ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ

ಪಿ.ಎಂ.ಜಿ.ಕೆ.ವೈ ಪ್ಯಾಕೇಜ್ ಭಾಗವಾಗಿ ಇ.ಪಿ.ಎಫ್.ಒ. 3.31 ಲಕ್ಷ ಕೋವಿಡ್-19 ಕ್ಲೇಮುಗಳು 15 ದಿನಗಳಲ್ಲಿ ಇತ್ಯರ್ಥ

Posted On: 16 APR 2020 5:48PM by PIB Bengaluru

ಪಿ.ಎಂ.ಜಿ.ಕೆ.ವೈ ಪ್ಯಾಕೇಜ್ ಭಾಗವಾಗಿ ಇ.ಪಿ.ಎಫ್.ಒ. 3.31 ಲಕ್ಷ ಕೋವಿಡ್-19 ಕ್ಲೇಮುಗಳು 15 ದಿನಗಳಲ್ಲಿ ಇತ್ಯರ್ಥ

ಸುಮಾರು 950 ಕೋ.ರೂ. ವಿತರಿಸಲಾಗಿದೆ

 

ಕೋವಿಡ್-19 ಜಾಗತಿಕ ಸಾಂಕ್ರಾಮಿಕದ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನಾ (ಪಿ.ಎಂ.ಜಿ.ಕೆ.ವೈ.) ಪ್ಯಾಕೇಜ್ ಅಂಗವಾಗಿ 2020 ರ ಮಾರ್ಚ್ 28 ರಂದು ಅಧಿಸೂಚಿಸಲಾದ ಇ.ಪಿ.ಎಫ್. ನಿಂದ ವಿಶೇಷ ಹಿಂಪಡೆಯುವ ಯೋಜನೆಯು ದೇಶದ ನೌಕರ ವರ್ಗಕ್ಕೆ ಸಕಾಲದಲ್ಲಿ ಪರಿಹಾರವನ್ನು ನೀಡಿದೆ.

ಈ ಕಾರ್ಯಕ್ರಮವನ್ನು ಜಾರಿಗೆ ತಂದ ಬರೇ 15 ದಿನಗಳಲ್ಲಿ , ನೌಕರರ ಪ್ರಾವಿಡೆಂಡ್ ಫಂಡ್ ಸಂಘಟನೆ (ಇ.ಪಿ.ಎಫ್.ಒ.) 3.31 ಲಕ್ಷ ಕ್ಲೇಮುಗಳನ್ನು ಇತ್ಯರ್ಥ ಮಾಡಿ 946.49 ಕೋ.ರೂ.ಗಳ ಮೊತ್ತವನ್ನು ವಿತರಿಸಿದೆ. ಇದರ ಜೊತೆಗೆ ಈ ಯೋಜನೆ ಅಡಿಯಲ್ಲಿ ಅದರಲ್ಲೂ ಮುಖ್ಯವಾಗಿ ಟಿ.ಸಿ.ಎಸ್. ಗಳಿಗೆ ವಿನಾಯಿತಿ ಪಡೆದ ಪಿ.ಎಫ್ ಟ್ರಸ್ಟ್ ನಿಂದ 284 ಕೋ.ರೂ. ವಿತರಿಸಲಾಗಿದೆ.

ಈ ನಿಯಮಗಳಡಿಯಲ್ಲಿ , ಮೂರು ತಿಂಗಳ ಮೂಲ ವೇತನ ಮತ್ತು ತುಟ್ಟಿಭತ್ತೆಯಷ್ಟನ್ನು ಅಥವಾ ಸದಸ್ಯರ ಇ.ಪಿ.ಎಫ್. ಖಾತೆಯಲ್ಲಿರುವ ಮೊತ್ತದ 75% ರಷ್ಟನ್ನು , ಯಾವುದು ಕಡಿಮೆಯೋ ಅಷ್ಟನ್ನು ಮರುಪಾವತಿ ಮಾಡಬೇಕಾಗಿಲ್ಲದ ಹಿಂಪಡೆಯುವಿಕೆಯಡಿ ಅನುಮತಿಸಲಾಗುತ್ತದೆ. ಸದಸ್ಯರು ಇದಕ್ಕಿಂತ ಕಡಿಮೆ ಮೊತ್ತವನ್ನೂ ಹಿಂಪಡೆಯಬಹುದು. ಇದು ಮುಂಗಡವಾದುದರಿಂದ ಇದಕ್ಕೆ ಆದಾಯ ತೆರಿಗೆ ಕಡಿತ ಅನ್ವಯಿಸುವುದಿಲ್ಲ.

ಇ.ಪಿ.ಎಫ್.ಒ. ಈ ಸಂಕಷ್ಟದ ಸಮಯದಲ್ಲಿ ತನ್ನ ಸದಸ್ಯರಿಗೆ ನೆರವಾಗಲು ಬದ್ದವಾಗಿದೆ ಮತ್ತು ಇ.ಪಿ.ಎಫ್.ಒ. ಕಚೇರಿಗಳು ಈ ಸಮಯದಲ್ಲಿ ಅವಶ್ಯ ಸೇವೆಗಳನ್ನು ನಿರಂತರವಾಗಿ ನೀಡಲು ಕಾರ್ಯನಿರತವಾಗಿವೆ. ಈ ಸೇವೆಗಳು ಆನ್ ಲೈನ್ ಮೂಲಕ ಲಭ್ಯ ಇರುವುದರಿಂದ ತೀರಾ ಅಗತ್ಯ ಇರುವ ಚಂದಾದಾರರಿಗೆ ತಕ್ಕ ಮಟ್ಟಿನ ಪರಿಹಾರವನ್ನು ಲಾಕ್ ಡೌನ್ ಅವಧಿಯಲ್ಲಿ ನೀಡಲು ಮತ್ತು ಆ ಮೂಲಕ ಈ ಕಠಿಣ ಸಂದರ್ಭದಲ್ಲಿ ಅವರ ರಕ್ಷಣೆಗೆ ಧಾವಿಸಲು ಸಾಧ್ಯವಾಗಿದೆ.

***


(Release ID: 1615297) Visitor Counter : 269