ಪಂಚಾಯತ್ ರಾಜ್ ಸಚಿವಾಲಯ
ಗ್ರಾಮ ಪಂಚಾಯಿತಿ ಸದಸ್ಯರ ಜತೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಏಪ್ರಿಲ್ 24ರಂದು ಸಮಾಲೋಚನೆ
Posted On:
22 APR 2020 7:52PM by PIB Bengaluru
ಗ್ರಾಮ ಪಂಚಾಯಿತಿ ಸದಸ್ಯರ ಜತೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಏಪ್ರಿಲ್ 24ರಂದು ಸಮಾಲೋಚನೆ
ವಿಡಿಯೊ ಕಾನ್ಫೆರೆನ್ಸ್ ಮೂಲಕ ರಾಷ್ಟ್ರೀಯ ಪಂಚಾಯಿತ್ ರಾಜ್ ದಿನಾಚರಣೆಯಲ್ಲಿ ಭಾಗಿಯಾಗಲಿದ್ದಾರೆ
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು 2020ರ ಏಪ್ರಿಲ್ 24ರಂದು ದೇಶದ ವಿವಿಧ ಗ್ರಾಮ ಪಂಚಾಯಿತಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ದಿನವನ್ನು ಪ್ರತಿ ವರ್ಷ ರಾಷ್ಟ್ರೀಯ ಪಂಚಾಯಿತ್ ರಾಜ್ ದಿನವನ್ನಾಗಿ ಆಚರಿಸಲಾಗುತ್ತಿದೆ.
ದೇಶದಾದ್ಯಂತ ಜಾರಿಯಲ್ಲಿರುವ ಲಾಕ್ಡೌನ್ನಿಂದಾಗಿ ಸಾಮಾಜಿಕ ಅಂತರವನ್ನು ಪಾಲಿಸಲಾಗುತ್ತಿದೆ. ಪ್ರಧಾನಿ ಅವರು ವಿಡಿಯೊ ಕಾನ್ಫೆರೆನ್ಸ್ ಮೂಲಕ ಗ್ರಾಮ ಪಂಚಾಯಿತಿ ಪ್ರತಿನಿಧಿಗಳ ಜತೆ ಸಮಾಲೋಚನೆ ನಡೆಸಲಿದ್ದಾರೆ.
ಇದೇ ಸಂದರ್ಭದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಏಕೀಕೃತ ಇ–ಗ್ರಾಂ ಸ್ವರಾಜ್ ಪೋರ್ಟಲ್ ಮತ್ತು ಮೊಬೈಲ್ ಆ್ಯಪ್ಗೆ ಚಾಲನೆ ನೀಡಲಿದ್ದಾರೆ.
ಪಂಚಾಯಿತಿ ರಾಜ್ ಸಚಿವಾಲಯ ಏಕೀಕೃತ ಪೋರ್ಟಲ್ ಆರಂಭಿಸಿದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆಗಳನ್ನು (ಜಿಪಿಡಿಪಿ) ರೂಪಿಸಿ ಅನುಷ್ಠಾನಗೊಳಿಸಲು ಈ ಪೋರ್ಟಲ್ ಗ್ರಾಮ ಪಂಚಾಯಿತಿಗಳಿಗೆ ನೆರವಾಗಲಿದೆ
ಪ್ರಧಾನಿ ಅವರು ‘ಸ್ವಮಿತ್ವ’ ಯೋಜನೆಗೂ ಸಹ ಇದೇ ಸಂದರ್ಭದಲ್ಲಿ ಚಾಲನೆ ನೀಡಲಿದ್ದಾರೆ. ಗ್ರಾಮೀಣ ಭಾಗದಲ್ಲಿ ಆಸ್ತಿಗೆ ಸಂಬಂಧಿಸಿದ ಮಾಹಿತಿ ಪಡೆಯುವುದು ಇದಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಇತ್ತೀಚಿನ ಸರ್ವೇ ಪದ್ಧತಿಗಳ ಮೂಲಕ ಜನವಸತಿ ಪ್ರದೇಶ ಮತ್ತಿತರ ವಿವರಗಳನ್ನು ಪಡೆಯುವ ಉದ್ದೇಶವನ್ನು ಇದು ಹೊಂದಿದೆ. ಇದಕ್ಕಾಗಿ ಡ್ರೋನ್ ತಂತ್ರಜ್ಞಾನವನ್ನು ಉಪಯೋಗಿಸಲಾಗುವುದು. ಪಂಚಾಯಿತಿ ರಾಜ್ ಸಚಿವಾಲಯ, ರಾಜ್ಯ ಸರ್ಕಾರಗಳ ಪಂಚಾಯಿತಿ ರಾಜ್ ಇಲಾಖೆ, ರಾಜ್ಯ ಸರ್ಕಾರಗಳ ಕಂದಾಯ ಇಲಾಖೆ ಮತ್ತು ಭಾರತೀಯ ಸರ್ವೇ ಇಲಾಖೆಯ ಮೂಲಕ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು.
ಪ್ರತಿ ವರ್ಷ, ಈ ಸಂದರ್ಭದಲ್ಲಿ ಪಂಚಾಯಿತಿ ರಾಜ್ ಸಚಿವಾಲಯವು ದೇಶದ ಅತ್ಯುತ್ತಮ ಪಂಚಾಯಿತಿಗಳಿಗೆ/ ರಾಜ್ಯಗಳಿಗೆ/ಕೇಂದ್ರಾಡಳಿತ ಪ್ರದೇಶಗಳಿಗೆ ಪ್ರಶಸ್ತಿಯನ್ನು ನೀಡಲಾಗುತ್ತಿತ್ತು. ಸಾರ್ವಜನಿಕರಿಗೆ ಅತ್ಯುತ್ತಮ ಸೇವೆ ಒದಗಿಸಿರುವುದನ್ನು ಗುರುತಿಸಿ ಪಂಚಾಯಿತಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಕಾರ್ಯ ಕೈಗೊಳ್ಳಲಾಗುತ್ತಿತ್ತು. ಈ ವರ್ಷ ಇಂತಹ ಮೂರು ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ನಾನಾಜಿ ದೇಶಮುಖ್ ರಾಷ್ಟ್ರೀಯ ಗೌರವ ಗ್ರಾಮ ಸಭಾ ಪುರಸ್ಕಾರ (ಎನ್ಡಿಆರ್ಜಿಜಿಎಸ್ಪಿ), ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಪ್ರಶಸ್ತಿ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನಾ ಪ್ರಶಸ್ತಿ (ಜಿಪಿಡಿಪಿ) ನೀಡಲು ನಿರ್ಧರಿಸಲಾಗಿದೆ.
ಹಿನ್ನೆಲೆ:
1993ರ ಏಪ್ರಿಲ್ 24ರ ದಿನ ಪಂಚಾಯಿತಿ ವ್ಯವಸ್ಥೆಯಲ್ಲಿ ಐತಿಹಾಸಿಕ ದಿನ. ತಳಮಟ್ಟದಲ್ಲಿ ಅಧಿಕಾರ ನೀಡಬೇಕು ಎನ್ನುವ ಉದ್ದೇಶದಿಂದ ವಿಕೇಂದ್ರೀಕರಣ ವ್ಯವಸ್ಥೆಗೆ ಚಾಲನೆ ದೊರೆಯಿತು. ಪಂಚಾಯಿತಿ ರಾಜ್ ವ್ಯವಸ್ಥೆ ಮೂಲಕ ಅಧಿಕಾರ ವಿಕೇಂದ್ರೀಕರಣ ಕೈಗೊಳ್ಳುವ ಕಾರ್ಯ ನಡೆಯಿತು. ಸಂವಿಧಾನ (73ನೇತಿದ್ದುಪಡಿ) ಕಾಯ್ದೆ–1992ರ ಮೂಲಕ ಇದೇ ದಿನದಂದು ಈ ಕಾರ್ಯ ಕೈಗೊಳ್ಳಲಾಯಿತು.
ಪಂಚಾಯಿತಿ ರಾಜ್ ಸಚಿವಾಲಯವು ಪ್ರತಿ ವರ್ಷ 24ನೇ ಏಪ್ರಿಲ್ ಅನ್ನು ರಾಷ್ಟ್ರೀಯ ಪಂಚಾಯಿತಿ ರಾಜ್ ದಿನವನ್ನಾಗಿ ಆಚರಿಸುತ್ತಿದೆ. ಇದೇ ದಿನದಂದು 73ನೇ ಸಂವಿಧಾನ ತಿದ್ದುಪಡಿ ಮೂಲಕ ಪಂಚಾಯಿತಿ ರಾಜ್ ವ್ಯವಸ್ಥೆ ಜಾರಿಗೆ ಬಂದಿತ್ತು. ಈ ಸಂದರ್ಭವು ದೇಶದ ಪಂಚಾಯಿತಿ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಲು ಅವಕಾಶ ನೀಡುತ್ತದೆ. ಜತೆಗೆ ಈ ಪಂಚಾಯಿತಿಗಳ ಸಾಧನೆಯನ್ನು ಗುರುತಿಸಲು ನೆರವಾಗುತ್ತದೆ. ಈ ಮೂಲಕ ಸಬಲೀಕರಣ ಮತ್ತು ಉತ್ತೇಜನಕ್ಕೆ ಅವಕಾಶವನ್ನು ನೀಡುತ್ತದೆ.
2. ಸಾಮಾನ್ಯವಾಗಿ ರಾಷ್ಟ್ರೀಯ ಪಂಚಾಯಿತಿ ರಾಜ್ ದಿನದಂದು ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮವನ್ನು ದೆಹಲಿಯ ಹೊರಗೆ ಆಯೋಜಿಸಲಾಗುತ್ತಿತ್ತು. ಇದೊಂದು ಸಂಭ್ರಮದ ಕಾರ್ಯಕ್ರಮವಾಗುತ್ತಿತ್ತು. ಹಲವು ಬಾರಿ ಗೌರವಾನ್ವಿತ ಪ್ರಧಾನಿ ಅವರು ಪಾಲ್ಗೊಂಡಿದ್ದಾರೆ.
ಈ ವರ್ಷ ಉತ್ತರ ಪ್ರದೇಶದ ಝಾನ್ಸಿಯಲ್ಲಿ ಕಾರ್ಯಕ್ರಮ ಆಯೋಜಿಸುವ ಉದ್ದೇಶವಿತ್ತು. ಈ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಎಲ್ಲ ಗ್ರಾಮ ಸಭೆಗಳು ಮತ್ತು ಪಂಚಾಯಿತಿ ರಾಜ್ ಸಂಸ್ಥೆಗಳ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಲು ಪ್ರಧಾನಿ ಅವರು ಸಮ್ಮತಿ ಸೂಚಿಸಿದ್ದರು. ಆದರೆ, ದೇಶದಾದ್ಯಂತ ಕೋವಿಡ್–19 ಹಬ್ಬಿದ್ದರಿಂದ 2020ರ ಏಪ್ರಿಲ್ 24ರಂದು (ಶುಕ್ರವಾರ) ರಾಷ್ಟ್ರೀಯ ಪಂಚಾಯಿತಿ ರಾಜ್ ದಿನವನ್ನು ಡಿಜಿಟಲ್ ರೂಪದಲ್ಲಿ ಆಚರಿಸಲು ನಿರ್ಧರಿಸಲಾಯಿತು.
3. ಪ್ರತಿ ವರ್ಷ ಈ ಸಂದರ್ಭದಲ್ಲಿ ಪಂಚಾಯಿತಿ ರಾಜ್ ಸಚಿವಾಲಯವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದೆ ಪಂಚಾಯಿತಿಗಳು/ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಪಂಚಾಯಿತಿಗಳಿಗೆ ಉತ್ತೇಜನ ಕಾರ್ಯಕ್ರಮದ ಅಡಿಯಲ್ಲಿ ಪ್ರಶಸ್ತಿಯನ್ನು ನೀಡುತ್ತಿತ್ತು. ಉತ್ತಮ ಕಾರ್ಯಗಳು ಮತ್ತು ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಿರುವುದನ್ನು ಗುರುತಿಸಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿತ್ತು. ಈ ಪ್ರಶಸ್ತಿಗಳನ್ನು ದೀನ ದಯಾಲ್ ಉಪಾಧ್ಯಯ ಪಂಚಾಯಿತ್ ಸಶಕ್ತಿಕರಣ ಪುರಸ್ಕಾರ(ಡಿಡಿಯುಪಿಎಸ್ಪಿ), ನಾನಾಜಿ ದೇಶಮುಖ ರಾಷ್ಟ್ರೀಯ ಗೌರವ ಗ್ರಾಮ ಸಭಾ ಪುರಸ್ಕಾರ(ಎನ್ಡಿಆರ್ಜಿಜಿಎಸ್ಪಿ), ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಪ್ರಶಸ್ತಿ (ಸಿಎಫ್ಜಿಪಿಎ), ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆ ಪ್ರಶಸ್ತಿ(ಜಿಪಿಡಿಪಿ) ಮತ್ತು ಇ–ಪಂಚಾಯಿತಿ ಪುರಸ್ಕಾರ (ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಾತ್ರ)ಹೆಸರಿನಲ್ಲಿ ನೀಡಲಾಗುತ್ತಿತ್ತು. ಈ ವರ್ಷ ಲಾಕ್ಡೌನ್ನಿಂದ ಕೇವಲ ಮೂರು ಪ್ರಶಸ್ತಿಗಳನ್ನು ನೀಡಲು ನಿರ್ಧರಿಸಲಾಗಿದೆ. ನಾನಾಜಿ ದೇಶಮುಖ ರಾಷ್ಟ್ರೀಯ ಗೌರವ ಗ್ರಾಮ ಸಭಾ ಪುರಸ್ಕಾರ(ಎನ್ಡಿಆರ್ಜಿಜಿಎಸ್ಪಿ), ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಪ್ರಶಸ್ತಿ(ಸಿಎಫ್ಜಿಪಿಎ) ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆ(ಜಿಪಿಡಿಪಿ) ಪ್ರಶಸ್ತಿಗಳನ್ನು ನೀಡಲಾಗುವುದು. ಈ ಬಗ್ಗೆ ಮಾಹಿತಿಯನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗುವುದು. ಇತರ ವಿಭಾಗಗಳ ಪ್ರಶಸ್ತಿಯನ್ನು ಅಂತಿಮಗೊಳಿಸಿ ರಾಜ್ಯಗಳಿಗೆ ಪ್ರತ್ಯೇಕವಾಗಿ ಮಾಹಿತಿ ನೀಡಲಾಗುವುದು. ಲಾಕ್ಡೌನ್ ಮುಗಿದ ಬಳಿಕ ಈ ಪ್ರಕ್ರಿಯೆ ಕೈಗೊಳ್ಳಲಾಗುವುದು.
4. ಎನ್ಪಿಆರ್ಡಿ ಕಾರ್ಯಕ್ರಮವನ್ನು ಡಿಡಿ–ನ್ಯೂಸ್ ವೆಬ್ಕಾಸ್ಟ್ ಮೂಲಕ ಪ್ರಸಾರ ಮಾಡಲಾಗುವುದು. ಈ ಕಾರ್ಯಕ್ರಮವನ್ನು ಪಂಚಾಯಿತಿರಾಜ್ ಇಲಾಖೆಗಳ ಅಧಿಕಾರಿಗಳು ಮತ್ತು ರಾಜ್ಯ/ಜಿಲ್ಲಾ/ ಬ್ಲಾಕ್/ ಪಂಚಾಯಿತಿಗೆ ಸಂಬಂಧಿಸಿದವರೆಲ್ಲರೂ ಈ ಕಾರ್ಯಕ್ರಮವನ್ನು ವೀಕ್ಷಿಸಲಿದ್ದಾರೆ. ಈ ಸಂದರ್ಭದಲ್ಲಿ ಲಾಕ್ಡೌನ್ ನಿಯಮಾವಳಿಗಳನ್ನು ಉಲ್ಲಂಘಿಸಬಾರದು ಮತ್ತು ಸಾಮಾಜಿಕ ಅಂತರ ಕಾಪಾಡಬೇಕು ಎಂದು ಸೂಚಿಸಲಾಗಿದೆ.
***
(Release ID: 1617550)
Visitor Counter : 557
Read this release in:
Malayalam
,
Assamese
,
English
,
Urdu
,
Marathi
,
Hindi
,
Bengali
,
Punjabi
,
Gujarati
,
Odia
,
Tamil
,
Telugu