ಕೃಷಿ ಸಚಿವಾಲಯ
ಲಾಕ್ ಡೌನ್ ಸಮಯದಲ್ಲಿ ‘ನೇರ ಮಾರಾಟ’ ವ್ಯವಸ್ಥೆಯಿಂದ ಕೃಷಿಮಂಡಿಗಳ ನಿಬಿಡತೆ ಕಡಿಮೆಯಾಗಿವೆ ಹಾಗು ಕೃಷಿ ಉತ್ಪನ್ನಗಳ ಸಕಾಲಿಕ ಮಾರಾಟಕ್ಕೆಅನುಕೂಲವಾಗಿದೆ
Posted On:
25 APR 2020 7:57PM by PIB Bengaluru
ಲಾಕ್ ಡೌನ್ ಸಮಯದಲ್ಲಿ ‘ನೇರ ಮಾರಾಟ’ ವ್ಯವಸ್ಥೆಯಿಂದ ಕೃಷಿಮಂಡಿಗಳ ನಿಬಿಡತೆ ಕಡಿಮೆಯಾಗಿವೆ ಹಾಗು ಕೃಷಿ ಉತ್ಪನ್ನಗಳ ಸಕಾಲಿಕ ಮಾರಾಟಕ್ಕೆಅನುಕೂಲವಾಗಿದೆ
ನೇರ ಮಾರಾಟ (ಡೈರೆಕ್ಟ್ ಮಾರ್ಕೆಟಿಂಗ್’) ವ್ಯವಸ್ಥೆಯಲ್ಲಿ ರೈತರಿಗೆ ಅನುಕೂಲವಾಗುವಂತೆ ಮತ್ತು ಉತ್ತಮ ಆದಾಯವನ್ನು ಖಾತ್ರಿಪಡಿಸಿಕೊಳ್ಳಲು ಭಾರತ ಸರ್ಕಾರ ಸರ್ವ ಪ್ರಯತ್ನಗಳನ್ನು ಮಾಡುತ್ತಿದೆ. ರೈತರು/ ರೈತರ ತಂಡಗಳು / ರೈತ ಉತ್ಪಾದಕ ಸಂಸ್ಥೆ(ಎಫ್.ಪಿ.ಒ)ಗಳು / ಸಹಕಾರಿ ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ದೊಡ್ಡ ಖರೀದಿದಾರಿಗೆ / ದೊಡ್ಡ ಚಿಲ್ಲರೆ ವ್ಯಾಪಾರಿಗಳಿಗೆ / ಸಂಸ್ಕರಣಾ ಸಂಸ್ಥೆಗಳಿಗೆ ಮಾರಾಟ ಮಾಡಲು ಅನುಕೂಲವಾಗುವಂತೆ ‘ನೇರ ಮಾರಾಟ’ ಪರಿಕಲ್ಪನೆಯನ್ನು ಉತ್ತೇಜಿಸಿ ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ತಿಳಿಸಿದೆ. ಕೊವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವೈರಸ್ ಹರಡುವುದನ್ನು ತಡೆಗಟ್ಟಲು ಮಂಡಿಗಳಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಇಲಾಖೆಗಳು ಸಲಹೆ ನೀಡಿವೆ.
ಈ ಕುರಿತು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕೇಂದ್ರ ಕೃಷಿ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಅವರು ಏಪ್ರಿಲ್ 16, 2020 ರಂದು ಪತ್ರ ಬರೆದಿದ್ದಾರೆ. ಸಹಕಾರಿ ಸಂಘಗಳು / ರೈತ ಉತ್ಪಾದಕ ಸಂಸ್ಥೆಗಳು (ಎಫ್.ಪಿ.ಒ) ಇತ್ಯಾದಿಗಳ ಮೂಲಕ ನೇರ ಮಾರಾಟದ ಅಗತ್ಯವನ್ನು ಪತ್ರದಲ್ಲಿ ಪುನರುಚ್ಚರಿಸಿದ್ದಾರೆ ಮತ್ತು ಎಲ್ಲಾ ಪಾಲುದಾರರು ಮತ್ತು ರೈತರು ಈ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಬೇಕು ಎಂದು ತಿಳಿಸಿದ್ದಾರೆ. ಕೃಷಿ ಉತ್ಪನ್ನಗಳ ಸಮಯೋಚಿತ ಮಾರಾಟದಲ್ಲಿ ರೈತರಿಗೆ ಅನುಕೂಲವಾಗುವಂತೆ ಮತ್ತು ನೇರ ಮಾರಾಟ ವ್ಯವಸ್ಥೆಗಳನ್ನು ಉತ್ತೇಜಿಸಲು ಸಂಬಂಧಪಟ್ಟ ಇಲಾಖೆಗಳು ಪರವಾನಗಿಗಳಿಗೆ ಒತ್ತಾಯಿಸದೆ ಸಕಾರಾತ್ಮಕವಾಗಿ ಸ್ಪಂದಿಸಲು ಎಲ್ಲಾ ರಾಜ್ಯಗಳಿಗೆ ಕೇಂದ್ರ ಸಚಿವರು ತಮ್ಮ ಪತ್ರದಲ್ಲಿ ಸಲಹೆ ನೀಡಿದ್ದಾರೆ
ಕೃಷಿ ಉತ್ಪನ್ನಗಳ ಸಗಟು ಮಾರುಕಟ್ಟೆಗಳ ನಿಬಿಡತೆ ಕಡಿತಗೊಳಿಸಲು ಮತ್ತು ಪೂರೈಕೆ ಸರಪಳಿಯನ್ನು ಹೆಚ್ಚಿಸಲು, ರಾಷ್ಟ್ರೀಯ ಕೃಷಿ ಮಾರುಕಟ್ಟೆ (ಇ-ನ್ಯಾಮ್) ಅಡಿಯಲ್ಲಿ ಈ ಕೆಳಗೆ ವಿವರಿಸಲಾದ ಎರಡು ನೂತನ ಮಾದರಿ(ಮಾಡ್ಯೂಲ್) ವ್ಯವಸ್ಥೆಗಳನ್ನು ಅಳವಡಿಸಲಾಗಿದೆ:
- ಎಫ್ಪಿಒ ಮಾಡ್ಯೂಲ್: ಎಫ್.ಪಿ.ಒ.ಗಳು ನೇರವಾಗಿ ಇ-ನ್ಯಾಮ್ ಪೋರ್ಟಲ್ನೊಂದಿಗೆ ವ್ಯಾಪಾರ ಮಾಡಬಹುದು. ಅವರು ಸಂಗ್ರಹ ಕೇಂದ್ರಗಳಿಂದ ಕೃಷಿಉತ್ಪನ್ನಗಳ ಛಾಯಾಚಿತ್ರ / ಗುಣಮಟ್ಟದ ನಿಯತಾಂಕದೊಂದಿಗೆ ಉತ್ಪನ್ನ ವಿವರಗಳನ್ನು ಅಪ್ ಲೋಡ್ ಮಾಡಬಹುದು ಮತ್ತು ಮಂಡಿಗೆ ಭೌತಿಕವಾಗಿ ಉತ್ಪನ್ನ ತಲುಪಿಸದೆ ಬಿಡ್ಡಿಂಗ್ ಸೌಲಭ್ಯವನ್ನು ಪಡೆಯಬಹುದು.
- ಗೋದಾಮು ಆಧಾರಿತ ವ್ಯಾಪಾರ ಮಾಡ್ಯೂಲ್: ಸ್ವತಂತ್ರ (ಡೀಮ್ಡ್) ಮಾರುಕಟ್ಟೆ ಎಂದು ಸೂಚಿತ ಉಗ್ರಾಣ ಅಭಿವೃದ್ಧಿ ಮತ್ತು ನಿಯಂತ್ರಣ ಪ್ರಾಧಿಕಾರದಿಂದ (ಡಬ್ಲ್ಯು.ಡಿ.ಆರ್.ಎ) ನೋಂದಾಯಿತ ಗೋದಾಮುಗಳಿಂದ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಹುದು ಮತ್ತು ಭೌತಿಕವಾಗಿ ಉತ್ಪನ್ನಗಳನ್ನು ಹತ್ತಿರದ ಮಂಡಿಗೆ ತಲುಪಿಸಬೇಕಾಗಿಲ್ಲ
ನೇರ ಮಾರಾಟ ವ್ಯವಸ್ಥೆಯನ್ನು ವಿವಿಧ ರಾಜ್ಯಗಳು ಅಳವಡಿಸಿಕೊಂಡಿವೆ ಮತ್ತು ಹಲವಾರು ಕ್ರಮಪದ್ಧತಿಗಳನ್ನು ತೆಗೆದುಕೊಂಡಿವೆ:
- ಕರ್ನಾಟಕದಲ್ಲಿ ಕೃಷಿ ಉತ್ಪನ್ನಗಳ ಸಗಟು ವ್ಯಾಪಾರದಲ್ಲಿ ತೊಡಗಿರುವ ಸಹಕಾರಿ ಸಂಸ್ಥೆಗಳು ಮತ್ತು ಎಫ್.ಪಿ.ಒ.ಗಳಿಗೆ ಮಾರುಕಟ್ಟೆ ಪ್ರಕಾರದ ಪ್ರಾಂಗಣಗಳ ಹೊರಗೆ ಸಗಟು ವ್ಯಾಪಾರ ಮಾಡಲು ವಿನಾಯಿತಿ ನೀಡಲಾಗಿದೆ;
- ತಮಿಳುನಾಡುನಲ್ಲಿ ಎಲ್ಲಾ ಅಧಿಸೂಚಿತ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಶುಲ್ಕಗಳ ಸಂಪೂರ್ಣ ವಿನಾಯಿತಿ ನೀಡಲಾಗಿದೆ;
- ಉತ್ತರ ಪ್ರದೇಶದಲ್ಲಿ ಕೃಷಿ ಗದ್ದೆಗಳಿಂದ ನೇರವಾಗಿ ಇ-ನ್ಯಾಮ್ ಪ್ಲಾಟ್ಫಾರ್ಮ್ನಲ್ಲಿ ವ್ಯಾಪಾರ ಮಾಡಲು ಅವಕಾಶ; ಮತ್ತು ಸಂಸ್ಕರಣಾ ಸಂಸ್ಥೆಗಳಿಗೆ ರೈತರಿಂದ ನೇರ ಖರೀದಿಗೆ ಏಕೀಕೃತ ಪರವಾನಗಿ ವ್ಯವಸ್ಥೆ; ಮತ್ತು ಎಫ್.ಪಿ.ಒ.ಗಳಿಗೆ ಗೋಧಿಯ ಖರೀದಿ ಕಾರ್ಯಾಚರಣೆಯನ್ನು ಕೈಗೊಳ್ಳಲು ಅವಕಾಶ ನೀಡಲಾಗಿದೆ;
- ರಾಜಸ್ಥಾನದಲ್ಲಿ ಪ್ರಾಥಮಿಕ ಕೃಷಿ ಸಾಲ ಸಂಘಗಳು (ಪಿ.ಎ.ಸಿ.ಎಸ್.) / ಬಹುಪಯೋಗಿ ಸಹಕಾರಿ ಸಂಘಗಳು (ಎಲ್.ಎ.ಎಮ್.ಪಿ.ಎಸ್.) ಅನ್ನು ಸ್ವತಂತ್ರ(ಡೀಮ್ಡ್) ಮಾರುಕಟ್ಟೆಗಳೆಂದು ಘೋಷಿಸಲಾಗಿದೆ. ಹಾಗೂ ವ್ಯಾಪಾರಿಗಳಿಗೆ, ಸಂಸ್ಕರಣಾ ಸಂಸ್ಥೆಗಳಿಗೆ ಮತ್ತು ಎಫ್.ಪಿ.ಒ.ಗಳಿಗೆ ನೇರ ಮಾರಾಟಕ್ಕೆ ಅವಕಾಶ ನೀಡಲಾಗಿದೆ.
- ಮಧ್ಯಪ್ರದೇಶದಲ್ಲಿ ರೈತರಿಂದ ನೇರವಾಗಿ ಖರೀದಿಸಲು ವ್ಯಕ್ತಿಗಳು, ಸಂಸ್ಥೆಗಳು ಮತ್ತು ಸಂಸ್ಕರಣಾ ಸಂಸ್ಥೆ/ಘಟಕಗಳ ಹೊರತಾಗಿ, ಖಾಸಗಿ ಸಂಸ್ಥೆಗಳೂ ಕೂಡ ರೂ. 500 / - ಶುಲ್ಕ ಪಾವತಿಸಿ ಮಾರುಕಟ್ಟೆ-ಪ್ರಾಂಗಣಗಳ ಅಂಗಳದ ಹೊರಗೆ ತಮ್ಮ ಖರೀದಿ ಕೇಂದ್ರಗಳನ್ನು ಸ್ಥಾಪಿಸಲು ಅವಕಾಶ ನೀಡಲಾಗಿದೆ.
- ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಗುಜರಾತ್ ರಾಜ್ಯಗಳು ಸಹ ಯಾವುದೇ ಪರವಾನಗಿ ಅಗತ್ಯವಿಲ್ಲದೆ ನೇರ ಮಾರಾಟಕ್ಕೆ ಅವಕಾಶ ನೀಡಿವೆ.
- ಉತ್ತರಾಖಂಡವು ಕೃಷಿ ಉಗ್ರಾಣ / ಶೀಥಲ ಸಂಗ್ರಹಣಾ ಕೇಂದ್ರ (ಕೋಲ್ಡ್ ಸ್ಟೋರೇಜ್) ಮತ್ತು ಸಂಸ್ಕರಣಾ ಘಟಕಗಳನ್ನು ಉಪ ಕೃಷಿಮಂಡಿಗಳೆಂದು ಘೋಷಿಸಿದೆ.
- ಉತ್ತರ ಪ್ರದೇಶ ಇತ್ತೀಚೆಗೆ ತನ್ನ ಸರ್ಕಾರ ನಿಯಮ ಸಡಿಲಿಸಿ ಎಲ್ಲಾ ಕೃಷಿ ಗೋದಾಮುಗಳು / ಶೀಥಲ ಸಂಗ್ರಹಣಾ ಕೇಂದ್ರ (ಕೋಲ್ಡ್ ಸ್ಟೋರೇಜ್)ಗಳನ್ನು ಕೃಷಿ ಮಾರುಕಟ್ಟೆ ಪ್ರಾಂಗಣಗಳೆಂದು ಘೋಷಿಸಿದೆ
ನೇರ ಮಾರ್ಕೆಟಿಂಗ್ ಪರಿಣಾಮ:
- ಲಾಕ್ಡೌನ್ ಅವಧಿಯಲ್ಲಿ ಸಂಸ್ಕರಣಾ ವ್ಯವಸ್ಥೆಗಾಗಿ ರಾಜಸ್ಥಾನವು 1,100 ಕ್ಕೂ ಹೆಚ್ಚು ನೇರ ಮಾರಾಟ ಪರವಾನಗಿಗಳನ್ನು ನೀಡಿದೆ, ರೈತರು ಈಗಾಗಲೇ ನೇರವಾಗಿ ಸಂಸ್ಕರಣಾ ಘಟಕಗಳಿಗೆ ಉತ್ಪನ್ನಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದ್ದಾರೆ. ಮಾರುಕಟ್ಟೆ ಪ್ರಾಂಗಣಗಳೆಂದು ಘೋಷಿಸಲಾದ 550 ಕ್ಕೂ ಹೆಚ್ಚು ಪಿ.ಎ.ಸಿ.ಗಳಲ್ಲಿ, ಈಗಾಗಲೇ 150 ಪಿ.ಎ.ಸಿ.ಗಳು ನೇರ ಮಾರಾಟ ಕೇಂದ್ರಗಳಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸಕ್ರಿಯವಾಗಿ ಪ್ರಾರಂಭಗೊಂಡಿವೆ ಹಾಗೂ ಗ್ರಾಮೀಣ ವ್ಯಾಪಾರಿಗಳು ತಮ್ಮ ವ್ಯಾಪಾರ ವಹಿವಾಟುಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ.
- ತಮಿಳುನಾಡಿನಲ್ಲಿ ಮಾರುಕಟ್ಟೆ ಶುಲ್ಕ ಮನ್ನಾ ಮಾಡಿದ ಕಾರಣ, ವ್ಯಾಪಾರಿಗಳು ರೈತರ ಗದ್ದೆಗಳಿಂದ / ಹಳ್ಳಿಗಳಿಂದ ನೇರವಾಗಿ ಉತ್ಪನ್ನಗಳನ್ನು ಖರೀದಿಸಲು ಆದ್ಯತೆ ನೀಡುತ್ತಿದ್ದಾರೆ
- ಉತ್ತರಪ್ರದೇಶದಲ್ಲಿ ರೈತರು ಮತ್ತು ವ್ಯಾಪಾರಿಗಳೊಂದಿಗೆ ನೇರ ಸಂಪರ್ಕವನ್ನು ಎಫ್.ಪಿ.ಒ.ಗಳು ಸ್ಥಾಪಿಸಿವೆ ಮತ್ತು ಆ ಮೂಲಕ ಉತ್ಪನ್ನಗಳು ವ್ಯರ್ಥವಾಗುವುದನ್ನು ತಡೆದು, ಕೃಷಿ ಉತ್ಪನ್ನಗಳನ್ನು ನಗರಗಳಲ್ಲಿ ಗ್ರಾಹಕರಿಗೆ ನೇರವಾಗಿ ಪೂರೈಸುತ್ತವೆ. ಇದರಿಂದ ರೈತರಿಗೆ ಬಹಳಷ್ಟು ಪ್ರಯೋಜನವಾಗುತ್ತದೆ. ಇದಲ್ಲದೆ, ಎಫ್.ಪಿ.ಒ.ಗಳನ್ನು ಜೊಮಾಟೊ ಫುಡ್ ಡೆಲಿವರಿ ಆ್ಯಪ್ನೊಂದಿಗೆ ಜೋಡಿಸಿ ಪರಸ್ಪರ ಸಂಪರ್ಕ ಸ್ಥಾಪಿಸಲು ರಾಜ್ಯ ಸರ್ಕಾರ ಅಗತ್ಯ ಅನುಕೂಲಗಳನ್ನು ಮಾಡಿಕೊಟ್ಟಿದೆ. ಇದರಿಂದಾಗಿ ಗ್ರಾಹಕರಿಗೆ ರೈತರ ತಾಜಾ ತರಕಾರಿಗಳ ಸುಗಮ ವಿತರಣೆಯನ್ನು ಖಾತ್ರಿಪಡಿಸಲಾಗಿದೆ.
ರಾಜ್ಯಗಳಿಂದ ಪಡೆದ ವರದಿಯ ಪ್ರಕಾರ, ಪರಿಣಾಮಕಾರಿ, ಸಮಯೋಚಿತ ಹಾಗೂ ಸಕಾಲಿಕ ಮಾರಾಟ ಸಾಧ್ಯತೆಯ 'ಕೃಷಿ ಉತ್ಪನ್ನಗಳ ನೇರ ಮಾರಟ' (ಡೈರೆಕ್ಟ್ ಮಾರ್ಕೆಟಿಂಗ್) ವ್ಯವಸ್ಥೆಯಿಂದ ಕೃಷಿಕರು, ಕೃಷಿಕರ ಗುಂಪುಗಳು, ಎಫ್.ಪಿ.ಒ.ಗಳು, ಸಹಕಾರಿ ಸಂಸ್ಥೆಗಳು ಮತ್ತು ಎಲ್ಲಾ ಪಾಲುದಾರರಿಗೆ ಬಹಳಷ್ಟು ಅನುಕೂಲವಾಗಿದೆ.
***
(Release ID: 1618563)
Visitor Counter : 308