ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
ಕೋವಿಡ್ -19 ಹಿನ್ನೆಲೆಯ ಲಾಕ್ ಡೌನ್ ನಿಂದಾಗಿ ವಿಶ್ವವಿದ್ಯಾಲಯಗಳಿಗೆ ಪರೀಕ್ಷೆಗಳು ಮತ್ತು ಶೈಕ್ಷಣಿಕ ವೇಳಾಪಟ್ಟಿಗಾಗಿ ಯು.ಜಿ.ಸಿ.ಮಾರ್ಗದರ್ಶಿಗಳು
Posted On:
29 APR 2020 8:16PM by PIB Bengaluru
ಕೋವಿಡ್ -19 ಹಿನ್ನೆಲೆಯ ಲಾಕ್ ಡೌನ್ ನಿಂದಾಗಿ ವಿಶ್ವವಿದ್ಯಾಲಯಗಳಿಗೆ ಪರೀಕ್ಷೆಗಳು ಮತ್ತು ಶೈಕ್ಷಣಿಕ ವೇಳಾಪಟ್ಟಿಗಾಗಿ ಯು.ಜಿ.ಸಿ.ಮಾರ್ಗದರ್ಶಿಗಳು
ಕೇಂದ್ರ ಎಚ್.ಆರ್.ಡಿ. ಸಚಿವರ ಉಪಸ್ಥಿತಿಯಲ್ಲಿ ಮಾರ್ಗದರ್ಶಿಗಳ ಬಿಡುಗಡೆ
ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ಮತ್ತು ಆ ಬಳಿಕ ಜಾರಿ ಮಾಡಲಾದ ಲಾಕ್ ಡೌನ್ ಹಿನ್ನೆಲೆಯಲ್ಲಿ , ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು ಪರೀಕ್ಷೆಗಳು ಮತ್ತು ಶೈಕ್ಷಣಿಕ ವೇಳಾಪಟ್ಟಿ ವಿಷಯಗಳಿಗೆ ಸಂಬಂಧಿಸಿ ಶೈಕ್ಷಣಿಕ ನಷ್ಟ ಸಂಭವಿಸದಂತೆ ಮತ್ತು ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಸೂಕ್ತ ಕ್ರಮಗಳನ್ನು ಸಮಾಲೋಚನೆ ನಡೆಸಿ ಶಿಫಾರಸು ಮಾಡಲು ತಜ್ಞರ ಸಮಿತಿಯನ್ನು ರಚಿಸಿತ್ತು.
ಯು.ಜಿ.ಸಿ.ಯ ಮಾಜಿ ಸದಸ್ಯಮತ್ತು ಹರ್ಯಾಣಾ ಕೇಂದ್ರೀಯ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಆರ್.ಸಿ. ಕುಹಾಡ್ ನೇತೃತ್ವದ ತಜ್ಞರ ಸಮಿತಿಯು ಇತರ ಸದಸ್ಯರನ್ನು ಒಳಗೊಂಡಿತ್ತು.
ಸಮಿತಿಯು 27.4.2020 ರಂದು ನಡೆದ ಸಭೆಯಲ್ಲಿ ಸಮಿತಿಯ ವರದಿಯನ್ನು ಅಂಗೀಕರಿಸಿತು ಮತ್ತು ಪರೀಕ್ಷೆಗಳಿಗೆ ಹಾಗು ಶೈಕ್ಷಣಿಕ ವೇಳಾಪಟ್ಟಿಯನ್ನು ಅನುಮೋದಿಸಿತು.
ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ಮತ್ತು ಅದನ್ನು ಅನುಸರಿಸಿ ಜಾರಿ ಮಾಡಲಾದ ಲಾಕ್ ಡೌನ್ ಹಿನ್ನೆಲೆಯಲ್ಲಿ ವಿಶ್ವವಿದ್ಯಾನಿಲಯಗಳ ಪರೀಕ್ಷೆಗಳು ಮತ್ತು ಶೈಕ್ಷಣಿಕ ವೇಳಾಪಟ್ಟಿಗಾಗಿರುವ ಮಾರ್ಗದರ್ಶಿಗಳನ್ನು ಕೇಂದ್ರ ಎಚ್.ಆರ್.ಡಿ. ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ’ನಿಶಾಂಕ್’ ಅವರ ಸಮ್ಮುಖದಲ್ಲಿ ಹೊಸದಿಲ್ಲಿಯಲ್ಲಿ ಇಂದು ಬಿಡುಗಡೆ ಮಾಡಲಾಯಿತು. ಎಂ.ಎಚ್.ಆರ್.ಡಿ. ಕಾರ್ಯದರ್ಶಿ ಶ್ರೀ ಅಮಿತ್ ಖರೆ ಮತ್ತು ಸಚಿವಾಲಯದ ಹಾಗು ಯು.ಜಿ.ಸಿ.ಯ ಹಿರಿಯ ಅಧಿಕಾರಿಗಳು ಈ ಸಂದರ್ಭ ಹಾಜರಿದ್ದರು.
ಯು.ಜಿ.ಸಿ.ಯು ಇಂದು ಹೊರಡಿಸಿರುವ ಮಾರ್ಗದರ್ಶಿಗಳಲ್ಲಿ ಈ ಕೆಳಗಿನವು ಪ್ರಮುಖ ಶಿಫಾರಸುಗಳಾಗಿವೆ.
1 ಇಂಟರ್ ಮೀಡಿಯೇಟ್ ಸೆಮಿಸ್ಟರ್ ವಿದ್ಯಾರ್ಥಿಗಳು: ಹಾಲಿ ಮತು ಹಿಂದಿನ ಸೆಮಿಸ್ಟರ್ ಗಳ ಆಂತರಿಕ ಮೌಲ್ಯಮಾಪನ ಆಧರಿಸಿ ಗ್ರೇಡ್ ನೀಡಲಾಗುತ್ತದೆ. ಕೋವಿಡ್ -19 ಪರಿಸ್ಥಿತಿ ಸಹಜ ಸ್ಥಿತೆಗೆ ಮರಳಿದ್ದರೆ ಅಲ್ಲಿ ಜುಲೈ ತಿಂಗಳಲ್ಲಿ ಪರೀಕ್ಷೆಗಳು ನಡೆಯುತ್ತವೆ.
2 .ಕೊನೆಯ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ: ಜುಲೈ ತಿಂಗಳಲ್ಲಿ ಪರೀಕ್ಷೆಗಳು ನಡೆಯುತ್ತವೆ.
3. ಪ್ರತೀ ವಿಶ್ವವಿದ್ಯಾನಿಲಯದಲ್ಲಿಯೂ ಕೋವಿಡ್ -19 ಘಟಕವನ್ನು ಸ್ಥಾಪಿಸಲಾಗುವುದು, ಇದು ವಿದ್ಯಾರ್ಥಿಗಳ ಶೈಕ್ಷಣಿಕ ವೇಳಾಪಟ್ಟಿ ಮತ್ತು ಪರೀಕ್ಷೆಗಳಿಗೆ ಸಂಬಂಧಪಟ್ಟಂತೆ ಇರುವ ವಿಷಯಗಳನ್ನು ಪರಿಹರಿಸುವ ಅಧಿಕಾರವನ್ನು ಹೊಂದಿರುತ್ತದೆ.
4.ಯು.ಜಿ.ಸಿ.ಯಲ್ಲಿ ಕೋವಿಡ್ -19 ಘಟಕವನ್ನು ತ್ವರಿತ ನಿರ್ಧಾರ ಕೈಗೊಳ್ಳುವುದಕ್ಕಾಗಿ ರಚಿಸಲಾಗುವುದು.
ಮಾರ್ಗದರ್ಶಿಗಳ ಮುಖ್ಯಾಂಶಗಳು ಈ ಕೆಳಗಿನಂತಿವೆ. :
ಮಾರ್ಗದರ್ಶಿಗಳು ಸಲಹಾ ಸ್ವರೂಪದವು.
ಕೋವಿಡ್ -19 ಜಾಗತಿಕ ಸಾಂಕ್ರಾಮಿಕಕ್ಕೆ ಸಂಬಂಧಿಸಿ ವಿಷಯಗಳನ್ನು ಪರಿಗಣಿಸಿ ವಿಶ್ವವಿದ್ಯಾಲಯಗಳು ತಮ್ಮದೇ ಕಾರ್ಯ ಯೋಜನೆಗಳನ್ನು ರೂಪಿಸಬಹುದು.
ಸಾಮಾಜಿಕ ಅಂತರವನ್ನು ಖಾತ್ರಿಪಡಿಸುವುದು.
ಪರೀಕ್ಷೆಗಳು
ವಿಶ್ವವಿದ್ಯಾಲಯಗಳು ಕಡಿಮೆ ಅವಧಿಯಲ್ಲಿ ಪ್ರಕ್ರಿಯೆಗಳನ್ನು ಪೂರೈಸಬಹುದಾದ ಪರ್ಯಾಯ, ಪರೀಕ್ಷಾ ವಿಧಾನಗಳನ್ನು ಸರಳ ಮಾದರಿಗಳನ್ನು ಅಂಗೀಕರಿಸಬಹುದು.
ಪರೀಕ್ಷಾ ಸಮಯವನ್ನು 3 ಗಂಟೆಗಳಿಂದ 2 ಗಂಟೆಗಳಿಗೆ ಇಳಿಸುವ ಮೂಲಕ ನವೀನ ಮತ್ತು ದಕ್ಷತೆಯ ಮಾದರಿಗಳನ್ನು ವಿಶ್ವವಿದ್ಯಾಲಯಗಳು ಅಳವಡಿಸಿಕೊಳ್ಳಬಹುದು.
ವಿಶ್ವವಿದ್ಯಾಲಯಗಳು ಅಂತಿಮ/ ಮಧ್ಯಂತರ ಸೆಮಿಸ್ಟರ್/ ವಾರ್ಷಿಕ ಪರೀಕ್ಷೆಗಳನ್ನು ಆಫ್ ಲೈನ್ ಅಥವಾ ಆನ್ ಲೈನ್ ಮಾದರಿಯಲ್ಲಿ ಅವುಗಳ ನಿಯಮಾವಳಿಗಳಿಗನುಗುಣವಾಗಿ , ಪರೀಕ್ಷಾ ಸ್ಕೀಮಿಗೆ ಅನುಸಾರ, ಸಾಮಾಜಿಕ ಅಂತರ ಪಾಲಿಸಿಕೊಂಡು , ಲಭ್ಯ ಇರುವ ಬೆಂಬಲ ವ್ಯವಸ್ಥೆಯನ್ನು ಅನುಸರಿಸಿಕೊಂಡು ಮತ್ತು ಎಲ್ಲಾ ವಿದ್ಯಾರ್ಥಿಗಳಿಗೂ ನ್ಯಾಯೋಚಿತ ಅವಕಾಶ ಲಭ್ಯವಾಗುವಂತೆ ನೋಡಿಕೊಂಡು ನಡೆಸಬಹುದು.
ವಿಶ್ವವಿದ್ಯಾಲಯಗಳು ಪದವಿ/ ಸ್ನಾತಕೋತ್ತರ ಪದವಿ ಕೋರ್ಸುಗಳ/ ಕಾರ್ಯಕ್ರಮಗಳ ಅಂತಿಮ ಸೆಮಿಸ್ಟರ್/ ವರ್ಷದ ಪರೀಕ್ಷೆಗಳನ್ನು ಶೈಕ್ಷಣಿಕ ವೇಳಾಪಟ್ಟಿಯಲ್ಲಿ ಸಲಹೆ ಮಾಡಲಾದಂತೆ ಸಂಘಟಿಸಬಹುದು. ಪರೀಕ್ಷಾ ವೇಳೆಯ ಬಗ್ಗೆ ವಿಶ್ವವಿದ್ಯಾಲಯಗಳು ಸೂಕ್ತ ತೀರ್ಮಾನಗಳನ್ನು ಕೈಗೊಳ್ಳಬಹುದು ಮತು ಪರೀಕ್ಷೆಗಳನ್ನು “ಸಾಮಾಜಿಕ ಅಂತರ” ಮಾರ್ಗದರ್ಶಿಗಳನ್ನು ಗಮನದಲ್ಲಿಟ್ಟುಕೊಂಡು ನಡೆಸಬೇಕು.
ಮಧ್ಯಂತರ ಸೆಮಿಸ್ಟರ್ / ವರ್ಷದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯಗಳು ಅವರ ತಯಾರಿ ಮಟ್ಟವನ್ನು ಮೌಲ್ಯಮಾಪನ ಮಾಡಿದ ಬಳಿಕ , ವಿದ್ಯಾರ್ಥಿಗಳ ವಸತಿ ಸ್ಥಿತಿಗತಿಗಳನ್ನು , ವಿವಿಧ ವಲಯಗಳಲ್ಲಿ / ರಾಜ್ಯಗಳಲ್ಲಿ ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಹರಡುವಿಕೆ ಮತ್ತು ಇತರ ಅಂಶಗಳನ್ನು ಮೌಲ್ಯಮಾಪನ ಮಾಡಿದ ಬಳಿಕ ಪರೀಕ್ಷೆಯನ್ನು ನಡೆಸಬಹುದು.
“ಸಾಮಾಜಿಕ ಅಂತರ’ವನ್ನು ಕಾಯ್ದುಕೊಂಡು , ವಿದ್ಯಾರ್ಥಿಗಳ ಸುರಕ್ಷೆ ಮತ್ತು ಆರೋಗ್ಯ ವನ್ನು ಕಾಪಾಡುವುದಕ್ಕಾಗಿ , ಕೋವಿಡ್ -19 ಸಹಜ ಸ್ಥಿತಿಗೆ ಬಂದಿಲ್ಲದೇ ಇದ್ದಲ್ಲಿ ವಿಶ್ವವಿದ್ಯಾಲಯಗಳು ಅಳವಡಿಸಿಕೊಂಡ ಆಂತರಿಕ ಮೌಲ್ಯಮಾಪನ ಆಧಾರದಲ್ಲಿ 50% ಅಂಕಗಳು ಮತ್ತು ಉಳಿದ 50% ಅಂಕಗಳನ್ನು ಹಿಂದಿನ ಸೆಮಿಸ್ಟರ್ ಸಾಧನೆಯ ಆಧಾರದಲ್ಲಿ (ಅದು ಲಭ್ಯ ಇದ್ದರೆ) ಪರಿಗಣಿಸಬಹುದು. ಆಂತರಿಕ ಮೌಲ್ಯಮಾಪನವು ನಿರಂತರ ಮೌಲ್ಯಮಾಪನವಾಗಿದ್ದು, ಪ್ರಿಲಿಂಸ್, ಮಧ್ಯಂತರ ಸೆಮಿಸ್ಟರ್ ಮತ್ತು ಆಂತರಿಕ ಮೌಲ್ಯಮಾಪನ ಅಥವಾ ವಿದ್ಯಾರ್ಥಿಗಳ ಬೆಳವಣಿಗೆಗಾಗಿ ಇನ್ನೇನಾದರೂ ಹೆಸರು ನೀಡಿದ್ದರೆ ಅದರನ್ವಯ ನಡೆಯಬಹುದು.
ಹಿಂದಿನ ವರ್ಷದ ಅಥವಾ ಹಿಂದಿನ ಸೆಮಿಸ್ಟರ್ ಅಂಕಗಳು ಲಭ್ಯ ಇಲ್ಲದೇ ಇದ್ದಲ್ಲಿ , ಅದರಲ್ಲೂ ವಿಶೇಷವಾಗಿ ಮೊದಲ ವರ್ಷದ ವಾರ್ಷಿಕ ಪರೀಕ್ಷೆ ಪದ್ದತಿ ಅಳವಡಿಕೆಯಾಗಿರುವಲ್ಲಿ ಆಂತರಿಕ ಮೌಲ್ಯಮಾಪನ ಆಧಾರದಲ್ಲಿ ಶೇಕಡಾ 100 ಮೌಲ್ಯಮಾಪನ ಮಾಡಬಹುದು.
ವಿದ್ಯಾರ್ಥಿಯು ಗ್ರೇಡನ್ನು ಉತ್ತಮ ಪಡಿಸಲು ಬಯಸಿದರೆ , ಆ ವಿದ್ಯಾರ್ಥಿಗಳು ಮುಂದಿನ ಸೆಮಿಸ್ಟರ್ ಅವಧಿಯಲ್ಲಿ ಅಂತಹ ವಿಷಯಗಳ ಬಗ್ಗೆ ವಿಶೇಷ ಪರೀಕ್ಷೆ ಬರೆಯಬಹುದು.
ಮಧ್ಯಂತರ ಸೆಮಿಸ್ಟರ್ ಪರೀಕ್ಷೆಗಳ ಅವಕಾಶ ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಚಾಲ್ತಿಯಲ್ಲಿರುವ ಶೈಕ್ಷಣಿಕ ಅಧಿವೇಶನಕ್ಕೆ (2019-20) ಮಾತ್ರ ಅನ್ವಯಿಸುತ್ತದೆ. ಎಲ್ಲಾ ಭಾಗೀದಾರರ ಸುರಕ್ಷೆ ಮತ್ತು ಆರೋಗ್ಯ ಹಾಗು ಪರೀಕ್ಷೆಗಳ ಪಾವಿತ್ರ್ಯ ಮತ್ತು ಗುಣಮಟ್ಟ ಗಳನ್ನು ಕಾಯ್ದುಕೊಳ್ಳಬೇಕಾಗುತ್ತದೆ.
ಲಾಕ್ ಡೌನ್ ಅವಧಿಯನ್ನು ಎಲ್ಲಾ ವಿದ್ಯಾರ್ಥಿಗಳು / ಸಂಶೋಧನಾ ವಿದ್ಯಾರ್ಥಿಗಳು “ಹಾಜರಾಗಿದ್ದಾರೆ ಎಂದು ಪರಿಗಣಿಸಬಹುದು”
ಪ್ರಾಜೆಕ್ಟ್/ಡಿಸರ್ಟೇಷನ್ ಮೂಲಕ ಪದವಿ/ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅದಕ್ಕಾಗಿ ಸೂಕ್ತ ಕಾರ್ಯ ಯೋಜನೆಯನ್ನು ರೂಪಿಸಿಕೊಳ್ಳಬೇಕು. ವಿಶ್ವವಿದ್ಯಾಲಯಗಳು ಪ್ರಯೋಗಾಲಯ ಆಧಾರಿತ ಅಥವಾ ಕ್ಷೇತ್ರಾಧಾರಿತ ಕೆಲಸಗಳನ್ನು ಈ ವಿದ್ಯಾರ್ಥಿಗಳಿಗೆ ನೀಡುವುದಕ್ಕೆ ಬದಲು ಪರಾಮರ್ಶೆ ಆಧಾರಿತ / ಸೆಕೆಂಡರಿ ದತ್ತಾಂಶ ಆಧಾರಿತ ಯೋಜನೆಗಳನ್ನು ಅಥವಾ ಸಾಫ್ಟ್ ವೇರ್ ಚಾಲಿತ ಯೋಜನೆಗಳನ್ನು ನೀಡುವ ಬಗ್ಗೆ ಪರಿಶೀಲಿಸಬಹುದು.
ವಿಶ್ವವಿದ್ಯಾಲಯಗಳು ಪ್ರಾಯೋಗಿಕ ಪರೀಕ್ಷೆಗಳನ್ನು ಮತ್ತು ವೈವಾ ವೋಸ್ ಪರೀಕ್ಷೆಗಳನ್ನು ಸ್ಕೈಪ್ ಅಥವಾ ಇತರ ಸಭಾ ಆಪ್ ಗಳನ್ನು ಬಳಸಿ ನಡೆಸಬಹುದು. ಮತ್ತು ಮಧ್ಯಂತರ ಸೆಮಿಸ್ಟರ್ ಗಳಿದ್ದಲ್ಲಿ ಪ್ರಾಯೋಗಿಕ ಪರೀಕ್ಷೆಗಳನ್ನು ಬರಲಿರುವ ಸೆಮಿಸ್ಟರ್ ಗಳಲ್ಲಿ ನಡೆಸಬಹುದು.
ವಿಶ್ವವಿದ್ಯಾಲಯಗಳು ಪಿ.ಎಚ್.ಡಿ., ಮತ್ತು ಎಂ.ಫಿಲ್ , ವೈವಾ ವೋಸ್ ಪರೀಕ್ಷೆಗಳನ್ನು ಗೂಗಲ್ , ಸ್ಕೈಪ್, ಮೈಕ್ರೋಸಾಫ್ಟ್ ತಂತ್ರಜ್ಞಾನಗಳನ್ನು ಬಳಸಿ ಅಥವಾ ಪರಸ್ಪರ ಅನುಕೂಲಕರವಾದ ಮತ್ತು ವಿಶ್ವಾಸಾರ್ಹವಾದ ತಂತ್ರಜ್ಞಾನ ಬಳಸಿ ನಡೆಸಬಹುದು.
ಪಿ.ಎಚ್.ಡಿ. ಅಥವಾ ಎಂ.ಫಿಲ್ ವಿದ್ಯಾರ್ಥಿಗಳಿಗೆ ಆರು ತಿಂಗಳು ಅವಧಿ ವಿಸ್ತರಣೆ.
ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಅವಧಿಯಲ್ಲಿ ಪರೀಕ್ಷೆಗೆ ಸಂಬಂಧಿಸಿ ಮತ್ತು ಶೈಕ್ಷಣಿಕ ಕಾರ್ಯಚಟುವಟಿಕೆಗಳಿಗೆ ಸಂಬಂಧಿಸಿ ವಿದ್ಯಾರ್ಥಿಗಳ ಕುಂದುಕೊರತೆ ಆಲಿಸಲು ಮತ್ತು ನಿರ್ವಹಿಸಲು ಹಾಗು ಅವುಗಳನ್ನು ಸಮರ್ಪಕವಾಗಿ ತಿಳಿಸಿಕೊಡಲು ಪ್ರತೀ ವಿಶ್ವವಿದ್ಯಾಲಯವೂ ಘಟಕ/ ಕೋಶವನ್ನು ಸ್ಥಾಪಿಸಬೇಕು.
ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಅವಧಿಯಲ್ಲಿ ಪರೀಕ್ಷೆಗೆ ಸಂಬಂಧಿಸಿ ಮತ್ತು ಶೈಕ್ಷಣಿಕ ಕಾರ್ಯಚಟುವಟಿಕೆಗಳಿಗೆ ಸಂಬಂಧಿಸಿ ವಿದ್ಯಾರ್ಥಿಗಳ ಕುಂದುಕೊರತೆ ಆಲಿಸಲು ಯು.ಜಿ.ಸಿ.ಯು ಸಹಾಯ ವಾಣಿಯನ್ನು ಸ್ಥಾಪಿಸಲಿದೆ.
ಶೈಕ್ಷಣಿಕ ವೇಳಾ ಪಟ್ಟಿ
ಈ ಶೈಕ್ಷಣಿಕ ವೇಳಾಪಟ್ಟಿಯು ಸಲಹಾ ಸ್ವರೂಪದ್ದಾಗಿದೆ. ವಿಶ್ವವಿದ್ಯಾಲಯಗಳು ಅವರ ಸಿದ್ದತಾ ಸ್ಥಿತಿ, ವಿದ್ಯಾರ್ಥಿಗಳ ಮನೆಯ ಪರಿಸ್ಥಿತಿ, ಅವರ ನಗರಗಳಲ್ಲಿ / ವಲಯಗಳಲ್ಲಿ/ ರಾಜ್ಯಗಳಲ್ಲಿ ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ಹರಡಿರುವ ಸ್ಥಿತಿ-ಗತಿ ಮತ್ತು ಇತರ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಸಮಗ್ರ ಮೌಲ್ಯಮಾಪನ ಬಳಿಕ ಇದನ್ನು ಅಳವಡಿಸಿಕೊಳ್ಳಬಹುದು ಅಥವಾ ಇದರಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದು.
ಪರಿಸ್ಥಿತಿಗೆ ಅನುಗುಣವಾಗಿ ವಿಶ್ವವಿದ್ಯಾಲಯಗಳು 30 ದಿನಗಳ ಬೇಸಿಗೆ ರಜೆಯನ್ನು -01-06-2020 ರಿಂದ 30-06-2020ರ ವರೆಗೆ ನೀಡಬಹುದು. ಇಂತಹ ಸಂದರ್ಭದಲ್ಲಿ ಬೋಧನೆ-ಕಲಿಕೆಯನ್ನು ವಿವಿಧ ಮಾದರಿಗಳ ಮೂಲಕ 15-05-2020ರ ವರೆಗೆ ನಡೆಸಬಹುದು. ಮತ್ತು ಡಿಸರ್ಟೇಶನ್ ಇತ್ಯಾದಿಗಳನ್ನೂ ಅಂತಿಮಗೊಳಿಸಬಹುದು. ಇದನ್ನು 16-05-2020 ರಿಂದ 31-05-2020ರ ನಡುವೆ ಪೂರ್ಣಗೊಳಿಸಬಹುದು.
2020-21 ರ ಶೈಕ್ಷಣಿಕ ಅಧಿವೇಶನ ಹಳೆಯ ವಿದ್ಯಾರ್ಥಿಗಳಿಗೆ 01.8.2020 ರಿಂದ ಮತ್ತು ಹೊಸ ವಿದ್ಯಾರ್ಥಿಗಳಿಗೆ 01.09.2020 ರಿಂದ ಆರಂಭಗೊಳ್ಳಬಹುದು.
ಕೆಲವು ಸಾಮಾನ್ಯ ಮಾರ್ಗದರ್ಶಿಗಳು
- ವಿಶ್ವವಿದ್ಯಾಲಯಗಳು 6 ದಿನಗಳ ವಾರವನ್ನು ಅನುಸರಿಸಬಹುದು.
- ವಿದ್ಯಾರ್ಥಿಗಳಿಗೆ ಪ್ರಯೋಗಾಲಯ ಅಸೈನ್ ಮೆಂಟ್ / ಪ್ರಯೋಗಾಲಯ ಪರೀಕ್ಷೆಗಳ ಬಗ್ಗೆ ವರ್ಚುವಲ್ ಪ್ರಯೋಗಾಲಯಗಳ ಮೂಲಕ ಅವಕಾಶ ಒದಗಿಸುವುದು, ಪ್ರಯೋಗಾಲಯ ಕೆಲಸಗಳನ್ನು ದಾಖಲು ಮಾಡಿದ ದೃಶ್ಯಾವಳಿಗಳು ಮತ್ತು ಈ ಉದ್ದೇಶಕ್ಕಾಗಿ ಲಭ್ಯ ಇರುವ ಡಿಜಿಟಲ್ ಸಂಪನ್ಮೂಲವನ್ನು ಹಂಚಿಕೊಳ್ಳಬಹುದು.
- ವಿಜ್ಞಾನ,/ ತಂತ್ರಜ್ಞಾನ / ಇಂಜಿನಿಯರಿಂಗ್ ವಿಭಾಗಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವರ್ಚುವಲ್ ಪ್ರಯೋಗಾಲಯಗಳ ಬಗ್ಗೆ ಎಂ.ಎಚ್.ಆರ್.ಡಿ.ಒದಗಿಸಿರುವ ಕೊಂಡಿ ಇಂತಹ ಉದ್ದೇಶಗಳಿಗೆ ಸೂಕ್ತವಾಗಬಲ್ಲದು.
- ವರ್ಚುವಲ್ ತರಗತಿ ಕೊಠಡಿಗಳನ್ನು ಅಭಿವೃದ್ದಿಪಡಿಸಿ ಮತ್ತು ವೀಡಿಯೋ ಕಾನ್ಫರೆನ್ಸಿಂಗ್ ಸೌಲಭ್ಯವನ್ನು ಒದಗಿಸಿ ಎಲ್ಲಾ ಶಿಕ್ಷಕ ಸಿಬ್ಬಂದಿಗಳಿಗೆ ಈ ತಂತ್ರಜ್ಞಾನ ಬಳಕೆಗೆ ತರಬೇತಿ ನೀಡಬೇಕು.
- ವಿಶ್ವವಿದ್ಯಾಲಯಗಳು ಇ-ಕಂಟೆಂಟ್ /ಇ-ಪ್ರಯೋಗಾಲಯ ಸಾಮಗ್ರಿಗಳನ್ನು ತಯಾರಿಸಿ ಅವುಗಳ ಜಾಲತಾಣಕ್ಕೆ ಅಪ್ ಲೋಡ್ ಮಾಡಬೇಕು.
- ಮೆಂಟರ್- ಮೇಂಟೀ ಆಪ್ತ ಸಮಾಲೋಚನೆಯನ್ನು/ ಸಲಹೆಯನ್ನು ನೀಡುವ ವ್ಯವಸ್ಥೆಯನ್ನು ಬಲಪಡಿಸಬೇಕು.
- ವಿಶ್ವವಿದ್ಯಾಲಯಗಳು ಅದರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಲಾಕ್ ಡೌನ್ ಅವಧಿಯಲ್ಲಿ ವಿಶ್ವವಿದ್ಯಾನಿಲಯದಿಂದ ದೂರ ಇದ್ದಲ್ಲಿ , ಅವರ ಪ್ರವಾಸ/ ಪ್ರಯಾಣ ಮತ್ತು ವಾಸ್ತವ್ಯದ ವಿವರಗಳನ್ನು ದಾಖಲಿಸಲು ಮಾದರಿಯನ್ನು ರೂಪಿಸಬೇಕು
- ಬೋಧಕ ಸಿಬ್ಬಂದಿಗಳನ್ನು ಐ.ಸಿ.ಟಿ.ಬಳಕೆ ಮತ್ತು ಆನ್ ಲೈನ್ ಬೋಧನಾ ಸಲಕರಣೆಗಳ ಬಳಕೆಗೆ ಸಂಬಂಧಿಸಿ ಸಾಕಷ್ಟು ತರಬೇತಿಗೊಳಿಸಿರಬೇಕು. ಇದರಿಂದ ಅವರು 25 % ಪಠ್ಯಕ್ರಮವನ್ನು ಆನ್ ಲೈನ್ ಬೋಧನೆ ಮೂಲಕ ಮತ್ತು 75% ಬೋಧನೆಯನ್ನು ಮುಖಾ-ಮುಖಿ ಬೋಧನೆಯ ಮೂಲಕ ಪೂರ್ಣಗೊಳಿಸುವಂತಿರಬೇಕು.
ಸೂಚನೆ:
ಈಗಿರುವ ಪರಿಸ್ಥಿತಿ ಮತ್ತು ಭವಿಷ್ಯದ ಅನಿರ್ದಿಷ್ಟತೆಗಳ ಹಿನ್ನೆಲೆಯಲ್ಲಿ
ವಿಶ್ವ ವಿದ್ಯಾಲಯಗಳು ಈ ಮಾರ್ಗದರ್ಶಿಗಳನ್ನು ಪಾರದರ್ಶಕ ರೀತಿಯಲ್ಲಿ ಒಂದೋ ಸಂಪೂರ್ಣ ಅಂಗೀಕರಿಸಿ ಅಥವಾ ನಿರ್ದಿಷ್ಟ ಪರಿಸ್ಥಿತಿಗಳನ್ನು ನಿಭಾಯಿಸಲು ಅನುಕೂಲವಾಗುವಂತೆ , ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಅನುಲಕ್ಷಿಸಿ , ಶಿಕ್ಷಣ ಸಂಸ್ಥೆಗಳು ಮತ್ತು ಇಡೀ ಶಿಕ್ಷಣ ವ್ಯವಸ್ಥೆಯ ಹಿತಾಸಕ್ತಿಗಳನ್ನು ಪರಿಗಣಿಸಿ ಕೆಲವು ತಿದ್ದುಪಡಿಗಳು, ಸೇರ್ಪಡೆಗಳು, ಸುಧಾರಣೆಗಳನ್ನು ಅಳವಡಿಸಿಕೊಂಡು ಅನುಷ್ಟಾನಿಸಬಹುದು.
ವಿಶ್ವವಿದ್ಯಾಲಯವು ಪರ್ಯಾಯ ಪ್ರವೇಶ ಪ್ರಕ್ರಿಯೆಯನ್ನು ಅನುಸರಿಸಬಹುದು ಮತ್ತು ಅದು ಕಾನೂನುಬದ್ದವಾಗಿರಬೇಕು.
ಸರಕಾರಗಳು (ಕೇಂದ್ರ/ರಾಜ್ಯ) ಸಾರ್ವಜನಿಕರು ಸಭೆ ಸೇರುವುದಕ್ಕೆ ನಿಷೇಧ ವಿದಿಸಿದ್ದರೆ ಅಂತಹ ಸ್ಥಳಗಳಲ್ಲಿರುವ ಶಿಕ್ಷಣ ಸಂಸ್ಥೆಗಳು ಅದಕ್ಕನುಗುಣವಾಗಿ ಕಾರ್ಯಾಚರಿಸಬೇಕಾಗುತ್ತದೆ.
ಯಾವುದೇ ಸಂದರ್ಭದಲ್ಲಾದರೂ ಶಿಫಾರಸುಗಳು ಸೂಕ್ತ ಸರಕಾರ/ ಪ್ರಾಧಿಕಾರ ನೀಡಿದ ನಿರ್ದೇಶನಗಳು / ಮಾರ್ಗದರ್ಶಿಗಳ ಮೇಲೆ ಯಾವುದೇ ನಿರ್ಬಂಧಗಳನ್ನು ಹೇರುವಂತಿರಬಾರದು.
ಈ ವರದಿಯನ್ನು ವಿಶ್ವವಿದ್ಯಾಲಯ ರೂಪಿಸಿದ ತಜ್ಞರ ಸಮಿತಿಯ ಅಧ್ಯಕ್ಷರಾದ ಯು.ಜಿ.ಸಿ. ಯ ಮಾಜಿ ಸದಸ್ಯ ಮತ್ತು ಹರ್ಯಾಣಾ ಕೇಂದ್ರೀಯ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ. ಆರ್.ಸಿ.ಕುಹಾಡ್ ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಶೈಕ್ಷಣಿಕ ನಷ್ಟ ತಡೆಯಲು ಪರೀಕ್ಷೆಗಳು ಮತ್ತು ಶೈಕ್ಷಣಿಕ ವೇಳಾಪಟ್ಟಿಗೆ ಸಂಬಂಧಿಸಿದ ವಿಷಯಗಳನ್ನು ಅಧ್ಯಯನ ಮಾಡಿ ವರದಿ ಸಲ್ಲಿಸಲು ಈ ಸಮಿತಿಯನ್ನು ನೇಮಿಸಲಾಗಿತ್ತು.
ಕೋವಿಡ್ -19 ಹಿನ್ನೆಲೆಯಲ್ಲಿ ಜಾರಿಯಾದ ಲಾಕ್ ಡೌನ್ ಕಾರಣದಿಂದ ವಿಶ್ವವಿದ್ಯಾನಿಲಯಗಳ ಪರೀಕ್ಷೆಗಳು ಮತ್ತು ಶೈಕ್ಷಣಿಕ ವೇಳಾಪಟ್ಟಿಯ ವಿವರವಾದ ಯು.ಜಿ.ಸಿ. ಮಾರ್ಗದರ್ಶಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
***
(Release ID: 1619579)
Visitor Counter : 403
Read this release in:
Punjabi
,
English
,
Urdu
,
Marathi
,
Hindi
,
Assamese
,
Bengali
,
Gujarati
,
Odia
,
Tamil
,
Telugu