ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಲಾಕ್ ಡೌನ್ ವೇಳೆ ಆಹಾರ ಧಾನ್ಯಗಳ ವಿತರಣೆ ಕುರಿತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಹಾರ ಸಚಿವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪರಾಮರ್ಶಿಸಿದ ಶ್ರೀ ರಾಮ್ ವಿಲಾಸ್ ಪಾಸ್ವಾನ್
Posted On:
13 APR 2020 8:22PM by PIB Bengaluru
ಲಾಕ್ ಡೌನ್ ವೇಳೆ ಆಹಾರ ಧಾನ್ಯಗಳ ವಿತರಣೆ ಕುರಿತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಹಾರ ಸಚಿವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪರಾಮರ್ಶಿಸಿದ ಶ್ರೀ ರಾಮ್ ವಿಲಾಸ್ ಪಾಸ್ವಾನ್
ಲಾಕ್ ಡೌನ್ ವೇಳೆ ನ್ಯಾಯಬೆಲೆ ಅಂಗಡಿಗಳಲ್ಲಿ ಅತ್ಯವಶ್ಯಕ ವಸ್ತುಗಳು ದೊರಕುವಂತೆ ಮತ್ತು ಅಕ್ರಮ ದಾಸ್ತಾನು ನಿಯಂತ್ರಿಸುವಂತೆ ಕೇಂದ್ರ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ
ಆರ್ ಎಂಎಸ್ 2020-21 ಅಡಿಯಲ್ಲಿ ಗೋಧಿ ಖರೀದಿ 2020ರ ಏಪ್ರಿಲ್ 15ರಿಂದ ಆರಂಭ
ಲಾಕ್ ಡೌನ್ ವೇಳೆ ಅತ್ಯವಶ್ಯಕ ಸಾಮಗ್ರಿಗಳ ಬೆಲೆ ಏರಿಕೆಯಾಗದಂತೆ ಮತ್ತು ಅಕ್ರಮ ದಾಸ್ತಾನು ಮಾಡದಂತೆ ರಾಜ್ಯ ಸರ್ಕಾರಗಳು ಖಾತ್ರಿಪಡಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವ ಶ್ರೀ ರಾಮ್ ವಿಲಾಸ್ ಪಾಸ್ವಾನ್, ಇಂದು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಆಹಾರ, ನಾಗರಿಕ ಪೂರೈಕೆ ಮತ್ತು ಸಾರ್ವಜನಿಕ ವಿತರಣಾ ಸಚಿವರುಗಳೊಂದಿಗೆ ನಡೆದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಈ ಸಂದೇಶವನ್ನು ರವಾನಿಸಲಾಯಿತು. ಅವರು ಸ್ಥಳೀಯ ಮಾರುಕಟ್ಟೆಗಳಲ್ಲಿ ನ್ಯಾಯಬೆಲೆಯಲ್ಲಿ ಅವಶ್ಯಕ ವಸ್ತುಗಳು ದೊರಕುವುದನ್ನು ಖಾತ್ರಿಪಡಿಸಲು ತಳಹಂತದಲ್ಲಿ ಯೋಜನೆಗಳನ್ನು ರೂಪಿಸಬೇಕು ಎಂದು ನಿರ್ದೇಶಿಸಿದರು. ಈ ಆದೇಶಗಳನ್ನು ಪಾಲಿಸಲು ರಾಜ್ಯ ಸರ್ಕಾರಗಳಿಗೆ ಅತ್ಯವಶ್ಯಕ ವಸ್ತುಗಳ ಕಾಯ್ದೆಯಡಿ ಎಲ್ಲ ಅಧಿಕಾರವನ್ನು ಹೊಂದಿವೆ ಎಂದು ಅವರು ಹೇಳಿದರು.
2020-21ನೇ ಸಾಲಿನ ಹಿಂಗಾರು ಮಾರುಕಟ್ಟೆ ಹಂಗಾಮು(ಆರ್ ಎಂಎಸ್)ನಲ್ಲಿ ಭತ್ತದ ಖರೀದಿ ಪ್ರಕ್ರಿಯೆ ಏಪ್ರಿಲ್ 15ರಿಂದ ಆರಂಭಿಸಲು ಎಲ್ಲ ವ್ಯವಸ್ಥೆಗಳನ್ನು ಕೈಗೊಳ್ಳುವಂತೆ ಶ್ರೀ ಪಾಸ್ವಾನ್ ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಾಕಿಕೊಟ್ಟಿರುವ ಮಾರ್ಗಸೂಚಿಗಳನ್ನು ಅನುಸರಿಸಬೇಕು, ಗೋಧಿ ಖರೀದಿ ಪ್ರಕ್ರಿಯೆ ವೇಳೆ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮ ಪಾಲಿಸಬೇಕು ಎಂದು ಪಾಸ್ವಾನ್ ಹೇಳಿದರು. ಎಲ್ಲ ಖರೀದಿ ಕೇಂದ್ರಗಳು, ಗೋದಾಮುಗಳು, ಕಚೇರಿಗಳು ತನ್ನ ಸಿಬ್ಬಂದಿ ಕೆಲಸಗಾರರು ಮತ್ತು ಕಾರ್ಮಿಕರ ಕೆಲಸಕ್ಕೆ ಪಾಳಿಗಳನ್ನು ಸಿದ್ಧಪಡಿಸಬೇಕು ಮತ್ತು ಕಾರ್ಮಿಕರ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಚಿವರು ಹೇಳಿದರು.
ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ(ಪಿಎಂಜಿಕೆಎವೈ) ಅಡಿಯಲ್ಲಿ ನಿಗದಿತ ಗುರಿಯನ್ನು ತಲುಪಲು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅಗತ್ಯ ಆಹಾರ ಧಾನ್ಯಗಳ ದಾಸ್ತಾನು ಒದಗಿಸಲಾಗಿದೆ ಎಂದು ಶ್ರೀ ಪಾಸ್ವಾನ್ ಹೇಳಿದರು. ಪಿಎಂಜಿಕೆಎವೈ ಅಡಿಯಲ್ಲಿ ಎಲ್ಲ ಪಡಿತರ ಫಲಾನುಭವಿಗಳಿಗೆ ಓರ್ವ ವ್ಯಕ್ತಿಗೆ 5 ಕೆಜಿ ಆಹಾರ ಧಾನ್ಯಗಳು(ಅಕ್ಕಿ ಅಥವಾ ಗೋಧಿ) ಉಚಿತವಾಗಿ ಮುಂದಿನ ಮೂರು ತಿಂಗಳ ಕಾಲ ವಿತರಿಸಲಾಗುವುದು. ಅಂತ್ಯೋದಯ ಅನ್ನ ಯೋಜನೆ(ಎಎವೈ) ಮತ್ತು ಪಿಎಚ್ಎಚ್(ಆದ್ಯತಾ ಕುಟುಂಬಗಳು)ಅಡಿಯಲ್ಲಿ ಪ್ರತಿಯೊಬ್ಬ ವೈಯಕ್ತಿಕ ಫಲಾನುಭವಿಗಳನ್ನು ಆಧರಿಸಿ ಆಹಾರಧಾನ್ಯಗಳನ್ನು ಹಂಚಿಕೆಮಾಡಲಾಗಿದೆ. ಅಲ್ಲದೆ ಪಿಡಿಎಸ್ ಫಲಾನುಭವಿಗಳಿಗೆ ಮುಂದಿನ ಮೂರು ತಿಂಗಳ ಕಾಲ ಪ್ರತಿ ಕಾರ್ಡ್/ಕುಟುಂಬಕ್ಕೆ ಒಂದು ಕೆಜಿ ಬೇಳೆಕಾಳನ್ನು ನೀಡಲಾಗುವುದು ಎಂದ ಶ್ರೀ ಪಾಸ್ವಾನ್ ಅವರು, ಅದಕ್ಕಾಗಿ ನಾಫೆಡ್ ಒಂದು ನೋಡಲ್ ಏಜೆನ್ಸಿಯನ್ನು ನಿಯೋಜಿಸಿದೆ ಎಂದರು. ಯೋಜನೆಯ ಬಗ್ಗೆ ಫಲಾನುಭವಿಗಳಿಗೆ ಮಾಹಿತಿ ನೀಡಲು ರಾಜ್ಯಗಳು ಅಭಿಯಾನಗಳನ್ನು ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಇಂತಹ ಸಂಕಷ್ಟದ ಸಮಯದಲ್ಲಿ ಬಡವರು ಮತ್ತು ಅಗತ್ಯವಿರುವವರ ರಕ್ಷಣೆಗೆ ಕ್ರಮ ಕೈಗೊಂಡಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀ ಪಾಸ್ವಾನ್ ಅವರು, ಪಿಎಂಜಿಕೆಎವೈ ಅಡಿಯಲ್ಲಿ ಮುಂದಿನ ಮೂರು ತಿಂಗಳ ಕಾಲ ಉಚಿತವಾಗಿ ವಿತರಿಸಲಿರುವ ಆಹಾರಧಾನ್ಯ ಮತ್ತು ಬೇಳೆಕಾಳುಗಳ ಎಲ್ಲ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ ಎಂದು ಅವರು ಹೇಳಿದರು.
ಲಾಕ್ ಡೌನ್ ವೇಳೆ ದೇಶಾದ್ಯಂತ ಭಾರೀ ಪ್ರಮಾಣದಲ್ಲಿ ಆಹಾರಧಾನ್ಯಗಳನ್ನು ಸಾಗಿಸುವ ಕೆಲಸವನ್ನು ಭಾರತೀಯ ಆಹಾರ ನಿಗಮ(ಎಫ್ ಸಿಐ) ಮಾಡುತ್ತಿದೆ ಎಂದು ಹೇಳಿದ ಶ್ರೀ ಪಾಸ್ವಾನ್ ಅವರು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಆಹಾರಧಾನ್ಯ ಮತ್ತು ಬೇಳೆಕಾಳು ವಿತರಣಾ ಕಾರ್ಯವನ್ನು ತ್ವರಿತಗೊಳಿಸುವಂತೆ ಕರೆ ನೀಡಿದರು. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ(ಎನ್ಎಫ್ಎಸ್ಎ) ಅಡಿಯಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ಮುಂದಿನ ಆರು ತಿಂಗಳಿಗೆ ಅಗತ್ಯವಿರುವ ಪಡಿತರ ಧಾನ್ಯಗಳನ್ನು ಪಡೆದುಕೊಂಡು ದಾಸ್ತಾನು ಮಾಡಿಕೊಳ್ಳಬಹುದು ಎಂದು ಸಚಿವರು ಪುನರುಚ್ಚರಿಸಿದರು. ಭಾರತ ಸರ್ಕಾರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮೂರು ತಿಂಗಳ ಕಾಲ ಸಾಲದಲ್ಲಿ ಪಡಿತರಗಳನ್ನು ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಅವರು ಹೇಳಿದರು. ಯಾವುದಾದರೂ ಫಲಾನುಭವಿ ಕುಟುಂಬ ವೈಯಕ್ತಿವಾಗಿ ಯೋಜನೆಯಿಂದ ಬಿಟ್ಟು ಹೋಗಿದ್ದರೆ ಆತ/ಆಕೆಯನ್ನು ತಕ್ಷಣವೇ ಸೇರಿಸಬೇಕು, ಆ ಮೂಲಕ ಎನ್ಎಫ್ಎಸ್ಎ ಯೋಜನೆ ಅಡಿಯಲ್ಲಿ ಯಾರೊಬ್ಬರೂ ಪ್ರಯೋಜನದಿಂದ ಹೊರಗುಳಿಯಬಾರದು ಎಂದು ಅವರು ಹೇಳಿದರು.
ಮುಕ್ತ ಮಾರುಕಟ್ಟೆ ಮಾರಾಟ ಪದ್ಧತಿ(ಒಎಮ್ಎಸ್ಎಸ್) ಅಡಿಯಲ್ಲಿ ಅಕ್ಕಿಗೆ ಚಿಲ್ಲರೆ ದರ ಪ್ರತಿ ಕೆಜಿಗೆ ತಲಾ 22 ರೂ. ಮತ್ತು ಗೋಧಿಗೆ ತಲಾ 21 ರೂ. ನಿಗದಿಪಡಿಸಲಾಗಿದೆ ಎಂದು ಸಚಿವರು ಹೇಳಿದರು. ಸಾಮಾಜಿಕ ಕಲ್ಯಾಣದ ಕೆಲಸದಲ್ಲಿ ತೊಡಗಿರುವ ಯಾವುದೇ ಸರ್ಕಾರೇತರ ಸಂಸ್ಥೆ, ಸ್ವಯಂಸೇವಾ ಸಂಘಟನೆಗಳು ಮತ್ತು ಖಾಸಗಿ ಸಂಸ್ಥೆಗಳು ಲಾಕ್ ಡೌನ್ ವೇಳೆ ಎಫ್ ಸಿಐ ಗೋದಾಮುಗಳಿಂದ ಆಹಾರಧಾನ್ಯಗಳನ್ನು ನೇರವಾಗಿ ಎತ್ತುವಳಿ ಮಾಡಲು ಸರ್ಕಾರ ಅವಕಾಶ ನೀಡಿದೆ ಎಂದು ಅವರು ಹೇಳಿದರು.
ಮಿಲ್ ಗಳಲ್ಲಿ ಗೋಧಿ ಹಿಟ್ಟು, ಲಭ್ಯತೆಯನ್ನು ನೋಡಿಕೊಳ್ಳಲು ರಾಜ್ಯ ಸರ್ಕಾರಗಳು ಅವುಗಳೊಂದಿಗೆ ಸಮನ್ವಯತೆ ಸಾಧಿಸಬೇಕು ಎಂದು ಪಾಸ್ವಾನ್ ಹೇಳಿದರು. ನ್ಯಾಯಬೆಲೆ ಅಂಗಡಿಗಳಲ್ಲಿ ಮತ್ತು ಪಿಡಿಎಸ್ ಔಟ್ ಲೆಟ್ ಗಳಲ್ಲಿ ಆಹಾರಧಾನ್ಯ ವಿತರಣೆ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದ ಅವರು, ಎಲ್ಲ ಮಾಲಿಕರು/ಪಿಡಿಎಸ್ ಆಪರೇಟರ್ ಮತ್ತು ಕಾರ್ಮಿಕರು ಮುಖಗವಸು ಮತ್ತು ಗ್ಲೌಸ್ ಗಳನ್ನು ಹಾಕಿಕೊಂಡಿರಬೇಕು ಎಂದು ಹೇಳಿದರು.
*****
(Release ID: 1614266)
Visitor Counter : 146