊರತುಪಡಿಸಿ, ಇತರೆ ವ್ಯಕ್ತಿಗಳು ಹೊರಗೆ ಮತ್ತು ಒಳಗೆ ಸಂಚರಿಸದಂತೆ ನಿರ್ಬಂಧಿಸಬೇಕು. ನಿರ್ಬಂಧಿತ ವಲಯಗಳಲ್ಲಿ ಇತರೆ ಯಾವುದೇ ಚಟುವಟಿಕೆಗಳಿಗೆ ಅನುಮತಿ ಇರುವುದಿಲ್ಲ.

ಹೊಸ ಮಾರ್ಗಸೂಚಿ ಅನ್ವಯ ದೇಶಾದ್ಯಂತ ಕೆಲ ಚುಟುವಟಿಕೆ ಹೊರತುಪಡಿಸಿ, ಬಹುತೇಕ ಚಟುವಟಿಕೆಗಳಿಗೆ ಮಾತ್ರ ನಿರ್ಬಂಧವಿರುತ್ತದೆ. ಅವುಗಳೆಂದರೆ ವಿಮಾನಯಾನ, ರೈಲು ಮತ್ತು ಮೆಟ್ರೋ ಸಂಚಾರ ಹಾಗೂ ಅಂತರ ರಾಜ್ಯ ರಸ್ತೆ ಸಂಚಾರ, ಶಾಲಾ-ಕಾಲೇಜು ಮತ್ತು ಶಿಕ್ಷಣ ಸಂಸ್ಥೆಗಳು ಹಾಗೂ ತರಬೇತಿ/ಕೋಚಿಂಗ್ ಸಂಸ್ಥೆಗಳನ್ನು ನಡೆಸುವುದು, ಆಸ್ಪತ್ರೆ ಸೇವೆಗಳು, ಹೊಟೇಲ್ ಮತ್ತು ರೆಸ್ಟೋರೆಂಟ್ ಸೇವೆಗಳು ಸೇರಿದಂತೆ ಹೆಚ್ಚಿನ ಜನ ಸೇರುವಂತಹ ಸಿನಿಮಾ ಮಂದಿರ, ಮಾಲ್, ಜಿಮ್ ಗಳು, ಕ್ರೀಡಾ ಸಂಕೀರ್ಣಗಳು ಇತ್ಯಾದಿ. ಯಾವುದೇ ಬಗೆಯ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಮತ್ತು ಇತರೆ ಸಭೆ ಸಮಾರಂಭಗಳು ಹಾಗೂ ಧಾರ್ಮಿಕ ಸ್ಥಳಗಳಲ್ಲಿ/ಪೂಜಾ ಸ್ಥಳಗಳಲ್ಲಿ ಸಾರ್ವಜನಿಕರ ನಿಷೇಧ ಮುಂದುವರಿಯಲಿದೆ. ಆದರೆ ಆಯ್ದ ಉದ್ದೇಶಗಳಿಗೆ ಮತ್ತು ಎಂಎಚ್ಎ ಅನುಮತಿ ನೀಡಿರುವ ಉದ್ದೇಶಗಳಿಗೆ ಮಾತ್ರ ವಿಮಾನಯಾನ, ರೈಲು ಮತ್ತು ರಸ್ತೆ ಸಾರಿಗೆ ಮೂಲಕ ಜನ ಸಂಚಾರ ಕೈಗೊಳ್ಳಲು ಅವಕಾಶವಿದೆ.

ಪರಿಷ್ಕೃತ ಮಾನದಂಡದಲ್ಲಿ ಸಾರ್ವಜನಿಕರ ಸುರಕ್ಷತೆ ಮತ್ತು ಹಿತದೃಷ್ಟಿಯಿಂದ ಕೆಲವು ಕ್ರಮಗಳನ್ನು ನಿಗದಿಪಡಿಸಲಾಗಿದೆ. ಅದರಂತೆ ಬೆಳಗ್ಗೆ 7ರಿಂದ ರಾತ್ರಿ 7 ಗಂಟೆಯವರೆಗೆ ಅನಗತ್ಯ ಚಟುವಟಿಕೆಗಳಿಗೆ ಸಾರ್ವಜನಿಕರ ಸಂಚಾರ ನಿಷೇಧ ಮುಂದುವರಿಯಲಿದೆ. ಸ್ಥಳೀಯ ಪ್ರಾಧಿಕಾರಗಳು ಉದ್ದೇಶಕ್ಕೆ ಮತ್ತು ಕಠಿಣವಾಗಿ ನಿಯಮ ಪಾಲನೆಗೆ ಸಿಆರ್ ಪಿಸಿ ಸಕ್ಷನ್ 144 ಅಡಿಯಲ್ಲಿ ನಿಷೇಧಾಜ್ಞೆ(ಕರ್ಫ್ಯೂ) ಆದೇಶಗಳನ್ನು ಕಾನೂನು ರೀತಿಯಲ್ಲಿ ಹೊರಡಿಸಬೇಕು. ಎಲ್ಲ ವಲಯಗಳಲ್ಲಿ 65 ವರ್ಷ ಮೇಲ್ಪಟ್ಟ ವಯಸ್ಸಿನವರು, ವಿಶೇಷಚೇತನರು, ಗರ್ಭಿಣಿಯರು ಮತ್ತು 10 ವರ್ಷದೊಳಗಿನ ಮಕ್ಕಳು ಮನೆಯೊಳಗೇ ಇರಬೇಕು. ಅವರು ಆರೋಗ್ಯ ಉದ್ದೇಶಗಳು ಮತ್ತು ಇತರೆ ಅವಶ್ಯಕ ಅಗತ್ಯತೆಗಳನ್ನು ಹೊರತುಪಡಿಸಿ ಮನೆಯಲ್ಲೇ ಉಳಿಯಬೇಕು. ಕೆಂಪು, ಕಿತ್ತಳೆ ಮತ್ತು ಹಸಿರುವ ವಲಯಗಳಲ್ಲಿ ಹೊರ ರೋಗಿಗಳ ವಿಭಾಗ(ಒಪಿಡಿ) ಮತ್ತು ವೈದ್ಯಕೀಯ ಕ್ಲಿನಿಕ್ ಗಳ ಕಾರ್ಯ ನಿರ್ವಹಣೆಗೆ ಅನುಮತಿ ನೀಡಲಾಗಿದೆ. ಅವುಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಇತರೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಆದರೆ ನಿರ್ಬಂಧಿತ ವಲಯಗಳಲ್ಲಿ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ.

ನಿರ್ಬಂಧಿತ ವಲಯಗಳ ಹೊರಗೆ ಕೆಂಪು ವಲಯಗಳಲ್ಲಿ ದೇಶಾದ್ಯಂತ ಕೆಲವು ನಿಷೇಧಿಸಿರುವ ಚಟುವಟಿಕೆಗಳ ಜೊತೆಗೆ ಇನ್ನಷ್ಟು ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಅವುಗಳೆಂದರೆ, ಸೈಕಲ್ ರಿಕ್ಷಾ ಅಥವಾ ಆಟೋ ರಿಕ್ಷಾ ಸಂಚಾರ, ಟ್ಯಾಕ್ಸಿ, ಕ್ಯಾಬ್ ಗಳ ಓಡಾಟ, ಅಂತರ ಜಿಲ್ಲೆ ಮತ್ತು ಅಂತರ ಜಿಲ್ಲೆಗಳ ನಡುವೆ ಬಸ್ ಸಂಚಾರ ಮತ್ತು ಹೇರ್ ಕಟಿಂಗ್ ಸಲೂನ್, ಸ್ಪಾ ಮತ್ತು ಸಲೂನ್ ಗಳು.

ಕೆಂಪು ವಲಯಗಳಲ್ಲಿ ಕೆಲವು ನಿರ್ಬಂಧಗಳೊಂದಿಗೆ ಕೆಲವು ಇತರೆ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಸಾರ್ವಜನಿಕರು ಮತ್ತು ವಾಹನಗಳು, ನಾಲ್ಕು ಚಕ್ರ ವಾಹನಗಳಲ್ಲಿ ಗರಿಷ್ಠ ಇಬ್ಬರು ವ್ಯಕ್ತಿಗಳು(ಚಾಲಕ ಹೊರತುಪಡಿಸಿ) ಸಂಚಾರಕ್ಕೆ ಅವಕಾಶವಿದೆ. ಆದರೆ ದ್ವಿಚಕ್ರ ವಾಹಗಳಲ್ಲಿ ಹಿಂಬದಿಯ ಸವಾರರಿಗೆ ಅವಕಾಶವಿಲ್ಲ. ನಗರ ಪ್ರದೇಶಗಳಲ್ಲಿನ ಕೈಗಾರಿಕಾ ಸಂಸ್ಥೆಗಳಿಗೆ ಅಂದರೆ ವಿಶೇಷ ವಿತ್ತವಲಯ(ಎಸ್ಇಝೆಡ್), ರಫ್ತು ಆಧಾರಿತ ಘಟಕ(ಇಒಯು), ಕೈಗಾರಿಕಾ ಎಸ್ಟೇಟ್ ಗಳು ಮತ್ತು ಕೈಗಾರಿಕಾ ಟೌನ್ ಶಿಪ್ ಗಳಲ್ಲಿ ಸೀಮಿತ ನಿಯಂತ್ರಣದೊಂದಿಗೆ ಚಟುವಟಿಕೆಗೆ ಅವಕಾಶ ನೀಡಲಾಗಿದೆ. ಇತರೆ ಕೈಗಾರಿಕಾ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಅವುಗಳೆಂದರೆ ಅಗತ್ಯ ವಸ್ತುಗಳ ಉತ್ಪಾದನಾ ಘಟಕಗಳು, ಔಷಧಗಳು, ಫಾರ್ಮಸಿಟಿಕಲ್ಸ್ ವೈದ್ಯಕೀಯ ಸೇವೆಗಳು ಮತ್ತು ಅವುಗಳ ಕಚ್ಚಾ ಸಾಮಗ್ರಿ ಹಾಗೂ ಉತ್ಪಾದನಾ ಘಟಕಗಳು ಅದರಲ್ಲಿ ನಿರಂತರ ಸಂಸ್ಕರಣೆ ಮತ್ತು ಪೂರೈಕೆ ಸರಣಿಯನ್ನು ಕಾಯ್ದುಕೊಳ್ಳಲು ಅಗತ್ಯವಿರುವಂತಹುದು; ಐಟಿ ಹಾರ್ಡ್ ವೇರ್ ಉತ್ಪಾದನೆ; ಸೆಣಬು ಉದ್ಯಮದಲ್ಲಿ ಪಾಳಿ ವಿಭಜನೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು; ಪ್ಯಾಕೇಜಿಂಗ್ ಸಾಮಗ್ರಿ ಉತ್ಪಾದನಾ ಘಟಕಗಳು; ನಗರ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ ಚಟುವಟಿಕೆಗಳು(ನಿರ್ಮಾಣ ಸ್ಥಳದಲ್ಲಿಯೇ ಲಭ್ಯವಿರುವ ಕಾರ್ಮಿಕರನ್ನು ಬಳಸಿಕೊಳ್ಳಬೇಕು ಮತ್ತು ಹೊರಗಿನಿಂದ ಯಾವುದೇ ಕಾರ್ಮಿಕರನ್ನು ಕರೆತರುವಂತಿಲ್ಲ) ಮತ್ತು ನವೀಕರಿಸಬಹುದಾದ ಇಂಧನ ಯೋಜನೆಗಳ ನಿರ್ಮಾಣ ಕೈಗೊಳ್ಳಬಹುದು. ನಗರ ಪ್ರದೇಶಗಳಲ್ಲಿ ಅತ್ಯವಶ್ಯಕ ಸರಕುಗಳನ್ನು ಮಾರುವ ಮಾಲ್ ಗಳು, ಮಾರುಕಟ್ಟೆಗಳು ಮತ್ತು ಮಾರುಕಟ್ಟೆ ಸಂಕೀರ್ಣಗಳಿಗೆ ಅವಕಾಶವಿಲ್ಲ. ಆದರೆ ಬಿಡಿ(ಒಂದೇ ಒಂದು) ಮಳಿಗೆ, ನೆರೆಹೊರೆಯ(ಬಡಾವಣೆ) ಮಳಿಗೆ ಮತ್ತು ವಸತಿ ಸಂಕೀರ್ಣಗಳಲ್ಲಿನ ಮಳಿಗೆಗಳಿಗೆ ನಗರ ಪ್ರದೇಶಗಳಲ್ಲಿ ತೆರೆಯಲು ಅವಕಾಶವಿದೆ. ಆದರೆ ಇವುಗಳಿಗೆ ಯಾವುದೇ ಅವಶ್ಯಕ ಮತ್ತು ಅವಶ್ಯಕವಲ್ಲದ ಎಂದು ತಾರತಮ್ಯ ಮಾಡುವಂತಿಲ್ಲ. ಕೆಂಪು ವಲಯದಲ್ಲಿ -ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಆದರೆ ಅತ್ಯವಶ್ಯಕ ವಸ್ತುಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ಖಾಸಗಿ ಕಚೇರಿಗಳು ಅಗತ್ಯಕ್ಕೆ ತಕ್ಕಂತೆ ಶೇ.33 ವರೆಗೆ ಸಿಬ್ಬಂದಿಯನ್ನಿಟ್ಟುಕೊಂಡು ಕಾರ್ಯ ನಿರ್ವಹಣೆ ಮಾಡಬಹುದು. ಆದರೆ ಉಳಿದ ಸಿಬ್ಬಂದಿ ಮನೆಯಿಂದ ಕೆಲಸ ಮಾಡಬೇಕು. ಎಲ್ಲ ಸರ್ಕಾರಿ ಕಚೇರಿಗಳು ಉಪ ಕಾರ್ಯದರ್ಶಿ ಮಟ್ಟಕ್ಕಿಂತ ಮೇಲ್ಪಟ್ಟ ಎಲ್ಲ ಹಿರಿಯ ಅಧಿಕಾರಿಗಳನ್ನೊಳಗೊಂಡ ಪೂರ್ಣ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಬೇಕು. ಆದರೆ ಉಳಿದ ಸಿಬ್ಬಂದಿಯಲ್ಲಿ ಅಗತ್ಯಕ್ಕೆ ತಕ್ಕಂತೆ ಶೇ.33ರಷ್ಟು ಕಾರ್ಯ ನಿರ್ವಹಣೆಗೆ ಅವಕಾಶವಿದೆ. ಆದರೆ ರಕ್ಷಣಾ ಮತ್ತು ಭದ್ರತಾ ಸೇವೆಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪೊಲೀಸ್, ಕಾರಾಗೃಹ, ಗೃಹ ರಕ್ಷಕ ದಳ, ನಾಗರಿಕ ರಕ್ಷಣೆ, ಅಗ್ನಿ ಮತ್ತು ತುರ್ತು ಸೇವೆಗಳು, ವಿಪತ್ತು ನಿರ್ವಹಣಾ ಮತ್ತು ಅದರ ಸಂಬಂಧಿ ಸೇವೆಗಳು, ರಾಷ್ಟ್ರೀಯ ಇನ್ಫಾರ್ ಮ್ಯಾಟಿಕ್ಸ್ ಸೆಂಟರ್(ಎನ್ಐಸಿ), ಭಾರತೀಯ ಆಹಾರ ನಿಗಮ(ಎಫ್ ಸಿ ), ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್(ಎನ್ ಸಿಸಿ), ನೆಹರು ಯುವಕ ಕೇಂದ್ರ(ಎನ್ ವೈಕೆ) ಮತ್ತ ಪೌರಾಡಳಿತ ಸೇವೆಗಳು ಯಾವುದೇ ನಿರ್ಬಂಧವಿಲ್ಲದೆ ಕಾರ್ಯ ನಿರ್ವಹಣೆ ಮಾಡಬೇಕು. ಸಾರ್ವಜನಿಕ ಸೇವಾ ವಿತರಣೆಯನ್ನು ಖಾತ್ರಿಪಡಿಸಬೇಕು ಮತ್ತು ಉದ್ದೇಶಗಳಿಗೆ ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಬೇಕು.

ಕೆಂಪು ವಲಯದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ಇತರೆ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮನ್ರೇಗಾ ಕೆಲಸ ಕಾರ್ಯಗಳು, ಆಹಾರ ಸಂಸ್ಕರಣಾ ಘಟಕಗಳು ಮತ್ತು ಇಟ್ಟಿಗೆ ಗೂಡು ಕಾಮಗಾರಿಗಳು ಸೇರಿದಂತೆ ಎಲ್ಲ ಬಗೆಯ ಕೈಗಾರಿಕಾ ಮತ್ತು ನಿರ್ಮಾಣ ಚಟುವಟಿಕೆಗಳನ್ನು ಕೈಗೊಳ್ಳಲು ಅವಕಾಶವಿದೆ. ಅಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ಶಾಪಿಂಗ್ ಮಾಲ್ ಗಳನ್ನು ಹೊರತುಪಡಿಸಿ, ಯಾವುದೇ ತಾರತಮ್ಯವಿಲ್ಲದೆ ಎಲ್ಲ ಮಳಿಗೆಗಳನ್ನು ತೆರೆಯಲು ಅವಕಾಶವಿದೆ. ಎಲ್ಲ ಕೃಷಿ ಚಟುವಟಕೆಗಳು ಉದಾಹರಣೆಗೆ ಬಿತ್ತನೆ, ಕಟಾವು, ಖರೀದಿ ಮತ್ತು ಮಾರುಕಟ್ಟೆ ಕಾರ್ಯ ನಿರ್ವಹಣೆ ಸೇರಿದಂತೆ ಕೃಷಿ ಪೂರೈಕೆ ಸರಣಿಯ ಎಲ್ಲ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಒಳನಾಡು ಮತ್ತು ಸಮುದ್ರ ಮೀನುಗಾರಿಕೆ ಸೇರಿದಂತೆ ಪಶುಸಂಗೋಪನೆಯ ಎಲ್ಲ ಚಟುವಟಿಕೆಗಳಿಗೆ ಸಂಪೂರ್ಣ ಅವಕಾಶ ನೀಡಲಾಗಿದೆ. ಸಂಸ್ಕರಣೆ ಮಾರುಕಟ್ಟೆ ಸೇರಿದಂತೆ ಎಲ್ಲ ತೋಟಗಾರಿಕಾ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ. ಎಲ್ಲ ಆರೋಗ್ಯ ಸೇವೆಗಳ(ಆಯುಷ್ ಸೇರಿ) ಕಾರ್ಯನಿರ್ವಹಣೆಗೆ ವೈದ್ಯಕೀಯ ಸಿಬ್ಬಂದಿ ಮತ್ತು ರೋಗಿಗಳನ್ನು ಏರ್ ಆಂಬುಲೆನ್ಸ್ ಮೂಲಕ ಕರೆದೊಯ್ಯಲು ಅವಕಾಶವಿದೆ. ಹಣಕಾಸು ವಲಯದ ಬಹುದೊಡ್ಡ ಭಾಗದ ಚಟುವಟಿಕೆಗಳನ್ನು ಮುಕ್ತಗೊಳಿಸಲಾಗಿದ್ದು, ಅವುಗಳಲ್ಲಿ ಬ್ಯಾಂಕಿಂಗೇತರ ಹಣಕಾಸು ಕಂಪನಿಗಳು(ಎನ್ ಬಿಎಫ್ ಸಿ), ವಿಮಾ ಮತ್ತು ಷೇರು ಬಂಡವಾಳ ಚಟುವಟಕೆಗಳು ಹಾಗೂ ಸಾಲ ಸಹಕಾರ ಸಂಘಗಳ ಚಟುವಟಿಕೆಗಳಿಗೆ ಅವಕಾಶವಿದೆ. ಅಂತೆಯೇ ಮಕ್ಕಳು, ವೃದ್ಧರು, ನಿರಾಶ್ರಿತರು, ಮಹಿಳೆಯರು ಮತ್ತು ವಿಧವೆಯರು ಮತ್ತಿತರ ಆರೈಕೆ ಕೇಂದ್ರಗಳು ಕಾರ್ಯ ನಿರ್ವಹಣೆ ಮಾಡಬಹುದು. ಅಂಗನವಾಡಿ ಕೇಂದ್ರಗಳ ಕಾರ್ಯ ನಿರ್ವಹಣೆಗೂ ಅವಕಾಶವಿದೆ. ವಿದ್ಯುತ್, ನೀರು, ನೈರ್ಮಲೀಕರಣ, ತ್ಯಾಜ್ಯ ನಿರ್ವಹಣೆ, ದೂರಸಂಪರ್ಕ ಮತ್ತು ಅಂತರ್ಜಾಲ ಮತ್ತಿತರ ಸಾರ್ವಜನಿಕ ಬಳಕೆಯ ಸೇವೆಗಳಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ ಮತ್ತು ಕೊರಿಯರ್ ಹಾಗೂ ಅಂಚೆ ಸೇವೆಗಳಿಗೂ ಅನುಮತಿ ನೀಡಲಾಗಿದೆ.

ಕೆಂಪು ವಲಯಗಳಲ್ಲಿ ಬಹುತೇಕ ವಾಣಿಜ್ಯ ಮತ್ತು ಖಾಸಗಿ ಸಂಸ್ಥೆಗಳ ಕಾರ್ಯ ನಿರ್ವಹಣೆಗೆ ಅವಕಾಶ ನೀಡಲಾಗಿದೆ. ಇವುಗಳಲ್ಲಿ ಮುದ್ರಣ ಹಾಗೂ ವಿದ್ಯುನ್ಮಾನ ಮಾದ್ಯಮ, ಮಾಹಿತಿ ತಂತ್ರಜ್ಞಾನ ಮತ್ತು ಐಟಿ ಸಂಬಂಧಿತ ಸೇವೆಗಳು, ದತ್ತಾಂಶ ಮತ್ತು ಕಾಲ್ ಸೆಂಟರ್, ಶೈತ್ಯಾಗಾರಗಳು, ಗೋದಾಮು ಸೇವೆಗಳು, ಖಾಸಗಿ ಭದ್ರತಾ ಸಂಸ್ಥೆಗಳು, ಮ್ಯಾನೇಜ್ ಮೆಂಟ್ ಸೇವೆಗಳಿಗೆ ಅವಕಾಶ ನೀಡಲಾಗಿದೆ. ಮೊದಲೇ ತಿಳಿಸಿದಂತೆ ಕ್ಷೌರಿಕ ಸೇವೆಯನ್ನು ಹೊರತುಪಡಿಸಿ, ಇತರೆ ಸ್ವಯಂ ಉದ್ಯೋಗ ಕೈಗೊಳ್ಳುವ ವ್ಯಕ್ತಿಗಳಿಗೂ ಅವಕಾಶವಿದೆ. ಔಷಧಗಳು, ಫಾರ್ಮಸಿಟಿಕಲ್ಸ್, ವೈದ್ಯಕೀಯ ಸಲಕರಣೆ ಮತ್ತು ಅದರ ಬಿಡಿ ಭಾಗಗಳು ಸೇರಿದಂತೆ ಅವಶ್ಯಕ ವಸ್ತುಗಳ ಉತ್ಪಾದನಾ ಘಟಕಗಳಿಗೆ ಅವಕಾಶ ನೀಡಲಾಗಿದ್ದು, ನಿರಂತರ ಸರಣಿ ಪೂರೈಕೆ ಕಾಯ್ದುಕೊಳ್ಳುವ ಉತ್ಪಾದನಾ ಘಟಕಗಳಿಗೂ ಅವಕಾಶವಿದೆ. ಸೆಣಬಿನ ಉದ್ಯಮದಲ್ಲಿ ಪಾಳಿಗಳು ಮತ್ತು ಸಾಮಾಜಿಕ ಅಂತರದೊಂದಿಗೆ ಕಾರ್ಯನಿರ್ವಹಣೆಗೆ ಅವಕಾಶ ನೀಡಲಾಗಿದ್ದು, ಐಟಿ ಹಾರ್ಡ್ ವೇರ್ ಉತ್ಪಾದನೆ ಮತ್ತು ಪ್ಯಾಕೇಜಿಂಗ್ ಸಾಮಗ್ರಿ ಉತ್ಪಾದನಾ ಘಟಕಗಳ ಕಾರ್ಯ ನಿರ್ವಹಣೆ ಮುಂದುವರಿಕೆಗೆ ಅನುಮತಿ ನೀಡಲಾಗಿದೆ.

ಕಿತ್ತಳೆ ವಲಯದಲ್ಲಿ ಕೆಂಪು ವಲಯಕ್ಕೆ ನೀಡಿರುವ ಚಟುವಟಿಕೆಗಳಿಗೆ ಹೆಚ್ಚುವರಿಯಾಗಿ ಟ್ಯಾಕ್ಸಿ ಮತ್ತು ಕ್ಯಾಬ್ ಗಳ ಸಂಚಾರಕ್ಕೆ ಅದು ಓರ್ವ ಚಾಲಕ ಮತ್ತು ಇಬ್ಬರು ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅನುಮತಿ ನೀಡಲಾದ ಚಟುವಟಿಕೆಗಳನ್ನು ಹೊರತುಪಡಿಸಿ, ಇತರೆ ಚಟುವಟಿಕೆಗಳಿಗೆ ಸಾರ್ವಜನಿಕರು ಮತ್ತು ವಾಹನಗಳ ಅಂತರ ಜಿಲ್ಲಾ ಸಂಚಾರ ಅನುಮತಿ ಇರುವುದಿಲ್ಲ. ನಾಲ್ಕು ಚಕ್ರ ವಾಹನಗಳಿಗೆ ಚಾಲಕನ ಹೊರತುಪಡಿಸಿ, ಗರಿಷ್ಠ ಇಬ್ಬರು ಪ್ರಯಾಣಿಕರು ಮತ್ತು ದ್ವಿಚಕ್ರ ವಾಹನದಲ್ಲಿ ಓರ್ವ ಹಿಂಬದಿ ಸವಾರನ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ.

ಹಸಿರುವ ವಲಯದಲ್ಲಿ ದೇಶಾದ್ಯಂತ ನಿಷೇಧಿಸಲಾಗಿರುವ ಕೆಲವು ಸೀಮಿತ ಸಂಖ್ಯೆಯ ಚಟುವಟಿಕೆಗಳನ್ನು ಹೊರತುಪಡಿಸಿ, ಉಳಿದೆಲ್ಲಾ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಆದರೆ ಬಸ್ ಗಳು ಶೇ.50ರಷ್ಟು ಆಸನಗಳ ಸಾಮರ್ಥ್ಯದೊಂದಿಗೆ ಮಾತ್ರ ಮತ್ತು ಬಸ್ ಡಿಪೋಗಳು ಶೇ.50ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಣೆ ಮಾಡಬೇಕು.

ಎಲ್ಲ ಸರಕು ವಾಹನಗಳ ಸಂಚಾರಕ್ಕೆ ಅವಕಾಶವಿದೆ. ಯಾವುದೇ ರಾಜ್ಯ/ಕೇಂದ್ರಾಡಳಿತ ಪ್ರದೇಶ ಒಪ್ಪಂದ ಮಾಡಿಕೊಂಡಿರುವ ನೆರೆಹೊರೆಯ ರಾಷ್ಟ್ರಗಳ ಭೂಗಡಿಯಲ್ಲಿ ಸರಕು ವಾಹನಗಳ ಸಂಚಾರವನ್ನು ತಡೆಯುವಂತಿಲ್ಲ. ಅಂತಹ ವಾಹನಗಳ ಸಂಚಾರಕ್ಕೆ ಪ್ರತ್ಯೇಕ ಪಾಸ್ ಅಗತ್ಯವಿಲ್ಲ. ಲಾಕ್ ಡೌನ್ ಅವಧಿಯಲ್ಲಿ ದೇಶಾದ್ಯಂತ ಸರಕು ಮತ್ತು ಸೇವೆಗಳ ಪೂರೈಕೆ ಸರಣಿ ಕಾಯ್ದುಕೊಳ್ಳಲು ಇದು ಅತ್ಯಗತ್ಯವಾಗಿದೆ.

ವಿಶೇಷವಾಗಿ ನಿಷೇಧಿಸಲಾಗಿರುವ ಚಟುವಟಿಕೆಗಳನ್ನು ಹೊರತುಪಡಿಸಿ, ಉಳಿದೆಲ್ಲಾ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ. ಅಥವಾ ನಾನಾ ವಲಯಗಳಲ್ಲಿ ಹೊಸ ಮಾರ್ಗಸೂಚಿಯಲ್ಲಿ ಹಲವು ವಲಯಗಳಿಗೆ ವಿಧಿಸಲಾಗಿರುವ ನಿರ್ಬಂಧಗಳನ್ನು ಮುಂದುವರಿಸಲಾಗಿದೆ. ಆದರೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸ್ಥಿತಿಗತಿಯನ್ನು ಮೌಲ್ಯಮಾಪನ ಮಾಡಿ, ಕೋವಿಡ್-19 ಹರಡದಂತೆ ಪ್ರಾಥಮಿಕ ಉದ್ದೇಶದೊಂದಿಗೆ ಕೆಲವು ಅಗತ್ಯ ನಿರ್ಬಂಧಗಳ ಜೊತೆಗೆ ಇತರೆ ಆಯ್ದ ಚಟುವಟಿಕೆಗಳಿಗೆ ಅವಕಾಶ ನೀಡಬಹುದು.

2020 ಮೇ 3 ವರೆಗೆ ಹೊರಡಿಸಲಾಗಿರುವ ಲಾಕ್ ಡೌನ್ ಮಾರ್ಗಸೂಚಿಗಳ ಅನ್ವಯ ಈಗಾಗಲೇ ಅನುಮತಿ ನೀಡಲಾಗಿರುವ ಚಟುವಟಿಕೆಗಳನ್ನು ಮುಂದುವರಿಸಲು ಹೊಸದಾಗಿ ಪ್ರತ್ಯೇಕ ಅಥವಾ ಹೊಸ ಅನುಮತಿಗಳ ಅಗತ್ಯವಿಲ್ಲ. ಭಾರತದಲ್ಲಿ ವಿದೇಶಿ ಪ್ರಜೆಗಳ ಸಂಚಾರ, ಕ್ವಾರಂಟೈನ್ ವ್ಯಕ್ತಿಗಳ ಬಿಡುಗಡೆ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ನಡುವೆ ಸಂಕಷ್ಟದಲ್ಲಿರುವ ಕಾರ್ಮಿಕರ ಸಂಚಾರ, ಭಾರತೀಯ ನಾವಿಕರ ಸೇರ್ಪಡೆ ಮತ್ತು ಬಿಡುಗಡೆ, ಸಂಕಷ್ಟದಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು, ಯಾತ್ರಾರ್ಥಿಗಳು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರೆ ವ್ಯಕ್ತಿಗಳನ್ನು ರಸ್ತೆ ಮತ್ತು ರೈಲು ಮೂಲಕ ಸಂಚಾರಕ್ಕೆ ಕ್ರಮ ಸೇರಿದಂತೆ ಇತರೆ ಚಟುವಟಿಕೆಗಳಿಗೆ ಎಂಎಚ್ಎ ಹೊರಡಿಸಿರುವ ನಿರ್ದಿಷ್ಟ ಕಾರ್ಯ ನಿರ್ವಹಣಾ ಮಾನದಂಡ(ಎಸ್ಒಪಿ) ಮುಂದುವರಿಯಲಿವೆ.

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಲಾಕ್ ಡೌನ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಮತ್ತು ವಿಪತ್ತು ನಿರ್ವಹಣಾ ಕಾಯ್ದೆ 2005 ಅಡಿ ಹೊರಡಿಸಲಾಗಿರುವ ಮಾರ್ಗಸೂಚಿಗಳನ್ನು ಯಾವುದೇ ಕಾರಣಕ್ಕೂ ದುರ್ಬಲಗೊಳಿಸಬಾರದು ಎಂದು ಆದೇಶಿಸಲಾಗಿದೆ.

ಲಾಕ್ ಡೌನ್ ನಿಯಮಾವಳಿಗಳ ಕುರಿತಾದ ಹೊಸ ಮಾರ್ಗಸೂಚಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

 

***



(Release ID: 1620234) Visitor Counter : 440