ಪ್ರಧಾನ ಮಂತ್ರಿಯವರ ಕಛೇರಿ

ರಕ್ಷಣೆ ಮತ್ತು ವೈಮಾಂತರಿಕ್ಷ ವಲಯದ ಉತ್ತೇಜನ ಕುರಿತು ಪ್ರಧಾನಿ  ಮೋದಿಯವರಿಂದ ಸಭೆ

Posted On: 30 APR 2020 10:26PM by PIB Bengaluru

ರಕ್ಷಣೆ ಮತ್ತು ವೈಮಾಂತರಿಕ್ಷ ವಲಯದ ಉತ್ತೇಜನ ಕುರಿತು ಪ್ರಧಾನಿ  ಮೋದಿಯವರಿಂದ ಸಭೆ

 

ಕೋವಿಡ್-19 ಹಿನ್ನೆಲೆಯಲ್ಲಿ ಆರ್ಥಿಕತೆಗೆ ಉತ್ತೇಜನ ನೀಡಲು ಸಶಸ್ತ್ರ ಪಡೆಗಳ ಅಲ್ಪಾವಧಿ ಮತ್ತು ದೀರ್ಘಾವಧಿ ಅಗತ್ಯತೆಗಳನ್ನು ಪೂರೈಸುವ ಉಪಕ್ರಮಗಳ ಮೂಲಕ ಭಾರತದಲ್ಲಿ ಸದೃಢ  ಮತ್ತು ಸ್ವಾವಲಂಬಿ ರಕ್ಷಣಾ ಉದ್ಯಮವನ್ನು ಖಚಿತಪಡಿಸಿಕೊಳ್ಳಲು ಸಂಭಾವ್ಯ ಸುಧಾರಣೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಭೆ ನಡೆಸಿದರು. ಸಶಸ್ತ್ರ ಕಾರ್ಖಾನೆಗಳ ಕಾರ್ಯಚಟುವಟಿಕೆಯ ಸುಧಾರಣೆ, ಖರೀದಿ ಕಾರ್ಯವಿಧಾನಗಳನ್ನು ಸುಗಮಗೊಳಿಸುವುದು, ಕೇಂದ್ರೀಕೃತ ಸಂಪನ್ಮೂಲ ಹಂಚಿಕೆ, ಸಂಶೋಧನೆ ಮತ್ತು ಅಭಿವೃದ್ದಿ/ ನಾವೀನ್ಯತೆಯನ್ನು ಉತ್ತೇಜಿಸುವುದು, ನಿರ್ಣಾಯಕ ರಕ್ಷಣಾ ತಂತ್ರಜ್ಞಾನಗಳಲ್ಲಿ ಹೂಡಿಕೆಯನ್ನು ಆಕರ್ಷಿಸುವುದು ಮತ್ತು ರಫ್ತು ಉತ್ತೇಜನಗಳ ಬಗ್ಗೆ ಚರ್ಚೆ ನಡೆಸಲಾಯಿತು.

ವಿನ್ಯಾಸದಿಂದ ಉತ್ಪಾದನೆಯವರೆಗೆ ರಕ್ಷಣೆ ಮತ್ತು ವೈಮಾಂತರಿಕ್ಷ  ಕ್ಷೇತ್ರಗಳಲ್ಲಿ ಭಾರತವನ್ನು ವಿಶ್ವದ ಪ್ರಮುಖ ರಾಷ್ಟ್ರಗಳ ಸಾಲಿಗೆ ತರುವ ಬಗ್ಗೆ ಪ್ರಧಾನಿ ಒತ್ತು ನೀಡಿದರು. ಸಾರ್ವಜನಿಕ ಮತ್ತು ಖಾಸಗಿ ವಲಯದ ಸಕ್ರಿಯ ಭಾಗವಹಿಸುವಿಕೆಯು ಸ್ವಾವಲಂಬನೆ ಮತ್ತು ರಫ್ತುಗಳ ಅವಳಿ ಉದ್ದೇಶಗಳನ್ನು ಈಡೇರಿಸುತ್ತದೆ ಎಂದು ಅವರು ಹೇಳಿದರು. ರಕ್ಷಣಾ ಕ್ಷೇತ್ರದಲ್ಲಿ ದೇಶೀಯ ಮತ್ತು ವಿದೇಶಿ ಹೂಡಿಕೆಯನ್ನು ಆಕರ್ಷಿಸುವ ಉದ್ದೇಶಿತ ಸುಧಾರಣೆಗಳನ್ನು ಅವರು ಪರಿಶೀಲಿಸಿದರು.

ರಕ್ಷಣಾ ವೆಚ್ಚವನ್ನು ತಗ್ಗಿಸುವುದು ಮತ್ತು ಅದರ ಉಳಿತಾಯವನ್ನು ಕಾರ್ಯತಂತ್ರದ ರಕ್ಷಣಾ ಬಂಡವಾಳ ಸ್ವಾಧೀನಕ್ಕಾಗಿ ವಿನಿಯೋಗಿಸುವ ಕುರಿತು ಚರ್ಚಿಸಲಾಯಿತು. ರಕ್ಷಣಾ ಖರೀದಿ ಪ್ರಕ್ರಿಯೆಗಳು, ಆಫ್ಸೆಟ್ ನೀತಿಗಳು, ಬಿಡಿಭಾಗಗಳ ದೇಶೀಕರಣ, ತಂತ್ರಜ್ಞಾನದ ವರ್ಗಾವಣೆ, ಭಾರತದಲ್ಲಿ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸಲು ಜಾಗತಿಕ ಒಇಎಂಗಳನ್ನು ಆಕರ್ಷಿಸುವುದು, ಅಂತರರಾಷ್ಟ್ರೀಯ ಪೂರೈಕೆ ಸರಪಳಿಗಳಲ್ಲಿ ನಮ್ಮ ಅಸ್ತಿತ್ವವನ್ನು ವಿಸ್ತರಿಸುವುದು ಇತ್ಯಾದಿ ವಿಷಯಗಳು ಸಹ ಚರ್ಚಿಸಲ್ಪಟ್ಟವು. ರಕ್ಷಣಾ ಉತ್ಪಾದನೆಯಲ್ಲಿ ಭಾರತವು ಜಾಗತಿಕ ನಾಯಕನಾಗಿ ಹೊರಹೊಮ್ಮಲು, ಗುಣಮಟ್ಟದ ರಫ್ತು ಮತ್ತು ಅತ್ಯಾಧುನಿಕ ಉಪಕರಣಗಳು/ ವ್ಯವಸ್ಥೆಗಳು/ ವೇದಿಕೆಗಳ ಬಗ್ಗೆಯೂ ಚರ್ಚೆಯಲ್ಲಿ ಒತ್ತು ನೀಡಲಾಯಿತು.

ಭಾರತವು ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಬೇಕು ಮತ್ತು ಅತ್ಯಾಧುನಿಕ ರಕ್ಷಣಾ ಸಾಧನಗಳನ್ನು ವಿನ್ಯಾಸಗೊಳಿಸಲು, ಅಭಿವೃದ್ಧಿಪಡಿಸಲು ಮತ್ತು ತಯಾರಿಸಲು ತನ್ನ ದೇಶೀಯ ಸಾಮರ್ಥ್ಯಗಳನ್ನು ಬೆಳೆಸಲು "ಮೇಕ್ ಇನ್ ಇಂಡಿಯಾ" ವನ್ನು ಬಳಸಿಕೊಳ್ಳಬೇಕು ಎಂದು ಪ್ರಧಾನಿ ನಿರ್ದೇಶನ ನೀಡಿದರು. ಜಾಗತಿಕ ರಕ್ಷಣಾ ಉತ್ಪನ್ನ ಮೌಲ್ಯ ಸರಪಳಿಯಲ್ಲಿ ಉದ್ಯಮದ ಭಾಗವಹಿಸುವಿಕೆಯೊಂದಿಗೆ ರಕ್ಷಣಾ ಉತ್ಪನ್ನಗಳ ರಫ್ತು ಉತ್ತೇಜಿಸುವ ಉಪಕ್ರಮಗಳಿಗೆ ಮತ್ತು ಆರ್ & ಡಿ ಅನ್ನು ಉತ್ತೇಜಿಸುವ ವಾತಾವರಣದ ಸೃಷ್ಟಿ, ನಾವೀನ್ಯತೆಗೆ ಪ್ರತಿಫಲ, ಭಾರತೀಯ ಐಪಿ ಮಾಲೀಕತ್ವದ ಸೃಷ್ಟಿಗೆ ಅವರು ಒತ್ತು ನೀಡಿದರು.

ಸಭೆಯಲ್ಲಿ ಭಾರತ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ರಕ್ಷಣಾ ಸಚಿವರು, ಗೃಹ ಸಚಿವರು, ಹಣಕಾಸು ಸಚಿವರು ಮತ್ತು ಹಣಕಾಸು ಖಾತೆ ರಾಜ್ಯ ಸಚಿವರು ಭಾಗವಹಿಸಿದ್ದರು.

***


(Release ID: 1619955) Visitor Counter : 240