ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಲಾಕ್ ಡೌನ್ ಸಂದರ್ಭದಲ್ಲಿ ಸರಾಸರಿ ಆಹಾರ ಧಾನ್ಯಗಳಿಗಿಂತ ಎರಡು ಪಟ್ಟು ಹೆಚ್ಚು ಸಾಗಾಣೆ ಮಾಡಿದ ಎಫ್ ಸಿ ಐ
Posted On:
16 APR 2020 7:23PM by PIB Bengaluru
ಲಾಕ್ ಡೌನ್ ಸಂದರ್ಭದಲ್ಲಿ ಸರಾಸರಿ ಆಹಾರ ಧಾನ್ಯಗಳಿಗಿಂತ ಎರಡು ಪಟ್ಟು ಹೆಚ್ಚು ಸಾಗಾಣೆ ಮಾಡಿದ ಎಫ್ ಸಿ ಐ
ಇಂತಹ ವಾತಾವರಣದಲ್ಲಿ ದೇಶಾದ್ಯಂತ ಸಾರ್ವಜನಿಕ ವಿತರಣೆಗೆ ಅತಿದೊಡ್ಡ ಆಹಾರ ಧಾನ್ಯ ಪೂರೈಕೆ ಸರಪಳಿ ವ್ಯವಸ್ಥೆ ನಿರ್ವಹಣೆಯಂತಹ ನಿರ್ಣಯವನ್ನು ಕೈಗೊಂಡ ಭಾರತದ ಆಹಾರ ನಿಗಮ (ಎಫ್ ಸಿ ಐ) ಸವಾಲಿನ ಕಾರ್ಯಕ್ಕೆ ಮುಂದಾಗಿದೆ. ಎಫ್ ಸಿ ಐ ನ ಸಂಪೂರ್ಣ ಕಾರ್ಯಪಡೆಯು ಕಳೆದ 22 ದಿನಗಳಿಂದ ಈ ಕೆಲಸದಲ್ಲಿ ತೊಡಗಿಸಿಕೊಂಡಿದೆ. ಕಾರ್ಯಾಚರಣೆಯ ಪ್ರತಿಯೊಂದು ಹಂತಗಳಲ್ಲೂ ಫಲಿತಾಂಶಗಳನ್ನು ನೀಡಿದೆ. ಲಾಕ್ ಡೌನ್ ಸಂದರ್ಭದಲ್ಲಿ ದಿನಕ್ಕೆ ಸರಾಸರಿ 1.7 ಲಕ್ಷ ಮೆಟ್ರಿಕ್ ಟನ್ (ಎಲ್ಎಂಟಿ) ಪ್ರಮಾಣದಲ್ಲಿ ಹೆಚ್ಚುವರಿ ರಾಜ್ಯಗಳಿಂದ 1335 ರೈಲು ಲೋಡ್ಗಳನ್ನು ಬಳಸಿಕೊಂಡು ಎಫ್ ಸಿ ಐ 3.74 ಮಿಲಿಯನ್ ಮೆಟ್ರಿಕ್ ಟನ್ (ಎಂಎಂಟಿ) ಆಹಾರ ಧಾನ್ಯಗಳ ದಾಸ್ತಾನುಗಳನ್ನು ವರ್ಗಾಯಿಸಲು ಸಾಧ್ಯವಾಗಿದೆ. ಇದು ದಿನಕ್ಕೆ ಸುಮಾರು 0.8 ಲಕ್ಷ ಮೆಟ್ರಿಕ್ ಟನ್ (ಎಲ್ಎಂಟಿ) ಸಾಮಾನ್ಯ ಸರಾಸರಿ ವರ್ಗಾವಣೆಯನ್ನು ದ್ವಿಗುಣಗೊಳಿಸುತ್ತದೆ. ಇದೇ ಸಂದರ್ಭದಲ್ಲಿ, ಉದ್ದೇಶಿತ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಅಡಿಯಲ್ಲಿ ಫಲಾನುಭವಿಗಳ ಅಗತ್ಯಗಳನ್ನು ಪೂರೈಸಲು ಅಗತ್ಯವಿರುವ ರಾಜ್ಯಗಳಿಗೆ 3.34 ಎಂಎಂಟಿ ಸಂಗ್ರಹವನ್ನು ವರ್ಗಾಯಿಸಲಾಗಿದೆ.
ಎನ್ಎಫ್ಎಸ್ಎ ವ್ಯಾಪ್ತಿಯಲ್ಲಿ ಬರುವ ಪ್ರತಿ ಫಲಾನುಭವಿಗಳಿಗೆ 3 ತಿಂಗಳವರೆಗೆ 5 ಕೆ.ಜಿ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡುವ ಪ್ರಧಾನಮಂತ್ರಿ ಗರಿಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಅಡಿಯಲ್ಲಿ, ಈಗಾಗಲೇ 2.56 ಎಂಎಂಟಿ ಸಂಗ್ರಹವನ್ನು ವಿತರಿಸಲಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಫ್ಎಸ್ಎ) ಯೋಜನೆಗಳು ಮತ್ತು ಇತರ ಕಲ್ಯಾಣ ಯೋಜನೆಗಳಿಗೆ ನಿಯಮಿತವಾಗಿ ಆಹಾರ ಧಾನ್ಯಗಳ ಹಂಚಿಕೆಯಡಿ, ದೇಶಾದ್ಯಂತ ಲಾಕ್ ಡೌನ್ ಸಂದರ್ಭದಲ್ಲಿ 3.98 ಎಂಎಂಟಿ ಆಹಾರ ಧಾನ್ಯಗಳನ್ನು ನೀಡಲಾಗಿದೆ. ಒಟ್ಟಾರೆ, 22 ದಿನಗಳ ಲಾಕ್ ಡೌನ್ ಅವಧಿಯಲ್ಲಿ ಎನ್ಎಫ್ಎಸ್ಎ ಮತ್ತು ಭಾರತ ಸರ್ಕಾರದ ಇತರ ಕಲ್ಯಾಣ ಯೋಜನೆಗಳ ವ್ಯಾಪ್ತಿಗೆ ಒಳಪಡುವ ಜನರ ಅಗತ್ಯತೆಗಳನ್ನು ಪೂರೈಸಲು ನೀಡಲಾದ ಒಟ್ಟು ಆಹಾರ ಧಾನ್ಯದ ದಾಸ್ತಾನು, ದಿನಕ್ಕೆ ಸರಾಸರಿ 3.27 ಲಕ್ಷ ಮೆ.ಟನ್ (ಎಲ್ಎಂಟಿ)ನಡಿ 6.54 ಎಂಎಂಟಿ ಆಗಿದೆ. ಇದರೊಂದಿಗೆ, ಎನ್ಎಫ್ಎಸ್ಎ ವ್ಯಾಪ್ತಿಗೆ ಬರುವ ಎಲ್ಲ ಫಲಾನುಭವಿಗಳಿಗೆ ಸಮರ್ಪಕ ಆಹಾರ ಧಾನ್ಯಗಳನ್ನು ಒದಗಿಸಲು ಸಾಕಷ್ಟು ದಾಸ್ತಾನುಗಳನ್ನು ದೇಶದ ಪ್ರತಿ ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಲಾಗಿದೆ.
ಎನ್ಎಫ್ಎಸ್ಎ ವ್ಯಾಪ್ತಿಗೆ ಒಳಪಡದ ವ್ಯಕ್ತಿಗಳ ಅವಶ್ಯಕತೆಗಳನ್ನು ಪೂರೈಸಲು, ರಾಜ್ಯ ಸರ್ಕಾರಗಳಿಗೆ ಆಹಾರ ಧಾನ್ಯಗಳನ್ನು ನೀಡಲಾಗುತ್ತಿದೆ. ಕೆಜಿಗೆ 21 ರೂ. ದರದಲ್ಲಿ ಗೋಧಿ ಮತ್ತು 22 ರೂ. ದರದಲ್ಲಿ ಅಕ್ಕಿಯನ್ನು ಈಗಾಗಲೇ ವಿತರಿಸಲಾಗಿರುವ ಎನ್ಎಫ್ಎಸ್ಎ ಕಾರ್ಡುಗಳಿಗೆ ಅನುಗುಣವಾಗಿ ನೀಡಲಾಗುತ್ತಿದೆ. ಇತರ ಯಾವುದೇ ಅವಶ್ಯಕತೆಗಳನ್ನು ಪೂರೈಸಲು ರಾಜ್ಯಗಳು ಯಾವುದೇ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸದೇ ನೇರವಾಗಿ ಎಫ್ ಸಿ ಐನಿಂದ ಅಕ್ಕಿಯನ್ನು ಕೆಜಿಗೆ 22.50 ರೂ.ದರದಲ್ಲಿ ಖರೀದಿಸಲು ಅವಕಾಶ ಮಾಡಿಕೊಡಲಾಗಿದೆ. ಮುಕ್ತ ಮಾರುಕಟ್ಟೆ ಬೆಲೆಗಳನ್ನು ನಿಯಂತ್ರಣದಲ್ಲಿಡಲು ಮತ್ತು ಗೋಧಿ ಹಿಟ್ಟಿನ ಸಾಕಷ್ಟು ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು, ಹಿಟ್ಟು ಗಿರಣಿಗಳಿಗೆ ಗೋಧಿಯನ್ನು ಎಫ್ ಸಿ ಐನಿಂದ ನೇರವಾಗಿ ಮುಕ್ತ ಮಾರುಕಟ್ಟೆ ಮಾರಾಟ ದರದಲ್ಲಿ ವಿತರಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಲಾಗಿದೆ. ಈ ವ್ಯವಸ್ಥೆಯನ್ನು ಜಿಲ್ಲಾ ನ್ಯಾಯಾಧೀಶರ ಮೂಲಕ ವಿಕೇಂದ್ರೀಕೃತ ರೀತಿಯಲ್ಲಿ ನಡೆಸಲಾಗುತ್ತಿದೆ. ಮೇಲಿನ ಉಪಕ್ರಮಗಳು ಗೋಧಿ ಮತ್ತು ಅಕ್ಕಿ ಮಾರಾಟಕ್ಕಾಗಿ ಸಾಪ್ತಾಹಿಕ ಹರಾಜನ್ನು ನಡೆಸುವ ಸಾಮಾನ್ಯ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯ ಮೇಲಿರುತ್ತವೆ. ಈಗಾಗಲೇ 2020ರ ಮಾರ್ಚ್ 24ರಿಂದ ಮೇಲಿನ ಎಲ್ಲ ಯೋಜನೆಗಳ ಮೂಲಕ 3.74 ಲಕ್ಷ ಎಂಟಿ ಗೋಧಿ ಮತ್ತು 3.35 ಲಕ್ಷ ಎಂಟಿ ಅಕ್ಕಿಯನ್ನು ಮಾರುಕಟ್ಟೆಯಲ್ಲಿ ಸಂಗ್ರಹಿಸಲಾಗಿದೆ.
ಈ ಸಂಕಷ್ಟದ ಸಮಯದಲ್ಲಿ ಬಡವರು ಮತ್ತು ನಿರ್ಗತಿಕರಿಗೆ ಆಹಾರವನ್ನು ನೀಡುವಲ್ಲಿ ಸರ್ಕಾರೇತರ ಸಂಸ್ಥೆಗಳು ಮತ್ತು ಇತರ ಕಲ್ಯಾಣ ಸಂಸ್ಥೆಗಳು ಕೈಗೊಳ್ಳುತ್ತಿರುವ ಈ ಕಾರ್ಯಗಳನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರವು ಕೆಜಿಗೆ 21 ರೂ. ದರದಲ್ಲಿ ಗೋಧಿ ಮತ್ತು 22 ರೂ. ದರದಲ್ಲಿ ಅಕ್ಕಿಯನ್ನು ದೇಶದಲ್ಲಿ ಎಲ್ಲಿಯಾದರೂ ಎಫ್ ಸಿ ಐನ ಯಾವುದೇ ಡಿಪೋದಿಂದ ಯಾವುದೇ ಪ್ರಮಾಣದ ಮಿತಿಯಿಲ್ಲದೆ ಪಡೆಯುವ ಅವಕಾಶ ಕಲ್ಪಿಸಿದೆ. ಈಗಾಗಲೇ ಸಂಸ್ಥೆಗಳು ಮಹಾರಾಷ್ಟ್ರ ಮತ್ತು ಕರ್ನಾಟಕದಂತಹ ರಾಜ್ಯಗಳಲ್ಲಿ ಈ ಯೋಜನೆಯನ್ನು ಬಳಸಿಕೊಳ್ಳಲು ಪ್ರಾರಂಭಿಸಿವೆ. ಲಾಕ್ ಡೌನ್ ವಿಸ್ತರಣೆಯಾಗಿರುವ ಈ ಅವಧಿಯಲ್ಲಿ ದುರ್ಬಲ ಗುಂಪುಗಳಿಗೆ ಪರಿಹಾರ ಶಿಬಿರಗಳನ್ನು ನಡೆಸಲು ಎನ್ಜಿಒಗಳು ಮತ್ತು ಕಲ್ಯಾಣ ಸಂಸ್ಥೆಗಳಿಗೆ ನಿಯಮಿತವಾಗಿ ಆಹಾರ ಧಾನ್ಯಗಳನ್ನು ಪೂರೈಸುವಲ್ಲಿ ಇದು ಪ್ರಮುಖವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಭಾರತೀಯ ರೈಲ್ವೆ, ಕೇಂದ್ರದ ಇತರ ಸರ್ಕಾರಿ ಸಂಸ್ಥೆಗಳಾದ ಕೇಂದ್ರ ಉಗ್ರಾಣ ನಿಗಮ (ಸಿಡಬ್ಲ್ಯುಸಿ), ರಾಜ್ಯ ಉಗ್ರಾಣ ನಿಗಮ (ಎಸ್ಡಬ್ಲ್ಯುಸಿ) ಮತ್ತು ಎಫ್ ಸಿ ಐ ನೌಕರರು ಮತ್ತು ಕಾರ್ಮಿಕರ ಸಂಪೂರ್ಣ ಬೆಂಬಲದಿಂದ ಕಾರ್ಯಾಚರಣೆಗಳನ್ನು ಕೈಗೊಳ್ಳುವ ಮೂಲಕ ಈ ಕಠಿಣ ಸಂದರ್ಭದಲ್ಲಿ ದೇಶಾದ್ಯಂತ ಆಹಾರ ಧಾನ್ಯಗಳ ನಿರಂತರ ಪೂರೈಕೆಯನ್ನು ಎಫ್ ಸಿ ಐ ಖಚಿತಪಡಿಸಿದೆ.
***
(Release ID: 1615241)
Visitor Counter : 295