ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್‌-19 ನಿಯಂತ್ರಿಸಲು ಕೈಗೊಂಡಿರುವ ಕ್ರಮಗಳ ಕುರಿತು ರಾಜ್ಯ ಹಾಗು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರೊಂದಿಗೆ ಡಾ. ಹರ್ಷವರ್ಧನ್‌ ಅವರು ವಿಡಿಯೊ ಕಾನ್ಫೆರೆನ್ಸ್‌ ಮೂಲಕ ಚರ್ಚಿಸಿದರು

Posted On: 24 APR 2020 7:42PM by PIB Bengaluru

ಕೋವಿಡ್‌-19 ನಿಯಂತ್ರಿಸಲು ಕೈಗೊಂಡಿರುವ ಕ್ರಮಗಳ ಕುರಿತು ರಾಜ್ಯ ಹಾಗು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರೊಂದಿಗೆ ಡಾ. ಹರ್ಷವರ್ಧನ್ಅವರು ವಿಡಿಯೊ ಕಾನ್ಫೆರೆನ್ಸ್ಮೂಲಕ ಚರ್ಚಿಸಿದರು

“ನಮ್ಮ ಶತ್ರುವಿನ ಬಗ್ಗೆ ಅರಿವಿದೆ, ಸೂಕ್ತ, ಶ್ರೇಣೀಕೃತ ಹಾಗು ಮಾರ್ಗದರ್ಶಕ ಯೋಜನೆಗಳೊಂದಿಗೆ ಈ ಶತ್ರುವನ್ನು ಮಣಿಸಬೇಕು”:

ಡಾ. ಹರ್ಷವರ್ಧನ್‌


ದೇಶದಲ್ಲಿ ಕೋವಿಡ್‌–19 ನಿಯಂತ್ರಿಸಲು ಕೈಗೊಂಡಿರುವ ಸಿದ್ಧತೆ ಮತ್ತು ಸಾರ್ವಜನಿಕರ ಆರೋಗ್ಯ ಕ್ರಮಗಳ ಕುರಿತು ವಿಡಿಯೊ ಕಾನ್ಫೆರೆನ್ಸ್‌ ಮೂಲಕ ಸಚಿವರಾದ ಡಾ. ಹರ್ಷವರ್ಧನ್‌ ಅವರು ಪರಾಮರ್ಶೆ ನಡೆಸಿದರು. ‘ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್‌–19 ನಿಯಂತ್ರಿಸಲು ನೀವು ನಿರ್ವಹಿಸಿದ ಪಾತ್ರ ಮತ್ತು ಪ್ರಯತ್ನಗಳಿಗೆ ನಿಮ್ಮನ್ನು ಅಭಿನಂದಿಸುತ್ತೇನೆ’ ಎಂದು ಡಾ. ಹರ್ಷವರ್ಧನ್‌ ಅವರು ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಿಗೆ ಹಾಗೂ ಹಿರಿಯ ಅಧಿಕಾರಿಗಳಿಗೆ ಹೇಳಿದರು. ಆರೋಗ್ಯ ಖಾತೆ ರಾಜ್ಯ ಸಚಿವ ಶ್ರೀ ಅಶ್ವಿನಿ ಕುಮಾರ್ ಅವರು ಸಭೆಯಲ್ಲಿ ಹಾಜರಿದ್ದರು.

ಮಹಾರಾಷ್ಟ್ರ, ಗುಜರಾತ್‌, ದೆಹಲಿ, ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಕರ್ನಾಟಕ, ಕೇರಳ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್‌, ಹರಿಯಾಣ, ಒಡಿಶಾ, ಜಾರ್ಖಂಡ್‌, ಹಿಮಾಚಲ ಪ್ರದೇಶ, ಛತ್ತೀಸಗಡ, ಅಸ್ಸಾಂ, ಚಂಡೀಗಡ, ಅಂಡಮಾನ್‌ ಮತ್ತು ನಿಕೋಬಾರ್‌, ಮೇಘಾಲಯ, ಅರುಣಾಚಲ ಪ್ರದೇಶ, ಮಿಜೋರಾಂ ಮತ್ತು ಉತ್ತರಾಖಂಡದ ಸಚಿವರು ವಿಡಿಯೊ ಕಾನ್ಫೆರೆನ್ಸ್‌ನಲ್ಲಿ ಪಾಲ್ಗೊಂಡಿದ್ದರು.

‘ಕೋವಿಡ್‌–19 ಸಾಂಕ್ರಾಮಿಕ ವಿರುದ್ಧದ ಮೂರುವರೆ ತಿಂಗಳಿಂದ ಹೋರಾಟ ನಡೆಯುತ್ತಿದೆ. ಮುಂಜಾಗ್ರತೆ, ನಿಯಂತ್ರಣ ಮತ್ತು ನಿರ್ವಹಣೆ ಕ್ರಮಗಳನ್ನು ನಿರಂತರವಾಗಿ ಕೈಗೊಳ್ಳಲಾಗುತ್ತಿದೆ. ರಾಜ್ಯಗಳ ಸಹಕಾರದೊಂದಿಗೆ ಉನ್ನತಮಟ್ಟದಲ್ಲಿ ಈ ಎಲ್ಲ ವಿಷಯಗಳ ಬಗ್ಗೆ ನಿಗಾವಹಿಸಲಾಗುತ್ತಿದೆ. ದೇಶದಲ್ಲಿ ಸಾವಿಗೀಡಾಗುವವರ ಸಂಖ್ಯೆ ಶೇಕಡ 3ರಷ್ಟು ಇದೆ ಮತ್ತು ಗುಣಮುಖರಾಗುವವರ ಸಂಖ್ಯೆ ಶೇಕಡ 20ರಷ್ಟಿದೆ ಎಂದು ಡಾ. ಹರ್ಷವರ್ಧನ್‌ ವಿವರಿಸಿದರು. ಸರ್ಕಾರ ಕೈಗೊಂಡಿರುವ ಸಮೀಕ್ಷೆಗಳ ಬಗ್ಗೆ ವಿವರಿಸಿರುವ ಅವರು, ನಮ್ಮ ಶತ್ರು ಎಲ್ಲಿದ್ದಾನೆ ಎನ್ನುವುದು ನಮಗೆ ಗೊತ್ತಿದೆ. ಸಮರ್ಪಕ ಮಾರ್ಗದರ್ಶನ ಮೂಲಕ ನಾವು ಸಾಗಬೇಕಾಗಿದೆ’ ಎಂದರು.

‘ಕೋವಿಡ್‌–19 ವಿರುದ್ಧ ಹೋರಾಟ ನಡೆಸಲು ರಾಜ್ಯಗಳಿಗೆ ತಾಂತ್ರಿಕ ಅಧಿಕಾರಿಗಳ ತಂಡವನ್ನು ಕಳುಹಿಸಲಾಗಿದೆ. ರಾಜ್ಯಗಳಲ್ಲಿನ ಪರಿಸ್ಥಿತಿಯನ್ನು ಈ ತಂಡಗಳು ಪರಾಮರ್ಶೆ ಮಾಡಲಿವೆ. ಆ್ಯಂಟಿಬಾಡಿ ಪರೀಕ್ಷೆ ಬಗ್ಗೆಯೂ ಈ ತಂಡ ಕ್ರಮಕೈಗೊಳ್ಳಲಿವೆ. ಈ ಪರೀಕ್ಷೆಯು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವಿಭಿನ್ನವಾಗಿರುತ್ತದೆ. ಇದನ್ನೇ ಸಂಪೂರ್ಣವಾಗಿ ಅವಲಂಬನೆಯಾಗಿರಬಾರದು. ಡಬ್ಲ್ಯೂಎಚ್ಒ ಸಹ ಈ ಪರೀಕ್ಷೆಯ ಖಚಿತತೆಯ ಬಗ್ಗೆ ಪ್ರತಿಕ್ರಿಯಿಸಿಲ್ಲ. ಐಸಿಎಂಆರ್‌ ಈ ಪರೀಕ್ಷೆಗಳ ಪರಾಮರ್ಶೆ ನಡೆಸುತ್ತಿದೆ ಮತ್ತು ಕಿಟ್‌ಗಳ ಬಗ್ಗೆಯೂ ಪರಿಶೀಲಿಸುತ್ತಿದೆ. ಈ ಬಗ್ಗೆ ಶೀಘ್ರ ನಿಯಮಾವಳಿಗಳನ್ನು ಹೊರಡಿಸಲಿದೆ ಎಂದು ಡಾ. ಹರ್ಷವರ್ಧನ್‌ ತಿಳಿಸಿದರು.

ಈ ಸಾಂಕ್ರಾಮಿಕ ರೋಗ ಹಬ್ಬಿದ ಸಂದರ್ಭದಲ್ಲಿ ಆರೋಗ್ಯರಕ್ಷಣೆಯಲ್ಲಿ ತೊಡಗಿರುವ ವೈದ್ಯರು, ಆರೋಗ್ಯ ಕಾರ್ಯಕರ್ತರು ಮತ್ತು ಸಿಬ್ಬಂದಿ ರಕ್ಷಣೆಗಾಗಿ ರೂಪಿಸಿರುವ ಸಾಂಕ್ರಾಮಿಕ ರೋಗಗಳ ಕಾಯ್ದೆ–1897ಕ್ಕೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಹೊರಡಿಸಲಾಗಿದ್ದು, ಇದಕ್ಕೆ ರಾಷ್ಟ್ರಪತಿ ಅವರು ಅಂಕಿತ ಹಾಕಿರುವುದನ್ನು ಈ ಸಂದರ್ಭದಲ್ಲಿ ಸಚಿವರು ಪ್ರಸ್ತಾಪಿಸಿದರು. ಆರೋಗ್ಯ ರಕ್ಷಣೆಯ ಕಾರ್ಯದಲ್ಲಿ ತೊಡಗಿರುವವರ ವಿರುದ್ಧ ನಡೆಯುವ ಯಾವುದೇ ರೀತಿಯ ಹಿಂಸಾಚಾರವನ್ನು ಸಹಿಸುವುದಿಲ್ಲ. ಜತೆಗೆ ಆಸ್ತಿಗೂ ಹಾನಿ ಮಾಡಿದರೂ ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗುವುದು. ಹಿಂಸಾಚಾರ ನಡೆಸಿದರೆ ಅದು ಅಪರಾಧವಾಗುತ್ತದೆ. ಜತೆಗೆ ಜಾಮೀನು ರಹಿತ ಅಪರಾಧವಾಗುತ್ತದೆ. ಈ ರೀತಿಯ ಹಲ್ಲೆ, ಹಿಂಸಾಚಾರ ನಡೆಸಿದರೆ 3ತಿಂಗಳಿಂದ ಐದು ವರ್ಷಗಳವರೆಗೆ ಶಿಕ್ಷೆಯಾಗಬಹುದು. ಜತೆಗೆ ₹50 ಸಾವಿರದಿಂದ ₹2 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ. ತೀವ್ರ ಗಾಯ ಮತ್ತು ಅಪಾರ ಹಾನಿಯಾಗಿದ್ದರೆ ಈ ಶಿಕ್ಷೆಯ ಪ್ರಮಾಣವನ್ನು ಆರು ತಿಂಗಳಿಂದ ಏಳು ವರ್ಷಕ್ಕೆ ಹೆಚ್ಚಿಸಬಹುದು. ದಂಡದ ಪ್ರಮಾಣವನ್ನು ₹1ಲಕ್ಷದಿಂದ ₹5ಲಕ್ಷದವರೆಗೆ ಹೆಚ್ಚಿಸಬಹುದು ಎಂದು ವಿವರಿಸಿದರು. ಕೋವಿಡ್‌–19 ನಿಯಂತ್ರಿಸುವ ಕಾರ್ಯದಲ್ಲಿ ತೊಡಗಿರುವ ಆರೋಗ್ಯ ಕಾರ್ಯಕರ್ತರು ಸಾವಿಗೀಡಾದರೆ ₹50 ಲಕ್ಷ ವಿಮೆಯನ್ನು ನೀಡುವುದನ್ನು ಘೋಷಿಸಲಾಗಿದೆ. ಸ್ವಚ್ಛತಾ ಸಿಬ್ಬಂದಿ, ವೈದ್ಯರು, ಆಶಾ ಕಾರ್ಯಕರ್ತರು, ಪ್ಯಾರಾ ಮೆಡಿಕಲ್‌ ಸಿಬ್ಬಂದಿ, ನರ್ಸ್‌ಗಳು ಮತ್ತು ಖಾಸಗಿ ವೈದ್ಯರು ಸಹ ಸೇರಿದ್ದಾರೆ ಎಂದು ಡಾ. ಹರ್ಷವರ್ಧನ್‌ ವಿವರಿಸಿದರು.

ಆಯಾ ರಾಜ್ಯಗಳಲ್ಲಿ ಪಿಎಪಿಗಳು, ಎನ್‌95 ಮಾಸ್ಕ್‌ಗಳು, ಪರೀಕ್ಷಾ ಕಿಟ್‌ಗಳು, ಔಷಧಗಳು ಮತ್ತು ವೆಂಟಿಲೇಟರ್‌ಗಳ ಲಭ್ಯತೆ ಬಗ್ಗೆ ಸಚಿವರು ಪರಾಮರ್ಶಿಸಿದರು. ಈ ಅಗತ್ಯ ವಸ್ತುಗಳು ಕೊರತೆಯಾಗದಂತೆ ಭಾರತ ಸರ್ಕಾರ ಕ್ರಮಕೈಗೊಳ್ಳುತ್ತಿದೆ ಎಂದು ಡಾ. ಹರ್ಷವರ್ಧನ್‌ ಭರವಸೆ ನೀಡಿದರು. ಪಿಪಿಇಗಳು ಮತ್ತು ಎನ್‌95 ಮಾಸ್ಕ್‌ಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಈಗ 100 ತಯಾರಿಕಾ ಘಟಕಗಳು ಭಾರತದಲ್ಲಿವೆ. ಈ ಕಂಪನಿಗಳು ಮಾಸ್ಕ್‌ ಮತ್ತು ಪಿಪಿಇಗಳನ್ನು ತಯಾರಿಸುತ್ತಿವೆ. ಉತ್ತಮ ಪದ್ಧತಿಗಳನ್ನು ಅನುಸರಿಸುವ ರಾಜ್ಯಗಳ ಕ್ರಮಗಳನ್ನು ಇತರರ ರಾಜ್ಯಗಳು ಸಹ ಪಾಲಿಸಬೇಕು ಎಂದು ಡಾ. ಹರ್ಷವರ್ಧನ್‌ ಸಲಹೆ ನೀಡಿದರು.

ದೇಶದಲ್ಲಿನ ಕೋವಿಡ್‌–19 ಆಸ್ಪತ್ರೆಗಳ ಸ್ಥಿತಿಗತಿಗಳ ಬಗ್ಗೆಯೂ ಡಾ. ಹರ್ಷವರ್ಧನ್‌ ಪರಿಶೀಲನೆ ನಡೆಸಿದರು. ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ಕೋವಿಡ್‌–19ಗಾಗಿಯೇ ಪ್ರತ್ಯೇಕವಾದ ಆಸ್ಪತ್ರೆಗಳನ್ನು ಮೀಸಲಿರಿಸುವುದು ಅಗತ್ಯವಿದೆ. ತ್ವರಿತಗತಿಯಲ್ಲಿ ಈ ಕಾರ್ಯ ಕೈಗೊಂಡು ಜನರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಕೋವಿಡ್‌ ಬಿಕ್ಕಟ್ಟಿನ ಸಂದರ್ಭದಲ್ಲಿ ಇತರ ಕಾಯಿಲೆಗಳಿಗೆ ತುತ್ತಾಗಿರುವವರನ್ನು ಕಡೆಗಣಿಸಬಾರದು ಎಂದು ಎಲ್ಲ ಸಚಿವರಿಗೆ ಡಾ. ಹರ್ಷವರ್ಧನ್‌ ಸೂಚಿಸಿದರು. ಕೋವಿಡ್‌–19 ರೋಗಿಗಳಿಗೆ ಸರ್ಕಾರ ಎಲ್ಲ ರೀತಿಯ ಚಿಕಿತ್ಸೆಯನ್ನು ಒದಗಿಸುತ್ತಿದೆ. ಅದೇ ರೀತಿಯ ಕೋವಿಡ್‌–19 ಸೋಂಕಿಗೆ ಒಳಗಾಗದ ಇತರ ಕಾಯಿಲೆಯ ರೋಗಿಗಳಿಗೂ ಸಮರ್ಪಕವಾದ ಚಿಕಿತ್ಸೆ ದೊರೆಯಬೇಕು. ಉಸಿರಾಟದ ತೊಂದರೆ, ಹೃದ್ರೋಗ, ಡಯಾಲಿಸಿಸ್‌, ರಕ್ತ ವರ್ಗಾವಣೆ, ಗರ್ಭಿಣಿಯರ ಬಗ್ಗೆ ಕಾಳಜಿ ವಹಿಸಬೇಕು. ಇಂತಹ ಕಾಯಿಲೆಗಳು ಮತ್ತು ಅಗತ್ಯ ವೈದ್ಯಕೀಯಸೇವೆ ಇರುವವರನ್ನು ಯಾವುದೇ ಸಂದರ್ಭದಲ್ಲಿ ಕಡೆಗಣಿಸಬಾರದು. ತ್ವರಿತಗತಿಯಲ್ಲಿ ಚಿಕಿತ್ಸೆ ವ್ಯವಸ್ಥೆ ದೊರೆಯಬೇಕು. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಆಡಳಿತಗಳು ಸ್ವಯಂ ಪ್ರೇರಿತ ರಕ್ತದಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಜತೆಗೆ, ನಿಂತ ನೀರಿನಿಂದ ಹಬ್ಬುವ ರೋಗಗಳಾದ ಮಲೇರಿಯಾ, ಡೆಂಗೆ ಮತ್ತು ಕ್ಷಯ ರೋಗದ ಬಗ್ಗೆ ಎಚ್ಚರವಹಿಸಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.

ಎಲ್ಲರೂ ಆರೋಗ್ಯಸೇತು ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಇದರಿಂದ, ಕೊರೊನಾ ವೈರಸ್‌ ಸೋಂಕಿನ ಅಪಾಯವನ್ನು ಇದು ಎಚ್ಚರಿಕೆ ನೀಡುತ್ತದೆ. ಸ್ಮಾರ್ಟ್‌ಫೋನ್‌ನಲ್ಲಿ ಡೌನ್‌ಲೋಡ್‌ ಮಾಡಿದ ಬಳಿಕ ಈ ಆ್ಯಪ್‌ ಮೂಲಕ ಸೋಂಕಿ ಹರಡುವ ಅಪಾಯ ಮತ್ತಿತರರ ವಿಷಯಗಳ ಬಗ್ಗೆ ವಿವರ ನೀಡುತ್ತದೆ ಎಂದು ಡಾ. ಹರ್ಷವರ್ಧನ್‌ ವಿವರಿಸಿದ್ದಾರೆ.

ಕೋವಿಡ್‌ 19 ನಿಯಂತ್ರಿಸಲು ಎಲ್ಲರೂ ಸಾಮಾಜಿಕ ಅಂತರ ಪಾಲಿಸಬೇಕು. ವೈಯಕ್ತಿಕ ಸ್ವಚ್ಛತೆಯನ್ನು ಕಾಪಡಿಕೊಳ್ಳಬೇಕು. ರಾಜ್ಯ ಸರ್ಕಾರಗಳ ಎಲ್ಲ ಆರೋಗ್ಯ ಸಚಿವರು ಈ ಬಗ್ಗೆ ಗಮನಹರಿಸಬೇಕು. ಈ ಮೊದಲಿನಿಂತೆಯೇ ಎರಡನೇ ಹಂತದ ಲಾಕ್‌ಡೌನ್ ಅನ್ನು ಸಮರ್ಪಕವಾಗಿ ಜಾರಿಗೊಳಿಸಲು ಕ್ರಮಕೈಗೊಳ್ಳಬೇಕು. ಲಾಕ್‌ಡೌನ್‌ ಸಂದರ್ಭದಲ್ಲಿ ಯಾವುದೇ ವಿಷಯಗಳಲ್ಲಿ ರಾಜಿಯಾಗಬಾರದು ಮತ್ತು ಸಡಿಲಗೊಳಿಸುವ ಪ್ರಯತ್ನ ಮಾಡಬಾರದು. ಉತ್ತರ ಪ್ರದೇಶದಲ್ಲಿ ಕಟ್ಟುನಿಟ್ಟಾಗಿ ಲಾಕ್‌ಡೌನ್‌ ಜಾರಿಗೊಳಿಸಲಾಗಿದೆ ಅದೇ ರೀತಿ ಉಳಿದ ರಾಜ್ಯಗಳಲ್ಲಿಯೂ ಪಾಲಿಸುವಂತೆ ಡಾ. ಹರ್ಷವರ್ಧನ್‌ ಸೂಚಿಸಿದರು.

ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ಸಾಂಕ್ರಾಮಿಕ ರೋಗವನ್ನು ಹೊಡೆದೊಡಿಸುವ ನಿಟ್ಟಿನಲ್ಲಿ ಸದಾ ಪ್ರಯತ್ನಿಸಬೇಕು. ಸ್ವಾವಲಂಬಿಗಳಾಗಬೇಕು. ಭಾರತ ಅತಿ ದೊಡ್ಡ ದೇಶ. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಹಕಾರದಿಂದ ಕೊರೊನಾವನ್ನು ನಾಶಗೊಳಿಸುವ ಹೋರಾಟವನ್ನು ಯಶಸ್ಸುಗೊಳಿಸುತ್ತೇವೆ ಎಂದು ಡಾ. ಹರ್ಷವರ್ಧನ್‌ ಹೇಳಿದರು.

ಪ್ರೀತಿ ಸುದಾನ್‌, ಕಾರ್ಯದರ್ಶಿ(ಎಚ್‌ಎಫ್‌ಡಬ್ಲ್ಯೂ), ಡಾ. ಬಲರಾಮ ಭಾರ್ಗವ್‌, ಕಾರ್ಯದರ್ಶಿ ಡಿಎಚ್ಆರ್‌ ಮತ್ತು ಡಿಜಿ, ಐಸಿಎಂಆರ್‌ ಮತ್ತು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು, ಐಸಿಎಂಆರ್‌ ಪ್ರತನಿಧಿಗಳು ಈ ಪುನರ್‌ಪರಿಶೀಲನೆ ಸಭೆಯಲ್ಲಿ ಪಾಲ್ಗೊಂಡಿದ್ದರು.

***


(Release ID: 1618338) Visitor Counter : 221